ಮಲೆನಾಡಿನಲ್ಲಿ ಹುಟ್ಟಿಕೊಂಡ ದಲಿತ ಚಳವಳಿಗೆ ಕೊರಳಾಗಿದ್ದು ಬಯಲು ಸೀಮೆಯ ಅವಿಭಜಿತ ಕೋಲಾರ ಜಿಲ್ಲೆ. ಜಿಲ್ಲೆಯಲ್ಲಿ ಡಿಎಸ್‌ಎಸ್ ಎಂದೊಡನೆ ಕೋಟಿಗಾನಹಳ್ಳಿ ರಾಮಯ್ಯ, ಎನ್ ಮುನಿಸ್ವಾಮಿ, ಪಿಚ್ಚಳ್ಳಿ ಶ್ರೀನಿವಾಸ್, ಸಿಎಂ ಮುನಿಯಪ್ಪ ಸೇರಿದಂತೆ ಹಲವರು ಚಳವಳಿಗಾರರ ಹೆಸರು ಪ್ರಮುಖವಾಗಿ ಕೇಳಿಬರುತ್ತವೆ; ಅದರಲ್ಲಿ ಚಿಂತಾಮಣಿಯ ಎನ್. ವೆಂಕಟೇಶ್ ಕೂಡ ಒಬ್ಬರು. ಜನಪರ ಚಳವಳಿ ವಲಯದಲ್ಲಿ ‘ಗಡ್ಡಂ ವೆಂಕಟೇಶಣ್ಣ’ ಎಂದೇ ಹೆಸರಾಗಿರುವ ಅವರು, ತಮ್ಮ ಬಹುಪಾಲು ಆಯಸ್ಸನ್ನು ದಲಿತಪರ ಹೋರಾಟಗಳಿಗೆ ಮೀಸಲಿಟ್ಟಿದ್ದಾರೆ.
ಹೋರಾಟದ ಒಡನಾಡಿ, ಹಿರಿಯ ಚಳವಳಿಗಾರ, ಎಲ್ಲರ ಪ್ರೀತಿಯ ‘ಗಡ್ಡಂ ವೆಂಕಟೇಶಣ್ಣ’ ಈಗ 75ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ವಯಸ್ಸು ಎಪ್ಪತೈದಾಗಿದ್ದರೂ, ಈಗಲೂ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರಿನಲ್ಲಿ ನಡೆಯುವ ಹೋರಾಟಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಾರೆ. ಒಳಮೀಸಲಾತಿ ಜಾರಿ ಸೇರಿದಂತೆ ಹಲವು ದಲಿತಪರ ವಿಷಯಗಳನ್ನು ಇಟ್ಟುಕೊಂಡು ಪ್ರತಿದಿನ ಸರ್ಕಾರದ ಜೊತೆಗೆ ಚೌಕಾಸಿ ನಡೆಸುತ್ತಲೇ ಇದ್ದಾರೆ. ಸಂಘಪರಿವಾರ ಮತ್ತು ಬಿಜೆಪಿಯ ಸಂವಿಧಾನ ವಿರೋಧಿ ನಿಲುವುಗಳನ್ನು ಗಟ್ಟಿಧ್ವನಿಯಲ್ಲಿ ವಿರೋಧಿಸುತ್ತಾರೆ.
ಎನ್. ವೆಂಕಟೇಶ್ ಅವರಿಗೆ 75 ವರ್ಷ ತುಂಬುತ್ತಿರುವ ಈ ಹೊತ್ತಿನಲ್ಲಿ ಅವರ ಹೋರಾಟದ ಬದುಕಿನ ಕುರಿತು ‘ನ್ಯಾಯಪಥ’ ಪತ್ರಿಕೆಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.

ಪ್ರ: ನಿಮ್ಮ ಹಿನ್ನೆಲೆ ಮತ್ತು ಕುಟುಂಬದ ಹಿನ್ನೆಲೆ ಬಗ್ಗೆ ಸ್ವಲ್ಪ ಹೇಳ್ತೀರಾ?
ಎನ್. ವೆಂಕಟೇಶ್: ಈಗ ನನಗೆ 75 ವರ್ಷವಾಗಿದೆ. ನಮ್ಮ ತಾಯಿ ಕದರಮ್ಮ, ತಂದೆ ನಾರಾಯಣಪ್ಪ. ನಾನು ಹೊಟ್ಟೆಯಲ್ಲಿದ್ದಾಗಲೇ ಅಪ್ಪ ನನ್ನ ತಾಯಿಯನ್ನು ಬಿಟ್ಟುಹೋಗಿದ್ದರು. ನನ್ನ ಅಜ್ಜಿ (ತಾಯಿಯ ತಾಯಿ) ನರಸಮ್ಮ ಹಾಗೂ ಸೋದರ ಮಾವ ಚಿಕ್ಕನಾರಾಯಣಪ್ಪ ಅವರು ಸಣ್ಣ ಮಗುವಿನಿಂದಲೂ ನನ್ನನ್ನು ಸಾಕಿಸಲುಹಿದ್ದಾರೆ. ಜೊತೆಗೆ. ನನ್ನ ಮಾವ ಓದುವುದಕ್ಕೂ ಪೂರಕ ವಾತಾವರಣ ಕಲ್ಪಿಸಿದ್ದರು. ಅವರು ನನ್ನ ಹಾಗೂ ನನ್ನ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಜವಾಬ್ದಾರಿ ತೆಗೆದುಕೊಂಡಿದ್ದರು.
ಮೂರ್ನಾಲ್ಕು ವರ್ಷದವನಾಗಿದ್ದಾಗ ನನಗೆ ಆದ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದೆ. ನಂತರ, ಸಮೀಪದ ಚಕ್ಕಾರ್ಲಪಲ್ಲಿ ಗ್ರಾಮದ ಗಂಗಮ್ಮ ದೇಗುಲಕ್ಕೆ ಹೋಗುವಂತೆ ನನ್ನ ಅಜ್ಜಿಗೆ ಯಾರೋ ಹೇಳಿದ್ದರು. ಅಲ್ಲಿ ನಿಯಮಿತವಾಗಿ ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ, ಒಬ್ಬರು ಹಣ್ಣಾಗದ ಪಪ್ಪಾಯವನ್ನು (ಪರಂಗಿ ಹಣ್ಣು) ಇಪ್ಪತ್ತು ದಿನ ತಂದರೆ ಸುಧಾರಿಸಿಕೊಳ್ಳುತ್ತಾನೆ ಎಂದು ಒಂದು ಸಲಹೆ ನೀಡಿದ್ದರು. ನಂತರದ ದಿನಗಳಲ್ಲಿ, ನನ್ನ ಆರೋಗ್ಯ ಸುಧಾರಿಸಿದ್ದು ಪಪ್ಪಾಯದಿಂದ ಹೊರತು, ದೇವರಿಂದ ಅಲ್ಲ ಎಂಬುದು ನನಗೆ ಮನವರಿಕೆ ಆಯಿತು.
ಎಸ್‌ಎಸ್‌ಎಲ್ಸಿ ಓದುವವರೆಗೂ ನಾನು ನಮ್ಮ ಮಾವ ಕೆಲಸ ಮಾಡುತ್ತಿದ್ದ ವಕ್ಕಲಿಗರ ಹಾಸ್ಟೆಲ್ ನಲ್ಲಿ ಅವರ ಜೊತೆಗೆ ಇದ್ದೆ. ಚಿಂತಾಮಣಿಯ ಬೆಂಗಳೂರಿನ ಸರ್ಕಲ್‌ನಲ್ಲಿ ಇದ್ದ ಆ ಹಾಸ್ಟೆಲ್ ನಲ್ಲಿ ನಮ್ಮ ಮಾವ ‘ಪೀವನ್’ ಆಗಿದ್ದರು. ಅಲ್ಲಿ ನಾನು ಅವರ ಕೆಲಸಗಳಿಗೆ ಸಹಾಯ ಮಾಡುತ್ತಿದ್ದೆ. ಅಲ್ಲಿನ ಕೊಠಡಿಗಳನ್ನು ಸ್ವಚ್ಛ ಮಾಡುವುದು, ಗಿಡಗಳಿಗೆ ನೀರು ಹಾಕುವುದು, ಸೌದೆ ಬಂದಾಗ ಅದನ್ನು ಸ್ಟೋರ್ ರೂಮಿಗೆ ಸಾಗಿಸುವುದು ಮಾಡುತ್ತಿದ್ದೆ. ಜತೆಗೆ, ಅಲ್ಲಿನ ವಿದ್ಯಾರ್ಥಿಗಳು ಬ್ಯಾಡ್ಮಿಂಟನ್ ಮತ್ತು ಬಾಸ್ಕೆಟ್ ಬಾಲ್ ಆಟ ಆಡುವಾಗ ಅವರಿಗೆ ಬಾಲ್ ಎತ್ತಿಕೊಡುವ ಕೆಲಸವನ್ನೂ ಮಾಡುತ್ತಿದ್ದೆ. ಅಲ್ಲಿ ಅಸ್ಪೃಶ್ಯತೆ ಆಚರಣೆ ಕೂಡ ಚಾಲ್ತಿಯಲ್ಲಿ ಇತ್ತು; ಹಾಸ್ಟೆಲ್‌ನ ಡೈನಿಂಗ್ ಹಾಲಿಗೆ ನಮಗೆ ಪ್ರವೇಶ ಇರಲಿಲ್ಲ. ವರಾಂಡಾದಲ್ಲೇ ನಮಗೆ ಊಟ ಕೊಡುತ್ತಿದ್ದರು. ಆ ಸಂದರ್ಭದಲ್ಲಿ ಅಸ್ಪೃಶ್ಯತೆ ಆಚರಣೆ ಯಾವುದೇ ನೋವು ಕೊಟ್ಟಿರಲಿಲ್ಲ. ಬಾಲ್ಯದಲ್ಲಿ ಅದೆಲ್ಲಾ ಸಹಜ ಎಂದುಕೊಂಡಿದ್ದೆ. ಚಳವಳಿ ಪ್ರವೇಶ ಪಡೆದ ಬಳಿಕ ನನ್ನ ಮೇಲೂ ಅಸ್ಪೃಶ್ಯತೆ ಆಚರಣೆ ಆಗಿದೆ; ಸ್ವತಃ ನಾನೇ ವಕ್ಕಲಿಗರ ಹಾಸ್ಟೆಲ್‌ನಲ್ಲಿ ಅನುಭವಿಸಿದ್ದೇನೆ ಎಂಬುದು ಅರಿವಾಯಿತು.
ಆಗ ಹಾಸ್ಟೆಲ್‌ನಲ್ಲಿ ತೆರೆದ ಶೌಚಾಲಯದ ವ್ಯವಸ್ಥೆ ಇತ್ತು. ಒಂದು ದಿನ ನನ್ನ ಮಾವನಿಗೆ ಅದನ್ನು ತೊಳೆಯಲು ಸಾಧ್ಯವಾಗಿರಲಿಲ್ಲ; ಅವರು ಗಾರೆ ಕೆಲಸವನ್ನೂ ಮಾಡುತ್ತಿದ್ದರು. ಅನಿವಾರ್ಯವಾಗಿ ಹಲವು ಬಾರಿ ನಾನೂ ಕೂಡ ಸ್ವಚ್ಛತೆ ಕೆಲಸ ಮಾಡಿದ್ದೇನೆ. ಒಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ಬಾಲ್ಯದಲ್ಲೇ ನಾನು ಅವೆಲ್ಲವನ್ನೂ ಅನುಭವಿಸುವಂತಾಯಿತು. ನಾನು ಸರ್ಕಾರಿ ಶಾಲೆಯಲ್ಲಿ ಆರು ಏಳನೇ ತರಗತಿ ಓದುವಾಗ, ನಮಗೆ ಶೆಟ್ಟಿ ಮೇಷ್ಟ್ರು ಎಂಬುವವರು ಇದ್ದರು. ನನ್ನ ಮಾವ ಆ ಮೇಷ್ಟರ ಮನೆಯಲ್ಲಿ ಟ್ಯೂಷನ್‌ಗೆ ಹಾಕಿದ್ದರು. ಅವರು ‘ಟಚಬಲ್’ ವಿದ್ಯಾರ್ಥಿಗಳನ್ನೆಲ್ಲಾ ಒಳಗೆ ಬಿಟ್ಟುಕೊಂಡು, ನನ್ನನ್ನು ಮಾತ್ರ ಹೊರಗೆ ಕೂರಿಸುತ್ತಿದ್ದರು. ಮಳೆ ಬಂದರೆ ವರಾಂಡಾದಲ್ಲೇ ಕೂರಬೇಕಾಗಿತ್ತು. ಚಿಂತಾಮಣಿಯಲ್ಲಿ ಪ್ರತಿ ಭಾನುವಾರದ ದನಗಳ ಸಂತೆ ನಡೆಯುತ್ತಿತ್ತು; ಅಲ್ಲಿಂದ ನಾನು ಸಗಣಿ ತಂದು ಬೆರಣಿ ತಟ್ಟುವ ಕೆಲಸವನ್ನೂ ಮೇಷ್ಟ್ರು ಮಾಡಿಸುತ್ತಿದ್ದರು. ಕುಡಿಯುವ ನೀರನ್ನು ಮೇಲಿಂದ ಹಾಕಿದರೆ; ಅವರ ಮನೆಯಲ್ಲಿ ಏನಾದರೂ ಉಳಿದಿದ್ದರೆ ಅದನ್ನು ನನಗೆ ತಿನ್ನಲು ಕೊಡುತ್ತಿದ್ದರು. ಬಹಳಷ್ಟು ನೋವು ನೀಡುವ ಅಸ್ಪೃಶ್ಯತೆ ಆಚರಣೆಗಳನ್ನು ಶಾಲಾ ಶಿಕ್ಷಕರು ಮಾಡಿದ್ದಾರೆ. ಶಾಲೆಯಲ್ಲೂ ಕೂಡ ನಮ್ಮನ್ನು ಶಿಕ್ಷಕರು ಮುಟ್ಟಿಸಿಕೊಳ್ಳುತ್ತಿರಲಿಲ್ಲ.
ಪ್ರ: ನಿಮ್ಮ ಓದು ಶಿಕ್ಷಣದ ಬಗ್ಗೆ..
ಉ: ನಾನು ಬಿಕಾಂ ಓದಿದ್ದೇನೆ. ಆದರೆ, ಅದನ್ನು ಪೂರ್ಣಗೊಳಿಸಿಲ್ಲ. ಪಿಯುಸಿ ಮುಗಿದ ಕೂಡಲೇ ನಾನು ಚಿಕ್ಕಮಗಳೂರಿನ ಟೀ ಎಸ್ಟೇಟ್ ಒಂದಕ್ಕೆ ಕೆಲಸಕ್ಕೆ ಸೇರಿದ್ದೆ. ಸ್ನೇಹಿತರನ್ನು ನೋಡಿ ನಾನೂ ಕೂಡ ಪಿಯುಸಿಯಲ್ಲಿ ಪಿಸಿಎಂಬಿ (ಸೈನ್ಸ್) ತೆಗೆದುಕೊಂಡಿದ್ದೆ. ಆದರೆ, ಅದರಲ್ಲಿ ಫೇಲ್ ಆಗಿದ್ದೆ. ಎಸ್ಟೇಟ್‌ನಲ್ಲಿ ಕೆಲಸ ಮಾಡಿಕೊಂಡೇ ಓದುತ್ತಾ ಪಾಸ್ ಮಾಡಿದ ಬಳಿಕ ಬಿಕಾಂ ಸೇರಿದ್ದೆ. ಮೊದಲನೇ ವರ್ಷದ ಬಿಕಾಂ ಮಾಡುವಾಗ ಕೆ. ನಾರಾಯಣಸ್ವಾಮಿ ಎಂಬ ಕನ್ನಡ ಉಪನ್ಯಾಸಕರು ಪರಿಚಯ ಆಗಿದ್ದರು. ಅವರು ನಮ್ಮನ್ನೆಲ್ಲಾ ಪರಿಚಯಿಸಿಕೊಂಡು ನಮ್ಮ ಜೊತೆಗೆ ನಿಕಟವಾಗಿದ್ದರು. ನನ್ನನ್ನೂ ಸೇರಿದಂತೆ ನಮ್ಮ ಹಿರಿಯ ವಿದ್ಯಾರ್ಥಿಗಳಾದ ವೈ. ರಾಮಣ್ಣ, ಕದಿರಪ್ಪ, ನಾರಾಯಣಸ್ವಾಮಿ, ತಿಮ್ಮಣ್ಣ ಸೇರಿದಂತೆ ಎಲ್ಲರನ್ನೂ ಸೇರಿಸಿ ಒಂದು ಬ್ಯಾಡ್ಮಿಂಟನ್ ತಂಡ ಮಾಡಿದ್ದರು. ಅವರ ಮೂಲಕ 1968 ಮತ್ತು 69ರಲ್ಲಿ ನಮಗೆ ಅಂಬೇಡ್ಕರ್ ಪರಿಚಯ ಆಯಿತು.
ಅದಕ್ಕೂ ಮೊದಲು, ಅಂದರೆ ಅಂಬೇಡ್ಕರ್ ಪರಿಚಯ ಇಲ್ಲದಿದ್ದಾಗ ಗಾಂಧಿ ಅಭಿವೃದ್ಧಿ ಸೇವಾ ಸಂಘದ ಹೆಸರಿನಲ್ಲಿ, ಜಗಜೀವನ್ ರಾವ್ ನಗರದಲ್ಲಿದ್ದ ಜನರಲ್ ಹಾಸ್ಟೆಲ್‌ನಲ್ಲಿ ಮಾತನಾಡಿಕೊಳ್ಳುತ್ತಿದ್ದೆವು. ವೈ ರಾಮಯ್ಯ ಅವರಿಗೆ ಚಿತ್ತೂರಿನ ಅಂದಿನ ಶಾಸಕ ಮಗ, ಅಂಬೇಡ್ಕರ್ ಅವರ ‘ಲೈಫ್ ಅಂಡ್ ಮೆಸೇಜ್’ ಪುಸ್ತಕ ತಂದುಕೊಟ್ಟಿದ್ದರು. ಅದನ್ನು ನಾವೆಲ್ಲಾ ಒಟ್ಟಿಗೆ ಓದಿ ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಂಡ ಬಳಿಕ 70ರಲ್ಲಿ ನಾವು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಆಚರಿಸಿದ್ದೆವು. ನಾರಾಯಣಸ್ವಾಮಿ ಅವರು ಅಂಬೇಡ್ಕರ್ ಅವರ ಬರಹಗಳನ್ನು ನಮ್ಮಿಂದ ಪ್ರತಿ ಪ್ಯಾರಾ ಓದಿಸುತ್ತಿದ್ದರು. ನನ್ನ ಜೊತೆಗಿದ್ದ ಶಿವಣ್ಣ ಎಂಬುವವರು ಇದ್ದರು. ಅವರ ಅಣ್ಣನೇ ನಾರಾಯಣಸ್ವಾಮಿ. ಚಳವಳಿಗೆ ಪೂರಕವಾದ ವಾತಾವರಣ ಸೃಷ್ಟಿಗೆ ಅಂಬೇಡ್ಕರ್ ಅವರನ್ನು ಪರಿಚಯ ಮಾಡಿಸುವುದಕ್ಕಾಗಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಆಯೋಜಿಸುತ್ತಿದ್ರು.
ಚಿಂತಾಮಣಿಯಲ್ಲಿ ಅಂದಿಗೆ ಸುಮಾರು 11 ಸ್ಲಂ ಪ್ರದೇಶಗಳು ಇದ್ದವು. ಅವುಗಳ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಆಗ ಅಲ್ಲಿನ ಜನರ ಜೊತೆಗೆ ಬೆರೆತು, ಅಂಬೇಡ್ಕರ್ ಅವರ ಬಗ್ಗೆ ಪರಿಚಯ ಮಾಡಿಕೊಡುತ್ತಿದ್ದೆವು.
ಪ್ರ: ದಲಿತ ಚಳವಳಿಗೆ ನೀವು ಪ್ರವೇಶ ಪಡೆದಿದ್ದು ಹೇಗೆ? ಯಾವಾಗ?
ಉ: 70ರ ದಶಕದಲ್ಲಿ ಮೈಸೂರಿನ ಸಿದ್ದಾರ್ಥ ಹಾಸ್ಟೆಲ್‌ನಲ್ಲಿ ಎರಡು ದಿನಗಳ ಶಿಬಿರ ನಡೆದಿತ್ತು. ಸಾಹಿತಿಗಳು, ಕಲಾವಿದರು, ಹೋರಾಟಗಾರರು ಸೇರಿದಂತೆ ನೂರಿನ್ನೂರು ಜನ ಭಾಗವಹಿಸಿದ್ದರು. ದೇವನೂರ ಮಹಾದೇವ, ಇಂದೂಧರ ಹೊನ್ನಾಪುರ, ರಾಮ್ ದೇವ್ ರಾಕೆ, ಶಿವಾಜಿ ಗಣೇಶನ್, ಎಚ್ ಗೋವಿಂದಯ್ಯ ತಂಡ ಅಲ್ಲಿತ್ತು. 1976ರಲ್ಲಿ ನಡೆದ ಎರಡು ದಿನಗಳ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಕೋಲಾರದಿಂದ ನಾನು, ಕೆ. ರಾಮಯ್ಯ, ಮುನಿಸ್ವಾಮಿ ಸೇರಿದಂತೆ ಹಲವು ಸ್ನೇಹಿತರು ಭಾಗವಹಿಸಿದ್ದೆವು. ಅದರಲ್ಲಿ ದಲಿತರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಅಷ್ಟರಲ್ಲಾಗಲೇ ಸಿದ್ದಲಿಂಗಯ್ಯ ಅವರ ಭಾಷಣ ಮತ್ತು ಹಾಡುಗಳು ನಮ್ಮನ್ನು ಸಾಕಷ್ಟು ಪ್ರಭಾವಿಸಿದ್ದವು. ದೇವನೂರ ಮಹಾದೇವ ಅವರ ‘ದ್ಯಾವನೂರು’ ಪುಸ್ತಕವೂ ಮುದ್ರಣವಾಗಿತ್ತು; ಇವೆಲ್ಲ ಅಂಶಗಳು ನಮ್ಮ ಮೇಲೆ ಪ್ರಭಾವ ಬೀರಿದವು.
ಇದೆಲ್ಲಾ ನಡೆಯುತ್ತಿರುವಾಗಲೇ ಭದ್ರಾವತಿಯಲ್ಲಿ ಎರಡು ದಿನಗಳ ದಲಿತ ಲೇಖಕರು ಮತ್ತು ಕಲಾವಿದರ (ದಲೇಕ) ಯುವ ಒಕ್ಕೂಟ ಆರಂಭವಾಗಿತ್ತು. ಅಷ್ಟರಲ್ಲಾಗಲೇ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ, ಅಲ್ಲಿನ ಕಬ್ಬಿಣದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಪ್ರಸಾದ್ ತ್ಯಾಗಿ, ಈರಯ್ಯ ರಾಜು, ಮೂರ್ತಿ ಮುಂತಾದ ಗೆಳೆಯರು ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ಸಂಘಟನೆ ನೊಂದಣಿ ಮಾಡಿದ್ದರು. ದಸಂಸ ಮೂಲಕ ‘ದಲೇಕ’ ಪ್ರಾರಂಭವಾಯಿತು. ರಾಜ್ಯದಲ್ಲಿ ಅಷ್ಟರಲ್ಲಾಗಲೇ ಬೂಸಾ ಚಳವಳಿ ನಡೆದು ‘ಅಂಬೇಡ್ಕರ್ ವಾದ’ದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿಕೊಂಡಿದ್ದ ಬಿ. ಬಸವಲಿಂಗಪ್ಪ ದಲೇಕವನ್ನು ಉದ್ಘಾಟನೆ ಮಾಡಿದರು. ನೇತ್ರ ತಜ್ಞರಾಗಿದ್ದ ತಿಪ್ಪೇಸ್ವಾಮಿ ಅದರ ಅಧ್ಯಕ್ಷರಾಗಿದ್ದರು. ಮಹಾದೇವ್, ಗೋವಿಂದಯ್ಯ ಸೇರಿದಂತೆ ಸಾಹಿತ್ಯ ಹಿನ್ನೆಲೆಯ ಎಲ್ಲ ಗೆಳೆಯರೂ ಅಂದು ಅಲ್ಲಿ ಸೇರಿದ್ದರು. ಕಾರ್ಯಕ್ರಮವನ್ನು ಬಿ. ಕೃಷ್ಣಪ್ಪ ಆಯೋಜಿಸಿದ್ದರು. ಉತ್ತರ ಕರ್ನಾಟಕದ ಸ್ನೇಹಿತರೂ ಬಂದಿದ್ದರು. ಬಹಳ ಮುಖ್ಯವಾಗಿ, ಜಂಬಣ್ಣ ಅಮರಚಿಂತ, ಬೋಳೆಬಂಡಪ್ಪ ಇದ್ದರು. ನನಗೆ ಚಿಕ್ಕಮಗಳೂರಿನಲ್ಲಿ ಪರಿಚಯ ಇದ್ದ ಭದ್ರಯ್ಯ, ಶಿವಣ್ಣ, ಎಂಡಿ ಗಂಗಯ್ಯ ಅವರುಗಳನ್ನು ಅಲ್ಲಿಗೆ ಕರೆಸಿಕೊಂಡಿದ್ದೆ.
ಇನ್ನು ಮುಂದೆ ನಾವು ಚಳವಳಿ ಮುಂದುವರಿಸಬೇಕಾದರೆ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಸಂಘಟನಾತ್ಮಕವಾಗಿ ನಮ್ಮ ಇಡೀ ಸಮುದಾಯಗಳನ್ನು ಹಾಗೂ ಕರ್ನಾಟಕದಾದ್ಯಂತ ಇದ್ದ ಅಂಬೇಡ್ಕರ್ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ಒಂದು ಮಾದರಿ ಚಳವಳಿ ರೂಪಿಸಬೇಕು ಎಂಬ ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು. ಯಾವ ಹೆಸರಿನಲ್ಲಿ ಹೋರಾಟ ಮುಂದುವರಿಸೋಣ ಎಂಬ ಪ್ರಶ್ನೆ ಬಂದಾಗ, ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ ಹೆಸರು ಅಂತಿಮವಾಯಿತು. ಇದರಲ್ಲಿ ಎಲ್ಲ ಒಕ್ಕೂಟಗಳನ್ನು ವಿಲೀನ ಮಾಡಿ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಕಟ್ಟಿದೆವು.
ಪ್ರ: ಚಳವಳಿಯನ್ನು ರಾಜ್ಯವ್ಯಾಪಿ ವಿಸ್ತರಿಸಿದ್ದು ಹೇಗೆ? ಅದಕ್ಕೆ ಇದ್ದಂತಹ ಸವಾಲುಗಳೇನು?
ಉ: ಬಹಳ ಮುಖ್ಯವಾಗಿ, ಭದ್ರಾವತಿ ಹೋರಾಟಗಾರರು ಸಿದ್ಲಿಪುರ ಹೋರಾಟವನ್ನು ಕೈಗೆತ್ತಿಕೊಂಡಿದ್ದರು. ಬರಗಾಲ ಬಂದಾಗ ಅಲ್ಲಿನ ದಲಿತರು ಕೇವಲ ಕಡಲೆಪುರಿ, ಐವತ್ತು ರೂಪಾಯಿ, ನೂರು ರೂಪಾಯಿಗೆ ತಮ್ಮ ಜಮೀನು ಮಾರಿಕೊಂಡಿದ್ದರು. ಅದನ್ನು ದಲೇಕ ಸದಸ್ಯರಾಗಿದ್ದ ಆ ಊರಿನ ಯುವಕರು ನಮ್ಮ ಗಮನಕ್ಕೆ ತಂದಿದ್ದರು. ಒಂದು ವರ್ಷ ಒಂಬತ್ತು ತಿಂಗಳ ಕಾಲ ನಿರಂತರ ಧರಣಿ-ಸತ್ಯಾಗ್ರಹವನ್ನು ತಾಲೂಕು ಕಚೇರಿ ಎದುರಿಗೆ ನಡೆಸುತ್ತಿದ್ದರು. ಆಗ, ಬಸವಲಿಂಗಪ್ಪ ಅವರು ಕಂದಾಯ ಮಂತ್ರಿಯಾಗಿದ್ದರು. ಈ ಬಗ್ಗೆ ಅಧ್ಯಯನ ಮಾಡಿದ ಅವರು ಮುಖ್ಯಮಂತ್ರಿ ದೇವರಾಜ ಅರಸು ಅವರ ಮೂಲಕ ಪಿಟಿಸಿಎಲ್ ಕಾಯ್ದೆ ಜಾರಿಗೆ ತಂದರು. ಭೂಮಿ ಕಳೆದುಕೊಂಡ ದಲಿತರಿಗೆ ವಾಪಸ್ ಕೊಡಬೇಕು ಎಂಬ ಕಾನೂನಾಯಿತು. ದಲಿತರ ಭೂಮಿ ಮಾರಾಟಕ್ಕೆ ಹಲವು ಷರತ್ತುಗಳನ್ನೂ ವಿಧಿಸಲಾಯಿತು. ಈ ಕಾಯಿದೆ ಹಿನ್ನೆಲೆಯಲ್ಲಿ ಉಳುವವನೇ ಭೂಮಿ ಒಡೆಯ ಎಂಬ ಘೋಷಣೆ ಮೂಲಕ ಭೂಮಿ ಉಳುತ್ತಿದ್ದವರೇ ಜಮೀನಿನ ಮಾಲೀಕರಾದರು. ಈ ಎಲ್ಲ ಕಾನೂನುಗಳು ಜಾರಿಗೆ ದಲಿತ ಸಂಘರ್ಷ ಸಮಿತಿ ಆ ವಿಷಯಗಳನ್ನು ಕೈಗೆತ್ತಿಕೊಂಡಿದ್ದೇ ಕಾರಣ.

ಇದಕ್ಕೂ ಮೊದಲು, ಸೈದ್ಧಾಂತಿಕ ಹೋರಾಟ ಕೈಗೆತ್ತಿಕೊಳ್ಳಬೇಕು ಎಂಬ ಕಾರಣಕ್ಕೆ, ನನಗೆ ಪರಿಚಯವಿದ್ದ ಆಂಧ್ರದ ರ್‍ಯಾಡಿಕಲ್ ಮೂವ್ಮೆಂಟ್ ನಾಯಕರ ಮೂಲಕ ಅನಂತಪುರದಲ್ಲಿ ವಿದ್ಯಾರ್ಥಿ ಘಟಕ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗಿಯಾಗಿದ್ದೆ. ಗದ್ದರ್ ಅವರ ನೇತೃತ್ವದಲ್ಲಿ ನಡೆದ ಅಧ್ಯಯನ ಶಿಬಿರಕ್ಕೆ ಸ್ನೇಹಿತರಾದ ಮುದ್ದುಕೃಷ್ಣಾಚಾರಿ ಕರೆದುಕೊಂಡು ಹೋಗಿದ್ದರು. ಅದನ್ನು ಆಂಧ್ರದ ಕುಗ್ರಾಮವೊಂದರಲ್ಲಿ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ರ್‍ಯಾಡಿಕಲ್ ಮೂವ್ಮೆಂಟ್‌ನ ಘೋಷಣೆಗಳು ಮತ್ತು ಹಾಡುಗಳ ಪರಿಚಯ ಆಗಿತ್ತು. 1978ರಲ್ಲಿ ತುಮಕೂರಿನ ನಾಮದ ಚಿಲುಮೆ ಫಾರೆಸ್ಟ್‌ನಲ್ಲಿ ನಡೆದ ಅಧ್ಯಯನ ಶಿಬಿರದಲ್ಲಿ ಆಂಧ್ರದಲ್ಲಿ ಕಲಿತ ಹಾಡುಗಳನ್ನು ಹಾಡಿದ್ದೆವು. ಅದೇ ಸಂದರ್ಭದಲ್ಲಿ ಬಿಹಾರದ ಬೆಲ್ಜಿಯಲ್ಲಿ ಕೂಲಿ ಹೆಚ್ಚು ಕೇಳಿದರು ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದರು. ಅದೇ ವಿಷಯವನ್ನು ಭೂಮಿಕೆಯನ್ನಾಗಿ ಇಟ್ಟುಕೊಂಡು ಬೀದಿನಾಟಕ ಕೂಡ ಮಾಡಿದ್ದೆವು.
ಆಂಧ್ರದ ರ್‍ಯಾಡಿಕಲ್ ಗುಂಪು ಹಾಡು ಹಾಡುವ ಯುವಕರನ್ನು ಕಳುಹಿಸಿಕೊಟ್ಟಿದ್ದರು. ತೆಲುಗು ಗೊತ್ತಿದ್ದ ನಮ್ಮ ಮುನಿಸ್ವಾಮಿ ಮತ್ತು ಕೆ. ರಾಮಯ್ಯ ಅವರು ಹಾಡುಗಳನ್ನು ಕನ್ನಡದಲ್ಲಿ ಅನುವಾದಿಸಿ ಕಲಿತುಕೊಳ್ಳುವುದಕ್ಕೆ ಸಹಕಾರ ನೀಡಿದರು. ‘ಬರುತಿಹೆವು ನಾವು ಬರುತಿಹೆವು.. ಯುಗಯುಗಗಳಿಂದ ನೀವು ತುಳಿದ ಜನಗಳ ಕೊರಳ ದನಿಗಳು ನಾವು..’ ಎಂಬ ಹಾಡನ್ನು ಆಗ ರಾಮಯ್ಯ ಕಟ್ಟಿದರು. ನಾಮದ ಚಿಲುಮೆ ಶಿಬಿರದಲ್ಲಿ ಲಾಲ್ ಸಲಾಂ ಹಾಡಿನ ಮೂಲಕ ಬೆಳಗ್ಗೆ ಮಾರ್ಚ್ ಫಾಸ್ಟ್ ಮಾಡಿ, ಬೆಲ್ಜಿ ಬೀದಿ ನಾಟಕದ ಅಭ್ಯಾಸ ನಡೆಸುತ್ತಿದ್ದವು; ಸಿಜಿಕೆ ಅದರ ನಿರ್ದೇಶಕರಾಗಿದ್ದರು. ಸಿದ್ದಲಿಂಗಯ್ಯ ಸೇರಿದಂತೆ ಹಿರಿಯ ಗೆಳೆಯರು ಶಿಬಿರಾರ್ಥಿಗಳಿಗೆ ಸಿದ್ದಾಂತದ ಕುರಿತು ಉಪನ್ಯಾಸ ನೀಡುತ್ತಿದ್ದರು. ಒಟ್ಟಾರೆ ಇಡೀ ಹತ್ತು ದಿನಗಳು ಪ್ರೀತಿ-ವಿಶ್ವಾಸ ಬೆಳೆಸಿಕೊಳ್ಳುವುದಕ್ಕೆ ಸಹಕಾರಿ ಆಯಿತು. ನಮಗೂ ಕೂಡ ಸೈದ್ಧಾಂತಿಕ ಹಾಗೂ ಸಾಂಸ್ಮೃತಿಕವಾಗಿ ಚಳವಳಿ ಕಟ್ಟಬಹುದು ಎಂಬ ವಿಶ್ವಾಸ ಮೂಡಿತ್ತು. ವಿಷಯಾಧಾರಿತವಾಗಿ ಹಳ್ಳಿಗಳಿಗೆ ಹೋಗಿ ಜನರನ್ನು ಸಂಘಟಿಸೋಣ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಆ ನಿರ್ಧಾರದಲ್ಲಿ ನಮಗೆ ಭೂಮಿ ವಿಷಯ ಇದ್ದಿದ್ರಿಂದ, ಹಳ್ಳಿಗಳಲ್ಲಿ ಬೆಲ್ಜಿ ನಾಟಕ ಮಾಡುತ್ತಾ, ಅಲ್ಲಿನ ಜನರನ್ನು ಮತನಾಡಿಸಿ ಅವರ ಸಮಸ್ಯೆಗಳನ್ನು ಅರಿಯುವ ಕೆಲಸ ಮಾಡಿದ್ದೆವು. ಆ ಸಮಸ್ಯೆಗಳ ಬಗ್ಗೆ ದೊಡ್ಡ ಹೋರಾಟ ಮಾಡುತ್ತಿದ್ದೆವು.
“ನಿಮ್ಮ ಹೋರಾಟದಿಂದ ಲಕ್ಷಾಂತರ ದಲಿತರಿಗೆ ಭೂಮಿ ಸಿಗುವ ಹಾಗೆ ಆಯಿತು” ಎಂದು ಅಂದಿನ ಕಂದಾಯ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. “ನಿಮ್ಮ ಸ್ವಾಭಿಮಾನ ಚಳವಳಿ ನಮ್ಮ ಜನರಿಗೆ ಆತ್ಮಗೌರವದ ಜೊತೆಗೆ ಆರ್ಥಿಕ ಭದ್ರತೆಗೆ ಸಹಕಾರಿಯಾಯಿತು” ಎಂದು ಹೊಗಳಿದ್ದರು. ಹೀಗೆ, ಭೂಮಿ ವಸತಿ ಹೋರಾಟದ ಜೊತೆಗೆ, ಬೆಲ್ಜಿ ನಾಟಕದ ಮೂಲಕ ಬಹುದೊಡ್ಡ ಹೋರಾಟಗಳನ್ನು ದಸಂಸ ಮೂಲಕ ಮಾಡಿದ್ದೇವೆ.
ಇದೇ ಸಂದರ್ಭದಲ್ಲಿ ಆರ್ಮುಗಂ ಮನೆ ಮುಂದೆ ಸಹ ನಾವು ಬೆಲ್ಜಿ ನಾಟಕ ಮಾಡಿದ್ದೆವು. ಆರ್ಮುಗಂ ಅಂಬೇಡ್ಕರ್ ಅವರನ್ನು ಸಾಕಷ್ಟು ಓದಿಕೊಂಡಿದ್ದ ರಾಜಕಾರಣಿಯಾಗಿದ್ದರು. ಮೈಸೂರಿನ ಸಂಸದರಾಗಿದ್ದ ದಲಿತ ಸಮುದಾಯದ ಶ್ರೀನಿವಾಸ್ ಪ್ರಸಾದ್ ಅವರ ಮನೆ ಮುಂದೆ ನಾಟಕ ಮಾಡುವಾಗ ನಮ್ಮ ಮೇಲೆ ಹಲ್ಲೆಯಾಗಿತ್ತು. ಇದನ್ನು ವಿರೋಧಿಸಿ ದೇವನೂರ ಮಹಾದೇವ ಲೇಖನ ಬರೆದ ಬಳಿಕ ಅವರು ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದ್ದರು. ಆದರೆ, ಆರ್ಮುಗಂ ನಮ್ಮ ಮೇಲೆ ಹಲ್ಲೆ ನಡೆಸಿದ್ದಕ್ಕೆ ಕ್ಷಮೆ ಕೇಳಲಿಲ್ಲ. ಅವರ ವಿರುದ್ಧ ದೊಡ್ಡ ಹೋರಾಟ ಮಾಡಿದ್ದೆವು. ಅವರ ಕಾರ್ಯಕರ್ತರನ್ನು ಬಿಟ್ಟು ನಮ್ಮ ಮೇಲೆ ಹಲ್ಲೆ ನಡೆಸಿದ್ದರು. ಅವರ ವಿರುದ್ಧ ನಡೆದ ಬಹಿರಂಗ ಸಭೆಯಲ್ಲಿ ಬಿ. ಕೃಷ್ಣಪ್ಪ ಬಂದು ಮಾತನಾಡಿದ್ದರು. ಅದು ರಾಜಕೀಯವಾಗಿ ದೊಡ್ಡ ತಿರುವು ಪಡೆದ ಹೋರಾಟವಾಗಿತ್ತು. ಮುಂದಿನ ದಿನಗಳಲ್ಲಿ ಆರ್ಮುಗಂ ರಾಜಕೀಯವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೋಲಾರದ ಮೂಲಕ ಅವರು ಓಡಾಡುವಾಗ ಪೊಲೀಸರ ರಕ್ಷಣೆಯಲ್ಲಿ ಹೋಗಬೇಕಿತ್ತು. ಅಷ್ಟು ಗಟ್ಟಿ ಧ್ವನಿಯಲ್ಲಿ ನಾವು ಚಳವಳಿಯನ್ನು ಕಟ್ಟಿದ್ದೆವು. ಪ್ರಮುಖವಾಗಿ, ದೌರ್ಜನ್ಯ ಮತ್ತು ಭೂಮಿ-ವಸತಿ ಹೋರಾಟದ ಹಿನ್ನೆಲೆಯಲ್ಲಿ ನಾವು ಹಳ್ಳಿಗಳ ಜನರ ಸಂಪರ್ಕ ಬೆಳೆಸಿದ್ದೆವು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಬರಹ ಪರಿಚಯಿಸುವ ಸಲುವಾಗಿ, ‘ದಲಿತ ಕೈಪಿಡಿ, ಅಂಬೇಡ್ಕರ್ ವಾಣಿ’ಯನ್ನು ಕೆ. ನಾರಾಯಣಸ್ವಾಮಿ ಹೊರತಂದಿದ್ದರು. ಇದನ್ನು ಮೈಸೂರಿನ ಗೆಳೆಯರು ಗಮನಿಸಿ, ಈ ಪುಸ್ತಕಗಳು ಪರಿಣಾಮಕಾರಿಯಾಗಿ ಮೂಡಿಬರುವಂತೆ ನೋಡಿಕೊಂಡರು. ಅಂಬೇಡ್ಕರ್ ವಾಣಿ, ದಲಿತ ಕೈಪಿಡಿ, ಸಿದ್ದಲಿಂಗಯ್ಯ ಅವರ ಹಾಡುಗಳು, ಮಹಾದೇವ ಅವರ ದ್ಯಾವನೂರು ಪುಸ್ತಕ ಮುಂತಾದವುಗಳು ಚಳವಳಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದ್ದರಿಂದ, ದಲಿತ ಸಂಘರ್ಷ ಸಮಿತಿ ಟೇಕಾಫ್ ಆಯಿತು. ಒಳ್ಳೆ ರೀತಿಯಲ್ಲಿ ಚಳವಳಿ ಕರ್ನಾಟಕದಲ್ಲಿ ಬೆಳೆಯುವುದಕ್ಕೆ ಕಾರಣವಾಯಿತು.
ಪ್ರ: ಚಳವಳಿ ಕಟ್ಟುವಾಗ ಆರ್ಥಿಕ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದ್ರಿ?
ಉ: ನಮ್ಮದು ಜಂಗಮರ ಜೀವನವಾಗಿತ್ತು. ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳೆ ಚಳವಳಿ ಮುನ್ನಡೆಸುವ ನಾಯಕತ್ವ ವಹಿಸಿಕೊಂಡಿದ್ದರು. ಹಳ್ಳಿಗಳಿಗೆ ಹೋದಾಗ, ಜನ ಏನು ಕೊಡುತ್ತಾರೋ ಅದನ್ನೇ ತಿನ್ನುತ್ತಿದ್ದೆವು. ಒಂದೇ ಮನೆಯಲ್ಲಿ ಸಾಧ್ಯವಾಗದಿದ್ದಾಗ, ನಾಲ್ಕಾರು ಮನೆಯಿಂದ ಊಟ ಸಂಗ್ರಹಿಸಿ ಅದನ್ನು ಒಟ್ಟಿಗೇ ಕುಳಿತು ತಿಂದು, ಅಲ್ಲೇ ಮಲಗುತ್ತಿದ್ದೆವು. ಪ್ರತಿಯೊಬ್ಬ ಕಾರ್ಯಕರ್ತ ಕೂಡ ಅರ್ಪಣಾ ಮನೋಭಾವದಿಂದ ದುಡಿಯುತ್ತಿದ್ದರು. ನಮಗೆ ಯಾವುದೇ ಬಯಕೆಗಳು ಇರುತ್ತಿರಲಿಲ್ಲ. ನೂರಾರು ಕಾರ್ಯಕರ್ತರಿಗೆ ಯಾವುದೇ ಒಳಾಸೆಗಳು ಇರಲಿಲ್ಲ. ನಾವು ಒಬ್ಬರಿಗೊಬ್ಬರು ಮಾದರಿಯಾಗಿದ್ದೆವು. ನಾಯಕರು, ಕಾರ್ಯಕರ್ತರು ಮತ್ತು ಜನರ ಜೊತೆಗೆ ಬೆರೆಯುತ್ತಿದ್ದರು. ಆ ಮೂಲಕ, ಸಮಸ್ಯೆಗಳು ಮತ್ತು ಅವರ ನೋವುಗಳು ನಮಗೆ ತಿಳಿಯುತ್ತಿತ್ತು. 18ನೇ ಶತಮಾನದಲ್ಲಿ ನಡೆದ ವಚನ ಚಳವಳಿ ರೀತಿಯಲ್ಲೇ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದರು.
ಆಂತರಿಕವಾಗಿ ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಸಭೆಯಲ್ಲಿ ಮಾತನಾಡಿ ಬಗೆಹರಿಸಿಕೊಳ್ಳುತ್ತಿದ್ದೆವು. ನಮ್ಮ ಸರಿತಪ್ಪುಗಳನ್ನು ಮಾತಾಡಿಕೊಳ್ಳುತ್ತಿದ್ದೆವು. ದಲಿತ ಸಂಘರ್ಷ ಸಮಿತಿಯಲ್ಲಿ 1991ರವರೆಗೂ ಆಂತರಿಕ ಪ್ರಜಾಪ್ರಭುತ್ವ ಇದ್ದಿದ್ದರಿಂದ, ಸುಮಾರು ಮೂರು ದಶಕಗಳ ಕಾಲ ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸದಿಂದ ಚಳವಳಿ ನಡೆಸಿದ್ದೇವೆ.
ಪ್ರ: ಪ್ರೊ. ಬಿ. ಕೃಷ್ಣಪ್ಪ ಅವರೊಂದಿಗಿನ ಒಡನಾಟದ ಬಗ್ಗೆ ಹೇಳಿ?
ಉ: ನಾವು ಉತ್ತರ ಕರ್ನಾಟಕ ಪ್ರವಾಸದ ಸಂದರ್ಭದಲ್ಲಿ ಜೊತೆಯಲ್ಲೇ ಹೋಗುತ್ತಿದ್ದೆವು. ನಮ್ಮೊಳಗೆ ಒಬ್ಬರಾಗಿ ಚಳವಳಿ ಕಟ್ಟುವುದಕ್ಕೆ ಕೃಷ್ಣಪ್ಪ ಸಾಕಷ್ಟು ಸಮಯ ಕೊಟ್ಟರು. ನಾವು ಯಾವುದೇ ಉದ್ಯೋಗಕ್ಕೆ ಹೋಗದೆ ಚಳವಳಿಗಾಗಿಯೇ ಮೀಸಲಾಗಿದ್ದೆವು. ನಾನು, ಗಂಗಯ್ಯ, ಚಂದ್ರಪ್ರಸಾದ್ ತ್ಯಾಗಿ ಅವರು, ಕೃಷ್ಣಪ್ಪ ಎಲ್ಲೇ ಸಭೆ ಮಾಡಿದರೂ ಹೋಗುತ್ತಿದ್ದೆವು. ಬೆಂಗಳೂರನ್ನೇ ಕೇಂದ್ರವಾಗಿ ಇಟ್ಟುಕೊಳ್ಳದೆ, ಚಳವಳಿಯನ್ನು ವಿಕೇಂದ್ರೀಕರಣ ಮಾಡಿ ಪ್ರತಿ ಜಿಲ್ಲೆಯಲ್ಲೂ ಸಭೆ ಮಾಡುತ್ತಿದ್ದೆವು. ಆದ್ದರಿಂದ, ಪ್ರತಿ ಜಿಲ್ಲೆಯಲ್ಲಿ ನಮಗೆ ಕಾರ್ಯಕರ್ತರು ಸಿಕ್ಕಿದರು. ಮೂರು ದಶಕಗಳ ಕಾಲ ಕೃಷ್ಣಪ್ಪನವರು ಸಕ್ರಿಯವಾಗಿ ಚಳವಳಿಯನ್ನು ಮುನ್ನಡೆಸಿದರು.
ಅದೇ ಸಂದರ್ಭದಲ್ಲಿ, ಒಬ್ಬರೇ ಹಲವು ವರ್ಷ ನಾಯಕರಾಗಿರುವುದು ಬೇಡ, ಪರ್ಯಾಯ ನಾಯಕತ್ವ ಬೇಕು ಎಂದು ನಿರ್ಧರಿಸಿದ್ದರಿಂದ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಅವರೇ ಪ್ರಧಾನ ಸಂಚಾಲಕರಾಗಿ ಆಯ್ಕೆಯಾದರು. ಮೂರು ವರ್ಷಗಳ ನಂತರ ತುಮಕೂರಿನಲ್ಲಿ ನಡೆದ ಸಭೆಯಲ್ಲಿ ಚಂದ್ರಪ್ರಸಾದ್ ತ್ಯಾಗಿ ಸಂಚಾಲಕರಾದರು. ಅವರ ಬಳಿಕ ಮುನಿಸ್ವಾಮಿ. ಕೃಷ್ಣಪ್ಪ ಸೇರಿದಂತೆ ಅನೇಕ ಜನರು ಪೂರ್ಣ ಪ್ರಮಾಣದಲ್ಲಿ ಚಳವಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು.
ಪ್ರ: ಡಿಎಸ್‌ಎಸ್ ಸಂವಿಧಾನ ರಚನೆ ಮತ್ತು ಅಂದಿನ ದಲಿತ್ ಇಂಟಲೆಕ್ಚುಯಲ್ಸ್‌ಗಳ ಬಗ್ಗೆ ಹೇಳಿ?
ಉ: ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಗೋವಿಂದಯ್ಯ, ಕೆ. ರಾಮಯ್ಯ, ಬಿ. ಕೃಷ್ಣಪ್ಪ, ಬೋಳೆಬಂಡೆಪ್ಪ, ಚನ್ನಣ್ಣ ವಾಲೀಕರ್, ಇಂದೂಧರ ಹೊನ್ನಾಪುರ ಎಲ್ಲರೂ ಸೇರಿ ಸಂವಿಧಾನ ಮಾಡಿಕೊಳ್ಳೋಣ ಎಂದು ಪ್ರಸ್ತಾಪಿಸಿದ್ದರು. ಕೃಷ್ಣಪ್ಪನವರು ಈ ಬಗ್ಗೆ ಆಸಕ್ತಿ ವಹಿಸಿದರು; ಕೆ. ರಾಮಯ್ಯ ಆರಂಭಿಕವಾಗಿ ಡ್ರಾಫ್ಟ್ ಮಾಡಿದ್ದರು. ಕೆ ನಾರಾಯಣಸ್ವಾಮಿ ಅದಕ್ಕೆ ಭೂಮಿಕೆ ಒದಗಿಸಿದರು. ಡ್ರಾಫ್ಟ್ ಅಂತಿಮವಾದ ಬಳಿಕ ಮಾತುಕತೆ ನಡೆಸಿ, ಸಾಮಾನ್ಯ ಸಭೆಯಲ್ಲಿ ಮಂಡಿಸಲಾಯಿತು. ನಂತರ, ನಾವು ಅದನ್ನು ಅಂಗೀಕರಿಸಿದೆವು.
ಮುಖ್ಯವಾಗಿ, ಸಮಾನತೆ, ಭ್ರಾತೃತ್ವ ಸೇರಿದಂತೆ ದೇಶದ ಸಂವಿಧಾನ ಪೀಠಿಕೆಯಲ್ಲಿರುವ ಎಲ್ಲ ಅಂಶಗಳನ್ನು ದಸಂಸ ಸಂವಿಧಾನದಲ್ಲಿ ಒಳಗೊಳ್ಳುವಂತೆ ಮಾಡಲಾಗಿತ್ತು. ಆ ಮೂಲಕ, ಸಮಾನತೆ, ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾದ ಹೋರಾಟ ಕಟ್ಟಬೇಕು ಎಂಬ ಗುರಿಯನ್ನು ಸ್ಪಷ್ಟಪಡಿಸಿಕೊಂಡೆವು. ಗುಲ್ಬರ್ಗದಿಂದ ಮಂಗಳೂರು ವಿಜಯ, ನಾಗಭೂಷಣ್ ಎಂಬ ಬ್ರಾಹ್ಮಣ ಸಮುದಾಯದವರು ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಚಳವಳಿ ಜಾತಿರಹಿತವಾಗಿರಬೇಕು ಎಂಬ ಕಾರಣಕ್ಕೆ ದಲಿತೇತರರಿಗೂ ನಾಯಕತ್ವ ನೀಡಲಾಗಿತ್ತು.
ಪ್ರ: ಚಳವಳಿ ಮತ್ತು ಕುಟುಂಬ ಎರಡನ್ನೂ ಹೇಗೆ ನಿಭಾಯಿಸಿದ್ರಿ?
ಉ: ವಿದ್ಯಾರ್ಥಿಯಾಗಿದ್ದಾಗಲೇ ನಾನು ಚಳವಳಿಗೆ ಬಂದಿದ್ದೆ. ಗೋದಾವರಿ ಪರ್ಲೇಕರ್ ಅವರು ಗಿರಿಜನರೊಟ್ಟಿಗೆ ಕೆಲಸ ಮಾಡಿ, ‘ಮಾನವ ಎಚ್ಚೆತ್ತಾಗ’ ಎಂದು ಪುಸ್ತಕ ಬರೆದಿದ್ದರು. ಅವರು ಗಿರಿಜನರ ಹೋರಾಟದಲ್ಲಿ ಸಕ್ರಿಯರಾಗಿದ್ದರು; ನಂಬಿಕೆ ಗಳಿಸಿ ಗಿರಿಜನರನ್ನು ಸಂಘಟಿಸಿದ್ದರು. ಆ ಬಗ್ಗೆ ‘ಮಾನವ ಎಚ್ಚೆತ್ತಾಗ’ ಪುಸ್ತಕದಲ್ಲಿ ಇದೇ. ಕೆ ನಾರಾಯಣಸ್ವಾಮಿ ಆ ಪುಸ್ತಕವನ್ನು ನನಗೆ ಓದಲು ಕೊಟ್ಟಿದ್ದರು. ಅದೇ ಮಾದರಿಯಲ್ಲಿ ನಾನು ಚಳವಳಿಯಲ್ಲಿ ತೊಡಗಿಸಿಕೊಂಡೆ.
ದ್ವಿತೀಯ ವರ್ಷದ ಬಿಕಾಂ ಓದುವಾಗ ನಾನು ಚಿಕ್ಕಮಗಳೂರಿನಲ್ಲಿದ್ದೆ. ಮರಿಸ್ವಾಮಿ ಎಂಬ ಉಪನ್ಯಾಸಕರೊಬ್ಬರು ಅಂಬೇಡ್ಕರ್ ಅವರನ್ನು ಸಾಕಷ್ಟು ಓದಿಕೊಂಡಿದ್ದರು. ಅವರ ಸಂಪರ್ಕದ ಮೂಲಕ ಅಂಬೇಡ್ಕರ್ ಅವರನ್ನು ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಯಿತು. ಆಗ ನಮಗೆ, ಬಸ್ ಚಾರ್ಜಿಗೆ ಹಣ ಸಿಕ್ಕರೆ ಸಾಕಾಗುತ್ತಿತ್ತು. ಇದೇರೀತಿ ಇಡೀ ದೇಶದಾದ್ಯಂತ ಓಡಾಡಿದ್ದೇನೆ.
ನಂತರ, ನಾನು ಮೂರನೇ ವರ್ಷದ ಬಿಕಾಂ ಓದಲು ಕೋಲಾರಕ್ಕೆ ಬಂದೆ. ಆದರೆ, ಅಲ್ಲಿ ಒಳ್ಳೆಯ ವಾತಾವರಣ ಇರಲಿಲ್ಲ. ಹಾಸ್ಟೆಲ್‌ನಲ್ಲಿ ಹೊಲೆಯರು ಮತ್ತು ಮಾದಿಗ ಹುಡುಗರ ನಡುವೆ ಸಂಘರ್ಷ ಇತ್ತು. ಅಲ್ಲಿ ನಾನು ಚಳವಳಿಗೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತನಾದೆ. ಹಾಸ್ಟೆಲ್‌ಗಳಲ್ಲಿ ಯುವಕರನ್ನು ಭೇಟಿಯಾಗಿ ಮಾತನಾಡತೊಡಗಿದೆ.
ನಾವು ಹಳ್ಳಿಗಳಿಗೆ ಹೋಗುವಾಗ ಬಸ್ ನಲ್ಲಿ ಘೋಷಣೆ ಕೂಗುತ್ತಾ, ಸಿದ್ದಲಿಂಗಯ್ಯ ಅವರ ಹಾಡು ಹಾಡಲು ಆರಂಭಿಸಿದರೆ ಕೆಲವರು ನಮ್ಮಿಂದ ಬಸ್ ಚಾರ್ಜ್ ಕೇಳುತ್ತಲೇ ಇರಲಿಲ್ಲ. ಅಲ್ಲೆಲ್ಲಾ ನಮ್ಮ ಪ್ರಭಾವ ಇತ್ತು. ಹಾಸ್ಟೆಲ್‌ಗಳಲ್ಲಂತೂ ಹುಡುಗರು ಕೊಟ್ಟಿದ್ದನ್ನೇ ತಿನ್ನುತ್ತಿದ್ದೆವು. ಹೀಗೆ, ನಮ್ಮ ನೂರಾರು ಕಾರ್ಯಕರ್ತರ ಬದುಕು ಜಂಗಮರ ರೀತಿಯಲ್ಲೇ ಇತ್ತು.
ಪ್ರ: ಇನ್ನಷ್ಟು ಚಳವಳಿಯ ನೆನಪುಗಳನ್ನು ಹಂಚಿಕೊಳ್ಳಬಹುದೇ?
ಉ: ಮುಳಬಾಗಿಲಿನಲ್ಲಿ ಮುನಿವೆಂಕಟಪ್ಪ ಎಂಬ ಒಬ್ಬ ದಲಿತ ಹುಡುಗ ಎಸ್‌ಎಸ್‌ಎಲ್ಸಿಯಲ್ಲಿ ಪ್ರಥಮ ದರ್ಜೆ ಮೂಲಕ ಪಾಸ್ ಆಗಿರುತ್ತಾನೆ. ಆ ಊರಿನ ಗೌಡನೊಬ್ಬ ತನ್ನ ಮಗಳ ಮದುವೆಯಲ್ಲಿ ಮುಯ್ಯಿ ಕೊಟ್ಟವರ ಹೆಸರು ಬರೆಯಲು ಮುನಿವೆಂಕಟಪ್ಪನಿಗೆ ವಹಿಸುತ್ತಾರೆ. ಇದೇ ಸಂದರ್ಭದಲ್ಲಿ ಗೌಡನ ಮಗ ಎಸ್‌ಎಸ್‌ಎಲ್ಸಿಯಲ್ಲಿ ಅನುತ್ತೀರ್ಣ ಆಗಿರುತ್ತಾನೆ. ಮುನಿವೆಂಕಟಪ್ಪ ಬುದ್ಧಿವಂತ; ಆತನ ಕೈಬರಹ ಚೆನ್ನಾಗಿದೆ ಎಂಬ ಕಾರಣಕ್ಕೆ ಅವರು ಮುಯ್ಯಿ ಕೊಟ್ಟವರ ಹೆಸರು ಬರೆಯಲು ಹೇಳಿರುತ್ತಾರೆ. ಆದರೆ, ಇದನ್ನು ಸಹಿಸದ ಗೌಡನ ಮಗ, ಆತನ ಮೇಲೆ ದ್ವೇಷ ಬೆಳೆಸಿಕೊಳ್ಳುತ್ತಾನೆ. ಹಾಸ್ಟೆಲ್‌ನಲ್ಲಿ ಮಲಗಿದ್ದವನನ್ನು ಸಿನಿಮಾಗೆ ಎಂದು ಕರೆದುಕೊಂಡು ಹೋಗಿ, ನಾಲ್ಕೈದು ಜನ ಹುಡುಗರು ಸೇರಿ ಅಮಾನಿಕೆರೆಯಲ್ಲಿ ಆತನನ್ನು ಸಾಯಿಸುತ್ತಾರೆ.
ಮೂರ್ನಾಲ್ಕು ದಿನದ ನಂತರ ಹೆಣ ನೀರಿನಲ್ಲಿ ತೇಲುತ್ತಿತ್ತು. ನಂತರ, ಅದನ್ನು ಮರಣೋತ್ತರ ಪರೀಕ್ಷೆ ಮಾಡಿಸುತ್ತೇವೆ. ಆಗ ಓದುತ್ತಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಬಹಳ ನೋವಾಗುತ್ತದೆ. ಅಂದು ಕಾಲೇಜ್ ಬಂದ್ ಮಾಡಲಾಗುತ್ತದೆ. ಒಂದು ರೀತಿಯಲ್ಲಿ ಚಳವಳಿಯನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವ ವಾತಾವರಣಕ್ಕೆ ಮುನಿವೆಂಕಟಪ್ಪ ಕಗ್ಗೊಲೆ ಕಾರಣವಾಗುತ್ತದೆ. ಘಟನೆ ನಂತರ ಒಂದು ಪಡೆಯಾದ ನಾವು, ಪ್ರತಿದಿನ ಪರೇಡ್ ಮಾಡುವುದು, ಕಬ್ಬಡ್ಡಿ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ. ಬಳಿಕ, ಕೋಲಾರದಲ್ಲಿ ಚಳವಳಿ ತೀವ್ರತೆ ಪಡೆದುಕೊಳ್ಳುತ್ತದೆ.
ಎನ್ ರಾಚಯ್ಯ ಅವರು ಆಗ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಅವರು ಬಹಳ ಧೈರ್ಯಶಾಲಿ; ದಲಿತರಿಗೆ ಸ್ವಾಭಿಮಾನ ತಂದುಕೊಟ್ಟವರು. ಅವರು ಚಿಕ್ಕಮಗಳೂರಿನ ಹಾಸ್ಟೆಲ್‌ನಲ್ಲಿ ಸಭೆ ನಡೆಸುತ್ತಿದ್ದರು. ಆಗ ನಾನು ಧ್ವನಿ ಎತ್ತಿ, “ನಮ್ಮ ಮಾತು ಯಾರೂ ಕೇಳುತ್ತಿಲ್ಲ.. ನೀವೇ ಮಾತನಾಡಿಕೊಂಡು ಹೋಗುತ್ತಿದ್ದೀರಾ” ಎಂದೆ. ಆಗ ನನ್ನನ್ನು ಕರೆದ ಅವರು ಸಮಸ್ಯೆ ಏನೆಂದು ಕೇಳಿದ್ದರು. ಆ ಮೂಲಕ ವಿದ್ಯಾರ್ಥಿಗಳಿಗೆ ಬಕೆಟ್ ಮತ್ತು ಜಗ್ ಸಿಗುವಂತೆ ಮಾಡಿದ್ದೆ. ಅವಮಾನಿತರಾಗಿದ್ದ ವಾರ್ಡನ್ ಪುಟ್ಟಸ್ವಾಮಿ ಅವರು ನನ್ನ ಮೇಲೆ ಕೂಗಾಡಿದ್ದರು. ಹೀಗೆ, ಚಿಕ್ಕಮಗಳೂರು, ಕೋಲಾರ ಮತ್ತು ತುಮಕೂರಿನಲ್ಲಿ ಒಂದೆರಡು ವರ್ಷ ಇದ್ದು ನಾನು ಚಳವಳಿ ಮಾಡಿದ್ದೇನೆ. ಆ ಸಂದರ್ಭದಲ್ಲಿ ಮರಿಸ್ವಾಮಿ ಸೇರಿದಂತೆ ಹಲವರು ನನಗೆ ಹಣದ ಸಹಾಯ ಮಾಡಿದ್ದಾರೆ. ಚಿಂತಾಮಣಿಯ ಹಮಾಲಿ ಸಂಘದವರೂ ನಮಗೆ ಹಣಕಾಸಿನ ಸಹಾಯ ಮಾಡಿದ್ದಾರೆ. ಅವರು ಮೂಟೆ ಹೊತ್ತು ಹಣ ಹಂಚಿಕೊಳ್ಳುವಾಗ, ಉಳಿದ ಹೆಚ್ಚುವರಿ ಹಣವನ್ನೆಲ್ಲಾ ಚಳವಳಿಗೆ ಕೊಡುತ್ತಿದ್ದರು.
ಪ್ರ: ರಾಜಕೀಯ ಪ್ರವೇಶದ ನಿರ್ಧಾರವೇ ಡಿಎಸ್‌ಎಸ್ ಇಬ್ಭಾಗಕ್ಕೆ ಕಾರಣ ಎಂಬ ಒಂದು ವಾದವಿದೆ..
ಉ: ಇದೇ ಪ್ರಧಾನ ಕಾರಣ ಎಂದು ನಾನು ಭಾವಿಸುತ್ತೇನೆ.. ಈ ಬಗ್ಗೆ ಹಾಸನದಲ್ಲಿ ನಡೆದ ಎರಡು ದಿನಗಳ ರಾಜ್ಯಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಚರ್ಚೆ ಬಳಿಕ ಜನತಾ ಪಕ್ಷಕ್ಕೆ ಬೆಂಬಲ ನೀಡುವ ಅಭಿಪ್ರಾಯ ವ್ಯಕ್ತವಾಯಿತು. ಅದಕ್ಕೆ ನನ್ನ ವಿರೋಧವಿತ್ತು; ‘ರಾಜಕೀಯ ಪ್ರವೇಶದಿಂದ ಚಳವಳಿಗೆ ಹಿನ್ನಡೆ ಆಗುತ್ತದೆ’ ಎಂದು ಪತ್ರ ಕೂಡ ಬರೆದಿದ್ದೆ. ಬಹುಸಂಖ್ಯಾತರ ಅಭಿಪ್ರಾಯದ ಮೇರೆಗೆ ಜನತಾ ಪಕ್ಷಕ್ಕೆ ಸಹಕಾರ ನೀಡುವ ನಿರ್ಧಾರವಾಯಿತು. ಅಷ್ಟೊತ್ತಿಗೆ ಚಳವಳಿ ಉತ್ತುಂಗಕ್ಕೆ ತಲುಪಿತ್ತು; ದಸಂಸ ಜನರ ನಡುವೆ ವಿಶ್ವಾಸ ಗಳಿಸಿತ್ತು; ನಾವು ಹೇಳಿದ್ದನ್ನು ಜನ ಕೇಳುವಂತೆ ಆಗಿತ್ತು. ನಾವು ಜನತಾ ಪಕ್ಷಕ್ಕೆ ಸಹಕಾರ ನೀಡುವಾಗ, ಬಿ ಫಾರಂ ಅನ್ನು ಚಳವಳಿ ಬೆಂಬಲಿಗರಿಗೆ ನೀಡಬೇಕು; ಯಾವುದೇ ಕಾರಣಕ್ಕೂ ಮುಂಚೂಣಿ ನಾಯಕರು ರಾಜಕೀಯ ಪ್ರವೇಶ ಮಾಡದೆ ಚಳವಳಿಯನ್ನು ಉಳಿಸಿಕೊಳ್ಳಬೇಕು ಎಂದು ನಾನು ಸಲಹೆ ನೀಡಿದ್ದೆ. ದಸಂಸ ಬೆಂಬಲಿಗರಾಗಿದ್ದ ಬಿಬಿ ನಿಂಗಯ್ಯ, ಮೋಟಮ್ಮ ಸೇರಿದಂತೆ ಐದಾರು ಜನರು ಶಾಸಕರಾದರು. ಚಳವಳಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದವರು ದಸಂಸವನ್ನು ಮುನ್ನಡೆಸಿಕೊಂಡು ಹೋದರು. ದಸಂಸ ಬೆಂಬಲಿಗರಾಗಿ ವಿಧಾನಸೌಧ ಪ್ರವೇಶ ಮಾಡಿದವರು, ಸದನದಲ್ಲಿ ನಮಗೆ ಬೆಂಬಲಿಸುವಂತಹ ವಾತಾವರಣ ನಿರ್ಮಾಣ ಆಗಲು ಸಹಕರಿಸಿದರು.
ರಾಮಕೃಷ್ಣ ಹೆಗಡೆ ಅವಧಿಯಲ್ಲಿ, ಮಲೆನಾಡಿನ ಭೂ ಮಾಲೀಕರಿಗೆ, ಅವರು ಉಳುಮೆ ಮಾಡುತ್ತಿದ್ದ ಭೂಮಿಯನ್ನು ಅವರ ಹೆಸರಿಗೆ ಪರಭಾರೆ ಮಾಡುವ ಸುಗ್ರೀವಾಜ್ಞೆ ತಂದರು. ಆದರೆ, ಈ ನಿರ್ಧಾರ ತಪ್ಪು, ಇದನ್ನು ಹಿಂಪಡೆಯಬೇಕು ಎಂದು ನಾವು ಆಗ್ರಹಿಸಿದೆವು; ಹೆಗಡೆಯವರು ವಾಕಿಂಗ್ ಮಾಡುವಾಗ ಬೆಳಗ್ಗೆ ಐದು ಗಂಟೆಗೆ ನಾನು ಮತ್ತು ಚಂದ್ರಪ್ರಸಾದ್ ತ್ಯಾಗಿ ಸೇರಿದಂತೆ ಹಲವರು ಸದಾಶಿವನಗರದ ಅವರ ಮನೆಯ ಮುಂದೆ ಘೇರಾವ್ ಹಾಕಿದೆವು. ಕೂಡಲೇ, ಸುಗ್ರೀವಾಜ್ಞೆಯನ್ನು ವಾಪಸ್ ತೆಗೆದುಕೊಂಡರು. ಬಿವಿ ನಿಂಗಪ್ಪ ಮತ್ತು ಮಹದೇವಪ್ಪ ಇಬ್ಬರೂ ಹೆಗಡೆಯವರಿಗೆ ತಾವು ರಾಜೀನಾಮೆ ನೀಡುತ್ತೇವೆ ಎಂದು ಹೇಳುವ ಮೂಲಕ ನಮ್ಮ ಬೆಂಬಲಕ್ಕೆ ನಿಂತರು.
ನಂತರದ ಚುನಾವಣೆಯಲ್ಲಿ, ಸಂಘಟನೆಯಲ್ಲಿ ಸಕ್ರಿಯರಾಗಿ ಇದ್ದವರಿಗೆ ಬಿ ಫಾರಂ ಕೊಡಿಸಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು. ಚಳವಳಿಯ ಮುಂಚೂಣಿ ನಾಯಕರಾಗಿದ್ದ ಬಿ. ಕೃಷ್ಣಪ್ಪ, ಚಂದ್ರಪ್ರಸಾದ್ ತ್ಯಾಗಿ, ಡಿಜಿ ಸಾಗರ್, ಎಂಡಿ ಗಂಗಯ್ಯ ಅವರಿಗೆ ಟಿಕೆಟ್ ನೀಡಬೇಕು ಎಂದು ನಿರ್ಧರಿಸಲಾಯಿತು. ಆದರೆ
ಕೃಷ್ಣಪ್ಪ ಅವರಿಗೆ ಬಿ ಫಾರಂ ಕೊಡುವುದಕ್ಕೆ ನಿರಾಕರಿಸಿ, ಮುಂದಿನ ಬಾರಿ ತೆಗೆದುಕೊಳ್ಳಿ ಎಂದು ಹೇಳಿದರು. ಇದರಿಂದ ಅಸಮಾಧಾನಗೊಂಡ ಕೃಷ್ಣಪ್ಪ, ನಾವು ಯಾವುದೇ ಬೆಂಬಲ ಕೊಡುವುದು ಬೇಡ ಎಂದರು. ಆದರೆ, ಇಂದೂಧರ್ ನಾಲ್ಕೈದು ಜನರಕ್ಕೆ ಬಿ ಫಾರಂ ತಂದಿದ್ದರು.
ಇದೇ ಸಂದರ್ಭದಲ್ಲಿ ನಾವು ಜನಕಲಾಮೇಳ ಮಾಡಿದಾಗ, ಲೋಕಸಭೆ ಚುನಾವಣೆ ಘೋಷಣೆಯಾಗಿತ್ತು. ಕೋಲಾರದಿಂದ ಜನತಾದಳ (ಸೆಕ್ಯೂಲರ್) ಅಭ್ಯರ್ಥಿಯಾಗಿ ನಾನೇ ನಿಲ್ಲುತ್ತೇನೆ ಎಂದು ಕೃಷ್ಣಪ್ಪ ಹೇಳಿದರು. ಜನತಾದಳದಿಂದ ಸೋತ ಬಳಿಕ ಕೃಷ್ಣಪ್ಪ, ‘ರಾಜಕೀಯ ನಮ್ಮಂತವರಿಗಲ್ಲ, ದುಡ್ಡಿಲ್ಲದೆ ರಾಜಕೀಯ ಮಾಡಲು ಸಾಧ್ಯವಿಲ್ಲ’ ಎಂದು ಹತಾಶರಾಗಿದ್ದರು. ಬಳಿಕ ಅವರು ದಲಿತ ಸಂಘರ್ಷ ಸಮಿತಿಯನ್ನು ಸಂಪೂರ್ಣವಾಗಿ ಬಿಎಸ್ಪಿ ಜೊತೆಗೆ ವಿಲೀನ ಮಾಡಿದರು. ಇದಕ್ಕೆ ನನ್ನನ್ನೂ ಸೇರಿದಂತೆ ಹಲವರ ವಿರೋಧ ಇತ್ತು. ಬಿಎಸ್ಪಿ ಮತ್ತು ಬಿಜೆಪಿ ಸಹಕಾರದೊಂದಿಗೆ ಉತ್ತರ ಪ್ರದೇಶದಲ್ಲಿ ಮಾಯವತಿ ಮುಖ್ಯಮಂತ್ರಿ ಆದ ಬಳಿಕ, ನಮ್ಮ ಚಳವಳಿಯಲ್ಲಿ ಪರಸ್ಪರ ಅಸಮಾಧಾನ ಆರಂಭವಾಯಿತು.
ಬಿಎಸ್ಪಿಗೆ ಹೋದವರನ್ನು ಹೊರಗುಳಿಸಿ, ‘ಬಿಜೆಪಿ ಬೆಂಬಲ ತೆಗೆದುಕೊಂಡಿದ್ದು ತಪ್ಪು’ ಎಂದು ಹೇಳಿ ನಾವು ಒಂದು ಗುಂಪು ಮೈಸೂರಿನಲ್ಲಿ ಸಮಾವೇಶ ನಡೆಸಿದೆವು. ಇದರಿಂದ ಬಿಕ್ಕಟ್ಟು ಶುರುವಾಯಿತು, ದಸಂಸ ಇಬ್ಭಾಗ ಆಯಿತು. ಸೈದ್ಧಾಂತಿಕವಾಗಿ ಕೆಲ ರಾಜಕೀಯ ಗೊಂದಲಗಳು ನಮ್ಮೊಳಗೆ ಆರಂಭವಾಯಿತು. ಪರ್ಯಾಯ ರಾಜಕಾರಣದ ಬಗ್ಗೆ ನಮ್ಮಲ್ಲಿ ಮಾತುಕತೆ ಆಗಿ, ರಾಜಕೀಯ ಪಕ್ಷವೊಂದನ್ನು ಕಟ್ಟಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಬಿಎಸ್ಪಿಯಿಂದ ನಮ್ಮಲ್ಲಿ ಸಾಕಷ್ಟು ಗೊಂದಲವಾಗಿ, ಒಮ್ಮತದಿಂದ ರಾಜಕೀಯ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ರಾಜಕೀಯವಾಗಿ ನಮ್ಮ ನಡುವೆ ಒಮ್ಮತ ಮೂಡದೇ ಇದ್ದದ್ದು ಸಂಘಟನೆ ಒಡೆಯುವುದಕ್ಕೆ ಕಾರಣವಾಯಿತು.
ಪ್ರ: ಹೊಲೆಯರು ಮತ್ತು ಮಾದಿಗರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದಕ್ಕೆ ದಸಂಸ ಮಾಡಿದ ಪ್ರಯತ್ನದ ಬಗ್ಗೆ ಸ್ವಲ್ಪ ಹೇಳ್ತೀರಾ?
ಉ: ಒಳಮೀಸಲಾತಿ ಹೋರಾಟ ಆರಂಭವಾಗುವವರೆಗೂ ನಮಗೆ ಎಡ-ಬಲ ಎಂಬ ಭಾವನೆಯೇ ಇರಲಿಲ್ಲ. ಉದಾಹರಣೆಗೆ, ತುಮಕೂರು, ಚಿತ್ರದುರ್ಗ ಹಾಗೂ ರಾಯಚೂರಿನಲ್ಲಿ ಮಾದಿಗರ ಸಂಖ್ಯೆ ಹೆಚ್ಚಿದೆ. ಹಲವು ಜಿಲ್ಲೆಗಳಲ್ಲಿ ಹೊಲೆಯರ ಸಂಖ್ಯೆ ಹೆಚ್ಚಿದೆ. ಚಳವಳಿ ಕಚೇರಿಗಳಲ್ಲಿ ಪದಾಧಿಕಾರಿಗಳನ್ನು ನೇಮಿಸುವಾಗ ಎರಡೂ ಸಮುದಾಯಕ್ಕೆ ಸಮಾನ ಅವಕಾಶ ನೀಡಬೇಕು ಎಂಬ ನಿರ್ಧಾರಕ್ಕೆ ಬರಲಾಗಿತ್ತು; ನಮಗೆ ಬೇರೆಬೇರೆ ಎಂಬ ಭಾವನೆಗಳೇ ಬರಲಿಲ್ಲ. ಆದರೆ, ಒಳಮೀಸಲಾತಿ ಕುರಿತು ಚರ್ಚೆ ಮಾಡಿ, ಒಮ್ಮತದ ಅಭಿಪ್ರಾಯಕ್ಕೆ ಬರುವಲ್ಲಿ ಡಿಎಸ್‌ಎಸ್ ವಿಫಲವಾಯಿತು. ಈ ಅಸಮಾಧನ ಬೆಳೆದು ತಮ್ಮತಮ್ಮ ಜಾತಿ ಸಂಘಟನೆಗಳನ್ನು ಮಾಡಿಕೊಂಡರು. ಇತ್ತೀಚೆಗೆ, ಈ ಕಂದಕ ಹೆಚ್ಚಾಗಬಾರದು ಎಂಬ ಕಾರಣಕ್ಕೆ ನಾವೆಲ್ಲಾ ಕುಳಿತು ಚರ್ಚೆ ಮಾಡಿದ್ದು, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೇವೆ. ಪ್ರಾರಂಭದಲ್ಲೇ ಡಿಎಸ್‌ಎಸ್ ಇದು ನಮ್ಮ ಸಮಸ್ಯೆ ಎಂದು ಪರಿಗಣಿಸಿದ್ದರೆ ಇಷ್ಟು ದೊಡ್ಡ ಬಿಕ್ಕಟ್ಟು ಇಂದು ಎದುರಾಗುತ್ತಿರಲಿಲ್ಲ. ಡಿಎಸ್‌ಎಸ್ ಗೆ ಇದೊಂದು ದೊಡ್ಡ ಹಿನ್ನಡೆಯಾಯಿತು.
ಮೈಸೂರು ಜಿಲ್ಲೆಯ ಹುಣಸೂರಿನ ರತ್ನಾಪುರಿಯಲ್ಲಿ ನಮ್ಮ ದಲಿತರ ಮೇಲೆ ಹಲ್ಲೆ ನಡೆದಿತ್ತು. ಆಗ ಅಲ್ಲಿನ ಸ್ನೇಹಿತರಾದ ಹರಿಹರಾನಂದ ಮತ್ತು ಜಿಲ್ಲಾ ಡಿಎಸ್‌ಎಸ್ ನಾಯಕರ ಜೊತೆಗೆ ನನಗೆ ಒಡನಾಟವಿತ್ತು. ಆ ಪ್ರಕರಣದಲ್ಲಿ ನಮ್ಮ ಜನರ ಮೇಲೂ 302 ಕೇಸ್ ದಾಖಲಾಗಿತ್ತು. ಹೊಲೆಯರಾಗಿದ್ದ ನಾರಾಯಣ ಅವರು ಕೆಲ ದಿನ ಬಂದು ನಮ್ಮ ಊರಿನಲ್ಲಿ ತಲೆಮರೆಸಿಕೊಂಡಿದ್ದರು. ಒಂದು ದಿನ ಅವರು ನನ್ನ ತಂಗಿಯನ್ನು ಇಷ್ಟಪಟ್ಟಿರುವುದಾಗಿ ತಿಳಿಸಿದರು. ಯಾಕಾಗಬಾರದು? ಎಂದು ಅಂದುಕೊಂಡು, ದೇವನೂರ ಮಹಾದೇವ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ, ಎಲ್ಲರಿಗೂ ಮಾದರಿಯಾಗಲಿ ಎಂಬ ಕಾರಣಕ್ಕೆ ಹೊಲೆಯ-ಮಾದಿಗರ ನಡುವೆ ಮದುವೆ ಮಾಡಿಸಿದೆವು.
ನನ್ನ ಮತ್ತೊಬ್ಬಳು ತಂಗಿಯನ್ನು ಹೊಲೆಯರ ಹುಡುಗ ರುದ್ರಪ್ಪ ಬಂದು ನನಗೆ ಇಷ್ಟವಾಗಿದ್ದಾಳೆ ಎಂದು ಹೇಳಿದರು. ಅವರನ್ನು ಕೋಲಾರದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಮದುವೆ ಮಾಡಿಸಿದೆ; ಅವರ ಮಗನೆ ವಿಕಾಸ್ ಮೌರ್ಯ; ನಂತರದ ದಿನಗಳಲ್ಲಿ ವಿಕಾಸ್ ನನ್ನ ಮಗಳನ್ನು ಇಷ್ಟಪಟ್ಟ. ಅವರಿಗೂ ಮದುವೆ ಮಾಡಿಸಿದ್ದೇವೆ. ಸಾಂಸ್ಕೃತಿಕವಾಗಿ ಒಂದಾಗುವುದಕ್ಕೆ ಅಂಬೇಡ್ಕರ್ ಅವರು blood fusion ಎನ್ನುತ್ತಾರೆ. ನಮ್ಮ ಕುಟುಂಬದಲ್ಲೇ ಅದು ಪ್ರಾಕ್ಟಿಕಲ್ ಆಗಿ ಜಾರಿ ಮಾಡುವುದಕ್ಕೆ ಸಾಧ್ಯವಾಯಿತು.
ಪ್ರ: ಮಗಳಿಗೆ ಕೆಸ್ತಾರ ಎಂದು ಹೆಸರಿಟ್ಟಿದ್ದು ಯಾಕೆ?
ಉ: ಮಗಳು ಹುಟ್ಟಿದ ಸಂದರ್ಭದಲ್ಲಿ ಬಿಹಾರದ ಕೆಸ್ತಾರದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿತ್ತು. ಆ ಸಂದರ್ಭಕ್ಕೆ ಕೆಸ್ತಾರ ಎಂದು ಹೆಸರಿಟ್ಟೆವು.
ಪ್ರ: ಹೊಸ ತಲೆಮಾರಿನ ನಾಯಕತ್ವ ಬೆಳೆಸುವಲ್ಲಿ ನಿಮ್ಮ ತಲೆಮಾರು ವಿಫಲವಾಯಿತಾ? ಅಥವಾ ಬೇರೇನಾದರೂ ಕಾರಣಗಳು ಇವೆಯಾ?
ಉ: ನಾವು ಹಾಸ್ಟೆಲ್‌ಗಳನ್ನು ಕೇಂದ್ರೀಕರಿಸಿ, ಅಲ್ಲಿನವರನ್ನು ಚಳವಳಿಗೆ ಕರೆತಂದು ನಾಯಕತ್ವ ರೂಪಿಸಿದ್ದೆವು. ಆ ಮೂಲಕ ಚಳವಳಿಗೆ ವಿದ್ಯಾರ್ಥಿಗಳನ್ನು ತೊಡಗಿಸುವಲ್ಲಿ ಸಫಲರಾಗಿದ್ದೆವು. ಹೀಗೆ, ಮೂರು ಮೂರೂವರೆ ದಶಕಗಳ ಕಾಲ ನಾವು ಚಳವಳಿ ನಡೆಸಿದ್ದೇವೆ. ದಸಂಸ ಪ್ರತ್ಯೇಕ ಗುಂಪುಗಳಾದ ಬಳಿಕ ವಿದ್ಯಾರ್ಥಿಗಳನ್ನು ನಮ್ಮ ನಾಯಕರನ್ನು ಹಾಸ್ಟೆಲ್‌ಗಳಿಗೆ ಬಿಟ್ಟುಕೊಳ್ಳಲಿಲ್ಲ. ಸಹಜವಾಗೇ ನಾವು ಅವರಿಂದ ದೂರವಾದೆವು. ಅವರಿಂದ ದೂರವಾಗಿದ್ದೇ ನಮ್ಮ ಸಂಘಟನೆಯ ಹಿನ್ನಡೆಗೆ ದೊಡ್ಡ ಕಾರಣ.
ಪುನಃ ನಾವು ಸಕ್ರಿಯವಾಗಿ ಸಿದ್ದಲಿಂಗಯ್ಯ ಅವರ ಹಾಡಿನ ಮೂಲಕ ಮತ್ತು ನಮ್ಮ ಹೋರಾಟದ ಹಿನ್ನೆಲೆ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸಿದರೆ, ಹೊಸ ನಾಯಕತ್ವ ಹುಟ್ಟಿಕೊಳ್ಳುತ್ತದೆ. ವ್ಯಕ್ತಿಗತವಾಗಿರುವ ಹೊಸ ನಾಯಕರು ಸಾಮೂಹಿಕ ಸಂಘಟನೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನಮ್ಮಲ್ಲಿ ಸಾಕಷ್ಟು ಜನ ಸಂಶೋಧನಾ ವಿದ್ಯಾರ್ಥಿಗಳಿದ್ದಾರೆ, ಚಳವಳಿ ನೋಡಿಕೊಂಡು ಬೆಳೆದ ನಮ್ಮ ಮಕ್ಕಳಿಗೆ ಸೈದ್ಧಾಂತಿಕ ಸ್ಪಷ್ಟ ದಾರಿ ಕೊಟ್ಟು ಚಳವಳಿಯನ್ನು ಪುನರುಜ್ಜೀವನಗೊಳಿಸಬಹುದು.
ಪ್ರ: ದಲಿತ ಚಳವಳಿಯಲ್ಲಿ ಮಹಿಳಾ ನಾಯಕತ್ವವನ್ನೂ ಬೆಳೆಸಲಿಲ್ಲ ಎಂಬ ಆರೋಪವಿದೆ?
ಉ: ಮಹಿಳೆಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧದ ಹೋರಾಟಗಳನ್ನು ನಾವು ಅಣಿಗೊಳಿಸಿದ್ದೇವೆ. ಚಂದ್ರಗುತ್ತಿ ಹೋರಾಟವನ್ನು ಕೃಷ್ಣಪ್ಪ ಮುನ್ನಡೆಸಿದರು. ಜಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆತ್ತಲೆ ಸೇವೆ ನಡೆಸಬಾರದು ಎಂದು ಕಾರ್ಯಕರ್ತರೊಟ್ಟಿಗೆ ಮಾನವ ಸರಪಳಿ ನಡೆಸಿದ್ದರು. ಆಗ ಆರ್‌ಎಸ್‌ಎಸ್ ಕಾರ್ಯಕರ್ತರು ಕೃಷ್ಣಪ್ಪನವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಾರೆ. ದಸಂಸ ಕಾರ್ಯಕರ್ತರು ಹಾಗೂ ಕೃಷ್ಣಪ್ಪ ಅಲ್ಲಿಂದ ಹೇಗೋ ತಪ್ಪಿಸಿಕೊಳ್ಳುತ್ತಾರೆ.
ಈ ವಿಷಯವನ್ನು ಹೇಗಾದರೂ ಪರಿಹರಿಸಬೇಕು ಎಂಬ ಕಾರಣಕ್ಕೆ, ಮಹಿಳಾ ಒಕ್ಕೂಟ ಮಾಡಿ, ಅವರಿಗಾಗಿ ಜಯನಗರದಲ್ಲಿ ಒಂದು ಶಿಬಿರ ನಡೆಸುತ್ತೇವೆ. ಸುಮಾರು ಮೂರ್ನಾಲ್ಕು ಸಾವಿರ ಮಹಿಳೆಯರನ್ನು ಒಗ್ಗೂಡಿಸಿದ್ದೆವು. ದಸಂಸ ಖಜಾಂಚಿಯಾಗಿದ್ದ ಒ ರಾಜಣ್ಣ ಅವರ ಪತ್ನಿ ಭಾರತಿ, ತುಮಕೂರಿನ ಗಂಗಮ್ಮ, ಮೀರಾ, ಶಾಂತಮ್ಮ, ನನ್ನ ಪತ್ನಿ ಸೇರಿದಂತೆ ಹಲವರ ನಿಯೋಗ ವಿಧಾನಸೌಧಕ್ಕೆ ಹೋಗಿದ್ದರು. ಜಾತ್ರೆಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರು. ಅಂದಿನ ಸಿಎಂ ಎಸ್‌ಆರ್ ಬೊಮ್ಮಾಯಿ ಅವರು ತಕ್ಷಣವೇ ತನಿಖೆಗೆ ಆದೇಶ ಹೊರಡಿಸಿದರು.
ಆದರೆ, ಮಹಿಳೆಯರ ಹೋರಾಟದ ನಿರಂತರತೆ ಕಾಪಾಡಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ. ಹಿಂದೂ ಕೋಡ್ ಬಿಲ್ ಜಾರಿ ಮಾಡಲಾಗದಿದ್ದಕ್ಕೆ ಅಂಬೇಡ್ಕರ್ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ನಾವೆಲ್ಲರೂ ಶಿಬಿರಗಳಲ್ಲಿ ಮಾತನಾಡುತ್ತೇವೆ. ಆದರೆ, ಮಹಿಳೆಯರೇ ಮುನ್ನಡೆಸುವ ನಾಯಕತ್ವವನ್ನು ನಾವು ಮುಂದುವರಿಸಲು ಸಾಧ್ಯವಾಗಲಿಲ್ಲ.
ಪ್ರ: ಅವಿಭಜಿತ ಕೋಲಾರ ಜಿಲ್ಲೆ ಮತ್ತು ದಲಿತ ಚಳವಳಿ ಬಗ್ಗೆ ಹೇಳಿ?
ಉ: ಕೋಲಾರ ಅಖಂಡವಾಗಿದ್ದಾಗ ಬಹಳ ದೊಡ್ಡ ಮಟ್ಟದಲ್ಲಿ ದಲಿತ ಚಳವಳಿಗಳನ್ನು ಮುನ್ನಡೆಸಿದ್ದೇವೆ. ಬಹಳ ಮುಖ್ಯವಾಗಿ ನಾಗಸಂದ್ರ ಹೋರಾಟ; ಅಲ್ಲಿನ ದಲಿತರಿಗೆ ಸ್ವಾತಂತ್ರಪೂರ್ವದಿಂದಲೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಹುತೇಕ ಜನರು ಜೀತಗಾರರಾಗಿದ್ದರು. ಬೆಳಗ್ಗೆ ಐದು ಗಂಟೆಗೆ ಹೋಗಿ ಒಕ್ಕಲಿಗರ ಮನೆಯಲ್ಲಿ ಗೇಯಬೇಕಿತ್ತು. ಅವರು ಕೊಟ್ಟಿದ್ದನ್ನು ತಿಂದು ಅವರ ಮನೆಯ ದನ ಮೇಯಿಸಬೇಕಾಗಿತ್ತು. ಜೀತಪದ್ಧತಿ ಬಿಟ್ಟು ತಮಗೆ ಬೇರೆ ಜೀವನವೇ ಇಲ್ಲವೇನೋ ಎಂದುಕೊಂಡಿದ್ದರು. ಈ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಬಳಿಕ ನಾವು ಹೋರಾಟ ಕೈಗೆತ್ತಿಕೊಂಡೆವು. ಗ್ರಾಮದಲ್ಲಿ 200 ಎಕರೆಗೂ ಹೆಚ್ಚು ಜಾಗದಲ್ಲಿ ಈಚಲಮರಗಳಿದ್ದವು, ಅಲ್ಲಿ ಭೂಮಿ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆವು. ಸರ್ಕಾರ ಕೊಡದಿದ್ದರೆ ನಾವೇ ಭೂ ಆಕ್ರಮಣ ಚಳವಳಿ ನಡೆಸೋಣ ಎಂದು ನಿರ್ಧರಿಸಿದೆವು. ಒಂದುದಿನ ಬೆಳಗ್ಗೆ ಹೋಗಿ ಈಚಲಮರ ಕಡಿಯುವಾಗಲೇ ಪೊಲೀಸರು ಬಂದು ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದರು. ಈ ಬಗ್ಗೆ ವಿಧಾನಸೌಧದ ಒಳಗೆ ಘೋಷಣೆ ಕೂಗಿದೆವು. ಸರ್ಕಾರ ನಮ್ಮ ಮೇಲೆ ಕೇಸ್ ಕೂಡ ದಾಖಲಿಸಿತ್ತು. ಅಂತಿಮವಾಗಿ ಸರ್ಕಾರ ಪ್ರತಿಯೊಂದು ಜೀತ ಕುಟುಂಬಕ್ಕೆ ಎರಡು ಎಕರೆ ಭೂಮಿ ನೀಡಿ, ಶಂಭೂಕ ನಗರ ಎಂದು ಹೆಸರಿಟ್ಟಿದೆ.
ಪ್ರ: ವಿಭಜನೆ ಬಳಿಕ ದಲಿತ ಚಳವಳಿ ಸ್ಥಿತಿ ಈಗ ಹೇಗಿದೆ?
ಉ: ನಾವು ಗುರುತಿಸಿದ ಹುಡುಗರಿಗೆ ನಾಯಕತ್ವ ಸಿಗಬೇಕು ಎಂದು ನಾವು ಚಳವಳಿ ಮಾಡಿದ್ದೆವು. ಯಾವಾಗ ವ್ಯಕ್ತಿಗತ ಆಸೆ ಶುರುವಾಯಿತೋ, ಆಗ ಅವರು ಸ್ವಪ್ರತಿಷ್ಠೆಗೆ ತಮ್ಮನ್ನು ತಾವು ತೊಡಗಿಸಿಕೊಂಡರು. ಒಳಾಸೆಗಳ ಕಾರಣಕ್ಕೆ ಹಾಗೂ ತಮ್ಮ ಐಡೆಂಟಿಟಿ ಕಾರಣಕ್ಕೆ ಸಂಘಟನೆಗಳನ್ನು ಇಬ್ಭಾಗ ಮಾಡಿಕೊಂಡರು. ನಾವೆಲ್ಲಾ ಬೆಳೆಸಿದ ಹುಡುಗರೇ ಅವರು. ಉತ್ತಮ ರೀತಿಯಲ್ಲಿ ಚಳವಳಿ ಕಟ್ಟುವುದಕ್ಕೆ ಪೂರಕ ವಾತಾವರಣ ನಿರ್ಮಾಣಕ್ಕೆ ನಾವು ಪ್ರಯತ್ನ ಮಾಡಿದ್ದೆವು. ಆದರೂ ಕೂಡ ಸ್ವಪ್ರತಿಷ್ಠೆಗೆ ಹಲವರು ಕಟ್ಟುಬಿದ್ದಿದ್ದಾರೆ. ಆ ಕಾರಣಕ್ಕೆ ಇಂದಿಗೂ ಚಳವಳಿ ಕಟ್ಟಲು ಸಾಧ್ಯವಾಗುತ್ತಿಲ್ಲ..
“ಕಾರ್ಯಕರ್ತರ ನಡುವೆ, ಜನರ ನಡುವೆ ನಿರಂತರವಾಗಿ ಕೆಲಸ ಮಾಡುತ್ತಿದ್ದೀರ ಎನ್ನುವ ಕಾರಣಕ್ಕೆ ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ. ನನ್ನಿಂದ ಬಂದಿದ್ದು ಎಂಬ ಸ್ವಪ್ರತಿಷ್ಠೆ ನಿನ್ನಲ್ಲಿ ಬೆಳೆದರೆ, ಜನ ಮತ್ತು ಕಾರ್ಯಕರ್ತರು ನಿನ್ನನ್ನು ಗೌರವಿಸುವುದಿಲ್ಲ” ಎಂದು ಮಾವೋ ಹೇಳುತ್ತಾರೆ. ಈ ಮಾತನ್ನು ನಾನು ದಸಂಸ ಪ್ರತೀ ಶಿಬಿರದಲ್ಲಿ ಹೇಳಿದ್ದೇನೆ. ಆದರೆ, ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಸಿದ್ಧರಿಲ್ಲ. ತಮ್ಮನ್ನು ತಾವು ತಿದ್ದುಕೊಂಡು, ಅರ್ಪಣಾ ಮನೋಭಾವ ಬಂದರೆ ಚಳವಳಿ ಮತ್ತೆ ಜೀವ ಪಡೆಯುತ್ತದೆ; ಅದಕ್ಕೆ ನಮ್ಮ ನಾಯಕರು ಮನಸ್ಸು ಮಾಡಬೇಕಷ್ಟೆ.
ದಲಿತ ಸಂಘರ್ಷ ಇಂದು ನಿಂತನೀರಾಗಿದೆ. ಚಲನಶೀಲಗೊಳಿಸಿ, ಅದನ್ನು ಹರಿಯುವ ನೀರನ್ನಾಗಿ ಪರಿವರ್ತಿಸಿದರೆ, ಒಳ್ಳೆಯದನ್ನು ಹುಡುಕಿ ಕಟ್ಟಬಹುದು. ಆ ಪ್ರಯತ್ನದ ಭಾಗವಾಗಿ ನಾವು ದಸಂಸ ಚಾಲನಾ ಸಮಿತಿ ಎಂದು ಮಾಡಿಕೊಂಡಿದ್ದೇವೆ. 2022ರಲ್ಲಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಆಗ ಒಂದು ಆಶಾಭಾವನೆಯಂತೂ ನಮ್ಮಲ್ಲಿ ಮೂಡಿತ್ತು; ಚಳವಳಿ ಮತ್ತೆ ಜೀವ ಪಡೆದುಕೊಳ್ಳುತ್ತದೆ ಎಂದುಕೊಂಡಿದ್ದೆವು. ಆದರೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಸಂಘಟನೆಗಳನ್ನು ವಿಲೀನ ಮಾಡಲು ಸಾಧ್ಯವಾಗಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಎಲ್ಲರೂ ಒಮ್ಮತಕ್ಕೆ ಬಂದು ಒಂದು ಪ್ರಣಾಳಿಕೆಯನ್ನು ಮಾಡಿಕೊಳ್ಳಬೇಕು. ನಮ್ಮ ಉದ್ದೇಶವನ್ನು ಈಡೇರಿಸಲು ಚಳವಳಿ ಮತ್ತು ರಾಜಕೀಯ ಹೋರಾಟ ಮಾಡಬೇಕು.
ಇದಕ್ಕಾಗಿ ನಮ್ಮ ಹಳೆ ಅನುಭವಗಳನ್ನು ನಾವು ಬಳಸಿಕೊಳ್ಳಬೇಕು. ನಾವು ಪುನಃ ಈಗ ಸಿದ್ದಲಿಂಗಯ್ಯ ಹಾಗೂ ದೇವನೂರ ಅವರನ್ನು ತೆಗೆದುಕೊಳ್ಳಬೇಕು. ಕೃಷ್ಣಪ್ಪ ನಮ್ಮ ಜೊತೆಗೆ ಇದ್ದಾರೆ ಎಂದುಕೊಳ್ಳಬೇಕು. ಬೇರೆಬೇರೆ ಜಿಲ್ಲೆಗಳಲ್ಲಿ ದಲಿತ ಚಳವಳಿಗೆ ತಮ್ಮನ್ನು ಅರ್ಪಣೆ ಮಾಡಿಕೊಂಡು ಈಗ ತೀರಿಕೊಂಡಿರುವ ನಾಯಕರು ಮತ್ತು ಕಾರ್ಯಕರ್ತರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು. ಎಲ್ಲರನ್ನೂ ಒಗ್ಗೂಡಿಸುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಅದಕ್ಕೊಂದು ಚೌಕಟ್ಟು ಕೊಡುವ ಕೆಲಸ ಆಗಬೇಕಿದೆ. ಹಾಗಾದರೆ ಮಾತ್ರ ಚಳವಳಿಗೆ ಜೀವ ತುಂಬುವ ಕೆಲಸ ಆಗುತ್ತದೆ.
03.01.1950 ರಂದು ನಾರಾಯಣಪ್ಪ ಮತ್ತು ಕದಿರಮ್ಮ ದಂಪತಿಗಳಿಗೆ ಚಿಂತಾಮಣಿಯಲ್ಲಿ ಜನಿಸಿದ ವೆಂಕಟೇಶ್. ಎನ್ ಅವರಿಗೆ ಈಗ 75 ವಯಸ್ಸು.
ಕರ್ನಾಟಕದಲ್ಲಿ 70ರ ದಶಕದಿಂದ ದಲಿತ ಸಂಘರ್ಷ ಸಮಿತಿಯಲ್ಲಿದ್ದು, ದಲಿತ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದಲಿತ ಸಂಘರ್ಷ ಸಮಿತಿಯ ಆರಂಭಿಕ ನಾಯಕರಲ್ಲಿ ಇವರೂ ಒಬ್ಬರು. ಮೂರು ದಶಕಗಳಿಗೂ ಹೆಚ್ಚು ಕಾಲ ನಡೆದ ಸಾಮಾಜಿಕ ಹೋರಾಟದಲ್ಲಿ ಇವರದ್ದೂ ಮುಖ್ಯಪಾತ್ರವಿದೆ.
ದೇಶದ ಯಾವುದೇ ಭಾಗದಲ್ಲಿ ದಲಿತರ ಮೇಲೆ ದೌರ್ಜನ್ಯವಾದರೂ ಅವುಗಳ ವಿರುದ್ಧ ಹೋರಾಟಗಳನ್ನು ರೂಪಿಸಿದ್ದಾರೆ ಮತ್ತು ಪಾಲ್ಗೊಂಡಿದ್ದಾರೆ. ದಲಿತರ ಆರ್ಥಿಕ ಸಾಮಾಜಿಕ ಸುಧಾರಣೆಗೆ ಸ್ಪಂದಿಸುವ ಹೋರಾಟಗಳಲ್ಲೂ ಪಾಲ್ಗೊಂಡಿದ್ದಾರೆ. 80 ಮತ್ತು 90ರ ದಶಕದಲ್ಲಿ ನಡೆದ ಭೂಹೋರಾಟಗಳಾದ ಗೌರಿಬಿದನೂರು ತಾಲೂಕಿನ ನಾಗಸಂದ್ರ ಭೂ ಹೋರಾಟ ಮತ್ತು ಜೀತಮುಕ್ತ ಹೋರಾಟದಲ್ಲಿ, ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಿದರೆ ಕಾವಲು ಹೋರಾಟದಲ್ಲಿ, ಚಿಕ್ಕಮಗಳೂರಿನ ಚಂದಗೋಡು, ಭದ್ರಾವತಿಯ ಸಿದ್ಲಿಪುರ ಭೂ ಹೋರಾಟಗಳಲ್ಲೂ ಇವರ ಮುಖ್ಯ ಪಾತ್ರವಿದೆ. ಹೀಗೆ ನೂರಾರು ಹೋರಾಟಗಳಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಭೂಪಾಲ್ ಘೋಷಣೆಯು ಬೆಂಗಳೂರು ಘೋಷಣೆ ಆಗಬೇಕೆಂದು ಸರ್ಕಾರಕ್ಕೆ ಒತ್ತಾಯಪಡಿಸಿದ್ದರಲ್ಲಿ, ಬಾಬರಿ ಮಸೀದಿ ಧ್ವಂಸ ಪ್ರಕರಣದ ನಂತರ ಉಂಟಾದ ಫ್ಯಾಸಿಸ್ಟ್ ಉಪಟಳವನ್ನು ಕುಂದಿಸುವುದಕ್ಕಾಗಿ ನಡೆದ ವಿವಿಧ ಹೋರಾಟಗಳನ್ನು ಸಂಘಟಿಸಿದ್ದಾರೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ಮಂಡಲ್ ವರದಿ ಜಾರಿಯಾಗಬೇಕೆಂದು ನಡೆದ ಹೋರಾಟದಲ್ಲೂ ಭಾಗವಹಿಸಿದ್ದರು. ಹೀಗೆ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೂ ಬದಿಗಿಟ್ಟು ಅನೇಕ ಹೋರಾಟಗಳಲ್ಲಿ ದುಡಿದಿರುವ ಎನ್.ವೆಂಕಟೇಶ್ ಅವರು ಅಂಬೇಡ್ಕರರ ಆಶಯಗಳನ್ನು ಕಾರ್ಯಕರ್ತರ ಬಳಿ ತೆಗೆದುಕೊಂಡು ಹೋಗಲು ಹಲವು ಶಿಬಿರಗಳನ್ನು ನಡೆಸಿ ಬಾಬಾಸಾಹೇಬರ ಚಿಂತನೆಗಳನ್ನು ಪಸರಿಸುವಲ್ಲಿ ಕೆಲಸ ಮಾಡಿದ್ದಾರೆ. ಬೌದ್ಧ ಧಮ್ಮದ ಅವಶ್ಯಕತೆಯನ್ನು ದಲಿತರೂ ಸೇರಿದಂತೆ ತಳ ಸಮುದಾಯಗಳು ಅರಿಯಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ದಲಿತರ ಬದುಕನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಉನ್ನತಿಗೆ ಕೊಂಡೊಯ್ಯಲು ಇನ್ನೂ ಶ್ರಮಿಸುತ್ತಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಕಿಶನ್ ಪಾಟ್ನಾಯಕ್ ಮತ್ತು ಮೇಧಾ ಪಾಟ್ಕರ್ ರವರ ನೇತೃತ್ವದ ಸಮಾಜವಾದ ಜನಪರಿಷತ್ ನಡೆಸಿದ ಹೋರಾಟಗಳಲ್ಲಿ ಅಂತಾರಾಷ್ಟ್ರೀಯ ಸಂಚಾಲಕರಾಗಿ ಭಾಗವಹಿಸಿ, ನರ್ಮದಾ ಬಚಾವೋ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ರಾಜಕೀಯವಾಗಿ ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಹೊಂದಿರುವ ಇವರು ಇಂದಿಗೂ ಸಹ ಆರ್‌ಎಸ್‌ಎಸ್-ಬಿಜೆಪಿಯ ಕೋಮುವಾದ ಮತ್ತು ಜಾತಿವಾದದ ವಿರುದ್ಧ ಹೋರಾಡುತ್ತಲೇ ಇದ್ದಾರೆ. 2014ರ ನಂತರ ಒಕ್ಕೂಟ ಸರ್ಕಾರವನ್ನು ರಚಿಸಿದ ಬಿಜೆಪಿಯ ಒಡೆದಾಳುವ ನೀತಿ ಹಾಗೂ ಬಂಡವಾಳಶಾಹಿ ನೀತಿಗಳ ವಿರುದ್ಧ ಗಟ್ಟಿಯಾದ ಪ್ರತಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
ಇವರ ಸಾಧನೆಗಳನ್ನು ಗಮನಿಸಿ ನಿಡುಮಾಮಿಡಿ ಮಠದ ನಿಡುಮಾಮಿಡಿ ಸದ್ಬಾವನಾ ಪ್ರಶಸ್ತಿ, ಅಂಬೇಡ್ಕರ್ ಶತಮಾನೋತ್ಸವ ಟ್ರಸ್ಟ್-ಸ್ಪೂರ್ತಿಧಾಮ ಕೊಡಮಾಡುವ ಭೋದಿ ವರ್ಧನ ಪ್ರಶಸ್ತಿ, ಕರ್ನಾಟಕ ದಲಪದ ಪ್ರಾಧಿಕಾರ ಕೊಡಮಾಡುವ ದಲಪದ ಚಂದ್ರ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ.
ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಿ ಫ್ಯಾಸಿಸ್ಟ್ ಮನಸ್ಥಿತಿಯ ಆರ್‌ಎಸ್‌ಎಸ್ ಸಿದ್ಧಾಂತವನ್ನು ಮಣಿಸಬೇಕೆಂಬುವುದೇ ಇವರ ಪ್ರಮುಖ ಆಶಯ.


