ಭಾರತದಂತಹ ಸಾವಿರಾರು ಜಾತಿ-ಉಪಜಾತಿಗಳ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯರೆಂಬ ಹಣೆಪಟ್ಟಿ ಹೊತ್ತು ಪಾತಾಳಕ್ಕೆ ತಳ್ಳಲ್ಪಟ್ಟವರು ಮೀಸಲಾತಿಯನ್ನು ಎಟುಕಿಸಿಕೊಳ್ಳುವುದಾಗಲಿ, ಈ ವ್ಯವಸ್ಥೆಯ ಆಳದಲ್ಲಿ ಉಳಿದುಹೋದವರನ್ನ ಮೀಸಲಾತಿಯು ತಲುಪುವುದಾಗಲಿ ಎಷ್ಟು ದುಸ್ತರ ಹಾಗೂ ದುರ್ಗಮ ಪ್ರಹಸನವಾಗಿರುತ್ತದೆಯೆಂಬುದು ಈ ದೇಶದ ನ್ಯಾಯಪ್ರಜ್ಞೆಯ ವಿವೇಕಕ್ಕೆ ಗೊತ್ತೇ ಇಲ್ಲವೆ!? ಆತ್ಮವಂಚನೆಯೇ ಮೈವೆತ್ತಂತ ಬಲಾಢ್ಯರ ಹಿತಕಾಯುವ ಸರ್ಕಾರಗಳಿಗೆ ಅಂತಃಕರಣ ಮೂಡುವುದು ಸಾಧ್ಯವೇ ಇಲ್ಲವೇ?! ಎಂಬ ಆತಂಕ, ದುಗುಡಗಳ ಕಾರ್ಗತ್ತಲು ದಶಕಗಳ ಕಾಲ ಕವಿದುಕೊಂಡಿದ್ದಾಗ, ಇದೇ 2024ರ ಆಗಸ್ಟ್ 1ರಂದು ಭಾರತದ ಸುಪ್ರೀಂಕೋರ್ಟ್ ತಳೆದ ನಿಲುವು ಕೋಟ್ಯಂತರ ಶೋಷಿತರ ಬಾಳು-ಭವಿಷ್ಯದಲ್ಲಿ ಅಪೂರ್ವ ಬೆಳಕನ್ನು ಹೊತ್ತಿಸಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೂಡಿದ ಅನನ್ಯ ನ್ಯಾಯಿಕ ಬೆಳಕಿದು ಎಂದು ದೇಶದೊಳಗೂ ಆಚೆಗೂ ತಜ್ಞರು, ಪ್ರಾಜ್ಞರು, ಜನಸಾಮಾನ್ಯರು, ಹೋರಾಟಗಾರರಾದಿಯಾಗಿ ಎಲ್ಲರಿಂದ ಏಕಕಾಲಕ್ಕೆ ಪ್ರಶಂಸೆಗೊಳಗಾಗುತ್ತಿದೆ. ಹೀಗಾಗಿಯೇ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ರ ನೇತೃತ್ವದ ಏಳು ಜನ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನೀಡಿದ ಎಸ್‌ಸಿ-ಎಸ್‌ಟಿ ಉಪವರ್ಗೀಕರಣದ ತೀರ್ಪನ್ನು ’ಲ್ಯಾಂಡ್ ಮಾರ್ಕ್ ವರ್ಡಿಕ್ಟ್’ ಎಂದೇ ಬಣ್ಣಿಸಲಾಗುತ್ತಿದೆ.
ಪರಿಶಿಷ್ಟ ಜಾತಿಗಳ ಒಳಮೀಸಲು ಕೂಗು ಅಥವಾ ಉಪವರ್ಗೀಕರಣವೆಂದರೆ ಏನು? ಒಳಮೀಸಲಿನ ಸುದೀರ್ಘ ಚಾರಿತ್ರಿಕ ಹೋರಾಟಗಳು ಹೇಗಿದ್ದವು? ಸರ್ಕಾರಗಳ ನೀತಿ ನಿರೂಪಣೆಗಳು ಏನಾಗಿದ್ದವು ಎಂಬುದನ್ನ ಅವಲೋಕಿಸೋಣ ಬನ್ನಿ.
1200 ಪರಿಶಿಷ್ಟ ಜಾತಿ-ವರ್ಗಗಳಿರುವ ಈ ದೇಶದಲ್ಲಿ ಎಸ್‌ಸಿ-ಎಸ್‌ಟಿ ಮೀಸಲಾತಿಯೆನ್ನುವುದು ಪರಿಶಿಷ್ಟ ಜಾತಿ ವರ್ಗಗಳೊಳಗೆ ಮೀಸಲು ಭಕ್ಷಣೆಯ ಪಟ್ಟುಗಳನ್ನ ಕರಗತ ಮಾಡಿಕೊಂಡಿರುವವರ ಆಪೋಶನಕ್ಕೆ ಬಲಿಯಾಗಿ, ಸಂವಿಧಾನದತ್ತವಾದ ಮೀಸಲಾತಿಯ ನಿಜ ಅರ್ಥ-ಆಶಯಗಳೇ ಮಣ್ಣುಪಾಲಾಗಿ ಹೋಗಿ ಹಲವು ದಶಕಗಳಾದವು. ಈ ಕಾರಣಕ್ಕೆ ಮೀಸಲಾತಿಯೊಳಗೆ ಮೀಸಲನ್ನು ಅಸಲೀ ಶೋಷಿತರು ಪಡೆದುಕೊಳ್ಳಲು ಕಟ್ಟಿದ ಆಂತರಿಕ ದಂಗೆಯ ಸ್ವರೂಪವೇ ಒಳಮೀಸಲು ಹೋರಾಟದ ಸುದೀರ್ಘ ಚಳವಳಿಯಾಗಿ ಮಾರ್ಪಟ್ಟಿತು.
50 ವರ್ಷಗಳ ಹಿಂದೆ, 1975ರಲ್ಲಿ ಮೊಟ್ಟಮೊದಲಬಾರಿಗೆ ಪರಿಶಿಷ್ಟರಲ್ಲೇ ಅತ್ಯಂತ ಹಿಂದುಳಿದಿದ್ದ ಬಾಲ್ಮೀಕಿಗಳಿಗೆ ಹರಿಯಾಣ ಸರ್ಕಾರ ಒಳಮೀಸಲನ್ನು ಕೊಟ್ಟಿತು. ನಂತರ ಮಜಬಿ ಸಿಖ್ಖರಿಗೂ ಅದನ್ನು ವಿಸ್ತರಿಸಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿತು.
ಆ ಎರಡು ರಾಜ್ಯಗಳು ಒಟ್ಟು ಎಸ್‌ಸಿ ಮೀಸಲಿನಲ್ಲಿ ಬಾಲ್ಮೀಕಿ ಮತ್ತು ಮಜಬಿ ಸಿಖ್ಖರಿಗಾಗಿಯೇ ಅರ್ಧ ಪಾಲನ್ನ ಮೀಸಲಿರಿಸಿ ಇತಿಹಾಸ ಬರೆದವು. ಈ ರಾಜ್ಯಗಳ ಒಳಮೀಸಲು ಆ ನಂತರ 29 ವರ್ಷಗಳ ಕಾಲ ಅಬಾಧಿತವಾಗಿ ಜಾರಿಯಲ್ಲಿತ್ತು.
***
ಆಂಧ್ರಪ್ರದೇಶದ ’ಮಾದಿಗ-ಮಾಲ’ ಎಸ್‌ಸಿ ಉಪಜಾತಿಗಳ ನಡುವೆ ಹೊತ್ತಿಕೊಂಡ ಕಿಚ್ಚಿಗೆ ಬಲಿಯಾದ ಒಳಮೀಸಲು
1975ರಲ್ಲಿ ಆರಂಭವಾದ ಒಳಮೀಸಲೆಂಬ ಶೋಷಿತರ ಅನ್ನ-ಅವಕಾಶಗಳ ಅಬಾಧಿತ ದಾಸೋಹಕ್ಕೆ ವಿಷ ಬಿದ್ದದ್ದು 2004ರಲ್ಲಿ. ಉತ್ತರದ ಹರಿಯಾಣ-ಪಂಜಾಬ್ ಸರ್ಕಾರಗಳ ಒಳಮೀಸಲಾತಿ ನೀತಿಯ ಸ್ಫೂರ್ತಿ ಪಡೆದು ಅವಿಭಜಿತ ಆಂಧ್ರಪ್ರದೇಶದಲ್ಲಿ 1994ರಲ್ಲಿ ಮೊದಲ ಬಾರಿಗೆ ಮೀಸಲಾತಿ ವರ್ಗೀಕರಣಕ್ಕೆ ಒತ್ತಾಯಿಸಿ ಮಾದಿಗ ಸಮುದಾಯದಿಂದ ಜನಾಂದೋಲನ ಆರಂಭಗೊಂಡಿತು. ಅದು ಅಂತಿಮವಾಗಿ 1997ರಲ್ಲಿ ಮಾದಿಗ ’ಮೀಸಲಾತಿ ಪೋರಾಟಂ ಸಮಿತಿ’ಯ ನಾಯಕ ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹುಟ್ಟೂರಾದ ನಾರಾವರಿಪಲ್ಲಿಯಿಂದ ಹೈದಾರಾಬಾದ್ ತನಕ ಮ್ಯಾರಥಾನ್ ರ್‍ಯಾಲಿಯಾಗಿ ಪರಿವರ್ತನೆಗೊಂಡಿತು. ಆ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನರು ಆಂಧ್ರದ ಅಸೆಂಬ್ಲಿಗೆ ಮುತ್ತಿಗೆ ಹಾಕುವ ಮೂಲಕ ಹೋರಾಟವು ತೀವ್ರ ಸ್ವರೂಪ ಪಡೆದುಕೊಂಡು ನಾಯ್ಡು ಸರ್ಕಾರವನ್ನು ಕಂಗೆಡಿಸಿತು. ಇದರಿಂದಾಗಿ 90ರ ದಶಕದ ಕೊನೆಗೆ ಆಗಿನ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಪರಿಶಿಷ್ಟ ಜಾತಿಗಳಾದ ಮಾದಿಗ-ಮಾಲ ಮೊದಲಾದವರನ್ನು ಎ,ಬಿ,ಸಿ,ಡಿಯೆಂದು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಿ ಮೀಸಲಾತಿ ಕಲ್ಪಿಸಲು ಒಪ್ಪಿಕೊಂಡು ಸುಗ್ರೀವಾಜ್ಞೆ ಹೊರಡಿಸಿತು. ಸರ್ಕಾರ ಈ ಮೀಸಲು ಪರಿಕಲ್ಪನೆಗೆ ರಾಮಚಂದ್ರರಾವ್ ಆಯೋಗದ ಶಿಫಾರಸ್ಸುಗಳನ್ನ ಆಧಾರವಾಗಿಸಿಕೊಂಡಿತು.
***
ಒಳಮೀಸಲಾತಿ ಜಾರಿ ನಂತರ ಆಂಧ್ರದಲ್ಲಿ ಶುರುವಾದ ಮಾದಿಗ-ಮಾಲ ಕೋಲ್ಡ್ ವಾರ್
ಒಳಮೀಸಲಾತಿ ಜಾರಿಯಾದ ನಂತರ ಆರೇಳು ವರ್ಷಗಳ ಕಾಲ ಮಾಲ ಸಮುದಾಯದಲ್ಲಿ ಭುಗಿಲೆದ್ದ ಅಸಹನೆ, ಅಸಮಾಧಾನಗಳು ಅಂತಿಮವಾಗಿ ಆಂಧ್ರ ಹೈಕೋರ್ಟನ್ನು ಹಾದು ಸುಪ್ರೀಂಕೋರ್ಟ್ ಕದವನ್ನ ಬಡಿಯುವಲ್ಲಿಗೆ ಪರ್ಯಾವಸಾನಗೊಂಡಿತು.

2004ರಲ್ಲಿ ಮಾಲ ಸಮುದಾಯದ ಮೂವರು ಸಲ್ಲಿಸಿದ ಅರ್ಜಿಯನ್ನ ಸ್ವೀಕರಿಸಿ ವಿಚಾರಣಗೊಳಪಡಿಸಿದ ಸುಪ್ರೀಂಕೋರ್ಟ್‌ನ ಜಸ್ಟಿಸ್ ಸಂತೋಷ್ ಹೆಗ್ಡೆ ನೇತೃತ್ವದ ಸಾಂವಿಧಾನಿಕ ಪೀಠ ಆಂಧ್ರಪ್ರದೇಶದ ಎಬಿಸಿಡಿ ವರ್ಗೀಕರಣವನ್ನ ಅಸಿಂಧುಗೊಳಿಸಿ ತೀರ್ಪು ನೀಡಿತು. ಆಗ ಆಂಧ್ರಪ್ರದೇಶ ಮಾತ್ರವಲ್ಲದೆ ಅಲ್ಲಿವರೆಗೂ ಮೂರು ದಶಕಗಳಿಂದ ಬೇರೆಬೇರೆ ರಾಜ್ಯಗಳಲ್ಲಿ ಜಾರಿಯಲ್ಲಿದ್ದ ಒಳಮೀಸಲು ನೀತಿಗೆ ಕಲ್ಲು ಬಿದ್ದಂತಾಯಿತು. ಮೀಸಲು ವಂಚಿತರಿಗೆ ಕೊಡಮಾಡಲಾಗಿದ್ದ ಒಳಮೀಸಲಾತಿಯೆಂಬ ಅನ್ನ-ಭವಿಷ್ಯವನ್ನ ನಿರ್ದಯವಾಗಿ ಕಿತ್ತುಕೊಂಡ ಪಕ್ರರಣವೇ ಇ.ವಿ.ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ಪ್ರಕರಣವೆಂದು ಕುಖ್ಯಾತವಾಯಿತು.
***
ಮೀಸಲು ವಂಚಿತ ಪರಿಶಿಷ್ಟರಿಗೆ ’ಮರಣಶಾಸನ’ವಾದ ಜಸ್ಟೀಸ್ ಸಂತೋಷ್ ಹೆಗ್ಡೆ ನೇತೃತ್ವದ ಸಾಂವಿಧಾನಿಕ ಪೀಠದ ತೀರ್ಪು
2004-05ರ ವರ್ಷವು ಇಡೀ ಭಾರತದ ಮೀಸಲು ವಂಚಿತ ಪರಿಶಿಷ್ಟ ಜಾತಿಗಳ ಪಾಲಿಗೆ ಕರಾಳಘಟ್ಟವಾಗಿ ಎರಗಿಬಂದಿತು. ಒಳಮೀಸಲು ಅಸ್ತಿತ್ವಕ್ಕೆ ಬಂದು 29 ವರ್ಷಗಳ ನಂತರ ಹಾಗೂ ಮಂಡಲ್ ಕಮಿಷನ್ ಶಿಫಾರಸ್ಸುಗಳ ಅನುಷ್ಠಾನಕ್ಕೆ ಅನುವು ಮಾಡಿಕೊಟ್ಟು ಹಿಂದುಳಿದವರ ಮೀಸಲಾತಿಯ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿದ್ದ ಮೊಟ್ಟಮೊದಲ ಲ್ಯಾಂಡ್‌ಮಾರ್ಕ್ ತೀರ್ಪು ಎಂದೇ ಕರೆಯಲ್ಪಟ್ಟಿದ್ದ ಇಂದ್ರಾಸಾಹ್ನಿ ವರ್ಸಸ್ ಭಾರತ ಒಕ್ಕೂಟ ಸರ್ಕಾರದ ಪ್ರಕರಣದ ತೀರ್ಪು ಹೊರಬಿದ್ದ 12 ವರ್ಷಗಳ ತರುವಾಯವೂ, ಒಳಮೀಸಲು ಪರಿಕಲ್ಪನೆಯೇ ಬುಡಮೇಲಾಗುವಂತಹ ಮಾರಕ ತೀರ್ಪನ್ನು ಜಸ್ಟೀಸ್ ಸಂತೋಷ್ ಹೆಗ್ಡೆ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠ ಹೊರಹಾಕಿತು.
ಆ ಮೂಲಕ ಅಲ್ಲೀತನಕ ಪಂಜಾಬ್-ಹರಿಯಾಣ ಹಾಗೂ ಅವಿಭಜಿತ ಆಂಧ್ರಪ್ರದೇಶ ಸರ್ಕಾರಗಳು ಕೊಡಮಾಡಿದ್ದ ಪರಿಶಿಷ್ಟರ ಉಪವರ್ಗೀಕರಣ ಅಥವಾ ಒಳಮೀಸಲು ಏಕಾಏಕಿ ರದ್ದಾಗುವಂತೆ ನೋಡಿಕೊಂಡಿತು.
ನಂತರದ 20 ವರ್ಷಗಳ ಕಾಲ ಇದೇ ಮಾರಕ ತೀರ್ಪು ಇಡೀ ದೇಶದಲ್ಲಿ ಮೀಸಲು ವಂಚಿತರಾಗಿ ಉಳಿದಿದ್ದ ಪರಿಶಿಷ್ಟ ಜಾತಿ-ವರ್ಗಗಳ ಸಾಂವಿಧಾನಿಕ ಹಕ್ಕನ್ನು ಮೊಟಕುಗೊಳಿಸಿದ್ದರಿಂದ ಮತ್ತೊಂದು ಸುತ್ತಿನ ಒಳಮೀಸಲು ಹೋರಾಟಗಳು ದೇಶದ ವಿವಿಧ ರಾಜ್ಯಗಳಲ್ಲಿ ಭುಗಿಲೆದ್ದವು. ನ್ಯಾಯಿಕ ಪ್ರಕ್ರಿಯೆಯ ವಿಷಯವಾಗಿದ್ದ ಒಳಮೀಸಲು ಆ ನಂತರದಲ್ಲಿ ರಾಜಕೀಯ ಪಕ್ಷಗಳ ಅಖಾಡದಲ್ಲಿ ಮತಬ್ಯಾಂಕ್ ದೋಚುವ ದಾಳವಾಗಿ ಪರಿವರ್ತನೆಗೊಂಡಿತು.
ಪ್ರತಿ ಅಸೆಂಬ್ಲಿ ಚುನಾವಣೆಗಳಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಮೂರ್ನಾಲ್ಕು ರಾಜ್ಯಗಳಲ್ಲಿ ವಿವಿಧ ಪಕ್ಷಗಳನ್ನ ಅಧಿಕಾರಕ್ಕೇರಿಸುವ, ಕೆಳಗಿಳಿಸುವ ಹಾವು ಏಣಿ ಆಟಕ್ಕೆ ಒಳಮೀಸಲು ಹೋರಾಟ ಬಳಕೆಯಾಗುತ್ತಾ ಬಂದಿತು.
***
ಒಳಮೀಸಲು ಪರಿಕಲ್ಪನೆಯನ್ನು ರದ್ದುಪಡಿಸಿದ ಸಂತೋಷ್ ಹೆಗ್ಡೆ ನ್ಯಾಯಪೀಠವು ಕೊಟ್ಟ ನ್ಯಾಯಿಕ ನಿರ್ಣಯದ ಸಾರಾಂಶವು ಹೀಗಿತ್ತು…
ಪರಿಶಿಷ್ಟ ಜಾತಿಗಳೊಳಗೆ ಉಪವರ್ಗೀಕರಣ ಮಾಡುವ ಮೂಲಕ ಒಳಮೀಸಲು ಕಲ್ಪಿಸುವುದು ಸಂವಿಧಾನ ಆರ್ಟಿಕಲ್ 14ರ ಸಮಾನತೆಯ ತತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ. ಆರ್ಟಿಕಲ್ 341ರ ಪ್ರಕಾರ ರಾಜ್ಯಪಾಲರ ಕನ್ಸೆಂಟ್ ಮೇರೆಗೆ ಪರಿಶಿಷ್ಟ ಜಾತಿಗಳನ್ನು ಗುರುತಿಸುವುದು, ಪಟ್ಟಿ ಮಾಡುವುದ, ಪಟ್ಟಿಯಿಂದ ಕೈಬಿಡುವುದು ಸೇರಿದಂತೆ ಯಾವುದೇ ಉಪವರ್ಗೀಕರಣ ಮಾಡುವ ಹಕ್ಕು ರಾಷ್ಟ್ರಪತಿಗಳಿಗೆ ಮಾತ್ರ ಇರುತ್ತದೆ. ಉಪವರ್ಗೀಕರಣವೂ ಸಹ ಸಂಸತ್ತಿನ ತಿದ್ದುಪಡಿ ಅನುಮೋದನೆಯೊಂದಿಗೆ ಊರ್ಜಿತವಾಗಬೇಕು.
ಅದರ ಹೊರತಾಗಿ ರಾಜ್ಯಗಳಿಗೆ ಅಥವಾ ರಾಜ್ಯ ಸರ್ಕಾರಗಳು ಪರಿಶಿಷ್ಟರನ್ನು ಉಪ-ವರ್ಗೀಕರಿಸುವ ಯಾವುದೇ ಅಧಿಕಾರಗಳನ್ನು ಸಾಂವಿಧಾನಿಕವಾಗಿ ಹೊಂದಿಲ್ಲವೆಂದು ಷರಾ ಬರೆದಿದ್ದರು. ಅಷ್ಟು ಸಾಲದೆಂಬಂತೆ ಪರಿಶಿಷ್ಟಜಾತಿಗಳು ಏಕರೂಪದ ಗುಂಪಾಗಿದ್ದು (ಹೋಮೋಜೀನಿಯಸ್), ಪರಿಶಿಷ್ಟ ಜಾತಿಗಳೆಲ್ಲವೂ ಸಮಾನಸ್ತರದಲ್ಲಿದ್ದು, ಅವುಗಳನ್ನು ಉಪ-ವರ್ಗೀಕರಿಸುವುದು ಅಸಂವಿಧಾನಿಕವೆಂದು ಆಶ್ಚರ್ಯಕರ ವಾದವನ್ನು ಮುಂದಿಟ್ಟಿತ್ತು.
***
ಇಂದ್ರಾಸಾಹ್ನಿ ಪ್ರಕರಣದ ಲ್ಯಾಂಡ್‌ಮಾರ್ಕ್ ತೀರ್ಪನ್ನು ಪರಿಗಣಿಸದೆ ಹೋಗಿದ್ದ ಸಂತೋಷ್ ಹೆಗ್ಡೆ ಪೀಠ
ಇಂದ್ರಾಸಾಹ್ನಿ ಪ್ರಕರಣದಲ್ಲಿ ಹಿಂದುಳಿದ ವರ್ಗಗಳಿಗೆ ಒಳಮೀಸಲು ನೀಡಿದ 9 ಜನ ನ್ಯಾಯಾಧೀಶರ ಸಾಂವಿಧಾನಿಕ ಪೀಠದ ತೀರ್ಪನ್ನೇ ಸಂತೋಷ್ ಹೆಗ್ಡೆ ಪೀಠ ಅಲಕ್ಷಿಸಿ ವ್ಯತಿರಿಕ್ತದ ತೀರ್ಪನ್ನು ಇತ್ತಿತ್ತು.
ನ್ಯಾಯಾಂಗದ ಇತಿಹಾಸದಲ್ಲಿ ಯಾವುದೇ ದೊಡ್ಡ ಸಾಂವಿಧಾನಿಕ ಪೀಠವೊಂದು ದಶಕಗಳಿಗೆ ಮೊದಲೇ ನೀಡಿದ ಒಳಮೀಸಲು ಅಥವಾ ಜಾತಿಗಳೊಳಗೆ ಉಪಜಾತಿಗಳನ್ನ ವರ್ಗೀಕರಿಸಿ ನೀಡಿದ ತೀರ್ಪನ್ನ ಸಂಪೂರ್ಣ ಅಲಕ್ಷಿಸಿ ಕಡಿಮೆ ಸದಸ್ಯ ಬಲದ ನ್ಯಾಯಪೀಠವೊಂದು ವ್ಯತಿರಿಕ್ತ ತೀರ್ಪು ನೀಡಿದ್ದ ಪ್ರಕರಣ ಇಲ್ಲವೇ ಇಲ್ಲವೆನ್ನಬಹುದು.
ಆದರೆ ಇಂದ್ರಾಸಾಹ್ನಿ ಪ್ರಕರಣದಲ್ಲಿ ಉಪವರ್ಗೀಕರಣಕ್ಕೆ ಅಸ್ತು ಎನ್ನಲಾದರೇ ಸಂತೋಷ್ ಹೆಗ್ಡೆ ನ್ಯಾಯಪೀಠದ ತೀರ್ಪಿನಲ್ಲಿ ಅದು ಸಾಧ್ಯವೇ ಇಲ್ಲವೆಂದು ನಿಲುವು ತಳೆದು, ಹಿಂದುಳಿದ ವರ್ಗಗಳಿಗೊಂದು ನ್ಯಾಯ, ಪರಿಶಿಷ್ಟ ಜಾತಿ/ವರ್ಗಗಳಿಗೊಂದು ನ್ಯಾಯ ಎಂಬ ವೈಪರೀತ್ಯದ ನಿಲುವು ತಳೆಯಿತು. ವಿಪರ್ಯಾಸವೆಂದರೇ ಇಂದ್ರಾಸಾಹ್ನಿ ವರ್ಸಸ್ ಭಾರತ ಒಕ್ಕೂಟ ಸರ್ಕಾರ ಪ್ರಕರಣದ ತೀರ್ಪು ಹೊರಬಿದ್ದಾಗ ಮೀಸಲು ಮತ್ತು ಉಪ ವರ್ಗೀಕರಣದ ಪರಿಕಲ್ಪನೆಯನ್ನು ಆಳವಾಗಿ ವಿಶ್ಲೇಷಿಸಿ ಹಿಂದುಳಿದ ವರ್ಗಗಳೊಳಗೆ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಎಂದು ವರ್ಗೀಕರಿಸುವ ಮೂಲಕ ಆಯಾ ಸಮುದಾಯಗಳಿಗೆ ಆದ್ಯತೆ ಮತ್ತು ಜನಸಂಖ್ಯೆ ಆಧಾರದ ಮೇಲೆ ಒಳಮೀಸಲನ್ನು ಸ್ವತಃ ರಾಜ್ಯ ಸರ್ಕಾರಗಳೇ ಕಲ್ಪಿಸಬಹುದೆಂದು ಹೇಳಲಾಗಿತ್ತು.
ರಾಜ್ಯಗಳಿಗೆ ಸಹಜವಾಗಿ ಅಂತಹ ಸಾಂವಿಧಾನಿಕ ಹಕ್ಕು ದತ್ತವಾಗಿದೆಯೆಂಬ ಐತಿಹಾಸಿಕ ತೀರ್ಪನ್ನು ನೀಡಿತ್ತು. ತನ್ನ ತೀರ್ಪಿಗೆ ಪ್ರಮುಖವಾಗಿ ಸಂವಿಧಾನದ ಆರ್ಟಿಕಲ್ 16 ಹಾಗೂ 16(4)ನ್ನು ಪ್ರಮುಖ ಆಧಾರವಾಗಿಸಿಕೊಂಡಿತ್ತು. ಮತ್ತು ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಜಾತಿಯ ಸ್ತರಗಳು ಏಕರೂಪವಾಗಿ ಇಲ್ಲದ ಕಾರಣ ’ಯಾವುದೇ ಜಾತಿ ಯಾವತ್ತೂ ವರ್ಗವೇ’ ಆಗಿರುವುದರಿಂದ ಇಲ್ಲಿ ಜಾತಿಗಳೊಳಗೆ ಹಿಂದುಳಿವಿಕೆಯನ್ನು ಗುರುತಿಸಿ ಪ್ರಾಶಸ್ತ್ಯದ ಪ್ರಾತಿನಿಧ್ಯದ ಮೀಸಲಾತಿಯನ್ನ ಕಲ್ಪಿಸಬೇಕೆಂಬ ಅಪೂರ್ವ ಆಶಯವನ್ನು ತನ್ನ ತೀರ್ಪಿನಲ್ಲಿ ಹೇಳಿತು. ಹಾಗೂ ಹಿಂದುಳಿದ ವರ್ಗಗಳಿಗೆ ಕೇವಲ ಸಾಮಾಜಿಕ ಹಿಂದುಳಿವಿಕೆಯ ಆಧಾರದಲ್ಲಿ ಮೀಸಲಾತಿ ಕಲ್ಪಿಸಲಾಗಿಲ್ಲ ಬದಲಾಗಿ ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿಯುವಿಕೆಯೇ ಮೀಸಲಾತಿಗೆ ಮಾನದಂಡವಾಗಿರುವುದರಿಂದ, (ಎಸ್‌ಸಿ-ಎಸ್‌ಟಿಗಳಂತೆ ಅನ್‌ಟಚಬಲಿಟಿ ಆಚರಣೆಗಳು, ಸಾಮಾಜಿಕ ಸ್ತರಗಳ ಚಲನೆಯು ಶಾಶ್ವತವಾಗಿ ಸ್ಥಗಿತ ಸ್ಥಿತಿಯಲ್ಲಿ ಉಳಿಯುವ ಅಪಾಯ ಹಿಂದುಳಿದ ವರ್ಗಗಳಲ್ಲಿ ಇಲ್ಲದಿರುವುದನ್ನು ಗ್ರಹಿಸಿದ ಸಾಂವಿಧಾನಿಕ ಪೀಠವು, ಆರ್ಥಿಕ ಅಭ್ಯುದಯದ ಮೂಲಕ ಮೇಲ್ಮುಖ ಚಲನೆಯು ಹಿಂದುಳಿದ ವರ್ಗಗಳಿಗೆ ಸಾಧ್ಯವಾಗುವುದನ್ನು ಮನಗಂಡು) ಹಿಂದುಳಿದ ವರ್ಗಗಳಲ್ಲಿ ಮುಂದುವರಿದವರೇ ಮತ್ತೆಮತ್ತೆ ಮೀಸಲಾತಿ ಪ್ರಯೋಜನಗಳನ್ನು ಪಡೆಯುವುದನ್ನ ತಪ್ಪಿಸಲು ಕೆನೆಪದರ ಪರಿಕಲ್ಪನೆಯನ್ನು ತೀರ್ಪಿನಲ್ಲಿ ಪರಿಚಯಿಸಿತು.
ಅಂದರೆ ಇಂದ್ರಾಸಾಹ್ನಿ ಪ್ರಕರಣದಲ್ಲಿ 9 ಸದಸ್ಯ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಹಿಂದುಳಿದ ವರ್ಗಗಳಲ್ಲಿ ಉಪ-ವರ್ಗೀರಕಣವನ್ನು ಒತ್ತಿ ಹೇಳಿ, ’ಜಾತಿ ಯಾವತ್ತೂ ವರ್ಗ’ವಾಗಿದೆಯೆಂದು ವಿಶ್ಲೇಷಿಸಿ ಆರ್ಟಿಕಲ್ 16 ಮತ್ತು 16(14)ನ್ನು ಉಲ್ಲೇಖಿಸಿ ತೀರ್ಪು ಕೊಟ್ಟ ನಂತರವೂ ಸಂತೋಷ್ ಹೆಗ್ಡೆ ನೇತೃತ್ವದ ಸಾಂವಿಧಾನಿಕ ಪೀಠವು ಆರ್ಟಿಕಲ್ 15 ಮತ್ತು 15(4)ರ ಕಡೆಗೆ ಕಣ್ಣೆತ್ತಿಯೂ ನೋಡದೆ, ಪರಿಶಿಷ್ಟ ಜಾತಿಗಳನ್ನು ಏಕರೂಪದ (ಹೋಮೋಜೀನಿಯಸ್)ಗುಂಪು ಎನ್ನುವ, ಒಳಮೀಸಲು ಅಥವಾ ಉಪವರ್ಗೀಕರಣದ ಪ್ರಕ್ರಿಯೆಗಾಗಿ ರಾಜ್ಯಗಳಿಗೆ ಪರಮಾಧಿಕಾರ ನೀಡಲು ಆರ್ಟಿಕಲ್ 341(3) ತಿದ್ದುಪಡಿ ಆಗಲೇಬೇಕೆಂಬ ಸಲ್ಲದ ಸಬೂಬನ್ನ ಮುಂದುಮಾಡಿ ಒಳಮೀಸಲಿಗೆ ಮರಣಶಾಸನ ಬರೆದಿತ್ತು. ಒಳಮೀಸಲು ವಿರೋಧಿಗಳಿಗೆ, ಸರ್ಕಾರಗಳಿಗೆ, ಪಕ್ಷಗಳಿಗೆ ಸಂವಿಧಾನದ ಪರಮ ಆಶಯವಾದ ಒಳಮೀಸಲನ್ನ ಕಲ್ಪಿಸದಂತೆ ಕಾಲಹರಣ ಮಾಡಲು ಈ ತೀರ್ಪು ವರವಾಗಿ ಪರಿಣಮಿಸಿತು.
***
ಸರ್ಕಾರವು ಉಷಾಮೆಹ್ರ ಕಮಿಷನ್ ನೇಮಕದ ಮೂಲಕ ಯುಪಿಎ ಒಕ್ಕೂಟ ಆಡಿದ ಕಣ್ಣೊರೆಸುವ ತಂತ್ರದ ಆಟ
29 ವರ್ಷಗಳಿಂದ ಪಂಜಾಬ್ ಹರಿಯಾಣಗಳಲ್ಲಿ ಅಬಾಧಿತವಾಗಿದ್ದ ಒಳಮೀಸಲಿಗೆ 2004ರ ಸುಪ್ರೀಂತೀರ್ಪಿನ ಕೊಡಲಿಯೇಟು ಬಿದ್ದ ನಂತರ ಆಗ ಅಧಿಕಾರದಲ್ಲಿದ್ದ ಯುಪಿಎ ಒಕ್ಕೂಟ ಸರ್ಕಾರವು ದಿವ್ಯ ಮೌನಕ್ಕೆ ಶರಣಾಯಿತು. ವಿವಿಧ ರಾಜ್ಯಗಳಲ್ಲಿ ಹೆಚ್ಚಿದ ಒಳಮೀಸಲು ಹೋರಾಟಗಳ ಒತ್ತಡದಿಂದಾಗಿ ಮೂರು ವರ್ಷಗಳ ನಂತರ ಕೊನೆಗೆ 2007ರಲ್ಲಿ ಉಷಾ ಮೆಹ್ರ ಆಯೋಗವನ್ನು ನೇಮಕ ಮಾಡಿ ವರದಿ ಕೇಳಿತು. ಒಂದೇ ವರ್ಷದಲ್ಲಿ ಉಷಾಮೆಹ್ರ ಆಯೋಗವು ತನ್ನ ವರದಿ ತಯಾರಿಸಿ ಪರಿಶಿಷ್ಟ ಜಾತಿಗಳೊಳಗೆ ತೀವ್ರತರನಾದ ಅಸಮಾನತೆ ಮತ್ತು ಪ್ರಾತಿನಿಧ್ಯದ ವಿಪರೀತ ಏರುಪೇರುಗಳಿವೆ; ಹಾಗಾಗಿ ಒಳಮೀಸಲು ಕಲ್ಪಿಸಲು 341 (3) ತಿದ್ದುಪಡಿ ತರಬೇಕೆಂದು ಶಿಫಾರಸ್ಸು ಮಾಡಿತು. ಆದರೆ ಆಗ ಅದೇ ಸರ್ಕಾರದ ಅವಧಿಯಲ್ಲಿದ್ದ ಎಸ್‌ಸಿ-ಎಸ್‌ಟಿ ಆಯೋಗ ಉಷಾ ಮೆಹ್ರ ಆಯೋಗದ ವರದಿಯನ್ನ ಕಸದಬುಟ್ಟಿಗೆ ಎಸೆಯುವಂತೆ ಶಿಫಾರಸ್ಸು ಮಾಡಿದ್ದರಿಂದ, 2014ರವರೆಗೆ ತನ್ನ ಎರಡು ಅವಧಿಯ ಆಯುಷ್ಯ ತೀರುವತನಕ ಯುಪಿಎ ಸರ್ಕಾರವು ಒಳಮೀಸಲಿನ ತಂಟೆಗೆ ಹೋಗದೆ ಆಟ ಕಟ್ಟಿ ನಿರ್ಗಮಿಸಿತು.
***
2006ರಲ್ಲಿ ಮೀಸಲನ್ನು ಪುನರ್ ಸ್ಥಾಪಿಸಿದ ಪಂಜಾಬ್ ಸರ್ಕಾರ
ಸುಪ್ರೀಂಕೋರ್ಟಿನ ಅಡೆತಡೆಗಳೆಲ್ಲದರ ನಡುವೆ ಪಟ್ಟುಬಿಡದೆ ಮತ್ತೊಮ್ಮೆ ಇಚ್ಛಾಶಕ್ತಿ ಮೆರೆದ ಪಂಜಾಬ್ ಸರ್ಕಾರ 2006ರಲ್ಲಿ ಮಜಬಿ ಸಿಖ್ಖರಿಗೆ ಮತ್ತು ಬಾಲ್ಮೀಕಿಗಳಿಗೆ ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ ಕಾಯಿದೆಯ ಮೂಲಕ ಮತ್ತೆ ಒಳಮೀಸಲು ಕಲ್ಪಿಸಿ ಮಸೂದೆಯನ್ನು ಮಾಡಿತು.
ಆ ಮೂಲಕ ಪಂಜಾಬ್‌ನಲ್ಲಿ ನಾಲ್ಕು ವರ್ಷಗಳ ಕಾಲ ಒಳಮೀಸಲು ಮತ್ತೆ ಮುಂದುವರಿಯಿತು. ಆದರೆ ಮಜಬಿ ಸಿಖ್ಖರು, ಬಾಲ್ಮೀಕಿಗಳಲ್ಲದ ಪರಿಶಿಷ್ಟ ಜಾತಿಗೆ ಸೇರಿದ ದೇವಿಂದರ್ ಸಿಂಗ್ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದಾಗ ಪಂಜಾಬ್ ಸರ್ಕಾರದ ಮಸೂದೆ ವಿರುದ್ಧ ಪಂಜಾಬ್ ಹೈಕೋರ್ಟ್ ವ್ಯತಿರಿಕ್ತ ನಿಲುವು ತಳೆಯಿತು. ಹಾಗಾಗಿ ಮಸೂದೆ 2011ರಲ್ಲಿ ಸುಪ್ರೀಂ ಅಂಗಳಕ್ಕೆ ರವಾನೆಯಾಯಿತು. ತದನಂತರ 2013-14ರಲ್ಲಿ ದೇವಿಂದರ್ ಸಿಂಗ್ ವರ್ಸಸ್ ಪಂಜಾಬ್ ಸರ್ಕಾರ ಪ್ರಕರಣ ಸುಪ್ರೀಂನ ಮೂರು ಸದಸ್ಯ ನ್ಯಾಯಾಧೀಶರ ಪೀಠದಿಂದ ವಿಚಾರಣೆಗೊಳಪಟ್ಟು ಮತ್ತೆ ಐದು ಸದಸ್ಯರ ಪೀಠಕ್ಕೆ ವರ್ಗಾವಣೆಯನ್ನು ಪಡೆದುಕೊಂಡಿತು.
***
ಒಳಮೀಸಲಿಗೆ ಮುಂದಾದ ತಮಿಳುನಾಡು ಸರ್ಕಾರ
2009ರಲ್ಲಿ ಪರಿಶಿಷ್ಟ ಜಾತಿ ಅರುಂಧತಿಯಾರರಿಗೆ 3% ಪ್ರತ್ಯೇಕ ಮೀಸಲು ಹಾಗೂ ಉಳಿದ ಒಟ್ಟು 15% ಮೀಸಲಿನಲ್ಲೂ ಅವರಿಗೆ ಅವಕಾಶ ಕಲ್ಪಿಸಿ ತಮಿಳುನಾಡು ಸರ್ಕಾರ ನ್ಯಾಯಪ್ರಜ್ಞೆ ಮೆರೆಯಿತು.
ಸುಪ್ರೀಂಕೋರ್ಟಿನ ನ್ಯಾಯಿಕ ನಿರ್ಣಯಗಳ ತಕರಾರಿನ ನಡುವೆಯೂ ಇಚ್ಛಾಶಕ್ತಿ ಪ್ರದರ್ಶಿಸಿದ ಮತ್ತೊಂದು ರಾಜ್ಯವೆಂದರೇ ಅದು ತಮಿಳುನಾಡು. 2009ರಲ್ಲಿ ತಮಿಳುನಾಡಿನಲ್ಲಿ ಅಧಿಕಾರದಲ್ಲಿದ್ದ ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರ ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿಯಾದ ಅರುಂಧತಿಯಾರರಿಗೆ ಶೇ.18ರ ಮೀಸಲಿನಲ್ಲಿ ಪ್ರತ್ಯೇಕವಾಗಿ 3%ನಷ್ಟು ಪಾಲನ್ನು ಕಾಯ್ದಿರಿಸಿದ್ದಲ್ಲದೇ, ಆ ಸಮುದಾಯ ಉಳಿದ ಒಟ್ಟು 15%ನಲ್ಲೂ ಮೀಸಲು ಪಡೆಯುವಂತೆ ಅನುವು ಮಾಡಿಕೊಟ್ಟಿತು.
ಅತ್ಯಂತ ದೈನ್ಯ ಸ್ಥಿತಿಯಲ್ಲಿ ಹಿಂದುಳಿದಿದ್ದ ಅರುಂಧತಿಯಾರರಿಗೆ (ಚಕ್ಕಲೀಯರು) ಪ್ರತ್ಯೇಕ ಮೀಸಲಾತಿ ನೀಡುವ ಪ್ರಸ್ತಾವ ಹತ್ತಿಕ್ಕಲು ತಮಿಳುನಾಡಿನ ಉಳಿದ ಪರಿಶಿಷ್ಟ ಜಾತಿಗಳಾದ ಪರಯರ್ ಮತ್ತು ಪಳ್ಳರ್ ಸಮುದಾಯಗಳ ರಾಜಕೀಯ ನಾಯಕರು ಒಡ್ಡಿದ ಪ್ರತಿರೋಧವನ್ನ ಲೆಕ್ಕಿಸದ ಕರುಣಾನಿಧಿಯವರು ಅತ್ಯಂತ ದಿಟ್ಟತನದಿಂದ ಶೋಷಿತರಿಗೆ ಅರ್ಹಪಾಲು ನೀಡುವುದಕ್ಕಾಗಿ ಸುಗ್ರೀವಾಜ್ಞೆ ಮೂಲಕ ಪ್ರತ್ಯೇಕ ಒಳಮೀಸಲನ್ನು ಜಾರಿಗೆ ತಂದರು. ಶೋಷಿತರ ಪರವಾಗಿ ಸರ್ಕಾರಗಳಿರಬೇಕಾದ ಬದ್ಧತೆಗೆ ದೊಡ್ಡ ಮಾದರಿಯೊಂದನ್ನ ನಿರ್ಮಿಸಿಕೊಟ್ಟರು.
***
ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಆರು ವರ್ಷಗಳ ನಂತರ ಒಳಮೀಸಲು ಪ್ರಕರಣಕ್ಕೆ ಸಿಕ್ಕಿದ ಮರುಜೀವ
2013-14ರಲ್ಲಿ ಮೂರು ಸದಸ್ಯ ನ್ಯಾಯಾಧೀಶರ ಪೀಠದಿಂದ ವರ್ಗಾವಣೆಯಾದ ದೇವಿಂದರ್ ಸಿಂಗ್ ವರ್ಸಸ್ ಪಂಜಾಬ್ ಪ್ರಕರಣವನ್ನ ಕೈಗೊತ್ತಿಕೊಂಡ ಜಸ್ಟೀಸ್ ಅರುಣ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟಿನ ಐದು ಸದಸ್ಯ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನ್ಯಾಯಾಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಆಳವಾದ ವಿಶ್ಲೇಷಣೆ ಮಾಡಿ ಒಳಮೀಸಲು ನೀಡುವ ಅಧಿಕಾರ ರಾಜ್ಯಗಳಿಗೆ ದತ್ತವಾಗಿದೆ. ಇದಕ್ಕೆ ಯಾವುದೇ ಸಂವಿಧಾನದ ವಿಧಿಗಳು ಅಡ್ಡಬರುವುದಿಲ್ಲ, ಆದರೆ ಈ ಹಿಂದೆ ಮೀಸಲು ಉಪ-ವರ್ಗೀಕರಣದ ವಿರುದ್ಧ ತೀರ್ಪು ನೀಡಿರುವುದು ಕೂಡ ಐದು ಸದಸ್ಯ ನ್ಯಾಯಾಧೀಶರ ಪೀಠವಾದ್ದರಿಂದ ಐದಕ್ಕಿಂತ ಹೆಚ್ಟು ಸದಸ್ಯ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಈ ನಿಟ್ಟಿನಲ್ಲಿ ತೀರ್ಪು ನೀಡಿದಾಗ ಅದು ಸಿಂಧುವಾಗಲು ಸಾಧ್ಯವೆಂದು ಹೇಳಿ ಒಳಮೀಸಲು ವಂಚಿತ ಸಮುದಾಯಗಳ ಬದುಕಿನಲ್ಲಿ ಕವಿದಿದ್ದ ಕಾರ್ಮೋಡದ ನಡುವೆ ಭರವಸೆಯ ಬೆಳ್ಳಿಗೆರೆಯನ್ನು ಮಿಂಚಿಸಿತು.
***
ಕೊನೆಗೂ ಮೂಡಿದ ಬೆಳ್ಳಿಕಿರಣ
2024ರ ಆಗಸ್ಟ್ 1ರಂದು ಲ್ಯಾಂಡ್‌ಮಾರ್ಕ್ ವರ್ಡಿಕ್ಟ್ ಹೊರಹಾಕಿದ ಸಿಜೆಐ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್‌ನ ಏಳು ಸದಸ್ಯ ನ್ಯಾಯಾಧೀಶರ ಸಾಂವಿಧಾನಿಕ ಪೀಠ, ಒಳಮೀಸಲಾತಿ ವಂಚಿತ ಕೋಟ್ಯಂತರ ಶೋಷಿತರ ಬಾಳಲ್ಲಿ ಹೊಸ ಅಧ್ಯಾಯ ಬರೆಯಿತು. ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು 2023ರ ಆಗಸ್ಟ್‌ನಲ್ಲಿ ರಚನೆಗೊಂಡು, 2024 ಫೆಬ್ರವರಿಯಲ್ಲಿ ಮೂರು ದಿನಗಳ ಐತಿಹಾಸಿಕ ಮ್ಯಾರಾಥಾನ್ ವಿಚಾರಣೆ ಕೈಗೊಂಡು ತೀರ್ಪು ಕಾಯ್ದಿರಿಸಿ ಇದೇ ವರ್ಷದ ಇದೇ ಆಗಸ್ಟ್ ತಿಂಗಳ 1ರಂದು 6:1 ಅನುಪಾತದ ಬಹುಮತದ ತೀರ್ಪಿತ್ತಿತು. ಒಳಮೀಸಲಾತಿ ಅಥವಾ ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣವು ರಾಜ್ಯಗಳಿಗೆ ಸಾಂವಿಧಾನಿಕವಾಗಿ ದತ್ತವಾಗಿದೆ. ಆರ್ಟಿಕಲ್ 14ರ ಸಮಾನತೆಯ ತತ್ವಕ್ಕೆ ಯಾವುದೇ ಚ್ಯುತಿ ಬರದಂತೆ ಅದರ ಮೂಲ ಆಶಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆಯೆಂಬ ಭಾವನೆ ವ್ಯಕ್ತಪಡಿಸಿತು.
ಹಾಗೆಯೇ ಪರಿಶಿಷ್ಟ ಜಾತಿ-ವರ್ಗಗಳ ಮೀಸಲು ಉಪವರ್ಗೀಕರಣಕ್ಕೆ ಆರ್ಟಿಕಲ್ 341 ತಿದ್ದುಪಡಿಯ ಅಗತ್ಯವಿಲ್ಲವೆಂಬುದನ್ನು ಪ್ರತಿಪಾದಿಸಿತು.
ಇಂದ್ರಾಸಾಹ್ನಿ ಪ್ರಕರಣದಲ್ಲಿ 16(4) ಹೇಗೆ ಹಿಂದುಳಿದ ವರ್ಗಗಳಲ್ಲಿ ಹಿಂದುಳಿದವರು ಮತ್ತು ಅತಿಹಿಂದುಳಿದವರು ಎಂಬ ಉಪವರ್ಗೀಕರಣಕ್ಕೆ ಅನುಮತಿಸುತ್ತದೆಯೋ ಹಾಗೆಯೇ 15(4) ಕೂಡ ಎಸ್‌ಸಿ-ಎಸ್‌ಟಿಗಳ ಮೀಸಲಾತಿಯನ್ನು ಉಪವರ್ಗೀಕರಿಸಿ ಪ್ರಾಶಸ್ತ್ಯದ ಪ್ರಾತಿನಿಧ್ಯ ಕಲ್ಪಿಸಲು ಅವಕಾಶ ಮಾಡಿಕೊಡುತ್ತದೆಯೆಂಬುದನ್ನ ಸ್ಪಷ್ಟವಾಗಿ ಉಲ್ಲೇಖಿಸಿ ಪ್ರತಿಪಾದಿಸಿತು.
ಎಲ್ಲದಕ್ಕಿಂತ ಮುಖ್ಯವಾಗಿ ಇಪ್ಪತ್ತು ವರ್ಷಗಳ ಕಾಲ ಒಳಮೀಸಲಿಗೆ ತಡೆಗೋಡೆಯಾಗಿದ್ದ ಜಸ್ಟೀಸ್ ಸಂತೋಷ್ ಹೆಗ್ಡೆ ನ್ಯಾಯ ಪೀಠದ 2004ರ ತೀರ್ಪಿನ ಆದೇಶವನ್ನು ಸಾರಾಸಗಟಾಗಿ ರದ್ದುಗೊಳಿಸಿತು.
***
ಕೆನೆ ಪದರ ಗೊಂದಲ; ಒಳಮೀಸಲಾತಿ ವಿರೋಧಿಗಳ ಕೈಗೆ ಹತ್ತು ದಿನಗಳ ಕಾಲ ಸಿಕ್ಕ ಕುಂಟುನೆಪ
ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ಜನರ ಸಾಂವಿಧಾನಿಕ ಪೀಠದ ಐತಿಹಾಸಿಕ ತೀರ್ಪಿನಲ್ಲಿ ಎಸ್‌ಸಿ-ಎಸ್‌ಟಿಗಳಲ್ಲಿಯೂ ಕೆನೆಪದರ ಯಾಕೆ ತರಬಾರದು? ಮೀಸಲು ಪಡೆದವರೇ ಮತ್ತೆ ಮೀಸಲು ಅವಕಾಶಗಳನ್ನು ದೋಚಿಕೊಳ್ಳುವುದರಿಂದ ಉಪ-ವರ್ಗೀಕರಣದ ಆಶಯಕ್ಕೆ ಧಕ್ಕೆಯಾಗುವುದಿಲ್ಲವೆ? ಎಂಬಂತಹ ಪ್ರಶ್ನೆಗಳನ್ನು ತನಗೆ ತಾನೇ ಹಾಕಿಕೊಂಡ ಪೀಠದ ಕೆಲವು ನ್ಯಾಯಾಧೀಶರು ಕೆನೆಪದರ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು (ಅಬ್ಸರ್ವೇಷನ್ಸ್) ಹೊರಹಾಕಿತು. ಅವುಗಳು ಅಭಿಪ್ರಾಯಗಳು ಹಾಗೂ ಗಮನಿಸುವಿಕೆಗಳು ಮಾತ್ರವೇ ಆಗಿದ್ದವು ಎಂಬುದನ್ನ ಅರಿತೋ ಅರಿಯದೆಯೋ ದೇಶಾದ್ಯಂತ ಕೆನೆಪದರದ ವಿಚಾರವಾಗಿ ವಿನಾಕಾರಣ ಗುಲ್ಲೆಬ್ಬಿಸಲಾಯಿತು.
ಕೆನೆಪದರ ಮುಂದಿಟ್ಟುಕೊಂಡೇ ಒಳಮೀಸಲಾತಿ ಪರವಾಗಿ ಬಂದ ತೀರ್ಪನ್ನೇ ನಿರಾಕರಿಸುವ ಕೆಟ್ಟ ಆಟಗಳನ್ನ ಕಟ್ಟಲಾಯಿತು. ಈ ಕೆನೆಪದರದ ಹುಸಿ ಆತಂಕ ಭುಗಿಲೆದ್ದ ಬೆನ್ನಲ್ಲೇ ಸ್ವತಃ ಕೇಂದ್ರ ಸರ್ಕಾರವೇ ತನ್ನನ್ನ ಭೇಟಿಯಾಗಿದ್ದ ಸಂಸದರ ನಿಯೋಗಕ್ಕೆ ಭರವಸೆ ನೀಡಿ ಸಂವಿಧಾನದ ಮೂಲ ತತ್ವದ ಪ್ರಕಾರ ಎಸ್‌ಸಿ-ಎಸ್‌ಟಿಗಳಲ್ಲಿ ಕೆನೆಪದರ ಜಾರಿ ಮಾಡಲು ಅವಕಾಶವೇ ಇಲ್ಲ ಎಂಬುದನ್ನ ಪ್ರತಿಪಾದಿಸಿತು. ಕೆಲ ಕೇಂದ್ರ ಸಚಿವರುಗಳ ಮೂಲಕ ಮಾಧ್ಯಮ ಹೇಳಿಕೆಗಳನ್ನೂ ಬಿಡುಗಡೆ ಮಾಡಿ ಕೆನೆಪದರದ ಗೊಂದಲವನ್ನು ನಿವಾರಿಸಿತು.
ಇದನ್ನೂ ಓದಿ: ಒಳ ಮೀಸಲಾತಿ | ದಲಿತ ಸಮುದಾಯಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರಕ್ಕಿದು ಸುವರ್ಣಾವಕಾಶ: ಅಂಬಣ್ಣ ಅರೋಲಿಕರ್
ಇಂದ್ರಾಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹಿಂದುಳಿದ ವರ್ಗಗಳೊಳಗೆ ಉಪವರ್ಗೀಕರಿಸಿ ಮೀಸಲು ನೀಡುವ ಅಧಿಕಾರವನ್ನು ಪ್ರತಿಪಾದಿಸುವಾಗ ಕೆನೆಪದರವನ್ನೂ ಕಡ್ಡಾಯವಾಗಿ ಜಾರಿಗೊಳಿಸಿ ಆದೇಶ ನೀಡಿತ್ತು. ಹಿಂದುಳಿದ ವರ್ಗಗಳು ಎಸ್‌ಸಿ-ಎಸ್‌ಟಿಗಳಂತೆ ಅಸ್ಪೃಶ್ಯರಲ್ಲದ ಕಾರಣ ಹಿಂದುಳಿದ ವರ್ಗಗಳ ಬಹುತೇಕ ಜಾತಿಗಳ ಆರ್ಥಿಕ ಬೆಳವಣಿಗೆ ಸಾಧ್ಯವಾದರೇ ಜಾತಿವ್ಯವಸ್ಥೆಯಲ್ಲಿ ಅವುಗಳು ಮೇಲ್ಮುಖ ಚಲನೆಯನ್ನು ಪಡೆದುಕೊಳ್ಳುತ್ತವೆ.
ಹಿಂದುಳಿದ ವರ್ಗಗಳಲ್ಲಿ ಸಾಮಾಜಿಕ ಹಿಂದುಳಿಯುವಿಕೆ ಇಲ್ಲವಾದನಂತರ ಅವುಗಳು ಮೇಲ್‌ಸ್ತರಕ್ಕೆ ಏರಲ್ಪಡುತ್ತವೆ, ಆದ್ದರಿಂದ ಕೆನೆಪದರ ನೀತಿಯನ್ನು ಅಳವಡಿಸಿ ಹಿಂದುಳಿದ ವರ್ಗಗಳಲ್ಲೇ ಅತಿ ಹಿಂದುಳಿದವರಿಗೆ ಮೀಸಲಾತಿ ಸಿಗುವಂತಾಗಲು ಕೆನೆಪದರ ಅತ್ಯವಶ್ಯಕವೆಂದು ಒತ್ತಿ ಹೇಳಿ ಕೆನೆಪದರವನ್ನ ಆದೇಶ ಮ್ಯಾಂಡೇಟರಿಯನ್ನಾಗಿಸಿತು. ಆದರೆ ಪರಿಶಿಷ್ಟ ಜಾತಿ-ವರ್ಗಗಳಲ್ಲಿ ಸಾಮಾಜಿಕ ಹಿಂದುಳಿವಿಕೆ ಶಾಶ್ವತ ಸ್ಥಿತಿಯಾಗಿರುವುದರಿಂದ, ಎಸ್‌ಸಿ-ಎಸ್‌ಟಿಗಳ ಆರ್ಥಿಕ ಅಭ್ಯುದಯ ಗಗನ ಮುಟ್ಟಿದರೂ ಭಾರತದ ಜಾತಿವ್ಯವಸ್ಥೆಯಲ್ಲಿ ಅಸ್ಪೃಶ್ಯನೊಬ್ಬ ಶಾಶ್ವತವಾಗಿ ಅಸ್ಪೃಶ್ಯನಾಗಿಯೇ ಉಳಿಯುವುದರಿಂದ ಕೆನೆಪದರದ ಮೂಲಕ ಮೀಸಲಾತಿಯಿಂದ ಹೊರಗಿಡುವುದು ಸಾಧ್ಯವಿಲ್ಲದ ಮಾತು.
ನ್ಯಾಯಾಲಯಗಳು, ಈ ಸಂಗತಿ ಗೊತ್ತಿದ್ದೂ ಕೆನೆಪದರ ವಿಚಾರವನ್ನ ಎತ್ತುತ್ತಿವೆಯೆಂದರೆ? ಆ ಪ್ರಶ್ನೆಯನ್ನ ಸಾಂವಿಧಾನಿಕ ನಿಯಮಗಳ ಮೂಲಕ ಸ್ವೀಕರಿಸಲು ಸಾಧ್ಯವಿಲ್ಲದೇ ಹೋದರೂ ನೈತಿಕ ನೆಲೆಯಲ್ಲಿ ಸ್ವೀಕರಿಸುವ ಮನೋಧರ್ಮ ಪರಿಶಿಷ್ಟರಲ್ಲಿನ ಬಲಾಢ್ಯರ ಹೊಣೆಗಾರಿಕೆಯಾಗಬೇಕು. ಪರಿಶಿಷ್ಟ ಜಾತಿ ವರ್ಗಗಳಲ್ಲಿಯೇ ಉಳ್ಳವರು, ಔದ್ಯೋಗಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬಲಶಾಲಿಯಾದವರು ಸ್ವಯಂ ನಿರ್ಬಂಧ ಹೇರಿಕೊಂಡು, ಮೊದಲು ಅವಕಾಶ ವಂಚಿತರು ಅವಕಾಶ ಪಡೆದುಕೊಳ್ಳಲಿ ಮಿಕ್ಕಿ ಉಳಿದದ್ದನ್ನ ನಾವು ಪಡೆಯೋಣ ಎಂಬ ವಿವೇಕ ಪಡಮೂಡಿಸಿಕೊಳ್ಳಬೇಕು. ಕಾನೂನು ನಿರ್ಬಂಧಗಳನ್ನ ತಿರಸ್ಕರಿಸಿ ನೈತಿಕವಾಗಿ ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕಾದ್ದು ಎಸ್‌ಸಿ-ಎಸ್‌ಟಿ ಸಮುದಾಯಗಳ ಉಳ್ಳವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರವಾಗಿದೆಯೇ ಹೊರತು ಕೆನೆಪದರವು ಸಂವಿಧಾನ ಇರುವತನಕ, ಜಾತಿವ್ಯವಸ್ಥೆಯಲ್ಲಿ ಅಸ್ಪೃಶ್ಯತೆಯ ಆಚರಣೆ ಜೀವಂತವಾಗಿ ಇರುವ ತನಕ ಯಾವತ್ತಿಗೂ ಜಾರಿಯಾಗಲ್ಲವೆನ್ನುವುದನ್ನ ಮತ್ತೊಮ್ಮೆ ನಾವು ನಾವುಗಳೇ ಮನದಟ್ಟು ಮಾಡಿಕೊಳ್ಳಬೇಕಿದೆ.
***
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಮೀಸಲು ಒಳಮೀಸಲಿನೆಡೆಗಿನ ಅದರ ಕಾಳಜಿ ಮತ್ತು ನಿಷ್ಕಾಳಜಿಗಳು
ಕಳೆದ 77 ವರ್ಷಗಳ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕ ಪರಿಶಿಷ್ಟಜಾತಿ ವರ್ಗ ಹಾಗೂ ಹಿಂದುಳಿದವರಿಗೆ ಮೀಸಲಾತಿ, ಮರುಮೀಸಲಾತಿ, ಒಳಮೀಸಲಾತಿಯಂತಹ ಮೀಸಲು ಪರಿಕಲ್ಪನೆಯ ವಿಕಸಿತ ಆಯಾಮಗಳತ್ತ ನೋಡುವುದಕ್ಕೆ ಪುರುಸೊತ್ತಿರಲಿಲ್ಲವೆಂಬುದು ಗೊತ್ತಾಗುತ್ತದೆ.
ನೆಹರೂ, ಇಂದಿರಾ, ರಾಜೀವರ ಜನಪ್ರಿಯತೆ ಮತ್ತು ವಿಪಕ್ಷಗಳ ಸಂಖ್ಯಾಬಲದ ಕೊರತೆಯ ಲಾಭ ಎತ್ತಿಕೊಂಡ ಕಾಂಗ್ರೆಸ್ ಮೊದಲ ಆರು ದಶಕಗಳ ಕಾಲ ಬಹುತೇಕ ಮುಂದುವರಿದ ಜಾತಿ, ವ್ಯಾಪಾರಿ ವರ್ಗ ಹಾಗೂ ಭೂಮಾಲೀಕ ವರ್ಗದ ಮೂಗಿನ ನೇರಕ್ಕೆ ಹಾಗೂ ಅವರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದರಲ್ಲೇ ಕಾಲಹರಣ ಮಾಡಿದ್ದಕ್ಕೆ ಉದ್ದಕ್ಕೂ ಸಾಕ್ಷ್ಯಗಳು ಸಿಗುತ್ತವೆ.
ಎಸ್‌ಸಿ-ಎಸ್‌ಟಿ ವರ್ಗಕ್ಕೆ ಮೂಲ ಸಂವಿಧಾನದಲ್ಲಿಯೇ ಶೈಕ್ಷಣಿಕ-ಔದ್ಯೋಗಿಕ-ರಾಜಕೀಯ ಮೀಸಲಾತಿಯನ್ನು ಕೊಡಮಾಡಲಾಗಿತ್ತು. ಆದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇಲ್ಲವಾಗಿತ್ತು. ಆದಕಾರಣ ಸಂವಿಧಾನ ರಚನೆಯ ಸಂದರ್ಭದಲ್ಲಿ ಮೀಸಲಾತಿ ಪರಿಕಲ್ಪನೆಯನ್ನು ವಿರೋಧಿಸಿದ್ದ ಹಿಂದುಳಿದ ವರ್ಗಗಳು ಸ್ವತಂತ್ರ ಬಂದು ಒಂದು ದಶಕದ ನಂತರ ಎಚ್ಚೆತ್ತುಕೊಂಡು ಮೀಸಲಾತಿಗಾಗಿ ಹೋರಾಡಲು ಶುರುವಿಟ್ಟುಕೊಂಡವು. ನೆಹರೂರವರ ಕಾಲದಲ್ಲಿ ಹಿಂದುಳಿದವರ ಮೀಸಲಾತಿ ಹೋರಾಟವನ್ನ ತಣಿಸಲು ’ಕಾಕಾ ಕಾಲೇಕರ್’ ಆಯೋಗವನ್ನು ರಚಿಸಿ ಕೈ ತೊಳೆದುಕೊಳ್ಳಲಾಗಿತ್ತು.
ಅದಾದನಂತರ ಇಂದಿರಾ ಯುಗ ಆರಂಭವಾದರೂ ಹಿಂದುಳಿದ ವರ್ಗಗಳ ಮೀಸಲಾತಿ ಕೂಗಿಗೆ ಕಾಂಗ್ರೆಸ್ ಸೊಪ್ಪು ಹಾಕಿರಲಿಲ್ಲ.
ಇಂದಿರಾರ ಎಮರ್ಜೆನ್ಸಿ ಹೇರಿಕೆಯ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರ್ಕಾರ ಬಂದ ಮೇಲೆ ಮೊಟ್ಟಮೊದಲ ಬಾರಿಗೆ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ಸಲುವಾಗಿ 1979ರಲ್ಲಿ ಮಂಡಲ್ ಕಮಿಷನ್ ನೇಮಕ ಮಾಡಲಾಯಿತು. ಮಂಡಲ್ ಕಮಿಷನ್ ಕೇವಲ ಒಂದೇ ವರ್ಷದಲ್ಲಿ ವರದಿ ತಯಾರಿಸಿ ಕೊಟ್ಟಿತು. ಆದರೆ ಮೊರಾರ್ಜಿ ದೇಸಾಯಿ ಸರ್ಕಾರ ಪತನಗೊಂಡು ಮತ್ತೆ ಇಂದಿರಾ ಅಧಿಕಾರಕ್ಕೆ ಬಂದಿದ್ದ ಕಾರಣ ಮಂಡಲ್ ಕಮಿಷನ್ ವರದಿ ಧೂಳು ತಿನ್ನಲು ಆರಂಭಿಸಿತು.
ಇಂದಿರಾರ ಹತ್ಯೆಯ ನಂತರ 404 ಸೀಟುಗಳ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಕೂಡ ಮಂಡಲ್ ಕಮಿಷನ್ ವರದಿಯೆಡೆಗೆ ಕಣ್ಣು ಹಾಯಿಸದೇ ತೆಪ್ಪಗುಳಿಯುತು. ರಾಜೀವರ ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರದ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್‌ರವರು ಅಂತಿಮವಾಗಿ ಮಂಡಲ್ ಕಮಿಷನ್ ವರದಿಯ ಗಂಟನ್ನು ಬಿಚ್ಚಿದರು. ಕಮಿಷನ್ ವರದಿಯನ್ನ ಜಾರಿಗೆ ತಂದರೆ ಮರುಕ್ಷಣವೇ ಅಧಿಕಾರ ಕಳೆದುಕೊಳ್ಳುತ್ತೇನೆನ್ನುವ ಆತಂಕ ಮುತ್ತಿದ್ದರೂ ಹಿಂದೆಮುಂದೆ ನೋಡದೆ ಅಂದಿನ ಪ್ರಧಾನಿ ವಿ.ಪಿ.ಸಿಂಗ್‌ರವರು ವರದಿ ಜಾರಿಗೊಳಿಸಿ ಇತಿಹಾಸ ಬರೆದರು. ಅಧಿಕಾರದಿಂದ ಪದಚ್ಯುತಗೊಂಡರು ಕೂಡ. ಮಂಡಲ್ ವರದಿ ಜಾರಿಯ ನಂತರ ದೇಶಕ್ಕೆ ದೇಶವೇ ಹೊತ್ತಿ ಉರಿಯಿತು.
ಹಿಂದುಳಿದ ವರ್ಗಗಳಲ್ಲೇ ಮಂಡಲ್ ವರದಿಯ ತಪ್ಪು ಕಲ್ಪನೆಗಳನ್ನು ಬಿತ್ತಿದ ಮುಂದುವರಿದ ಜಾತಿಗಳು ಹಿಂದುಳಿದವರೇ ಪರಸ್ಪರರು ಗೊಂದಲಕ್ಕೆ ಬಿದ್ದು ಕಿತ್ತಾಡುವಂತೆ ಮಾಡಿದರು. ತಮ್ಮ ಹಿತಕಾಯಲು ಜಾರಿಗೆ ಬಂದಿದ್ದ ಮಂಡಲ್ ವರದಿಯನ್ನ ಕೆಲವೆಡೆ ತಿಳಿವಳಿಕೆಯಿಲ್ಲದ ಹಿಂದುಳಿದ ವರ್ಗಗಳ ಜನಸಾಮಾನ್ಯರೇ ವಿರೋಧಿಸಿ ಆತ್ಮಾಹುತಿಗೆ ತುತ್ತಾದ ವಿಪರ್ಯಾಸದ ಇತಿಹಾಸ ಈ ದೇಶದ್ದಾಯಿತು.
32 ವರ್ಷಗಳ ಹಿಂದೆಯೇ ಜಾತಿಗಣತಿಗೆ ನೇರವಾಗಿ ಒತ್ತಾಯಿಸಿದ್ದ ಇಂದ್ರಾಸಾಹ್ನಿ ವರ್ಸಸ್ ಭಾರತ ಒಕ್ಕೂಟ ಸರ್ಕಾರ ಪ್ರಕರಣದ ತೀರ್ಪಿನ ಬಳಿಕವೂ ಎಚ್ಚೆತ್ತುಕೊಳ್ಳದ ಕಾಂಗ್ರೆಸ್ ಜಾತಿಗಣತಿಗೆ ಮುಂದಾಗದೇ ತನ್ನ ಕಾಲ ಮೇಲೆ ತಾನೇ ಕಲ್ಲುಹಾಕಿಕೊಳ್ಳುವ ಚಾಳಿಯನ್ನ ಮುಂದುವರೆಸಿತು.
***
ವಾಜಪೇಯಿ ಕಾಲದಲ್ಲಿ 5 ವರ್ಷ ಮತ್ತು ಮೋದಿಯವರ ನೇತೃತ್ವದಲ್ಲಿ 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಪ್ರಗತಿಪರ, ಕಾಂಗ್ರೆಸ್ಸು-ಎಡಪಂಥೀಯರಾದಿಯಾಗಿ ಪ್ರಾದೇಶಿಕ ಪಕ್ಷಗಳ ನೇತಾರರೆಲ್ಲರೂ ನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಹರಿಹಾಯುತ್ತಿರುತ್ತಾರೆ.
ಬಿಜೆಪಿ ಪಕ್ಷ ಸಂವಿಧಾನ ವಿರೋಧಿಯೆಂತಲೂ, ಹಿಂದಳಿದವರು, ದಲಿತರ ವಿರೋಧಿಯೆಂತಲೂ ಮೇಲಿಂದಮೇಲೆ ಆರೋಪಗಳ ಚಾಟಿಗಳನ್ನ ಬೀಸುತ್ತಲೇ ಹೋಗುತ್ತೇವೆ. ಬಿಜೆಪಿಯನ್ನ ತರಾಟೆಗೆ ತೆಗೆದುಕೊಳ್ಳುವ ಮುನ್ನ ಈಗ ಬಿಜೆಪಿ ವಿರುದ್ಧ ಆರ್ಭಟಿಸುತ್ತಿರುವ ರಾಷ್ಟ್ರೀಯ ಪಕ್ಷಗಳಿಂದ ಶುರುವಾಗಿ ಪ್ರಾದೇಶಿಕ-ಎಡಪಕ್ಷಗಳ ತನಕ ಸಂವಿಧಾನ, ಮೀಸಲಾತಿಯನ್ನು ಉಳಿಸಲು ರಚನಾತ್ಮಕವಾಗಿ ಅವರುಗಳು ಮಾಡಿದ ಮಹತ್ಕಾರ್ಯಗಳೇನು? ಇಟ್ಟ ದಿಟ್ಟ ಹೆಜ್ಜೆಗಳಾವುವು ಎಂದು ಪ್ರಶ್ನಿಸಿಕೊಂಡರೇ ಸಿಗುವ ಉತ್ತರ ನಿರಾಶಾದಾಯಕವಾಗಿರುತ್ತದೆ.
ಬಿಜೆಪಿ ಒಂದೆಡೆ ಕೋಮು ಧ್ರುವೀಕರಣದ ಸ್ವಚ್ಛಂದ ಆಟಗಳನ್ನ ಆಡುತ್ತಲೇ ಮತ್ತೊಂದೆಡೆ ಜಾತಿಜಾತಿಗಳ ನಡುವಿನ ತಾರತಮ್ಯ, ಶೋಷಣೆ, ಹಿಂದುಳಿವಿಕೆಯನ್ನು ರಾಜಕೀಯವಾಗಿ ಗುರುತಿಸುತ್ತಾ, ತನ್ನ ರಾಜಕೀಯಕ್ಕೆ ಪೂರಕವಾದ ಸೋಷಿಯಲ್ ಇಂಜಿನಿಯರಿಂಗ್ ಮಾಡುತ್ತಾ ಚುನಾವಣೆಗಳನ್ನು ಗೆದ್ದುಕೊಂಡು ಬಂದಿದೆ. ಉತ್ತರ ಪ್ರದೇಶ-ಮಧ್ಯಪ್ರದೇಶ-ಬಿಹಾರದಂತಹ ಮಂಡಲ್ ಚಾಂಪಿಯನ್‌ಗಳಾದ ಲಾಲೂ-ಮುಲಾಯಂ-ಕಾನ್ಶಿರಾಂ-ಮಾಯಾವತಿಯರನ್ನು ಮಣ್ಣುಮುಕ್ಕಿಸಿ ಆ ರಾಜ್ಯಗಳಲ್ಲಿ ಅಧಿಕಾರವನ್ನು ಕಬ್ಜಾ ಮಾಡಿಕೊಂಡು ಬಂದಿದೆ. ಅಷ್ಟಲ್ಲದೇ ಅಲ್ಲೆಲ್ಲ ಕಾಂಗ್ರೆಸ್ಸು ಬಹುತೇಕ ನಿರ್ನಾಮವಾಗಿದೆ, ಇಲ್ಲವೇ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಅಂದರೆ ಕಾಂಗ್ರೆಸ್ ಮತ್ತು ಮಂಡಲ್ ಚಾಂಪಿಯನ್‌ಗಳು ಹಾಗೂ ದಲಿತ ನಾಯಕರು ಒಂದೆರಡು ಬಹುಸಂಖ್ಯಾತ ಜಾತಿಗಳ ಕೆಮಿಸ್ಟ್ರಿಯನ್ನ ಮಾತ್ರ ಕಾಪಿಟ್ಟುಕೊಂಡು ರಾಜಕಾರಣ ಮಾಡುತ್ತಾ ದಾಢಸಿಗಳಾಗಿ ಹೋದದ್ದನ್ನ ಕಂಡ ಬಿಜೆಪಿ, ಈ ಮಂಡಲ್ ಹಾಗೂ ದಲಿತ ನೇತಾರರ ದೀಪದ ಕೆಳಗಿನ ಕತ್ತಲಲ್ಲಿ ಅವಿತಿದ್ದ ಅಲಕ್ಷಿತ ಸಮುದಾಯಗಳನ್ನ ನೇರವಾಗಿ ಅಡ್ರೆಸ್ ಮಾಡುತ್ತಾ ಬಂದದ್ದರಿಂದ ಬಿಜೆಪಿ ಅತಿ ಹಿಂದುಳಿದವರು ಹಾಗೂ ದಲಿತರಿಂದಲೇ ಶೋಷಣೆಗೆ ತುತ್ತಾದ ಒಂದು ವರ್ಗದ ದಲಿತರನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿತು.
ಅಷ್ಟಲ್ಲದೇ ಅವರನ್ನ ಜೊತೆಗಿಟ್ಟುಕೊಂಡು ಮುಂದುವರಿದ ಬ್ರಾಹ್ಮಣ, ಬನಿಯಾ, ಠಾಕೂರ್‌ಗಳ ಜೊತೆ ಬೆಸೆದು ಕಟ್ಟಿದ ರಾಜಕೀಯಕ್ಕೆ ಕೋಮು ಧ್ರುವೀಕರಣವೂ ಬೋನಸ್ ಆಗಿದ್ದರಿಂದ ಕೊನೆಗೆ ಬಿಜೆಪಿ ಬಲಾಢ್ಯ ಸ್ಥಿತಿಯನ್ನ ತಲುಪಿತು. ಇದನ್ನು ಒಪ್ಪಿಕೊಳ್ಳಲು ಮತ್ತು ನಿಜವನ್ನು ಅರಗಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಈಗಲೂ ತಯಾರಿದ್ದಂತೆ ಕಾಣುವುದಿಲ್ಲ. ಮುಂದುವರಿದ ಜಾತಿಗಳು ಹಾಗೂ ಬಲಿತ-ದಲಿತರ ಕಪಿಮುಷ್ಠಿಯಲ್ಲಿಯೇ ಈಗಲೂ ಸಿಲುಕಿರುವ ಕಾಂಗ್ರೆಸ್ ಶೋಷಿತ ಜಾತಿಗಳ ಬವಣೆಗಳನ್ನು ಅಡ್ರೆಸ್ ಮಾಡಲು ಮುಂದಾಗುತ್ತಿಲ್ಲ.
ಸಂವಿಧಾನ ರಕ್ಷಿಸುವ ಹಾಗೂ ಜಾತಿಗಣತಿ ಮೂಲಕ ಎಲ್ಲರಿಗೂ ಮೀಸಲು ಪ್ರಾತಿನಿಧ್ಯ ಕಲ್ಪಿಸುವ ಮಾತನಾಡುವ ಕಾಂಗ್ರೆಸ್ ಈಗ ಜಾತಿಗಣತಿಗೆ ಎರಡನೇ ಬಾರಿ ಓಂಕಾರ ಬರೆದಿರುವ ಸುಪ್ರೀಂಕೋರ್ಟ್‌ನ ತೀರ್ಪನ್ನು ತುಂಬು ಹೃದಯದಿಂದ ಸ್ವಾಗತಿಸಬೇಕಿತ್ತು. ಆದರೆ ಕಾಂಗ್ರೆಸ್ ಬೇರೆ ತರವೇ ಆಟವಾಡುತ್ತಿದೆ.
ಕಾಂಗ್ರೆಸ್ ಕಥೆ ಒತ್ತಟ್ಟಿಗಿರಲಿ.. ಬಿಹಾರದಂತಹ ಫ್ಯೂಡಲ್‌ಗಳ ಅಡ್ಡೆಯಲ್ಲಿ ಜಾತಿಗಣತಿ ಮಾಡಿಸಿ ವರದಿ ಲೋಕಾರ್ಪಣೆಗೊಳಿಸಿದ ನಿತೀಶ್‌ಕುಮಾರ್ ತೋರಿದ ಧೈರ್ಯವನ್ನು ತೋರುವುದು ಬಿಡಿ; ಕರ್ನಾಟಕದ ಬ್ಯಾಕ್‌ವರ್ಡ್ಸ್ ಚಾಂಪಿಯನ್ ಎಂದೇ ಖ್ಯಾತನಾಮರಾದ ಸಿದ್ದರಾಮಯ್ಯ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಕಾಂತರಾಜು ಆಯೋಗದ ವರದಿಯನ್ನ ಬಿಚ್ಚಲು ರೆಡಿಯಿಲ್ಲವೆಂದರೇ ಕಾಂಗ್ರೆಸ್ ಅದೆಷ್ಟು ಪ್ರಮತ್ತ ಸ್ಥಿತಿಗೆ ಹೋಗಿದೆಯೆಂಬುದು ಅರ್ಥವಾಗುತ್ತದೆ.
ಹೈಕಮಾಂಡ್ ಕೂಡ ಮೊದಲು ಕರ್ನಾಟಕದ ಜಾತಿಗಣತಿ ಬಿಡುಗಡೆ ಮಾಡಿ ಉಳಿದದ್ದನ್ನ ನೋಡಿಕೊಳ್ಳುವ ಎಂಬ ನಿಲುವಿಗೆ ಬಂದು ಸಿದ್ದರಾಮಯ್ಯನವರಿಗೆ ಒತ್ತಡ ಹಾಕುತ್ತಿಲ್ಲ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಬಡವರಿಂದಲೇ ಅಸ್ತಿತ್ವಕ್ಕೆ ಬಂದ ಕರ್ನಾಟಕ ಸರ್ಕಾರ ಇಲ್ಲೀತನಕ ಎರಡು ಪ್ರಮುಖ ಮುಂದುವರಿದ ಜಾತಿಗಳ ಇಶಾರೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದೆಯೆಂಬ ಆರೋಪ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಕೇಳಿಬರುತ್ತಿದೆ. ಜಾತಿಗಣತಿ ವರದಿ ಬಿಡುಗಡೆಗೆ ಸ್ವತಃ ಕಾಂಗ್ರೆಸ್ ಸರ್ಕಾರದ ಡಿಸಿಎಂ ಹಾಗೂ ಲಿಂಗಾಯತ ಸಮುದಾಯದ ಮಂತ್ರಿಗಳೇ ಅಡ್ಡಗಾಲು ಹಾಕಿ ಬಹಿರಂಗವಾಗಿ ಗುಟುರು ಹಾಕುತ್ತಿದ್ದರೂ ಕಳೆದೊಂದು ವರ್ಷದಿಂದ ದೇಶಾದ್ಯಂತ ಜಾತಿಗಣತಿ ಆಗಬೇಕೆಂದು ಪ್ರತಿಪಾದಿಸುತ್ತಿರುವ ರಾಹುಲ್ ಗಾಂಧಿಯವರಾಗಲಿ, ಎಐಸಿಸಿ ಅಧ್ಯಕ್ಷ ಖರ್ಗೆಯವರಾಗಲಿ ಇಲ್ಲಿ ಮಾತಾಡುತ್ತಿಲ್ಲ. ಮುಂದುವರಿದ ಜಾತಿಗಳ ಬ್ಲಾಕ್‌ಮೇಲ್‌ಅನ್ನು ಹತ್ತಿಕ್ಕಿ ಸಾಮಾಜಿಕ ನ್ಯಾಯ ಕಲ್ಪಿಸುವ ಕಾಂತರಾಜು ವರದಿ ಬಿಡುಗಡೆಗೆ ಒತ್ತಾಸೆಯಾಗಿ ನಿಲ್ಲುತ್ತಿಲ್ಲ.
ಇಷ್ಟಲ್ಲದೇ ಸ್ವತಃ ಎಐಸಿಸಿ ಅಧ್ಯಕ್ಷರೇ ಪರಿಶಿಷ್ಟರ ಒಳಮೀಸಲು ವಿರೋಧಿಯಾಗಿದ್ದಾರೆಂದು ತೆಲಂಗಾಣದ ಎಂಆರ್‌ಪಿಎಸ್‌ನ ರಾಷ್ಟ್ರೀಯ ನಾಯಕ ಮಂದಕೃಷ್ಣ ಮಾದಿಗ ಮಾಡುತ್ತಿರುವ ಸತತ ಆರೋಪಗಳಿಗೆ ಎಐಸಿಸಿಯು ಸಣ್ಣ ಸ್ಪಷ್ಟನೆಯನ್ನೂ ಕೊಡುತ್ತಿಲ್ಲ.
ಹೆಸರಿಗಷ್ಟೇ ದಲಿತ ನಾಯಕ ಆದರೆ ಅಸೆಂಬ್ಲಿ-ಪಾರ್ಲಿಮೆಂಟ್ ಕ್ಷೇತ್ರಗಳಲ್ಲಿ ಬಹುಸಂಖ್ಯಾತರಾಗಿರುವ ಮಾದಿಗರಿಗೆ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಅರ್ಹ ಪ್ರಾತಿನಿಧ್ಯ ನೀಡುವ ಪ್ರಾಮಾಣಿಕತೆಯನ್ನು ಮೆರೆಯುತ್ತಿಲ್ಲ ಎಂಬ ಖರ್ಗೆಯವರ ವಿರುದ್ಧದ ಆರೋಪಕ್ಕೂ ಕಾಂಗ್ರೆಸ್ ಬಳಿ ಉತ್ತರವಿಲ್ಲವೆಂಬಂತಾಗಿದೆ.
ಕಾಂಗ್ರೆಸ್ ಪರಿಶಿಷ್ಟ ಜಾತಿಯ ಒಳಮೀಸಲು ಹಾಗೂ ರಾಜಕೀಯ ಪ್ರಾತಿನಿಧ್ಯಗಳಲ್ಲಿ ಅನ್ಯಾಯವೆಸಗುತ್ತಿದೆಯೆಂಬ ಆಕ್ರೋಶಕ್ಕೆ ತುತ್ತಾಗಿಯೇ 2008ರಲ್ಲಿ ಹಾಗೂ 2018ರಲ್ಲಿ ಅಧಿಕಾರ ಕಳೆದುಕೊಳ್ಳುವಂತಾದರೂ ಪರಿಶಿಷ್ಟ ಜಾತಿಗಳಲ್ಲಿನ ಒಳಪಂಗಡಗಳ ಸಮಸ್ಯೆಯನ್ನ ಕೂತು ಬಗೆಹರಿಸದೇ ಬಲಿತ ದಲಿತರ ಪರವಾಗಿಯೇ ನಿಲ್ಲುತ್ತಿದೆಯೆಂಬ ಆರೋಪದ ಕೊಳೆ ತೊಳೆದುಕೊಳ್ಳಲು ಕಾಂಗ್ರೆಸ್ ಈಗಲೂ ಸಿದ್ಧವಿಲ್ಲವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇಂತಹ ಆರೋಪಗಳು ಈಗಲೂ ಕೇಳಿಬರುತ್ತಿವೆ, ಇದಕ್ಕೆ ಪೂರಕವಾಗಿ ಒಳಮೀಸಲಾತಿಯ ಐತಿಹಾಸಿಕ ವರ್ಡಿಕ್ಟ್ ಬಂದ ನಂತರ ಎಐಸಿಸಿ ನಾಯಕರಾಗಲಿ ಹಾಗೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವಾಗಲಿ ಎದೆಯಾಳದಿಂದ ತೀರ್ಪನ್ನು ಸ್ವಾಗತಿಸಿ ಕ್ರಮಕೈಗೊಳ್ಳಲು ಮುಂದಾಗದಿರುವುದು ಕಾಂಗ್ರೆಸ್ ತಾನು ಹಲವು ದಶಕಗಳ ಕಾಲದಿಂದಲೂ ತಾಳಿಕೊಂಡು ಎಡಬಿಡಂಗಿ ನಿಲುವು ಎಂತಹುದೆಂಬುದಕ್ಕೆ ಸಾಕ್ಷಿಯಾಗಿವೆ.
***
ಬಿಜೆಪಿಯ ಪ್ರಳಯಾಂತಕ ಆಟವೇನು? ಅಸಲಿ ಕಾಳಜಿಗಳೇನು?
ಕೇಂದ್ರದಲ್ಲಾಗಲಿ ರಾಜ್ಯದಲ್ಲಾಗಲಿ ಬಿಜೆಪಿ ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ಆರೋಪಗಳಿಗೆ ತಕ್ಕನಾಗಿ ಜಾತಿಗಣತಿ ವಿರೋಧಿಸುವ ಬಿಜೆಪಿ ಒಳಮೀಸಲಾತಿ ವರ್ಡಿಕ್ಟ್ ಬರುವ ಮುನ್ನ ತಾನು ಒಳಮೀಸಲು ಪರವಾಗಿ ಇದ್ದೇನೆಂದು ಸಾಲಿಸಿಟರ್ ಜನರಲ್ ಮೂಲಕ ತನ್ನ ಹೇಳಿಕೆಯನ್ನ ನ್ಯಾಯಾಲಯದಲ್ಲಿ ಖಚಿತವಾಗಿ ದೃಢಪಡಿಸಿ, ಒಳಮೀಸಲಾತಿ ಪರವಾಗಿ ಬಂದ ವರ್ಡಿಕ್ಟ್‌ನ್ನು ಸ್ವಾಗತಿಸಿ ಮೀಸಲು ವಂಚಿತರ ಪರವಾಗಿ ನಾನಿದ್ದೇನೆನ್ನುವ ಸ್ಪಷ್ಟ ರಾಜಕೀಯ ಸಂದೇಶವನ್ನ ರವಾನಿಸುತ್ತದೆ. ನಮಗೆ ಜಾತಿಗಳು ಮುಖ್ಯವಲ್ಲ ಹಿಂದೂ ಧರ್ಮ ಮಾತ್ರ ಮುಖ್ಯ ಎಂದು ಹೇಳುವ ಬಿಜೆಪಿ ಎಲ್ಲ ಮುಂದುವರಿದ, ಹಿಂದುಳಿದ, ದಲಿತ, ಶೋಷಿತ ಜಾತಿಗಳಲ್ಲಿರುವ ಒಳಪಂಗಡಗಳಲ್ಲಿನ ಕಿತ್ತಾಟ, ತಾರತಮ್ಯವನ್ನು ಅಚ್ಚುಕಟ್ಟಾಗಿ ಗುರುತಿಸಿ ಮುಲಾಮು ಹಚ್ಚುವ ಕಡೆ ಮುಲಾಮು ಹಚ್ಚಿ ಶಸ್ತ್ರಚಿಕಿತ್ಸೆ ಮಾಡುವ ಕಡೆ ಮುಲಾಜಿಲ್ಲದೇ ಕತ್ತರಿಯನ್ನ ಬಳಸಿ ಆಪರೇಷನ್‌ಗೈಯುತ್ತಾ ರಾಜಕೀಯ ಅಸ್ತಿತ್ವವನ್ನು ಈಗಲೂ ಗಟ್ಟಿಯಾಗಿ ಕಾಯ್ದುಕೊಂಡಿದೆ.
ಇಂದ್ರಾಸಾಹ್ನಿ ಪ್ರಕರಣದ ಆದೇಶದ ತಿರುಳನ್ನ ಚೆನ್ನಾಗಿ ಬಲ್ಲ ಬಿಜೆಪಿ ಪಕ್ಷವು ವಿವಿಧ ರಾಜ್ಯಗಳ ಒಳಮೀಸಲಾತಿ ಬೇಡಿಕೆಯನ್ನು ಬಹಿರಂಗವಾಗಿ ಪುರಸ್ಕರಿಸಿದರೂ, ಒಳಮೀಸಲಾತಿಗೆ 13ರಿಂದ 14 ರಾಜ್ಯಗಳು ವಿರೋಧಿಸಿರುವುದನ್ನ ಟ್ಯಾಕ್ಟಿಕಲ್ ಆಗಿ ಹ್ಯಾಂಡಲ್ ಮಾಡುವ ಸಲುವಾಗಿ, ಬಹುಮತವಿದ್ದರೂ ಆರ್ಟಿಕಲ್ 341 ತಿದ್ದುಪಡಿಗೆ ಕೈಹಾಕಲು ಹೋಗದೇ, ನ್ಯಾಯಾಲಯದ ಅಂಗಳಕ್ಕೆ ಚೆಂಡನ್ನು ಹೊಡೆದು, ತೀರ್ಪಿನ ಬೆನ್ನಿಗೆ ನಿಂತು ಒಳಮೀಸಲು ವಿರೋಧಿಗಳು ಹಾಗೂ ಒಳಮೀಸಲಾತಿ ಪರವಾಗಿರುವ ಅಷ್ಟೂ ಸಮುದಾಯಗಳನ್ನ ಏಕಕಾಲದಲ್ಲಿ ಚಿತ್ ಮಾಡುತ್ತದೆ. ಉತ್ತರ ಭಾರತದಲ್ಲಿ ಮಾಯಾವತಿ, ಪಾಸ್ವಾನ್, ಚಂದ್ರಶೇಖರ್ ರಾವಣ್‌ರಂತವರು ಸ್ವಂತ ಪಕ್ಷ ಕಟ್ಟಿ, ತಮ್ಮ ಉಪಜಾತಿಯ ರಾಜಕೀಯ ಬಲವನ್ನ ಕಬ್ಜಾ ಮಾಡಿಕೊಳ್ಳುವುದರಿಂದ, ಅವರ ಪರ ನಿಂತರೇ ತನಗೆ ಯಾವ ಪ್ರಯೋಜನವೂ ಇಲ್ಲ ಎಂಬುದನ್ನ ಚೆನ್ನಾಗಿ ಅರಿತಿರುವ ಬಿಜೆಪಿ ಪಕ್ಷ, ಆ ಎಲ್ಲ ಬಲಿತ ದಲಿತರ ಜಾತಿಗಳಿಂದ ತುಳಿತಕ್ಕೊಳಗಾಗಿ ಅವರಿಂದ ರಾಜಕೀಯವಾಗಿ ದೂರ ಸರಿದಿರುವ ಹಾಗೂ ಒಳಮೀಸಲು ವಂಚಿತ ಸಮುದಾಯಗಳ ಮತಬ್ಯಾಂಕನ್ನು ತನ್ನ ಪರವಾಗಿ ಕನ್ಸಾಲಿಡೇಟ್ ಮಾಡಿಕೊಳ್ಳುವ ಸಲುವಾಗಿ, ಅವರು ರಾಜಕೀಯ ಮಿತ್ರರಾಗಲಿ, ಶತ್ರುವೇ ಆಗಿರಲಿ ಮುಲಾಜಿಲ್ಲದೇ ಎದುರುಹಾಕಿಕೊಳ್ಳುತ್ತದೆ.
***
ಕರ್ನಾಟಕದಲ್ಲಿ ಒಳಮೀಸಲು ಹೋರಾಟಕ್ಕೆ ಬಲ ತುಂಬಿತೆ ಬಿಜೆಪಿ-ಆರೆಸ್ಸೆಸ್?!
ಆಂಧ್ರ-ತೆಲಂಗಾಣದಲ್ಲಿ ಎಂಆರ್‌ಪಿಎಸ್ ನಾಯಕ ಮಂದಕೃಷ್ಣ ಮಾದಿಗರ ನೇತೃತ್ವದಲ್ಲಿ ಒಳಮೀಸಲಾತಿ ಚಳವಳಿ ಕಾಲಕಾಲಕ್ಕೆ ಟಿಡಿಪಿಯ ಚಂದ್ರಬಾಬು ನಾಯ್ಡು, ಕಾಂಗ್ರೆಸ್‌ನ ದಿ.ರಾಜಶೇಖರ ರೆಡ್ಡಿ, ಟಿಆರ್‌ಎಸ್‌ನ ಚಂದ್ರಶೇಖರ್ ರಾವ್‌ರಿಂದ ಬಲ ಪಡೆದು ಹೋರಾಟವನ್ನು ಬಲಗೊಳಿಸುತ್ತಾ ಹೋದರೆ, ಕರ್ನಾಟಕದಲ್ಲಿ ಒಳಮೀಸಲು ಜನಚಳವಳಿಗೆ ಬಲತುಂಬಿದ್ದು ಬಿಜೆಪಿ ಆರೆಸ್ಸೆಸ್ ಎಂಬುದನ್ನ ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ಧರ್ಮಸಿಂಗ್ ನೇತೃತ್ವದ ಸರ್ಕಾರ ಸದಾಶಿವ ಕಮಿಷನ್ ಮಾಡಿ ಕೈತೊಳೆದುಕೊಂಡದ್ದು, ನಂತರ 2016ರಲ್ಲಿ ಹುಬ್ಬಳ್ಳಿಯ ಮಾದಿಗರ ಸಮಾವೇಶಕ್ಕೆ ಮೊದಲ ಬಾರಿ ಸಿಎಂ ಆಗಿದ್ದ ಸಿದ್ದರಾಮಯ್ಯ ಬಂದು ಹೋಗಿದ್ದಷ್ಟೇ ಒಳಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಾತ್ರ ಸೀಮಿತಗೊಳ್ಳುತ್ತದೆ. ಆದರೆ ಬಿಜೆಪಿ 2008ರಲ್ಲಿ ಅಧಿಕಾರಕ್ಕೆ ಬಂದತಕ್ಷಣ ರಾಜೀನಾಮೆ ನೀಡಲು ಮುಂದಾಗಿದ್ದ ಸದಾಶಿವರನ್ನು ಮನವೊಲಿಸಿ ಅವರಿಗೆ ಆಫೀಸು ಮಾಡಿಕೊಟ್ಟು, ಸಮೀಕ್ಷೆಗೆ 11 ಕೋಟಿ ಬಿಡುಗಡೆ ಮಾಡುತ್ತದೆ. ನಂತರ 2012ರಲ್ಲಿ ಸದಾಶಿವ ವರದಿಯನ್ನ ಸ್ವೀಕರಿಸಿಬಿಡುತ್ತದೆ.
2018ರಲ್ಲಿ ಸಿದ್ದರಾಮಯ್ಯ ಸರ್ಕಾರ ಖರ್ಗೆಯವರಿಗೆ ಭಯಪಟ್ಟುಕೊಂಡು ಒಳಮೀಸಲು ಶಿಫಾರಸ್ಸು ಮಾಡದೇ ಹೋದಾಗ ಬಿಜೆಪಿ ಮತ್ತೆ ಹೋರಾಟವನ್ನು ಭುಗಿಲೇಳಿಸಿ ಕಾಂಗ್ರೆಸ್‌ಗೆ ಪುನಃ ಮ್ಯಾಂಡೇಟ್ ಸಿಗದಂತೆ ನೋಡಿಕೊಂಡು ತನ್ನ ಸೀಟುಗಳ ಸಂಖ್ಯಾಬಲವನ್ನು 104ಕ್ಕೆ ಹೆಚ್ಚಿಸಿಕೊಳ್ಳುತ್ತದೆ.
ಇದಾದಮೇಲೆ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದು 2023ರಲ್ಲಿ ಅಧಿಕಾರದಿಂದ ನಿರ್ಗಮಿಸುವ ಮುನ್ನ ಸದಾಶಿವ ವರದಿಯನ್ನ ತಿರಸ್ಕರಿಸಿದರೂ ಅದರೊಳಗಿನ ಡಾಟಾ ಬಳಸಿ, ನಾಗಮೋಹನದಾಸ್ ವರದಿ ಆಧರಿಸಿ ಎರಡು ಪರ್ಸೆಂಟ್ ಪರಿಶಿಷ್ಟರ ಕೋಟಾ ಹೆಚ್ಚಿಸಿ ಒಳಮೀಸಲು ಶಿಫಾರಸ್ಸು-ಜಾರಿ ಎರಡನ್ನೂ ಏಕಕಾಲಕ್ಕೆ ಮಾಡಿ ನಿರ್ಣಯ ಕೈಗೊಳ್ಳುತ್ತೆ. ಇಷ್ಟಾದರೂ ಆಗಿನ ಗೊಂದಲಮಯ ವಾತಾವರಣ ಹಾಗೂ ಬಿಜೆಪಿ ಆಡಳಿತ ವಿರೋಧಿ ಅಲೆಯಲ್ಲಿ ಸೇರಿಹೋಗುವ ಮಾದಿಗ ಸಮುದಾಯ 2023ರಲ್ಲಿ ಬಿಜೆಪಿಗೆ ಭರ್ಜರಿಯಾಗಿ ಹೊಡೆತಕೊಟ್ಟು 104ರಿಂದ 66ಕ್ಕೆ ಕುಸಿಯುವಂತೆ ಮಾಡುವಲ್ಲಿ ತನ್ನ ಕೊಡುಗೆ ಕೊಟ್ಟರೂ, ಛಲಬಿಡದ ಆರೆಸ್ಸೆಸ್ 2024ರ ಪಾರ್ಲಿಮೆಂಟ್ ಚುನಾವಣೆಗೂ ಮುನ್ನ ’ಮಾದಿಗ ಮುನ್ನಡೆ’ ಎಂಬ ಕಾರ್ಯಕ್ರಮಗಳನ್ನ ಬಹಿರಂಗವಾಗಿ ಆಯೋಜಿಸುತ್ತದೆ. ಒಳಮೀಸಲು ವರ್ಡಿಕ್ಟ್ ಬರುವ ಮುನ್ನವೇ ಮಾದಿಗರ ವಿಶ್ವಾಸ ಗಳಿಸುವತ್ತ ರಾಜಕೀಯ ದಾಳವನ್ನ ಮತ್ತೆಮತ್ತೆ ಉರುಳಿಸುತ್ತದೆ. ಮೀಸಲು ಕ್ಷೇತ್ರಗಳಲ್ಲಿ ಮಾದಿಗರು ಬಿಜೆಪಿಗೆ ದೊಡ್ಡದಾಗಿ ಕೈಹಿಡಿಯದೇ ಹೋದರೂ, ಮೇಲಿನ ಕಾರಣಗಳಿಗಾಗಿ ಸಾಮಾನ್ಯ ಕ್ಷೇತ್ರಗಳಲ್ಲಿ ಭಾಗಶಃ ಮಾದಿಗ ಮತಗಳನ್ನ ಪಡೆವ ಬಿಜೆಪಿ 3 ಎಸ್ಸಿ ಸೀಟುಗಳ ಜೊತೆಗೆ ಒಟ್ಟು 17 ಸೀಟುಗಳನ್ನು ಗೆಲ್ಲುತ್ತದೆ. ನೆಲೆಯಿಲ್ಲದಿದ್ದ ತೆಲಂಗಾಣದಲ್ಲಿ ಮಾದಿಗರ ಬಲದ ಮೇಲೆ 16 ರಲ್ಲಿ 8 ಸೀಟುಗಳನ್ನ ಕಬ್ಜಾ ಮಾಡಿಕೊಳ್ಳುತ್ತದೆ.
***
ತೆಲಂಗಾಣದ ಒಳಮೀಸಲು ಬೃಹತ್ ಸಮಾವೇಶಕ್ಕೆ ಖುದ್ದು ಬಂದ ಪ್ರಧಾನಿ ಮೋದಿ- ದಲಿತರ ಭರಪೂರ ಮತಗಳಿಂದಲೇ ಮುಖ್ಯಮಂತ್ರಿಯಾದರೂ ಒಳಮೀಸಲು ಹೋರಾಟದ ಅಂಗಳಕ್ಕೆ ಕಾಲಿಡದ ’ದಲಿತ’ರಾಮಯ್ಯ
ಅಖಿಲ ಭಾರತ ಮಟ್ಟದಲ್ಲಾಗಲಿ, ರಾಜ್ಯಗಳ ಮಟ್ಟದಲ್ಲಾಗಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ಹಾಗೂ ಅಧಿಕಾರಸ್ಥರು ಯಾವತ್ತೂ ಡೋಲಾಯಮಾನವಾಗಿಯೇ ಉಳಿಯುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ನೀಡಬೇಕೆಂದರೆ ಒಂದು ಸಂಪುಟವನ್ನೇ ಬರೆಯಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ನಿಜಕ್ಕೂ ತುಸು ತಲೆ ಓಡಿಸಿದ್ದರೂ ಸಾಕಿತ್ತು ಆಗಸ್ಟ್ 1ರ ವರ್ಡಿಕ್ಟ್‌ಅನ್ನು ಬಿಜೆಪಿ ವಿರುದ್ಧದ ರಾಜಕೀಯ ಪ್ರತ್ಯಾಸ್ತ್ರವನ್ನಾಗಿಸಿಕೊಳ್ಳಬಹುದಿತ್ತು. ಅದು ಹೇಗೆಂದರೇ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಉಪವರ್ಗೀಕರಣಕ್ಕೆ ನ್ಯಾಯಾಲಯ ಅಸ್ತು ಅಂದಮೇಲೆ ಅದಕ್ಕೆ ಪೂರಕ ಜಾತಿಗಣತಿ ಡಾಟಾ ಬೇಕಾಗುತ್ತದೆ. ಆದರೆ ನಾಲ್ಕೈದು ರಾಜ್ಯಗಳ ಬಳಿ ಬಿಟ್ಟರೇ ಇಡೀ ದೇಶದ ಡಾಟಾ ಕೇಂದ್ರದ ಕೈಯಲ್ಲಿ ಇಲ್ಲ. ಹಾಗಾಗಿ ರಾಹುಲ್ ಗಾಂಧಿಯವರಾಗಲಿ, ಖರ್ಗೆಯವರಾಗಲಿ ವರ್ಡಿಕ್ಟ್ ಹೊರಬಿದ್ದ ಮರುಗಳಿಗೆಯಲ್ಲೇ ತೀರ್ಪನ್ನ ದೊಡ್ಡದಾಗಿ ಸ್ವಾಗತಿಸಿ, ಸೆಲಬ್ರೇಟ್ ಮಾಡಿ, ಇದು ಐತಿಹಾಸಿಕ ತೀರ್ಪೆಂದು ಬಗೆದು; ಸ್ವತಃ ಸುಪ್ರೀಂಕೋರ್ಟ್ ಜಾತಿಗಣತಿ ಮಾಡಿ ಅದರ ಡಾಟಾಗಳನ್ನಿಟ್ಟುಕೊಂಡು ಹಿಂದುಳಿದವರು ಪರಿಶಿಷ್ಟರನ್ನ ಉಪ-ವರ್ಗೀಕರಿಸಿ ಎಂದು ಹೇಳಿದೆ ಹಾಗಾಗಿ ಕಾಂಗ್ರೆಸ್ ಪಕ್ಷದ ಚುನಾವಣಾ ನಿಲುವನ್ನೇ ನ್ಯಾಯಾಲಯ ಎತ್ತಿ ಹಿಡಿದಿದೆಯೆಂದು ಮೋದಿ ಸರ್ಕಾರವನ್ನ ಪೇಚಿಗೆ ಸಿಲುಕಿಸಬಹುದಿತ್ತು. ಹಾಗೂ ಮೀಸಲುವಂಚಿತ ಪರಿಶಿಷ್ಟ ಜಾತಿ-ವರ್ಗಗಳ ಮನಸ್ಸಲ್ಲಿ ಶಾಶ್ವತವಾಗಿ ಜಾಗ ಮಾಡಿಕೊಳ್ಳಬಹುದಿತ್ತು. ಆದರೆ ಆ ರೀತಿ ಆಗಲಿಲ್ಲ!
ಕಾಂಗ್ರೆಸ್‌ನ ಈ ನಿಲುವಿಗೆ ಕಾಂಟ್ರಾಸ್ಟ್ ಆಗಿ ನೋಡುವುದಾದರೇ ದೇಶದ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಒಂದು ಶೋಷಿತ ಹೋರಾಟದ ಭೂಮಿಕೆಗೆ ಖುದ್ದಾಗಿ ಬಂದರು ಎಂಬ ಇತಿಹಾಸವನ್ನ ತೆಲಂಗಾಣದ ಮಾದಿಗರ ರ್‍ಯಾಲಿಯ ಮೂಲಕ ಬಿಜೆಪಿ ತನ್ನ ಹೆಸರಿಗೆ ಬರೆದುಕೊಂಡಿತು. ವರ್ಡಿಕ್ಟ್ ಬಂದನಂತರ ಅದರ ಶ್ರೇಯವನ್ನೂ ಕೂಡ ತಂತಾನೆ ಬಿಜೆಪಿಗೆ ಬರುವಂತೆ ನೋಡಿಕೊಂಡಿತು.
ಆದರೆ ಕರ್ನಾಟಕದಲ್ಲಿ? 2023ರ ಚುನಾವಣೆಯಲ್ಲಿ ಮತ ಪಡೆಯಲು ಈಗಿನ ಮಂತ್ರಿಮಹೋದಯರೆಲ್ಲ ಫ್ರೀಡಂಪಾರ್ಕಿನ ಧರಣಿ ಸ್ಥಳಕ್ಕೆ ಬಂದದ್ದಲ್ಲದೇ, ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿಯೂ ಭರವಸೆ ನೀಡಿ, ಈಗ ವರ್ಡಿಕ್ಟ್ ಬಂದನಂತರ ಎಲ್ಲರೂ ನಾಪತ್ತೆಯಾಗಿದ್ದಾರೆ. ಮೊನ್ನೆ 2024, ಆಗಸ್ಟ್ 13ರಂದು ಫ್ರೀಡಂಪಾರ್ಕ್‌ನಲ್ಲಿ ಆಯೋಜಿಸಿದ್ದ ಒಳಮೀಸಲು ಜಾರಿಯ ಧರಣಿಗೆ ಸಮಾಜ ಕಲ್ಯಾಣ ಇಲಾಖೆಯ ಮೂರನೇ ಹಂತದ ಅಧಿಕಾರಿಯನ್ನು ಕಳುಹಿಸಿ ಕಳೆಗೆಟ್ಟ ಇತಿಹಾಸವನ್ನ ಕಾಂಗ್ರೆಸ್ ತನ್ನ ಹೆಸರಿಗೆ ಬರೆದುಕೊಂಡಿದೆ.
***
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಏನು ಮಾಡುತ್ತಿದೆ? ಏನನ್ನು ಮಾಡಬೇಕಿದೆ?
ರಾಜಕಾರಣ ನಿಂತ ನೀರಲ್ಲ. ಸಿದ್ದರಾಮಯ್ಯರ ಅಧಿಕಾರವೂ ಶಾಶ್ವತವಲ್ಲ, ಆದರೆ ಶೋಷಿತರ ಪರ ಕಾಳಜಿ ಮೆರೆಯಲು ರಾಜ್ಯ ಸರ್ಕಾರಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಈಗೊಂದು ಸುವರ್ಣಾವಕಾಶ ಪ್ರಾಪ್ತಿಯಾಗಿದೆ.
ಎಡ-ಬಲದ ಸಾಹಿತಿ, ಪ್ರಗತಿಪರರು, ಹೋರಾಟಗಾರರು ಐಕ್ಯತಾ ಹೋರಾಟ ಸಮಿತಿ ಮೂಲಕ 2003ರಲ್ಲೇ ಸಿದ್ದರಾಮಯ್ಯ ಸರ್ಕಾರವನ್ನ ಅಧಿಕಾರಕ್ಕೆ ತರಲು ಬೆಂಬಲ ಘೋಷಿಸಿ ಒಳಮೀಸಲಾತಿ ಜಾರಿ ಮಾಡಬೇಕೆಂದು ಆಗ್ರಹಿಸಿದೆ. ಹಾಗಾಗಿ ಟಚಬಲ್‌ಎಸ್ಸಿಗಳಿಗೆ ಈಗ ಕೋರ್ಟ್ ತೀರ್ಪಿನ ಸಂದಿಗ್ಧತೆಯನ್ನು ಮನವರಿಕೆ ಮಾಡಬೇಕಿರುವ ಮುಖ್ಯಮಂತ್ರಿಗಳು ವಿಶೇಷ ಅಧಿವೇಶನ ಕರೆದು ಸದಾಶಿವ, ಕಾಂತರಾಜು, ನಾಗಮೋಹನದಾಸ್‌ರ ಮೂರು ವರದಿಗಳ ಡಾಟಾಗಳನ್ನ ಬಳಸಿಕೊಂಡು ಒಳಮೀಸಲು ಕಲ್ಪಿಸಲು ಸುಗ್ರೀವಾಜ್ಞೆ ಹೊರಡಿಸಬೇಕಿದೆ.
ಇಲ್ಲವಾದಲ್ಲಿ ಸಿದ್ದರಾಮಯ್ಯನವರ ಅಧಿಕಾರ ಇರುವತನಕ ಈ ಇಶ್ಯೂವನ್ನ ಎಳೆದಾಡಿ ಕೋಲ್ಡ್ ಸ್ಟೋರೇಜ್‌ಗೆ ಹಾಕಿದರೂ, ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿಯುವ ಬಿಜೆಪಿಯುವರ ಎಂದಿನ ಪ್ರಯತ್ನ ಒಂದುವೇಳೆ ಈ ಸಲವೂ ಸಕ್ಸಸ್ ಆದರೆ, ರಾಜ್ಯ ಬಿಜೆಪಿಯೊಳಗೆ ಒಳಮೀಸಲಿನ ಬಗ್ಗೆ ಎಷ್ಟೇ ಆಂತರಿಕ ಭಿನ್ನಾಭಿಪ್ರಾಯಗಳಿದ್ದರೂ, ಬಿಜೆಪಿ ಹೈಕಮಾಂಡ್ ಇವರ ಕಿವಿ ಹಿಂಡಿ ಒಳಮೀಸಲನ್ನು ಜಾರಿಗೆ ತರುವಂತೆ ಮಾಡುತ್ತದೆ. ಒಂದುವೇಳೆ ಕಾಂಗ್ರೆಸ್ ಮತ್ತೆ ಕೈಯಲ್ಲಿರುವ ಒಳಮೀಸಲಾತಿ ರೊಟ್ಟಿಯನ್ನ ಜಾರಿಸಿದರೆ, ಅದು ಹೋಗಿ ಬೀಳುವುದೇ ಬಿಜೆಪಿಯ ತುಪ್ಪದಲ್ಲಿ.
ಆ ನಂತರ ಕರ್ನಾಟಕದ ಎರಡು ಬಲಾಢ್ಯ ಮುಂದುವರಿದ ಸಮುದಾಯಗಳು ಬಿಜೆಪಿಯಲ್ಲಿ ಕೂಡಾವಳಿಯಾಗಿರುವ ಕಾಲಘಟ್ಟದಲ್ಲಿ, ಪರಿಶಿಷ್ಟರಲ್ಲಿ ಬಹುಸಂಖ್ಯಾತರಾದ ಮಾದಿಗರನ್ನೂ ಕಳೆದುಕೊಂಡರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಮೇಲೇಳಲು ಒಂದು ತಲೆಮಾರು ಬೇಕಾಗುತ್ತದೆ.
ಈ ಎಲ್ಲದರ ನಡುವೆ ಪರಿಶಿಷ್ಟರ ಒಳಮೀಸಲು ವರ್ಡಿಕ್ಟ್‌ನಿಂದ ದೇಶಾದ್ಯಂತ ಬಲಿತ ದಲಿತರ ಹೊರತುಪಡಿಸಿ ಮೀಸಲು ವಂಚಿತ ಶೋಷಿತರ ಕಣ್ಣಲ್ಲಿ ಮಿಂಚು ಹರಿಸಿರುವ ಬಿಜೆಪಿ ಪಕ್ಷವು ಏನಾದರೂ ಹಿಂದುಳಿದ ವರ್ಗಗಳಿಗ ಜನಸಂಖ್ಯೆ ಆಧಾರದಲ್ಲಿ ಮೀಸಲು ಕಲ್ಪಿಸುವ ’ರೋಹಿಣಿ ಕಮೀಷನ್ ವರದಿಯನ್ನ ಜಾರಿ ಮಾಡಿತೆಂದರೇ ಇಡೀ ಭಾರತದಲ್ಲಿ ಕಾಂಗ್ರೆಸ್ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ.
***
ಭೋವಿ ಬಂಜಾರ ಕೊರಚ ಕೊರಮ ಜಾತಿಗಳ ಮೇಲ್ಮನವಿ ಪುರಸ್ಕೃತವಾದರೆ, ಒಳಮೀಸಲಿನ ಮೇಲ್ಮನವಿ ಟಚಬಲ್ ಎಸ್ಸಿಗಳ ಎಸ್ಸಿ ಮೀಸಲು ಕೋಟಾಕ್ಕೆ ಎರವಾಗಿ ತಿರುಗುಬಾಣವಾಗಲಿದೆಯೇ?
ಮೂಲ ಸಂವಿಧಾನದಲ್ಲಿ ಪರಿಶಿಷ್ಟ ಜಾತಿಗೆ ಸೇರದ, ಆದರೆ 1976ರಲ್ಲಿ ಹಾವನೂರು ಆಯೋಗದ ಶಿಫಾರಸ್ಸಿನ ಮೇರೆಗೆ ಎಸ್ಸಿ ಪಟ್ಟಿಯೊಳಕ್ಕೆ ಬಂದ ಹಾಗೂ ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಎಸ್‌ಟಿ ಮತ್ತು ಒಬಿಸಿ ಸ್ಥಾನಮಾನಗಳನ್ನು ಹೊಂದಿರುವ ಭೋವಿ-ಬಂಜಾರ-ಕೊರಚ-ಕೊರಮ ಸಮುದಾಯಗಳು ಈಗ ಬಂದಿರುವ ವರ್ಡಿಕ್ಟ್ ವಿರುದ್ಧ ಮೇಲ್ಮನವಿ ಸಲ್ಲಿಸುವ ಮಾತು ಆಗಾಗ ಕೇಳಿಬರುತ್ತದೆ.
ಆರಂಭದಿಂದಲೂ ಸದಾಶಿವ ಆಯೋಗದ ವರದಿಯನ್ನ ಅವೈಜ್ಞಾನಿಕ, ಒಳಮೀಸಲು ಪರಿಕಲ್ಪನೆಯ ಅಸಂವಿಧಾನಿಕವೆಂದು ಇಡೀ ಪ್ರಕ್ರಿಯೆಯನ್ನೇ ವಿರೋಧಿಸಿಕೊಂಡು ಬಂದಿದ್ದ ಈ ನಾಲ್ಕು ಸಮುದಾಯಗಳು ಅಸ್ಪೃಶ್ಯ ಹಣೆಪಟ್ಟಿ ಹೊತ್ತಿಲ್ಲ. ಅಸ್ಪೃಶ್ಯರಲ್ಲದವರಿಗೆ ಜಾತಿ ವ್ಯವಸ್ಥೆಯ ಶ್ರೇಣಿಗಳಲ್ಲಿ ಮೇಲ್ಮುಖ ಸಾಮಾಜಿಕ ಚಲನೆ ಸಾಧ್ಯವಿರುವುದರಿಂದ ತಾಂತ್ರಿಕವಾಗಿ ನೈತಿಕವಾಗಿ ಆ ಸಮುದಾಯಗಳು ಎಸ್ಸಿ ಪಟ್ಟಿಯಲ್ಲಿ ಇರುವಂತಿಲ್ಲ. 76ರಿಂದ ಅವರನ್ನು ಎಸ್ಸಿ ಪಟ್ಟಿಯಿಂದ ತೆಗೆದು ಹಾಕಿರಿ ಎಂದು ಅಸ್ಪೃಶ್ಯ ಸಮುದಾಯಗಳ ಯಾವ ಸಂಘಟನೆಗಳೂ ಹೋರಾಟ ಮಾಡಿಲ್ಲ.
ಆದರೆ ಈ ಅನ್‌ಟಚಬಲ್ ಸಮುದಾಯಗಳ ತಾಯ್ತನ, ಸಹೋದರ ಭಾವನೆಯನ್ನೇ ದೌರ್ಬಲ್ಯವೆಂದು ಪರಿಗಣಿಸಿರುವ ಟಚಬಲ್ ಸಮುದಾಯಗಳು ಒಳಮೀಸಲು ವಿರುದ್ಧದ ನಿಂತು ಸರ್ಕಾರ ಪಕ್ಷಗಳನ್ನ ನಿಯಂತ್ರಿಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.
ಹಾಗಾಗಿ ಈ ಟಚಬಲ್‌ಗಳು ಮೇಲ್ಮನವಿ ಸಲ್ಲಿಸಿ ಅದು ಅಡ್ಮಿಟ್ ಆಗಿ, ವಿಚಾರಣೆ ನಡೆದರೆ ಮತ್ತು ಎಸ್‌ಸಿ-ಎಸ್‌ಟಿ ಕಮಿಷನರ್ ಏನಾದರೂ ಇವರು ಅಸ್ಪೃಶ್ಯರಲ್ಲ ಮತ್ತು ಕರ್ನಾಟಕ ಹೊರತುಪಡಿಸಿ ಇವರು ಎಲ್ಲಿಯೂ ಎಸ್ಸಿ ಪಟ್ಟಿಯಲ್ಲಿ ಇಲ್ಲ ಎಂಬ ಒಂದು ವರದಿಯನ್ನ ನ್ಯಾಯಾಲಯಕ್ಕೆ ಪ್ರತಿವಾದದ ಧಾಟಿಯಲ್ಲಿ ಸಲ್ಲಿಸಿದರೆ ಎಸ್ಸಿ ಸ್ಥಾನಮಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆಯೆಂಬ ಚರ್ಚೆ ಈಗ ಒಳಮೀಸಲಾತಿ ಹೋರಾಟದ ಅಂಗಳದಲ್ಲಿ ಶುರುವಾಗಿದೆ.

ಸಂತೋಷ್ ಕೋಡಿಹಳ್ಳಿ
ಚಿತ್ರದುರ್ಗದ ಕೋಡಿಹಳ್ಳಿಯವರಾದ ಸಂತೋಷ್ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು. ಪ್ರಖರ ಅಂಬೇಡ್ಕರೈಟ್ ದೃಷ್ಟಿಕೋನದಿಂದ ಆಗು-ಹೋಗುಗಳನ್ನು ವಿಶ್ಲೇಷಿಸುವ ಸಂತೋಷ್ ಜನಪರ ಚಳವಳಿಗಳು ಮತ್ತು ರಾಜಕೀಯದ ಬಗ್ಗೆ ಹಲವು ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿ ಬರೆಯುತ್ತಾರೆ..


