‘ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ’ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಆರೋಪಿಸಿದ್ದಾರೆ.
ಅಮೇಥಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅವರನ್ನು ಬೆಂಬಲಿಸಿ ‘ನುಕ್ಕಡ್ ಸಭೆ’ಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, “ಕಳೆದ 70 ವರ್ಷಗಳಲ್ಲಿ ಮಾಡದ ಕೆಲಸವನ್ನು ತಮ್ಮ ಸರ್ಕಾರ 10 ವರ್ಷಗಳಲ್ಲಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟಿವಿಯಲ್ಲಿ ಹೇಳಿಕೊಳ್ಳುತ್ತಾರೆ. ನೆಲದ ಮಟ್ಟದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ” ಎಂದು ತಿರುಗೇಟು ಕೊಟ್ಟಿದ್ದಾರೆ.
ಅಮೇಥಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್ ಶರ್ಮಾ ಕಣಕ್ಕಿಳಿದಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯಿಂದ ಗಾಂಧಿ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿದ್ದ ಸ್ಥಾನವನ್ನು ಬಿಜೆಪಿ ನಾಯಕಿ ಕಸಿದುಕೊಂಡಿದ್ದರು.
ಇರಾನಿ ಅವರನ್ನು ಗುರಿಯಾಗಿಸಿ ಮಾತನಾಡಿದ ಪ್ರಿಯಾಂಕಾ, ರಾಹುಲ್ ಗಾಂಧಿಯನ್ನು ಸೋಲಿಸುವುದು ಅವರ ಏಕೈಕ ಉದ್ದೇಶವಾಗಿತ್ತು ಎಂದರು.
ನಿಮ್ಮ ಸಂಸದರು ಮತ್ತು ಬಿಜೆಪಿಯವರು ಚುನಾವಣಾ ಸಮಯದಲ್ಲಿ ಬರುತ್ತಾರೆ. ಆದರೆ, ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತಾರೆ.. ಕೃಷಿಯನ್ನು ಸುಧಾರಿಸುತ್ತಾರೆ ಅಥವಾ ನಿಮ್ಮ ಮಕ್ಕಳಿಗೆ ಉದ್ಯೋಗ ಕೊಡುತ್ತಾರೆ ಎಂದು ಮಾತನಾಡುವುದಿಲ್ಲ. ಅವರು ನಿಮ್ಮ ಮನೆಗೆ ಬಂದು ದೇವರ ಹೆಸರಿನಲ್ಲಿ ನಮಗೆ ಮತ ಚಲಾಯಿಸಿ ಎಂದು ಹೇಳುತ್ತಾರೆ. ಅವರು 10 ವರ್ಷಗಳಲ್ಲಿ ಮಾಡಿದ ಕೆಲಸದ ಹೆಸರಿನಲ್ಲಿ ಏಕೆ ಮತ ಕೇಳಲಿಲ್ಲ? ನಾವೂ ಸಹ ಧಾರ್ಮಿಕ ವ್ಯಕ್ತಿಗಳು, ನಮಗೆಲ್ಲರಿಗೂ ದೇವರು ಮತ್ತು ಧರ್ಮ ಬಹಳ ಪ್ರಿಯ. ಆದರೆ, ಧರ್ಮವನ್ನು ರಾಜಕೀಯಕ್ಕೆ ಬಳಸುವುದು ತಪ್ಪು” ಎಂದು ಅವರು ಹೇಳಿದರು.
ಅಮೇಥಿಯೊಂದಿಗೆ ತಮ್ಮ ಕುಟುಂಬದ ಒಡನಾಟವನ್ನು ಸ್ಮರಿಸಿದ ಅವರು, “ಇಲ್ಲಿನ ರಾಜಕೀಯದ ಸಂಪ್ರದಾಯವು ಜನರಿಗೆ ಸೇವೆ ಸಲ್ಲಿಸುವುದು ನಾಯಕನ ಧರ್ಮವಾಗಿದೆ ಮತ್ತು ಅದನ್ನು ಅವರ ಕುಟುಂಬದ ಎಲ್ಲಾ ಸದಸ್ಯರು ಅನುಸರಿಸುತ್ತಾರೆ” ಎಂದು ಹೇಳಿದರು.


