Homeಕರ್ನಾಟಕಒಳಮೀಸಲಾತಿ ಜಾರಿಯಾಗಲೇಬೇಕು, ಸಂವಿಧಾನ ವಿರೋಧಿಗಳ ಬಗ್ಗೆ ಮಾದಿಗರಿಗೆ ಎಚ್ಚರವಿದೆ: ಹೋರಾಟಗಾರರ ಮನದ ಮಾತು

ಒಳಮೀಸಲಾತಿ ಜಾರಿಯಾಗಲೇಬೇಕು, ಸಂವಿಧಾನ ವಿರೋಧಿಗಳ ಬಗ್ಗೆ ಮಾದಿಗರಿಗೆ ಎಚ್ಚರವಿದೆ: ಹೋರಾಟಗಾರರ ಮನದ ಮಾತು

ಮಾದಿಗ ಸಮುದಾಯ ಬಿಜೆಪಿ ಪರವಿದೆ ಎಂಬುದು ಶುದ್ಧ ಸುಳ್ಳು: ಅಂಬಣ್ಣ ಅರೋಲಿಕರ್‌

- Advertisement -
- Advertisement -

ಪರಿಶಿಷ್ಟ ಜಾತಿಗಳೊಳಗೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಒಳಮೀಸಲಾತಿ ಜಾರಿಗೊಳಿಸುವುದಾಗಿ ಹೇಳಿದ್ದ ಬಿಜೆಪಿ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಮಾದಿಗ ಸಮುದಾಯದ 30 ವರ್ಷಗಳ ಈ ಹೋರಾಟದಲ್ಲಿ ಎಲ್ಲ ಪಕ್ಷಗಳೂ ಒಂದೇ ತೆರನಾದ ಅನ್ಯಾಯ ಮಾಡಿವೆ. ಚುನಾವಣಾ ಹೊಸ್ತಿಲಲ್ಲಿ ನೀಡುವ ಭರವಸೆಗಳು ಮತ ವಿಭಜನೆಯ ಭಾಗವಾಗಿರುತ್ತವೆ ಎಂಬ ಎಚ್ಚರಿಕೆಯನ್ನು ಮಾದಿಗ ಸಮುದಾಯ ಹೊಂದಿರುವುದಾಗಿ ಹೋರಾಟಗಾರರು ಸ್ಪಷ್ಟಪಡಿಸುತ್ತಿದ್ದಾರೆ.

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ, ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪರಿನಿಬ್ಬಾಣದಂದು ನಡೆದ ‘ದಲಿತ ಸಾಂಸ್ಕೃತಿಕ ಪ್ರತಿರೋಧ, ದಸಂಸ ಸಂಘಟನೆಗಳ ಐಕ್ಯತಾ ಸಮಾವೇಶ’ವು ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸುವ ಮೂಲಕ ದಲಿತರಲ್ಲಿನ ಎಡ (ಮಾದಿಗ), ಬಲ (ಹೊಲೆಯ) ಜಾತಿಗಳ ನಡುವಿನಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿದೆ.

ಸಾರ್ವಜನಿಕವಾಗಿ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ- ಜಸ್ಟೀಸ್ ಎ.ಜೆ.ಸದಾಶಿವ ಆಯೋಗವು ಪರಿಶಿಷ್ಟ ಜಾತಿಯಲ್ಲಿನ 101 ಉಪಪಂಗಡಗಳನ್ನು 4 ಗುಂಪುಗಳಾಗಿ ವರ್ಗೀಕರಿಸಿ, ಶೇ.15ರ ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಿದೆ. ಅದರಂತೆ ಶೇ. 33.4ರಷ್ಟಿರುವ ಎಡಗೈ(ಮಾದಿಗ) ಸಮುದಾಯಕ್ಕೆ ಶೇ. 6ರಷ್ಟು, ಶೇ. 32ರಷ್ಟಿರುವ ಬಲಗೈ (ಹೊಲೆಯ) ಸಮುದಾಯಕ್ಕೆ ಶೇ. 5ರಷ್ಟು, ಶೇ. 23.64ರಷ್ಟಿರುವ ಸ್ಪೃಶ್ಯ ಪರಿಶಿಷ್ಟರಿಗೆ ಶೇ. 3ರಷ್ಟು ಹಾಗೂ ಇತರೆ ಪರಿಶಿಷ್ಟರಿಗೆ ಶೇ. 1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ ಎನ್ನಲಾಗುತ್ತಿದೆ. ಈ ವರದಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕೆಂಬ ಕೂಗು ಮತ್ತೆ ಶುರುವಾಗಿದೆ.

“ಹಿಂದುಳಿದ ವರ್ಗಗಳಲ್ಲಿ ಇರುವಂತೆ ಪರಿಶಿಷ್ಟ ಜಾತಿ/ವರ್ಗಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೆ ತರಬೇಕು. ನ್ಯಾ. ಸದಾಶಿವ ಆಯೋಗದ ವರದಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟು ಕಡ್ಡಾಯವಾಗಿ ಅನುಷ್ಟಾನಗೊಳಿಸಬೇಕು” ಎಂದು ದಲಿತ ಸಂಘಟನೆಗಳ ಐಕ್ಯತಾ ಸಮಾವೇಶವು ನಿರ್ಣಯ ಕೈಗೊಂಡಿದೆ. ಹೀಗಾಗಿ ಡಿ.11ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆಯುವ ಒಳಮೀಸಲಾತಿ ಜಾರಿಗಾಗಿನ ಹೋರಾಟದತ್ತ ಎಲ್ಲರ ದೃಷ್ಟಿನೆಟ್ಟಿದೆ.

ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಡಿ.11ರಂದು ಮಧ್ಯಾಹ್ನ 12ಕ್ಕೆ ಬೃಹತ್‌ ಸಮಾವೇಶ ಜರುಗಲಿದೆ. “ಈ ದುರಿತ ಕಾಲದಲ್ಲಿ ದಲಿತ ವಿರೋಧಿಗಳ ಕುರಿತು ನಮಗೆ ಎಚ್ಚರಿಕೆಗಳಿವೆ, ದಲಿತರನ್ನು ಒಡೆದು ಆಳಲು ಅವಕಾಶ ನೀಡದಂತೆ ಸಂವಿಧಾನದ ವಿರೋಧಿಗಳನ್ನು ಎದುರಿಸಲಿದ್ದೇವೆ” ಎನ್ನುತ್ತಿದ್ದಾರೆ ಒಳಮೀಸಲಾತಿ ಹೋರಾಟಗಾರರು.

ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಹೋರಾಟಗಾರರಾದ ಅಂಬಣ್ಣ ಅರೋಲಿಕರ್‌, ಕರಿಯಪ್ಪ ಗುಡಿಮನಿ ಇತರರು ಇದ್ದಾರೆ.

ಸಮಿತಿ ಸಂಚಾಲಕ ಸದಸ್ಯರಾದ ಅಂಬಣ್ಣ ಅರೋಲಿಕರ್‌ ಸೇರಿದಂತೆ ಹಲವಾರು ಮುಖಂಡರು ಒಳಮೀಸಲಾತಿ ಜಾರಿಗಾಗಿ ಈಗಾಗಲೇ ಪಾದಯಾತ್ರೆ ಆರಂಭಿಸಿದ್ದಾರೆ. ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪಕ, ಹೋರಾಟಗಾರ ಹರಿಹರದ ಪ್ರೊ.ಬಿ. ಕೃಷ್ಣಪ್ಪ ಸ್ಮಾರಕದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಯುತ್ತಿದೆ. ಡಿಸೆಂಬರ್‌ 11ರಂದು ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಂಬಣ್ಣ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

“ದಲಿತ ಸಂಘಟನೆಗಳನ್ನು ಒಮ್ಮತಕ್ಕೆ ತಂದು ಒಳಮೀಸಲಾತಿಗಾಗಿ ಬೃಹತ್ ಪಾದಯಾತ್ರೆ ನಡೆಸುತ್ತಿದ್ದೇವೆ. ರಾಜ್ಯ ಸರ್ಕಾರ ಜಸ್ಟೀಸ್‌ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಕೈ ತೊಳೆದುಕೊಳ್ಳಬಹುದು. ಆದರೆ ಒಳಮೀಸಲಾತಿ ಸಂಪೂರ್ಣವಾಗಿ ಜಾರಿಯಾಗುವವರೆಗೂ ಬಿಜೆಪಿಯನ್ನು ಯಾವುದೇ ಕಾರಣಕ್ಕೂ ನಾವು ನಂಬುವುದಿಲ್ಲ” ಎನ್ನುತ್ತಾರೆ ಅಂಬಣ್ಣ.

“ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿಯವರು ತಮ್ಮ ಭರವಸೆಗಳನ್ನು ಈಡೇರಿಸಲಿಲ್ಲ. ಮೂರು ರಾಜಕೀಯ ಪಕ್ಷಗಳೂ ತಾವು ನೀಡಿದ ಭರವಸೆಗಳನ್ನು ಹುಸಿಯಾಗಿಸಿವೆ. ಎ.ಜೆ.ಸದಾಶಿವ ಆಯೋಗದ ರಚನೆಯು ಏಳು ವರ್ಷಗಳ ನಿರಂತರ ಹೋರಾಟದ ಬಳಿಕ ಆಯಿತು. ತದನಂತರ ಈ ಆಯೋಗಕ್ಕೆ ಸಮರ್ಪಕ ಅನುದಾನ ನೀಡಬೇಕೆಂದು ಏಳು ವರ್ಷ ಹೋರಾಟ ನಡೆಯಿತು. ವರದಿ ಸಲ್ಲಿಕೆಯಾಗಿ ದಶಕ ಕಳೆದರೂ ಸರ್ಕಾರಗಳು ಅದನ್ನು ಹೊರಗೆ ತೆರೆಯಲಿಲ್ಲ, ಚರ್ಚೆ ನಡೆಸಲಿಲ್ಲ. ನಾವು ಸಾಂವಿಧಾನಿಕ ವ್ಯವಸ್ಥೆಯಲ್ಲಿ ಇದ್ದೇವೆಯೇ? ನಾವು ಪ್ರಜೆಗಳಲ್ಲವೆ?” ಎಂದು ಪ್ರಶ್ನಿಸಿದರು.

“ಎಡಗೈ, ಬಲಗೈ ಸಮುದಾಯಗಳು ಒಂದಾಗುವ ಸಂದರ್ಭ ನಿರ್ಮಾಣವಾಗಿದೆ. ದಲಿತ ಐಕ್ಯತಾ ಸಮಾವೇಶದಲ್ಲಿ ಒಳಮೀಸಲಾತಿಯ ಪರ ನಿರ್ಣಯ ಅಂಗೀಕಾರ ಮಾಡಲಾಗಿದೆ. ಈ ಒಗ್ಗಟ್ಟು ಇನ್ನಷ್ಟು ಹೆಚ್ಚಾಗಬೇಕು. ಸಹಸ್ರಾರು ಸಂಖ್ಯೆಯಲ್ಲಿ ಡಿಸೆಂಬರ್‌ 11ರ ಹೋರಾಟಕ್ಕೆ ಎಡಗೈ, ಬಲಗೈ ಸಮುದಾಯದ ಜನರು ಬರಬೇಕಾಗಿದೆ” ಎಂದು ಆಶಿಸಿದರು.

“ರಾಜ್ಯ ಸರ್ಕಾರ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಸುಮ್ಮನಾಗಿಬಿಡಬಹುದು. ಈ ಕುರಿತು ಎಚ್ಚರಿಕೆ ವಹಿಸಿದ್ದೇವೆ. ಎಲ್ಲಾ ಹಂತದಲ್ಲೂ ಫ್ಯಾಸಿಸಂ ನುಸುಳುತ್ತಿರುವ ಈ ಹೊತ್ತಿನಲ್ಲಿ ಮೀಸಲಾತಿ, ಒಳಮೀಸಲಾತಿ ಬಗ್ಗೆ ದೊಡ್ಡ ಭರವಸೆಗಳೇನೂ ಇಲ್ಲ. ಆದರೆ ವೆಂಟಿಲೇಟರ್‌ನಲ್ಲಿ ಇರುವ ಮಾದಿಗ ಸಮುದಾಯ ಕನಿಷ್ಠ ಜನರಲ್‌ ವಾರ್ಡಿಗಾದರೂ ಶಿಫ್ಟ್‌ ಆಗಬಹುದು. ಒಳಮೀಸಲಾತಿ ಸರ್ಕಾರ ನಿರ್ಲಕ್ಷ್ಯ ಮಾಡುವುದು ಬೇರೆ, ಆದರೆ ಸಾಮಾಜಿಕ ನ್ಯಾಯದ ಪರವಿರುವವರು ಒಳಮೀಸಲಾತಿಯನ್ನು ಅವೈಜ್ಞಾನಿಕ, ಅಸಂವಿಧಾನಿಕ ಎನ್ನಬಾರದು. ಈ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಎಡ ಹಾಗೂ ಬಲ ಸಮುದಾಯಗಳು ಹೆಜ್ಜೆ ಇಟ್ಟಿವೆ. ಜನಸಂಖ್ಯೆಯ ಅನುಗುಣವಾಗಿ ಸಂಪತ್ತು ಹಂಚಿಕೆಯಾಗಬೇಕು ಎಂಬುದು ಅಂಬೇಡ್ಕರ್ ಹಾಗೂ ಕಾನ್ಶೀರಾಮ್‌ ಅವರ ಆಶಯಗಳಾಗಿವೆ. ಇದನ್ನು ಅರ್ಥ ಮಾಡಿಕೊಳ್ಳಲು ಇಷ್ಟು ವರ್ಷ ದಲಿತ ಚಳವಳಿಗೆ ಬೇಕಾಯಿತಲ್ಲ ಎಂಬ ವಿಷಾದವೂ ಇದೆ. ಆದರೆ ನಮ್ಮ ಹೋರಾಟಕ್ಕೆ ಬೆಂಬಲವನ್ನು ಬಲಗೈ ಸಮುದಾಯವೂ ಈಗ ನೀಡಿದೆ. ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿರುವವರ ವಿರುದ್ಧ ಎರಡು ಸಮುದಾಯಗಳು ಒಟ್ಟಿಗೆ ಹೋರಾಡಬೇಕಾಗಿದೆ” ಎಂದು ಮನವಿ ಮಾಡಿದರು.

“ದಲಿತ ಚಳವಳಿ ವಿಘಟನೆಯಾಗಿದ್ದಕ್ಕೆ ಐತಿಹಾಸಿಕ ಕಾರಣಗಳಿವೆ. ಒಳಮೀಸಲಾತಿಯಷ್ಟೇ ಅದಕ್ಕೆ ಕಾರಣವಲ್ಲ. ಪ್ರೊ.ಬಿ.ಕೃಷ್ಣಪ್ಪ ಅವರ ನಿಧನದ ನಂತರದಲ್ಲಿ ಮಾದಿಗ ಸಮುದಾಯ ದಲಿತ ಚಳವಳಿಯನ್ನು ಜೀವಂತವಾಗಿ ಇಟ್ಟಿದೆ. ನಿರಂತರ ಹೋರಾಟ ಮಾಡುತ್ತಲೇ ಇದೆ. ಯಾವುದೇ ಸರ್ಕಾರ ಇದ್ದಾಗಲೂ ನಾವು ಹೋರಾಟ ನಡೆಸಿದ್ದೇವೆ. ಸದಾಶಿವ ಆಯೋಗದ ಆಶಯಗಳು ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಪ್ರೊ.ಬಿ.ಕೆ.ಯವರ ಚಿಂತನೆಯ ಮುಂದುವರಿದ ಭಾಗಗಳಾಗಿವೆ. ಸದಾಶಿವ ಆಯೋಗವು ನೂರೊಂದು ಜಾತಿಗಳನ್ನು ಒಗ್ಗೂಡಿಸುತ್ತಿದೆ. ಈ ವಿಚಾರದಲ್ಲಿ ನಮಗೆ ಸ್ಪಷ್ಟತೆ ಇದೆ” ಎಂದು ತಿಳಿಸಿದರು.

“ಸಂವಿಧಾನಕ್ಕೆ ಎದುರಾಗುವ ಅಪಾಯಗಳನ್ನು ಎದುರಿಸಲು ನಾವು ಹೆಚ್ಚಿನ ಪ್ರಜ್ಞೆಯನ್ನು ಇರಿಸಿಕೊಂಡಿದ್ದೇವೆ. ಒಳಮೀಸಲಾತಿಯ ಆಚೆಗಿನ ಸಮುದಾಯದ ಬಿಕ್ಕಟ್ಟುಗಳ ನಿವಾರಣೆಗೆ ಹೋರಾಡಲು ಸಿದ್ಧವಾಗಿದ್ದೇವೆ. ಒಳಮೀಸಲಾತಿಯನ್ನು ಮುಂದಿಟ್ಟುಕೊಂಡು ದಲಿತರನ್ನು ಒಡೆಯುವ ಪ್ರಯತ್ನಗಳನ್ನು ಸರ್ಕಾರ ಮಾಡಬಹುದು. ಒಳಮೀಸಲಾತಿಯನ್ನು ಜಾರಿಗೊಳಿಸಲಿ ಅಥವಾ ಬಿಡಲಿ, ಆದರೆ ಮುಂಬರುವ ಚುನಾವಣೆಗಳಲ್ಲಿ ಸಂವಿಧಾನ ವಿರೋಧಿಗಳ ವಿರುದ್ಧ ನಾವು ನಿಲ್ಲಲಿದ್ದೇವೆ. ಸಂವಿಧಾನವನ್ನು ಸರ್ವನಾಶ ಮಾಡುವ ಯಾವುದೇ ಪಕ್ಷಗಳ ವಿರುದ್ಧ ಮತಚಲಾಯಿಸುವ ಪ್ರಜ್ಞೆಯನ್ನು ನಾವು ಇರಿಸಿಕೊಂಡಿದ್ದೇವೆ” ಎಂದು ಸ್ಪಷ್ಟಪಡಿಸಿದರು.

“ಮಾದಿಗರಿಗೆ ರಾಜಕೀಯ ಜಾಗೃತಿ ಇಲ್ಲ, ಅವರು ಬಿಜೆಪಿಗೆ ಮಾರಿಕೊಳ್ಳುತ್ತಾರೆ ಎಂಬ ವಾದಗಳಿಗೆ ಅರ್ಥವಿಲ್ಲ. ಇವುಗಳು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದ ವಿಚಾರಗಳಾಗಿವೆ. ಒಳಮೀಸಲಾತಿ ವಿರೋಧ ಮಾಡಿದ ಬಹುತೇಕರನ್ನು 2019ರ ಚುನಾವಣೆಯಲ್ಲಿ ಸೋಲಿಸಿದ್ದೇವೆ. ರಾಜಕೀಯ ಪ್ರಜ್ಞೆ ಮಾದಿಗರಲ್ಲಿ ಬಂದಿದೆ. ಒಳಮೀಸಲಾತಿ ಹೋರಾಟದ ಆಚೆಗೂ ನಾವು ಸಂವಿಧಾನವನ್ನು ಉಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದೇವೆ” ಎಂದು ಹೇಳಿದರು.

“ಒಳಮೀಸಲಾತಿ ವಿಚಾರವನ್ನು ಕೇಂದ್ರಕ್ಕೆ ಕಳುಹಿಸುವುದಷ್ಟೇ ಅಲ್ಲ, ಸಂಸತ್ತಿನಲ್ಲಿ ಚರ್ಚೆಯಾಗಿ ಜಾರಿಯಾಗಬೇಕು. ಅದನ್ನು ಪೆಂಡಿಂಗ್ ಇಡಬಾರದು. ಈಗಾಗಲೇ ಆಂಧ್ರಪ್ರದೇಶ, ಪಂಜಾಬ್‌ ಸೇರಿದಂತೆ ಹಲವಾರು ರಾಜ್ಯಗಳ ವರದಿಗಳು ಪೆಂಡಿಂಗ್ ಇವೆ. ಸುಪ್ರೀಂಕೋರ್ಟ್ ಕೂಡ ಒಳಮೀಸಲಾತಿ ವಿಚಾರದಲ್ಲಿ ತಕರಾರು ತೆಗೆಯುವುದಿಲ್ಲ. ಹೀಗಾಗಿ ನಮ್ಮ ವರದಿಯನ್ನು ಕೇಂದ್ರಕ್ಕೆ ತಳ್ಳಿ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಸದಾಶಿವ ಆಯೋಗವನ್ನು ಕೇಂದ್ರಕ್ಕೆ ಶಿಪಾರಸ್ಸು ಮಾಡಿಬಿಟ್ಟು ನಮ್ಮನ್ನು ವಂಚಿಸಲು ಸಾಧ್ಯವಿಲ್ಲ. ವರದಿ ಜಾರಿಯಾಗುವವರೆಗೂ ಬಿಜೆಪಿಯನ್ನು ಮಾದಿಗರು ನಂಬುವುದಿಲ್ಲ” ಎಂದರು.

ವರದಿ ಜಾರಿಯವರೆಗೆ ಹಿಂದೆ ಸರಿಯುವುದಿಲ್ಲ: ಕರಿಯಪ್ಪ ಗುಡಿಮನಿ

ಮಾದಿಗ ಸಮುದಾಯದ ನಾಯಕರಾದ ಕರಿಯಪ್ಪ ಗುಡಿಮುನಿಯವರು ಪ್ರತಿಕ್ರಿಯಿಸಿ, “ಬಿ.ಕೃಷ್ಣಪ್ಪ ಅವರ ಹುಟ್ಟೂರಿನಿಂದ ಹೊರಟ ಪಾದಯಾತ್ರೆ ಡಿ.11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಸೇರುತ್ತದೆ. ದಾರಿಯುದ್ಧಕ್ಕೂ ಸಮುದಾಯದ ಜನರು ಅನ್ನ ನೀರು ನೀಡಿದ್ದಾರೆ. ಈಗಾಗಲೇ 230 ಕಿಮೀ ಪಾದಯಾತ್ರೆ ಕ್ರಮಿಸಿದ್ದೇವೆ. ಸದಾಶಿವ ಆಯೋಗದ ವರದಿ ಜಾರಿಯಾಗುವವರೆಗೂ ಬೆಂಗಳೂರು ಬಿಟ್ಟು ಕದಲುವುದಿಲ್ಲ ಎಂಬ ನಿರ್ಧಾರ ಮಾಡಿದ್ದೇವೆ. ಮುಖ್ಯಮಂತ್ರಿಯವರು ಆದೇಶ ಪತ್ರವನ್ನು ಕೊಡುವವರೆಗೂ ನಾವು ಹಿಂದೆ ಸರಿಯುವುದಿಲ್ಲ. ನಮಗಾಗಿಯೇ ಒಂದು ಜೈಲು ನಿರ್ಮಾಣ ಮಾಡಿದರೂ ಚಿಂತೆಯಿಲ್ಲ” ಎಂದು ಗುಡುಗಿದರು.

“101 ಜಾತಿಗಳಿರುವ ಪರಿಶಿಷ್ಟರನ್ನು ಒಡೆದು ಆಳುವ ತಂತ್ರವನ್ನು ಬಿಜೆಪಿಯವರು ಮಾಡುತ್ತಾರೆ. ಗೊಂದಲವನ್ನು ಉಂಟು ಮಾಡಬಹುದು. ಸದಾಶಿವ ಆಯೋಗದ ವರದಿ ಇನ್ನೂ ಬಹಿರಂಗಪಡಿಸಿಲ್ಲ. ಹೀಗಿರುವ ಸರ್ಕಾರವಾಗಲೀ, ವಿರೋಧ ಪಕ್ಷಗಳಾಗಲೀ ಹಾರಿಕೆಯ ಉತ್ತರವನ್ನು ಕೊಡುವುದು ಸರಿಯಲ್ಲ. ಆಯೋಗವನ್ನು ರಚನೆ ಮಾಡಿ, ವರದಿ ಬರೆಯಿಸಿ, ಅದನ್ನು ಜಾರಿಗೊಳಿಸದಿರುವ ನಿಮ್ಮನ್ನು ದ್ರೋಹಿಗಳು ಎನ್ನಬೇಕಲ್ಲವೇ? ನಮಗೆ ನ್ಯಾಯಬೇಕು. ದಲಿತ ಯುವ ಜನತೆಗೆ ಉದ್ಯೋಗವಿಲ್ಲ, ಶಿಕ್ಷಣವನ್ನು ವಂಚಿಸಲಾಗುತ್ತಿದೆ. ದಲಿತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ಕಡಿತ ಮಾಡಲಾಗಿದೆ. ನಮಗೆ ಕೂಳು, ನೀರು ಕೊಡದೆ ಸಾಯಿಸಬೇಕೆಂದು ಸರ್ಕಾರ ಭಾವಿಸಿದೆಯೇ? ವಿರೋಧ ಪಕ್ಷದ ನಾಯಕರು ಮಾತನಾಡಬೇಕಲ್ಲವೇ?” ಎಂದು ಆಕ್ರೋಶ ಹೊರಹಾಕಿದರು.

“ಉಳ್ಳವರಿಗೆ ಹತ್ತು ಪರ್ಸೆಂಟ್ ಮೀಸಲಾತಿಯನ್ನು ಕೊಡುತ್ತೀರಿ. ಈ ದೇಶದ ಬಹುಜನರ ಬಗ್ಗೆ ನಿಮಗೆ ಕಾಳಜಿ ಇಲ್ಲವಾ? ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿ ಎಂದು ಕೇಳುತ್ತಿದ್ದೇವೆ ಹೊರತು ಬೇರೆಯವರ ಪಾಲನ್ನಲ್ಲ. 224 ಶಾಸಕರಿಗೂ ನಮ್ಮ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಯಾವುದೇ ಧರ್ಮ, ಜಾತಿಯ ವಿರುದ್ಧ ನಮ್ಮ ಹೋರಾಟ ನಡೆಯುತ್ತಿಲ್ಲ” ಎಂದು ತಿಳಿಸಿದರು.

“ಗೋವಿಂದ ಕಾರಜೋಳ, ಎ.ನಾರಾಸ್ವಾಮಿಯಂಥವರನ್ನು ಸರ್ಕಾರ ಮುಂದೆ ಬಿಟ್ಟಿದೆ. 2012ರಲ್ಲಿ ಜಗದೀಶ್ ಶೆಟ್ಟರ್‌‌ ಮುಖ್ಯಮಂತ್ರಿಯಾಗಿದ್ದರು. ಇದೇ ಕಾರಜೋಳ ಹಾಗೂ ನಾರಾಯಣಸ್ವಾಮಿಯವರು ಅಧಿಕಾರದಲ್ಲಿ ಇದ್ದುಕೊಂಡು ನಮಗೆ ಲಾಠಿ ಏಟು ತಿನ್ನಿಸಿದ್ದರು. ನಂತರ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದರು. ಆಂಜನೇಯನವರನ್ನು ಮುಂದೆ ಬಿಟ್ಟರು. ಅವರು ಕೂಡ ಯಾವುದೇ ಗಟ್ಟಿಯಾದ ನಿಲುವು ತಾಳಲಿಲ್ಲ. ಹೀಗಾಗಿ ಈ ಹೋರಾಟದಲ್ಲಿ ಯಾವುದೇ ರಾಜಕಾರಣಿಯನ್ನು, ಸ್ವಾಮೀಜಿಯರನ್ನು ಒಳಗೊಳ್ಳದೆ ಹೋರಾಟಗಾರರಷ್ಟೇ ಮುನ್ನೆಡೆಸಿಕೊಂಡು ಹೋಗುತ್ತಿದ್ದೇವೆ” ಎಂದು ವಿವರಿಸಿದರು.

“ಯಾರ ವಿರುದ್ಧವೂ ನಾವು ಹೋರಾಟ ಮಾಡುತ್ತಿಲ್ಲ. ಸದಾಶಿವ ಆಯೋಗದ ವರದಿಯನ್ನು ಬಿಡುಗಡೆ ಮಾಡಬೇಕಾಗಿದೆ. ಹೊಲೆಯ- ಮಾದಿಗ ಸಮುದಾಯಗಳು ಈ ವಿಚಾರದಲ್ಲಿ ಒಮ್ಮತಕ್ಕೆ ಬಂದಿವೆ. ದಲಿತ ಐಕ್ಯತಾ ಸಮಾವೇಶದಲ್ಲಿಯೂ ಒಳಮೀಸಲಾತಿಯ ಪರ ನಿರ್ಣಯ ಕೈಗೊಳ್ಳಲಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಭುತ್ವಕ್ಕೆ ಅವ್ವನ ಗುಣ ಇರಬೇಕು: ಸಿ.ಕೆ.ಮಹೇಶ್‌

ದಲಿತ ಚಿಂತಕರಾದ ಪ್ರೊ.ಸಿ.ಕೆ.ಮಹೇಶ್‌ ಅವರು ಪ್ರತಿಕ್ರಿಯಿಸಿ, “30 ವರ್ಷಗಳ ಕಾಲ ಸುದೀರ್ಘವಾದ ಹೋರಾಟ ನಡೆದಿದೆ. ದುರ್ಬಲ ಜಾತಿಗಳನ್ನು ಸರ್ಕಾರಗಳು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತವೆ ಎಂಬುದರ ಸಂಕೇತಗಳಿವು. ನಮ್ಮ ಸಂವಿಧಾನ ದುರ್ಬಲರ ಪರವಾದ ತಾಯ್ತನವನ್ನು ಹೊಂದಿದೆ. ಅವ್ವನ ಮೌಲ್ಯವು ಪ್ರಭುತ್ವಕ್ಕೆ ಇರಬೇಕಾಗಿತ್ತು. ಆಗ ಎಲ್ಲ ದುರ್ಬಲ ಜಾತಿಗಳ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿತ್ತು. ಪ್ರಭುತ್ವದ ಒಳಗೆ ಪಿತೃಮನಸ್ಥಿತಿ ಇದೆ. ಹೀಗಾಗಿ ಬಲಾಢ್ಯ ಜಾತಿಗಳಿಗೆ 10 ಪರ್ಸೆಂಟ್ ಮೀಸಲಾತಿ ಕೊಟ್ಟು, ನಮ್ಮ ಹೋರಾಟವನ್ನು ಕಡೆಗಣಿಸಲಾಗಿದೆ. ಯಾರು ಒಳಮೀಸಲಾತಿಯನ್ನು ವಿರೋಧಿಸುತ್ತಾರೋ ಅವರು ಅಂಬೇಡ್ಕರ್‌ರವರ ವಿಚಾರಗಳಿಗೆ ವಿರೋಧವಿರುತ್ತಾರೆ” ಎಂದು ಟೀಕಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...