Homeಮುಖಪುಟಸ್ಪೃಶ್ಯ-ಅಸ್ಪೃಶ್ಯ: ಒಳಮೀಸಲಾತಿಯ ಒಳಗುದಿ

ಸ್ಪೃಶ್ಯ-ಅಸ್ಪೃಶ್ಯ: ಒಳಮೀಸಲಾತಿಯ ಒಳಗುದಿ

- Advertisement -
- Advertisement -

“ಜಸ್ಟಿಸ್ ಎ.ಜೆ.ಸದಾಶಿವ ಆಯೋಗದ ವರದಿ ಅನ್ವಯ ಒಳಮೀಸಲಾತಿಯನ್ನು ಒಪ್ಪದಿದ್ದರೆ, ಸ್ಪೃಶ್ಯ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗಿಡಬೇಕೆಂದು ಹೋರಾಟ ಶುರುಮಾಡಬೇಕಾಗುತ್ತದೆ” ಎಂಬ ಆಕ್ರೋಶವನ್ನು ಕೆಲ ದಲಿತ ಯುವಕರು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ವ್ಯಕ್ತಪಡಿಸುವುದುಂಟು. ಇಂತಹ ಆಗ್ರಹಗಳನ್ನು ಹಿರಿಯ ದಲಿತ ಹೋರಾಟಗಾರರು ಒಪ್ಪುವುದಿಲ್ಲ. “ಯಾವುದೇ ಜಾತಿಯನ್ನು ಕೈಬಿಡಬೇಕೆಂಬ ಪ್ರಸ್ತಾಪ ನಮ್ಮ ಹೋರಾಟದಲ್ಲಿಲ್ಲ, ಆದರೆ ಮೀಸಲಾತಿ ವರ್ಗೀಕರಣವನ್ನು, ಪರಿಶಿಷ್ಟ ಜಾತಿ ಪಟ್ಟಿಯೊಳಗಿನ ಎಲ್ಲ ಸಮುದಾಯಗಳು ಒಪ್ಪಿಕೊಳ್ಳಲೇಬೇಕು” ಎಂಬ ಅಭಿಪ್ರಾಯವನ್ನು ಸಂಘಟಕರು ವ್ಯಕ್ತಪಡಿಸುತ್ತಾರೆ.

ಕೆಲವು ದಿನಗಳ ಹಿಂದೆ ’ನಾನುಗೌರಿ.ಕಾಂ’ ಜೊತೆ ಮಾತನಾಡುತ್ತಾ, ಲಂಬಾಣಿ ಸಮುದಾಯದ ಮುಖಂಡರಾದ ಅನಂತ್ ನಾಯ್ಕ್, “ಸ್ಪೃಶ್ಯ, ಅಸ್ಪೃಶ್ಯ ಎಂಬುದು ನಮಗೆ ಗೊತ್ತಿಲ್ಲ. ಯಾರು ಸ್ಪೃಶ್ಯರು, ಯಾರು ಅಸ್ಪೃಶ್ಯರು ಎಂಬುದಕ್ಕೆ ಕಾನೂನಾತ್ಮಕ ದಾಖಲೆಗಳು ನಿಮ್ಮ ಬಳಿ ಇವೆಯೇ?” ಎಂದು ಪ್ರಶ್ನಿಸಿದ್ದರು. ಯಾವುದೇ ಜಾತಿಯನ್ನು ಪ.ಪಟ್ಟಿಯಿಂದ ಕೈಬಿಡಬೇಕೆಂದು ಹೋರಾಟದ ಮುಂಚೂಣಿ ನಾಯಕರ್‍ಯಾರೂ ಒತ್ತಾಯಿಸುತ್ತಿಲ್ಲವಾದರೂ ಸ್ಪೃಶ್ಯ, ಅಸ್ಪೃಶ್ಯ ಎಂಬುದಕ್ಕೆ ದಾಖಲೆಯೇ ಇಲ್ಲ ಎನ್ನಲಾಗದು.

1911ರ ಜನಗಣತಿ ಸಂದರ್ಭದಲ್ಲಿ ಅಸ್ಪೃಶ್ಯರನ್ನು ಗುರುತಿಸಲು ಹತ್ತು ಮಾನದಂಡಗಳನ್ನು ಬ್ರಿಟಿಷ್ ಸರ್ಕಾರ ರೂಪಿಸಿತ್ತು. ಅವುಗಳೆಂದರೆ- 1) ಬ್ರಾಹ್ಮಣ ಶ್ರೇಷ್ಠತೆಯನ್ನು ತಿರಸ್ಕರಿಸುವವರು. 2) ಬ್ರಾಹ್ಮಣರ ಅಥವಾ ಇನ್ಯಾವುದೇ ಹಿಂದೂ ಗುರುಗಳಿಂದ ಮಂತ್ರ, ಸಂಸ್ಕಾರ ಸ್ವೀಕರಿಸದವರು. 3) ವೇದಗಳನ್ನು ಧಿಕ್ಕರಿಸುವವರು. 4) ಹಿಂದೂ ದೇವತೆಗಳನ್ನು ಪೂಜಿಸದವರು. 5) ಬ್ರಾಹ್ಮಣರಿಂದ ಸೇವೆ ಪಡೆಯಲಾರದವರು. 6) ಹಿಂದೂ ದೇವಾಲಯಗಳ ಒಳಗೆ ಪ್ರವೇಶ ಮಾಡಲಾರದವರು. 7) ಬ್ರಾಹ್ಮಣ ಪುರೋಹಿತರನ್ನು ಹೊಂದದವರು. 8) ಅಪವಿತ್ರತೆಗೆ ಮೈಲಿಗೆಗೆ ಕಾರಣರಾಗುವವರು. 9) ಶವವನ್ನು ಹೂಳುವವರು. 10) ದನ ತಿನ್ನುವವರು. ಈ ಅಂಶಗಳನ್ನು ಆಧರಿಸಿ, ಕುಲಶಾಸ್ತ್ರೀಯ ಅಧ್ಯಯನಗಳನ್ನು ತುಲನೆ ಮಾಡಿದರೆ ಸ್ಪೃಶ್ಯರು ಹಾಗೂ ಅಸ್ಪೃಶ್ಯರ ನಡುವಿನ ಕೆಲವು ಭಿನ್ನತೆಗಳು ಸ್ಪಷ್ಟವಾಗುತ್ತವೆ.

ಡಾ.ಪಿ.ಕೆ.ಖಂಡೋಬಾ

ಸಾರ್ವಜನಿಕವಾಗಿ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ- ಜಸ್ಟಿಸ್ ಎ.ಜೆ.ಸದಾಶಿವ ಆಯೋಗವು ಪರಿಶಿಷ್ಟ ಜಾತಿಯಲ್ಲಿನ 101 ಸಮುದಾಯಗಳನ್ನು 4 ಗುಂಪುಗಳಾಗಿ ವರ್ಗೀಕರಿಸಿ, ಶೇ.15ರ ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಿದೆ. ಅದರಂತೆ ಶೇ.33.4ರಷ್ಟಿರುವ ಎಡಗೈ (ಮಾದಿಗ) ಸಮುದಾಯಕ್ಕೆ ಶೇ.6ರಷ್ಟು, ಶೇ.32ರಷ್ಟಿರುವ ಬಲಗೈ (ಹೊಲೆಯ) ಸಮುದಾಯಕ್ಕೆ ಶೇ.5ರಷ್ಟು, ಶೇ.23.64ರಷ್ಟಿರುವ ಸ್ಪೃಶ್ಯ ಪರಿಶಿಷ್ಟರಿಗೆ ಶೇ.3ರಷ್ಟು ಹಾಗೂ ಇತರೆ ಪರಿಶಿಷ್ಟರಿಗೆ ಶೇ.1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ ಎನ್ನಲಾಗುತ್ತಿದೆ. ಸ್ಪೃಶ್ಯ ಜಾತಿಗಳೆಂದು ಗುರುತಿಸಲಾಗಿರುವ ಭೋವಿ, ಲಂಬಾಣಿಯಂತಹ ಸಮುದಾಯಗಳು ಹೆಚ್ಚಿನ ಸವಲತ್ತು ಪಡೆಯುತ್ತಿವೆ ಎಂಬುದು ಹೋರಾಟದ ಸಾರಾಂಶ. ಜೊತೆಗೆ ಈ ಸಮುದಾಯದ ಮುಖಂಡರು ಮುಂಚೂಣಿಯಲ್ಲಿರುವ ’ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟ’ವು ಸದಾಶಿವ ಆಯೋಗವನ್ನು ವಿರೋಧಿಸುತ್ತಿದ್ದರೂ ಒಳಮೀಸಲಾತಿಗೆ ತಕರಾರಿಲ್ಲ ಎಂದಿದೆ. “ಸರ್ಕಾರ ರಚಿಸಿರುವ ಸಂಪುಟ ಉಪಸಮಿತಿಯೇ ಬೇರೊಂದು ವರದಿಯನ್ನು ಸಲ್ಲಿಸಲಿ. ಸದಾಶಿವ ಆಯೋಗದ ವರದಿ ಸಾರ್ವಜನಿಕ ಚರ್ಚೆಗೆ ಒಳಗಾಗಲಿ” ಎಂಬ ನಿಲುವನ್ನು ತಾಳಿದೆ. ಇದೆಲ್ಲದರ ಸುತ್ತಲೂ ಒಳಮೀಸಲಾತಿ ಜಾರಿ ವಿಳಂಬದ ಧೋರಣೆ ಕೆಲಸ ಮಾಡುತ್ತಿದೆಯೇ ಎಂಬ ಗುಮಾನಿಯಂತೂ ಅಸ್ಪೃಶ್ಯ ಸಮುದಾಯಗಳಿಗೆ ಇದೆ.

ಇದನ್ನೂ ಓದಿ: ರಾಜ್ಯದಲ್ಲಿ ಮೀಸಲಾತಿ ಹೋರಾಟ ಪರ್ವ: ವಿವಿಧ ಸಮುದಾಯಗಳ ಬೇಡಿಕೆಗಳೇನು?

ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ 1921ರ ಕಾಲಘಟ್ಟದಲ್ಲಿ ಶೂದ್ರ ಮತ್ತು ಅಸ್ಪೃಶ್ಯರಿಗಾಗಿ ಶೇ.75ರಷ್ಟು ಮೀಸಲಾತಿಯನ್ನು ಜಾರಿಗೆ ತಂದರು. ಆಗ ಪರಿಶಿಷ್ಟ ಜಾತಿಯೊಳಗೆ ಹೊಲೆಯ, ಮಾದಿಗ ಜಾತಿಗಳೊಂದಿಗೆ ಭೋವಿ, ಲಂಬಾಣಿ ಸಮುದಾಯಗಳೂ ಸೇರ್ಪಡೆಯಾದವು. ಬೇರೆ ರಾಜ್ಯಗಳಲ್ಲಿ ಒಬಿಸಿ ಪಟ್ಟಿರುವ ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಪಟ್ಟಿಗೆ ಸೇರಿಸಿದ್ದು ಈಗ ಇತಿಹಾಸ. ಸಂವಿಧಾನ ಜಾರಿಯಾಗಿ ರಾಜಕೀಯ ಪಲ್ಲಟಗಳಾದ ಬಳಿಕ ಪರಿಶಿಷ್ಟ ಜಾತಿ ಪಟ್ಟಿಯೊಳಗೆ ಮತ್ತಷ್ಟು ಜಾತಿಗಳನ್ನು ಸೇರಿಸಲಾಯಿತು. ಈಗ 101 ಜಾತಿಗಳು ಈ ಪಟ್ಟಿಯಲ್ಲಿವೆ.

ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನಗಳನ್ನು ಗಮನಿಸಿದರೆ- ಸ್ಪೃಶ್ಯ ಜಾತಿಗಳ ಸಾಮಾಜಿಕ ಪರಿಸ್ಥಿತಿ ಹೊಲೆಯ, ಮಾದಿಗ ಜಾತಿಗಳಿಗಿಂತ ಭಿನ್ನವಾಗಿದೆ. ಬಂಜಾರ, ಬಣಜಾರ, ಲಂಬಾಣಿ, ಸುಕಾಲಿ, ಲಮಾಣಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಲಂಬಾಣಿ ಸಮುದಾಯವು ಆರ್ಯ ಸಂಸ್ಕೃತಿಯ ಭಾಗವಾಗಿ ಗುರುತಿಸಿಕೊಳ್ಳುತ್ತದೆ. ಮೂಲತಃ ಅಲೆಮಾರಿ ಸಮುದಾಯವಾದ ಲಂಬಾಣಿ ಒಂದು ಕಾಲಘಟ್ಟದಲ್ಲಿ ನೆಲೆ ನಿಲ್ಲಲು ಆರಂಭಿಸಿತು. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಮೊದಲಾದ ರಾಜ್ಯಗಳಲ್ಲಿ ಕಂಡು ಬರುವ ಈ ಸಮುದಾಯದವರು ತಮ್ಮನ್ನು ರಾಜಸ್ಥಾನ ಮೂಲದವರೆಂದು ಸಾಮಾನ್ಯವಾಗಿ ಗುರುತಿಸಿಕೊಳ್ಳುತ್ತಾರೆ. ಈಗ ತಾಂಡಾ ಸಂಸ್ಕೃತಿಯಲ್ಲಿ ಸ್ಥಿತ್ಯಂತರಗಳಾಗಿದ್ದರೂ ಚಾರಿತ್ರಿಕ ಅಧ್ಯಯನಗಳಲ್ಲಿ ಮತ್ತು ಈಗಲೂ ಸಾಂಪ್ರದಾಯಕ ತಾಂಡಾಗಳಲ್ಲಿ ಬಂಜಾರ ಸಂಸ್ಕೃತಿಯ ಮೂಲ ಸ್ವರೂಪವನ್ನು ಕಾಣಬಹುದು. ತಾಂಡಾದ ನಾಯಕ, ಆತನ ಜವಾಬ್ದಾರಿ, ಪಂಚಾಯಿತಿ ವ್ಯವಸ್ಥೆ, ಮದುವೆ, ಹಬ್ಬಗಳ ಆಚರಣೆ, ಮದುವೆ ಸಂಪ್ರದಾಯಗಳು, ವಸ್ತ್ರವಿನ್ಯಾಸ ಮೊದಲಾದವುಗಳ ಮೂಲಕ ತಮ್ಮನ್ನು ವಿಶಿಷ್ಟವಾಗಿ ಗುರುತಿಸಿಕೊಂಡ ಹೆಗ್ಗಳಿಕೆ ಬಂಜಾರ ಸಮುದಾಯಕ್ಕೆ ಸಲ್ಲುತ್ತದೆ.

ಪ್ರತಿ ಜಾತಿಯೊಳಗೂ ಶ್ರೇಣೀಕೃತ ವ್ಯವಸ್ಥೆ ಸೃಷ್ಟಿಯಾಗಿರುವಂತೆ ಬಂಜಾರ ಸಮುದಾಯದೊಳಗೂ ಅಸ್ಪೃಶ್ಯರಿದ್ದಾರೆ ಎನ್ನುತ್ತವೆ ಅಧ್ಯಯನಗಳು. ಢಾಡಿ, ಢಾಲಿಯಾ, ಸುನಾರ ಮುಂತಾದವರು ಲಂಬಾಣಿಗರಲ್ಲಿಯೇ ಅಸ್ಪೃಶ್ಯರಾಗಿದ್ದಾರೆ. ಆದರೆ ಇವರ ಸಂಖ್ಯೆ ತೀರಾ ಕಡಿಮೆ ಎನ್ನಲಾಗುತ್ತದೆ. “ಮೂಲತಃ ಸಸ್ಯಾಹಾರಿಗಳಾಗಿದ್ದ ಆರ್ಯ ಸಮುದಾಯದ ಲಂಬಾಣಿ ಸಮುದಾಯ ತಮ್ಮ ಮೂಲಸ್ಥಾನವನ್ನು ಬಿಟ್ಟು ಅಲೆಮಾರಿಗಳಾಗಿ ಕಾಡುಮೇಡುಗಳಲ್ಲಿ ಸಂಚರಿಸುವ ಸಮಯದಲ್ಲಿ ಅಲ್ಲಿ ಸಿಕ್ಕ ಪ್ರಾಣಿಗಳನ್ನು ಬೇಟೆಯಾಡಿ ತಮ್ಮ ಊಟಕ್ಕಾಗಿ ಬಳಸಿಕೊಂಡಿರಬೇಕು” ಎನ್ನುತ್ತಾರೆ ಲೇಖಕರಾದ ಡಾ.ಪಿ.ಕೆ.ಖಂಡೋಬಾ. ತಮ್ಮ ’ಲಂಬಾಣಿಗರು’ ಕಿರುಹೊತ್ತಿಗೆಯಲ್ಲಿ ಲಂಬಾಣಿಗರ ಸಂಸ್ಕಾರಾದಿಗಳಿಗೆ ಸಂಬಂಧಿಸಿದಂತೆ ಬರೆಯುತ್ತಾ, “ಪ್ರತಿಯೊಂದು ವಿಧಿವಿಧಾನಗಳು ರೂಢಿ, ಪದ್ಧತಿಗಳು ಆರ್ಯ ಸಂಸ್ಕೃತಿಗೆ ಹೆಚ್ಚಿನ ಸಾಮ್ಯತೆಯನ್ನು ಹೊಂದಿದ್ದು, ಅವರು ಆರ್ಯ ಸಮುದಾಯದವರೆಂಬುದನ್ನು ಹೆಚ್ಚು ಸಾಬೀತುಪಡಿಸುತ್ತವೆ” ಎನ್ನುತ್ತಾರೆ. ಲಂಬಾಣಿಗರಲ್ಲಿ ಹೆರಿಗೆಯಾದ ಐದು ದಿನಕ್ಕೆ ನಡೆಯುವ ’ಜಲವಾಧೋಕಾಯೇರೋ’ (ದಳವಾಧೋಕಾಯೇರೊ) ಎನ್ನುವ ಒಂದು ವಿಶಿಷ್ಟ ಶಾಸ್ತ್ರದ ಬಗ್ಗೆ ವಿವರಿಸುತ್ತಾ, “ಈ ಶಾಸ್ತ್ರವಾದ ಮೇಲೆಯೇ ಬಾಣಂತಿಯು ಬೇರೆಯವರ ಮಕ್ಕಳನ್ನು ಮುಟ್ಟಲು ಹಾಗೂ ಮನೆಯ ಒಲೆ ಮುಟ್ಟಲು ಅರ್ಹಳಾಗುತ್ತಾಳೆ. ಈ ಬಗೆಯ ಶಾಸ್ತ್ರ ರಜಪೂತರಲ್ಲಿಯೂ ಇದೆ” ಎನ್ನುತ್ತಾರೆ. ಈ ರೀತಿಯ ಅಂಶಗಳಿಂದ ಸ್ಪಷ್ಟವಾಗುವ ವಿಚಾರವೆಂದರೆ- ತಮ್ಮನ್ನು ಶ್ರೇಣೀಕೃತ ಜಾತಿವ್ಯವಸ್ಥೆಯಲ್ಲಿ ಮೇಲ್ಪದರದಲ್ಲಿ ಗುರುತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

“ಭೋವಿ ಸಮುದಾಯದ ಸಾಮಾಜಿಕ ಅಧ್ಯಯನ” ಕೃತಿಯನ್ನು ಬರೆದಿರುವ ಡಾ.ಎನ್.ಬಿ.ಸಂಗಳದ ಅವರು ಭೋವಿ ಸಮಾಜದ ಮೂಲ, ಬದುಕು, ಐಹಿತ್ಯ, ಇತಿಹಾಸ, ಸಂಸ್ಕೃತಿ, ಆಚಾರ ವಿಚಾರಗಳನ್ನೆಲ್ಲ ಸಂಕ್ಷಿಪ್ತವಾಗಿ ಚರ್ಚಿಸಿದ್ದಾರೆ. “ಭೋವಿ ಎಂಬ ಪದವು ದ್ರಾವಿಡ ಮೂಲದ್ದಾಗಿದೆ. ವಡ್ಡ ಸಮುದಾಯದ ಉಗಮಸ್ಥಾನ ಒಡಿಶಾ, ಅದು ಒಡ್ಡೆದೇಶ, ಒಡ್ರ ದೇಶ ಎಂದೂ ಹೇಳಲಾಗುತ್ತದೆ. ಪ್ರಾಕೃತದಲ್ಲಿ ಒಡ್ಡ, ಸಂಸ್ಕೃತದಲ್ಲಿ ಒಡ್ರ, ತಮಿಳಿನಲ್ಲಿ ಒಡ್ಡಿಯನ, ಮಲಯಾಳಂನಲ್ಲಿ ಒಟ್ಟಿನ, ತೆಲುಗಿನಲ್ಲಿ ಒಡ್ಡೆ, ಕರ್ನಾಟಕದಲ್ಲಿ ಒಡ್ಡ, ಭೋವಿ ಎಂದು ಕರೆಯಲಾಗುತ್ತದೆ. ದ್ರಾವಿಡ ಪದಗಳಾದ ಓಟನ್, ಒಟ್ಟಿಯನ, ಒಡ್ಡೆ ಶಬ್ದಗಳಿಂದಲೇ ಪ್ರಾಕೃತ ಪದ ಒಡ್ಡ ಎಂಬುದಾಗಿರಬಹುದು. ’ವಡ್ಡ’ ಪದವು ವೃತ್ತಿ ಸೂಚಕವಾದ ದ್ರಾವಿಡ ಮೂಲದ್ದಾಗಿದೆ. ಭೋ(ಬೋ)ವಿಗಳು (ವಡ್ಡರು) ಕೆರೆ ಬಾವಿಗಳನ್ನು ತೋಡುವುದು, ಬಂಡೆಗಳನ್ನು ಎಬ್ಬಿಸುವುದು, ಕಟ್ಟಡ ಅಣೆಕಟ್ಟುಗಳನ್ನು ಕಟ್ಟುವುದು, ಮನೆಗಳಿಗೆ ತಳಪಾಯ ಹಾಕುವುದು, ಕಲ್ಲುಗಳಲ್ಲಿ ನಯವಾದ ಕೆತ್ತನೆ ಮಾಡುವುದು ಮೊದಲಾದ ಕೆಲಸಗಳನ್ನು ಮಾಡುತ್ತಾರೆ” ಎಂದು ಸಂಗಳದ ವಿವರಿಸುತ್ತಾರೆ.

ಭೋವಿ ಅಥವಾ ವಡ್ಡ ಎಂಬುದಕ್ಕೆ- ಕಲ್ಲು ಕೆಲಸ ಮಾಡುವವರು, ಕಠಿಣವಾದ ಒರಟು ಕೆಲಸ ಮಾಡುವವರು, ಒರಿಸ್ಸಾದಿಂದ ವಲಸೆ ಬಂದವರು ಇತ್ಯಾದಿ ಅರ್ಥಗಳನ್ನು ಶೋಧಿಸಲಾಗಿದೆ. “ಸಮುದಾಯದ ಐತಿಹಾಸಿಕ ಹಿನ್ನೆಲೆಯನ್ನು ಗಮನಿಸಿದಾಗ ಸ್ವತಂತ್ರ ಪೂರ್ವಕಾಲದಲ್ಲಿ ಹಾಗೂ ರಾಜ ಮಹಾರಾಜರ ಆಳ್ವಿಕೆಯಲ್ಲಿ ತನ್ನದೇ ಆದ ಸ್ಥಾನಮಾನಗಳೊಂದಿಗೆ ಗುರುತಿಸಿಕೊಂಡಿರುತ್ತದೆ. ರಾಜಮಹಾರಾಜರ ಆಳ್ವಿಕೆಯಲ್ಲಿ ಭೋವಿಗಳ ಕೆಲಸ ಶ್ಲಾಘನೀಯವಾದದ್ದು. ಕೋಟೆ ಕೊತ್ತಲು, ದೇವಸ್ಥಾನ, ಕೆರೆಕಟ್ಟೆ, ಅರಮನೆ ನಿರ್ಮಾಣ ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದರು” ಎಂದು ಸಂಗಳದ ವಿವರಿಸುತ್ತಾರೆ.

ವಡ್ಡ ಸಮುದಾಯದಲ್ಲಿ ಕಲ್ಲುವಡ್ಡರು, ಮಣ್ಣು ವಡ್ಡರು, ಬಂಡಿ ವಡ್ಡರು, ಗಿರಣಿ ವಡ್ಡರು, ಉಪ್ಪು ವಡ್ಡರು, ತುಡುಗು ವಡ್ಡರು (ಗಂಟಿ ಚೋರರು) ಎಂಬ ಒಳಪಂಗಡಗಳನ್ನು ವೃತ್ತಿ ಸೂಚಕವಾಗಿ ಗುರುತಿಸಲಾಗಿದೆ. ದ್ರಾವಿಡ ಮೂಲವಾದ ಭೋವಿಗಳ ಸಂಸ್ಕೃತಿ, ಬದುಕು, ಹಬ್ಬಹರಿದಿನಗಳನ್ನು ನೋಡಿದರೆ ಅಸ್ಪೃಶ್ಯ ಜನತೆಯೊಂದಿಗೆ ಹೋಲಿಕೆ ಕಂಡುಬರುತ್ತದೆ. ಆದರೆ ಭೋವಿ ಸಮುದಾಯವನ್ನು ಇತರೆ ಸ್ಪೃಶ್ಯ ಜಾತಿಗಳು ಸ್ವೀಕರಿಸಿದಂತೆ ಹೊಲೆಯ-ಮಾದಿಗರನ್ನು ಒಳಗೊಂಡಿಲ್ಲ ಎಂಬುದು ಅಷ್ಟೇ ನಿಜ.

ಬಂಜಾರರ ಬದುಕು ಬದಲಾಗಿದೆ: ಡಾ.ರವಿ ಬಂಜಾರ

“ಯಾವುದೇ ಸಮುದಾಯದ ಸಂಸ್ಕೃತಿಯ ಉಳಿವನ್ನು ಆ ಸಮುದಾಯಗಳು ಆಡುವ ಭಾಷೆಯ ಮೂಲಕ ಗುರುತಿಸಬಹುದು. ಆದರೆ ಲಂಬಾಣಿ ಸಮುದಾಯದ ಹೊಸ ತಲೆಮಾರು ತನ್ನ ’ಗೊರಬೋಲಿ’ ಭಾಷೆಯಿಂದ ದೂರವಾಗುತ್ತಿದೆ. ಅನ್ನದ ಭಾಷೆಯನ್ನು ಬೆನ್ನು ಹತ್ತಿದೆ. ಭಾಷೆಯ ಸ್ಥಿತ್ಯಂತರದೊಂದಿಗೆ ಬದುಕಿನ ರೀತಿಯೂ ಬದಲಾಗಿದೆ” ಎನ್ನುತ್ತಾರೆ ಬಂಜಾರ ಸಮುದಾಯದ ಮುಖಂಡರಾದ ಡಾ.ರವಿ ಬಂಜಾರ.

“ಲಿಪಿಯನ್ನು ಹೊಂದಿರದ ನಮ್ಮ ಭಾಷೆಗೆ ಪ್ರಾತಿನಿಧ್ಯವಿಲ್ಲ. ಹೀಗಾಗಿ ಅನ್ನದ ಭಾಷೆಯನ್ನು ಹುಡುಕಿ ಹೊರಟಿದ್ದಾರೆ. ಇಂಗ್ಲಿಷ್, ಕನ್ನಡ ಓದಿಕೊಂಡರೆ ಉದ್ಯೋಗ ಸಿಗುತ್ತದೆ ಎಂದು ತಿಳಿದಿದ್ದಾರೆ. ಗೊರಬೋಲಿ ಭಾಷೆಯನ್ನು ಮನೆಯಲ್ಲಿ ಸಾಮಾನ್ಯವಾಗಿ ಬಳಸುತ್ತಾರಷ್ಟೇ. ಪಟ್ಟಣ, ನಗರ ಸೇರಿದ ನಮ್ಮ ಮಕ್ಕಳು ನಮ್ಮ ಭಾಷೆಯನ್ನು ಕಲಿಯುತ್ತಿಲ್ಲ. ಒಂದು ಸಮುದಾಯಕ್ಕೆ, ಅದರ ಭಾಷೆಯೇ ಶ್ರೀಮಂತಿಕೆ. ಭಾಷೆಯೇ ಸತ್ತರೇ ಅದರ ಸಂಸ್ಕೃತಿ ಹೇಗೆ ಉಳಿಯುತ್ತದೆ? ದೀಪಾವಳಿ ಸಂದರ್ಭದಲ್ಲಿ ಮಾತ್ರ ಕೆಲವೊಮ್ಮೆ ತಮ್ಮ ಸಂಸ್ಕೃತಿಯನ್ನು ನೆನೆಯುತ್ತಿದ್ದಾರೆ. ಕೆಲವೆಡೆ ನಮ್ಮ ವೇಷಭೂಷಣವನ್ನು ಆಡಿಕೊಳ್ಳುವವರು ಇದ್ದಾರೆ. ಹೀಗಾಗಿ ಸಮುದಾಯದ ಜನ ಮುಜುಗರಕ್ಕೆ ಒಳಗಾದದ್ದೂ ಉಂಟು. ರಾಮನಗರ ಜಿಲ್ಲೆಯಲ್ಲಿ 70ರಿಂದ 80 ತಾಂಡಾಗಳಿವೆ. ಅಲ್ಲಿ ಬಂಜಾರ ವೇಷಭೂಷಣ ಸಂಸ್ಕೃತಿ ಇಲ್ಲವಾಗಿದೆ. ಬರೀ ಲಂಬಾಣಿಗಳೇ ಇರುವ ತಾಂಡಾಗಳಲ್ಲಿ ಒಂದಿಷ್ಟು ನಮ್ಮದೆನ್ನಬಹುದಾದ ಸಂಸ್ಕೃತಿ ಉಳಿದುಕೊಂಡಿದೆಯಷ್ಟೇ” ಎಂದು ವಿವರಿಸಿದರು.

“ನಮ್ಮ ಸಂಸ್ಕೃತಿಯ ಭಾಗವಾದ ಕಸೂತಿ ವಸ್ತ್ರಗಳನ್ನು ಮಾಡುವವರು ಕಡಿಮೆಯಾಗಿದ್ದಾರೆ. ವಯಸ್ಸಾದ ಕೆಲವರಷ್ಟೇ ಈಗಲೂ ಇದೇ ರೀತಿಯ ವಸ್ತ್ರಗಳನ್ನು ತೊಡುತ್ತಿದ್ದಾರೆ. ಕಮರ್ಷಿಯಲ್ ಆಗಿ ಸಂಡೂರು, ಗುಲ್ಬರ್ಗದಲ್ಲಿ ಚಿಕ್ಕ ಫ್ಯಾಕ್ಟರಿಗಳನ್ನು ಮಾಡಿಕೊಂಡು ಕೆಲವರು ಕಸೂತಿ ಮಾಡುತ್ತಿರುವುದುಂಟು. ಒಂದೆರಡು ಸಾವಿರಗಳಿಗೆ ಆ ಬಟ್ಟೆಗಳು ಸಿಗುವುದಿಲ್ಲ. ಶ್ರೀಮಂತರು ಮಾತ್ರ ಖರೀದಿಸುತ್ತಾರೆ. ವೇದಿಕೆ ಮೇಲಿನ ತೋರಿಕೆಗಷ್ಟೇ ಬಂಜಾರ ವೇಷಭೂಷಣ ಸೀಮಿತವಾಗುತ್ತಿದೆ” ಎಂದು ಬದಲಾದ ಸಂಸ್ಕೃತಿಯನ್ನು ಕುರಿತು ವಿವರಿಸಿದರು.

ಇದನ್ನೂ ಓದಿ: ಕಂದಾಯ ಗ್ರಾಮಗಳಾಗಿ ಲಂಬಾಣಿ ತಾಂಡಗಳ ಪರಿವರ್ತನೆಗೆ ಸರ್ವೇ: ಸಿಎಂ

“ಬಂಜಾರ ಸಮುದಾಯ ಅಭಿವೃದ್ಧಿಯಾಗಿದೆ, ಹೆಚ್ಚಿನ ಜನಪ್ರತಿನಿಧಿಗಳಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಸಮುದಾಯದ ಪರಿಸ್ಥಿತಿ ಬದಲಾಗಿಲ್ಲ ಎಂಬುದು ವಾಸ್ತವ. ಚಿತ್ರದುರ್ಗ, ದಾವಣಗೆರೆ ಸುತ್ತಮುತ್ತಲಿದ್ದ ನಮ್ಮ ಜನರು ಗೋವಾಕ್ಕೆ ವಲಸೆ ಹೋಗಿ ಜೀವನ ನಡೆಸುತ್ತಿದ್ದಾರೆ. ಅಲ್ಲಿ ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಉದಾಹರಣೆಗಳಿವೆ. ನವಲತ್ತು ಸಾವಿರ ಜನರು ಗೋವಾ ಬೀಚ್‌ನಲ್ಲಿ ಜೀವನ ಮಾಡುತ್ತಿರುವ ದಾಖಲೆಗಳಿವೆ. ಕಾಫಿ ತೋಟ, ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ಗುಳೆ ಹೊರಟುಹೋಗುತ್ತಾರೆ. ದಾವಣಗೆರೆ, ಬೆಂಗಳೂರಿನ ಸ್ಲಮ್‌ಗಳಲ್ಲಿ ಒಳಚರಂಡಿ ಕೆಲಸ ಮಾಡುವಲ್ಲಿಯೂ ಲಂಬಾಣಿಗಳಿದ್ದಾರೆ. ಕಲ್ಲು ಹೊಡೆಯುವ ಕೆಲಸ, ಟಾರು ಹಾಕುವ ಕೆಲಸದಲ್ಲಿಯೂ ಸಮುದಾಯ ತೊಡಗಿಸಿಕೊಂಡಿದೆ” ಎಂದು ಹೇಳಿದರು.

“ರಾಜರ ಕಾಲದಲ್ಲಿ ವಲಸೆ ಬಂದ ಸಮುದಾಯ, ಒಂದೆಡೆ ನೆಲೆಸಲಾರಂಭಿಸಿತು. ನಮ್ಮ ಮೂಲ ಎಲ್ಲಿಯದ್ದಾದರೂ ಸಾಮಾಜಿಕ ಪರಿಸ್ಥಿತಿ ಮುಖ್ಯವಾಗುತ್ತದೆ. ಸ್ಪೃಶ್ಯ-ಅಸ್ಪೃಶ್ಯ ಚರ್ಚೆಯನ್ನು ಹುಟ್ಟುಹಾಕಲಾಗಿದೆ. ಬಹುತೇಕ ತಾಂಡಾಗಳು ಈಗಲೂ ಊರಿನಿಂದ ಹೊರಗೆ ಇರುತ್ತಾರೆಯೇ ಹೊರತು ಒಳಗೆ ಇರುವುದಿಲ್ಲ. ನಾವು ಪ್ರತ್ಯೇಕವಾಗಿದ್ದೇವೆಂಬ ಮನಸ್ಥಿತಿ ಬೆಳೆದುಬಿಟ್ಟಿದೆ. ತಮ್ಮ ಸಮುದಾಯವನ್ನು ನಿಕೃಷ್ಟವಾಗಿ ನೋಡುತ್ತಿದ್ದರೂ ಕೆಲವರು ತಮ್ಮನ್ನು ವೈಭವೀಕರಣ ಮಾಡಿಕೊಳ್ಳುವುದು ಸಾಮಾನ್ಯ. ಇದು ಬಂಜಾರ ಸಮುದಾಯ ಸೇರಿದಂತೆ ಎಲ್ಲರಲ್ಲೂ ನಡೆಯುತ್ತಿದೆ” ಎಂದರು.

ಭೋವಿಗಳಿಗೂ, ಹೊಲೆಯ ಮಾದಿಗರಿಗೂ ಸಾಮ್ಯತೆಗಳಿವೆ: ಜಿ.ವಿ.ಸೀತಾರಾಮ್

“ಎ.ಜೆ.ಸದಾಶಿವ ಆಯೋಗದ ವರದಿಯನ್ನು ಬಿಡುಗಡೆ ಮಾಡಿ ಚರ್ಚೆಗೆ ಅವಕಾಶ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬುದು ನಿಜ. ಅವರಿಗೆ ನ್ಯಾಯ ದೊರಕಬೇಕು. ಹಾಗೆಂದು ಪರಿಶಿಷ್ಟ ಜಾತಿಯಲ್ಲಿನ ಕೆಲವು ಸಮುದಾಯಗಳನ್ನು ತೆಗೆಯಬೇಕೆಂಬುದು ಸರಿಯಲ್ಲ. ಭೋವಿ ಸಮುದಾಯಕ್ಕೂ ಹೊಲೆಯ, ಮಾದಿಗ ಸಮುದಾಯಕ್ಕೂ ಹಲವು ಸಾಮ್ಯತೆಗಳಿವೆ” ಎನ್ನುತ್ತಾರೆ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಜಿ.ವಿ.ಸೀತಾರಾಮ್.

“ಹೊಲೆಯ, ಮಾದಿಗ ಸಮುದಾಯಗಳು ಮಾಡುವ ಒಳಚರಂಡಿ ಕೆಲಸಗಳನ್ನು ಭೋವಿಗಳೂ ಮಾಡುತ್ತಿದ್ದಾರೆ. ನಮ್ಮನ್ನು ಪರಿಶಿಷ್ಟ ಜಾತಿಯಿಂದ ತೆಗೆಯಬೇಕೆಂಬ ವಾದ ಸರಿಯಲ್ಲ ಎಂದು ನೆಹರೂ ಅವರ ಕಾಲದಲ್ಲಿಯೇ ಮನವರಿಕೆ ಮಾಡಿದ ಪ್ರಸಂಗಗಳು ನಡೆದಿವೆ. ನಮ್ಮ ಹಬ್ಬ ಹರಿದಿನಗಳ ಆಚರಣೆಗೂ, ಹೊಲೆಯ, ಮಾದಿಗರ ಆಚರಣೆಗೂ ಯಾವುದೇ ವ್ಯತ್ಯಾಸಗಳಿಲ್ಲ. ಆದರೆ ಮೇಲ್ಜಾತಿಗಳು ಭೋವಿ ಸಮುದಾಯವನ್ನು ಪಿರಮಿಡ್ ಸಿಸ್ಟಮ್‌ನಲ್ಲಿ ಮೇಲಿನ ಸ್ಥಾನದಲ್ಲಿ ಇಟ್ಟಿರುವುದು ನಿಜ. ಮನೆಯೊಳಗೆ ಒಳಚರಂಡಿ ಸಮಸ್ಯೆಯಾದಾಗ ನಮ್ಮನ್ನು ಕರೆಸಿ ಕೆಲಸ ಮಾಡಿಸಿಕೊಳ್ಳುತ್ತಾರೆ” ಎಂದರು.

“ಪರಿಶಿಷ್ಟ ಜಾತಿಗಳು ಸಮಸ್ಯೆಯನ್ನು ಬಗೆಹರಿಸಿಕೊಂಡು ಒಂದಾಗಿ ಮುನ್ನಡೆಯಬೇಕು. ಎ.ಜೆ.ಸದಾಶಿವ ಆಯೋಗದ ವರದಿ ಬಿಡುಗಡೆಯಾಗಿ ಚರ್ಚೆಗಳು ನಡೆಯಬೇಕು. ವಿಳಂಬ ನೀತಿ ಅನುಸರಿಸಿ ಸಮುದಾಯಗಳನ್ನು ಒಡೆಯುವ ಕೆಲಸ ಸರ್ಕಾರಗಳು ಮಾಡಬಾರದು. ಹೊಲೆಯ, ಮಾದಿಗ ಸಮುದಾಯಗಳು ನಮ್ಮನ್ನೂ ಒಳಗೊಂಡು ಹೋರಾಟ ಮುಂದುವರಿಸಬೇಕು” ಎಂದು ಆಶಿಸಿದರು.

ಸ್ಪೃಶ್ಯರನ್ನು ಪ.ಜಾತಿ ಪಟ್ಟಿಯಿಂದ ಕೈಬಿಡಬೇಕೆಂದು ಹೇಳುವುದಿಲ್ಲ: ಪ್ರೊ.ಸಿ.ಕೆ.ಮಹೇಶ್

“ಸಂಖ್ಯೆಗನುಗುಣವಾಗಿ ಮೀಸಲಾತಿ ಕೊಡಿ ಎಂದು ಹೊಲೆಯ, ಮಾದಿಗ ಸಮುದಾಯಗಳು ಕೇಳುತ್ತಿವೆ. ಇದು ಸಂವಿಧಾನಬದ್ಧವಾದ ಬೇಡಿಕೆ. ಮೀಸಲಾತಿ ವರ್ಗೀಕರಣ ಮಾಡಬೇಡಿ ಎಂಬುದು ಜನತಂತ್ರಕ್ಕೆ ವಿರೋಧವಾದ ನಿಲುವು. ಪ.ಪಟ್ಟಿಯಿಂದ ಭೋವಿ, ಲಂಬಾಣಿ, ಕೊರಚ, ಕೊರಮರನ್ನು ಹೊರಗಿಡಬೇಕೆಂಬುದು ಚಳವಳಿಯ ಆಶಯವಾಗಿಲ್ಲ. ಕೆಲವು ಹುಡುಗರು ಈ ರೀತಿಯ ಅಭಿಪ್ರಾಯಗಳನ್ನು ವೈಯಕ್ತಿಕ ನೆಲೆಯಲ್ಲಿ ಕೊಡುತ್ತಿರಬಹುದಷ್ಟೇ” ಎಂದು ಹಿರಿಯ ಹೋರಾಟಗಾರರಾದ ಪ್ರೊ.ಸಿ.ಕೆ.ಮಹೇಶ್ ಸ್ಪಷ್ಟಪಡಿಸಿದರು.

“ಮಾದಿಗ, ಹೊಲೆಯ ಸಮುದಾಯಗಳನ್ನು ಪ್ರತಿನಿಧಿಸುವ ಯಾವುದೇ ಸಂಘಟನೆಗಳು ಸ್ಪೃಶ್ಯ ಸಮುದಾಯಗಳನ್ನು ಹೊರಗಿಡಿ ಎಂದು ಹೇಳುತ್ತಿಲ್ಲ. ಆದರೆ ಅವರೇ ಹೆಚ್ಚು ಸವಲತ್ತು ಹೊಡೆದಿದ್ದಾರೆ ಎಂಬ ವಾದವನ್ನು ಸಮರ್ಥಿಸಲು ಎಷ್ಟು ಮಂದಿ ಸ್ಪೃಶ್ಯ ಶಾಸಕರಿದ್ದಾರೆ, ಎಷ್ಟು ಸಂಖ್ಯೆಯಲ್ಲಿ ಅಸ್ಪೃಶ್ಯ ಶಾಸಕರಿದ್ದಾರೆ ಎಂಬುದನ್ನು ಹೇಳಲಾಗುತ್ತಿದೆ. ಪ್ರಬಲ ಜಾತಿಗಳೊಂದಿಗೆ ಫೈಟ್ ಮಾಡಲು ಅಸ್ಪೃಶ್ಯ ಸಮುದಾಯಗಳಿಗೆ ಆಗುವುದಿಲ್ಲ ಎಂಬುದಷ್ಟೇ ಇಲ್ಲಿನ ಉದ್ದೇಶ. ವರ್ಗೀಕರಣವೇ ಇದಕ್ಕೆ ಪರಿಹಾರ” ಎಂದು ಆಗ್ರಹಿಸಿದರು.

ಪ್ರೊ.ಸಿ.ಕೆ.ಮಹೇಶ್

“ಅಸ್ಪೃಶ್ಯ ಜಾತಿಗಳು ಜಾತಿ ಕಾರಣಕ್ಕಾಗಿ ಆರ್ಥಿಕ, ಸಾಮಾಜಿಕ ಚಲನೆಯನ್ನು ಪಡೆದಿಲ್ಲ. ಚಲನೆ ಇಲ್ಲದ ಸಮುದಾಯಗಳು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಮೀಸಲಾತಿಯಿಂದಾಗಿ ಸಣ್ಣಮಟ್ಟದ ಚಲನೆ ಸಿಕ್ಕಿತ್ತು. ಆದರೆ ಈಗಾಗಲೇ ಚಲನೆಯಲ್ಲಿದ್ದ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯೊಳಗೆ ಸೇರಿಸಿದ್ದಕ್ಕೆ ಮತ್ತಷ್ಟು ಚಲನೆ ಅವರಿಗೆ ಸಾಧ್ಯವಾಯಿತು. ಒಬ್ಬ ಭೋವಿ ತನ್ನ ಜಾತಿಯನ್ನು ಬಹಿರಂಗವಾಗಿ ಹೇಳಿಕೊಂಡು ಹೋಟೆಲ್ ಇಡಬಲ್ಲ, ಬೇರೆ ಬೇರೆ ಆರ್ಥಿಕ ಚಟುವಟಿಕೆಯಲ್ಲಿ ನಿರತನಾಗಬಲ್ಲ. ಆದರೆ ಜಾತಿಯನ್ನು ಘೋಷಣೆ ಮಾಡಿಕೊಂಡು ಮಾದಿಗ ಮತ್ತು ಹೊಲೆಯರು ಹೀಗೆ ಮುಂದುವರಿಯಲು ಸಾಧ್ಯವಿಲ್ಲ. ವಿವೇಕದಿಂದ ವಿಶ್ಲೇಷಣೆ ಮಾಡುವವರು ಒಳಮೀಸಲಾತಿಗೆ ತಕರಾರು ತೆಗೆಯುವುದಿಲ್ಲ” ಎಂದು ಅಭಿಪ್ರಾಯಪಟ್ಟರು.

“ಚಲನೆ ಮತ್ತು ಚಲನಾರಹಿತ ಸಮುದಾಯಗಳನ್ನು ವರ್ಗೀಕರಿಸಿದರೆ ಮೀಸಲಾತಿಯ ನಿಜವಾದ ಆಶಯ ಈಡೇರುತ್ತದೆ. ಸ್ಪೃಶ್ಯ ಸಮುದಾಯಗಳನ್ನು ಹೊರಗಿಡಬೇಕೆಂಬ ಬೇಡಿಕೆ ನಮ್ಮ ಮುಂದೆ ಇಲ್ಲ. ಬ್ರಾಹ್ಮಣಾದಿಯಾಗಿ ಎಲ್ಲ ಜಾತಿಗಳು ಮೀಸಲಾತಿಯೊಳಗೆ ಬರುತ್ತಿರುವ ಈ ಕಾಲಘಟ್ಟದಲ್ಲಿ ಭೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳನ್ನು ಮೀಸಲಾತಿಯಿಂದ ಹೊರಗಿಡಿ ಎಂದು ನಾವು ಹೇಳುವುದಿಲ್ಲ. ಅಸ್ಪೃಶ್ಯರ ಎದೆಯೊಳಗೆ ಅಂಬೇಡ್ಕರ್ ಆಶಯಗಳು ನೆಲೆಸಿರುವುದರಿಂದ ಆ ರೀತಿ ಮಾತುಗಳನ್ನು ಆಡುವುದಿಲ್ಲ ಎಂದು ನುಡಿದರು.

ನಾಲ್ವಡಿಯವರ ಅವಧಿಯಲ್ಲಿಯೇ ಸ್ಪೃಶ್ಯ ಜಾತಿಗಳನ್ನು ಮೀಸಲಾತಿ ಪಟ್ಟಿಯೊಳಗೆ ಸೇರಿಸಿದ್ದರ ಕುರಿತು ಮಾತನಾಡಿದ ಅವರು, “ನಾಲ್ವಡಿಯವರ ಕಾಲದಲ್ಲಿನ ಮೀಸಲಾತಿ ಮಾನದಂಡ ಏನಿತ್ತು ಎಂಬುದನ್ನು ಗಮನಿಸಬೇಕು. ಅಂದಿನ ಮೀಸಲಾತಿ ಮಾನದಂಡ ’ಬ್ರಾಹ್ಮಣ ವರ್ಸಸ್ ಬ್ರಾಹ್ಮಣರಲ್ಲದವರು’ ಎಂಬುದಾಗಿತ್ತು. ಲಿಂಗಾಯತ, ಒಕ್ಕಲಿಗರ, ಬಲಿಜ, ರೆಡ್ಡಿ ಸೇರಿದಂತೆ ಹಲವು ಜಾತಿಗಳನ್ನು ಒಳಗೊಂಡು ಶೇ.75ರಷ್ಟು ಮೀಸಲಾತಿಯನ್ನು ನೀಡಿದ್ದನ್ನು ಗಮನಿಸಬೇಕು” ಎಂದು ತಿಳಿಸಿದರು.

ಇದನ್ನೂ ಓದಿ: ಸದಾಶಿವ ಆಯೋಗದ ವರದಿ ವಿರೋಧಕ್ಕೆ ಸಹಮತವಿಲ್ಲ, ಪರಿಶಿಷ್ಟರ ಒಮ್ಮತಕ್ಕಾಗಿ ಸಮುದಾಯಗಳ ಜೊತೆ ಚರ್ಚೆ: ದಸಂಸ ನಾಯಕರ ಸ್ಪಷ್ಟನೆ

“ಅಸ್ಪೃಶ್ಯರನ್ನು ಗುರುತಿಸಲು 1911ರಲ್ಲಿ ಬ್ರಿಟಿಷರು ಅನ್ವಯಿಸಿದ ಮಾನದಂಡಗಳು ಸ್ಪೃಶ್ಯ ಪರಿಶಿಷ್ಟ ಜಾತಿಗಳಿಗೆ ಈಗಲೂ ಶೇ.90ರಷ್ಟು ಅನ್ವಯವಾಗುತ್ತವೆ. ಭೋವಿಗಳನ್ನು ದೇವಾಲಯದ ಒಳಗೆ ಕರೆದುಕೊಳ್ಳಲಾಗುತ್ತದೆ. ಮಾದಿಗ, ಹೊಲೆಯರಿಗೆ ನಿರ್ಬಂಧ ಹೇರಲಾಗುತ್ತದೆ. ಭೋವಿ, ಲಂಬಾಣಿಗಳು ದನದ ಮಾಂಸ ತಿನ್ನುವುದಿಲ್ಲ. ಸಾಂಸ್ಕೃತಿಕವಾಗಿ ಗಟ್ಟಿ ಇರುವ ಅನಕ್ಷರಸ್ಥ ಹೊಲೆಯ, ಮಾದಿಗ ಜನರು ಬ್ರಾಹ್ಮಣರನ್ನು ತಮ್ಮ ಮದುವೆ, ಹಬ್ಬ ಹರಿದಿನ, ಪೂಜೆ ಪುನಸ್ಕಾರಕ್ಕೆ ಕರೆಸುವುದಿಲ್ಲ. ಮೀಸಲಾತಿ ಪಡೆದು ಅಭಿವೃದ್ಧಿ ಹೊಂದಿದ ಹಾಗೂ ಸಾಂಸ್ಕೃತಿಕ ಅಜ್ಞಾನವನ್ನು ಬೆಳೆಸಿಕೊಂಡಿರುವ ಕೆಲವು ಅಸ್ಪೃಶ್ಯರು ಮಾತ್ರ ಬ್ರಾಹ್ಮಣರನ್ನು ಕರೆಸಿ ಮದುವೆಯಾಗುವುದಿದೆ” ಎಂದು ಟೀಕಿಸಿದರು.

“ಅಸ್ಪೃಶ್ಯತೆಯ ನೋವು ನಮಗೂ ಇದೆ, ವೃತ್ತಿಗಳು ಬದಲಾಗಿವೆ” ಎಂದು ಹೇಳುವ ಸ್ಪೃಶ್ಯ ಪರಿಶಿಷ್ಟರ ವಾದಕ್ಕೆ ಪ್ರತಿಕ್ರಿಯಿಸಿದ ಅವರು, “ಬ್ರಿಟಿಷರು ಬಂದಾದ ಮೇಲೆ ವರ್ಣವ್ಯವಸ್ಥೆಯೊಳಗಿನ ಜಾತಿ ಸಂಬಂಧಗಳು ಒಡೆದು ಹೋಗಲಾರಂಭಿಸಿದವು. ಯಾವುದೇ ವೃತ್ತಿಯನ್ನು ಬೇರೆಬೇರೆ ಹಿನ್ನೆಲೆಯವರು ಮಾಡುವ ಅವಕಾಶ ದೊರಕಲಾರಂಭಿಸಿತು. ಸಣ್ಣ ಪ್ರಮಾಣದ ಚಲನೆ ಬ್ರಿಟಿಷ್ ಸರ್ಕಾರದಿಂದ ಬಂದಿತು. ಇಂತಹ ಸಂದರ್ಭದಲ್ಲಿ ಶೂದ್ರ ಹಾಗೂ ಅಸ್ಪೃಶ್ಯ ಸಮುದಾಯದಲ್ಲಿ ವೃತ್ತಿ ಸಂಬಂಧಗಳು ಬೆರೆತು ಹೋಗಿವೆ. ತಾಂತ್ರಿಕತೆ ಬೆಳೆದಂತೆ ವೃತ್ತಿಗಳು ಸ್ಥಾನಪಲ್ಲಟವಾಗಿವೆ. ಸಂವಿಧಾನ ಜಾರಿಯಾದ ಮೇಲೆ ವೃತ್ತಿ ಸಂಬಂಧಿತ ಜಾತಿವ್ಯವಸ್ಥೆ ಒಡೆದು ಹೋಗಿದೆ. ಹೀಗಾಗಿ ಮಾದಿಗರು ಮಾಡುವ ಕೆಲಸವನ್ನು ಭೋವಿಗಳೂ, ಭೋವಿಗಳು ಮಾಡುವ ಕೆಲಸವನ್ನು ಮಾದಿಗರೂ ಮಾಡುತ್ತಾರೆ. ಮೂಲತಃ ಉತ್ಪಾದನಾ ಪರಿಕರಗಳನ್ನು ಹೊಂದಿರದ ಶೂದ್ರ, ಅಸ್ಪೃಶ್ಯ ಸಮುದಾಯಗಳು ನಿಸ್ಸಂದೇಹವಾಗಿ ಶ್ರಮಜೀವಿಗಳಾಗಿದ್ದಾರೆ. ಆದರೆ ಎಸ್‌ಸಿ ಮೀಸಲಾತಿಗೆ ಇದೆಲ್ಲವೂ ಮಾನದಂಡವಾಗುವುದಿಲ್ಲ. ಮಾದಿಗ, ಹೊಲೆಯರು ಶ್ರಮಿಕರೂ ಹೌದು, ಅಸ್ಪೃಶ್ಯರೂ ಹೌದು. ಆದರೆ ಭೋವಿ ಲಂಬಾಣಿಗಳು ಶ್ರಮಿಕರಷ್ಟೇ, ಅಸ್ಪೃಶ್ಯರಲ್ಲ. ಈ ಸ್ಪಷ್ಟತೆ ಅಗತ್ಯವಿದೆ” ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಸಂವಿಧಾನ ವಿರೋಧಿ ಆರ್ಥಿಕ ಮೀಸಲಾತಿಯ ಜಾರಿಯ ಸಂದರ್ಭದಲ್ಲಿ ಜನಸಂಖ್ಯೆ ಆಧಾರಿತ ಮೀಸಲಾತಿಯು ಇಂದು ಅಗತ್ಯ ಮತ್ತು ಅನಿವಾರ್ಯ ಆಗಿದೆ.
    ಸದಾಶಿವ ಆಯೋಗವು ಸಾಮಾಜಿಕ ನ್ಯಾಯವನ್ನು ಹೇಳುತ್ತದೆ. ಇದನ್ನೇ ವಿರೋಧಿಸುವವರು ಸಾಮಾಜಿಕ ನ್ಯಾಯವನ್ನು ವಿರೋಧಿಸಿದ ಹಾಗೆ. ಈ ಆಯೋಗ ಜಾರಿಯಾದರೆ ಪರಿಶಿಷ್ಟ ಜಾತಿಯ ಎಲ್ಲಾ ಸೌಲಭ್ಯವು ನಮ್ಮ ಕೈತಪ್ಪಿ ಹೋಗುತ್ತದೆ. ಆಕ್ರಮವಾಗಿ ಪಡೆದುಕೊಳ್ಳುವುದು ತಪ್ಪಿ ಹೋಗುತ್ತದೆ ಎನ್ನುವ ಸ್ವಾರ್ಥ ಮನೋಭಾವ ವಿರೋಧಿಸುವವರ ಹಿತಾಸಕ್ತಿಯಲ್ಲಿ ಅಡಗಿದೆ. ಇವರಿಗೆ ಮತ್ತಷ್ಟು ನೇರ ಮತ್ತು ಪರೋಕ್ಷವಾಗಿ ಬೆಂಬಲ ಕೊಡುತ್ತಿರುವುದು ಬ್ರಾಹ್ಮಣವಾ(ದ)ದಿಗಳು. ಎಲ್ಲಿ ದಲಿತ ಸಮುದಾಯದವರು ಒಂದಿಷ್ಟು ಜನ ರಾಜಕೀಯ ಮತ್ತು ಶೈಕ್ಷಣಿಕ ಮೀಸಲಾತಿ ಪಡೆದುಕೊಂಡು ಶೈಕ್ಷಣಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದುತ್ತಾರೆ ಎನ್ನುವ ದ್ವೇಷದ ಮನಸ್ಥಿತಿಗಳ ಇವರ ಬೆಂಬಲಕ್ಕೆ ನಿಂತಿವೆ. ಆದ್ದರಿಂದ ವಂಚಕರ ವಂಚನೆ ತಿಳಿದು ನಾವೆಲ್ಲರೂ ಸದಾಶಿವ ಆಯೋಗದ ಜಾರಿಗಾಗಿ ಒತ್ತಾಯಿಸೋಣ. ಸಾಮಾಜಿಕ ನ್ಯಾಯವನ್ನು ಆರೋಪಿಸುವ ಬದಲು ಎಲ್ಲಾರು ಕೈಜೋಡಿಸಿ. ತಮ್ಮ ಪಾಲಿನ ಮೀಸಲಾತಿಯನ್ನು ಪಡೆದುಕೊಳ್ಳೊಣ .

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...