ಕರ್ನಾಟಕದಲ್ಲಿ 44ಕ್ಕೂ ಹೆಚ್ಚು ಸಮುದಾಯಗಳು ತಮಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ, ಒಳಮೀಸಲಾತಿ ಜಾರಿಗೊಳಿಸುವಂತೆ ಅಥವಾ ತಮ್ಮ ಮೀಸಲಾತಿ ಪ್ರವರ್ಗವನ್ನು ಬದಲಾಯಿಸುವಂತೆ ಒತ್ತಾಯಿಸಿ ಹೋರಾಟಕ್ಕಿಳಿದಿವೆ. ಸದ್ಯ 4% ಮೀಸಲಾತಿ ಹೊಂದಿರುವ 3ಎ ಪ್ರವರ್ಗದಲ್ಲಿರುವ ಒಕ್ಕಲಿಗ ಸಮುದಾಯಕ್ಕೆ 12% ಮೀಸಲಾತಿ ಬೇಕೆಂದು ಬೇಡಿಕೆ ಇಡಲಾಗಿದೆ. ಇನ್ನು 5% ಮೀಸಲಾತಿ ಹೊಂದಿರುವ 3ಬಿ ಪ್ರವರ್ಗದಲ್ಲಿರುವ ಪಂಚಮಸಾಲಿ ಲಿಂಗಾಯತರು ತಮ್ಮನ್ನು 15% ಮೀಸಲಾತಿ ಇರುವ 2ಎ ಪ್ರವರ್ಗಕ್ಕೆ ಸೇರಿಸಬೇಕೆಂದು ಹೋರಾಟ ನಡೆಸಿದ್ದಾರೆ. 15% ಮೀಸಲಾತಿ ಹೊಂದಿರುವ 101 ಸಮುದಾಯಗಳಿರುವ ಪರಿಶಿಷ್ಟ ಜಾತಿ ಪ್ರವರ್ಗದಲ್ಲಿ ಮುಖ್ಯವಾಗಿ ಮಾದಿಗ ಸಮುದಾಯ ತಮಗೆ ಮೀಸಲಾತಿ ವರ್ಗೀಕರಿಸಬೇಕೆಂದು ಮೂರು ದಶಕಗಳಿಂದ ಹೋರಾಟನಿರತವಾಗಿದೆ.
1980-90ರ ದಶಕದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೊಳಿಸಿ ಮಂಡಲ್ ಆಯೋಗ ವರದಿ ಸಲ್ಲಿಸಿದಾಗ ಕಮಂಡಲ ಯಾತ್ರೆ ನಡೆಸಿ ಮೀಸಲಾತಿ ವಿರುದ್ಧವೇ ದೊಡ್ಡ ಹೋರಾಟ ನಡೆದಿತ್ತು. ಆಗ ಮೀಸಲಾತಿ ಪಡೆಯುವವರನ್ನು ನಿಂದಿಸಲಾಗಿತ್ತು. ಆದರೆ ನಿಂದನೆಗೆ ಇಳಿದಿದ್ದ ಅದೇ ಸಮುದಾಯಗಳು ಈಗ ತಮಗೆ ಮೀಸಲಾತಿ ಹೆಚ್ಚಿಸಬೇಕೆಂದು ಈ ಪರಿಯಲ್ಲಿ ಹೋರಾಟಕ್ಕಿಳಿಯಲು ಕಾರಣವೇನೆಂದು ಅರ್ಥಮಾಡಿಕೊಳ್ಳಬೇಕಿದೆ. ಜನರ ಹೋರಾಟದ ಫಲವಾಗಿ ದಕ್ಕಿದ್ದ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾಗತೀಕರಣದ ನಂತರ ಒಂದೊಂದಾಗಿ ಕಡಿತಗೊಳಿಸಲಾಗುತ್ತಿದೆ. ಸರ್ಕಾರಿ ಉದ್ಯೋಗಗಳಲ್ಲಿ ಗಣನೀಯ ಕುಸಿತ, ಖಾಯಂ ಉದ್ಯೋಗಗಳ ಬದಲಿಗೆ ಮೀಸಲಾತಿ ಇಲ್ಲದ ಗುತ್ತಿಗೆ ನೇಮಕಾತಿ, ಮಿತಿಮೀರಿದ ಖಾಸಗೀಕರಣ, ಖಾಸಗಿ ಕ್ಷೇತದಲ್ಲಿ ಮೀಸಲಾತಿ ಇಲ್ಲದಿರುವುದು, ಕೃಷಿ ಕ್ಷೇತ್ರದ ಅವಗಣನೆ, ಕೃಷಿಯಲ್ಲಿ ಲಾಭವಿಲ್ಲದಿರುವುದು, ಭೂ ಹಿಡುವಳಿಗಳ ಛಿದ್ರೀಕರಣ, ಹೆಚ್ಚುತ್ತಿರುವ ನಿರುದ್ಯೋಗ, ಸಂಪತ್ತಿನ ಅಸಮಾನ ಹಂಚಿಕೆ, ದುಬಾರಿಯಾದ ಶಿಕ್ಷಣ ಮತ್ತು ಆರೋಗ್ಯ, ಬೆಲೆ ಏರಿಕೆಯಿಂದ ಹಿಡಿದು ನೋಟು ಅಮಾನ್ಯೀಕರಣ, ಜಿಎಸ್‌ಟಿ ಹೊರೆ, ಸಾರ್ವಜನಿಕ ಸಂಸ್ಥೆಗಳ ಮಾರಾಟ, ಕೊರೊನಾ ಸಾಂಕ್ರಾಮಿಕ ತಂದ ಆರ್ಥಿಕ ಕುಸಿತದವರೆಗೂ ಕಾರಣಗಳನ್ನು ಪಟ್ಟಿಮಾಡಬಹುದು.
ಸಮಸ್ಯೆಗಳ ಸಂಕಷ್ಟದಲ್ಲಿರುವ ಜನರು ತಮ್ಮ ಜಾತಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಮೀಸಲಾತಿ ಸಿಕ್ಕರೆ ಪರಿಸ್ಥಿತಿ ಸುಧಾರಿಸಬಹುದು ಎಂದು ಭಾವಿಸುತ್ತಿವೆ. ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರವು ಕೇವಲ 3-4% ಇರುವ, ಎಂದೂ ಹೋರಾಟ ಮಾಡದ, ವಾಸ್ತವದಲ್ಲಿ ಮೀಸಲಾತಿಗೆ ವಿರುದ್ಧವಿದ್ದ ನಾಲ್ಕೈದು ಸಮುದಾಯಗಳಿಗೆ ಆರ್ಥಿಕವಾಗಿ ದುರ್ಬಲ ವರ್ಗಗಳು (ಇಡಬ್ಲ್ಯುಎಸ್) ಎಂಬ ಹೆಸರಿನಲ್ಲಿ ಏಕಾಏಕಿ 10%ವರೆಗೂ ಮೀಸಲಾತಿ ನೀಡಿತು. ಆ ಮೂಲಕ “ಮೀಸಲಾತಿಯೆಂಬುದು ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ. ಬದಲಿಗೆ ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟವರಿಗೆ ಸಿಗಬೇಕಾದ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯ” ಎಂಬ ತತ್ವಕ್ಕೆ ಎಳ್ಳುನೀರು ಬಿಟ್ಟಿತು. ಇದು ಎಲ್ಲ ಸಮುದಾಯಗಳಿಗೂ ಆಸೆ ಮತ್ತು ಭ್ರಮೆಯನ್ನು ಹುಟ್ಟಿಸಿತು. ಹಾಗಾಗಿ ಈ ಸಮುದಾಯಗಳು ತಮ್ಮ ಸಂಕಷ್ಟಗಳಿಗೆ ಪರಿಹಾರವನ್ನು ಮೀಸಲಾತಿಯಲ್ಲಿ ನೋಡುತ್ತಿದ್ದಾರೆ. ಕೆಲ ಸಮುದಾಯಗಳ ಸ್ವಾಮೀಜಿಗಳು ಮತ್ತು ರಾಜಕಾರಣಿಗಳು ಇದೇ ಸಂದರ್ಭವನ್ನು ಬಳಸಿಕೊಂಡು ಆ ಸಮುದಾಯದ ನಾಯಕರಾಗಿ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅದೆಲ್ಲದರ ಪರಿಣಾಮವಾಗಿ ಇಷ್ಟೊಂದು ಪ್ರಮಾಣದಲ್ಲಿ ಮೀಸಲಾತಿ ಹೋರಾಟಗಳು ಹುಟ್ಟಿಕೊಂಡಿವೆ.
ಕರ್ನಾಟಕದಲ್ಲಿ ಸದ್ಯ ಆಡಳಿತದಲ್ಲಿರುವ ಬಿಜೆಪಿ ಸರ್ಕಾರವು ಈ ಎಲ್ಲ ಹೋರಾಟಗಳನ್ನು ತನ್ನ ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಹಾತೊರೆಯುತ್ತಿದೆ. ಹಾಗಾಗಿ ಎಲ್ಲ ಸಮುದಾಯಗಳ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಬಹಳ ನಾಜೂಕಾಗಿ ಮಾಡುತ್ತಿದೆ. ಜಸ್ಟಿಸ್ ನಾಗಮೋಹನ್ ದಾಸ್‌ರವರ ವರದಿಯ ಶಿಫಾರಸ್ಸಿನಂತೆ ಎಸ್‌ಸಿ ಸಮುದಾಯಗಳಿಗೆ 15% ನಿಂದ 17%ಗೆ ಮತ್ತು ಎಸ್‌ಟಿ ಸಮುದಾಯಕ್ಕೆ 3%ನಿಂದ 7% ಮೀಸಲಾತಿ ಹೆಚ್ಚಿಸಲಾಗುವುದು; ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸುವುದಕ್ಕಾಗಿ ಸದ್ಯ ಇರುವ ಪ್ರವರ್ಗ 3ಎ ಮತ್ತು 3ಬಿಯನ್ನು ರದ್ದುಗೊಳಿಸಿ ಅಲ್ಲಿರುವ ಜಾತಿಗಳನ್ನು ಹೊಸದಾಗಿ ರಚಿಸುವ ಪ್ರವರ್ಗ 2ಸಿ ಮತ್ತು 2ಡಿಯಲ್ಲಿ ಸೇರಿಸಲಾಗುವುದು. ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ನಂತರ ಇಡಬ್ಲ್ಯುಎಸ್ ಕೋಟಾದಲ್ಲಿ ಉಳಿಯುವ ಮೀಸಲಾತಿಯನ್ನು ತೆಗೆದು 2ಸಿ ಪ್ರವರ್ಗಕ್ಕೆ ಹೆಚ್ಚುವರಿ 3% (ಒಟ್ಟು 4+3=7%) ಮತ್ತು 2ಡಿ ಅಡಿಯಲ್ಲಿ ಬರುವ ಜಾತಿಗಳಿಗೆ ಹೆಚ್ಚುವರಿ 4% (ಒಟ್ಟು 5+4=9%) ಹಂಚಲಾಗುವುದು ಎಂದು ಸರ್ಕಾರ ಹೇಳಿದೆ.
ಸದ್ಯ ಕರ್ನಾಟಕದಲ್ಲಿ ಎಸ್‌ಸಿ 15%, ಎಸ್‌ಟಿ 3%, ಪ್ರವರ್ಗ 1ಕ್ಕೆ 4%, 2ಎಗೆ 15%, 2ಬಿಗೆ 4%, 3ಎಗೆ 4%, 3ಬಿಗೆ 5% ಮತ್ತು ಇಡಬ್ಲ್ಯುಎಸ್‌ಗೆ 10% ಸೇರಿ 60% ಮೀಸಲಾತಿ ಇದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ 6% ಹೆಚ್ಚಿಸುವುದಾಗಿ ಘೋಷಿಸಿದ್ದು ಅದು ಜಾರಿಯಾದರೆ 66% ಆಗುತ್ತದೆ. 1992ರ ಇಂದ್ರ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಶೇ.50ಕ್ಕಿಂತ ಮೀರಬಾರದು ಎಂಬ ಷರತ್ತನ್ನು ಹಾಕಿದೆ. ವಿಶೇಷ ಸಂದರ್ಭದಲ್ಲಿ ಮಾತ್ರ ಈ ನಿಯಮವನ್ನು ಮೀರಬಹುದು ಎಂದು ಹೇಳಿದೆ. ಈ ನಡುವೆ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿಯ ಮೂಲಕ ಇಡಬ್ಲ್ಯುಎಸ್‌ಗೆ 10% ಮೀಸಲಾತಿ ಘೋಷಿಸಿದೆ. ಸರ್ಕಾರದ ಈ ನಿರ್ಧಾರವನ್ನು ಎತ್ತಿ ಹಿಡಿಯುವಾಗಲೂ ಸುಪ್ರೀಂ ಕೋರ್ಟ್ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ 50% ಮೀರಬಾರದು ಎಂದಿದೆ. ಅಲ್ಲದೆ ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಸಮುದಾಯಗಳಿಗೆ ಇಡಬ್ಲ್ಯುಎಸ್ ಮೀಸಲಾತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೆಲ್ಲ ಗೊತ್ತಿದ್ದರೂ ಕರ್ನಾಟಕದ ಬಿಜೆಪಿ ಸರ್ಕಾರ ಅದೇ 10%ನಲ್ಲಿ ಉಳಿದ ಮೀಸಲಾತಿ ಪ್ರಮಾಣವನ್ನು ಒಕ್ಕಲಿಗರಿಗೆ ಮತ್ತು ಲಿಂಗಾಯಿತರಿಗೆ ನೀಡಲಾಗುವುದು ಎಂದು ಹೇಳುತ್ತಿರುವುದು ಸುಳ್ಳಲ್ಲದೆ ಮತ್ತೇನು?
ಇದನ್ನೂ ಓದಿ: ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಮೀಸಲಾತಿಯ ಪಾಲೆಷ್ಟಿದೆ? – ಪೂರ್ಣ ವಿವರ ಇಲ್ಲಿದೆ
ಯಾವ ಮಾನದಂಡದ ಆಧಾರದಲ್ಲಿ ನೋಡಿದರೂ ಸಹ ಒಕ್ಕಲಿಗರಿಗೆ 3% ಮತ್ತು ಲಿಂಗಾಯಿತರಿಗೆ 4% ಮೀಸಲಾತಿಯನ್ನು ಇಡಬ್ಲ್ಯುಎಸ್ ಕೋಟಾದಿಂದ ತೆಗೆದುಕೊಡಲಾಗುವುದು ಎನ್ನುವುದು ಅಸಾಧ್ಯದ ಮಾತೇ ಸರಿ. ಏಕೆಂದರೆ ಇದು ಜಾರಿಯಾಗಬೇಕಾದರೆ ಸುಪ್ರೀಂ ಕೋರ್ಟ್‌ನ 7 ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳಿಗೆ ಹೇರಿರುವ ಶೇ.50ರ ಮೀಸಲಾತಿ ಮಿತಿಯನ್ನು ತೆಗೆದುಹಾಕಬೇಕು. ಇಡಬ್ಲ್ಯುಎಸ್ ಕೋಟಾದಲ್ಲಿ ಹಿಂದುಳಿದ ವರ್ಗಗಳಿಗೂ ಮೀಸಲಾತಿ ನೀಡಬೇಕು ಎಂಬ ತೀರ್ಪು ಬರಬೇಕು. ಇಲ್ಲವೇ ಸಂಸತ್ತಿನಲ್ಲಿ ಕಾಯ್ದೆಯಾಗಿ ಸಂವಿಧಾನ ತಿದ್ದುಪಡಿಯಾಗಬೇಕು. ಈ ಬಗ್ಗೆ ಒಂದೂ ಮಾತನಾಡದ ಸರ್ಕಾರ ಕೇವಲ ಸಂಪುಟ ಸಮಿತಿಯಲ್ಲಿ ಕೂತು ಘೋಷಿಸಿದರೆ ಜಾರಿಯಾಗಿಬಿಡುವುದೆ?
ಇದೇ ಸಮಸ್ಯೆ ಎಸ್‌ಸಿ, ಎಸ್‌ಟಿಗೆ 6% ಮೀಸಲಾತಿ ಹೆಚ್ಚಿಸುವ ಪ್ರಸ್ತಾಪದಲ್ಲಿಯೂ ಪುನರಾವರ್ತನೆಯಾಗುತ್ತದೆ. ಈಗ ಸುಗ್ರೀವಾಜ್ಞೆ ಮೂಲಕ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಶಾಸನ ಮಾಡಲಾಗಿದೆ. ಆದರೆ ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸಲು ಸಂಸತ್ತಿನಲ್ಲಿ ಒಪ್ಪಿಗೆ ಪಡೆಯಬೇಕು. ಅಷ್ಟು ಮಾತ್ರವಲ್ಲದೆ ಸಂವಿಧಾನ ತಿದ್ದುಪಡಿಯ ಮೂಲಕ ಶೇ.50ರ ಮೀಸಲಾತಿ ಮಿತಿಯನ್ನು ತೆಗೆದುಹಾಕಿದಾಗ ಮಾತ್ರ ಈ ಮೀಸಲಾತಿ ಹೆಚ್ಚಳ ಊರ್ಜಿತವಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ನಮ್ಮ ರಾಜ್ಯ ಸರ್ಕಾರ ಇದುವರೆಗೂ ಯಾವುದೇ ಸಂವಹನ ನಡೆಸಿಲ್ಲ. ಮತ್ತೆ ಇದು ಜಾರಿಯಾಗುವುದು ಯಾವಾಗ?
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಮರಾಠರಿಗೆ 12% ಮೀಸಲಾತಿ ನೀಡಿತು. ಆದರೆ ಮೀಸಲಾತಿ ಪ್ರಮಾಣ 50% ಮಿತಿಮೀರಿದ ಕಾರಣ ಸುಪ್ರೀಂ ಕೋರ್ಟ್ ಮರಾಠ ಮೀಸಲಾತಿಯನ್ನು ರದ್ದುಗೊಳಿಸಿತು. ತೆಲಂಗಾಣದಲ್ಲಿ ಎಸ್‌ಟಿ ಮೀಸಲಾತಿಯನ್ನು ಶೇ.6 ರಿಂದ 10ಕ್ಕೆ ಏರಿಸಬೇಕೆಂದು 2017ರಲ್ಲಿ ತೆಲಂಗಾಣ ಸದನದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಆದರೆ 6 ವರ್ಷ ಕಳೆದರೂ ಕೇಂದ್ರ ಸರ್ಕಾರ ಅದನ್ನು ಅನುಮೋದಿಸಿಲ್ಲ. ಈ ಎಲ್ಲಾ ಉದಾಹರಣೆಗಳನ್ನು ಗಮನಿಸಿದರೆ ನಮ್ಮ ರಾಜ್ಯದಲ್ಲಿಯೂ ದಲಿತರಿಗೆ, ಒಕ್ಕಲಿಗರಿಗೆ ಮತ್ತು ಲಿಂಗಾಯಿತರಿಗೆ ಮೀಸಲಾತಿ ಹೆಚ್ಚಳ ಮಾಡುತ್ತೇನೆ ಎನ್ನುವ ಸರ್ಕಾರದ ಹೇಳಿಕೆ ಚುನಾವಣಾ ಕಾಲದ ವಂಚನೆಯೇ ಹೊರತು ವಾಸ್ತವವಲ್ಲ; ಮತಗಳಿಗಾಗಿ ಸಮುದಾಯಗಳ ಓಲೈಕೆ ರಾಜಕಾರಣವಿದು ಎಂಬುದು ಮನವರಿಕೆಯಾಗುತ್ತದೆ.

ಭಾರತದಲ್ಲಿ 1931ರಲ್ಲಿ ನಡೆದ ಜಾತಿಗಣತಿ ಬಿಟ್ಟರೆ ಮತ್ತೆ ಜಾತಿಗಣತಿ ನಡೆದೇ ಇಲ್ಲ. ದೇಶದ ಸಮುದಾಯಗಳ ಜನಸಂಖ್ಯೆ, ಅವುಗಳ ಶೈಕ್ಷಣಿಕ ಪ್ರಗತಿ, ಸಮಾಜದಲ್ಲಿನ ಪ್ರಾತಿನಿಧ್ಯದ ಕುರಿತು ನೈಜ ಚಿತ್ರಣವಿಲ್ಲ. ಆ ಸಮುದಾಯಗಳು ಹಿಂದುಳಿದ್ದರೆ ಅದಕ್ಕೆ ಕಾರಣವೇನು ಎಂಬುದನ್ನು ವೈಜ್ಞಾನಿಕವಾಗಿ ಶೋಧಿಸಲಾಗಿಲ್ಲ. ಅದಕ್ಕಾಗಿ ಜಾತಿಗಣತಿ ನಡೆಯಬೇಕು ಎಂದು ಹಲವು ಪಕ್ಷಗಳು ಆಗ್ರಹಿಸಿದರೂ ಮೋದಿ ಸರ್ಕಾರ ಒಪ್ಪಿಗೆ ನೀಡಿಲ್ಲ. ಆದರೆ ಬಲಾಢ್ಯ ಜಾತಿಗಳು ಮೀಸಲಾತಿ ಕೇಳಿದಾಕ್ಷಣ ನಿಜವಾಗಿಯೂ ಆ ಸಮುದಾಯಗಳು ಸಾಮಾಜಿಕವಾಗಿ ಹಿಂದುಳಿದಿವೆಯೇ? ಅವುಗಳ ಪ್ರಾತಿನಿಧ್ಯ ತೀರಾ ಕಡಿಮೆಯಿದೆಯೇ ಎಂಬುದನ್ನು ಅಧ್ಯಯನ ಮಾಡದೆ ಏಕಾಏಕಿ ಮೀಸಲಾತಿ ಹೆಚ್ಚಿಸುತ್ತೇವೆ ಎಂದು ರಾಜ್ಯ ಸರ್ಕಾರ ಘೋಷಿಸುತ್ತದೆ. ಆದರೆ 30 ವರ್ಷಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಯಾಗಬೇಕೆಂದು ನ್ಯಾಯಯುತವಾಗಿ ಹೋರಾಡುತ್ತಿರುವ ಸಮುದಾಯಗಳ ಕುರಿತು ಅಸಡ್ಡೆ ತೋರಿರುವ ಸರ್ಕಾರ ಉಪ ಸಮಿತಿ ರಚಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಆ ಮೂಲಕ ಯಾವುದನ್ನು ಮಾಡಲೇಬೇಕಿತ್ತೊ ಅದನ್ನು ಮಾಡದೆ, ಯಾವುದನ್ನು ಮಾಡಲು ಸಾಧ್ಯವಿಲ್ಲವೋ ಅದನ್ನು ಮಾಡುವುದಾಗಿ ಒಣಘೋಷಣೆ ಮಾಡುತ್ತಾ ಒಂದೇ ಸಮಯಕ್ಕೆ ಎಲ್ಲಾ ಸಮುದಾಯಗಳ ಕಣ್ಣಿಗೆ ಮಣ್ಣೆರೆಚಲು ಹೊರಟಿದೆ ಬೊಮ್ಮಾಯಿ ನೇತೃತ್ವದ ಸರ್ಕಾರ.
ಒಳ ಮೀಸಲಾತಿ ವರ್ಗೀಕರಣದಿಂದ ಶೇ.50ರ ಮಿತಿಯನ್ನು ಮೀರಿದಂತಾಗುವುದಿಲ್ಲ. ಬದಲಿಗೆ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಿದಂತಾಗುತ್ತದೆ. ಈ ಕುರಿತು ಶಿಫಾರಸ್ಸು ಮಾಡಿರುವ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ಚರ್ಚೆಗೆ ಅನುವು ಮಾಡಿಕೊಡಲಿಲ್ಲ. ಕನಿಷ್ಠ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸೌಜನ್ಯ ತೋರಲಿಲ್ಲ. ಆ ಮೂಲಕ ಯಾವುದನ್ನು ಸುಲಭಕ್ಕೆ ಮಾಡಬಹುದಿತ್ತೊ ಅದನ್ನು ಮಾಡದೇ ಶೋಷಿತ ಜನಾಂಗಕ್ಕೆ ಅನ್ಯಾಯ ಮಾಡುತ್ತಿದೆ.
ಇದನ್ನೂ ಓದಿ: ಸ್ಪೃಶ್ಯ-ಅಸ್ಪೃಶ್ಯ: ಒಳಮೀಸಲಾತಿಯ ಒಳಗುದಿ
ಒಟ್ಟಾರೆಯಾಗಿ ನೋಡುವುದಾದರೆ ಮೀಸಲಾತಿ ಹೆಚ್ಚಳವಾದರೆ ಭಾರೀ ಬದಲಾವಣೆ ಆಗುತ್ತದೆ ಎಂಬುದು ಸಹ ವಾಸ್ತವವಲ್ಲ. ಅದರೊಟ್ಟಿಗೆ ಸರ್ಕಾರಿ ಉದ್ಯೋಗಗಳು ಹೆಚ್ಚಾಗಬೇಕಿವೆ. ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಜಾರಿಗೆ ಬರಬೇಕಿದೆ. ಕೃಷಿಗೆ ಮಹತ್ವ ನೀಡಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ. ರೈತರ ಬೆಳೆಗಳಿಗೆ ಎಂಎಸ್‌ಪಿ ಜಾರಿಯಾಗಬೇಕು. ಗುಣಮಟ್ಟದ ಉಚಿತ ಶಿಕ್ಷಣ ಮತ್ತು ಆರೋಗ್ಯ ನೀಡುವುದು ಸರ್ಕಾರದ ಕರ್ತವ್ಯವಾಗಬೇಕು. ಯುವಜನರಿಗೆ ಉತ್ತಮ ಶಿಕ್ಷಣದ ಜೊತೆಗೆ ಉದ್ಯೋಗದ ಖಾತ್ರಿ ಸಿಗಬೇಕು. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಇವೆಲ್ಲವೂ ಸಂವಿಧಾನದತ್ತವಾಗಿ ಜನತೆಗೆ ಸಿಕ್ಕಿರುವ ಹಕ್ಕುಗಳು. ಇವುಗಳನ್ನು ಜಾರಿ ಮಾಡಲು ಸಾಧ್ಯವಾಗುವಷ್ಟು ಸಂಪತ್ತು ಸಹ ನಮ್ಮ ದೇಶದಲ್ಲಿದೆ. ಹಾಗಾಗಿ ಇದನ್ನು ಅರ್ಥ ಮಾಡಿಕೊಂಡು ದೇಶದ ಎಲ್ಲಾ ಸಮುಯದಾಯದ ಬಡವರು ಇವೆಲ್ಲದ್ದಕ್ಕಾಗಿ ಹೋರಾಡಬೇಕಿದೆ. ಆದರೆ ಇವೆಲ್ಲವುಗಳನ್ನು ಜಾರಿಗೊಳಿಸಲು ಕೆಲಸ ಮಾಡದ ಸರ್ಕಾರ ಮೀಸಲಾತಿಯ ವಿಷಯಗಳಲ್ಲಿ ಗೊಂದಲಗಳನ್ನು ಸೃಷ್ಟಿಸುವ ಮೂಲಕ ಜನರ ದಿಕ್ಕುತಪ್ಪಿಸುವುದರಲ್ಲಿ ನಿರತವಾಗಿದೆ. ಈಗಲಾದರೂ ಜನತೆ ತಮ್ಮ ಬದುಕಿಗೆ ಕಂಟಕವಾಗಿರುವ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಗಳನ್ನು ಹುಡುಕಿಕೊಳ್ಳುವತ್ತ ದೃಷ್ಟಿ ಹಾಯಿಸಬೇಕಾಗಿದೆ.


