Homeಕರ್ನಾಟಕಹಂತಹಂತವಾಗಿ ತೊರೆಯಬೇಕಾದ ಜಾಡ್ಯ ಬ್ರಾಹ್ಮಣ್ಯದ ಗರ್ಭದೊಳಗೆ ಒಂದಿಷ್ಟು ಹೊತ್ತು

ಹಂತಹಂತವಾಗಿ ತೊರೆಯಬೇಕಾದ ಜಾಡ್ಯ ಬ್ರಾಹ್ಮಣ್ಯದ ಗರ್ಭದೊಳಗೆ ಒಂದಿಷ್ಟು ಹೊತ್ತು

- Advertisement -

ಇತ್ತೀಚಿನ ದಿನಗಳಲ್ಲಿ ’ಬ್ರಾಹ್ಮಣ್ಯ’ ಸದ್ದು ಮಾಡುತ್ತಿದೆ. ನಟ ಉಪೇಂದ್ರ ಅವರು ಬ್ರಾಹ್ಮಣ ಅರ್ಚಕರಿಗೆ ಪ್ರತ್ಯೇಕವಾಗಿ ಕೋವಿಡ್ ಪರಿಹಾರ ನೀಡಿದ್ದು, ಬಳಿಕ, ಜಾತಿಯ ಪ್ರಸ್ತಾಪವೇ ಮಾಡದಿದ್ದರಾಯಿತು ಜಾತಿ ತಾನಾಗಿಯೇ ನಶಿಸುತ್ತದೆ ಎಂಬರ್ಥದಲ್ಲಿ ಅವರು ಮಾತನಾಡಿದ್ದು ನಟ ಚೇತನ್‌ರ ಪ್ರತಿಕ್ರಿಯೆಗೆ ಆಹ್ವಾನಿಸಿತ್ತು. ಆ ಪ್ರತಿಕ್ರಿಯೆಯಲ್ಲಿ ಚೇತನ್ ಬ್ರಾಹ್ಮಣ್ಯವು ಈ ಸಮಾಜದಲ್ಲಿ ಇನ್ನೂ ಜೀವಂತವಾಗಿದೆಯೆಂದೂ, ಅದರ ವಿರುದ್ಧ ಪ್ರಜ್ಞಾವಂತರೆಲ್ಲರೂ ಧ್ವನಿಯೆತ್ತಬೇಕು ಎಂದೂ ಹೇಳಿದ್ದರು. ತಾನು ಬ್ರಾಹ್ಮಣ ಎಂಬ ಜಾತಿಯ ವಿರುದ್ಧ ಮಾತನಾಡುತ್ತಿಲ್ಲ ಎಂದೂ, ಬ್ರಾಹ್ಮಣ್ಯವೇ ಬೇರೆ ಬ್ರಾಹ್ಮಣವೆಂಬ ಒಂದು ನಿರ್ದಿಷ್ಟ ಜಾತಿಯೇ ಬೇರೆ ಎಂದೂ ಅವರು ಸ್ಪಷ್ಟಪಡಿಸಿದರು. ಹೀಗಿದ್ದೂ, ಚೇತನ್‌ರ ಹೇಳಿಕೆ ಹಲವು ಬ್ರಾಹ್ಮಣರ,
ಕೆಲವು ಬ್ರಾಹ್ಮಣ ಸಂಘಟನೆಗಳ ಕಣ್ಣು ಕೆಂಪಗಾಗಿಸಿತ್ತಲ್ಲದೆ, ಅವರ ವಿರುದ್ಧ ಎಫ್.ಐ.ಆರ್ ದಾಖಲಾಗಲು ಕಾರಣವಾಯಿತು. ಇದರ ಬೆನ್ನಲ್ಲೇ, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹೊಸದಾಗಿ ಕಾಲಿಟ್ಟಿರುವ ಕ್ಲಬ್‌ಹೌಸ್ ವೇದಿಕೆಯಲ್ಲಿ ಬಿರುಸಿನ ಚರ್ಚೆಗಳು ನಡೆದಿವೆ, ನಡೆಯುತ್ತಲೇ ಇವೆ.

’ಬ್ರಾಹ್ಮಣ್ಯ’ ಪದ ಹಾಗೂ ಪದಾರ್ಥವು ಇಂಗ್ಲಿಷ್‌ನಲ್ಲಿ ಬಳಕೆಯಲ್ಲಿರುವ ’ಬ್ರಾಹ್ಮಿನಿಸಂ’ಗೆ ಪರ್ಯಾಯವಾಗಿದೆ. ಬ್ರಾಹ್ಮಿನಿಸಂ ಎನ್ನುವ ಪರಿಭಾಷೆಯನ್ನು ವಸಾಹತುಶಾಹಿ ಪಾಶ್ಚಾತ್ಯ ವಿದ್ವಾಂಸರು ಬಳಕೆಗೆ ತಂದರಾದರೂ ಈ ನುಡಿಗಟ್ಟನ್ನು ಪ್ರಸಿದ್ಧ ಭಾರತೀಯ ಚಿಂತಕರು ಬಳಸಿದ್ದಾರೆ, ಅದರ ಅರ್ಥವನ್ನು ವಿಸ್ತರಿಸಿದ್ದಾರೆ. ಅಂಥವರಲ್ಲಿ ಜ್ಯೋತಿಭಾ ಫುಲೆ, ನಾರಾಯಣ ಗುರು, ಪೆರಿಯಾರ್ ಹಾಗೂ ಅಂಬೇಡ್ಕರ್ ಪ್ರಮುಖರು. ಫುಲೆಯವರಂತೂ ತಮ್ಮ ’ದಾಸ್ಯ’ (ಸ್ಲೇವರಿ) ಪುಸ್ತಕದಲ್ಲಿ ನೇರವಾಗಿ ಬ್ರಾಹ್ಮಣ ಎಂಬ ಜಾತಿಯನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆ. ಇನ್ನು, ಬ್ರಾಹ್ಮಣರ ಟೀಕೆಯಿಂದಲೇ ಆರಂಭಗೊಂಡು, ಪ್ರಧಾನವಾಗಿ ಅವರೇ ಪೋಷಿಸಿ, ಬೆಳೆಸಿದ ವರ್ಣಾಶ್ರಮ ಧರ್ಮವನ್ನು ಕಟುವಾಗಿ ವಿಮರ್ಶಿಸುವ ಹಂತಕ್ಕೆ ಬರುವಷ್ಟರಲ್ಲೇ ಅಂಬೇಡ್ಕರ್ ಬ್ರಾಹ್ಮಿನಿಸಂ ಎಂಬ ಪರಿಕಲ್ಪನೆಯನ್ನು ಸಾಕಷ್ಟು ಬೆಳೆಸಿದ್ದರು ಹಾಗೂ ಅದು ಎಲ್ಲ ಜಾತಿಯೊಳಗೂ ವ್ಯಾಪಿಸಿಕೊಂಡು ಬ್ರಾಹ್ಮಣ ಜಾತಿಯಿಂದ ಹೇಗೆ ಪ್ರತ್ಯೇಕವಾಗಿ, ಒಂದು ಸ್ವಾಯತ್ತ ಸಂಸ್ಥೆಯ ರೂಪದಲ್ಲಿ ಬೆಳೆದುನಿಂತಿದೆ
ಎಂದೂ ತೋರಿಸಿದ್ದರು.

ದೇಶದ ಹಲವು ಮೇರು ಚಿಂತಕರು ’ಬ್ರಾಹ್ಮಣ್ಯ’ವನ್ನು ಕಾಲಕಾಲಕ್ಕೆ ಟೀಕಿಸುತ್ತ ಬಂದಿರುವುದು, ಆ ಕಟುನುಡಿಗಳನ್ನು ನಮ್ಮ ಪ್ರಜ್ಞಾವಂತ ನಾಗರಿಕ ಸಮಾಜವು ಇತ್ಯಾತ್ಮಕವಾಗಿಯೇ ಪರಿಗಣಿಸುತ್ತ ಬಂದಿರುವುದು ನಟ ಚೇತನ್ ವಿರುದ್ಧ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದವರಿಗೆ ತಿಳಿಯದಿರುವ ವಿಷಯವೇನಲ್ಲ. ಚೇತನ್ ಅವರು ಸಮುದಾಯ-ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ ಎಂಬ ಆರೋಪವು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದೂ ಆ ಬ್ರಹ್ಮಜ್ಞಾನಿಗಳು ತಿಳಿದಿದ್ದಾರೆ. ಹಾಗಾಗಿ, ಎಫ್.ಐ.ಆರ್ ಪ್ರಹಸನವು ಬೇರೊಂದು ಉದ್ದೇಶವನ್ನೇ ಹೊಂದಿದೆ. ಅದು, ’ಇನ್ನು ನಾವು ಸುಮ್ಮನಿರುವುದಿಲ್ಲ. ಕಾಲ ಬದಲಾಗಿದೆ. ಪ್ರಭುತ್ವವೂ, ಸಮಾಜದಲ್ಲಿ ಬಿತ್ತಲಾಗಿರುವ ಸಾಂಸ್ಕೃತಿಕ ಪ್ರಜ್ಞೆಯೂ ನಮ್ಮ ಪರವಾಗಿಯೇ ಇದೆ. ಹುಷಾರ್’ ಎಂದು ಎಚ್ಚರಿಕೆ ನೀಡುವ ಉದ್ದೇಶ.

ಬ್ರಾಹ್ಮಣ್ಯ, ಬ್ರಾಹ್ಮಿನಿಸಂ ಎಂಬ ಪರಿಕಲ್ಪನೆಯೇ ಸರಿಯಲ್ಲ, ಬ್ರಾಹ್ಮಣ್ಯವೆಂದ ಕೂಡಲೆ ಅದು ಬ್ರಾಹ್ಮಣ ಎಂಬ ಜಾತಿಯನ್ನೇ ಪರೋಕ್ಷವಾಗಿ ಗುರಿಯಾಗಿಸುತ್ತದೆ ಎಂದು ತಾತ್ವಿಕವಾಗಿ ಟೀಕಿಸುವವರೂ ಇದ್ದಾರೆ. ಆ ಟೀಕೆಗಳನ್ನೂ, ಅವಕ್ಕೆ ಪ್ರತಿಕ್ರಿಯೆಗಳನ್ನೂ ನೋಡುವ ಮೊದಲು, ಬ್ರಾಹ್ಮಣ್ಯವನ್ನು ವ್ಯಾಖ್ಯಾನಿಸುವುದು ಒಳ್ಳೆಯದು. ಈ ವ್ಯಾಖ್ಯಾನದ ಚರ್ಚೆಯನ್ನು ಲೇಖನದ ಮುಂದಿನ ಭಾಗ ಚುಟುಕಾಗಿ ಮಾಡಲಿದೆ.

PC : The New Indian Express

ಹುಟ್ಟಿನ ಮಾನದಂಡದಿಂದ ಜನರನ್ನು ಒಂದು ಶ್ರೇಣೀಕೃತ ವ್ಯವಸ್ಥೆಯ ನಿರ್ದಿಷ್ಟ ಸ್ಥಾನಗಳಲ್ಲಿ ಕೂರಿಸುವ ಹಾಗೂ ಆ ವ್ಯವಸ್ಥೆಯು ದುರ್ಬಲಗೊಳ್ಳದಂತೆ ನೋಡಿಕೊಳ್ಳುವ ಸಾಂಸ್ಥಿಕ ಪ್ರಯತ್ನದಿಂದ ಭರತಖಂಡದಲ್ಲಿ ರೂಪುಗೊಂಡಿರುವ ಪ್ರಜ್ಞೆಯೇ ಬ್ರಾಹ್ಮಣ್ಯ.

ಈ ವ್ಯಾಖ್ಯಾನದಲ್ಲಿ ’ಸಾಂಸ್ಥಿಕ ಪ್ರಯತ್ನ’ ಪದಗಟ್ಟನ್ನು ಒತ್ತು ನೀಡಿ ಓದಿಕೊಳ್ಳಬೇಕು. ಈ ಸಾಂಸ್ಥಿಕ ಪ್ರಯತ್ನಕ್ಕೂ, ಬ್ರಾಹ್ಮಣ್ಯ ಎನ್ನುವ ಪದಕ್ಕೂ ನೇರಾನೇರ ಸಂಬಂಧವಿದೆ. ವರ್ಣಾಶ್ರಮ ಧರ್ಮವಾಗಲೀ ಅಥವಾ ಆನಂತರ ಬೆಳೆದ ಜಾತಿ ವ್ಯವಸ್ಥೆಯಾಗಲೀ ಒಂದು ಸಾಂಸ್ಥಿಕ ಸ್ವರೂಪ ಪಡೆದುಕೊಳ್ಳಲು ಬ್ರಾಹ್ಮಣರು ಮತ್ತು ಅವರ ಗ್ರಂಥಗಳು ನೀಡಿದ ಅದ್ವಿತೀಯ ಕೊಡುಗೆಯೇ ’ಬ್ರಾಹ್ಮಣ್ಯ’, ’ಬ್ರಾಹ್ಮಿನಿಸಂ’ ಪದಗಳು ಚಾಲ್ತಿಗೆ ಬರಲು ಕಾರಣ. ಈ ನಿಟ್ಟಿನಲ್ಲಷ್ಟೇ ಬ್ರಾಹ್ಮಣರಿಗೂ, ಬ್ರಾಹ್ಮಣ್ಯಕ್ಕೂ ಸಂಬಂಧವಿದೆ. ಮೇಲಿನ ಈ ವ್ಯಾಖ್ಯಾನ ಹಾಗೂ ವಿವರಣೆಗೆ ಎದುರಾಗಿ ಕೆಲವು ಟೀಕೆಗಳು, ಪ್ರಶ್ನೆಗಳು ಇಂತಿವೆ –

ಅ) ಪ್ರಧಾನವಾಗಿ ಬ್ರಾಹ್ಮಣರೇ ವರ್ಣಾಶ್ರಮಧರ್ಮವನ್ನು ಒಂದು ಸಂಸ್ಥೆಯ ಸ್ವರೂಪದಲ್ಲಿ ಬೆಳೆಸಿದರು ಎನ್ನುವುದಕ್ಕೆ ಆಧಾರವೇನು? ಆ ಪ್ರಯತ್ನ ನಿರಂತರವಾಗಿತ್ತೇ? ಹಾಗೆ ಪ್ರಯತ್ನ ಮಾಡಿದವರೆಲ್ಲರೂ ಜಾತಸ್ಯ ಬ್ರಾಹ್ಮಣರೋ ಅಥವಾ ಅವರಲ್ಲಿ ಹೊಸದಾಗಿ ಬ್ರಾಹ್ಮಣ ಪದವಿ ಹೊಂದಿದವರೂ ಇದ್ದರೋ? ಅವರ ಪ್ರಯತ್ನ ಕೇವಲ ಗ್ರಂಥಗಳಿಗಷ್ಟೇ ಸೀಮಿತವಾಗಿತ್ತೇ ಅಥವಾ ಸಮಾಜದಲ್ಲಿ ಅದು ಅನುಷ್ಠಾನಕ್ಕೆ ಬಂದಿತ್ತೇ? ನಿಜಕ್ಕೂ ಅಂಥಾ ಒಂದು ಸಂಸ್ಥೆ ಜಾರಿಯಲ್ಲಿ ಇತ್ತೇ? ಅಂಥಾ ಸಂಸ್ಥೆ ಇತ್ತು ಎಂದು ಹುಸಿಯನಾಡಿದವರು ಪೌರಸ್ತ್ಯವಾದಿ (ಓರಿಯೆಂಟಲ್) ಚಿಂತಕರಲ್ಲವೇ?

ಆ) ಅಂಥಾ ಒಂದು ಸಂಸ್ಥೆಯು ದೇಶಾದ್ಯಂತ ಹರಡಲು ಹಾಗೂ ತಲೆಮಾರುಗಳು ಉಳಿದುಬರಲು ರಾಜಪ್ರಭುತ್ವದ ಸಹಕಾರ ಬೇಕೇಬೇಕು. ಆ ಸಹಕಾರವನ್ನು ರಾಜಪ್ರಭುತ್ವ ನೀಡಿತ್ತೇ? ಭರತಖಂಡದ ಬಹುತೇಕ ರಾಜಮನೆತನಗಳು ಶೂದ್ರ ವರ್ಣದವರದ್ದೇ ಆಗಿತ್ತು ಎಂಬ ಅಂಶವನ್ನು ಗಮನಿಸಿದರೆ, ತಮ್ಮನ್ನು ಕೆಳಸ್ತರದಲ್ಲಿ ಕಾಣುವ ವರ್ಣಾಶ್ರಮ ವ್ಯವಸ್ಥೆಯನ್ನು ಅವರು ಪೋಷಿಸಿದ್ದರೆಂದು ನಂಬುವುದು ಕಷ್ಟ. ಅಲ್ಲದೆ, ಹಾಗೆ ಪೋಷಿಸಿದ್ದರೆನ್ನಲು ಯಾವ ಆಧಾರವೂ ಇಲ್ಲ.

ಇ) ವರ್ಣಾಶ್ರಮಧರ್ಮವನ್ನೂ, ಆನಂತರದ ಜಾತಿ ವ್ಯವಸ್ಥೆಯನ್ನೂ ಪ್ರಧಾನವಾಗಿ ಬ್ರಾಹ್ಮಣರೇ
ಸಾಂಸ್ಥಿಕಗೊಳಿಸಿದರೆಂದು ಒಂದುವೇಳೆ ಒಪ್ಪಿಕೊಂಡರೂ, ಆ ಸಂಸ್ಥೆಯನ್ನು ನಿರಾಕರಿಸಿ ನಿಂತ ಎಷ್ಟೋ ಮಂದಿ ಬ್ರಾಹ್ಮಣರನ್ನು ನಾವು ಪರಿಗಣಿಸಲೇಬೇಕಾಗುತ್ತದೆ. ಚಾರ್ವಾಕ, ಬೌದ್ಧ, ಜೈನ ಮುಂತಾದ ಅಬ್ರಾಹ್ಮಣ ದರ್ಶನಗಳನ್ನು ಬೆಳೆಸಿದವರಲ್ಲಿ ಬ್ರಾಹ್ಮಣರೂ ಇದ್ದಾರೆ. ಹೀಗಿರುವಾಗ, ಬ್ರಾಹ್ಮಣರ ಶ್ರೇಣೀಕರಣ ಪರ ಕೆಲಸಗಳನ್ನಷ್ಟೇ ಅನುಲಕ್ಷಿಸಿ ’ಬ್ರಾಹ್ಮಣ್ಯ’ ಪದವನ್ನು ಚಾಲ್ತಿಗೆ ತರುವುದು ಸರಿಯೇ?

ಈ ಎಲ್ಲ ಟೀಕೆಗಳಿಗೆ ಬಹಳ ಸಂಕ್ಷಿಪ್ತವಾಗಿ ಉತ್ತರಿಸುವ ಮುನ್ನ ಜಾತಿಯ ಕುರಿತು ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಬಂದಿರುವ ಪುಸ್ತಕಗಳನ್ನೂ, ಲೇಖನ ಸರಣಿಗಳನ್ನೂ ಉಲ್ಲೇಖಿಸುವುದು ಸೂಕ್ತ. ನನ್ನ ಪ್ರಕಾರ ಕನ್ನಡ ಪ್ರಜ್ಞಾವಲಯ ಈ ಕೆಳಗಿನ ಬರಹಗಳನ್ನು ಗಮನಿಸಲೇಬೇಕು

ಅ) ಜಿ ಎನ್ ನಾಗರಾಜ್ ಅವರ ’ಜಾತಿ ಬಂತು ಹೇಗೆ?’ ಪುಸ್ತಕ.

ಆ) ಇತಿಹಾಸತಜ್ಞ ಮನು ವಿ ದೇವದೇವನ್ ಅವರು ’ಬುಕ್ ಬ್ರಹ್ಮ’ ಜಾಲತಾಣದಲ್ಲಿ ಬರೆದಿರುವ ’ಜಾತಿಪದ್ಧತಿಯ ಮೈಮನಗಳು’ ಲೇಖನ ಸರಣಿ.

ಇ) ’ಬುಕ್ ಬ್ರಹ್ಮ’ದಲ್ಲಿ ಮೂಡುತ್ತಲಿರುವ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಅವರ ’ಜಾತಿ ಸಮಾಜ < ನಾಗರಿಕ ಸಮಾಜ’ ಲೇಖನ ಸರಣಿ.

ಈ) ಬಾಲಗಂಗಾಧರ ಹಾಗೂ ಅವರ ಶಿಷ್ಯರು ಕಳೆದ 15 ವರ್ಷಗಳಿಂದ ಬೆಳೆಸುತ್ತ ಬಂದಿರುವ ಜಾತಿ ಸಂಕಥನ.

ಟೀಕೆಗಳನ್ನೀಗ ಪ್ರಾರಂಬರಿಸೋಣ.

ಅ) ಋಗ್ವೇದ ಕಾಲದಲ್ಲಿ ವರ್ಣಾವಸ್ಥೆ ಸ್ಪಷ್ಟವಾಗಿ ರೂಪುಗೊಳ್ಳದಿದ್ದರೂ ಬ್ರಾಹ್ಮಣಗಳು ಮತ್ತು ಉಪನಿಷತ್ತುಗಳಲ್ಲಿ ಮೇಲು-ಕೀಳಿನ ವರ್ಣವ್ಯವಸ್ಥೆಯ ಸ್ಪಷ್ಟ ಉಲ್ಲೇಖಗಳು ಸಿಗುತ್ತವೆ. ವರ್ಣಗಳು ಗುಣಾಧಾರಿತವೋ, ಹುಟ್ಟು ಆಧಾರಿತವೋ ಎನ್ನುವ ಚರ್ಚೆ ಬಹುಶಃ ವರ್ಣಗಳಷ್ಟೇ ಹಳೆಯದು. ಮಹಾಭಾರತದಲ್ಲಿ ಯುಧಿಷ್ಠಿರನಿಗೂ ನಹುಷನಿಗೂ ನಡೆಯುವ ಸಂವಾದದಲ್ಲಿ, ಕೆಲವು ಪುರಾಣಗಳಲ್ಲಿ ಗುಣಕ್ಕೆ ಒತ್ತು ನೀಡಲಾಗಿದೆ. ಮಹಾಭಾರತದ ಅನುಶಾಸನ ಪರ್ವದಲ್ಲಿ, ರಾಮಾಯಣದಲ್ಲಿ ಮತ್ತು, ಬಹಳ ಮುಖ್ಯವಾಗಿ ಮನು, ಯಾಜ್ಞವಲ್ಕ್ಯ, ಪರಾಶರ ಸ್ಮೃತಿಗಳಲ್ಲಿ ಹುಟ್ಟಿಗೆ ಒತ್ತು ನೀಡಲಾಗಿದೆ. ಆ ಚರ್ಚೆ ಏನೇ ಇದ್ದರೂ, ಬರುಬರುತ್ತ ಹುಟ್ಟಿನಿಂದಲೇ ವರ್ಣಗಳನ್ನೂ, ನಂತರ ರೂಪುಗೊಂಡ ಜಾತಿಗಳನ್ನೂ (ಕ್ರಿ.ಶ 600 ಇಂದ 1200ರ ಅವಧಿಯಲ್ಲಿ ಜಾತಿ ವ್ಯವಸ್ಥೆಯು ಸ್ಪಷ್ಟ ರೂಪ ಪಡೆಯಿತು) ಗುರುತಿಸುವ ರೂಢಿ ಬೆಳೆದುಬಂದಿದೆ. ಕೆಲವು ಜಾತ್ಯಾಂತರ ಪ್ರಕ್ರಿಯೆಗಳನ್ನು ನಾವು ಇತಿಹಾಸದುದ್ದಕ್ಕೂ ಕಾಣಬಹುದಾದರೂ, ವಿಪುಲವಾದ ಶಾಸ್ತ್ರ, ಶಾಸನ ಮತ್ತು ಸಾಹಿತ್ಯಿಕ ಪರಿಕರಗಳನ್ನು ಗಮನಿಸಿದಾಗ ಪ್ರಧಾನವಾಗಿ ಹುಟ್ಟಿನ ಆಧಾರದಲ್ಲೇ ವರ್ಣಗಳು, ಅದರಲ್ಲೂ ಬಹಳ ಮುಖ್ಯವಾಗಿ ಬ್ರಾಹ್ಮಣ ವರ್ಣವು ತೀರ್ಮಾನವಾಗುತ್ತಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. (ಕ್ಷತ್ರಿಯ ವರ್ಣದ ಕುರಿತು ಇಷ್ಟು ನಿಖರವಾಗಿ ಹೇಳಲಾಗದು. ಇದಕ್ಕೆ ಕಾರಣವನ್ನು ಮುಂದೆ ನೋಡಲಿದ್ದೇವೆ). ಇನ್ನು, ಹುಟ್ಟು ಆಧಾರಿತ ವರ್ಣಾಶ್ರಮ ತಾರತಮ್ಯವನ್ನು ಉಗ್ರವಾಗಿ ಪ್ರತಿಪಾದಿಸಿದ ಸ್ಮೃತಿಕಾರ ಬ್ರಾಹ್ಮಣರು ಸ್ವತಃ ತಾವೇ ಹುಟ್ಟಿನಿಂದ ಬ್ರಾಹ್ಮಣರಾಗಿದ್ದರಷ್ಟೇ ಅಲ್ಲವೇ ತಮ್ಮ ಮಾತುಗಳಿಗೆ ಬೆಲೆ ಬರುವುದು?

ಸ್ಮೃತಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ಮನುಸ್ಮೃತಿಯಲ್ಲಿ ಪ್ರತಿಪಾದಿಸಿದ ವರ್ಣಾಶ್ರಮ ತಾರತಮ್ಯವನ್ನು ಅನುಷ್ಠಾನಕ್ಕೆ ತರಲಾಗಿತ್ತೇ? ಇಲ್ಲ, ಆ ವ್ಯವಸ್ಥೆಯು ಕೇವಲ ಗ್ರಂಥಗಳಲ್ಲಷ್ಟೇ ತನ್ನ ವಿರಾಟ್ ರೂಪ ತೋರಿಸುತ್ತಿತ್ತೇ? ವಸಾಹತುಶಾಹಿ ಪೂರ್ವದ ಒಂದುವರೆ ಸಾವಿರ ವರ್ಷಗಳ ಇತಿಹಾಸದುದ್ದಕ್ಕೂ ಮನುಸ್ಮೃತಿ ಹಾಗೂ ವರ್ಣಾಶ್ರಮ ವ್ಯವಸ್ಥೆಯ ಪ್ರಸ್ತಾಪ ಆಗುತ್ತಲೇ ಇತ್ತು. ಆಳುವ ಅರಸರು ವರ್ಣಾಶ್ರಮ ಧರ್ಮವನ್ನು ರಕ್ಷಿಸುವ ಹೊಣೆ ಹೊತ್ತಿರುತ್ತಾರೆಂದೂ, ಮನು ತೋರಿಸಿದ ಮಾರ್ಗದಲ್ಲಿ ನಡೆಯುವವರೆಂದೂ ದೇಶಾದ್ಯಂತ ನೂರಾರು ಶಾಸನಗಳಲ್ಲಿ ಉಲ್ಲೇಖವಿದೆ. ಆ ಮನುವು ಮನುಸ್ಮೃತಿಯ ಕರ್ತೃ ಸ್ವಾಯಂಭುವ ಮನುವೇ ಆಗಿದ್ದಾನಲ್ಲದೆ ವೈವಸ್ವತ ಮನು ಅಲ್ಲ ಎಂದು ಶಾಸ್ತ್ರೀಯವಾಗಿ ತೋರಿಸಬಹುದು. ಇನ್ನು, ದಾನ ಶಾಸನಗಳ ಕೊನೆಯಲ್ಲಿ ಉಲ್ಲೇಖಗೊಳ್ಳುವ ಪಂಚಮಹಾಪಾತಕಗಳಲ್ಲಿ ಎರಡು ಪಾತಕಗಳು ಬ್ರಾಹ್ಮಣರ ಪ್ರಾಣ ಮತ್ತು ಆಸ್ತಿಹರಣಕ್ಕೆ ಸಂಬಂಧಿಸಿದ್ದೇ ಆಗಿವೆ.

ಮನುಸ್ಮೃತಿ,Manusmriti

ಪ್ರಾಚೀನ ಕನ್ನಡ ಕಾವ್ಯಗಳು ಕೂಡ ವರ್ಣಾಶ್ರಮ ಧರ್ಮವನ್ನು ಪಾಲಿಸಬೇಕಾದ ಹೊಣೆ ಅರಸರದ್ದು ಎಂದು ಸಾರುತ್ತಲೇ ಬಂದಿವೆ. ಸುಮ್ಮನೆ ಒಂದು ಉದಾಹರಣೆಗೆ, ವಸಾಹತುಪೂರ್ವಕಾಲದ ಕೆಳದಿ ನೃಪ ವಿಜಯ ಕಾವ್ಯದಲ್ಲಿ ಬರುವ ಈ ಸಾಲನ್ನೇ ಗಮನಿಸಿ – ’ವಿವಿಧ ಜಾತಿಗಳವರಿಗೆ ನಿವೇಶನಂಗಳಂ ಕಲ್ಪಿಸಿ, ಅವರ್ಗಳಂ ಸ್ಥಾಯಿಯಾಗಿ ನಿಲಿಸಿದ. ಬ್ರಹ್ಮ ಕ್ಷತ್ರಿಯಾದಿ ವರ್ಣಾಶ್ರಮ ಧರ್ಮಕರ್ಮಂಗಳಂ ಶ್ರುತಿ ಸ್ಮೃತ್ಯುಕ್ತ ಮಾರ್ಗೋಲ್ಲಂಘನಂ ಆಗದಂತು ನಡೆಯಿಸಿ..’ (ಕೃಪೆ: ಜಾತಿ ಬಂತು ಹೇಗೆ – ಜಿ ಎನ್ ನಾಗರಾಜ್). ಇನ್ನು, ಬ್ರಾಹ್ಮಣ ತ್ರಿಮತ ಸ್ಥಾಪಕರಲ್ಲಿ ಮೊದಲಿನವರಾದ ಆದಿ ಶಂಕರಾಚಾರ್ಯರು ತಮ್ಮ ’ವೇದಾಂತಸೂತ್ರ ಭಾಷ್ಯ’ದಲ್ಲಿ ಹಲವೆಡೆ ತಮ್ಮ ವಿಚಾರಗಳನ್ನು ಸಮರ್ಥಿಸಲು ಮನುಸ್ಮೃತಿಯ ಉಕ್ತಿಗಳನ್ನು ಬಳಸಿದ್ದಾರೆ. ಮನುಸ್ಮೃತಿಗೆ ಮಾನ್ಯತೆ ಎಷ್ಟಿತ್ತು ಎನ್ನುವುದು ಇದರಿಂದ ತಿಳಿಯುತ್ತದೆ. ಹೀಗೆ, ಕಾಲಕಾಲಕ್ಕೂ ಶಾಸನಗಳು, ಶಾಸ್ತ್ರಗಳು ಹಾಗೂ ಕಾವ್ಯಗಳಲ್ಲಿ ಉಲ್ಲೇಖಗೊಳ್ಳುತ್ತಲೇ ಬಂದಿರುವ ಮನುಸ್ಮೃತಿ ಮತ್ತು ಅದು ಪ್ರತಿಪಾದಿಸುವ ವರ್ಣಾಶ್ರಮಧರ್ಮವು (ಮನುವಿನ ಪ್ರಸ್ತಾಪವೂ ವರ್ಣಾಶ್ರಮದ ಪ್ರಸ್ತಾಪವೂ ಜೊತೆಜೊತೆಯಾಗೇ ಬರುವ ಹಲವು ಶಾಸನಗಳಿವೆ) ಕೇವಲ ಗ್ರಂಥಗಳಲ್ಲಷ್ಟೇ ಜೀವಿಸುತ್ತಿತ್ತು ಎನಲು ಸಾಧ್ಯವೇ ಇಲ್ಲ. ಸಂಘಪರಿವಾರದ ’ಆರ್ಗನೈಸರ್’ ಪತ್ರಿಕೆಯ ನವೆಂಬರ್ 30, 1949ರ ಸಂಚಿಕೆಯಲ್ಲಿ ಮನುಸ್ಮೃತಿಯ ಪ್ರಸ್ತಾಪ ಮಾಡಿದ್ದೇಕೆ? ಬೇರೆ ಕೆಲಸವಿಲ್ಲದೆ ಆಗಿದ್ದು ಎಂದು ತಿಳಿಯಬೇಕೆ?

ಇನ್ನು ವೇದವನ್ನು ಕೇಳಿದ ಶೂದ್ರನ ಕಿವಿಗೆ ಕಾದ ಸೀಸೆ ಹೊಯ್ಯಬೇಕೆಂಬ ನಿಯಮ ನಿಜಕ್ಕೂ ಜಾರಿಯಲ್ಲಿತ್ತೇ? ಇದ್ದರೆ, ಅದಕ್ಕೆ ಆಧಾರ ಸಿಗುತ್ತಿಲ್ಲವಲ್ಲಾ? ಎಂದೂ ಕೇಳುವವರಿದ್ದಾರೆ.

ಮೊದಲನೆಯದಾಗಿ ಸ್ಮೃತಿಗಳ ಪ್ರತಿಯೊಂದು ವಾಕ್ಯವನ್ನೂ ಚಾಚೂತಪ್ಪದೆ ಪಾಲಿಸಲಾಗುತ್ತಿತ್ತು ಎನ್ನುವುದಕ್ಕೆ ಆಧಾರಗಳು ಇಲ್ಲ, ನಿಜ. ಒಂದುವೇಳೆ ಹಾಗೆ ಚಾಚೂತಪ್ಪದೆ ಪಾಲಿಸಿದ್ದೇ ಆದಲ್ಲಿ ಭರತಖಂಡದಲ್ಲಿ ಎಂದೋ ಕ್ರಾಂತಿಯಾಗಿಬಿಡುತ್ತಿತ್ತು! ಆದರೆ, ಸ್ಮೃತಿಗಳ ದೃಷ್ಟಿಕೋನವೇನು ಹಾಗೂ ಅದನ್ನು ಪ್ರಭುತ್ವದ ಮೂಲಕ ಸಮಾಜವು ಹೇಗೆ ತನ್ನದಾಗಿಸಿಕೊಂಡಿತ್ತು ಎಂಬುದಿಲ್ಲಿ ಮುಖ್ಯ. ಸಮಾಜದಲ್ಲಿ ಅದರ ಅನುಷ್ಠಾನ ಮತ್ತು ಉಲ್ಲಂಘನೆಯು ಇಲ್ಲದೇ ಹೋಗಿದ್ದರೆ, ವರ್ಣಾಶ್ರಮ ಧರ್ಮದ ರಕ್ಷಣೆಯೇ ರಾಜನ ಬಹಳ ದೊಡ್ಡ ಹೊಣೆಯೆಂದು ಮತ್ತೆ ಮತ್ತೆ ಸಾರಿದ್ದಾದರೂ ಏಕೆ? ಇಲ್ಲೊಂದು ಸ್ವಾರಸ್ಯಕರ ಸಂಗತಿಯಿದೆ. ತಪ್ಪಿದರೆ ದಂಡಿಸುತ್ತೇವೆ ಎನ್ನುವ ಶಾಸನಗಳು ನಮ್ಮಲ್ಲಿವೆಯೇ ಹೊರತು, ತಪ್ಪಿದ್ದಕ್ಕಾಗಿ ನೀಡಿದ ದಂಡನೆಯನ್ನು ಸಾರುವ ಶಾಸನಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿವೆ. ಜಾತಿ ಕಟ್ಟುಪಾಡು ಮೀರಿದರೆ ನೀಡಲಾಗುವ ಶಿಕ್ಷೆಯ ಪ್ರಸ್ತಾಪವನ್ನು ಕನ್ನಡದ ಕೆಲವು ಶಾಸನಗಳೂ ಮಾಡಿವೆ (ಉದಾ – ಕರಡಿಕಲ್ಲು ಶಾಸನ).

PC : New Indian Express

ಆ) ವರ್ಣವ್ಯವಸ್ಥೆಯನ್ನು ಮೇಲ್ಮಟ್ಟದಲ್ಲಿ ಅಧ್ಯಯನ ಮಾಡಿದವರಿಗೂ ಕಂಡುಬರುವ ಸತ್ಯಸಂಗತಿ ಎಂದರೆ, ಯಾವುದೇ ವರ್ಣದವರನ್ನು ಕ್ಷತ್ರಿಯರನ್ನಾಗಿಸುವ ಅಧಿಕಾರ ಇದ್ದದ್ದು ಬ್ರಾಹ್ಮಣರ ಕೈಯಲ್ಲೇ ಎಂಬುದು. ಹಿರಣ್ಯಗರ್ಭ ಮುಂತಾದ ಯಜ್ಞಗಳನ್ನು ಮಾಡಿ ಕ್ಷತ್ರಿಯರಲ್ಲದವರೂ ಕ್ಷತ್ರಿಯರಾಗಬಹುದಿತ್ತು. ಅಂಥಾ ಯಜ್ಞಗಳನ್ನು ನಡೆಸಿಕೊಡುತ್ತಿದ್ದವರೇ ಬ್ರಾಹ್ಮಣರು. ಹಾಗಾಗಿ, ಶೂದ್ರರು ರಾಜಮನೆತನಗಳನ್ನು ಸ್ಥಾಪಿಸಿದ್ದರೂ ಶಾಸ್ತ್ರೋಕ್ತವಾಗಿ ಅವರು ಕ್ಷತ್ರಿಯರಾಗುತ್ತಾರೆ. ಮನುಸ್ಮೃತಿಯನ್ನು ಸ್ಮರಿಸಿ, ವರ್ಣಾಶ್ರಮ ಧರ್ಮವನ್ನು ಜಾರಿಗೆ ತರಲು ಆಗ ಅಡ್ಡಿ ಇರುವುದಿಲ್ಲ, ಅಲ್ಲವೇ?

ಇ) ಭರತಖಂಡದ ಚರಿತ್ರೆಯಲ್ಲಿ ವರ್ಣಾಶ್ರಮ ಸಂಸ್ಥೆಯನ್ನು ಧಿಕ್ಕರಿಸಿ ನಡೆದ ಬ್ರಾಹ್ಮಣರೂ ಇದ್ದರು ಎಂದು ಓದಿ ತಿಳಿದುಕೊಂಡಿರುವವರು, ಬ್ರಾಹ್ಮಣರು ಒಂದು ಜಾತಿಯಾಗಿ ಇಂದಿಗೂ ಸಾಕಷ್ಟು ಸಾಮಾಜಿಕ ಬಂಡವಾಳ (ಸೋಷಿಯಲ್ ಕ್ಯಾಪಿಟಲ್) ಹೊಂದಿದ್ದಾರೆ ಎಂಬ ಸತ್ಯವನ್ನೂ ಅರಿತರೆ, ’ಬ್ರಾಹ್ಮಣ್ಯ’ ಪದ ಬಳಕೆಯ ಬಗ್ಗೆ ತಕರಾರು ಮೂಡದು. ಬ್ರಾಹ್ಮಣರಾಗಿಯೇ ಹುಟ್ಟಿ ಬ್ರಾಹ್ಮಣ್ಯದ ವಿರುದ್ಧ ಕನಿಷ್ಠಪಕ್ಷ ತಮ್ಮ ಬರಹಗಳಲ್ಲಾದರೂ ಧ್ವನಿಯೆತ್ತಿದ ಧೀಮಂತ ಚಿಂತಕರು ನಮ್ಮ ನಡುವೆಯೇ ಇದ್ದರು, ಈಗಲೂ ಇದ್ದಾರೆ. ಬ್ರಾಹ್ಮಣನೊಬ್ಬ ತಾನು ಜಾತಿ ಬಿಟ್ಟೆ ಎಂದು ಹೇಳಿದ ಮಾತ್ರಕ್ಕೆ, ಬ್ರಾಹ್ಮಣ್ಯವು ಬಿಟ್ಟುಹೋಗುವುದಿಲ್ಲ. ನಮ್ಮ ಚಿಂತನೆ ಮತ್ತು ಕ್ರಿಯೆಯನ್ನು ನಿರಂತರವಾಗಿ ಪರಾಮರ್ಶಿಸುತ್ತ, ಹಂತಹಂತವಾಗಿ ತೊರೆಯಬೇಕಾದ ಜಾಡ್ಯವೇ ಬ್ರಾಹ್ಮಣ್ಯ. ಅದು ಯಾವತ್ತು ಸಾಧ್ಯವೋ ಆವತ್ತೇ ’ಬ್ರಾಹ್ಮಣ್ಯ’ ಪದಕ್ಕೆ ಮುಕ್ತಿ.

ಈ ಲೇಖನದ ಮೂಲಕ, ಬ್ರಾಹ್ಮಣ್ಯದ ಪ್ರಸ್ತಾಪವು ಹೊಸತೇನಲ್ಲವೆಂದೂ, ಕಳೆದು ಎರಡು ಶತಮಾನಗಳಲ್ಲಿ ಧೀಮಂತ ಚಿಂತಕರು ಆ ಪದ-ಪರಿಭಾಷೆಯನ್ನು ಬಳಸುತ್ತಲೇ ಬಂದಿದ್ದಾರೆ ಎಂದೂ ತೋರಿಸಲಾಗಿದೆ. ನಂತರ ಬ್ರಾಹ್ಮಣ್ಯದ ವ್ಯಾಖ್ಯಾನ ನೀಡಿ, ಆ ವ್ಯಾಖ್ಯಾನಕ್ಕೆ ಸಾಮಾನ್ಯವಾಗಿ ಎದುರಾಗುವ ಟೀಕೆಗಳನ್ನು ಪ್ರಸ್ತಾಪಿಸಲಾಗಿದೆ. ಕೊನೆಯಲ್ಲಿ, ಆ ಎಲ್ಲಾ ಟೀಕೆಗಳಿಗೆ ಆದಷ್ಟು ಸಂಕ್ಷಿಪ್ತವಾಗಿ ಪ್ರತ್ಯುತ್ತರಗಳನ್ನು ನೀಡಲಾಗಿದೆ. ಈ ಮೂಲಕ, ಬ್ರಾಹ್ಮಣ್ಯದ ಪ್ರಸ್ತಾಪವೂ, ಅದರಿಂದ ಮುಕ್ತಿ ಪಡೆಯುವ ದಾರಿಗಳ ಅನ್ವೇಷಣೆಯೂ ಅತ್ಯಗತ್ಯ ಎಂಬ ನಿಲುವಿನೊಂದಿಗೆ ಈ ಲೇಖನ, ಇದೀಗ ಕೊನೆಗೊಂಡಿದೆ.

ಅಮರ್ ಹೊಳೆಗದ್ದೆ

ಅಮರ್ ಹೊಳೆಗದ್ದೆ
ಎಂಜಿನಿಯರಿಂಗ್ ಪದವೀಧರರಾದ ಅಮರ್, ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಹೇಳಿಕೊಡುವುದರ ಜೊತೆಗೆ ಕರ್ನಾಟಕ-ಕನ್ನಡ ಕೇಂದ್ರಿತ ಹೋರಾಟಗಳಲ್ಲಿ ಆಸಕ್ತಿ ವಹಿಸಿದ್ದವರು. ಈಗ ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ


ಇದನ್ನೂ ಓದಿ: ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ; ಬ್ರಾಹ್ಮಣ್ಯ ಎಂದರೆ ಜಾತಿ ಆಧಾರಿತ ತಾರತಮ್ಯಗಳನ್ನು ಜೀವಂತವಾಗಿಡುವುದು..

ಇದನ್ನೂ ಓದಿ: ಸಂಪಾದಕೀಯ; ಮೈಮನಸ್ಸುಗಳಲ್ಲಿ ನಾಟಿರುವ ಜಾತಿಯೆಂಬ ಅಪಾಯಕಾರಿ ಸುಳಿಯಲ್ಲಿ ಬ್ರಾಹ್ಮಣ್ಯದ ಪಾಳೆಗಾರಿಕೆ

ಅಮರ್ ಹೊಳೆಗದ್ದೆ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್‌ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

0
ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಇನ್ನು ಮುಂದೆ ಸೆನ್ಸಾರ್ ಮಾಡಬೇಕು ಎಂದು ಒತ್ತಾಯಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಬಾರ್ ಅಂಡ್‌‌ ಬೆಂಚ್ ವರದಿ...
Wordpress Social Share Plugin powered by Ultimatelysocial
Shares