Homeಕರ್ನಾಟಕರಾಜ್ಯದಲ್ಲಿ ಮೀಸಲಾತಿ ಹೋರಾಟ ಪರ್ವ: ವಿವಿಧ ಸಮುದಾಯಗಳ ಬೇಡಿಕೆಗಳೇನು?

ರಾಜ್ಯದಲ್ಲಿ ಮೀಸಲಾತಿ ಹೋರಾಟ ಪರ್ವ: ವಿವಿಧ ಸಮುದಾಯಗಳ ಬೇಡಿಕೆಗಳೇನು?

ರಾಜ್ಯದಲ್ಲಿ ಈಗ ಮೀಸಲಾತಿ ಹೋರಾಟ ಪರ್ವ ಆರಂಭವಾಗಿದೆ. ಸರ್ಕಾರದ ಮುಂದಿರುವ ಆಗ್ರಹಗಳ ವಿವರ ಇಲ್ಲಿದೆ.

- Advertisement -
- Advertisement -

ರಾಜ್ಯದಲ್ಲಿ ಈಗ ಮೀಸಲಾತಿ ಹೋರಾಟ, ಆಗ್ರಹಗಳ ಪರ್ವ ಆರಂಭವಾಗಿದೆ. ಒಂದಲ್ಲ ಒಂದು ಸಮುದಾಯವು ಮೀಸಲಾತಿ ಸಂಬಂಧ ಹೋರಾಟಕ್ಕೆ ಮುಂದಾಗುತ್ತಿವೆ. ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ನಾಯಕ ಸಮುದಾಯ ಹೋರಾಟ ಮಾಡಿ ತಕ್ಕ ಮಟ್ಟಿನ ಯಶಸ್ಸು ಪಡೆದಿದೆ. ಜಸ್ಟೀಸ್ ಎಚ್.ಎನ್. ನಾಗಮೋಹನದಾಸ್ ವರದಿ ಅನ್ವಯ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ 17ಕ್ಕೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ 7ಕ್ಕೂ ಹೆಚ್ಚಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪು ತಡೆಯಾಗಿರುವುದರಿಂದ ಸರ್ಕಾರ, ‘ಕಾಂತರಾಜ್ ಆಯೋಗದ ವರದಿ’ಯನ್ನು ಬಿಡುಗಡೆ ಮಾಡುತ್ತದೆಯೇ ಎಂಬುದು ಸದ್ಯದ ಕುತೂಹಲವಾಗಿದೆ. ಇದರ ನಡುವೆ ಮೀಸಲಾತಿ ಹೋರಾಟಗಳು ಬಿರುಸು ಪಡೆಯುತ್ತಿವೆ.

1990ರ ಅವಧಿಯಲ್ಲಿ ರಚನೆಯಾದ ಮಂಡಲ್‌ ಆಯೋಗದ ಮೂಲಕ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಲಾಯಿತು. ಆದರೆ ಒಟ್ಟು ಶೇ. 50ರಷ್ಟು ಮೀಸಲಾತಿ ಮಿತಿಯನ್ನು ಮೀರದಂತೆ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿತು. ಹೀಗಾಗಿ ಶೇ.52ರಷ್ಟು ಮೀಸಲಾತಿಯ ಬದಲು ಕೇವಲ ಶೇ.27ರಷ್ಟು ಮೀಸಲಾತಿ ಪ್ರಾತಿನಿಧ್ಯ ಒಬಿಸಿಗಳಿಗೆ ದೊರಕಿತು.

2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೇಲ್ಜಾತಿ ಬಡವರಿಗೆಂದು, ಎಂಟು ಲಕ್ಷ ರೂ. ಆದಾಯ ಮಿತಿಯನ್ನು ವಿಧಿಸಿ ಶೇ.10ರಷ್ಟು ಇಡಬ್ಲ್ಯೂಎಸ್‌ (ಆರ್ಥಿಕವಾಗಿ ಹಿಂದುಳಿದ ವರ್ಗ) ಕೋಟಾವನ್ನು ನೀಡಿತು. ಮೇಲ್ಜಾತಿಗಳಿಗೆ ನೀಡಿರುವ ಅವೈಜ್ಞಾನಿಕ ಮೀಸಲಾತಿಯ ಫಲವೋ ಅಥವಾ ಸಮುದಾಯಗಳಲ್ಲಿ ಮೀಸಲಾತಿ ಕುರಿತು ಹುಟ್ಟಿರುವ ಆಸಕ್ತಿಯ ಕಾರಣವೋ- ಮೀಸಲಾತಿ ಹೋರಾಟಗಳು ಮುನ್ನೆಲೆಗೆ ಬಂದಿವೆ. ರಾಜ್ಯದಲ್ಲೂ ವಿವಿಧ ಸಮುದಾಯಗಳು ಹೋರಾಟಕ್ಕೆ ಧಮುಕಿವೆ. ಚುನಾವಣೆ ಹೊಸ್ತಿಲಲ್ಲಿ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಿವೆ. ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಒಳಮೀಸಲಾತಿ ಹೋರಾಟ

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಜಾರಿಗೊಳಿಸಬೇಕೆಂದು ನಡೆಯುತ್ತಿರುವ ಹೋರಾಟಕ್ಕೆ ಮೂರು ದಶಕಗಳ ಇತಿಹಾಸವಿದೆ. ಸತತ ಹೋರಾಟದ ಫಲವಾಗಿ 2005ರ ಸೆಪ್ಟೆಂಬರ್‌ನಲ್ಲಿ ಧರಂಸಿಂಗ್ ನೇತೃತ್ವದ ಸರಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದ ಆಯೋಗವನ್ನು ರಚಿಸಿತು. ಸದಾಶಿವ ಆಯೋಗ(2005)ವು ಕೇವಲ 2 ವರ್ಷದ ಸಮೀಕ್ಷಾ ಕಾರ್ಯದ ಮಿತಿ ಹೊಂದಿತ್ತಾದರೂ, ಹಣಕಾಸು ಹಾಗೂ ಇನ್ನಿತರ ಸಮರ್ಪಕ ಸೌಲಭ್ಯ ದೊರೆಯದೆ 7 ವರ್ಷಗಳ ನಂತರ ಸಾಕಷ್ಟು ವಿಳಂಬವಾಗಿ 2012ರ ಜೂನ್‌ನಲ್ಲಿ ತನ್ನ ವರದಿಯನ್ನು ನೀಡಿತು. ಆಗ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದರು. ವರದಿಯನ್ನು ಮಾತ್ರ ಈವರೆಗೆ ಯಾವುದೇ ಸರ್ಕಾರ ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿರಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

ಸೋರಿಕೆಯ ಮಾಹಿತಿಯ ಪ್ರಕಾರ- ಎ.ಜೆ.ಸದಾಶಿವ ಆಯೋಗವು ಪರಿಶಿಷ್ಟ ಜಾತಿಯಲ್ಲಿನ 101 ಉಪಪಂಗಡಗಳನ್ನು 4 ಗುಂಪುಗಳಾಗಿ ವರ್ಗೀಕರಿಸಿ, ಶೇ.15ರ ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಿದೆ. ಅದರಂತೆ ಶೇ. 33.4ರಷ್ಟಿರುವ ಎಡಗೈ(ಮಾದಿಗ) ಸಮುದಾಯಕ್ಕೆ ಶೇ. 6ರಷ್ಟು, ಶೇ. 32ರಷ್ಟಿರುವ ಬಲಗೈ (ಹೊಲೆಯ) ಸಮುದಾಯಕ್ಕೆ ಶೇ. 5ರಷ್ಟು, ಶೇ. 23.64ರಷ್ಟಿರುವ ಸ್ಪೃಶ್ಯ ಪರಿಶಿಷ್ಟರಿಗೆ ಶೇ. 3ರಷ್ಟು ಹಾಗೂ ಇತರೆ ಪರಿಶಿಷ್ಟರಿಗೆ ಶೇ. 1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿದೆ. ಈವರೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳೆಲ್ಲವೂ ಅಧಿಕಾರ ನಡೆಸಿದ್ದರೂ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆಯನ್ನೇ ಮಾಡಿಲ್ಲ.

“ನಾವು ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿಗೊಳಿಸುತ್ತೇವೆ” ಎಂದು ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಈವರೆಗೂ ಜಾರಿಗೊಳಿಸಿಲ್ಲ. ಹೀಗಾಗಿ ಹೊಲೆಯ, ಮಾದಿಗ ಸಮುದಾಯ ಸಿಡಿದೆದ್ದಿದೆ. ಒಳಮೀಸಲಾತಿ ಜಾರಿಯಾಗದೆ ಪರಿಶಿಷ್ಟರೊಳಗಿನ ಸ್ಪಶ್ಯ ಜಾತಿಗಳೇ ಹೆಚ್ಚಿನ ಸವಲತ್ತನ್ನು ಕಬಳಿಸುತ್ತಿವೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಪಾದಯಾತ್ರೆಯ ಮೂಲಕ ಡಿಸೆಂಬರ್‌ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಿದ್ದ ಒಳಮೀಸಲಾತಿ ಹೋರಾಟಗಾರರು ಅಂದು ಬೃಹತ್ ಪ್ರತಿಭಟನೆಗೆ ಕಾರಣವಾದರು. ಇದಾದ ಬಳಿಕ ಹತ್ತು ದಲಿತ ಮುಖಂಡರ ಮೇಲೂ ಪ್ರಕರಣ ದಾಖಲಾಗಿದೆ. ಅನಿರ್ದಿಷ್ಟಾವಧಿ ಹೋರಾಟವೂ ಮುಂದುವರಿದಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಹೋರಾಟ ಬೆಳಗಾವಿಗೂ ಶಿಫ್ಟ್‌ ಆಗಿದೆ. ಎ.ಜೆ.ಸದಾಶಿವ ಆಯೋಗದ ವರದಿ ಸಂಬಂಧ ನಿರ್ಣಯ ಕೈಗೊಳ್ಳಲು ಸಂಪುಟ ಉಪಸಮಿತಿಯನ್ನೂ ಸರ್ಕಾರ ರಚಿಸಿದೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬಾರದು, ಚರ್ಚೆಗೆ ಅವಕಾಶ ನೀಡದೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಪರಿಶಿಷ್ಟ ಜಾತಿಯೊಳಗಿನ ಒಂದು ಬಣ ಆಗ್ರಹಿಸುತ್ತಿದೆ. ಪರಿಶಿಷ್ಟರ ಮತಗಳು ಚುನಾವಣೆಯಲ್ಲಿ ನಿರ್ಣಾಯಕವಾಗಿರುವುದರಿಂದ ಬಿಜೆಪಿ ಯಾವ ತಂತ್ರವನ್ನು ಅನುಸರಿಸಲಿದೆ ಎಂಬುದು ಸದ್ಯದ ಕುತೂಹಲ.

2. ಪಂಚಮಸಾಲಿ ಹೋರಾಟ

ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ನಡೆಯುತ್ತಿದೆ. ಪ್ರಸ್ತುತ 3ಬಿಯಲ್ಲಿರುವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಲಾಗಿದೆ. ಗುರುವಾರ (ಡಿ.22ರಂದು) ಬೆಳಗಾವಿಯ ಸುವರ್ಣಸೌಧ ಮುಂಭಾಗ ವಿರಾಟ್‌ ಪಂಚಶಕ್ತಿ ಸಮಾವೇಶವೂ ನಡೆದಿದೆ.

‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಡಿ.29ರಂದು 2ಎ ಮೀಸಲಾತಿ ಘೋಷಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ’ ಎಂದು ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರೂ ಆದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಮಾವೇಶದಲ್ಲಿ ಮಾಹಿತಿ ನೀಡಿದ್ದಾರೆ.

“ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬಹುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿದೆ. ಸರ್ಕಾರ ಇದನ್ನು ಒಪ್ಪಿದೆ. ಮೊದಲು ವರದಿಯನ್ನು ಪೂರ್ಣವಾಗಿ ಅಧ್ಯಯನ ಮಾಡುತ್ತೇನೆ. ಡಿ.28ರಂದು ಸರ್ವಪಕ್ಷ ಗಳ ಸಭೆ ಕರೆದು ಚರ್ಚಿಸುತ್ತೇನೆ. ಡಿ.29ರಂದು ಸದನದಲ್ಲಿ ಇಟ್ಟು ಮೀಸಲಾತಿ ಘೋಷಣೆ ಮಾಡುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಅವರು ಆತ್ಮಸಾಕ್ಷಿಯಾಗಿ, ತಾಯಿ ಸಾಕ್ಷಿ ಮಾಡಿ ನನಗೆ ಹೇಳಿದ್ದಾರೆ” ಎಂದಿದ್ದಾರೆ ಯತ್ನಾಳ್.

ಇದನ್ನೂ ಓದಿರಿ: ವಿಶ್ಲೇಷಣೆ: ರಾಜ್ಯ ರಾಜಕಾರಣದಲ್ಲಿ ದಲಿತರನ್ನು ಒಡೆದು ಆಳುವುದು ಸುಲಭವೇ?

“ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ಎಲ್ಲ ಮೇಲ್ವರ್ಗದ ಪಂಗಡ ಗಳಿಗೆ ಶೇ10ರಷ್ಟು ಮೀಸಲಾತಿಯನ್ನು ಘೋಷಿಸಿದೆ. ನರೇಂದ್ರ ಮೋದಿ ಅವರು ಘೋಷಿಸಿದ ಇದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ದೊರೆಯಲಿದೆ” ಎಂದು ತಿಳಿಸಿದ್ದಾರೆ.

ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಮಹಾಂತೇಶ ದೊಡ್ಡಗೌಡರ, ಸಿದ್ದು ಸವದಿ, ರಾಜಕುಮಾರ ಪಾಟೀಲ ತೇಲ್ಕೂರ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಹಲವು ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್‌ ಸದಸ್ಯರು, ಮುಖಂಡರೂ ಪಕ್ಷಾತೀತವಾಗಿ ಹೋರಾಟದಲ್ಲಿ ಪಾಲ್ಗೊಂಡಿರುವುದು ಗಮನಾರ್ಗ.

3. ಮೀಸಲಾತಿ ಒಕ್ಕಲಿಗರ ಹೋರಾಟ

ಒಕ್ಕಲಿಗ ಉಪಪಂಗಡಗಳನ್ನು ಒಳಗೊಂಡು ರಾಜ್ಯದ ಇತರ ಹಿಂದುಳಿದ ವರ್ಗಗಳ ‘ಪ್ರವರ್ಗ–3ಎ’ಗೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಮುಂಬರುವ ಜನವರಿ 23ರ ಒಳಗೆ ಶೇ 4 ರಿಂದ ಶೇ 12ಕ್ಕೆ ಹೆಚ್ಚಿಸ ಬೇಕು ಎಂದು ಒಕ್ಕಲಿಗ ಸಮುದಾಯ ಆಗ್ರಹಿಸುತ್ತಿದೆ. ಬೃಹತ್ ಹೋರಾಟದ ಎಚ್ಚರಿಕೆಯನ್ನೂ ನೀಡಿದೆ.

ಇಡಬ್ಲ್ಯೂಎಸ್‌ ಮೀಸಲಾತಿಯು ಸಂವಿಧಾನ ಬಾಹಿರವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ತಾಳಿದ ಬಳಿಕ, ಒಬಿಸಿ ಪಟ್ಟಿಯೊಳಗಿನ ಒಕ್ಕಲಿಗ ಸಮುದಾಯ ಹೋರಾಟಕ್ಕೆ ಇಳಿದಿದೆ. ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಇತ್ತೀಚೆಗೆ ಸಭೆ ನಡೆಸಿತ್ತು. ಪಕ್ಷಾತೀತವಾಗಿ ಒಕ್ಕಲಿಗ ಸಮುದಾಯದ ನಾಯಕರು ಪಾಲ್ಗೊಂಡಿದ್ದರು. ಈಗ ಒಕ್ಕಲಿಗ ಸಮುದಾಯದ ರಾಜಕಾರಣಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿಯನ್ನೂ ಮಾಡಿದ್ದಾರೆ.

4. ಎಸ್‌ಸಿಗೆ ಸೇರುವಂತೆ ಮಡಿವಾಳರ ಆಗ್ರಹ

ಪರಿಶಿಷ್ಟ ಜಾತಿ ಪಟ್ಟಿಯೊಳಗೆ ಮಡಿವಾಳ ಸಮುದಾಯವನ್ನು ಸೇರಿಸಬೇಕು ಎಂಬ ಕೂಗು ಎದ್ದಿದೆ.  ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ, “ನಲವತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಜನಸಂಖ್ಯೆ ಇರುವವರಿಗೆ ಮಾತ್ರ ಸರ್ಕಾರಗಳು ಆದ್ಯತೆ ನೀಡಿದರೆ, ನಮ್ಮಂಥ ತಳವರ್ಗಗಳನ್ನು, ದನಿ ಇಲ್ಲದ ಸಮುದಾಯಗಳನ್ನು ಕೇಳುವವರು ಯಾರು? ನಮ್ಮ ಹಕ್ಕನ್ನು ನಾವು ಪ್ರತಿಪಾದಿಸುತ್ತೇವೆ. ಇಡೀ ದೇಶದಲ್ಲಿ ಈಗಾಗಲೇ 18 ರಾಜ್ಯಗಳಲ್ಲಿ ಮಡಿವಾಳರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದಾರೆ. ನಾವು ಹೊಸದಾಗಿ ಹೋರಾಟ ಮಾಡುತ್ತಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಡಾ.ಅನ್ನಪೂರ್ಣಮ್ಮನವರ ನೇತೃತ್ವದಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಗಿದೆ. ವರದಿ ಸಲ್ಲಿಕೆಯಾಗಿ ವರ್ಷಗಳೇ ಕಳೆದರೂ ಯಾರೂ ಚಕಾರ ಎತ್ತುತ್ತಿಲ್ಲ. ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸರ್ಕಾರಕ್ಕೇನು ಕಷ್ಟ?” ಎಂದು ಪ್ರಶ್ನಿಸಿದರು.

5. ಸವಿತಾ ಸಮಾಜದಿಂದ ಆಗ್ರಹ

ಸವಿತಾ ಸಮಾಜವೂ ಮೀಸಲಾತಿ ಹೋರಾಟದ ಎಚ್ಚರಿಕೆ ನೀಡಿದೆ. ತಮ್ಮ ಸಮುದಾಯಕ್ಕೆ ಪ್ರವರ್ಗ 1 ಮೀಸಲಾತಿ ನೀಡದಿದ್ದಲ್ಲಿ ರಾಜ್ಯಾದ್ಯಂತ ಕ್ಷೌರದಂಗಡಿ ಮುಚ್ಚಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸವಿತಾನಂದನಾಥ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

“ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಆಗಿದ್ದೇನೆ. ಅವರು ಕೂಡ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವ ಭರವಸೆ ನೀಡಿದ್ದಾರೆ” ಎಂದಿರುವ ಅವರು, “ಒಂದು ವೇಳೆ ಸರ್ಕಾರ ಮೀಸಲಾತಿ ಕೊಡದಿದ್ದರೆ, ರಾಜ್ಯಾದ್ಯಂತ ಕ್ಷೌರಿಕರ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ಮಾಡಲಾಗುವುದು, ಆದರೆ ಅದಕ್ಕೆ ಸರ್ಕಾರ ಅವಕಾಶ ನೀಡದೆ ನಮಗೆ ಮೀಸಲಾತಿ ಕೊಡುತ್ತದೆನ್ನುವ ಭರವಸೆ ಇದೆ” ಎಂದಿದ್ದಾರೆ.

6. ಎಸ್‌.ಟಿ.ಗೆ ಸೇರಿಸಬೇಕೆಂಬ ಆಗ್ರಹಗಳು

ಪರಿಶಿಷ್ಟ ಪಂಗಡಕ್ಕೆ ತಮ್ಮನ್ನು ಸೇರಿಸಬೇಕು ಎಂದು ಹಲವು ಸಮುದಾಯಗಳು ಆಗ್ರಹಿಸುತ್ತಿವೆ. ಪ್ರವರ್ಗ 2ಎನಲ್ಲಿ ಇರುವ ಕುರುಬ, ಉಪ್ಪಾರ, ಈಡಿಗ ಸಮುದಾಯಗಳು ತಮ್ಮನ್ನು ಎಸ್‌.ಟಿ.ಗೆ ಸೇರಿಸಬೇಕೆಂದು ಆಗ್ರಹಿಸುತ್ತಿವೆ. ಈ ಸಂಬಂಧ ಹೀಗಾಗಲೇ ಬೃಹತ್ ಹೋರಾಟಗಳೂ ನಡೆದಿವೆ.

7. ಬಲಿಜ ಸಮಾಜದ ಹೋರಾಟ

ಬಲಿಜ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ಕಲ್ಪಿಸುವ ನಿರ್ಧಾರವನ್ನು ಬೆಳಗಾವಿ ಅಧಿವೇಶನದಲ್ಲಿ ಕೈಗೊಳ್ಳದಿದ್ದರೆ ಚಿಕ್ಕಬಳ್ಳಾಪುರ ಜಿಲ್ಲೆ ಕೈವಾರದಿಂದ ಬೆಂಗಳೂರಿನ ಪಾದಯಾತ್ರೆ ನಡೆಸಲಾಗುವುದು ಎಂದು ರಾಜ್ಯ ಸಮಗ್ರ ಬಲಿಜ ವೇದಿಕೆ ರಾಜ್ಯ ಕಾರ್ಯದರ್ಶಿ ಎಸ್.ರಮೇಶ್‌ ಹೇಳಿದ್ದಾರೆ.

ಬಲಿಜ ಸಮುದಾಯವು ಶಿಕ್ಷಣದ ವಿಷಯದಲ್ಲಿ 2ಎ ಮೀಸಲಾತಿ ಪಡೆಯುತ್ತಿದ್ದರೆ, ರಾಜಕೀಯವಾಗಿ 3ಎ ಮೀಸಲಾತಿ ಪಡೆಯುತ್ತಿದೆ. ಒಂದು ಸಮುದಾಯವನ್ನು ಈ ರೀತಿಯ ಅತಂತ್ರ ಸ್ಥಿತಿಗೆ ತಳ್ಳಿರುವುದು ಕರ್ನಾಟಕದಲ್ಲಿ ಮಾತ್ರ ಎಂದಿದ್ದಾರೆ.

“28 ವರ್ಷಗಳಿಂದ ಸಮುದಾಯಕ್ಕೆ ದ್ರೋಹ ಎಸಗಲಾಗಿದೆ. ನ್ಯಾಯಮೂರ್ತಿ ಭಕ್ತವತ್ಸಲಂ ವರದಿ ಪ್ರಕಾರ ಸುಮಾರು 820 ಹಿಂದುಳಿದ ಜಾತಿಗಳಿದ್ದು, ಅವುಗಳ ಪೈಕಿ 156 ಜಾತಿಗೆ ಮಾತ್ರ ಮೀಸಲಾತಿ ದೊರಕಿದೆ. ಅಧಿವೇಶನದಲ್ಲಿ 2ಎ ಮೀಸಲಾತಿ ಸಿಗದಿದ್ದರೆ ಕೈವಾರದಿಂದ ಪಾದಯಾತ್ರೆ ಕೈಗೊಂಡು ವಿಧಾನಸೌಧ ಚಲೋ ನಡೆಸಲಾಗುವುದು” ಎಂದು ಎಚ್ಚರಿಸಿದ್ದಾರೆ.

ಕಾಡುಗೊಲ್ಲರು ಎಸ್‌ಟಿ ಪಟ್ಟಿಗೆ: ಜೆ.ಸಿ.ಮಾಧುಸ್ವಾಮಿ

“ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಜಾತಿಗಳ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಕುರಿತು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವರ ಜೊತೆ ಚರ್ಚಿಸಲು ಜನವರಿಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಿಯೋಗ ತೆರಳಿದೆ” ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರು ಡಿಸೆಂಬರ್‌ 27ರಂದು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಬಿಜೆಪಿಯ ಗೂಳಿಹಟ್ಟಿ ಶೇಖರ್‌ ಅವರು ಪ್ರಸ್ತಾಪಿಸಿದ ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಈ ಹಿಂದೆ ಹಿಂದುಳಿದ ಬುಡಕಟ್ಟುಗಳ ಪಟ್ಟಿಯಲ್ಲಿದ್ದ ಕಾಡುಗೊಲ್ಲ ಮತ್ತು ವಾಲ್ಮೀಕಿ ನಾಯಕ ಜಾತಿಗಳ ಪೈಕಿ ವಾಲ್ಮೀಕಿ ನಾಯಕ ಜಾತಿಗಳ ಪೈಕಿ ವಾಲ್ಮೀಕಿ ನಾಯಕರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದಾಗ ಕಾಡುಗೊಲ್ಲರನ್ನು ಪ್ರವರ್ಗ 1ರಲ್ಲಿ ಮುಂದುವರಿಸಲಾಯಿತು” ಎಂದು ಹೇಳಿದ್ದಾರೆ.

ಮೀಸಲಾತಿ ಕುರಿತು ಗೊಂದಲಗೊಳಿಸುವುದು ಆರ್‌ಎಸ್‌ಎಸ್ ಉದ್ದೇಶ: ಸಿ.ಎಸ್.ದ್ವಾರಕಾನಾಥ್‌

“ಸಂಘಪರಿವಾರ ಮೊದಲಿನಿಂದಲೂ ಮೀಸಲಾತಿಯನ್ನು ವಿರೋಧಿಸುತ್ತಾ ಬಂದಿದೆ. ಆದರೆ ಮೀಸಲಾತಿಯನ್ನು ತೆಗೆದುಹಾಕಲು ಅದಕ್ಕೆ ಸಾಧ್ಯವಿಲ್ಲ. ಹೀಗಾಗಿ ಮೀಸಲಾತಿಯನ್ನು ಗೊಂದಲಗೊಳಿಸಿ, ಅಪ್ರಸ್ತುತ ಮಾಡುವ ಕೆಲಸಕ್ಕೆ ಕೈಹಾಕಲಾಗಿದ್ದು, ಅದನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ” ಎನ್ನುತ್ತಾರೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕಾನಾಥ್.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, “ಮೇಲ್ಜಾತಿಗಳಿಗೆ ಇಡಬ್ಲ್ಯೂಎಸ್ ಮೀಸಲಾತಿ ನೀಡಿದ್ದರಿಂದ ಎಲ್ಲಾ ಬಲಾಢ್ಯ ಸಮುದಾಯಗಳಿಗೂ ಈಗ ಧೈರ್ಯ ಬಂದಿದೆ. ಹೀಗಾಗಿಯೇ ಈ ರೀತಿಯ ಆಗ್ರಹಗಳು ಹೆಚ್ಚಾಗಿವೆ. ಆಯೋಗಗಳ ಅಧ್ಯಯನ, ವರದಿಗಳನ್ನು ಅನ್ವಯಿಸಿ ಯಾವ ಸಮುದಾಯಕ್ಕೆ ಯಾವ ವರ್ಗದಲ್ಲಿ ಮೀಸಲಾತಿ ನೀಡಬೇಕೆಂಬುದು ನಿರ್ಣಯ ಮಾಡಲಾಗುತ್ತದೆ. ಆದರೆ ಈಗ ಆಗುತ್ತಿರುವುದೇ ಬೇರೆ. ಇಷ್ಟ ಬಂದಂತೆ ಮೀಸಲಾತಿ ಆಗ್ರಹಗಳನ್ನು ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಈಗಾಗಲೇ ಪ್ರಾತಿನಿಧ್ಯವನ್ನು ಹೊಂದಿರುವ ಸಮುದಾಯಗಳೇ ಹೀಗೆ ಒತ್ತಾಯಗಳನ್ನು ಮಾಡುವುದಾದರೆ ಮೀಸಲಾತಿಯ ಆಶಯಕ್ಕೆ ಬೆಲೆ ಇಲ್ಲದಂತಾಗುತ್ತದೆ. ದನಿ ಇಲ್ಲದ ಸಮುದಾಯಗಳ ನೋವುಗಳನ್ನು ಕೇಳುವವರಾದರೂ ಯಾರು?” ಎಂದು ಪ್ರಶ್ನಿಸಿದರು.

“ಈಗಿನ ಮೀಸಲಾತಿ ಆಗ್ರಹಗಳಿಗೆ ಉತ್ತರ ಕಾಂತರಾಜ್ ಆಯೋಗದ ವರದಿಯಲ್ಲಿದೆ. ದೇಶದ ಬೇರ್‍ಯಾವುದೇ ರಾಜ್ಯದಲ್ಲಿ ಇರದ ದತ್ತಾಂಶ ಕರ್ನಾಟಕ ರಾಜ್ಯದಲ್ಲಿದೆ. ತುರ್ತಾಗಿ ಕಾಂತರಾಜ ಆಯೋಗದ ವರದಿಯನ್ನು ಸರ್ಕಾರ ಬಿಡುಗಡೆ ಮಾಡಿದರೆ ಜಾತಿಗಳ ಸ್ಥಿತಿಗತಿ ಲಭ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಮಿಲ್ಲರ್‌ ಕಮಿಷನ್‌ನಿಂದ ಹಿಡಿದು ನಾಗನಗೌಡ ಕಮಿಷನ್, ಹಾವನೂರು, ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಕಮಿಷನ್‌ ಸೇರಿದಂತೆ ಅನೇಕ ಕಮಿಷನ್‌ಗಳ ವರದಿಗಳು ಪ್ರಗತಿಪರವಾಗಿವೆ. ಇಲ್ಲಿನ ಸರ್ಕಾರಗಳು ಈ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸದೆ ತಮ್ಮಿಷ್ಟಕ್ಕೆ ತಕ್ಕಂತೆ ಮೀಸಲಾತಿಯನ್ನು ಮಾಡಿಕೊಂಡು ಹೋದವು. ಹೀಗಾಗಿ ಇಂತಹ ಬಿಕ್ಕಟ್ಟು ಎದುರಾಗಿದೆ” ಎಂದು ವಿಷಾದಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀವು ಕಾನೂನಿಗಿಂತ ಮೇಲಲ್ಲ: ಜಾರಿ ನಿರ್ದೇಶನಾಲಯಕ್ಕೆ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್‌

0
ಜಾರಿ ನಿರ್ದೇಶನಾಲಯವು (ಇಡಿ) ಕಾನೂನಿನ ಚೌಕಟ್ಟಿಗೆ ಒಳಪಟ್ಟಿದೆ ಮತ್ತು ಸಾಮಾನ್ಯ ನಾಗರಿಕರ ವಿರುದ್ಧ ಬಲಪ್ರದರ್ಶನ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ ಹೇಳಿದ್ದು, ನೀವು ಕಾನೂನಿಗಿಂತ ಮೇಲಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮಧ್ಯಂತರ...