Homeಮುಖಪುಟರಾಮನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಕ್ಬಾಲ್ ಹುಸೇನ್: ನಿಖಿಲ್ ಕುಮಾರಸ್ವಾಮಿಗೆ ಪೈಪೋಟಿ ಸಾಧ್ಯತೆ

ರಾಮನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಕ್ಬಾಲ್ ಹುಸೇನ್: ನಿಖಿಲ್ ಕುಮಾರಸ್ವಾಮಿಗೆ ಪೈಪೋಟಿ ಸಾಧ್ಯತೆ

- Advertisement -
- Advertisement -

ತೀವ್ರ ಕುತೂಹಲ ಮೂಡಿಸಿರುವ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ರಾಮನಗರಕ್ಕೆ ಇಕ್ಬಾಲ್ ಹುಸೇನ್‌ರವರನ್ನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದೆ. ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಇಬ್ಬರೂ ಪ್ರಬಲ ಅಭ್ಯರ್ಥಿಗಳಾಗಿದ್ದು, ಕ್ಷೇತ್ರದ ಸದ್ಯದ ಸ್ಥಿತಿಗತಿ ಹೇಗಿದೆ ಮತ್ತು ಗೆಲುವಿನ ಸಾಧ್ಯತೆ ಹೇಗಿದೆ ಎಂದು ನೋಡೋಣ.

ರಾಮನಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದವರು ಸಿಎಂ ಆಗುತ್ತಾರೆ ಎಂಬ ಮಾತು ಮತ್ತು ಇಲ್ಲಿಂದ ಗೆದ್ದು ಸಿಎಂ ಆದವರು ಪೂರ್ಣಾವಧಿ ಪೂರೈಸುವ ಮೊದಲೇ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯೂ ಜನರಲ್ಲಿತ್ತು. ನಾಲ್ವರು ಸಿಎಂಗಳು ಐದು ಬಾರಿ ಅಧಿಕಾರ ನಡೆಸಲು ಸಹಕರಿಸಿರುವ ಜಿಲ್ಲೆಯಿದು. ಕೆಂಗಲ್ ಹನುಮಂತಯ್ಯ, ಎಚ್.ಡಿ. ದೇವೇಗೌಡರು ರಾಮನಗರದಿಂದ ಆಯ್ಕೆಯಾಗಿ ತಲಾ ಒಮ್ಮೊಮ್ಮೆ ಸಿಎಂ ಆದರೆ, ಎಚ್.ಡಿ. ಕುಮಾರಸ್ವಾಮಿಯವರು ಇಲ್ಲಿಂದ ಗೆದ್ದು ಎರಡು ಬಾರಿ ಸಿಎಂ ಆಗಿದ್ದಾರೆ. ರಾಮಕೃಷ್ಣ ಹೆಗಡೆಯವರು ಕೂಡ 1983ರಲ್ಲಿ ಸಿಎಂ ಆದ ನಂತರ ಕನಕಪುರ ಉಪಚುನಾವಣೆಯಲ್ಲಿ ಗೆದ್ದು ವಿಧಾನಸಭಾ ಸದಸ್ಯರಾಗಿದ್ದರು. ಈ ಎಲ್ಲ ಕಾರಣಗಳಿಂದ ರಾಮನಗರ ರಾಜಕೀಯ ಪಕ್ಷಗಳಿಗೆ-ನಾಯಕರಿಗೆ ಜಿದ್ದಾಜಿದ್ದಿನ ಜಿಲ್ಲೆ.

ಒಕ್ಕಲಿಗ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ದಲಿತರು ಮತ್ತು ಮುಸ್ಲಿಮರು ಸಹ ಗಣನೀಯ ಸಂಖ್ಯೆಯಲ್ಲಿದ್ದು, ಪ್ರತಿ ಬಾರಿಯೂ ಒಕ್ಕಲಿಗರೆ ನಿರ್ಣಾಯಕ ಮತದಾರರಾಗಿದ್ದಾರೆ. 2007ರಲ್ಲಿ ರಾಮನಗರ ಅಧಿಕೃತ ಜಿಲ್ಲೆಯ ಸ್ಥಾನಮಾನ ಪಡೆದ ನಂತರ ಇಲ್ಲಿನ ಜನತೆ ಹಲವು ಕನಸುಗಳನ್ನು ಕಂಡಿದ್ದರು. ಜಿಲ್ಲೆಯಾಗಿ 15 ವರ್ಷ ಪೂರೈಸಿದರೂ ಕೆಲ ಕಟ್ಟಡಗಳನ್ನು ಎತ್ತಿರುವುದು ಬಿಟ್ಟರೆ ಮಹತ್ವದ ಬದಲಾವಣೆಯಾಗಿಲ್ಲ ಎನ್ನುವುದು ಜನರ ಕೊರಗು. ಇಲ್ಲಿಂದ ಗೆದ್ದವರು ಜನರ ಕೈಗೆ ಸಿಗುವುದಿಲ್ಲ, ಬಹುತೇಕ ರೈತಾಪಿ ಜನರಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ, ರೇಷ್ಮೆ ಬೆಳೆ ಕೈ ಹಿಡಿಯುತ್ತಿಲ್ಲ, ಸುಸಜ್ಜಿತ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಹಲವು ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಇಲ್ಲಿಂದ 2023ರಲ್ಲಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಬೇಕೆಂದು ಮಾಜಿ ಸಿಎಂ ಎಚ್‌ಡಿಕೆ ನಿರ್ಧರಿಸಿದ್ದಾರೆ. ಕಾಂಗ್ರೆಸ್‌ ಪಕ್ಷ ಸಹ ಜಿಲ್ಲೆಯಲ್ಲಿ ಮೇಕೆದಾಟು ಯೋಜನೆಗಾಗಿನ ಪಾದಯಾತ್ರೆ ನಡೆಸಿ ಸುದ್ದಿ ಮಾಡಿತ್ತು. ಈಗ ಇಕ್ಬಾಲ್ ಹುಸೇನ್‌ರವರನ್ನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದೆ.

ರಾಮನಗರದಲ್ಲಿ ಒಟ್ಟು ಅಂದಾಜು 2,20,000 ಮತದಾರರಿದ್ದಾರೆ. ಒಕ್ಕಲಿಗ 90,000 ಮತಗಳು, ಮುಸ್ಲಿಂ 40,000, ಪರಿಶಿಷ್ಟ ಜಾತಿಯ 40,000, ಲಿಂಗಾಯತ 15,000 ಮತ್ತು 35,000 ಹೆಚ್ಚು ಇತರ ಸಮುದಾಯದ ಮತದಾರರಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದ ಒಕ್ಕಲಿಗ ಮತಗಳು ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್‌ನ ಮತಬ್ಯಾಂಕ್ ಆಗಿ ಪರಿವರ್ತನೆ ಆಗಿವೆ. ಹಿಂದೊಮ್ಮೆ ಕೋಮು ಸೂಕ್ಷ್ಮ ಕ್ಷೇತ್ರವಾಗಿದ್ದ ಇದು ಇತ್ತೀಚಿನ ವರ್ಷಗಳಲ್ಲಿ ಅದರಿಂದ ಹೊರಬಂದಿದೆ. ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಫೈಟ್ ಇರುವುದರಿಂದ ಇದು ಸಾಧ್ಯವಾಗಿದೆ.

ರಾಮನಗರ ಕ್ಷೇತ್ರದಲ್ಲಿ 1957ರಿಂದ ಒಟ್ಟು 6 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಎಂ ಲಿಂಗಪ್ಪನವರು ಇಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸಚಿವರು ಸಹ ಆಗಿದ್ದಾರೆ. ನಾಲ್ಕು ಬಾರಿ ಜೆಡಿಎಸ್, ಎರಡು ಬಾರಿ ಜನತಾ ಪಕ್ಷದ ಅಭ್ಯರ್ಥಿಗಳು, ಒಮ್ಮೆ ಜನತಾದಳ ಮತ್ತು ಒಮ್ಮೆ ಪಕ್ಷೇತರ ಅಭ್ಯರ್ಥಿ ಇಲ್ಲಿಂದ ಗೆಲುವು ಸಾಧಿಸಿದ್ದಾರೆ.

ಎಚ್.ಡಿ ದೇವೇಗೌಡರ ಪ್ರವೇಶ

ಹಾಸನ ಜಿಲ್ಲೆಯ ಎಚ್.ಡಿ ದೇವೇಗೌಡರು 1985ರಲ್ಲಿ ಸಾತನೂರು ಕ್ಷೇತ್ರಕ್ಕೆ ಕಾಲಿಟ್ಟರು. ಆ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್‌ರನ್ನು ಸೋಲಿಸಿದರು. ಆದರೆ ದೇವೇಗೌಡರು 1989ರಲ್ಲಿ ಹೊಳೆ ನರಸೀಪುರದಲ್ಲಿ ಸೋಲನ್ನು ಅನುಭವಿಸಿದ್ದರು. 1994ರಲ್ಲಿಯೂ ಅಲ್ಲಿ ಕಠಿಣ ಸವಾಲು ಎದುರಿಸಬೇಕಾದ ಪರಿಸ್ಥಿತಿಯಲ್ಲಿದ್ದಾಗ ರಾಮನಗರದ ಮುಖಂಡರು ಇಲ್ಲಿಗೆ ಆಹ್ವಾನ ನೀಡಿದರು. ಆಗ ರಾಮನಗರ ಕ್ಷೇತ್ರದಲ್ಲಿ ಜನತಾದಳದಿಂದ ಜಯಗಳಿಸಿದ ಅವರು ರಾಜ್ಯದ 14ನೇ ಸಿಎಂ ಆದರು. ಅಲ್ಲಿಂದ ರಾಮನಗರ ಹೆಚ್ಚು ಕಡಿಮೆ ಜೆಡಿಎಸ್ ಪಕ್ಷದ ಭದ್ರಕೋಟೆಯಾಯಿತು.

ಅಂಬರೀಶ್‌ಗೆ ಸೋಲು

1996 ರಲ್ಲಿ ರಾಮನಗರ ಕ್ಷೇತ್ರದ ಶಾಸಕರಾಗಿದ್ದ ದೇವೇಗೌಡರಿಗೆ ಪ್ರಧಾನಿ ಪಟ್ಟ ಒಲಿಯಿತು. ಆಗ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಾಗಾಗಿ 1997 ರಲ್ಲಿ ರಾಮನಗರ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಯಿತು. ಆಗ ಜನಪ್ರಿಯ ಚಿತ್ರನಟರಾಗಿದ್ದ ಅಂಬರೀಶ್‌ರನ್ನು ಜನತಾದಳದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಯಿತು. ಭಾರೀ ಪ್ರಚಾರ ನಡೆಸಿದ್ದ ಅವರೇ ಬಹುತೇಕ ಜಯಗಳಿಸುತ್ತಾರೆ ಎಂದು ನಂಬಲಾಗಿತ್ತು. ಆದರೆ ಆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಕಾಂಗ್ರೆಸ್ ಪಕ್ಷದ ಸಿ.ಎಂ ಲಿಂಗಪ್ಪನವರು 9,610 ಮತಗಳ ಅಂತರದಿಂದ ಅಂಬರೀಶ್‌ರನ್ನು ಸೋಲಿಸಿದರು.

ಕುಮಾರಸ್ವಾಮಿ ಹಿಡಿತಕ್ಕೆ ಸಿಕ್ಕ ಕ್ಷೇತ್ರ

ಇಲ್ಲಿ 2004ರಿಂದ ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿಯವರು ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಅವರು ಕ್ಷೇತ್ರ ತ್ಯಜಿಸಿದಾಗ ನಡೆದ ಉಪಚುನಾವಣೆಯಲ್ಲಿಯೂ ಸಹ ಜೆಡಿಎಸ್ ಜಯಭೇರಿ ಭಾರಿಸಿದೆ. ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ, ಬಿಡದಿಯಲ್ಲಿ ತೋಟ, ಮನೆ ಹೊಂದಿರುವ ಎಚ್.ಡಿ.ಕೆ ಇಲ್ಲಿಯೇ ನೆಲೆಯೂರಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ ಕುಮಾರಸ್ವಾಮಿಯವರು 92,626 ಮತಗಳನ್ನು ಪಡೆದು ಜಯಗಳಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಕೂಡ 69,990 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದ್ದರು. ಆ ಚುನಾವಣೆಯಲ್ಲಿ ಎಚ್‌.ಡಿ.ಕೆ ಬದಲು ಜೆಡಿಎಸ್‌ನಿಂದ ಬೇರೆ ಯಾರು ನಿಂತಿದ್ದರೂ ಗೆಲುವು ಕಷ್ಟವಿತ್ತು. ಆಗ ರಾಮನಗರದ ಹಲವು ಬೂತ್‌ಗಳಲ್ಲಿ ಇಕ್ಬಾಲ್ ಹುಸೇನ್ ಲೀಡ್ ಪಡೆದಿದ್ದರೆ ಕೆಲ ಬೂತ್‌ಗಳಲ್ಲಿ ಕುಮಾರಸ್ವಾಮಿಯವರಿಗೆ 10 ಕ್ಕಿಂತ ಕಡಿಮೆ ಮತಗಳು ಬಿದ್ದಿದ್ದವು!. ಹಾಗಾಗಿ ಆ ಚುನಾವಣೆಯನ್ನು ಎಚ್‌.ಡಿ.ಕೆ ಮರೆಯುವಂತಿಲ್ಲ. ನಂತರ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಸಿಎಂ ಆದರು. ಅವರು ಚನ್ನಪಟ್ಟಣ ಕ್ಷೇತ್ರದಲ್ಲಿಯು ಸಹ ಗೆಲುವು ಸಾಧಿಸಿದ್ದರಿಂದ ರಾಮನಗರ ಕ್ಷೇತ್ರವನ್ನು ತ್ಯಜಿಸಿದರು. ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಜೆಡಿಎಸ್‌ನಿಂದ ಕಣಕ್ಕಿಳಿದರು. ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಆದರೆ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಸಿ.ಎಂ. ಲಿಂಗಪ್ಪನವರ ಮಗ ಎಲ್ ಚಂದ್ರಶೇಖರ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಅಭ್ಯರ್ಥಿ ಆದರು. ಆದರೆ ಚುನಾವಣೆಗೆ ಎರಡು ದಿನ ಬಾಕಿ ಇದ್ದಾಗ ಅವರು ಬಿಜೆಪಿಗೆ ರಾಜೀನಾಮೆ ನೀಡಿ ವಾಪಸ್ ಕಾಂಗ್ರೆಸ್ ಸೇರಿ ಸ್ಪರ್ಧೆಯಿಂದ ಹಿಂದೆ ಸರಿದು, ನಾಮಕಾವಸ್ಥೆ ಚುನಾವಣೆ ಎದುರಿಸಿ ಸೋತರು. ಇದರಲ್ಲಿ ಡಿ.ಕೆ ಸಹೋದರರ ಕೈವಾಡವಿದ್ದಿದ್ದರಿಂದ ಬಿಜೆಪಿಗೆ ತೀವ್ರ ಮುಜುಗರ ಉಂಟಾಯಿತು. ಇದರಿಂದಾಗಿ ಆ ಚುನಾವಣೆಯಲ್ಲಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿಯವರು ಅನಾಯಾಸವಾಗಿ 1,06,137 ಮತಗಳ ಅಂತರದ ಭಾರೀ ಗೆಲುವು ದಾಖಲಿಸಿದರು.

ರಾಮನಗರದಲ್ಲಿ ಡಿ.ಕೆ ಶಿವಕುಮಾರ್‌ ಪಾತ್ರವೇನು?

ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ರಾಮನಗರದ ಕನಕಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಸಹ ಒಕ್ಕಲಿಗರ ನಾಯಕ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಆದರೆ ಅದೇ ಸಮಯಕ್ಕೆ ದೇವೇಗೌಡರ ಕುಟುಂಬದ ಬೆಂಬಲವನ್ನೂ ನೀರಿಕ್ಷಿಸುತ್ತಿದ್ದಾರೆ. ಹಾಗಾಗಿಯೇ ಅವರು ಕುಮಾರಸ್ವಾಮಿಯವರೊಂದಿಗೆ ಚೆನ್ನಾಗಿದ್ದಾರೋ ಇಲ್ಲವೋ ತಿಳಿಯುವುದೇ ಕಷ್ಟ ಎನಿಸಿಬಿಡುತ್ತದೆ.

ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಈ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಒಕ್ಕಲಿಗರ ಪಕ್ಷ ಎಂಬುದು ಒಂದು ಕಾರಣವಾದರೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳನ್ನು ಹೊಂದಿಲ್ಲದಿರುವುದು ಎರಡನೇ ಕಾರಣ. ರಾಮನಗರದಲ್ಲಿ ಕಾಂಗ್ರೆಸ್ ತಲೆಹಾಕುವುದಿಲ್ಲ, ಕನಕಪುರದಲ್ಲಿ ಜೆಡಿಎಸ್ ತಲೆ ಹಾಕುವುದಿಲ್ಲ. ಡಿ.ಕೆ.ಶಿ ಮತ್ತು ಎಚ್.ಡಿ.ಕೆ ನಡುವೆ ಈ ಹೊಂದಾಣಿಕೆಯಿದ್ದು ಚುನಾವಣೆಯಲ್ಲಿ ಗೆಲ್ಲಲು ಪರಸ್ಪರ ಸಹಕರಿಸುತ್ತಾರೆ ಎಂಬ ಆರೋಪ ಸಹ ಇದೆ. ಹಾಗಾಗಿಯೇ ಕುಮಾರಸ್ವಾಮಿಯವರು ರಾಮನಗರ ನಿಖಿಲ್ ಕುಮಾರಸ್ವಾಮಿಯವರಿಗೆ ಸೇಫ್ ಕ್ಷೇತ್ರ ಎಂದು ಪರಿಗಣಿಸಿ ಅಲ್ಲಿಂದ ಕಣಕ್ಕಿಳಿಸಲು ಬಯಸಿದ್ದಾರೆ.

ನಿಖಿಲ್ ಜಯ ಸುಲಭವೇ?

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋಲು ಕಂಡಿರುವ ನಿಖಿಲ್ ಕುಮಾರಸ್ವಾಮಿ ಈ ಬಾರಿ ಶತಾಯ ಗತಾಯ ಗೆಲ್ಲಲೇಬೇಕೆಂದು ನಿರ್ಧಿರಿಸಿದ್ದಾರೆ. ದೇವೇಗೌಡರ ಕುಟುಂಬದ ಮೇಲೆ ಜಿಲ್ಲೆಯ ಜನರಿಗಿರುವ ಪ್ರೀತಿ, ಜೆಡಿಎಸ್ ಒಕ್ಕಲಿಗರ ಪಕ್ಷವೆಂಬ ಟ್ಯಾಗ್‌ಲೈನ್ ಮತ್ತು ಈಗಾಗಲೇ ಮಂಡ್ಯದಲ್ಲಿ ಸೋತಿರುವ ಅನುಕಂಪದ ಅಲೆ ನಿಖಿಲ್ ಕುಮಾರಸ್ವಾಮಿಯವರನ್ನು ಈ ಬಾರಿ ಗೆಲುವಿನ ದಡ ಸೇರಿಸಲಿದೆ ಎಂಬುದು ಜೆಡಿಎಸ್ ಕಾರ್ಯಕರ್ತರ ಅಭಿಮತ.

ಪುಟಿದೇಳಲಿದೆಯೇ ಕಾಂಗ್ರೆಸ್?

ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು ಇಲ್ಲಿ ಪೈಪೋಟಿ ಕೊಡುವ ಸಾಧ್ಯತೆಯಿದೆ. ಕುಮಾರಸ್ವಾಮಿಯವರ ಕುಟುಂಬದವರೆ ಇಲ್ಲಿ ಪದೇ ಪದೇ ಗೆಲ್ಲುವುದು ಏಕೆ? ಸ್ಥಳೀಯರಿಲ್ಲವೇ ಎಂಬ ಮಾನದಂಡ ಮುನ್ನಲೆಗೆ ತಂದು ಪ್ರಚಾರ ಮಾಡಬಹುದು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ 2018ರ ಚುನಾವಣೆಯಲ್ಲಿ 69,990 ಮತಗಳನ್ನು ಪಡೆದು ಎಚ್.ಡಿ ಕುಮಾರಸ್ವಾಮಿಯವರಿಗೆ ಪೈಪೋಟಿ ನೀಡಿದ್ದರು. ಹಾಗಾಗಿ ಅವರನ್ನು ಜೆಡಿಎಸ್ ನಿರ್ಲಕ್ಷಿಸಲು ಸಾಧ್ಯವಿಲ್ಲ. ಅವರು ಮುಸ್ಲಿಂ, ದಲಿತ ಮತ್ತು ಇತರ ಹಿಂದುಳಿದ ಮತಗಳನ್ನು ಪಡೆದು ಗೆಲ್ಲುವ ಬಯಕೆಯಲ್ಲಿದ್ದಾರೆ.

ಬಿಜೆಪಿಯ ಸ್ಥಿತಿ

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ರಾಮನಗರ ಜಿಲ್ಲೆಯಲ್ಲಿ ಬಿಜೆಪಿಗೆ ಯಾವುದೇ ನೆಲೆ ಇಲ್ಲ. ಈ ಕ್ಷೇತ್ರದಲ್ಲಿ ಇದುವರೆಗೆ ಒಮ್ಮೆಯೂ ಗೆಲ್ಲಲಾಗದ ಬಿಜೆಪಿ, ಎರಡು ಬಾರಿ ಮಾತ್ರ ರನ್ನರ್ ಅಪ್ ಆಗಿದೆ ಅಷ್ಟೇ. ಕಳೆದ ಬಾರಿಯಂತೂ ಎಲ್ ಚಂದ್ರಶೇಖರ್‌ರನ್ನು ಪಕ್ಷಕ್ಕೆ ಸೇರಿಸಿಕೊಂಡ ವಾರದಲ್ಲಿಯೇ ಪಕ್ಷ ತೊರೆದು ಭಾರೀ ಮುಜುಗರ ಮಾಡಿದ್ದಾರೆ. ಈಗ ಉಸ್ತುವಾರಿ ಮಂತ್ರಿ ಅಶ್ವಥ್ ನಾರಾಯಣ್ ಮತ್ತು ಸಿ.ಪಿ ಯೋಗೀಶ್ವರ್ ಜಿಲ್ಲೆಯಲ್ಲಿ ಬಿಜೆಪಿ ಬೇರು ಬಿಡಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇಲ್ಲಿನ ಜನ ಗೋ ಬ್ಯಾಕ್ ಅಶ್ವಥ್ ನಾರಾಯಣ್ ಎನ್ನುತ್ತಿದ್ದಾರೆ.

ಈ ಸಂದರ್ಭದಲ್ಲಿ ಗೌತಮ್ ಗೌಡ ಎಂಬುವವರು ಬಿಜೆಪಿ ಅಭ್ಯರ್ಥಿಯಾಗಲು ಯತ್ನ ನಡೆಸಿದ್ದಾರೆ. ಪುಣ್ಯವತಿ ಎಂಬುವವರು ಸಹ ಆಕಾಂಕ್ಷಿಯಾಗಿದ್ದಾರೆ. ವಿಜಯ ಸಂಕಲ್ಪ ಯಾತ್ರೆಯ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಇವರಿಬ್ಬರ ನಡುವೆ ಜಗಳವಾಗಿತ್ತು. ಹಾಗೆ ನೊಡಿದರೆ ಇವರಿಬ್ಬರೂ ಜನರಿಗೆ ಪರಿಚಿತರಲ್ಲ. ಹಾಗಾಗಿ ಈ ಬಾರಿಯೂ ಬಿಜೆಪಿಯದು ಕೇವಲ ನಾಮಕವಾಸ್ತೆ ಸ್ಪರ್ಧೆಯಾಗಲಿದೆ.

ಇದನ್ನೂ ಓದಿ; ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕಮಗಳೂರು: ಕೋಮು ಕಾರ್ಮೋಡದ ನಡುವೆ ಮೂಡಿದ “ರವಿ”ಗೆ ಗ್ರಹಣ?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...