ಚತ್ತೀಸ್‌ಗಢ ಸರ್ಕಾರವು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆಯ ಪ್ರಯುಕ್ತ ನವೆಂಬರ್ 19 ರಿಂದ ಮಹಿಳೆಯರಿಗಾಗಿ ವಿಶೇಷ ವೈದ್ಯಕೀಯ ಸೌಲಭ್ಯದ “ದಾಯ್-ದೀದಿ” (ತಾಯಿ-ಸೋದರಿ) ಮೊಬೈಲ್ ಕ್ಲಿನಿಕ್ ಅನ್ನು ಆರಂಭಿಸಲಾಗುತ್ತಿದ್ದು, ಇದು ಕೊಳೆಗೇರಿಗಳು ಮತ್ತು ನಗರ ಪ್ರದೇಶಗಳ ಇತರ ಭಾಗಗಳಲ್ಲಿ ಕಾರ್ಯನಿರ್ವಹಿಸಲಿದೆ.
ದೇಶದಲ್ಲಿಯೇ ಇಂತಹ ಪ್ರಯತ್ನ ಇದೇ ಮೊದಲನೆಯದಾಗಿದ್ದು, ಈ ಮೊಬೈಲ್ ಕ್ಲಿನಿಕ್ ಮುನ್ಸಿಪಾಲಿಟಿ ವ್ಯಾಪ್ತಿಯ ರಾಯ್‌ಪುರ, ಬಿಲಾಸ್ಪುರ ಮತ್ತು ಭಿಲೈ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಇದು ‘ಮುಖ್ಯಮಂತ್ರಿಯವರ ನಗರ ಕೊಳಗೇರಿ ಆರೋಗ್ಯ ಯೋಜನೆ’ಯಡಿ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಿದೆ.
ಮಹಿಳಾ ರೋಗಿಗಳಿಗೆ ಮಾತ್ರ ಸೀಮಿತವಾಗಿರುವ ಈ ದಾಯ್-ದೀದಿ ಕ್ಲಿನಿಕ್‌ನಲ್ಲಿ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ತಂತ್ರಜ್ಞರು ಮತ್ತು ಸಹಾಯಕ ಶುಶ್ರೂಷಕಿ ಸೇರಿದಂತೆ ಎಲ್ಲರೂ ಮಹಿಳಾ ಸಿಬ್ಬಂದಿಯೇ ಇರುತ್ತಾರೆ.
ಇದನ್ನೂ ಓದಿ: ಡ್ರಗ್ ಕೇಸ್: ಎನ್‌ಸಿಬಿಯಿಂದ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ವಿಚಾರಣೆ
“ಇದು ರಾಜ್ಯದಲ್ಲಿ ಮಹಿಳಾ ಸಬಲೀಕರಣದ ಮತ್ತೊಂದು ಮಹತ್ವದ ಕಾರ್ಯಕ್ರಮವಾಗಿದೆ” ಎಂದು ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಹೇಳಿದ್ದಾರೆ.
ಈ ಕ್ಲಿನಿಕ್ ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ, ರೋಗಗಳ ಚಿಕಿತ್ಸೆ ಮತ್ತು ರೋಗನಿರ್ಣಯದ ಜೊತೆಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಹೊಂದಿರುತ್ತದೆ.
ಮಹಿಳೆಯರು ಹಿಂಜರಿಕೆಯಿಲ್ಲದೆ ಸ್ತ್ರೀ ಆರೋಗ್ಯ ಸಿಬ್ಬಂದಿಯೊಂದಿಗೆ ಮುಕ್ತವಾಗಿ ಸಂವಹನ ನಡೆಸಬಹುದು. ಸ್ತ್ರೀರೋಗ ಶಾಸ್ತ್ರ, ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಸಲಹೆ ಪಡೆಯಬಹುದು. ಜೊತೆಗೆ ಹೆಚ್ಚುವರಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಮಹಿಳೆಯರು ಪಡೆಯುತ್ತಾರೆ.
ಇದನ್ನೂ ಓದಿ: ಉತ್ತಮ ಬೆಳೆಯಾದರೂ ಖರೀದಿ ಕೇಂದ್ರ ತೆರೆಯದ ಸರ್ಕಾರದ ವಿರುದ್ಧ ರೈತರ ಆಕ್ರೋಶ


