ಮಹಿಳಾ ಹೊರಾಟಗಾರ್ತಿಯೊಂದಿಗೆ ದುರ್ವರ್ತನೆ ತೋರಿದ ಸಚಿವ ಮಾಧುಸ್ವಾಮಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಈ ಮೂಲಕ ಸಚಿವರು ಕ್ಷಮೆಯಾಚಿಸುವಂತೆ ಹಾಗೂ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಒತ್ತಾಯ ಮಾಡಲಾಯಿತು.
ಬೆಂಗಳೂರಿನ ರಾಜಾಜಿನಗರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು. ಸಚಿವ ಮಾಧುಸ್ವಾಮಿ ಅವರ ಭಾವಚಿತ್ರಕ್ಕೆ ಸ್ತ್ರೀ ವಸ್ತ್ರ ತೊಡಿಸಿ ಅದನ್ನು ದಹಿಸುವ ಮೂಲಕ ಪ್ರತಿಭಟನೆ ಮಾಡಲಾಗಿದೆ.
ಕೋಲಾರ ತಾಲೂಕಿನ ಅಗ್ರಹಾರ ಕೆರೆ ವೀಕ್ಷಣೆ ವೇಳೆ ಕೆರೆಕಟ್ಟೆ ಹೊಡೆಯದಂತೆ ಕ್ರಮ ತೆಗೆದುಕೊಳ್ಳಿ ಎಂದು ಸಣ್ಣ ನೀರಾವರಿ ಮತ್ತು ಕಾನೂನು ಸಚಿವವರಿಗೆ ಮನವಿ ಮಾಡುತ್ತಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿಯವರ ಮೇಲೆ ಸಚಿವರು “ನಾನು ಬಹಳ ಕೆಟ್ಟ ಮನುಷ್ಯ, ಹೇಯ್, ಮುಚ್ಚು ಬಾಯಿ ರಾಸ್ಕಲ್” ಎಂದು ಹೇಳಿದ್ದರು.
ಮಹಿಳಾ ಹೊರಾಟಗಾರ್ತಿಯೊಂದಿಗೆ ಗದರುವ ಮೂಲಕ ದುರ್ವರ್ತನೆ ತೋರಿದ ಸಚಿವವರ ವಿರುದ್ಧ ಈಗಾಗಲೇ ರಾಜ್ಯದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಕೂಡಲೇ ಆ ಮಹಿಳೆಯ ಬಳಿ ಕ್ಷಮೆ ಕೇಳಿ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ.
ಸಚಿವ ಮಾಧುಸ್ವಾಮಿಗೆ ಆ ಮಾತು ಶೋಭೆ ತರಲ್ಲ. ಈ ಬಗ್ಗೆ ಪತ್ರಿಕೆಲಿ ನೋಡಿ ತಿಳಿದುಕೊಂಡಿದ್ದೇನೆ. ಸಚಿವರಾಗಿ ಮಹಿಳೆಗೆ ಈ ರೀತಿ ಮಾತಾಡಿರೋದು ತಪ್ಪು. ಇದನ್ನು ಸಹಿಸಿಕೊಳ್ಳೊಕೆ ಆಗಲ್ಲ ಎಂದು ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಈ ಕುರಿತು ನೊಂದ ಮಹಿಳೆಯನ್ನು ಕರೆದು ಮಾತನಾಡುತ್ತೇನೆ. ಮಾಧುಸ್ವಾಮಿಯವರೊಂದಿಗೂ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಓದಿ: ಸಚಿವರ ದುರ್ವರ್ತನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ವ್ಯಾಪಕ ಖಂಡನೆ


