ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ನಡುವೆ ಶಿವಸೇನೆ ಸಂಸದ, ಪಕ್ಷದ ವಕ್ತಾರ ಸಂಜಯ್ ರಾವತ್ ಅವರು ಬಂಡಾಯ ಪಾಳಯದ ನಾಯಕ ಏಕನಾಥ್ ಶಿಂಧೆ ಪರ ನಿಂತ 22 ಶಾಸಕರೊಂದಿಗೆ ಸಂಪರ್ಕದಲ್ಲಿರುವುದಾಗಿ ಗುರುವಾರ ಹೇಳಿದ್ದಾರೆ. ಒಂದು ವೇಳೆ ವಿಶ್ವಾಸ ಮತಯಾಚನೆ ನಡೆದರೆ ಆಡಳಿತರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಗೆಲ್ಲುತ್ತದೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಪಕ್ಷವು ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗಿನ ಮೈತ್ರಿಯಿಂದ ಹೊರಬರಬೇಕು ಎಂದು ಬಂಡಾಯ ಶಾಸಕರು ಬಯಸುವುದಾರೆ ಅವರು ‘24 ಗಂಟೆಗಳಲ್ಲಿ’ ಮುಂಬೈಗೆ ಹಿಂತಿರುಗಬೇಕು ಎಂದು ಸಂಜಯ್ ರಾವತ್ ಹೇಳಿದ್ದಾರೆ. ‘‘ಈ ಬಗ್ಗೆ ನಾವು ಚರ್ಚಿಸುತ್ತೇವೆ, ಆದರೆ ಅವರು ಹಿಂತಿರುಗುವ ಧೈರ್ಯವನ್ನು ತೋರಿಸಬೇಕು” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅವರು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಸೂರತ್‌ನಿಂದ ಮುಂಬೈಗೆ ಹಿಂದಿರುಗಿದ ಶಾಸಕರಾದ ನಿತಿನ್ ದೇಶಮುಖ್ ಮತ್ತು ಕೈಲಾಶ್ ಪಾಟೀಲ್ ಅವರು ಉಪಸ್ಥಿತರಿದ್ದರು. ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಿಜೆಪಿ ರೂಪಿಸಿದ ಸಂಚು ಎಂದು ನಿತಿನ್ ದೇಶಮುಖ್ ಆರೋಪಿಸಿದರೆ, ಹಲವಾರು ಶಾಸಕರು ಮುಂಬೈಗೆ ಮರಳಲು ತಯಾರಿದ್ದಾರೆ ಎಂದು ಕೈಲಾಶ್ ಪಾಟೀಲ್ ಹೇಳಿಕೊಂಡಿದ್ದಾರೆ.
ಬಂಡಾಯ ಶಾಸಕರು ಇದೀಗ ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಯ ರ್‍ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಇದ್ದಾರೆ. ಇಲ್ಲಿಂದ ಇಂದು ಹೊರ ಬಂದ ಹೊಸ ದೃಶ್ಯಾವಳಿಗಳು ಒಟ್ಟು 42 ಬಂಡಾಯ ಶಾಸಕರು ಶಿಂಧೆ ಅವರೊಂದಿಗೆ ಇದ್ದಾರೆ ಎಂಬುವುದು ತೋರಿಸಿದೆ ಎಂದು ಮಾಧ್ಯಮಗಳು ಹೇಳಿವೆ. ಇವರಲ್ಲಿ ಶಿವಸೇನೆಯ 34 ಶಾಸಕರಿದ್ದು, ಏಳು ಶಾಸಕರು ಪಕ್ಷೇತರರಾಗಿದ್ದಾರೆ.
ಇದನ್ನೂ ಓದಿ: ‘ಉದ್ಧವ್ ಠಾಕ್ರೆ ರಾಜೀನಾಮೆ ಬೇಡ; ಬಿಜೆಪಿ ಜೊತೆಗೆ ಮೈತ್ರಿ ಮಾಡೋಣ’- ಶಿವಸೇನೆಯ ಬಂಡಾಯ ಶಾಸಕ
ಪಕ್ಷಾಂತರ ವಿರೋಧಿ ಕಾನೂನು ಜಾರಿಯಾಗದಂತೆ ಇರಲು ಶಿಂಧೆ ಅವರಿಗೆ ಶಿವಸೇನೆಯ 55 ಶಾಸಕರಲ್ಲಿ 37 ಶಾಸಕರ ಬೆಂಬಲದ ಅಗತ್ಯವಿದೆ. ನಿನ್ನೆಯಷ್ಟೆ ಮತ್ತೆ ಆರು ಶಾಸಕರು ಶಿಂಧೆ ನೇತೃತ್ವದ ಬಂಡಾಯ ಪಾಳಯವನ್ನು ಸೇರಿದ್ದರು.
ಶಿಂಧೆ ಅವರ ಪಾಳಯದ 22 ಶಾಸಕರೊಂದಿಗೆ ಶಿವಸೇನೆ ಸಂಪರ್ಕದಲ್ಲಿದೆ ಎಂಬ ರಾವತ್ ಹೇಳಿದ್ದು, ನಿನ್ನೆ ಅವರು 20 ಬಂಡಾಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದರು.