ಬೆಂಗಳೂರಿನಲ್ಲಿರುವ ಅನಾರೋಗ್ಯ ಪೀಡಿತ ತಾಯಿಯನ್ನು ಭೇಟಿ ಮಾಡಲು ಭಾರತ ಸರ್ಕಾರ ವೀಸಾ ನಿರಾಕರಿಸಿದೆ ಎಂದು ಭಾರತೀಯ ಮೂಲದ ಜಾತಿ ವಿರೋಧಿ ಹೋರಾಟಗಾರ್ತಿ ಕ್ಷಮಾ ಸಾವಂತ್ ಭಾನುವಾರ (ಫೆ.3) ಆರೋಪಿಸಿದ್ದಾರೆ.
ಅಮೆರಿಕಲ್ಲಿ ವಾಸವಿರುವ ಸಾವಂತ್ ಅವರು 2013ರಿಂದ 2023 ರವರೆಗೆ, ಅಲ್ಲಿನ ಸಿಯಾಟಲ್ ಸಿಟಿ ಕೌನ್ಸಿಲ್‌ನಲ್ಲಿ ಚುನಾಯಿತ ಪ್ರತಿನಿಧಿಯಾಗಿದ್ದರು.
ಫೆಬ್ರವರಿ 2023ರಲ್ಲಿ, ಸಾವಂತ್ ಅವರು ಮಂಡಿಸಿದ ನಿರ್ಣಯ ಅಂಗೀಕಾರ ಪಡೆಯುವ ಮೂಲಕ, ಸಿಯಾಟಲ್ ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸಿದ ಮೊದಲ ಅಮೆರಿಕನ್ ನಗರ ಎನಿಸಿಕೊಂಡಿತ್ತು.
ತನ್ನ ವೀಸಾ ನಿರಾಕರಣೆಯನ್ನು “ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರದ ರಾಜಕೀಯ ಪ್ರತೀಕಾರ” ಎಂದು ಸಾವಂತ್ ಆರೋಪಿಸಿದ್ದಾರೆ. ಈ ಕ್ರಮವನ್ನು ಪ್ರತಿಭಟಿಸಿ ಭಾರತ ಸರ್ಕಾರದ ವಿರುದ್ದ ಅವರು ಆನ್‌ಲೈನ್ ದೂರು ಆರಂಭಿಸಿದ್ದಾರೆ.
“ಮೋದಿ ಇತರ ಹೋರಾಟಗಾರರು ಮತ್ತು ಪತ್ರಕರ್ತರ ವಿರುದ್ಧವೂ ಇದೇ ರೀತಿ ಸೇಡು ತೀರಿಸಿಕೊಂಡಿದ್ದಾರೆ. ಭಾರತಕ್ಕೆ ಪ್ರವೇಶ ನಿರಾಕರಿಸಿದ್ದಾರೆ ಅಥವಾ ರದ್ದುಗೊಳಿಸಿದ್ದಾರೆ” ಎಂದು ಸಾವಂತ್ ದೂರಿದ್ದಾರೆ. ತನ್ನ 82 ವರ್ಷದ ತಾಯಿಯ ಆರೋಗ್ಯವು ವೇಗವಾಗಿ ಕ್ಷೀಣಿಸುತ್ತಿದೆ ಎಂದಿದ್ದಾರೆ.
India's PM Modi & the BJP government are denying me a visa to see my ill mother.
I’m not alone. Modi has retaliated against other activists & journalists, denying or revoking entry into India.
Sign the petition. Urge Modi to stop this retaliation. https://t.co/pnLOLW5IHb
My…
— Kshama Sawant (@cmkshama) February 1, 2025
“ಕ್ಷಮಾ ಸಾವಂತ್ ಮತ್ತು ಅವರ ಪತಿ ಕ್ಯಾಲ್ವಿನ್ ಪ್ರೀಸ್ಟ್ ಅವರಿಗೆ ಭಾರತಕ್ಕೆ ಪ್ರಯಾಣಿಸಲು ಮತ್ತು ಕ್ಷಮಾ ಅವರಿಗೆ ತಾಯಿಯನ್ನು ಭೇಟಿ ಮಾಡಲು ಸಾಧ್ಯವಾಗುವಂತೆ ಮಾನವೀಯ ನೆಲೆಯಲ್ಲಿ ತುರ್ತಾಗಿ ವೀಸಾ ಮಂಜೂರು ಮಾಡುವಂತೆ ನಾವು ಮೋದಿ ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಆನ್‌ಲೈನ್ ದೂರಿನಲ್ಲಿ ಹೇಳಲಾಗಿದೆ.
ಯಾವುದೇ ವಿವರಣೆ ನೀಡದೆ ಸಾವಂತ್ ಅವರಿಗೆ ಮೂರು ಬಾರಿ ಭಾರತ ವೀಸಾವನ್ನು ನಿರಾಕರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಸಲ್ಲಿಸಿದ ಮನವಿಯನ್ನೂ ತಿರಸ್ಕರಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
“ಆ ಸಮಯದಲ್ಲಿ, ಕ್ಷಮಾ ಅವರು ಮೋದಿ ಮತ್ತು ಬಿಜೆಪಿ ಸರ್ಕಾರದ ಮುಸ್ಲಿಂ ವಿರೋಧಿ, ಬಡವರ ವಿರೋಧಿ ಸಿಎಎ-ಎನ್‌ಆರ್‌ಸಿ [ಪೌರತ್ವ ತಿದ್ದುಪಡಿ ಕಾಯ್ದೆ-ನಾಗರಿಕರ ರಾಷ್ಟ್ರೀಯ ನೋಂದಣಿ] ಕಾನೂನುಗಳನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದ್ದರು ಮತ್ತು ಮೋದಿಯವರ ಕ್ರೂರ ಮತ್ತು ಶೋಷಣಾ ನೀತಿಗಳ ವಿರುದ್ಧ ರೈತರ ಚಳವಳಿಗೆ ಒಗ್ಗಟ್ಟಿನ ನಿರ್ಣಯ ಕೈಗೊಂಡಿದ್ದರು” ಎಂದು ದೂರಿನಲ್ಲಿ ಹೇಳಲಾಗಿದೆ.
ಜನವರಿಯಲ್ಲಿ, ಸ್ವೀಡಿಷ್ ಭಾರತೀಯ ಮೂಲದ ಪ್ರಾಧ್ಯಾಪಕ ಅಶೋಕ್ ಸ್ವೈನ್ ಅವರು ತಮ್ಮ ಸಾಗರೋತ್ತರ ಭಾರತೀಯ ನಾಗರಿಕ ಸ್ಥಾನಮಾನವನ್ನು ರದ್ದುಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಶೀಘ್ರ ವಿಚಾರಣೆಗೆ ಒಳಪಡಿಸುವಂತೆ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಭಾರತದ ಸಾಗರೋತ್ತರ ಪೌರತ್ವವು ವಲಸೆ ಸ್ಥಾನಮಾನವಾಗಿದ್ದು, ಇದು ಭಾರತೀಯ ಮೂಲದ ವಿದೇಶಿಯರು ಭಾರತದಲ್ಲಿ ಅನಿರ್ದಿಷ್ಟವಾಗಿ ವಾಸಿಸಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ರದ್ದತಿಯು ಅವರು ಭಾರತಕ್ಕೆ ಮರುಳುವುದನ್ನು ನಿರ್ಬಂಧಿಸುತ್ತದೆ.
ಸ್ವೈನ್ ಅವರು ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯದ ಶಾಂತಿ ಮತ್ತು ಸಂಘರ್ಷ ಸಂಶೋಧನಾ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮತ್ತು ಐದು ವರ್ಷಗಳಿಂದ ಭೇಟಿಯಾಗಲು ಸಾಧ್ಯವಾಗದ ತನ್ನ 82 ವರ್ಷದ ಅನಾರೋಗ್ಯ ಪೀಡಿತ ತಾಯಿಯನ್ನು ಭೇಟಿಯಾಗುವ ಮನವಿಯನ್ನು ಸ್ವೈನ್ ಮುಂದಿಟ್ಟಿದ್ದಾರೆ.
ಭಾರತದ ಸಾರ್ವಭೌಮತೆ, ಸಮಗ್ರತೆ ಮತ್ತು ಭದ್ರತೆಯ ಹಿತಾಸಕ್ತಿಗಳಿಗೆ ವಿರುದ್ಧವಾದ “ಕಾನೂನುಬಾಹಿರ ಚಟುವಟಿಕೆಗಳಲ್ಲಿ” ತೊಡಗಿರುವುದು ಕಂಡುಬಂದಿದೆ ಎಂಬ ಆಧಾರದ ಮೇಲೆ ಕೇಂದ್ರ ಸರ್ಕಾರವು ಜುಲೈ 2023ರಲ್ಲಿ ಸ್ವೈನ್ ಅವರ ಸಾಗರೋತ್ತರ ಪೌರತ್ವ ನೋಂದಣಿಯನ್ನು ರದ್ದುಗೊಳಿಸಿತ್ತು.
ಫೆಬ್ರವರಿ 2024ರಲ್ಲಿ, ಭಾರತೀಯ ಮೂಲದ ಬ್ರಿಟಿಷ್ ಬರಹಗಾರ್ತಿ ಮತ್ತು ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದ ರಾಜಕೀಯ ಪ್ರಾಧ್ಯಾಪಕಿ ನಿತಾಶಾ ಕೌಲ್ ಅವರು, “ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳ ಕುರಿತು ಮಾತನಾಡಿದ್ದಕ್ಕಾಗಿ” ಕೇಂದ್ರ ಸರ್ಕಾರದ ಆದೇಶದ ಮೇರೆಗೆ ದೇಶಕ್ಕೆ ಪ್ರವೇಶ ನಿರಾಕರಿಸಲಾಯಿತು ಮತ್ತು ಬೆಂಗಳೂರು ವಿಮಾನ ನಿಲ್ದಾಣದಿಂದ ಗಡಿಪಾರು ಮಾಡಲಾಯಿತು ಎಂದು ಆರೋಪಿಸಿದ್ದರು.
“ಸಂವಿಧಾನ ಮತ್ತು ಪ್ರಜಾಪ್ರಭುತ್ವ” ಎಂಬ ವಿಷಯದ ಕುರಿತು ಮಾತನಾಡಲು ಕೌಲ್ ಅವರನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತನ್ನ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶಕ್ಕೆ ಆಹ್ವಾನಿಸಿತ್ತು. ಕೌಲ್ ಅವರು ಬೆಂಗಳೂರಿಗೆ ಬಂದಿಳಿದ ನಂತರ, ಮಾನ್ಯ ವೀಸಾ ಹೊಂದಿದ್ದರೂ ವಿಮಾನ ನಿಲ್ದಾಣದಿಂದ ಹೊರಹೋಗಲು ಅವರಿಗೆ ಅನುಮತಿ ನಿರಾಕರಿಸಲಾಗಿತ್ತು.
ಭಾರತದ ಸಾಗರೋತ್ತರ ನಾಗರಿಕರಾಗಿರುವ ಕೌಲ್, ಭಾರತದ ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಮಾತೃ ಪಕ್ಷವಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಟೀಕೆಗೆ ಗುರಿಯಾಗಿದ್ದರು. 2019ರಲ್ಲಿ, ಅವರು ಯುಎಸ್ ವಿದೇಶಾಂಗ ವ್ಯವಹಾರಗಳ ಸದನ ಸಮಿತಿಯ ಮುಂದೆ ಸಾಕ್ಷ್ಯ ನುಡಿದು, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎತ್ತಿ ತೋರಿಸಿದ್ದರು.
ಆಗಸ್ಟ್ 2022ರಲ್ಲಿ, ಅಮೆರಿಕ ಮೂಲದ ಪತ್ರಕರ್ತ ಅಂಗದ್ ಸಿಂಗ್ ಅವರು ಪಂಜಾಬ್‌ನಲ್ಲಿರುವ ತಮ್ಮ ಕುಟುಂಬವನ್ನು ಭೇಟಿ ಮಾಡಲು ನ್ಯೂಯಾರ್ಕ್‌ನಿಂದ ಆಗಮಿಸಿದ್ದಾಗ ದೆಹಲಿ ವಿಮಾನ ನಿಲ್ದಾಣದಿಂದ ಗಡಿಪಾರು ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.
ಜನವರಿ 2023ರಲ್ಲಿ, ಸಿಂಗ್ ಅವರ ಸಾಕ್ಷ್ಯಚಿತ್ರ “ಇಂಡಿಯಾ ಬರ್ನಿಂಗ್” ಭಾರತದ ಜಾತ್ಯತೀತತೆಯ ಬಗ್ಗೆ ಅತ್ಯಂತ ನಕಾರಾತ್ಮಕ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದ ಕಾರಣ ಭಾರತಕ್ಕೆ ಭೇಟಿ ನೀಡದಂತೆ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರವು ದೆಹಲಿ ಹೈಕೋರ್ಟ್ ಮುಂದೆ ಸಮರ್ಥಿಸಿಕೊಂಡಿತ್ತು.


