Homeಚಳವಳಿಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ...

ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ…

- Advertisement -
- Advertisement -

ಭಾರತದ ಹಲವು ರಾಜ್ಯಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರವು ತಾಳ ತಪ್ಪುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮ ಹಾಗೂ ಸ್ವಜನಪಕ್ಷಪಾತದ ಕಪಟ ರಾಜಕೀಯವು ನಡೆಸುತ್ತಿರುವ ಅತಿಕ್ರಮವನ್ನು ನೋಡುವಾಗ, ಉನ್ನತ ಶಿಕ್ಷಣ ಕ್ಷೇತ್ರವು ವೈಚಾರಿಕವಾಗಿ ಮತ್ತು ಸೈದ್ಧಾಂತಿಕವಾಗಿ ನಿರ್ನಾಮವಾಗಲು ಅಧಿಕ ಸಮಯವೇನೂ ಬೇಕಾಗಿಲ್ಲ ಎಂಬ ಕಳವಳ ಶಕ್ತಿ ಪಡೆದುಕೊಳ್ಳುತ್ತದೆ. ಮುಕ್ತ ಆಲೋಚನೆಗಳ ಹಾಗೂ ವಿಶ್ಲೇಷಣೆಗಳ ಕ್ಷೇತ್ರವಾಗಿ ವಿಶ್ವವಿದ್ಯಾಲಯಗಳು ಮಾರ್ಪಾಡುಗೊಳ್ಳುವ ಬದಲು, ನಿಯಂತ್ರಣಗಳ ಹೇರಿಕೆ ಮತ್ತು ಭಯಭೀತಿ ಹರಡುವ, ಗುಲಾಮ ಮನಸ್ಥಿತಿಯ ರೀತಿಗಳು ಇಲ್ಲಿ ಅನುವರ್ತಿಸುತ್ತಿರುವುದು ಯಾರಿಗೂ ಒಳಿತಲ್ಲ. ಬೌದ್ಧಿಕ ಕಾರ್ಯಗಳ ಮೂಲಕ ಸಮಾಜದ ಬದಲಾವಣೆಗೆ ಬೇಕಾದ ವಿಚಾರಗಳನ್ನು ಪ್ರಚುರಪಡಿಸುತ್ತಾ ನೆಲೆಗೊಳ್ಳಬೇಕಾದ ಸಂಸ್ಥೆಗಳು, ಗತಿಸಿ ಹೋಗುವುದೆಂದರೆ ಅದು ಯಾವ ಪ್ರದೇಶಕ್ಕೂ ಭೂಷಣವಲ್ಲ. ಮಾನವ ಜೀವನದಲ್ಲಿ ಸಾಮಾಜಿಕ – ರಾಜಕೀಯ ವ್ಯವಸ್ಥೆಗಳಲ್ಲಿ ಅನಿವಾರ್ಯ ಬದಲಾವಣೆಗಳನ್ನು ತರಲು ಬೇಕಾದಂತಹ ಮಾದರಿಗಳು, ವಿಚಾರಗಳು, ಸಂಶೋಧನೆಗಳು ನಡೆಯಬೇಕಾಗಿದ್ದ ಉನ್ನತ ಶಿಕ್ಷಣ ಕ್ಷೇತ್ರವು ಇದೀಗ ಸಂಕುಚಿತ ಮನೋಭಾವ ಮತ್ತು ಗುಲಾಮಗಿರಿಯ ಕಡೆಗೆ ವಾಲುತ್ತಿದೆ.

ಜಾತಿ, ಮತ ಸಂಘರ್ಷ

ಪ್ರಸಿದ್ಧವಾದ ಜವಾಹರ್ ಲಾಲ್ ನೆಹರೂ ಯೂನಿವರ್ಸಿಟಿ ಎಂಬ ಶೈಕ್ಷಣಿಕ ಕೇಂದ್ರವನ್ನು ತನ್ನದೇ ಆದ ಸ್ವತಂತ್ರ ಬೌದ್ಧಿಕ ಶೈಲಿಯಿಂದ, ಎಳೆದೆಳೆದು ಕಾಲಬುಡಕ್ಕೆ ತರುವಂತಹ ಶ್ರಮಗಳು ಕೆಲವು ವರ್ಷಗಳಿಂದ ನಡೆಯುತ್ತಿದೆ. ವಿನಾಕಾರಣ ವಿದ್ಯಾರ್ಥಿಗಳನ್ನು ರಾಜಕೀಯ ಹೆಸರಿನಲ್ಲಿ ದೇಶದ್ರೋಹಿಗಳನ್ನಾಗಿಸಿ ಬಂಧಿಸಲಾಗುತ್ತಿದೆ. ಒಬ್ಬ ಮುಸ್ಲಿಂ ವಿದ್ಯಾರ್ಥಿ ಕಾಣೆಯಾದಾಗ, ಪತ್ತೆಗಾಗಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಲಾಯಿತು. ಹಾಸ್ಟೆಲ್ ಸಮಯದ ವಿಷಯದಲ್ಲಿ ಹಾಗೂ ವಸ್ತ್ರಧಾರಣೆಯ ಸ್ವಾತಂತ್ರ್ಯದಲ್ಲೂ ಕೂಡಾ ಹಸ್ತಕ್ಷೇಪ ನಡೆಸುವ ಪ್ರಕರಣಗಳೂ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ಮುಸುಕುಧಾರಿ ಗೂಂಡಾಗಳಿಂದ ಅಲ್ಲಿನ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಮೇಲೆ ಹಲ್ಲೆ ನಡೆದಿದೆ. ಇದೀಗ ಬಾಪು ಹತ್ಯೆ ದಿನದಂದೇ, ಗೋಡ್ಸಾನುಯಾಯಿಗಳಿಂದ ಸಾರ್ವಜನಿಕವಾಗಿ, ಪೊಲೀಸರ ಸರ್ಪಗಾವಲಿನಲ್ಲಿಯೇ ಗುಂಡು ಹಾರಿಸುವವರೆಗೆ ಪರಿಸ್ಥಿತಿ ಬಂದು ತಲುಪಿದೆ. ದೇಶದ ರಾಜಧಾನಿಯಲ್ಲಿ ಶೈಕ್ಷಣಿಕವಾದ ಬೌದ್ಧಿಕ ಸ್ವಾಧೀನಗಳು ಜನರ ಮೇಲೆ ಪ್ರಭಾವ ಬೀರಿದೆ ಎಂಬುದು ಮನದಟ್ಟಾದಾಗ, ಆಡಳಿತದ ಚುಕ್ಕಾಣಿ ಹಿಡಿದವರಿಗೆ ಅವು ರುಚಿಸುವುದಿಲ್ಲವಾದರೆ ಅದನ್ನು ಬಲಪ್ರಯೋಗದ ಮೂಲಕ ದಮನಿಸುವ ಅಥವಾ ಸೈದ್ಧಾಂತಿಕವಾಗಿ ನಿಯಂತ್ರಣ ಹೇರುವಂತಹ ಆತಂಕಕಾರಿ ಬೆಳವಣಿಗೆ ಇಂದು ನಡೆಯುತ್ತಿದೆ.

ಇಂತಹ ಸಿದ್ಧಾಂತಗಳ ಹಸ್ತಕ್ಷೇಪಗಳು ಹಲವು ಕಡೆ ಗುಪ್ತವಾಗಿ ಮತ್ತು ಬಹಿರಂಗವಾಗಿಯೂ ನಡೆಯುತ್ತಿವೆ. ರಾಜಕೀಯ ಅಧಿಕಾರದ ಶಕ್ತಿ ಪ್ರಯೋಗಗಳು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಅವಕಾಶಗಳನ್ನು ತಡೆಯುವಂತಹ ದೃಶ್ಯಗಳಾಗಿವೆ ಜೆ.ಎನ್.ಯು ನಲ್ಲಿ ಬಹಿರಂಗವಾಗಿ ನಾವು ಕಂಡಿದ್ದು. ಇತ್ತೀಚೆಗೆ ಜಾಮಿಯ ಮಿಲಿಯಾದಲ್ಲೂ ನಡೆದಿರುವುದೂ ಅದರ ಮುಂದುವರಿದ ಭಾಗವಷ್ಟೇ. ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದೊಳಗೆ ನುಗ್ಗಿ, ಆಳುವ ಸರಕಾರದ ಪೊಲೀಸರು ಹಲ್ಲೆ ನಡೆಸಿ, ವಿದ್ಯಾರ್ಥಿನಿಯರ ಮೇಲೆ ಅತಿಕ್ರೂರವಾದ ರೀತಿಯಲ್ಲಿ ದೌರ್ಜನ್ಯವೆಸಗಲು ಪ್ರಯತ್ನಿಸಿದರು.

ಇಂತಹ ದೌರ್ಜನ್ಯಗಳ ಹೊರತಾಗಿ, ನಿಕೃಷ್ಟವಾದ ರಾಜಕೀಯ ಆಟಗಳು ಭಾರತದ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುತ್ತಿವೆ. ಬನಾರಸ್ ಹಿಂದೂ ಯುನಿವರ್ಸಿಟಿಯಲ್ಲಿ ಸಂಸ್ಕೃತ ಪಾಠ ಹೇಳಿಕೊಡಲು ಬಂದ ಮುಸ್ಲಿಂ ಅಧ್ಯಾಪಕನನ್ನು ಅಂಗೀಕರಿಸಲು ಮುಂದಾಗದೆ ಪ್ರತಿಭಟಿಸಿದ ವಿದ್ಯಾರ್ಥಿಗಳು, ಮತೀಯ ಮೂಲಭೂತವಾದದ ವಕ್ತಾರರೆನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅಧ್ಯಾಪಕನ ಧರ್ಮವು ಅವರನ್ನು ಜ್ಞಾನಾರ್ಜನೆಗೆ ಅನುವು ಮಾಡಿಕೊಡುವುದಿಲ್ಲವೆಂದರೆ, ಅವರು ವಿದ್ಯಾರ್ಥಿಗಳಲ್ಲ. ಕೊಳಕು ಮನಸ್ಥಿತಿಯ ಕಪಟ ರಾಜಕೀಯದವರು ಮಾತ್ರ.

ಪ್ರಾಥಮಿಕ ವಿದ್ಯಾಭ್ಯಾಸದ ನಂತರ, ಹೆಚ್ಚಿನ ಚಿಂತನೆ ಹಾಗೂ ತಿಳಿವಳಿಕೆಗೆ ದಾರಿ ತೋರುವ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಮತೀಯ ಅಡೆತಡೆಗಳಿಲ್ಲದೆ ಭಾಷೆ ಹಾಗೂ ವಿಷಯಗಳನ್ನು ಕಲಿಯುವುದು ಮತ್ತು ಕಲಿಸುವುದು ಅನ್ನುವಂತದ್ದು ಸರ್ವಾಂಗೀಕೃತವಾಗಬೇಕಿದ್ದ ವಿಷಯವಾಗಿತ್ತು. ಬನಾರಸ್‌ನ ವಿಷಯ ಈ ಸಮಸ್ಯೆಯೊಳಗಿನ ಆಕಾಂಕ್ಷೆಯನ್ನು ಇಮ್ಮಡಿಗೊಳಿಸುವಂತಿದೆ. ಜಾತಿಮತದ ಹೆಸರಿನಲ್ಲಿ ಮನುಷ್ಯರನ್ನು ಶಿಕ್ಷಣ ಕ್ಷೇತ್ರದಿಂದ ದೂರ ತಳ್ಳುವ ರೀತಿ ಭಾರತದಲ್ಲಿ ವಿರಳವೇನಲ್ಲ. ದೇಶದಾದ್ಯಂತ ಗ್ರಾಮ ಹಾಗೂ ನಗರಗಳಲ್ಲಿ ಇಂತಹ ಸಾವಿರಾರು ಸಮಸ್ಯೆಗಳಿದ್ದವು. ಸೂಕ್ತವಾದ ಸಾಮಾಜಿಕ ರಾಜಕೀಯ ಅವಲೋಕನ, ಸ್ಪಷ್ಟವಾದ ತಾತ್ವಿಕ ನೆಲೆಗಟ್ಟು ಹಾಗೂ ಆಡಳಿತ ನಿಯಮಗಳ ಪರಿಷ್ಕರಣೆಯ ಮೂಲಕ ಮಾತ್ರವಾಗಿದೆ ಅವುಗಳಲ್ಲಿ ಬದಲಾವಣೆ ತರಲು ಸಾಧ್ಯವಾಗಿರೋದು.

ಧರ್ಮದ ಹೆಸರಿನಲ್ಲಿ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ತೋರುವ ಸಂಕುಚಿತ ಚಿಂತನೆಗಳಿಗೆ, ವಿವೇಚನೆ, ದೌರ್ಜನ್ಯ, ಪೀಡನೆಗಳಿಗೆ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳಿವೆ. ಮದ್ರಾಸ್ ಐಐಟಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೈಯ್ಯಲು ಕಾರಣ, ಸ್ಪಷ್ಟವಾಗಿಯೂ ಮತೀಯ ವಿವೇಚನೆಯ ಕಾರಣದಿಂದಲೇ ಎಂದು ಆಕೆಯ ಹೆತ್ತವರು ಹೇಳುತ್ತಿದ್ದಾರೆ. ಅತಿ ಹೆಚ್ಚು ಬುದ್ಧಿಜೀವಿಗಳು ಕಲಿಯುವ ಮತ್ತು ಕಲಿಸುವ ಕೇಂದ್ರಗಳೆಂದು ನಮ್ಮ ನಾಡಿನಲ್ಲಿ ಗುರುತಿಸಲ್ಪಡುವ ಇಂತಹ ಶಿಕ್ಷಣ ಕೇಂದ್ರಗಳಲ್ಲಿನ ಮತೀಯ ವಿವೇಚನೆಗಳನ್ನು ತುರ್ತು ಕಾನೂನು ಕ್ರಮಕ್ಕೆ ವಿಧೇಯಪಡಿಸಬೇಕಾಗಿದೆ. ಜಾತಿಸಂಘರ್ಷದ ಅತ್ಯಂತ ವಿಕೃತ ಅಟ್ಟಹಾಸವನ್ನು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನೋಡಿರಬಹುದು. ದಲಿತರ ಮಕ್ಕಳ ವಿರುದ್ಧ ಸವರ್ಣರು ನಡೆಸುವ ಪೀಡನೆಗಳ ಕಾರಣದಿಂದಾಗಿ, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು, ಕೊಲೆಗೈಯ್ಯಲ್ಪಡುತ್ತಿರುವುದು ಶೋಚನೀಯವಾಗಿದೆ. ಕೇವಲ ಭಾರತದ ಸಾಮಾಜಿಕ ಸಮಸ್ಯೆಯಾಗಿರುವ ಜಾತಿ ಮತ್ತು ಅಸ್ಪೃಶ್ಯತೆಯು, ಅದೆಷ್ಟೋ ಕಾಲದಿಂದ ನಿರ್ಮೂಲನೆಗೊಳಪಡದೆ ಇಂದಿಗೂ ಜೀವಂತವಾಗಿದೆ. ಯಾವುದೇ ರೀತಿಯ ಸಾಮಾಜಿಕ ಬದಲಾವಣೆಗಳು ಬಂದರೂ, ಜಾತಿಮತಗಳ ವಿವೇಚನೆಯನ್ನು ದಾಟಿ ಮುಂದೆ ಸಾಗಲು, ಯಾವ ಉನ್ನತ ಶಿಕ್ಷಣವೂ ಬೆಳೆದಿಲ್ಲ ಎಂಬುದಾಗಿದೆ ಸದ್ಯದ ಪರಿಸ್ಥಿತಿ.

ಸ್ವಜನಪಕ್ಷಪಾತದ ರಾಜಕೀಯ

ಜಾತಿಮತಗಳು ಮಾತ್ರವಲ್ಲ, ರಾಜಕೀಯ ಪಕ್ಷಗಳ ಹಾಗೂ ಇತರ ಭಾವನಾತ್ಮಕ, ವೈಯಕ್ತಿಕ ಕಾರ್ಯಗಳ ಮೂಲದಲ್ಲಿರುವ ಸ್ವಜನಪಕ್ಷಪಾತವು, ಉನ್ನತ ಶಿಕ್ಷಣ ಕ್ಷೇತ್ರದ ಮೌಲ್ಯವನ್ನು ಕಸಿದುಕೊಂಡು, ನಾಶಕ್ಕೆ ಹೇತುವಾಗುತ್ತದೆ. ಏನೇ ತಪ್ಪೆಸಗಿದರೂ ತನ್ನ ಪಕ್ಷದವನನ್ನು ರಕ್ಷಿಸುವ ರೀತಿ ಸಮಾಜದ ಇತರ ಕ್ಷೇತ್ರಗಳಲ್ಲಿ ಇರುವಂತೆಯೇ, ಶಿಕ್ಷಣ ಕ್ಷೇತ್ರದಲ್ಲಿಯೂ ಎಗ್ಗಿಲ್ಲದೆ ನಡೆಯುತ್ತಿದೆ. ಉನ್ನತರೆಂದು ನಟಿಸುವ ವಿದ್ಯಾಭ್ಯಾಸ ಸಂಸ್ಥೆಗಳಲ್ಲಿ ಇರುವ ಹಲವರು, ಜ್ಞಾನ ವಿಕಸನದ ಮತ್ತು ಸಾಮಾಜಿಕ ಪ್ರಜ್ಞೆಯ ಹೆಸರಿನಲ್ಲಿ ನಡೆಸುವ ವಂಚನೆಗಳನ್ನು ಕೂಡಾ ಸಮರ್ಥಿಸಿಕೊಳ್ಳುವಂತಹ ದುರವಸ್ಥೆಯಾಗಿದೆ ಇಂದಿನದ್ದು.

ವಿಚಾರಗಳ ಹಾಗೂ ಪದವಿಗಳ ಸೋರಿಕೆಗಳು, ಅನಧಿಕೃತ ನೇಮಕಾತಿಗಳು, ಪರೀಕ್ಷಾ ವಂಚನೆ, ಪ್ರಶ್ನೆ ಪತ್ರಿಕೆ ಸೋರಿಕೆ ಮುಂತಾದ ಅನೇಕಾನೇಕ ಅನ್ಯಾಯಗಳು ಇತ್ತೀಚೆಗಿನ ದಿನಗಳಲ್ಲಿ ಬೆಳಕಿಗೆ ಬರುತ್ತಿದೆ. ಪ್ರಾಮಾಣಿಕರಾಗಿ ಕಲಿತು, ಉದ್ಯೋಗ ಮಾಡುವವರನ್ನು ನಿರ್ದಾಕ್ಷಿಣ್ಯ ಎಳೆದು ಕೆಳ ಹಾಕಿ, ಮೆಟ್ಟಿ ನಿಲ್ಲುವಂತಹ ಕುತಂತ್ರಗಳನ್ನು ಹೆಣೆದು, ಜಾರಿಗೆ ತರುವಂತದ್ದೆಲ್ಲವೂ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ದೊಡ್ಡಮಟ್ಟದ ತಲೆನೋವಾಗಿ ಪರಿಣಮಿಸಿದೆ. ಅನ್ಯಾಯ, ವಂಚನೆಗಳ ವಿರುದ್ಧ ಪ್ರತಿಭಟಿಸುವವರ ವಿರುದ್ಧ ಮಾತ್ರವಲ್ಲದೆ, ಯಾರನ್ನೂ ತೃಪ್ತಿಪಡಿಸಲು ನಿಲ್ಲದೆ, ಪ್ರಾಮಾಣಿಕ ಕಲಿಕೆ, ಅಧ್ಯಾಪನಾ ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡವರ ವಿರುದ್ಧವೂ ಏಕಾಏಕಿ ದೂರುಗಳು ಮತ್ತು ಪ್ರಕರಣಗಳನ್ನು ದಾಖಲಿಸುತ್ತಿರುವ ರೀತಿಯೂ ಹೊಸತಲ್ಲ.

ಉನ್ನತ ಶಿಕ್ಷಣ ಕ್ಷೇತ್ರದ ಗುಣಮಟ್ಟವನ್ನು ಅವನತಿಗೆ ಕೊಂಡೊಯ್ಯುವತ್ತ, ಇದಕ್ಕೆ ಸಂಬಂಧಿಸಿದ ಕಚೇರಿಗಳಲ್ಲಿ ಗುಮಾಸ್ತರಾಗಿ ಕೆಲಸ ಮಾಡುವವರೂ, ಅಧಿಕಾರದ ಗದ್ದುಗೆಯಲ್ಲಿರುವ ಹಲವರೂ ಕಾರಣರಾಗುತ್ತಿದ್ದಾರೆ. ಬೋಧಕರು ಮತ್ತು ವಿದ್ಯಾರ್ಥಿಗಳನ್ನು ಅವರ ಔದ್ಯೋಗಿಕ ಪೇಪರ್‌ಗಳು ಮತ್ತು ಫೈಲ್‌ಗಳನ್ನು ಸರಿಪಡಿಸಿ ನೀಡದೆ, ವಿನಾಕಾರಣ ದಿನದೂಡುತ್ತಿರುವುದು, ಅವರನ್ನು ಕಲಿಕೆಯಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಡದಿರುವುದು ಇನ್ನೂ ದೊಡ್ಡ ಸಮಸ್ಯೆಯಾಗಿದೆ. ಇದು ಹೆಚ್ಚಾಗಿ ಹಲವು ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಬಹಳ ಪ್ರಚಾರದಲ್ಲಿರುವುದರಿಂದ, ಮಧ್ಯಪ್ರವೇಶಿಸಿ ಬದಲಾವಣೆ ತರದೇಹೋದಲ್ಲಿ, ಉನ್ನತ ಶಿಕ್ಷಣ ಕ್ಷೇತ್ರವು, ಇತರ ಕೈಗಾರಿಕೋದ್ಯಮ ಸಂಸ್ಥೆಗಳಂತೆಯೇ, ಅಧ್ಯಾಪಕ ನೌಕರರ ಸಂಘದ ಕೇಂದ್ರ ಮಾತ್ರವಾಗಿ ಬಿಡುತ್ತದೆ.

ಜಾತಿಸಂಘರ್ಷ ಹಾಗೂ ಸ್ವಜನಪಕ್ಷಪಾತವನ್ನು ಪ್ರಶ್ನಿಸಿ, ನ್ಯಾಯಯುತ ಹಕ್ಕುಗಳಿಗಾಗಿ ಕ್ರಮ ಕೈಗೊಂಡು, ಉನ್ನತ ಶಿಕ್ಷಣ ವಲಯದಲ್ಲಿ ನೆಲೆಗೊಳ್ಳುವುದು ಅಸಾಧ್ಯವೆನಿಸಿದೆ. ಈ ವಿಷಯದಲ್ಲಿ ಪ್ರತಿಕ್ರಿಯಿಸಲು ಬೋಧಕರ ಸಂಘಗಳು ಇವೆಯಾದರೂ, ಅವುಗಳು ಇತರೆ ಕಾರ್ಮಿಕ ಸಂಘಗಳಂತೆ ವರ್ತಿಸುತ್ತಾ, ಅವರವರ ಪಕ್ಷಗಳ ಅಧ್ಯಾಪಕರನ್ನು ಸಂರಕ್ಷಿಸುವ, ಇತರರನ್ನು ಸಮಸ್ಯೆಗಳ ಸುಳಿಯಲ್ಲಿ ತಂದೊಡ್ಡುವ ಪ್ರವೃತ್ತಿ ಮುಂದುವರಿಯುತ್ತಾ ಇದ್ದಲ್ಲಿ, ಮುಂದಿನ ದಿನಗಳಲ್ಲಿ ಅದು ಶಿಕ್ಷಣ ಕ್ಷೇತ್ರವನ್ನೇ ಬಲಿ ಪಡೆದುಕೊಳ್ಳುತ್ತದೆ. ಇಂತಹ ಬಹುಮುಖಿ ಸಮಸ್ಯೆಗಳಿಗೆ ಸೂಕ್ತಪರಿಹಾರ ದೊರಕದಿದ್ದಲ್ಲಿ, ಉನ್ನತ ಶಿಕ್ಷಣವು ಸಂಪೂರ್ಣವಾಗಿ ಬರೀ ಉದ್ಯಮವಾಗುವುದಂತೂ ನಿಶ್ಚಿತ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...