Homeಕರ್ನಾಟಕಅಂಬಿ ಸಮಾಧಿ ಮುಂದೆ ದೇವೇಗೌಡರ ಸೆಕ್ಯುಲರ್ ಶಪಥ!

ಅಂಬಿ ಸಮಾಧಿ ಮುಂದೆ ದೇವೇಗೌಡರ ಸೆಕ್ಯುಲರ್ ಶಪಥ!

- Advertisement -
- Advertisement -

|ತುಂಟ |

ಅದು ಕಂಠೀರವ ಸ್ಟೂಡಿಯೋದಲ್ಲಿರುವ ಅಂಬರೀಶ್ ಅವರ ಸಮಾಧಿ. ರಾತ್ರಿ ಹನ್ನೆರಡೂವರೆ ಒಂದು ಗಂಟೆ ಸಮಯವಿರಬಹುದು. ಬಿಳಿ ಪಂಚೆ, ಬಿಳಿ ಶರ್ಟು ಹಾಕಿದ, ತಲೆಗೆ ಮಫ್ಲರಿನಂತೆ ಟವೆಲ್ ಸುತ್ತಿಕೊಂಡ  ವಯಸ್ಸಾದ ಹಿರಿ ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಸಮಾಧಿ ಮುಂದೆ ನಿಂತು ಸಣ್ಣಗೆ ಕಣ್ಣೀರು ಮಿಡಿಯುತ್ತಿದ್ದರು. ಕುತೂಹಲಗೊಂಡು ಹತ್ತಿರ ಹೋಗಿ ನೋಡಿದೆ. ಏನಾಶ್ಚರ್ಯ, ಅದು ನಮ್ಮ ಮಾಜಿ ಪ್ರಧಾನಿ ದೇವೇಗೌಡರು!

ಆ ಭಾವನಾತ್ಮಕ ವಾತಾವರಣ ಕದಡಲು ಇಷ್ಟವಾಗಲಿಲ್ಲ. ಸದ್ದು ಮಾಡದೆ, ದೇವೇಗೌಡರ ಪಕ್ಕಕ್ಕೆ ಹೋಗಿ ನಿಂತೆ. ನನ್ನತ್ತ ತಿರುಗಿ ನೋಡಿದ ಗೌಡರ ಕಣ್ಣುಗಳಲ್ಲಿ ಆ ಕ್ಷಣಕ್ಕೆ ಕಿಂಚಿತ್ತೂ ಕಪಟತೆ ಇರಲಿಲ್ಲ. ಮತ್ತೆ ಸಮಾಧಿಯತ್ತ ತಿರುಗಿದ ಅವರು ಅಂಬಿ ಸಮಾಧಿ ಜೊತೆ ಮಾತು ಮುಂದುವರೆಸಿದರು,

“ಅಂಬಿ, ನೀನು ನನ್ನ ಪಕ್ಷದಲ್ಲಿ ಇರಲಿ, ಇಲ್ಲದಿರಲಿ ಯಾವತ್ತೂ ನೀನು ನನ್ನ ಹುಡುಗನಾಗಿದ್ದೆ. ಅದೇ ಒರಟು ಭಾಷೆಯ, ಬೆಣ್ಣೆ ಹೃದಯದ ಹುಡುಗ. ನೀನು ಇಷ್ಟು ಬೇಗ ನಮ್ಮನ್ನೆಲ್ಲ ಅಗಲಿ ಹೋಗುತ್ತೀಯ ಅಂದುಕೊಂಡಿರಲಿಲ್ಲ. ನನ್ನ ಕಣ್ಣಮುಂದೆ ಆಡಿ ಬೆಳೆದ, ಸಿನಿಮಾ ಮಾಡಿದ ಹುಡುಗ ಕೊನೆಗೆ ನನ್ನ ಕಣ್ಣ ಮುಂದೆಯೇ ಅಗಲಿಹೋದದ್ದನ್ನು ನೆನೆಸಿಕೊಂಡರೆ ದುಃಖ ಉಕ್ಕಿ ಬರುತ್ತೆ. ನಿನ್ನ ಇಪ್ಪತ್ತೆರಡನೇ ವಯಸ್ಸಲ್ಲಿ ಮೊದಲ ಸಿನಿಮಾ ಮಾಡುವ ಹುಮ್ಮಸ್ಸಿನಲ್ಲಿ ನೀನಿದ್ದಾಗ ನಾನಾಗಲೇ ಎಂಎಲ್ಎ ಆಗಿ ಹತ್ತು ವರ್ಷ ಕಳೆದಿದ್ದೆ. ನನಗಿನ್ನೂ ಚೆನ್ನಾಗಿ ನೆನಪಿದೆ, ನಿನ್ನ ನಾಗರಹಾವು ಸಿನಿಮಾ ರಿಲೀಸ್ ಆದಾಗ ಅದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದ ನಾನು ಸಿನಿಮಾ ನೋಡಿ, ಈ ನಮ್ಮ ಮಂಡ್ಯದ  ಹುಡುಗ ಮುಂದೊಂದು ದಿನ ದೊಡ್ಡ ಸ್ಟಾರ್ ಆಗಿ ಬೆಳೆಯುತ್ತಾನೆ ನೋಡ್ತಾ ಇರಿ ಎಂದು ಎಲ್ಲರೆದುರು ಹೆಮ್ಮೆಯಿಂದ ಹೇಳಿಕೊಂಡು ತಿರುಗಾಡಿದ್ದೆ. ನನ್ನ ಮಾತು ಸುಳ್ಳಾಗಲಿಲ್ಲ. ನೀನು ನಿಜಕ್ಕೂ ಕರ್ಣನಂತವನು ಕಣಪ್ಪಾ…”

ಕ್ಷಣಕಾಲ ಮೌನಕ್ಕೆ ಶರಣಾದ ಗೌಡರು, ಮತ್ತೆ ನನ್ನತ್ತ ತಿರುಗಿ ನೋಡಿದರು. ಕಣ್ಣೀರಿನ ಪ್ರಮಾಣ ಕೊಂಚ ತಗ್ಗಿದಂತೆ ಕಾಣಿಸಿತು. ಬಹುಶಃ ಹೊರಟುಹೋಗುತ್ತಾರೇನೊ ಅಂತ ಭಾವಿಸಿದೆ. ಆದರೆ, ಮತ್ತೆ ಸಮಾಧಿಯತ್ತ ತಿರುಗಿದರು. ಈ ಮೊದಲು ಮೆದುವಾಗಿದ್ದ ಅವರ ದನಿಯಿಂದ ತುಸು ಬಿಗಿಯಾದ ಮಾತುಗಳು ತೇಲಿಬಂದವು. “ಈ ಸಲ ನೀನು ಮತ್ತೆ ಕಾಂಗ್ರೆಸ್ ಮೇಲೆ ಮುನಿಸಿಕೊಂಡೆ. ನನ್ನ ಹುಡುಗನ ಗುಣ ಎಂತದ್ದು ಅಂತ ಗೊತ್ತಿದ್ದರಿಂದ ನಾನು ಮತ್ತೆ ನಿನ್ನನ್ನು ಹತ್ತಿರಕ್ಕೆ ಸೆಳೆದುಕೊಂಡೆ. ಅದಕ್ಕೇ ಅಲ್ಲವೇ, ಕಾಂಗ್ರೆಸ್ ಮೇಲೆ ಬೇಸರಿಸಿಕೊಂಡ ನಿನ್ನನ್ನು ನಾನೇ ಸಂತೈಸಿ ನಮ್ಮ ಬೀಗ ತಮ್ಮಣ್ಣನ ಕಾರಿನಲ್ಲಿ ಮತದಾನ ಮಾಡಲು ಕಳಿಸಿದ್ದು. ನನ್ನ ಲೆಕ್ಕಾಚಾರ ಸರಿ ಇದ್ದಿದ್ದರೆ, ನಿನ್ನನ್ನ ಈ ಸಲ ಮಂಡ್ಯದ ಪಾರ್ಲಿಮೆಂಟ್ ಚುನಾವಣೆಗೆ ನನ್ನ ಪಾರ್ಟಿಯಿಂದ ನಿಲ್ಲಿಸೋಣ ಅಂದುಕೊಂಡಿದ್ದೆ. ಆದರೆ ವಿಧಿಯಾಟ, ನೀನೇ ನಮ್ಮನ್ನೆಲ್ಲ ಬಿಟ್ಟು ಹೋದೆ”. ಮತ್ತೆ ದೇವೇಗೌಡರ ಕಣ್ಣುಗಳು ನೀರಾಡಿದವು.

ಟವೆಲ್ಲಿನಿಂದ ಕಣ್ಣೊರೆಸಿಕೊಂಡ ಅವರು ಕ್ಷಣ ತಡೆದು ಇನ್ನಷ್ಟು ನಿಖರವಾಗಿ ಮಾತು ಮುಂದುವರೆಸಿದರು, “ನೀನು ಅಗಲಿದ ನೋವು ನಮ್ಮನ್ನೆಲ್ಲ ತುಂಬಾ ಕಾಡಿತು. ಕುಮಾರಸ್ವಾಮಿಯವರಂತೂ ಹಾರ್ಟ್ ಪೇಶೆಂಟಾಗಿದ್ದ್ರೂ ಒಡಹುಟ್ಟಿದ ಸೋದರನಂತೆ ಮುಂದೆ ನಿಂತು ಅಂತ್ಯಸಂಸ್ಕಾರ ಮಾಡಿದರು. ನನಗಂತೂ ಮೊಮ್ಮಗ ನಿಖಿಲ್ ರವರ ಮುಖದಲ್ಲಿ ನೀನೇ ಎದ್ದು ಬಂದಂತಾಗುತ್ತಿತ್ತು. ಅವರೂ ನಿನ್ನಂತೆಯೇ ಸಿನಿಮಾ ಸ್ಟಾರು. ನಿಖಿಲ್ ರವರನ್ನು ನೋಡಿದಾಗಲೆಲ್ಲ ನಿನ್ನದೇ ನೆನಪಾಗುತ್ತಿತ್ತು. ಅದಕ್ಕೆ ಅವತ್ತೇ ಡಿಸೈಡ್ ಮಾಡಿದೆ, ನೀನು ಪ್ರತಿನಿಧಿಸುತ್ತಿದ್ದ ಮಂಡ್ಯದಲ್ಲೇ ಅವರನ್ನು ಎಲೆಕ್ಷನ್ನಿಗೆ ನಿಲ್ಲಿಸಿ, ಅಂಬಿ ಇಲ್ಲದ ಕೊರಗು ನೀಗಿಕೊಳ್ಳೋಣ ಅಂತ!”.

ದೇವೇಗೌಡರ ಮಾತು ಕೇಳಿ ನನಗೆ ಶಾಕ್ ಆಯ್ತು! ಹಾಗಾದ್ರೆ, ನಿಖಿಲ್ ನನ್ನು ಮಂಡ್ಯದ ಚಕ್ರವ್ಯೂಹದೊಳಕ್ಕೆ ತಳ್ಳಿದ್ದು ಕುಟುಂಬ ರಾಜಕಾರಣದ ವಿಸ್ತರಣೆಯ ಭಾಗವಾಗಿ ಅಲ್ಲ, ಅಂಬಿ ಇಲ್ಲದ ಕೊರಗನ್ನು ನಿಖಿಲ್ ಮೂಲಕ ತುಂಬಲು..!!!! ಅಯ್ಯಯ್ಯೋ ಇಂಥಾ ಪುಣ್ಯಾತ್ಮನನ್ನ ತಪ್ಪಾಗಿ ತಿಳಿದುಬಿಟ್ಟಿದ್ದೆನ್ನಲ್ಲಾ ಅಂತ ವಿಪರೀತ ಸಂಕಟವಾಯ್ತು. ಜೊತೆಗೆ ದೇವೇಗೌಡರ ಮೇಲೆ ಗೌರವವೂ ಹೆಚ್ಚಾಯ್ತು. ಅಷ್ಟರೊಳಗೆ ಮತ್ತೆ ದೇವೇಗೌಡರ ಮಾತುಗಳು ಶುರುವಾಗಿದ್ದವು, “ಆದ್ರೆ ಇದನ್ನು ನನ್ನ ಮಗಳು ಸುಮಲತಾ ಅರ್ಥಾನೆ ಮಾಡಿಕೊಳ್ಳಲಿಲ್ಲ. ಪಾಪಾ, ಆಕೆಯಾದ್ರು ಏನು ಮಾಡುವಳು. ಸುತ್ತವರೆದಿರುವ ಮೀರ್ ಸಾದಿಕ್.ಗಳ ಮಾತು ಕೇಳಿ ಹಾಗೆ ಮಾಡ್ತಿದಾಳೆ. ನನಗಂತೂ ಸುಮಲತಾ ಮೇಲೆ ಸ್ವಲ್ಪವೂ ಬೇಸರವಿಲ್ಲ. ನನ್ನ ಮಕ್ಕಳಾದ ಕುಮಾರಸ್ವಾಮಿಯವರು ಮತ್ತು ರೇವಣ್ಣನವರ ಮೇಲಿಗಿಂತ ಜಾಸ್ತಿ ಪ್ರೀತಿ ಇದೆ. ಆದರೆ ನಿನಗೇ ಗೊತ್ತಲ್ಲವಾ ಈ ಹಾಳಾದ ರಾಜಕಾರಣದಲ್ಲಿ ಅದನ್ನೆಲ್ಲ ತೋರಿಸಿಕೊಳ್ಳಲು ಆಗುತ್ತಿಲ್ಲ. ಒಂದಲ್ಲ ಒಂದು ದಿನ  ಅರ್ಥವಾಗುತ್ತೆ. ಒಂದಂತೂ ಸತ್ಯ, ನನ್ನ ಮಗ ರೇವಣ್ಣನವರು ಅದ್ಯಾವುದೋ ಆತುರದಲ್ಲಿ ಆ ಮಗಳು ಸುಮಲತಾಗೆ ‘ಗಂಡ ಸತ್ತು ಆರು ತಿಂಗಳು ಕಳೆದಿಲ್ಲ, ಅಷ್ಟರಲ್ಲೇ ರಾಜಕೀಯ ಬೇಕಿತ್ತಾ?’ ಅಂತ ಕೇಳಿದ್ದು ನನಗೆ ತುಂಬಾನೇ ದುಃಖ ಉಂಟುಮಾಡಿದೆ. ಅದಕ್ಕೆ ನಾನೇ ಖುದ್ದಾಗಿ ಕಿವಿಹಿಂಡಿ ಬುದ್ದಿ ಹೇಳಿದೆ ನಮ್ಮ ಪಾರ್ಟಿ ಪ್ರೆಸಿಡೆಂಟು ಎಚ್.ವಿಶ್ವನಾಥರದ್ದು, ಕೊನೆಗೆ ಅವರಿಂದಲೇ ರೇವಣ್ಣನವರ ಪರವಾಗಿ ಕ್ಷಮೆಯನ್ನೂ ಕೇಳಿಸಿದ್ದೇನೆ”.

ನನಗೇ ಗೊತ್ತಿಲ್ಲದೆ ಈಗ ನನ್ನ ಕಣ್ಣಾಲಿಗಳಲ್ಲೂ ನೀರು ಜಿನುಗ ತೊಡಗಿದವು. ದೇವೇಗೌಡರ ಮಮಕಾರ ಕಂಡು ಕರಗಿಹೋದೆ.  ದೇವೇಗೌಡರು ಈಗ ಶಪಥಗೈಯ್ಯುವ ದನಿಯಲ್ಲಿ ಹೂಂಕರಿಸಿದರು, “ಇಲ್ಲಾ ಅಂಬಿ, ನಿನಗಿಂತ ನನ್ನ ಮೊಮ್ಮಗನ ಎಲೆಕ್ಷನ್ ದೊಡ್ಡದಲ್ಲ. ಅದಕ್ಕಿಂತಲೂ ಮುಖ್ಯವಾಗಿ, ಎಷ್ಟೇ ಬಾರಿ ಪಕ್ಷಾಂತರ ಮಾಡಿದರು ಕಾಂಗ್ರೆಸ್-ಜನತಾದಳ ನಡುವೆ ಓಡಾಡಿದೆಯೇ ವಿನಾಃ ಆ ಕೋಮುವಾದಿ ಬಿಜೆಪಿಯತ್ತ ತಲೆ ಹಾಕದ ನಿನ್ನ ಸಿದ್ಧಾಂತ ಕಾಯುವುದು ನನ್ನ ಧರ್ಮ ಅನ್ನಿಸುತ್ತಿದೆ. ಇವತ್ತು ಅದೇ ಬಿಜೆಪಿಯವರು ಮಗಳು ಸುಮಲತಾಗೆ ಬೆಂಬಲ ನೀಡುವ ನೆಪದಲ್ಲಿ ತಮ್ಮ ಕೈಗೊಂಬೆ ಮಾಡಲು ಯತ್ನಿಸುತ್ತಿದ್ದಾರೆ. ಅವರ ಆ ಆಸೆ ಈಡೇರಲು ನಾನು ಬಿಡುವುದಿಲ್ಲ. ನಿನ್ನ ಆತ್ಮ ಪರಿತಪಿಸುವುದನ್ನು ನಾನು ನೋಡಲಾರೆ. ಅದಕ್ಕೇ ಇವತ್ತು ರಾಜಾರೋಷವಾಗಿ ಜನರ ಮುಂದೆ ಘೋಷಿಸಿದ್ದೇನೆ ‘ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮುಗಿಸಿಯೇ ನಾನು ಹೋಗೋದು’ ಅಂತ. ಅದರ ಮೊದಲ ಹೆಜ್ಜೆಯನ್ನು ನಿನ್ನ ಪ್ರೀತಿಯ ಮಂಡ್ಯದಿಂದಲೇ ಶುರು ಮಾಡ್ತೀನಿ ಅಂಬಿ. ನನ್ನ ಮೊಮ್ಮಗನ ನಾಮಪತ್ರವನ್ನ ವಾಪಾಸು ಪಡೆದು, ಮಗಳು ಸುಮಲತಾ ಅವಿರೋಧವಾಗಿ ಆಯ್ಕೆ ಆಗುವಂತೆ ಮಾಡುತ್ತೇನೆ. ಕೋಮುವಾದಿ ಬಿಜೆಪಿಗಳಿಗೆ ಇಲ್ಲಿಂದಲೇ ಶಾಕ್ ಟ್ರೀಟ್ ಮೆಂಟ್ ಶುರು ಮಾಡ್ತೀನಿ. ಮಂಡ್ಯದಂತಹ ಹೊಸ ಜಾಗದಲ್ಲಿ ಬಿಜೆಪಿ ಬೇರೂರಲು ಬಿಡುವುದಿಲ್ಲ. ಇದು ನನ್ನ ಶಪಥ!”

ಗೌಡರ ಶಪಥ ಕೇಳಿ ನನ್ನ ಮೈ ರೋಮಗಳೆಲ್ಲ ಎದ್ದು ನಿಂತವು, ಎದೆ ಬಡಿತ ಅಂಕೆಗೇ  ಸಿಗದಷ್ಟು ಡಬಗುಟ್ಟಲು ಶುರುವಾಯ್ತು, ಮೈಯಲ್ಲೆಲ್ಲ ಬೆವರು ಬಸಿಯತೊಡಗಿತು. ಕಣ್ಮುಚ್ಚಿ, ಜೋರಾಗಿ ಉಸಿರು ಒಳಗೆಳೆದುಕೊಂಡು, ದೇವೇಗೌಡರಿಗೆ ಗಟ್ಟಿಯಾಗಿ ಜೈಕಾರ ಕೂಗಲು ಶುರು ಮಾಡಿದೆ.

ಛಟೀರ್…!

ಕೆನ್ನೆಯ ಮೇಲೆ ಏಟೊಂದು ಬಿತ್ತು. ರಾತ್ರಿ ಮಲಗಿದ ಹಾಸಿಗೆಯಲ್ಲೇ ನಾನಿದ್ದೆ. ಪಕ್ಕದಲ್ಲಿ ಹೆಂಡತಿ ಗೊಣಗುತ್ತಾ ಕೂತಿದ್ದಳು “ಹಗಲೆಲ್ಲ ಕೆಲ್ಸ ಮಾಡಿ ಸುಸ್ತಾಗಿ ರಾತ್ರಿ ನೆಮ್ದಿಯಿಂದ ಮಲಗೋಣ ಅಂದ್ರೆ, ದರಿದ್ರ, ನಿಮ್ಮದೊಂದು ಕಾಟ ನಮಿಗೆ. ನಿಮ್ ಜರ್ನಲಿಸ್ಟ್ ಬುದ್ದೀನ ಅಲ್ಲೇ ಆಫೀಸ್ನಲ್ಲಿ ಬಿಟ್ಟು ಬರೋಕೆ ಆಗಲ್ವಾ. ಹೀಗೆ ಕನಸ್ನಲ್ಲೂ ಕನವರಿಸ್ಕೊಂಡು ಯಾಕ್ರೀ ಪ್ರಾಣ ತಿಂತೀರಾ….?”

“ಹ್ಞಾಂ……!!!!”

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...