ಭಾರತದ ರಕ್ಷಣಾ ಸಚಿವರಾದ ರಾಜನಾಥ್‌ಸಿಂಗ್‌ರವರು ಚೀನಾದ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ ಮೂರು ದಿನಗಳಲ್ಲಿಯೇ ಮತ್ತೆ ಗಡಿ ಬಿಕ್ಕಟ್ಟು ಉದ್ಭವಿಸಿದೆ. ಪೂರ್ವ ಲಡಾಖ್‌ನ ಪಾಂಗೋಂಗ್ ಸರೋವರದ ದಕ್ಷಿಣ ದಂಡೆಯ ನೈಜ ನಿಯಂತ್ರಣ ರೇಖೆ ದಾಟಿರುವ ಭಾರತೀಯ ಸೇನೆಯು ಸೋಮವಾರ ರಾತ್ರಿ ಎಚ್ಚರಿಕೆಯ ಫೈರಿಂಗ್ ನಡೆಸಿದೆ ಎಂದು ಚೀನಾ ಆರೋಪಿಸಿದೆ.
ಇದಕ್ಕೆ ಪ್ರತಿಯಾಗಿ ಚೀನಾವು ಪ್ರತಿ ಎಚ್ಚರಿಕೆ ನೀಡಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಹೇಳಿದೆ. ಈ ಕುರಿತು ಚೀನಾ ಲಿಬರೇಷನ್ ಆರ್ಮಿಯ ಪಶ್ಚಿಮ ಕಮಾಂಡರ್ ಕರ್ನಲ್ ಝಾಂಗ್ ಸುಯಿಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಭಾರತವು ಇನ್ನು ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಮೇ ತಿಂಗಳಿನಲ್ಲಿ ಗಡಿ ಸಮಸ್ಯೆ ಉದ್ಬವವಾದಾಗಿನಿಂದ ಹಲವು ಮಾತುಕತೆಗಳು ನಡೆದರೂ ದೊಡ್ಡ ಮಟ್ಟದಲ್ಲಿ ಸೆಪ್ಟಂಬರ್ 5 ರಂದು ಮಾಸ್ಕೋದಲ್ಲಿ ನಡೆಸ ಶಾಂಘೈ ಸಹಕಾರ ಸಭೆಯಲ್ಲಿ ಭಾರತ ಚೀನಾ ಈ ಕುರಿತು ಮಾತುಕತೆ ನಡೆಸಿದ್ದವು. ಆದರೆ ಮೂರೇ ದಿನದಲ್ಲಿ ಮತ್ತೆ ಗಡಿ ಉದ್ವಿಗ್ನತೆ ಆರಂಭವಾಗಿದ್ದು ಆತಂಕ ಮೂಡಿಸಿದೆ.
ನೈಜ ನಿಯಂತ್ರಣ ರೇಖೆ ದಾಟಿ ಭಾರತದ ಪಡೆಗಳಿಂದ ಏಕಾಏಕಿ ದಾಳಿ ನಡೆಸಲಾಯಿತು. ಇದನ್ನು ತಡೆಯಲು ಚೀನಾ ಸಹ ಪ್ರತಿ ದಾಳಿ ನಡೆಸಿದೆ. ಭಾರತದ ನಡೆಯು ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಪರಸ್ಪರ ಒಪ್ಪಂದದ ಗಂಭೀರ ಉಲ್ಲಂಘನೆಯಾಗಿದೆ ಎಂದು ಚೀನಾ ಆರೋಪಿಸಿದೆ.
ಇದು ತೀವ್ರ ಗಂಭೀರ ನಡೆಯಾಗಿದೆ. ಈ ಕೂಡಲೇ ಭಾರತದ ಮುಂಚೂಣಿ ಪಡೆಗಳು ಹಿಂದೆ ಸರಿಯುವಂತೆ ನಿರ್ದೇಶನ ನೀಡಬೇಕೆಂದು ಭಾರತದ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಫೈರಿಂಗ್‌ಗೆ ಕಾರಣರಾದವರ ಮೇಲೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ಇದು ಮತ್ತೆ ಪುನಾರಾವರ್ತನೆ ಆಗದಂತೆ ತಡೆಯಬೇಕು ಎಂದು ಚೀನಾದ ಹೇಳಿಕೆಯಲ್ಲಿ ಉಲ್ಲೇಖಿಸಲಾಗದೆ.
ಇದೇ ಸ್ಥಳದಲ್ಲಿ ಆಗಸ್ಟ್ 29-31 ರ ರಾತ್ರಿ ಚೀನಾದ ಪಡೆಗಳು ಎರಡು ಬಾರಿ ಪ್ರಚೋದನಕಾರಿ ದಾಳಿ ನಡೆಸಲು ಮುಂದಾಗಿತ್ತು. ಆಗ ಭಾರತದ ಪಡೆಗಳು ಅದನ್ನು ಹಿಮ್ಮೆಟ್ಟಿಸಿದ್ದವು ಎಂದು ಭಾರತ ಸರ್ಕಾರ ಹೇಳಿತ್ತು.
ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ: ಲಡಾಖ್‌ನಲ್ಲಿ ಗಂಭೀರ ಪರಿಸ್ಥಿತಿ


