Homeಕರ್ನಾಟಕಅಕ್ಟೋಬರ್ 1: ಅಂತಾರಾಷ್ಟ್ರೀಯ ಕಾಫಿ ದಿನ; ಕಾಫಿ ಘಮಲಿನಲ್ಲಿ ಮುಳುಗಿ ತೇಲುತ್ತಾ....

ಅಕ್ಟೋಬರ್ 1: ಅಂತಾರಾಷ್ಟ್ರೀಯ ಕಾಫಿ ದಿನ; ಕಾಫಿ ಘಮಲಿನಲ್ಲಿ ಮುಳುಗಿ ತೇಲುತ್ತಾ….

- Advertisement -
- Advertisement -

ಅಕ್ಟೋಬರ್ 1, ಅಂತಾರಾಷ್ಟ್ರೀಯ ಕಾಫಿ ದಿನ, ನಮಗೋ ಪ್ರತಿದಿನ ಕಾಫಿಯ ದಿನವೇ! ಕಾಫಿ ಎನ್ನುವುದೊಂದು ಕಲೆ, ಕಾಫಿ ಎನ್ನುವುದೊಂದು ವಿಜ್ಞಾನ, ಕಾಫಿ ಎನ್ನುವುದೊಂದು ಸಾಕ್ಷಾತ್ಕಾರ. ಟೀ ಕಾಯಿಸಬಹುದು, ಆದರೆ ಕಾಫಿ ’ಮಾಡ’ಬೇಕು. ಟೀ ಕೆಡಿಸುವುದು ಕಷ್ಟ, ಕಾಫಿಯ ಹದ ಸಾಧಿಸುವುದು ಕಷ್ಟ. ಇನ್ಸ್ಟೆಂಟ್ ಕಾಫಿ, ನಾಲಿಗೆಗೆ ಗಾಢವಾಗಿ ತಾಕುತ್ತದೆ, ಆದರೆ ಒಳಗಿಳಿಯುವುದಿಲ್ಲ. ಅದಕ್ಕೆ ಡಿಕಾಕ್ಷನ್ ಕಾಫಿಯೇ ಆಗಬೇಕು. ಒಂದು ಕಪ್ ನೀರಿಗೆ 4-5 ಚಮಚ ಲೆಕ್ಕದಲ್ಲಿ ಫಿಲ್ಟರಿಗೆ ಘಂ ಎನ್ನುವ ಕಾಫಿಪುಡಿ ಹಾಕಬೇಕು. ಅದರಲ್ಲಿ ಚಿಕೋರಿ ಇರಲೇಬೇಕು, ಇಲ್ಲದಿದ್ದರೆ ಕಾಫಿ ಪೇಲವ. ಚಿಕೋರಿ ಕಡಿಮೆಯಾದರೆ ತೆಳು, ಹೆಚ್ಚಾದರೆ ಒಗರು. ಕಾಫಿಪುಡಿ ಹಾಕಿ, ಅದರ ಮೇಲೆ ಕೊಡೆಯಾಕಾರದ ಹಿಡಿಯನ್ನು ಗಟ್ಟಿಯಾಗಿ ಒತ್ತಿ, ಅದರ ಮೇಲೆ ಸುಡುನೀರು ಹಾಕಬೇಕು.

ಫಿಲ್ಟರ್ ಮುಚ್ಚಳ ಒಂದೆರಡು ಸಲ ಫಿಲ್ಟರ್‌ಗೆ ಬಡಿದು, ಡಿಕಾಕ್ಷನ್ ಕೆಳಗಿನ ಬಟ್ಟಲಿಗೆ ಸರಾಗವಾಗಿ ಇಳಿಯುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಹಾಲು ಕುದಿಕುದಿ ಕಾಯಬೇಕು, ಅದಕ್ಕೆ ಮೊದಲೇ ಡಿಕಾಕ್ಷನ್ ಹಾಕಿದರೆ, ಕಾಫಿ ಪರಿಮಳ ಅರಳಿಕೊಳ್ಳುವುದಿಲ್ಲ. ಆಮೇಲೆ ಒಂದಿಷ್ಟು ಸಕ್ಕರೆ ಹಾಕಬೇಕು, ಹೆಚ್ಚಾಗಬಾರದು ಕಾಫಿ ಪಾಯಸವಾಗುತ್ತದೆ. ಸಕ್ಕರೆ ಹಾಕದಿದ್ದರೆ ಕಾಫಿ ಇನ್ನೂರುಚಿ. ಆಮೇಲೆ ಅದಕ್ಕೆ ಡಿಕಾಕ್ಷನ್ ಸೇರಿಸಬೇಕು. ಆಮೇಲೆ ಕಾಫಿಯನ್ನು ಕುದಿಸಬಾರದು, ಕಹಿ ಬರುತ್ತದೆ. ನಂತರ ಕಾಫಿಯನ್ನು ಎರಡು ಕಪ್ಪುಗಳಲ್ಲಿ, ನೊರೆ ಬರುವಂತೆ ಬೆರೆಸಬೇಕು, ತೀರ ತಣ್ಣಗಾಗಬಾರದು, ರುಚಿ ಇರುವುದಿಲ್ಲ, ತೀರಾ ಬಿಸಿ ಇದ್ದರೆ ನಾಲಿಗೆ ಸುಡುತ್ತದೆ. ನಂತರ ಅದನ್ನು ಪಿಂಗಾಣಿ ಮಗ್‌ಗೆ ಬಗ್ಗಿಸಿಕೊಂಡು, ಅದನ್ನು ಎರಡೂ ಅಂಗೈಗಳಲ್ಲಿ ಬಳಸಿಹಿಡಿದು, ಕಣ್ಣುಮುಚ್ಚಿ, ಪರಿಮಳವನ್ನೊಮ್ಮೆ ಆಳವಾಗಿ ಹೀರಿಕೊಂಡು, ಗುಟುಕುಗುಟುಕಾಗಿ ಸವಿಯಬೇಕು. ಇದು ಬ್ರಹ್ಮಾನಂದ. ಕಾಫಿಯ ಹದ ಕೂಡಿಸಲು ಅಷ್ಟು ಮುತುವರ್ಜಿ ವಹಿಸಬೇಕು, ಅದಕ್ಕೇ ಹೇಳಿದ್ದು, ಕಾಫಿ ಮಾಡುವುದೆಂದರೆ ಕಲೆಯೂ ಹೌದು, ವಿಜ್ಞಾನವೂ ಹೌದು. ಅದರ ಲೆಕ್ಕಾಚಾರ ಒಂದು ವಿಜ್ಞಾನ, ಅದರ ಪ್ರಕ್ರಿಯೆ ಒಂದು ಕಲೆ.

ಕಾಫಿ ಇಥಿಯೋಪಿಯಾದ ಕೆಫಾ ಅಥವಾ ಕಫ್ಫಾದಿಂದ ಬಂದದ್ದು ಎಂದು ಹೇಳಲಾಗುತ್ತದೆ. ಇದು ಹೇಗೆ ನಮ್ಮೆದುರಿನ ಮೇನಕೆಯಾಯಿತು ಎನ್ನುವ ಬಗ್ಗೆ ಒಂದು ಸ್ವಾರಸ್ಯವಾದ ಕಥೆ ಇದೆ. ಕಲ್ದಿ ಎನ್ನುವ ಅರಬ್ಬೀ ಮೇಕೆಕಾಯುವವನ ಮೇಕೆಗಳು ಪೊದೆಯೊಂದರ ಬೀಜಗಳನ್ನು ತಿಂದು ಮೈಮರೆತಂತೆ ಉಲ್ಲಾಸಭರಿತವಾಗಿ ಆಡುತ್ತಿದ್ದವಂತೆ. ಕುತೂಹಲದಿಂದ ತಾನೂ ಆ ಬೀಜಗಳ ರುಚಿ ನೋಡಿದ ಕಲ್ದಿ ಆಗ ತಾನು ಪಡೆದ ಅನುಭವಾಮೃತದ ಜ್ಞಾನವನ್ನು ಜಗತ್ತಿಗೇ ಹಂಚಿದನಂತೆ! ಆದರೆ ಮದ್ಯವನ್ನು ಹರಾಂ ಎಂದು ಕರೆದ ಇಸ್ಲಾಂ ಸುಲಭದಲ್ಲಿ ಕಾಫಿಯನ್ನು ಒಪ್ಪಿಕೊಳ್ಳಲಿಲ್ಲ. ತನ್ನ ಉತ್ತೇಜಕ ಗುಣದಿಂದ ಅದೂ ಸಹ ಮದ್ಯವಾಗಿಯೇ ಕಂಡಿರಬೇಕು.

ಆದರೆ ಕಾಫಿ ಹಾಗೆಲ್ಲಾ ಸುಲಭಕ್ಕೆ ಜಗ್ಗಲಿಲ್ಲ, ಅದರ ಅಭಿಮಾನಿಗಳೂ ಸೋಲೊಪ್ಪಿಕೊಳ್ಳಲಿಲ್ಲ, ಉತ್ತೇಜಿಸಿದರೂ ಇದು ಮದ್ಯವಲ್ಲ ಎಂದು ಸಾಧಿಸಿಯೇಬಿಡುತ್ತಾರೆ. ಮೊದಲ ಕಾಫೀಹೌಸ್‌ಗಳು ಅರಬ್ಬರ ಜಗತ್ತಿನಲ್ಲಿಯೇ ತಲೆಯೆತ್ತುತ್ತವೆ. ಅವನ್ನು ’ಖಾವೇಹ್ ಖನೇಹ್’ ಎಂದು ಕರೆಯಲಾಗುತ್ತಿದ್ದು, ಮೊದಲ ಕಾಫೀಮನೆ 15ನೆಯ ಶತಮಾನದಲ್ಲಿ ಮೆಕ್ಕಾದಲ್ಲಿಯೂ, 16ನೆಯ ಶತಮಾನದಲ್ಲಿ ಕಾನ್ಸ್ಟಾಂಟಿನೋಪಲ್, ಇಂದಿನ ಇಸ್ತಾಂಬುಲ್‌ನಲ್ಲಿ ತಲೆಯೆತ್ತಿತು ಎಂದು ಹೇಳಲಾಗುತ್ತದೆ. ಹಾಗೆ ಎದ್ದುನಿಂತ ಕಾಫಿಮನೆಗಳಲ್ಲಿ ಬುದ್ಧಿವಂತ ಅರಬ್ಬರು ಜೊತೆ ಸೇರಿ ಸಂಗೀತ ಕೇಳುವುದು, ರಾಜಕೀಯ ಚರ್ಚಿಸುವುದು, ಚದುರಂಗ ಆಡುವುದು ಇತ್ಯಾದಿ ಮಾಡುತ್ತಿದ್ದರಿಂದ ಈ ಕಾಫಿಮನೆಗಳನ್ನು ಜಾಣ್ಮೆಯ ಶಾಲೆ ಎಂದು ಸಹ ಕರೆಯುತ್ತಿದ್ದರಂತೆ. ನಿಧಾನವಾಗಿ ಕಾಫಿ ಯೂರೋಪಿಗೂ ಹರಿದು, ಕಾಫಿಹೌಸ್ ಅಲ್ಲೂ ಮನೆಮಾತಾಯಿತು.

ಭಾರತಕ್ಕೆ ಕಾಫಿ ತಂದವರು ನಮ್ಮದೇ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ಖ್ಯಾತಿಯ ಬಾಬಾಬುಡನ್. ಮೆಕ್ಕಾಯಾತ್ರೆಗೆಂದು ಹೋದ ಬುಡನ್ ಸಾಬ್ ಯೆಮೆನ್‌ನಿಂದ ತಮ್ಮೊಂದಿಗೆ ತಂದ ಏಳು ಕಾಫಿಬೀಜಗಳೇ ಇಂದು ಚಿಕ್ಕಮಗಳೂರನ್ನು ಭಾರತದ ಕಾಫಿ ತೊಟ್ಟಿಲನ್ನಾಗಿಸಿವೆ. ಕಾಫಿ ಒಂದು ಆರ್ಥಿಕ ಬೆಳೆಯಾಗಿ ಶುರುವಾದದ್ದು 1840ರ ಸುಮಾರಿನಲ್ಲಿ, ಬ್ರಿಟಿಷರು ದಕ್ಷಿಣ ಭಾರತದ ಬೆಟ್ಟಗಳಲ್ಲಿ ಅರೇಬಿಕಾ ಕಾಫಿ ಪ್ಲಾಂಟೇಶನ್‌ಗಳನ್ನು ಪ್ರಾರಂಭಿಸಿದಾಗ. ಎತ್ತರ ಮತ್ತು ಇಳಿಜಾರು, ಹವಾಮಾನ, ನೆರಳು ಬಿಸಿಲಿನ ವಾತಾವರಣ, ಒಳ್ಳೆಯ ಮಳೆ, ಮಣ್ಣಿನ ಗುಣ ಇವೆಲ್ಲವೂ ಪೂರಕವಾಗಿ ಇದ್ದದ್ದರಿಂದ ಕಾಫಿಬೆಳೆ ಇಲ್ಲಿ ಮುಖ್ಯ ಆರ್ಥಿಕ ಬೆಳೆಯಾಗಿ ಬೆಳೆದು ಇಂದು ಭಾರತ ಜಗತ್ತಿನಲ್ಲಿ ಆರನೆಯ ಅತಿದೊಡ್ಡ ಕಾಫಿ ಉತ್ಪಾದನೆ ಮಾಡುವ ದೇಶವಾಗಿದೆ.

ಕ್ರಮವಾಗಿ ಬ್ರೆಜಿಲ್, ವಿಯೆಟ್ನಾಂ, ಕೊಲಂಬಿಯಾ, ಇಂಡೋನೇಶಿಯಾ ಮತ್ತು ಮೆಕ್ಸಿಕೋ ಭಾರತಕ್ಕೂ ಮೊದಲ ಸ್ಥಾನಗಳಲ್ಲಿವೆ. ಭಾರತ ಪ್ರತಿವರ್ಷ ಸುಮಾರು 3,20,000 ಮೆಗಾಟನ್ ಕಾಫಿಯನ್ನು ಉತ್ಪಾದಿಸುತ್ತಿದ್ದು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪ್ರಮುಖ ಕಾಫಿ ಉತ್ಪಾದನಾ ರಾಜ್ಯಗಳಾಗಿವೆ. ಹಾಗೆ ಬೆಳೆದದ್ದರಲ್ಲಿ ಸುಮಾರು 70% ಕಾಫಿಯನ್ನು ಭಾರತ ರಫ್ತು ಮಾಡುತ್ತದೆ. ಭಾರತದಲ್ಲಿ ಕಾಫಿಯನ್ನು ನೆರಳಿನಲ್ಲಿ ಬೆಳೆಸಲಾಗುತ್ತಿದ್ದು ಸಿಲ್ವರ್ ಓಕ್ ಮೊದಲಾಗಿ ಅನೇಕ ಎತ್ತರದ ಮರಗಳು ಈ ನೆರಳನ್ನು ಒದಗಿಸುತ್ತದೆ. ಒಳ್ಳೆಯ ಮಳೆಯ ನಂತರ, ಗಿಡಕ್ಕೆ ಮೊಗ್ಗಿನ ಜಡೆ ಹಾಕಿದಂತೆ, ಯಾರೋ ಪೋಣಿಸಿದಂತೆ, ಒಂದರಹಿಂದೊಂದು ಅರಳುವ ನಸುಬಿಳಿ ಹೂಗಳು ಹೊರಡಿಸುವ ಸುವಾಸನೆಯಲ್ಲಿ ಇಡೀ ತೋಟ ಘಮಘಮಿಸಿ ಮನಸ್ಸು ಮತ್ತವಾಗುತ್ತದೆ. ಇದು ಅರ್ಥವಾಗಬೇಕಾದರೆ ಕಾಫಿಹೂ ಅರಳುವ ಕಾಲದಲ್ಲಿ ಒಮ್ಮೆಯಾದರೂ ಕಾಫಿತೋಟ ನೋಡಬೇಕು.

ಭಾರತದಲ್ಲಿ ಯಾವುದೇ ಯಂತ್ರವನ್ನು ಬಳಸದೆ, ಕಾಫಿಯನ್ನು ಕೈಯಿಂದಲೇ ಬಿಡಿಸಲಾಗುತ್ತದೆ. ಹಾಗಾಗಿ ಪೂರ್ಣ ಮಾಗಿರುವ ಕಾಫಿಹಣ್ಣುಗಳನ್ನು ಮಾತ್ರ ಬಿಡಿಸಲಾಗುತ್ತದೆ. ನಂತರ ಅದನ್ನು ವಿಂಗಡಿಸಿ, ತಿರುಳು ಪ್ರತ್ಯೇಕಿಸಿ, ತೊಳೆದು, ನೀರಲ್ಲಿ ನೆನೆಸಿ, ಅಂಗಳದಲ್ಲಿ ಹರವಿ ಒಣಗಿಸಲಾಗುತ್ತದೆ. ಯಂತ್ರದ ಮೂಲಕ
ಒಣಗಿಸಿದರೆ ಕೆಲಸ ಬೇಗ ಆಗುತ್ತದೆಯಾದರೂ ಹೀಗೆ ನಿಧಾನವಾಗಿ ಒಣಗಿಸಿದರೆ ಕಾಫಿಯ ಫ್ಲೇವರ್ ಹೆಚ್ಚುತ್ತದೆ ಎನ್ನುವುದು ಬೆಳೆಗಾರರ ನಂಬಿಕೆ. 1940ರ ಸುಮಾರಿಗೆ ಭಾರತದ ಅರೇಬಿಕಾ ಕಾಫಿಯನ್ನು ಯೂರೋಪಿಯನ್ ಮಾರುಕಟ್ಟೆಗಳಲ್ಲಿ ಮೈಸೂರ್ ಕಾಫಿ ಎಂದೇ ಕರೆಯಲಾಗುತ್ತಿತ್ತು. ಕಾಫಿಬೀಜಗಳಲ್ಲಿ ಎರಡು ಬಗೆ, ಅರೇಬಿಕಾ ಮತ್ತು ರೊಬಸ್ಟಾ. ಅರೇಬಿಕಾ ತನ್ನ ರುಚಿಯ ಕಾರಣಕ್ಕೆ ಹಿರಿಮೆಯನ್ನು ಪಡೆದಿದೆ. ಅದರಲ್ಲಿನ ಒಂದು ನಸುಸಿಹಿ ಸ್ವಾದ ಮತ್ತು ಪರಿಮಳ, ಬ್ಲಾಕ್ ಕಾಫಿ ತಯಾರಿಸಲು ಇದು ಬೆಸ್ಟ್ ಎನ್ನುವಂತೆ ಮಾಡುತ್ತದೆ. ಆದರೆ, ರೊಬಸ್ಟಾಗೆ
ಹೋಲಿಸಿದರೆ ಇದರಲ್ಲಿ ಕೆಫೈನ್ ಅಂಶ ಕಡಿಮೆ. ನಾವು ಸಕಲೇಶಪುರದಲ್ಲಿ ಒಂದು ಹೋಂಸ್ಟೇನಲ್ಲಿ ತಂಗಿದ್ದಾಗ ಅದರ ಮಾಲಿಕರು ಈ ಎರಡರ ಒಂದು ಗೊತ್ತಾದ ಅನುಪಾತದ ಮಿಶ್ರಣ ಅತ್ಯಂತ ರುಚಿಕಟ್ಟಾದ ಕಾಫಿ ಒದಗಿಸುತ್ತದೆ ಎಂದು ಹೇಳಿದ್ದರು.

ಕಾಫಿ ಎಂದರೆ ಅದೊಂದು ರಾಜಕಾರಣವೂ ಹೌದು, ಕಪ್ಪು ಕಾಫಿ ಕುಡಿಯುವ ಲಾಟಿನ್ ಅಮೆರಿಕಾ ದೇಶಗಳು ಮತ್ತು ಕಾಫಿಗೆ ಹಾಲನ್ನು ಬೆರೆಸಿ ಬಿಳುಪಾಗಿಸಿಕೊಳ್ಳುವ ಅಮೆರಿಕ ನಡುವೆ ಒಂದು ರಾಜಕೀಯ ಕೆಲಸ ಮಾಡುತ್ತಲೇ ಇರುತ್ತದೆ. ಕಾಫಿಗಳಲ್ಲಿ ಹಲವು ಬಗೆ. ಬ್ಲಾಕ್ ಕಾಫಿ, ಕಾಫಿ ಡಿಕಾಕ್ಷನ್ನಿಗೆ, ಸುಡುಸುಡುವ ಹಾಲು, ನೊರೆ ಸೇರಿಸುವ ಲಾಟ್ಟೆ (ಇದಕ್ಕೆ ಗಮಲಿನ ಗುಣವೂ ಇದ್ದು, ಒಂದು ಕಡೆ ಥೇಟ್ ಮಳೆಬಂದಾಗ ಬರುವ ಮಣ್ಣಿನ ಪರಿಮಳದ ಕಾಫಿ ಕುಡಿದು ಶರಣಾಗತಳಾಗಿದ್ದೆ), ಇದೇ ಕಾಫಿಗೆ ಹಾಲಿಗಿಂತ ಹೆಚ್ಚು ನೊರೆ ಸೇರಿಸಿ, ಒಂದಷ್ಟು ಕೋಕೋ ಪೌಡರ್ ಅಥವಾ ಚಕ್ಕೆ ಪುಡಿ ಸೇರಿಸಿದರೆ ಅದು ಕ್ಯಾಪುಚಿನೋ, ಇದಲ್ಲದೆ ಅದರ ವೈಯಕ್ತಿಕ ಘಾಟು ಮತ್ತು ಗಾಢತೆಯ ಕಾರಣಕ್ಕೆ ಇಷ್ಟವಾಗುವ ಎಸ್ಪ್ರೆಸ್ಸೋ (ಇದು ನಿಜಕ್ಕೂ ಕಾಫಿ ಶಾಟ್!), ಇದನ್ನು ನೀರುನೀರು ಮಾಡಿದರೆ ಆಗುವ ಅಮೆರಿಕಾನೊ, ಎರಡು ಪೆಗ್ ಸೇರಿಸಿ ಅದನ್ನು ಪಾಟಿಯಾಲಾ ಪೆಗ್ ಎನ್ನುವ ಹಾಗೆ ಎರಡು ಎಸ್ಪ್ರೆಸ್ಸೋಗಳನ್ನು ಸೇರಿಸಿ ಡೋಪ್ಪಿಯೋ ತಯಾರಿಸಲಾಗುತ್ತದೆ, ಅದೇ ಎಸ್ಪ್ರೆಸ್ಸೋಗೆ ಬಿಸಿಬಿಸಿಯಾದ ಹಾಲು ಸಹಿತ ಕಾಫಿ ಸೇರಿಸಿದರೆ ಅದು ರೆಡ್ ಐ (ಹೋಟೆಲಿನಲ್ಲಿ ಕೊಟ್ಟ ಫಿಲ್ಟರ್ ಕಾಫಿಗೆ, ನಾವು ಹೆಚ್ಚುವರಿ ಡಿಕಾಕ್ಷನ್ ಬೇಡಿ ಬೆರೆಸಿದ ಹಾಗೆ!), ಇನ್ನೂ ಗಲಾಓ, ಲಂಗೋ, ಮೋಚಾ, ರಿಸ್ಟ್ರೆಟ್ಟೋ, ಅಫೊಗಾಟೋ, ಕಾಫಿಗೆ ವಿಸ್ಕಿ, ಕ್ರೀಂ ಬೆರೆಸುವ ಐರಿಶ್ ಕಾಫಿ, ಐಸ್ಡ್ ಕಾಫಿ, ಐಸ್‌ಕ್ರೀಂ ಬೆರೆಸಿದ ಕಾಫಿ ಹೀಗೆ ಬಗೆಬಗೆ ಬಣ್ಣ, ಗುಣ, ರುಚಿ ಮತ್ತು ಪರಿಣಾಮ. ಇನ್ನು ನನ್ನಮಟ್ಟಿಗೆ ಹೇಳುವುದಾದರೆ, ಕಾಫಿಯಲ್ಲೇ ನನಗೆ ಅತ್ಯಂತ ಪ್ರೀತಿಪಾತ್ರವಾದದ್ದು ಇಸ್ತಾಂಬುಲ್‌ನಲ್ಲಿ ಸವಿದ ಟರ್ಕಿಶ್ ಕಾಫಿ – ಹಾಲು ಸೇರಿಸದ, ಕಾಫಿಯ ಸಾಂದ್ರವನ್ನು ಮಾತ್ರ ಪುಟ್ಟ ಕಪ್ಪಿನಲ್ಲಿ ಹಾಕಿಕೊಡುವ ಕಾಫಿ ಜಗತ್ತಿನ ಎಲ್ಲಾ ಕಾಫಿಗಳಿಗೂ ಒಂದು ಗ್ರೇಡ್ ಪದ್ಧತಿ ಇದ್ದು, ಮೆಡಲ್ ಕೊಟ್ಟ ಕಾಫಿ ಕಪ್ಪುಗಳನ್ನು ಸಾಲಾಗಿ ನಿಲ್ಲಿಸಿದರೆ ಮೊದಲ ಜಾಗದಲ್ಲಿ ಟರ್ಕಿಶ್ ಕಾಫಿಗೆ ಇರುತ್ತದೆ!

ಹೋಟೆಲುಗಳಲ್ಲಿ, ದರ್ಶಿನಿಗಳಲ್ಲಿ ಬೈಟೂ ಕಾಫಿ ಕುಡಿಯುತ್ತಾ ನಿಂತು, ಕೂತು ಹರಟೆ ಹೊಡೆಯುತ್ತಿದ್ದ ನಮಗೆ, ಕಾಫಿಕ್ಲಬ್ ಎನ್ನುವ ಅನುಭೂತಿಯನ್ನೂ ತಂದುಕೊಟ್ಟಿದ್ದು ಕಾಫಿ ಡೇ ಸಿದ್ಧಾರ್ಥ ಅವರು. ಮೊದಮೊದಲಿಗೆ ಜನ 10ರೂ ಕಾಫಿಗೆ 100 ರೂ ಕೊಟ್ಟು ಯಾವ ಮುಟ್ಠಾಳ ಕುಡಿಯುತ್ತಾನೆ ಎಂದು ಲೇವಡಿ ಮಾಡಿದರೂ ಸಹ, ಗಂಟೆಗಟ್ಟಲೆ ಕುಳಿತು ಹರಟುವ ಸ್ವಾತಂತ್ರ್ಯ ಇರುವ ಒಂದು ಸುರಕ್ಷಿತ ಸ್ಥಳವಾಗಿ ಯುವಜನತೆ ಅದನ್ನು ಆಯ್ದುಕೊಂಡರು. A lot can happen over a cup of coffee ಎನ್ನುವ ಟ್ಯಾಗ್‌ಲೈನ್‌ನಿಂದ ಕಾಫಿಡೇ ಒಂದು ’ಕೂಲ್’ ಸ್ಥಳವಾಯಿತು. ನಂತರ ವ್ಯವಹಾರಸ್ಥರು, ಆಫೀಸಿಲ್ಲದವರು, ಆಫೀಸ್ ಬೇಕಾದವರು ಈ ಕಾಫಿಡೇಗಳನ್ನು ಆಫೀಸ್ ಮಾಡಿಕೊಂಡದ್ದು ಇತಿಹಾಸ. ಕಾಫಿಡೇ ಮನೆಮಾತಾಯಿತು, ಆದರೆ ದುರದೃಷ್ಟವಶಾತ್ ಆ ಕನಸು ದುರಂತವಾಗಿ ಮುಗಿದು, ಭಾರತದ ಕಾಫಿ ರಾಜಕೀಯದಲ್ಲಿ ಸ್ಟಾರ್ ಬಕ್ಸ್ ಹಲವಾರು ಹೆಜ್ಜೆ ಮುಂದೆನಡೆಯಿತು.

ಇದು ಕಾಪಿಯ ಬಗೆಗಳಾದವು, ಇನ್ನು ಕಾಫಿ ತಯಾರಿಸುವ ಬಗೆಗಳಿಗೆ ಬರುವುದಾದರೆ ಮೊದಮೊದಲು ಮನೆಮನೆಗಳಲ್ಲಿ ಕಾಫಿಬೀಜ ಹುರಿದು, ಆಗಲೇ ಪುಡಿ ಮಾಡಿಕೊಂಡು, ಘಮಘಮಿಸುವ ಕಾಫಿ ತಯಾರಿಸುತ್ತಿದ್ದರು. ಇಂದು ಕಾಫಿ ಮೆಶೀನ್‌ಗಳ ಜೊತೆಜೊತೆಯಲ್ಲಿಯೇ ಫಿಲ್ಟರ್‌ಗಳೂ ಸಹ ಮಧ್ಯಮವರ್ಗದ ಅಡಿಗೆಮನೆಗಳನ್ನು ಆಳುತ್ತಿವೆ. ಇವುಗಳ ಜೊತೆಯಲ್ಲಿ ಇನ್ನೂ ಫ್ಯಾನ್ಸಿಯಾಗಿ ಫ್ರೆಂಚ್ ಪ್ರೆಸ್, ಪರ್ಕೋಲೇಟರ್, ಸಿಂಗಲ್ ಸರ್ವ್, ಏರೋಪ್ರೆಸ್, ಡ್ರಿಪ್, ಮೋಕಾ ಇತ್ಯಾದಿಗಳಿವೆ.

‘Good communication is just as stimulating as black coffee, and just as hard to sleep after’ ಎಂದು ಆನ್ ಮೋರೋ ಲಿಂಡ್ಬರ್ಗ್ ಹೇಳುತ್ತಾರೆ. ‘I have measured out my life with coffee spoons’ ಎಂದು ಟಿ ಎಸ್ ಎಲಿಯಟ್ ಬರೆಯುತ್ತಾರೆ. ಇಲ್ಲಿ ಕಾಫಿ ಎಂದರೆ ಕೇವಲ ಒಂದು ಪೇಯ ಅಲ್ಲಾ, ಕಾಫಿ ಮಾಡುವಾಗ, ಬಗ್ಗಿಸುವಾಗ, ಒಂದೊಂದು ಗುಟುಕನ್ನು ಒಳಗಿಳಿಸಿಕೊಳ್ಳುವಾಗ ಏನೇನು ಘಟಿಸಬಹುದೋ ಎಲ್ಲವೂ ಕಾಫಿಯ ಖಾತೆಗೇ ಸೇರುತ್ತದೆ. ಹಾಗೆ ನೋಡಿದರೆ ಕಾಫಿಹೌಸ್ ಎನ್ನುವುದು ಕವಿಗಳಿಗೆ, ಲೇಖಕರಿಗೆ ಚರ್ಚೆಯ, ಸಂವಾದದ ಕಟ್ಟೆಯೂ ಆಗಿ ಕೆಲಸ ಮಾಡಿದೆ. ಒಂದು ಕಾಫಿಹೌಸ್‌ಗೆ ಕವಿ ಏಟ್ಸ್ ಹೆಸರನ್ನು ಸಹ ಇಡಲಾಗಿದೆ. ಮುಂಬೈನ ಪೃಥ್ವಿ ಥಿಯೇಟರಿನ ಕಾಫಿಹೌಸಿನ ಐರಿಶ್ ಕಾಫಿ ಹಲವು ಕಥೆ, ಕವನಗಳ ವಸ್ತುವೂ ಹೌದು. ಗಾಂಧಿಬಜಾರಿನ ಹಲವಾರು ಕಾಫಿ ಟೇಬಲ್ಲುಗಳು ಇಂತಹ ಅನೇಕ ಚರ್ಚೆಗಳಿಗೆ ಸಾಕ್ಷಿಯಾಗಿರಲಿಕ್ಕೇ ಬೇಕು. ಇದೆಲ್ಲದರ ನಡುವೆ ಮೂಡಿಗೆರೆಯ ಮಾಯಾವಿ ತೇಜಸ್ವಿಯವರ ಕಾಫಿತೋಟ ನೆನಪಿಗೆ ಬರದಿರಲು ಸಾಧ್ಯವೇ ಇಲ್ಲ.

ನನಗೆ ತಿಳಿದಮಟ್ಟಿಗೆ ಕಾಫಿಹೌಸ್‌ಅನ್ನು ಕನ್ನಡದಲ್ಲಿ ಇಬ್ಬರು ತಮ್ಮ ಕವಿತೆಗಳ ಆವರಣವಾಗಿ ಬಳಸಿಕೊಂಡು ಪುಸ್ತಕಗಳನ್ನು ತಂದಿದ್ದಾರೆ, ಪ್ರತಿಭಾ ನಂದಕುಮಾರ್ ಅವರು ’ಕಾಫಿಹೌಸ್’ ಬರೆದರೆ, ಕೆ ನಲ್ಲತಂಬಿ ಅವರು ’ಕೋಶಿಸ್ ಕವಿತೆಗಳು’ ಬರೆದಿದ್ದಾರೆ. ವಿನ್ಸೆಂಟ್ ಎರಡೂ ಪುಸ್ತಕಗಳಲ್ಲಿ ಮುಖ್ಯ ಪಾತ್ರಧಾರಿ. ಪ್ರತಿಭಾ ಕಾಫಿಹೌಸ್‌ಅನ್ನು ಪಾತಳಿಯಾಗಿಟ್ಟುಕೊಂಡು ಜಗತ್ತಿನ ನೋವುನಲಿವುಗಳು, ಹೆಣ್ಣುಲೋಕದ ದುಗುಡದುಮ್ಮಾನಗಳು, ಟ್ರಾನ್ಸ್ ಜೆಂಡರ್ ಸಂಕಟಗಳನ್ನು ಕವಿತೆಯಾಗಿಸಿದರೆ ನಲ್ಲತಂಬಿಯವರು ಕಾಫಿಯ ಕಪ್ಪಿನ ಹೊಗೆ ಮತ್ತು ಪರಿಮಳದಲ್ಲಿ ಸಂಬಂಧಗಳನ್ನು ಕಟ್ಟಿಕೊಡುತ್ತಾರೆ. ಪ್ರತಿಭಾ ತಮ್ಮ ಕಾಫಿಹೌಸ್ ಕವಿತೆಗಳನ್ನು ಒಂದು ಪ್ರಸ್ತುತಿಯಾಗಿಯೂ ತಂದಿದ್ದರು. ಇನ್ನು ನಲ್ಲತಂಬಿಯವರ ವಿನ್ಸೆಂಟ್, ’ಮುಚ್ಚಿದ ಮುಷ್ಟಿ’ ಪಡೆಯುವುದೂ ಇಲ್ಲ, ಕೊಡುವುದೂ ಇಲ್ಲ, ಸಾರ್, ’ಹೊರಲಾಗದಷ್ಟು ಪ್ರೀತಿಯನು ಯಾರ ಮೇಲೂ ಹೇರಬಾರದು, ಸಾರ್’ ಎಂದು ಹೇಳುವ ದಾರ್ಶನಿಕ.

ಕಾಫಿಯನ್ನು ಕುರಿತು ಪ್ರತಿಭಾ ನಂದಕುಮಾರ್ ಬರೆದಿರುವ ಒಂದು ಮೋಹಕ ಕವನದ ಸಾಲುಗಳೊಂದಿಗೆ ಬರಹವನ್ನು ಮುಗಿಸುತ್ತಿದ್ದೇನೆ,

’ಅವನ ಪ್ರಕಾರ ಕಾಫಿ ಕುಡಿಯುವುದೆಂದರೆ ಮೈಥುನದಂತೆ
ಬಿಸಿಯಾಗಿರಬೇಕು ಆದರೂ ಗಂಟಲು ಸುಡಬಾರದು
ಸಿಹಿಯಾಗಿರಬೇಕು ಆದರೂ ಅತಿಯಾಗಬಾರದು
ಮಿತವಾಗಿರಬೇಕು ಆದರೂ ಸಾಲದೆನಿಸಬಾರದು’

ಕಾಫಿ ಬಗ್ಗೆ ಮತ್ತೆರಡು ಸಂಗತಿಗಳು!

ಜಗತ್ತಿನ ಅತ್ಯಂತ ಪ್ರಖ್ಯಾತ ಮತ್ತು ಅತಿ ದುಬಾರಿ ಬೆಲೆಯ ಕಾಫಿ ಎಂದರೆ ಕೋಪಿ ಲುವಾಕ್. ಇದು ಬಿಲ್ಕುಲ್ ಕಹಿ ಇಲ್ಲದ ಕಾಫಿ, ಆದರೆ ಇದರ ತಯಾರಿಕೆ ಮಾತ್ರ ಬಿಲ್ಕುಲ್ ಸ್ಪೆಷಲ್! ಇದು ಇಂಡೋನೇಶಿಯಾದ ಕಾಫಿಬೀಜ. ಕಾಪಿಹಣ್ಣುಗಳನ್ನು ಪುನುಗು ಬೆಕ್ಕು ಅಥವಾ ಸಿವೆಟ್‌ಗೆ ತಿನ್ನಿಸಲಾಗುತ್ತದೆ, ತಿರುಳು ಜೀರ್ಣವಾಗಿ ಅದು ಬೀಜಗಳನ್ನು ವಿಸರ್ಜಿಸುತ್ತದೆ. ಅವುಗಳನ್ನು ಚೆನ್ನಾಗಿ ತೊಳೆದು, ಒಣಗಿಸಿದರೆ ಜಗತ್ತಿನ ಅತ್ಯಂತ ಶ್ರೇಷ್ಠ ಎನ್ನಲಾಗುವ ಕಾಫಿಬೀಜ ಸಿದ್ಧ. ನಮ್ಮ ಲೆಕ್ಕದಲ್ಲಿ ಹೇಳುವುದಾದರೆ ಈ ಕಾಫಿಗೆ, ಯಾವುದೇ ಹೆಚ್ಚುವರಿ ಅಲಂಕಾರವಿಲ್ಲದೆಯೂ ಒಂದು ಕಪ್ಪಿಗೆ ಸುಮಾರು 3000/- ರೂಗಳಾಗುತ್ತದೆ.

___________

ಸರಾಸರಿ ಅತ್ಯಂತ ಹೆಚ್ಚು ಕಾಫಿ ಕುಡಿಯುವ ದೇಶ ಫಿನ್ಲ್ಯಾಂಡ್. ಮೊದಲಿಗೆ ಕಾಫಿಯನ್ನು ಟರ್ಕರು ಅರೇಬಿಕ್ ಭಾಷೆಯಲ್ಲಿ ಖಾವಾಹ್ ಎಂದು ಕರೆಯಲಾಗುತ್ತಿದ್ದು, ಅದೊಂದು ಬಗೆಯ ವೈನ್‌ನ ಹೆಸರೂ ಹೌದು. ನಂತರ ಡಚ್ಚರು ಇದನ್ನು ಕೋಫಿ ಎಂದು ಕರೆದು, ಇಂಗ್ಲಿಷರು ಬೇರೆಲ್ಲಾ ಹೆಸರುಗಳನ್ನೂ ಕುಲಗೆಡಿಸಿ, ನಂತರ ಅದನ್ನೇ ಪ್ರಮಾಣೀಕೃತಗೊಳಿಸುವ ಹಾಗೆ 1582ರಲ್ಲಿ ಇದಕ್ಕೆ ಕಾಫಿ ಎಂದು ನಾಮಕರಣ ಮಾಡಿದರು.

ಸಂಧ್ಯಾರಾಣಿ

ಸಂಧ್ಯಾರಾಣಿ
ಲೇಖಕಿ, ಸಿನಿಮಾ ವಿಮರ್ಶಕಿ, ಪತ್ರಕರ್ತೆ ಸಂಧ್ಯಾರಾಣಿ ಕೋಲಾರ ಮೂಲದವರು. ’ಯಾಕೆ ಕಾಡುತಿದೆ ಸುಮ್ಮನೆ’, ’ಸಿನಿ ಮಾಯಾಲೋಕ’ ಅವರ ಕೆಲವು ಪ್ರಕಟಿತ ಕೃತಿಗಳು. ’ನಾತಿಚರಾಮಿ’ ಸಿನಿಮಾಗೆ ಚಿತ್ರಕಥೆಯನ್ನೂ ಬರೆದಿದ್ದಾರೆ.


ಇದನ್ನೂ ಓದಿ: ಕಳೆದುಹೋದ ದಿನಗಳು -31: ಕರ್ನಾಟಕ ಕಾಫಿ ಮತ್ತು ಗಣಪಯ್ಯನವರ ನಂಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...