(ಕುಟುಂಬದಿಂದ, ಇತ್ತ ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದವರು ಟ್ರಾನ್ಸ್‌ಜೆಂಡರ್‌ಗಳು. ಈ ಸಮುದಾಯದ ಎಲ್ಲರ ಅನುಭವಗಳು, ನೋವುಗಳು, ಸವಾಲುಗಳು, ಅವಮಾನಗಳು ಒಂದೇ ತೆರನಾಗಿರುತ್ತವೆ. ಸಮಾಜದಲ್ಲಿ ಟ್ರಾನ್ಸ್‌ಜೆಂಡರ್‌ಗಳ ಕುರಿತ ದೃಷ್ಟಿಕೋನ ಅಷ್ಟೋ ಇಷ್ಟೋ ಬದಲಾದಂತೆ ಕಾಣುತ್ತಿರುಬಹುದು. ಆದರೆ ಟ್ರಾನ್ಸ್‌ಜೆಂಡರ್‌ಗಳ ಅನುಭವಗಳನ್ನು ಕೇಳುತ್ತಾ ಹೋದರೆ, ಸಮಾಜ ಇನ್ನೂ ಬಹಳ ದೂರ ಕ್ರಮಿಸಬೇಕಿರುವುದು ಸ್ಪಷ್ಟವಾಗುತ್ತದೆ. ಹುಬ್ಬಳ್ಳಿ ಮೂಲದ ಟ್ರಾನ್ಸ್‌ಜೆಂಡರ್ ‘ಶಬ್ಬು’ ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.)
ಹೊರಳು ದಾರಿಯ ನೋಟ
ಚಿಕ್ಕವರಾಗಿದ್ದಾಗ ನಾನು ಏನೇ ಮಾಡಿದರೂ ಹಾಸ್ಯಾಸ್ಪದವಾಗಿ ಕಾಣುತಿತ್ತು. ಪಾತ್ರೆ ತೊಳೆಯುವುದು, ನೀರು ತಂದು ಕೊಡುವುದು, ಅಡುಗೆ ಸಮಯದಲ್ಲಿ ಸಹಾಯ ಮಾಡುವುದು, ಮನೆ ಅಂಗಳದಲ್ಲಿ ರಂಗೋಲಿ ಹಾಕುವುದು- ಇವೆಲ್ಲವನ್ನೂ ಚಿಕ್ಕವರಾಗಿದ್ದಾಗ ಮಾಡಿದರೆ ಅಮ್ಮನಿಗೆ ಖುಷಿಯಾಗುತಿತ್ತು. ಶಾಲೆಗೆ ಹೋಗುವುದು ಶಾಲೆ ಮುಗಿದ ನಂತರ ಅಮ್ಮನ ಸೀರೆ ಉಟ್ಟು ಅಲಂಕಾರ ಮಾಡಿಕೊಂಡು ಹುಡುಗಿಯರಂತೆ ನಾಚುವುದು, ಅಮ್ಮನನ್ನು ನಗಿಸುವುದು ಇವೆಲ್ಲಾ ಚೆನ್ನಾಗಿ ಇರುತ್ತಿದ್ದವು. ಬೆಳಿತಾ ಬೆಳಿತಾ ಜಾಸ್ತಿ ಹುಡುಗಿಯರ ಜೊತೆ ಇರೋದು, ಶಾಲೆಯಲ್ಲಿ ಅವರ ಪಕ್ಕದಲ್ಲಿ ಕೂರೋದು ಮಾಡುತ್ತಿದ್ದೆ. ಇದೆಲ್ಲವನ್ನೂ ನೋಡುತ್ತಿದ್ದ ಹುಡುಗರು ನೀನೇನೋ ಹುಡುಗೀನಾ, ಚಕ್ಕನಾ, ಒಂಬತ್ತಾ, ಕೋಜಾನಾ, ಮಾಮನಾ ಅಂತ ಕರಿತಾ ಇದ್ರು. ಯಾಕೋ ಹಿಂಗೆಲ್ಲಾ ಮಾಡುತ್ತಿದ್ದೀಯಾ? ನಿನಗೆ ಹುಡುಗಿ ಆಗೋಕೆ ಇಷ್ಟನಾ ಅಂತ ಪ್ರಶ್ನೆಗಳನ್ನು ಕೇಳಿ ನನ್ನನ್ನು ರೋಧಿಸುತ್ತಿದ್ದರು. ನಮ್ಮ ಗುರುಗಳು ಕೂಡ ನಮ್ಮನ್ನು ಅಯ್ಯೋ ಅನಿಸುತ್ತಿದ್ದರು, ಹೊಡೆಯುತ್ತಿದ್ದರು. ಶಾಲೆಗೆ ಬರಬೇಡ ಎಂದು ಹೇಳುತ್ತಿದ್ದರು.
ಶಾಲಾ ಹಂತದಲ್ಲೇ ನಾವು ಏನು ಅಂತ ನಮಗೆ ತಿಳಿದುಬಿಡುತ್ತದೆ. ನಮ್ಮಂಥವರ ಆಟೋಟ, ಗೆಳೆತನ, ನಡೆಯುವ ಶೈಲಿ ಎಲ್ಲವನ್ನೂ ಮೊದಲಿಗೆ ಗಮನಿಸುವುದೇ ಶಾಲೆಯವರು. ನಾವು ಹೇಗೆ ನಡಿತ್ತಿದ್ದೀವಿ, ಯಾರ ಜೊತೆ ಇರುತ್ತೇವೆ, ಹೇಗೆ ವರ್ತಿಸುತ್ತೇವೆ- ಇವುಗಳನ್ನೆಲ್ಲ ಶಾಲೆಯವರು ಗಮನಿಸುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಗುಣ ಏನು, ನಮ್ಮಲ್ಲಿ ಏನು ಬದಲಾವಣೆಯಾಗಿದೆ ಅಂತ ಗೊತ್ತಾಗೋದು ಈ ಜನರಿಂದಲೇ. ಟ್ರಾನ್ಸ್‌ಜೆಂಡರ್‌ಗಳ ಭಾವನೆಗಳು ಜನರಿಂದಾಗಿ ಶುರುವಾಗುತ್ತವೆ. ಅವರಿಂದನೇ ನಮ್ಮ ಬದಲಾವಣೆಗಳು ನಮಗೆ ಗೊತ್ತಾಗೋದು. ನಾವು ಯಾರು ಅಂತ ಈ ಜನರೇ ನಮಗೆ ಪರಿಚಯ ಮಾಡಿಸುತ್ತಾರೆ.
ಅಕ್ಕಪಕ್ಕದವರು, ಶಾಲೆಯವರು ನನ್ನ ಮೇಲೆ ಮನೆಯವರಿಗೆ ದೂರು ಹೇಳುತ್ತಿದ್ದರು. ಮನೆಯಲ್ಲಿ ಅಪ್ಪ ನನಗೆ ಚಪ್ಪಲಿಯಲ್ಲಿ, ದೊಣ್ಣೆಯಲ್ಲಿ, ದೊಣ್ಣೇಲಿ ಹೊಡಿತ್ತಿದ್ದರು. ನಿನ್ನ ಕೊಂದು ಬಿಡುತ್ತೀನಿ ಅನ್ನುತ್ತಿದ್ದರು,
ಚಿತ್ರಹಿಂಸೆ ಕೊಡ್ತಾ ಇದ್ರು. ಅಮ್ಮ ಮನೆಯಲ್ಲಿ ಇಲ್ಲ ಅಂತ ಗೊತ್ತಾದ್ರೆ ಮುಗಿದೇ ಹೋಗುತ್ತಿತ್ತು ನಮ್ಮ ಜೀವನ. ಅದರಲ್ಲೂ ನಮ್ಮಂಥವರಿಗೆ ಅಣ್ಣ ಅಥವಾ ತಮ್ಮ ಇದ್ದರೆ ನಮ್ಮ ಜೀವನವನ್ನೇ ಮುಗಿಸಿ ಬಿಡುತ್ತಾರೆ. ನೆರೆಹೊರೆಯವರು, “ದೇವಸ್ಥಾನಕ್ಕೆ ಹೋಗಿ ಬನ್ನಿ, ದೇವರು ಇದ್ದಾನೆ, ಡಾಕ್ಟರ್ ಇದ್ದಾರೆ. ನಿಮ್ಮ ಮಗ ಸರಿ ಹೋಗುತ್ತಾನೆ” ಎಂದು ಸಲಹೆ ಕೊಟ್ಟರೇ ಹೊರತು ನನ್ನ ಮನಸ್ಸಿನ ಭಾವನೆಯನ್ನು ಅರ್ಥಮಾಡಿಕೊಳ್ಳಲೇ ಇಲ್ಲ.
ಇದನ್ನೂ ಓದಿರಿ: ಅಕ್ಕಯ್ ಕಥನಕ್ಕೆ ಕಂಬನಿ ಮಿಡಿದ ಪ್ರೇಕ್ಷಕರು; ಕಲಾವಿದೆಗೆ ಚಪ್ಪಾಳೆಯ ಮಹಾಪೂರ
ಹೊರಗಿನವರ, ಅಕ್ಕಪಕ್ಕದವರ ಮಾತನ್ನು ಕೇಳಿ ನನ್ನ ಮನೆಯವರೇ ನನ್ನನ್ನು ಕೆಟ್ಟದಾಗಿ ನೋಡುತ್ತಿದ್ದರು. ಆಗಲೇ ನನಗೆ ನಾನು ಒಂಟಿ ಅನ್ನೋ ಭಾವನೆ ಶುರುವಾಯಿತು. ನನಗೆ ಹುಡುಗಿಯರ ಜೊತೆ ಇರೋದು, ಅವರೊಂದಿಗೆ ಆಟವಾಡೋದು, ಅವರಂತೆಯೇ ಇರುವುದೆಂದರೆ ತುಂಬಾ ಇಷ್ಟ. “ಹೀಗೆಲ್ಲಾ ಮಾಡಬಾರದು, ನಿನೇನಾದ್ರೂ ಹುಡುಗಿ ತರ ಆಡಿದ್ರೆ ನಾನು ಸತ್ತೋಗ್ತೀನಿ” ಎಂದು ಹೇಳಿ ನನ್ನ ಭಾವನೆಗಳನ್ನು ಕಟ್ಟುಹಾಕುತ್ತಿದ್ದರು. ಆದರೇ ಅಮ್ಮನಿಗೆ ನೋವು ಕೊಡಲು ಇಷ್ಟವಿರಲಿಲ್ಲ. ಹಾಗಾಗಿ ನನ್ನ ಭಾವನೆಗಳನ್ನು ಸ್ವಲ್ಪ ದಿನದವರೆಗೆ ತಡೆದುಕೊಂಡೆ. ದಿನಗಳು ಕಳೆದಹಾಗೆ ನನ್ನ ಭಾವನೆಗಳನ್ನು ತಡೆಯಲು ಆಗುತ್ತಿರಲಿಲ್ಲ. ಜನಗಳ ಮಾತು ಕೇಳಲಾಗದೆ ಶಾಲೆಯನ್ನೇ ಬಿಟ್ಟೆ. ಕೆಲಸಕ್ಕೆ ಹೋಗುವ ನೆಪದಲ್ಲಿ ನನ್ನಂಥ ಜೀವಗಳನ್ನು ಹುಡುಕಲು ಹೋಗುತ್ತಿದ್ದೆ. ನಾನು ಮಾತ್ರ ಹೀಗಿಲ್ಲ, ನನ್ನಂಥವರು ಇರಬಹುದೆಂದು ಹುಡುಕುತ್ತಿದ್ದೆ.
ರಾತ್ರಿ ಊರಲ್ಲಿ ಎಲ್ಲಾ ಮಲಗಿದ ಮೇಲೆ, ಅಪ್ಪ ಮಲಗಿದ ಮೇಲೆ ಮನೆಗೆ ಬರುತ್ತಿದ್ದೆ. ಅಪ್ಪ ಬೆಳಿಗ್ಗೆ ಎದ್ದು ಹೋದಮೇಲೆ ನಾನು ಎದ್ದು ಹೊರಗಡೆ ಬರುತ್ತಿದ್ದೆ. ಯಾಕೆಂದರೆ ಜನರು ನನ್ನನ್ನು ನೋಡಿ ಏನೇನೋ ಮಾತನಾಡುತ್ತಿದ್ದರು. ನನ್ನನ್ನು ನೋಡಿ ನಗುತ್ತಿದ್ದರು. ಇದರಿಂದ ನಮ್ಮ ಕುಟುಂಬ ಮುಜುಗರ ಅನುಭವಿಸುತ್ತಿತ್ತು. ಕೊನೆಗೆ ನನ್ನ ಸಮುದಾಯ ಸಿಕ್ಕಿದ ಮೇಲೆ ನಾನು ಒಂಟಿ ಅನ್ನೋ ಭಾವನೆ ಮರೆಯಾಯಿತು. ಸಂಜೆ ವೇಳೆ ಅವರು ಇರುವ ಜಾಗಕ್ಕೆ ಹುಡುಕಿಕೊಂಡು ಹೋಗುತ್ತಿದ್ದೆ. ಅವರ ಜೊತೆ ನನ್ನ ಕುಟುಂಬದ ಬಗ್ಗೆ, ನೆರೆಹೊರೆಯವರ ಬಗ್ಗೆ, ನನ್ನ ಭಾವನೆಗಳ ಬಗ್ಗೆ ಹೇಳಿಕೊಂಡು ಅಳುತ್ತಿದ್ದೆ. ಅವರು ನನಗೆ ಧೈರ್ಯ ಹೇಳುತ್ತಿದ್ದರು. ಮತ್ತೆ ನನ್ನನ್ನು ಮನೆಗೆ ವಾಪಸ್ ಕಳಿಸುತ್ತಿದ್ದರು. ಮನೆಗೆ ಹೋದಾಗ ಅದೇ ಚುಚ್ಚು ಮಾತುಗಳು… ನನ್ನನ್ನು ದಿನೇದಿನೇ ಕೊಲ್ಲುತ್ತಿದ್ದವು.
ಇದಕ್ಕೆಲ್ಲ ಪರಿಹಾರ ಹುಡುಕಲೇ ಬೇಕು ಎಂದು ತಿರ್ಮಾನಿಸಿ ಮನೆಯಲ್ಲಿ ಯಾರಿಗೂ ಹೇಳದೆ ಒಂದು ದಿನ ಹೊರಗಡೆ ಬಂದುಬಿಟ್ಟೆ. ಟ್ರಾನ್ಸ್‌ಜೆಂಡರ್‌ಗಳು ತಾವಾಗಿಯೇ ಮನೆಯಿಂದ ಹೊರಗೆ ಬರುತ್ತಾರೆಂದು ಮನೆಯವರು ಹೇಳಿಕೊಳ್ಳುತ್ತಾರೆ. ಅದು ಸುಳ್ಳು. ಅಕ್ಕಪಕ್ಕದ ಮನೆಯವರ ಮಾತು ಕೇಳಿ ಹಿಂಸೆ ಕೊಡುತ್ತಾರೆ. ನಮ್ಮ ಮನಸ್ಥಿತಿ, ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ ಕಿರುಕುಳ ನೀಡುತ್ತಾರೆ.
ನಮ್ಮನ್ನು ಸ್ವತಂತ್ರವಾಗಿ ಇರಲು ಬಿಡಿ. ನಾವು ಯಾಕೆ ಮನೆಯಿಂದ ಆಚೆ ಹೋಗ್ತೀವಿ? ನಮ್ಮನ್ನು ಯಾರಾದರೂ ಮಂಗಳಮುಖಿ ಎಂದು ಕರೆದಾಗ ನೀವು ಪ್ರಶ್ನೆ ಮಾಡಿ. ಅವರನ್ನು ಮಂಗಳಮುಖಿ ಎಂದು ಹೀಗಳೆಯಬೇಡಿ, ಅವರು ನಮ್ಮ ಮಕ್ಕಳು ಎನ್ನಿ. ಹುಟ್ಟಿಸಿರೋದು ನಾವು, ಸಾಕೋದು ನಾವು, ನಿಮಗೇನು ಅಂತ ಕೇಳಿ. ನಮ್ಮ ಬೆನ್ನ ಹಿಂದೆ ನಿಂತುಕೊಳ್ಳಿ. ನಮಗೆ ಧೈರ್ಯ ತುಂಬಿ. “ನೀನು ಭಿಕ್ಷಾಟನೆ ಮಾಡಬೇಡ, ಚೆನ್ನಾಗಿ ಓದು. ಒಂದು ಒಳ್ಳೆ ಕೆಲಸ ತಗೋ” ಅಂತ ಹೇಳಿ. “ನಿನಗೆ ಹೇಗೆ ಇಷ್ಟ ಆಗುತ್ತೋ, ಹಾಗೆ ಬದುಕು, ನಾವಿದ್ದೇವೆ” ಅಂತ ಹೇಳಿ. ಹಾಗಾದಾಗ ಮಾತ್ರ ನಾವು ಮನೆ ಬಿಟ್ಟು ಹೋಗಲ್ಲ. ಜವಾಬ್ದಾರಿಯುತ ಕೆಲಸ ಮಾಡುತ್ತಾ ಕುಟುಂಬವನ್ನು ಸಾಕುತ್ತೇವೆ. ದುರಾದೃಷ್ಟವಶಾತ್, ನೀವು ಈ ಮಾತನ್ನ ಹೇಳಲ್ಲ! ಬದಲಾಗಿ ಮರ್ಯಾದೆ ಹೋಗುತ್ತೆ ಅನ್ನುತ್ತೀರಿ!
ನಮ್ಮನ್ನ ನಾವು ಹೆಣ್ಣು ಅಂತ ಭಾವಿಸಿದ್ದೀವಿ. ಹೀಗಿರುವಾಗ ನೀವು (ಕುಟುಂಬದವರು) ಇನ್ನೊಂದು ಹೆಣ್ಣಿನ ಜೊತೆ ಹೇಗೆ ನಮಗೆ ಮದುವೆ ಮಾಡ್ತೀರಾ? ನಮ್ಮಿಂದ ಇನ್ನೊಂದು ಹೆಣ್ಣಿನ ಜೀವನವನ್ನು ಯಾಕೆ ಹಾಳು ಮಾಡುತ್ತೀರಾ? ಮದುವೆಯಾಗಿ ಇನ್ನೊಂದು ಹೆಣ್ಣಿನ ಜೊತೆ ನಾವು ಹೇಗೆ ಜೀವನ ಮಾಡೋದು? ಇನ್ನೊಂದು ಹೆಣ್ಣಿನ ಪಕ್ಕ ಹೇಗೆ ಮಲಗೋದು? ಹೀಗಾಗಿ ನಾವು ಮನೆಯಲ್ಲಿ ಯಾರಿಗೂ ಹೇಳದೆ ಹೊರ ಬಂದುಬಿಡ್ತೀವಿ. ನಮ್ಮ ಸಮುದಾಯವನ್ನು ಹುಡುಕಿ ಅವರೊಂದಿಗೆ ಸೇರಿಕೊಳ್ಳುತ್ತೇವೆ. ಅಲ್ಲಿ ಹೆಣ್ಣಿನ ವಸ್ತ್ರ ಧರಿಸಿ ನಾವು ಸಂಪೂರ್ಣ ಹೆಣ್ಣೆಂದು ಭಾವಿಸಿ ಹಾಡ್ತೀವಿ, ಕುಣಿತೀವಿ, ಅಲ್ಲಿ ನಮಗೆ ಯಾವುದೇ ಅಡೆ ತಡೆ ಇರುವುದಿಲ್ಲ.
ನಾವು ನಮ್ಮನ್ನು ಹೆಣ್ಣಾಗಿ ಬದಲಾವಣೆ ಮಾಡಿಕೊಂಡ ಮೇಲೆ ಮತ್ತೆ ಮನೆಗೆ ಹೋಗಲು ಭಯ ಆಗುತ್ತೆ. ಮನೆಗೆ ಹೋದ್ರೆ ನಮ್ಮ ಜಡೆ ಕತ್ತರಿಸುತ್ತಾರೋ, ಬೈಯುತ್ತಾರೋ, ನಮ್ಮನ್ನು ಸಾಯಿಸುತ್ತಾರೋ ಅಂದ್ಕೊಂಡು ಭಯಪಟ್ಟು ಮನೆಗೆ ಹೊಗೋದನ್ನೇ ನಿಲ್ಲಿಸಿಬಿಡುತ್ತೇವೆ. ನಾವು ಹುಟ್ಟಿದ ಕುಟುಂಬ, ನಮ್ಮ ಊರು, ನಮ್ಮ ಸ್ನೇಹಿತರು- ಸರ್ವಸ್ವವನ್ನೂ ಬಿಟ್ಟು ಪರಿಚಯವೇ ಇಲ್ಲದ ಊರಿಗೆ ಬಂದು ಜೀವನವನ್ನು ಕಟ್ಟಿಕೋಳ್ಳುತ್ತೀವಿ. ಹೊಸ ಜನ ಪರಿಚಯ ಆಗ್ತಾರೆ. ನಾವು ಹೇಗೆ ಇರಬೇಕು ಅಂತ ‘ಗುರುಮಾತಾ’ ಹೇಳಿಕೊಡುತ್ತಾರೆ. ಹೆಣ್ಣಿನ ಥರ ಕಾಣಬೇಕೆಂದು ಮೀಸೆ ಗಡ್ಡ ಎಲ್ಲವನ್ನೂ ತೆಗೆಸುತ್ತಾರೆ. ಮುಖಕ್ಕೆ, ತುಟಿಗೆ ಬಣ್ಣ ಅಚ್ಚುತ್ತಾರೆ. ನೋಡೋದಕ್ಕೆ ಹೆಣ್ಣನ್ನು ಹೋಲುವಂತೆ ಸೌಂದರ್ಯವರ್ಧಕಗಳನ್ನು ಅಚ್ಚುತ್ತಾರೆ. ಅಂಗಡಿಯ ಮುಂದೆ ಕೈ ಚಾಚಲು ಹೇಳುತ್ತಾರೆ. ಜನರು ಕೊಡುವ 5, 10 ರೂಪಾಯಿ ಇಸ್ಕೊಂಡು ನಾವು ಹೋಗಬೇಕು.
ಕೈ ಚಾಚುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ವಿಧಿ ಇಲ್ಲದೆ ಹೊಟ್ಟೆಪಾಡು ಮಾಡಲೇಬೇಕು. ಬರೋ ಹಣವನ್ನು ಭಾಗವಾಗಿ ವಿಂಗಡಿಸಬೇಕು. ಅದರಲ್ಲಿ ಗುರುಮಾತಾಗೆ ಸ್ವಲ್ಪ ಹಣವನ್ನು ಕೊಡಬೇಕು. ಸ್ವಲ್ಪ ಹಣವನ್ನು ನಮ್ಮ ಅಪರೇಷನ್‌ಗೆ ಎತ್ತಿಡಬೇಕು. 6 ಅಥವಾ 10 ತಿಂಗಳಾದಮೇಲೆ ನಮಗೆ ಆಪರೇಷನ್ ಮಾಡಿಸುತ್ತಾರೆ. ಆಪರೇಷನ್ ವೇಳೆ ಸತ್ತು ಹೋಗುವ ಸಾಧ್ಯತೆಯೂ ಇರುತ್ತದೆ. ಆ ಸಮಯದಲ್ಲಿ ನಮ್ಮ ಕುಟುಂಬ ತುಂಬಾ ನೆನಪಾಗುತ್ತೆ. ಆದರೆ ಅವರಿಗೆ ನಾವು ನೆನಪೇ ಇರೋದಿಲ್ಲ. ಅವರಿಗೆ ನಾವು ಬೇಡ ಅಂದರೆ ನಮಗೂ ಅವರು ಬೇಡ ಅಂತ ಬಂದಿರ್ತಿವಿ ಅಷ್ಟೆ. ನಾವು ಮನಸ್ಫೂರ್ತಿಯಾಗಿ ನಾವು ಎಲ್ಲರನ್ನು ಬಿಟ್ಟು ಬಂದಿರುವುದಿಲ್ಲ.
ಇದನ್ನೂ ಓದಿರಿ: ಸೆಕ್ಸ್ ವರ್ಕ್‌ಗೆ ’ವೃತ್ತಿ’ ಘನತೆ: ಸುಪ್ರೀಂ ಆದೇಶದ ಸುತ್ತ…
ನಮ್ಮ ಆಪರೇಷನ್ ಆದಮೇಲೆ ನಾವು ಸಂಪೂರ್ಣ ಹೆಣ್ಣಾಗುತ್ತೀವಿ. ಆದರೆ ಸಾಮಾನ್ಯವಾಗಿರುವ ಹೆಣ್ಣು ಮಕ್ಕಳ ರೀತಿ ಇರುವುದಿಲ್ಲ. ಕೇವಲ ಭಾವನೆಗಳಲಷ್ಟೆ ನಾವು ಹೆಣ್ಣಾಗಿರುತ್ತೇವೆ. ನಮಗೂ ಎಲ್ಲರಂತೆ ಮನಸ್ಸಿದೆ. ಆದರೆ ಕೇಳುವವರ್‍ಯಾರೂ ಇಲ್ಲ. ನಿಮ್ಮ ಜೀವನದ ಕಥೆಯನ್ನು ಎಲ್ಲರ ಮುಂದೆ ಹೇಳಿಕೊಳ್ಳಿ ಅಂತ ತುಂಬಾ ಮಾಧ್ಯಮಗಳು ಮುಂದೆ ಬರುತ್ತವೆ. ಆದರೆ ನಮ್ಮ ಪೂರ್ತಿ ಜೀವನ ಅನುಭವ ಹೇಳಲು ಬಿಡುವುದಿಲ್ಲ. ಟಿ.ಆರ್.ಪಿ.ಗಾಗಿ ಅವರು ಎಷ್ಟು ಬರೆದುಕೊಟ್ಟಿರುತ್ತಾರೊ ಅಷ್ಟನ್ನೇ ನಾವುಗಳು ಹೇಳಬೇಕು. ನಮ್ಮ ನಿಜ ಜೀವನವನ್ನು ಕೇಳಲು ಯಾರೂ ಇಷ್ಟಪಡುವುದಿಲ್ಲ.
ನಮ್ಮ ಕೆಲಸ ಏನು? ಬೇರೆಯವರ ಬಳಿ ಕೈ ಚಾಚಿ ಕೇಳುತ್ತೇವೆ, ರಾತ್ರಿ ವೇಳೆಯಲ್ಲಿ ಲೈಂಗಿಕ ವೃತ್ತಿ ನಡೆಸುತ್ತೇವೆ. ಇವೆಲ್ಲಾ ನಮ್ಮ ಹೊಟ್ಟೆಪಾಡಿಗೆ. ಆದರೆ ಇವುಗಳನ್ನೆಲ್ಲ ಮಾಡಲು ನೀವೇ ಕಾರಣ. ಹೊರಗಡೆ ಅಂಗಡಿಗೆ ಹೋಗಲಿ ಅಥವಾ ಕೆಲಸ ಕೇಳಲು ಹೋಗಲಿ, ನಮ್ಮನ್ನು ಕಾಮದ ದೃಷ್ಟಿಯಲ್ಲೇ ನೋಡುತ್ತಾರೆ.
ಸಮಾಜ ಮತ್ತು ಜನಗಳು ನಮ್ಮನ್ನು ನೊಡೋ ದೃಷ್ಟಿನೇ ಬೇರೆ. ಮುಂದೆ ನಮ್ಮನ್ನ ಚೆನ್ನಾಗಿ ಮಾತನಾಡಿಸುತ್ತಾರೆ ಹಿಂದೆ ತಿರುಗಿ ನೋಡಿದರೆ ಅದೇ ನಿಂದನೆಯ ಮಾತುಗಳನ್ನು ಆಡುತ್ತಾರೆ. ಮಾಮ, ಚಕ್ಕ, ಮಂಗಳಮುಖಿ ಅಂತಾರೆ.
ನಮ್ಮನ್ನ ಮದುವೆ ಆಗುತ್ತೀವಿ ಅಂತ ಹೇಳಿಕೊಂಡು ಬರ್‍ತಾರೆ. ಮೂರ್ನಾಲ್ಕು ದಿನ ನಮ್ಮ ಜೊತೆ ಇದ್ದು ಅವರ ತೆವಲು ತೀರಿಸಿಕೊಂಡು ಹೊರಡುತ್ತಾರೆ. ನಾವು ಸಂಪಾದನೆ ಮಾಡಿದ ಹಣವನ್ನೂ ಕಳ್ಳತನ ಮಾಡಿಕೊಂಡು ಹೋಗ್ತಾರೆ. ನಾವು ಪೊಲೀಸರಿಗೆ ದೂರು ನೀಡಿದರೆ, “ನೀವು ಕಾನೂನ ಪ್ರಕಾರ ಮದುವೆ ಆಗಿದ್ದೀರಾ” ಅಂತ ಕೇಳ್ತಾರೆ. ನಮ್ಮನ್ನು ಕಾನೂನು ರೀತಿಯಲ್ಲಿ ಮದುವೆ ಆಗಲು ಯಾರು ಮುಂದೆ ಬರ್‍ತಾರೆ ಹೇಳಿ? ನಮಗೆ ಮಕ್ಕಳಾಗಲ್ಲ, ನಿಜ. ಆದರೆ ನಮ್ಮನ್ನು ಮದುವೆ ಮಾಡಿಕೊಂಡವರನ್ನು ಮಗುವಿನಂತೆಯೇ ನೋಡಿಕೊಳ್ಳುತ್ತೇವೆ. ಇದು ನಿಮಗೆ ಅರ್ಥವಾಗಲ್ಲ ಅಷ್ಟೆ.
ಲೈಂಗಿಕ ಕೆಲಸವನ್ನು ಯಾರೂ ಇಷ್ಟ ಪಟ್ಟು ಮಾಡಲ್ಲ. ಹೊಟ್ಟೆ ಪಾಡಿಗಾಗಿ ಮಾಡುತ್ತೇವೆವಷ್ಟೇ. ಈ ಪ್ರಪಂಚದಲ್ಲಿ ಎಲ್ಲರೂ ಹಣದ ಹಿಂದೆ ಓಡುತ್ತಿದ್ದಾರೆ. ನಾವು ಕೂಡ ಹಣದ ಹಿಂದೇನೇ ಓಡುತ್ತಿದ್ದೀವಿ. ಇಬ್ರು ಕೂಡ ಹಣದ ಹಿಂದೇನೇ ಹೋಗ್ತಾ ಇರೋದು. ಆದರೆ ನಡೆಯೋ ದಾರಿಗಳು ಬೇರೆ ಬೇರೆಯಾದರೂ ಗುರು ಒಂದೇ.
ಇದನ್ನೂ ಓದಿರಿ: ಇಂದಿರಮ್ಮನ ಕಾಲದಿಂದಲೂ ಲಿಂಗತ್ವ ಅಲ್ಪಸಂಖ್ಯಾತರ ಜೊತೆ ಇದ್ದದ್ದು ಕಾಂಗ್ರೆಸ್: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಕ್ಕಯ್ ಮನದಾಳ
ನಾವು ನಿಮ್ಮತ್ರ ಏನೂ ಕೇಳಲ್ಲ. ನಮಗೆ ಮೊದಲು ಗೌರವ ಕೂಡಿ ಅಷ್ಟೆ. ನಾವು ಯಾರ ಬಳಿಯಾದರೂ ಜಗಳ ಮಾಡಿದಾಗ ಬಂದು ನಮ್ಮನ್ನು ಪ್ರಶ್ನೆ ಮಾಡಿ. ನಾವಾಗ ಉತ್ತರ ಕೋಡ್ತೀವಿ. ಅದನ್ನು ಬಿಟ್ಟು, ಎಲ್ಲ ತಪ್ಪನ್ನೂ ನಮ್ಮ ಮೇಲೆಯೇ ಹಾಕಬೇಡಿ. ನಮ್ಮ ಗೌರವಕ್ಕೆ ಧಕ್ಕೆ ಬಂದಾಗ, ಯಾರಾದರೂ ನಮ್ಮ ಕುರಿತು ಕೆಟ್ಟದಾಗಿ ಮಾತನಾಡಿದಾಗ ಮಾತ್ರ ನಾವು ತಿರುಗಿ ಬೀಳುತ್ತೇವೆ. ನಮ್ಮ ದನಿ ದೊಡ್ಡದಾಗಿರುತ್ತದೆ. ಆದರೆ ನಮ್ಮ ಮನಸ್ಸು ಮಗು ತರ ಇರುತ್ತೆ. ನೀವು ಅದನ್ನು ಅರ್ಥ ಮಾಡಿಕೊಳ್ಳಲ್ಲ. ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನೋಡಬೇಡಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನಮ್ಮನ್ನು ಬದುಕಲು ಬಿಡಿ. ನಮ್ಮ ಜೀವನ ಸಂತೋಷವಾಗಿರಲು ಬಿಡಿ. ಇಂತಹ ನರಕಕ್ಕೆ ತಳ್ಳಬೇಡಿ. ನಮಗೂ ಒಂದು ಉದ್ಯೋಗವನ್ನು ಕಲ್ಪಿಸಿಕೊಡಿ. ನಮ್ಮನ್ನು ಕಾಮದ ದೃಷ್ಟಿಯಿಂದ ನೋಡಬೇಡಿ. ನಮ್ಮನ್ನು ಕೂಡ ನಿಮ್ಮಂತೆ ಮನುಷ್ಯರು ಅಂತ ನೋಡಿ. ಇಷ್ಟು ಬದಲಾವಣೆಯನ್ನು ನಾವು ಸಮಾಜದಲ್ಲಿ ನೋಡಲು ಬಯಸುತ್ತೇವೆ.
ನಾವು ನಿಮ್ಮತ್ರ ಏನು ಕೇಳಲ್ಲ. ಒಂದೇ ಒಂದು ಅಪ್ಪುಗೆ ಅಷ್ಟೆ ಸಾಕು. ನಾವು ಈ ಸಮಾಜಕ್ಕೆ, ಈ ರಾಜಕಾರಣಿಗಳಿಗೆ, ಪೊಲೀಸರಿಗೆ, ಒಂದು ಮಾತನ್ನು ಕೇಳ್ತೀವಿ. ಉತ್ತರ ಕೊಡ್ತಾರಾ? ಟ್ರಾನ್ಸ್‌ಜೆಂಡರ್‌ಗಳು ಯಾರನ್ನಾದರೂ ರೇಪ್ ಮಾಡಿದ್ದಾರಾ? ಇಲ್ಲ ಕೊಲೆ ಮಾಡಿದ್ದಾರಾ? ದರೋಡೆ ಮಾಡಿದ್ದಾರಾ? ಬ್ಯಾಂಕ್ ಲೂಟಿ ಮಾಡಿದ್ದಾರಾ? ಆದರೂ ಅಪವಾದ ಹೊರಿಸುತ್ತಾರೆ. ನೋಡಿದೆಲ್ಲ ನಿಜ ಆಗಲ್ಲ. ನಮ್ಮ ಕಡೆಯಿಂದ ಈ ತರ ತಪ್ಪುಗಳು ಆಗಿಲ್ಲ. ನಿಮ್ಮ ಕಡೆಯಿಂದಲೇ ಈ ತಪ್ಪುಗಳು ಆಗಿವೆ. ಆದರೆ ನೀವು ನಮ್ಮನ್ನು ಮಾನಸಿಕ ಖಿನ್ನತೆಗೆ ತಳ್ಳುತ್ತಿದ್ದೀರಿ.
ಮುಖ್ಯವಾಗಿ ಟ್ರಾನ್ಸ್‌ಜೆಂಡರ್‌ಗಳ ಬಗ್ಗೆ ಶಾಲಾ ಪಠ್ಯಪುಸ್ತಕದಲ್ಲಿ ಪಾಠಗಳನ್ನಿಟ್ಟು ಅರಿವು ಮೂಡಿಸಿ. ನಮ್ಮ ಸಮುದಾಯದ ಬಗ್ಗೆ ಗೌರವವನ್ನು ಬೆಳೆಸಿ.
- ಶಬ್ಬು
- ನಿರೂಪಣೆ: ಬಿ.ಎನ್.ಅಂಬಿಕಾ


