HomeಮುಖಪುಟEWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

- Advertisement -
- Advertisement -

ಆಧುನಿಕ ಭಾರತದ ಮೀಸಲಾತಿ ಚರಿತ್ರೆಯು ಛತ್ರಪತಿ ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಮದ್ರಾಸಿನ ಜಸ್ಟೀಸ್ ಪಾರ್ಟಿಯಿಂದ ಆರಂಭವಾಗುತ್ತದೆ. ಇದಕ್ಕೂ ಮೊದಲು ಮೀಸಲಾತಿ ಇತ್ತಾದರೂ ಅದನ್ನು ’ಮೀಸಲಾತಿ’ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿರಲಿಲ್ಲ ಅಷ್ಟೆ. ಮನುಸ್ಮೃತಿಯ ಇಡೀ ಸಂಹಿತೆ ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯರಿಗೆ ನೀಡಿದ ಮೀಸಲಾತಿಯೇ ಆಗಿದೆ. ಅದರಲ್ಲಿ ಶೂದ್ರರು ಮತ್ತು ಮಹಿಳೆಯರಿಗೆ ಧನಾತ್ಮಕ ಮೀಸಲಾತಿ ಕಿಂಚಿತ್ತೂ ದಕ್ಕಿಲ್ಲ. ದಕ್ಕಿರುವುದೆಲ್ಲ ಋಣಾತ್ಮಕ ಮೀಸಲಾತಿಯೇ ಆಗಿದೆ. ಹಾಗಾಗಿ ಶೂದ್ರರು ಮತ್ತು ದಲಿತರಿಗೆ ಮೊಟ್ಟಮೊದಲಿಗೆ ದೊರೆತ ಮೀಸಲಾತಿಯು ಶಾಹು ಮಹಾರಾಜರಿಂದ ಆರಂಭವಾದದ್ದಾಗಿದೆ.

ಶಾಹು ಮಹಾರಾಜ

ಸ್ವತಂತ್ರ ಭಾರತದಲ್ಲಿ ಅತಿ ಹೆಚ್ಚು ಚರ್ಚಿತವಾಗಿರುವ ವಿಷಯಗಳಲ್ಲಿ ಮೀಸಲಾತಿಗೆ ಪ್ರಮುಖ ಸ್ಥಾನವಿದೆ. ಅತಿ ಹೆಚ್ಚು ವಿರೋಧವೂ ಇತ್ತು. ಈ ಪದವನ್ನು ಹಿಡಿದು ’ಪ್ರತಿಭೆ’ ಮತ್ತು ’ಜಾತಿ’ ಇವೆರಡನ್ನೂ ಎದುರುಬದುರು ಇರಿಸಿ, ’ಸಾಮಾಜಿಕ ಮತ್ತು ಶೈಕ್ಷಣಿಕ’ ಹಿಂದುಳಿದಿರುವಿಕೆಯ ಆಧಾರದಲ್ಲಿ ಭಾರತದ ಸಂವಿಧಾನವು ದುರ್ಬಲ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ’ಜಾತಿಯಾಧಾರಿತ ಮೀಸಲಾತಿ’ ಎಂದು ಅಪವ್ಯಾಖ್ಯಾನಗೊಳಿಸಿ ಆಟವಾಡಲಾಗಿದೆ. ದಲಿತರು ಮತ್ತು ಶೂದ್ರರನ್ನು ಮೇಲ್ಜಾತಿಯ ಜನರು ಹೀಯಾಳಿಸಿ ಅವಮಾನಿಸಿದ್ದಾರೆ. ಆದರೆ ಇಂದು ಅದೇ ಬೆರಳೆಣಿಯಕೆಷ್ಟಿರುವ ಮೇಲ್ಜಾತಿಗಳು ಕೇವಲ ’ಬಡತನ’ ಎಂಬ ಆಧಾರದಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಪಡೆದು ಹಿಗ್ಗುತ್ತಿದ್ದಾರೆ. 2019ರಲ್ಲಿ ಮೋದಿಯವರ ಸರ್ಕಾರ ಮೇಲ್ಜಾತಿಯವರಿಗೆ ಕೇವಲ ಆರ್ಥಿಕವಾಗಿ ಹಿಂದುಳಿದಿರುವ ಕಾರಣಕ್ಕಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಿ ನೀಡಿರುವ ಮೀಸಲಾತಿ ಅದೆಷ್ಟು ಸರಿ ಎನ್ನುವುದನ್ನು ಶೋಷಿತರೆಲ್ಲರೂ ಪರಾಮರ್ಶಿಸಬೇಕಿದೆ.

ಮೀಸಲಾತಿ ಎಂದರೆ ಪ್ರಾತಿನಿಧ್ಯ

ಮೊದಲಿಗೆ ಮೀಸಲಾತಿ ಎಂದರೇನು ಎಂಬ ವಿಷಯವನ್ನು ಬಗೆಹರಿಸಿಕೊಳ್ಳಬೇಕಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ರಚನೆಗೊಂಡ ಮಿಲ್ಲರ್ ಸಮಿತಿಯು ಸ್ಪಷ್ಟವಾಗಿ ’ಮೀಸಲಾತಿ ಎಂದರೆ ಪ್ರಾತಿನಿಧ್ಯ’ ಎಂದು ವ್ಯಾಖ್ಯಾನಿಸುತ್ತದೆ. ನಾಲ್ವಡಿಯವರ ಸರ್ಕಾರವು ದಿನಾಂಕ 1918ರ ಆಗಸ್ಟ್ 23ರಂದು ನೀಡಿದ ಆದೇಶದಲ್ಲಿ ’ಸಾರ್ವಜನಿಕ ಸೇವೆಯ ಹುದ್ದೆಗಳಲ್ಲಿ ಸದ್ಯ ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾಗಿದ್ದು, ಸರ್ಕಾರವು ಸಾರ್ವಜನಿಕ ಹುದ್ದೆಗಳಲ್ಲಿ ಇತರ ಸಮುದಾಯಗಳ ಸಮರ್ಪಕ ಪ್ರಾತಿನಿಧ್ಯವನ್ನೂ ಬಯಸುತ್ತದೆ’ ಎಂದಿತ್ತು. ಹಾಗಾಗಿ ಮೀಸಲಾತಿಯ ಮೂಲ ಆಶಯ ಜನಸಂಖ್ಯಾವಾರು ಪ್ರಾತಿನಿಧ್ಯವೇ ಹೊರತು ಬಡತನ ನಿರ್ಮೂಲನೆಯಾಗಿರಲಿಲ್ಲ.

ನಂತರ ಹಿಂದುಳಿದಿರುವಿಕೆಯನ್ನು ಪತ್ತೆಹಚ್ಚಲು ಮಿಲ್ಲರ್ ಸಮಿತಿ ಶೇ.5ಕ್ಕಿಂತಲೂ ಕಡಿಮೆ ಇಂಗ್ಲಿಷ್ ಸಾಕ್ಷರತೆ ಹೊಂದಿರುವ ಜಾತಿಗಳನ್ನು ಪರಿಗಣಿಸಿತು. ಹಾಗಾಗಿ ಬ್ರಾಹ್ಮಣರು, ಯುರೋಪಿಯನ್ನರು ಹಾಗೂ ಆಂಗ್ಲೋ ಇಂಡಿಯನ್ನರನ್ನು ಹೊರತುಪಡಿಸಿ ಉಳಿದವರೆಲ್ಲರನ್ನು ಹಿಂದುಳಿದವರ ಪಟ್ಟಿಗೆ ಸೇರಿಸಲಾಯಿತು. ಈ ಪಟ್ಟಿಯಲ್ಲಿ ಮೊದಲಿಯಾರ್, ಭಾರತೀಯ ಕ್ರೈಸ್ತರು ಹಾಗೂ ಪಿಳ್ಳೈ ಸಮುದಾಯಗಳೂ ಸೇರಿದ್ದವು. ಜೊತೆಗೆ ಅಸ್ಪೃಶ್ಯರನ್ನೂ ಹಿಂದುಳಿದವರೆಂದು ಪರಿಗಣಿಸಲಾಯಿತು. ಹೀಗೆ ಸಾಮಾಜಿಕವಾಗಿ ಜಾತಿಯನ್ನು ಹಾಗೂ ಶೈಕ್ಷಣಿಕವಾಗಿ ಇಂಗ್ಲಿಷ್ ಸಾಕ್ಷರತೆಯನ್ನು ಮಾನದಂಡವನ್ನಾಗಿ ಅಳವಡಿಸಿಕೊಂಡ ಮಿಲ್ಲರ್ ಸಮಿತಿಯು ಇದಕ್ಕಾಗಿ ಸಮೀಕ್ಷೆಯನ್ನು ನಡೆಸಿತ್ತು. ಜಾತಿವಾರು ಪ್ರಾತಿನಿಧ್ಯವನ್ನು ಕಂಡುಕೊಳ್ಳಲು ಮೈಸೂರು ಸಂಸ್ಥಾನದ ಸರ್ಕಾರಿ ಹುದ್ದೆಗಳಲ್ಲಿ ಜಾತಿಗಣತಿ ಮಾಡಿತು. ಅದು ಈ ಕೆಳಗಿನಂತಿತ್ತು.

ನಾಲ್ವಡಿ ಕೃಷ್ಣರಾಜ ಒಡೆಯರ್

1911ರ ಜನಗಣತಿಯ ಪ್ರಕಾರ ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣರ ಜನಸಂಖ್ಯೆ ಕೇವಲ ಶೇ.0.034 ಮಾತ್ರ. ಆದರೆ ಸರ್ಕಾರಿ ಹುದ್ದೆಗಳಲ್ಲಿ ಅವರ ಪ್ರಾತಿನಿಧ್ಯ ಊಹೆಗೂ ನಿಲುಕದಾಗಿತ್ತು. ಹಾಗಾಗಿ ಮೈಸೂರು ಸಂಸ್ಥಾನದಲ್ಲಿ 1919ರಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದಕ್ಕಿತು. ಇದಕ್ಕೆ ಮೂಲ ಮಾನದಂಡ ’ಪ್ರಾತಿನಿಧ್ಯ’ ಆಗಿತ್ತು ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗಿದೆ. ಇದೇ ಮಾದರಿಯಲ್ಲಿಯೇ ಮದ್ರಾಸ್ ಹಾಗೂ ಕೊಲ್ಲಾಪುರ ಸಂಸ್ಥಾನಗಳಲ್ಲಿಯೂ ಪ್ರಾತಿನಿಧ್ಯದ ಆಧಾರದಲ್ಲಿ ಮೀಸಲಾತಿ ಘೋಷಿಸಲಾಗಿತ್ತು.

ಇದಾದ ನಂತರ ಅಂಬೇಡ್ಕರ್ ಅವರ ಶ್ರಮದ ಪ್ರತಿಫಲವಾಗಿ ಭಾರತದ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಜಾರಿಯಾಯಿತು. ಹಿಂದುಳಿದ ವರ್ಗಗಳ ಮೀಸಲಾತಿಗಾಗಿ ಆಯೋಗ ರಚಿಸಬೇಕೆಂದು ಸೂಚಿಸಲಾಗಿತ್ತು. ಸಾಂವಿಧಾನಿಕವಾಗಿ ಮೀಸಲಾತಿ ಜಾರಿಯಾಗಿ 72 ವರ್ಷಗಳಾದರೂ ಪರಿಶಿಷ್ಟರಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗಿಲ್ಲ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ, ಮಂತ್ರಿ ಕಚೇರಿಗಳಲ್ಲಿ, ಇಲಾಖಾ ಕಚೇರಿಗಳಲ್ಲಿ ಅವರ ಪ್ರಾತಿನಿಧ್ಯವೇ ಇಲ್ಲ.

ಇನ್ನು ಹಿಂದುಳಿದ ಜಾತಿಗಳಿಗೆ ಆಯೋಗಗಳನ್ನು ರಚಿಸಿ ಪ್ರಾತಿನಿಧ್ಯವನ್ನು ಖಾತ್ರಿಗೊಳಿಸಿಕೊಳ್ಳಲು ಸಂವಿಧಾನವೇ ಸೂಚಿಸಿತು. ಆದಾಗ್ಯೂ ಆಳುವ ಸರ್ಕಾರಗಳು 1990ರವರೆಗೆ ಅದನ್ನು ಸಾಕಾರಗೊಳಿಸಲಿಲ್ಲ. ಮಂಡಲ್ ವರದಿಯ ಜಾರಿಯಿಂದಾಗಿ ಮತ್ತು ವಿ.ಪಿ. ಸಿಂಗ್ ಅವರ ಬದ್ಧತೆಯಿಂದಾಗಿ ಹಿಂದುಳಿದ ಜಾತಿಗಳಿಗೂ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ದೊರಕಿತು. ಆದರೆ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಡೀ ಮೀಸಲಾತಿಯ ಪ್ರಮಾಣವನ್ನು ಅವೈಜ್ಞಾನಿಕವಾಗಿ ಶೇ.50ಕ್ಕೆ ಸೀಮಿತಗೊಳಿಸಿ ತೀರ್ಪು ನೀಡಿತು. ಇದರ ಪರಿಣಾಮವಾಗಿ ಮಂಡಲ್ ವರದಿಯ ಪ್ರಕಾರ ಹಿಂದುಳಿದ ಜಾತಿಗಳಿಗೆ ಸಿಗಬೇಕಿದ್ದ ಶೇ.52ರಷ್ಟು ಮೀಸಲಾತಿಯ ಬದಲು ಕೇವಲ ಶೇ.27 ರಷ್ಟು ಮೀಸಲಾತಿ ಪ್ರಾತಿನಿಧ್ಯ ದೊರಕಿತು. ಹಾಗಾಗಿ ಬರೋಬ್ಬರಿ 30 ವರ್ಷಗಳ ನಂತರವೂ ಹಿಂದುಳಿದ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ದೊರಕದಾಗಿದೆ. ಸೆಪ್ಟೆಂಬರ್ 23, 1993ರಿಂದ ಹಿಂದುಳಿದ ಜಾತಿಗಳಿಗೆ ನೀಡಿದ್ದ 27% ಮೀಸಲಾತಿಯ ಪರಿಣಾಮ ಗಮನಿಸಿ: ಜನವರಿ 2017ರಷ್ಟೊತ್ತಿಗೆ 24 ಮಂತ್ರಿ ಕಚೇರಿಗಳಲ್ಲಿ ಅವರಿಗೆ ನೀಡಿರುವ ಪಾಲೆಷ್ಟೆಂದರೆ ಗ್ರೂಪ್ ಎ ಹುದ್ದೆಗಳಲ್ಲಿ 17%. ಗ್ರೂಪ್ ಬಿ ಹುದ್ದೆಗಳಲ್ಲಿ 14%. ಗ್ರೂಪ್ ಸಿ ಹುದ್ದೆಗಳಲ್ಲಿ 11% ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ 10% ಮಾತ್ರ. ಒಟ್ಟಾರೆ 11.25% ಮಾತ್ರ. 25 ಇಲಾಖೆಗಳಲ್ಲಿ ಗ್ರೂಪ್ ಎ ಹುದ್ದೆಗಳಲ್ಲಿ 14%. ಗ್ರೂಪ್ ಬಿ ಹುದ್ದೆಗಳಲ್ಲಿ 15%. ಗ್ರೂಪ್ ಸಿ ಹುದ್ದೆಗಳಲ್ಲಿ 17%. ಗ್ರೂಪ್ ಡಿ ಹುದ್ದೆಗಳಲ್ಲಿ 18% ಮಾತ್ರ ಹಿಂದುಳಿದ ಜಾತಿಗಳವರಿದ್ದಾರೆ. ಒಟ್ಟಾರೆ 16% ಮಾತ್ರ. 64 ಕ್ಯಾಬಿನೆಟ್ ಸೆಕ್ರೆಟೇರಿಯಟ್ ಹುದ್ದೆಗಳಲ್ಲಿ ಒಬ್ಬರೂ ಹಿಂದುಳಿದ ಜಾತಿಯವರಿಲ್ಲ.

ಇದನ್ನೂ ಓದಿ: ಇಡಬ್ಲ್ಯೂಎಸ್‌ ಮೀಸಲಾತಿ ತೀರ್ಪು ಮರುಪರಿಶೀಲನೆಗೆ ಅವಕಾಶವಿದೆ: ಜಸ್ಟೀಸ್ ದಾಸ್

ಸ್ವತಂತ್ರ ಭಾರತ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿಯೂ ದಲಿತರಿಗೆ ಮತ್ತು ಹಿಂದುಳಿದ ಜಾತಿಗಳ ಜನಸಂಖ್ಯೆಗೆ ತಕ್ಕಂತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯವಿಲ್ಲ ಎಂಬುವುದಾದರೆ ಇದುವರೆಗೆ ಮೀಸಲಾತಿ ನೀಡಿದ ಸರ್ಕಾರಗಳು ಮಾಡಿರುವುದಾದರೂ ಏನು ಎಂಬುದು ಕನ್ನಡಿಯ ಬಿಂಬದಷ್ಟೇ ಸ್ಪಷ್ಟ.

EWS ಮೀಸಲಾತಿ ಎಂದರೇನು?

Economically Weaker Section ಎಂದರೆ ಆರ್ಥಿಕವಾಗಿ ಹಿಂದುಳಿದಿರುವ ಈಗಾಗಲೇ ಮೀಸಲಾತಿ ಪಡೆಯುತ್ತಿರುವ ದಲಿತ-ಹಿಂದುಳಿದ ಜಾತಿಗಳನ್ನು ಹೊರತುಪಡಿಸಿದ ಮೇಲ್ಜಾತಿಗಳು ಎಂದರ್ಥ. ನೇರವಾಗಿ ಹೇಳಬೇಕಾದರೆ ಬ್ರಾಹ್ಮಣರು, ಮೊದಲಿಯಾರ್, ಬನಿಯಾ ಮುಂತಾದ ಮೇಲ್ಜಾತಿಗಳು. ಇಂತಹ ಮೇಲ್ಜಾತಿಗಳು ಆರ್ಥಿಕವಾಗಿ ಹಿಂದುಳಿದಿದ್ದರೆ ಅಂತಹವರಿಗೆ ಶಿಕ್ಷಣದಲ್ಲಿ ಹಾಗೂ ಉದ್ಯೋಗದಲ್ಲಿ ಶೇ.10 ಮೀಸಲಾತಿ ನೀಡುವುದೇ ಈ EWS ಮೀಸಲಾತಿ.

ವಿ.ಪಿ. ಸಿಂಗ್

ಇಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳನ್ನು ಪರಿಗಣಿಸುವ ಮಾನದಂಡವನ್ನು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಅದು ಈ ಕೆಳಗಿನಂತಿದೆ.

1. ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಕುಟುಂಬ ಅಥವಾ

2. 5 ಎಕರೆಗಿಂತ ಕಡಿಮೆ ಕೃಷಿ ಜಮೀನು ಹೊಂದಿರುವ ಕುಟುಂಬ ಅಥವಾ

3. 1000 ಚದರ ಅಡಿಗಿಂತ ಕಡಿಮೆ ಅಳತೆಯ ವಸತಿ ಹೊಂದಿರುವ ಕುಟುಂಬ ಅಥವಾ

4. ಮುನಿಸಿಪಾಲಿಟಿ ಪ್ರದೇಶದಲ್ಲಿ 100 ಚದರ ಯಾರ್ಡ್‌ಗಿಂತ ಕಡಿಮೆ ವಸತಿ ಪ್ರದೇಶ ಹೊಂದಿರುವ ಕುಟುಂಬ ಅಥವಾ

5. ನೋಟಿಫೈ ಆಗದ ಮುನಿಸಿಪಾಲಿಟಿ ಪ್ರದೇಶದಲ್ಲಿ 200 ಚದರ ಯಾರ್ಡ್‌ಗಿಂತ ಕಡಿಮೆ ವಸತಿ ಪ್ರದೇಶ ಹೊಂದಿರುವ ಕುಟುಂಬ. (ಈ ಮಾನದಂಡಗಳ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ)

ಈ ಮೇಲಿನ ಆರ್ಥಿಕವಾಗಿ ಹಿಂದುಳಿದಿರುವಿಕೆಯ ಮಾನದಂಡವನ್ನು ಪರಿಗಣಿಸಿದರೆ ಎಂತಹವರಿಗೂ ನಗು ಬರುವುದರ ಜೊತೆಗೆ ಅದೊಂದು ಹುಚ್ಚುತನದ ವರ್ಗೀಕರಣವೆನಿಸುತ್ತದೆ. ಏಕೆಂದರೆ 2017ರಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿಯವರು ಸಂಸತ್ತಿನಲ್ಲಿ ತಿಳಿಸಿದಂತೆ ಭಾರತದಲ್ಲಿ ಕೇವಲ 35 ಲಕ್ಷ ಜನರು ಮಾತ್ರ 8 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಘೋಷಿಸಿಕೊಂಡಿದ್ದಾರೆ. ಹಾಗಾಗಿ EWS ನಿಯಮದ ಪ್ರಕಾರ ಭಾರತದ 135 ಕೋಟಿ ಜನರು ಬಡವರೇ ಆಗುತ್ತಾರೆ. ಜೊತೆಗೆ ಹಿಂದುಳಿದ ವರ್ಗಗಳ ಮೀಸಲಾತಿಗೆ ವಿಧಿಸಿರುವ ಮೀಸಲಾತಿ ’ಕೆನೆಪದರ’ ಕೂಡ ವಾರ್ಷಿಕ 8 ಲಕ್ಷ ರೂಪಾಯಿಯಾಗಿದೆ. ಈ ಮೂಲಕ ಕೇಂದ್ರ ಸರ್ಕಾರವೇ ಸ್ವತಃ ಬಹುತೇಕ ಎಲ್ಲಾ ಭಾರತೀಯರೆಲ್ಲರನ್ನೂ ಬಡವರೆಂದು, ಭಾರತ ಕಡು ಬಡವರ ರಾಷ್ಟ್ರವೆಂದು ಘೋಷಿಸಿಕೊಂಡಿದೆ. ಜೊತೆಗೆ ಮೇಲ್ಜಾತಿಗಳು ಹಾಗೂ ಹಿಂದುಳಿದ ಜಾತಿಗಳನ್ನು ಆರ್ಥಿಕವಾಗಿ ಸಮಬಲರಾಗಿಸುವ ಮೂಲಕ ಹಿಂದುಳಿದ ಜಾತಿಗಳಿಗೆ ಬಹುದೊಡ್ಡ ಅನ್ಯಾಯ ಮಾಡಿದೆ. ಮತ್ತೊಂದು ಕ್ರೂರ ಅನ್ಯಾಯವೇನೆಂದರೆ ಉಚಿತ ಪಡಿತರ ನೀಡುವುದಕ್ಕಾಗಿ ಬಡತನ ರೇಖೆಯನ್ನು ನಿರ್ಧರಿಸಲು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಆರ್ಥಿಕ ಮಿತಿ ಗ್ರಾಮೀಣ ಪ್ರದೇಶಕ್ಕೆ ವಾರ್ಷಿಕ 11,664 ರೂ ಹಾಗೂ ನಗರ ಪ್ರದೇಶಕ್ಕೆ 16,884 ರೂಪಾಯಿಯಾಗಿದೆ. ಆದರೆ EWS ನಿಯಮದಲ್ಲಿ ವಾರ್ಷಿಕ 8 ಲಕ್ಷ ಆದಾಯ ಗಳಿಸುವ ಮೇಲ್ಜಾತಿಗಳೂ ಸಹ ಬಡವರಂತೆ! ಇದಾವ ನ್ಯಾಯ?

ಉಳಿದ ಮಾನದಂಡಗಳು ಜಮೀನು ಮತ್ತು ವಸತಿ ಪ್ರದೇಶವನ್ನು ಒಳಗೊಂಡದ್ದಾಗಿದ್ದು ಇದೂ ಸಹ ದಲಿತರು ಮತ್ತು ಹಿಂದುಳಿದ ಜಾತಿಗಳಿಗೆ ಮಾಡಿದ ಅನ್ಯಾಯವಾಗಿದೆ. ಇಂದಿಗೂ ಭಾರತದ ಶೇ.71ರಷ್ಟು ದಲಿತರ ಬಳಿ ಮತ್ತು ಶೇ.40ರಷ್ಟು ಹಿಂದುಳಿದ ಜಾತಿಗಳ ಬಳಿ ತುಂಡು ಭೂಮಿ ಸಹ ಇಲ್ಲ. ಹೀಗಿರುವುವಾಗ ಮೇಲ್ಜಾತಿಗಳು 5 ಎಕರೆ ಜಮೀನು ಹೊಂದಿದ್ದರೂ ಬಡವರೆಂದು ಹೇಗೆ ಪರಿಗಣಿಸಲಾಗುತ್ತದೆ?

EWS ಮೀಸಲಾತಿಯಲ್ಲಿ ಪ್ರಾತಿನಿಧ್ಯದ ಪ್ರಶ್ನೆ ಲೆಕ್ಕಕ್ಕಿಲ್ಲ

ಭಾರತದ ಸಂವಿಧಾನವು ಅಸ್ಪೃಶ್ಯರಾಗಿದ್ದ ಪರಿಶಿಷ್ಟ ಜಾತಿಗಳಿಗೆ ಶೇ.16.66, ಆದಿವಾಸಿಗಳಾದ ಪರಿಶಿಷ್ಟ ಪಂಗಡದವರಿಗೆ ಶೇ.7.5 ಹಾಗೂ ಮಂಡಲ್ ವರದಿ ಜಾರಿಯ ನಂತರ ಹಿಂದುಳಿದ ಜಾತಿಗಳಿಗೆ ಶೇ.27 ಮೀಸಲಾತಿಯನ್ನು ನಿಗದಿಪಡಿಸಿದೆ. ಎಸ್ಸಿ, ಎಸ್ಟಿಗಳ ಮೀಸಲಾತಿ ಪ್ರಮಾಣವನ್ನು 1931ರ ಜನಗಣತಿಯಲ್ಲಿ ದೊರೆತ ಜನಸಂಖ್ಯಾ ಪ್ರಮಾಣದ ಆಧಾರದಲ್ಲಿ, ಶಿಕ್ಷಣದಲ್ಲಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ದಲಿತರು-ಆದಿವಾಸಿಗಳ ಪ್ರಾತಿನಿಧ್ಯ ಇಲ್ಲದಿದ್ದ ಕಾರಣ ಅವರಿಗೆ ಮೀಸಲಾತಿ ನೀಡಲಾಗಿದೆ. ಪ್ರತಿ 10 ವರ್ಷಗಳಿಗೊಮ್ಮೆ ಎಸ್ಸಿ, ಎಸ್ಟಿಗಳ ಜನಗಣತಿ ಮಾಡಿ ಅವರ ಮೀಸಲಾತಿಯನ್ನು ಪರಿಶೀಲಿಸಬಹುದಾಗಿದೆ.

ಕಾಕ ಕಾಲೇಲ್ಕರ್ ಸಮಿತಿಯಿಂದ ಆರಂಭವಾಗಿ ಮಂಡಲ್ ಸಮಿತಿಯ ವರದಿಯವರೆಗೂ (ಹಲವು ರಾಜ್ಯಗಳು ಸಹ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಮಿತಿ ನೇಮಿಸಿದ್ದವು) ಹಲವು ಹಿಂದುಳಿದ ವರ್ಗಗಳ ಮೀಸಲಾತಿಗೆ ಸಮಿತಿ ರಚಿಸಲಾಗಿತ್ತು. ಆ ಸಮಿತಿಗಳು ಹಿಂದುಳಿದ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗಳನ್ನು ನಡೆಸಿ ವರದಿ ನೀಡಿದ್ದವು. ಈ ಕಾರಣದಿಂದ ಮಂಡಲ್ ವರದಿ ನೀಡಿದ ಅಂಕಿಅಂಶಗಳ ಆಧಾರದಲ್ಲಿ ಹಿಂದುಳಿದ ಜಾತಿಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ನೀಡಲಾಯಿತು.

ಒಟ್ಟಾರೆ ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೀಸಲಾತಿಯ ಪ್ರಮಾಣವನ್ನು ಜನಗಣತಿ ಹಾಗೂ ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆಯ ಆಧಾರದ ಮೇಲೆ ನಿಗದಿಗೊಳಿಸಲಾಯಿತು. ಅಂದರೆ ನಿರ್ದಿಷ್ಟ ಸಂಖ್ಯೆಯಷ್ಟು ಜನರು ಜಾತಿಯ ಕಾರಣಕ್ಕಾಗಿ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ’ಹಿಂದುಳಿದಿರುವು’ದರಿಂದ ಅವರಿಗೆ ಮೀಸಲಾತಿ ನೀಡಲಾಯಿತು. ಈ ’ಹಿಂದುಳಿದಿರುವಿಕೆ’ಯನ್ನು ಸಾಬೀತುಪಡಿಸಲು ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳು ಹೊಂದಿದ್ದ ’ಕಡಿಮೆ ಪ್ರಾತಿನಿಧ್ಯ’ವನ್ನು ಸಾಕ್ಷೀಕರಿಸಲಾಗಿತ್ತು. ಹಾಗಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಕಡಿಮೆ ಪ್ರಾತಿನಿಧ್ಯ ಹೊಂದಿದ್ದ ಎಸ್ಸಿ, ಎಸ್ಟಿ ಹಾಗೂ ಒಬಿಸಿಗಳಿಗೆ ಮೀಸಲಾತಿ ಲಭಿಸಿತು.

ಇದನ್ನೂ ಓದಿ: 10% ಮೀಸಲಾತಿಗೆ ಒಪ್ಪಿದ ಸುಪ್ರಿಂಕೋರ್ಟ್‌: ಟ್ವಿಟರ್‌‌ನಲ್ಲಿ ‘ಬ್ಯಾನ್‌ ಇಡಬ್ಲ್ಯೂಎಸ್‌’ ಟ್ರೆಂಡ್

ಈಗ EWS ಮೀಸಲಾತಿಯ ವಿಚಾರದಲ್ಲಿ ಈ ರೀತಿಯ ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆಗಳು ಆಗಿಲ್ಲ. EWS ಮೀಸಲಾತಿಗಾಗಿ ಯಾವ ಗಟ್ಟಿಯಾದ ಆಗ್ರಹವೂ ದೇಶದಲ್ಲಿರಲಿಲ್ಲ. EWS ಮೀಸಲಾತಿಗಾಗಿ ಯಾವ ಸರ್ಕಾರವೂ ಸಮಿತಿಯನ್ನು ರಚಿಸಿರಲಿಲ್ಲ ಹಾಗೂ ವರದಿ ನೀಡಿಲ್ಲ. EWS ಮೀಸಲಾತಿ ಜಾರಿಯಾಗಿ ಮೂರು ವರ್ಷಗಳಾಗುತ್ತ ಬಂದಿದೆ. ಆದರೂ ಮೇಲ್ಜಾತಿಗಳಲ್ಲಿ ಅದೆಷ್ಟು ಜನರು 8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದಾರೆ ಎಂಬ ಸಮೀಕ್ಷೆಯಾಗಿಲ್ಲ. ಹಾಗಾದರೆ ಮೇಲ್ಜಾತಿ ಬಡವರ ಸಂಖ್ಯೆಯೆ ತಿಳಿದಿಲ್ಲದಿದ್ದರೂ ಕೇಂದ್ರ ಸರ್ಕಾರ ಶೇ.10ರಷ್ಟು ಮೀಸಲಾತಿ ನೀಡಿದ್ದಾದರೂ ಹೇಗೆ? ಯಾವ ಮಾನದಂಡದಲ್ಲಿ ಶೇ.10ರಷ್ಟು ಮೀಸಲಾತಿಯನ್ನು ನಿಗದಿ ಮಾಡಿತು? ಇಂದಿಗೂ ಉತ್ತರ ತಿಳಿದಿಲ್ಲ. EWS ವಿಚಾರದಲ್ಲಿ ’ಪ್ರಾತಿನಿಧ್ಯ’ವನ್ನೇ ಬುಡಮೇಲು ಮಾಡಲಾಗಿದೆ. ಇದರ ಬಗ್ಗೆ ತಿಳಿಯಲು ಈ ಕೆಳಗಿನ ಅಂಕಿಅಂಶಗಳನ್ನು ನೋಡಿ.

ಈ ಮೇಲಿನ 2018ರ ಅಂಕಿಅಂಶಗಳಿಂದ ನಮಗೆ ತಿಳಿದುಬರುವ ವಿಚಾರವೇನೆಂದರೆ, ಸಾಮಾನ್ಯ ವರ್ಗದಲ್ಲಿನ ಮೇಲ್ಜಾತಿಗಳು ಅತಿ ಹೆಚ್ಚು ಪಾಲನ್ನು ಇಂದಿಗೂ ಸರ್ಕಾರಿ ಕ್ಷೇತ್ರದ ಉನ್ನತ ಹುದ್ದೆಗಳಲ್ಲಿ ಪಡೆಯುತ್ತಿದ್ದಾರೆ. ಅಂದರೆ ಮೇಲ್ಜಾತಿಗಳು ತಮ್ಮ ಜನಸಂಖ್ಯೆಗಿಂತಲೂ ಹೆಚ್ಚು ಪ್ರಾತಿನಿಧ್ಯವನ್ನು ಸರ್ಕಾರಿ ಹುದ್ದೆಗಳಲ್ಲಿ ಪಡೆದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಾತಿನಿಧ್ಯ ಪಡೆದುಕೊಂಡಿರುವ ಮೇಲ್ಜಾತಿಗಳಿಗೆ ಮೋದಿಯವರ ಸರ್ಕಾರ ಶೇ.10ರಷ್ಟು ಮೀಸಲಾತಿಯನ್ನು ಘೋಷಿಸಿದೆ ಹಾಗೂ ತುರ್ತಾಗಿ ಎಲ್ಲಾ ರಂಗದಲ್ಲೂ ಜಾರಿಗೊಳಿಸಿದೆ. ’ಮೀಸಲಾತಿ’ಯ ನಿಯಮವನ್ನೇ ’ಪ್ರಾತಿನಿಧ್ಯ’ವೆಂಬ ನ್ಯಾಯದಿಂದ ದೂರ ಮಾಡಿದೆ. ಮನುಸ್ಮೃತಿಯ ’ಅನ್ಯಾಯದ ಮೀಸಲಾತಿ’ಯನ್ನು ಜಾರಿಗೊಳಿಸಿದೆ.

EWS ಮೀಸಲಾತಿಗೆ ಶೇ.50 ಮಿತಿ ಅನ್ವಯಿಸುವುದಿಲ್ಲವೇ?

ಮತ್ತೊಂದು ಕ್ರೂರ ಅನ್ಯಾಯವಿದೆ. ಎಸ್ಸಿಗಳಿಗೆ ಶೇ.16.6 ಹಾಗೂ ಎಸ್ಟಿಗಳಿಗೆ ಶೇ.7.5ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಏಕೆಂದರೆ ಅವರ ಜನಸಂಖ್ಯಾ ಪ್ರಮಾಣ ಅಷ್ಟಿದೆ. ಆದರೆ ಒಬಿಸಿಗಳ ಜನಸಂಖ್ಯೆ ಶೇ.52 ಇದ್ದರೂ ಅವರಿಗೆ ಕೇವಲ ಶೇ.27ರಷ್ಟು ಮೀಸಲಾತಿ ನೀಡಲಾಯಿತು. ಇದಕ್ಕೆ ಕಾರಣ ಸುಪ್ರೀಂ ಕೋರ್ಟ್ ವಿಧಿಸಿದ ಶೇ.50ರಷ್ಟು ಮೀಸಲಾತಿಯ ಮಿತಿ ಕಾರಣವಾಗಿತ್ತು.

ಬಾಲಾಜಿ ವರ್ಸಸ್ ಮೈಸೂರು ರಾಜ್ಯ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿಗೆ ಶೇ.50ರ ಮಿತಿ ಇರಬೇಕೆಂದು ಅಭಿಪ್ರಾಯಪಟ್ಟಿತ್ತು ಅಷ್ಟೆ. ಆದರೆ ಅಂದಿನಿಂದ ಆ ಅಭಿಪ್ರಾಯವನ್ನೇ ಮುಂದುಮಾಡಿಕೊಂಡು ’ಇಂದಿರಾ ಸಹಾನಿ’ಯವರ ತೀರ್ಪಿನವರೆಗೂ ತಂದು ಅಧಿಕೃತವಾಗಿ ಮೀಸಲಾತಿಗೆ ಶೇ.50ರಷ್ಟು ಮಿತಿಯನ್ನು ಹೇರಲಾಯಿತು. ಈ ಕಾರಣದಿಂದ ನಾನಾಗಲೇ ತಿಳಿಸಿದಂತೆ ಶೇ.52ರಷ್ಟಿದ್ದ ಒಬಿಸಿಗಳಿಗೆ ಕೇವಲ ಶೇ.27ರಷ್ಟು ಮೀಸಲಾತಿ ನೀಡಲಾಯಿತು. ಈಶಾನ್ಯ ರಾಜ್ಯಗಳು ಮತ್ತು ಪಂಜಾಬ್‌ಗಳಲ್ಲಿ ಆ ಪ್ರಮಾಣ ಮತ್ತಷ್ಟು ಕಡಿಮೆ ಇದೆ. ಇದರಿಂದಾಗಿ ಮೀಸಲಾತಿ ವಿಷಯವನ್ನು ದಲಿತರ ವಿರುದ್ಧ ಹಿಂದುಳಿದ ಜಾತಿಗಳನ್ನು ಎತ್ತಿ ಕಟ್ಟುವಲ್ಲಿ ಮೇಲ್ಜಾತಿ ಪರ ರಾಜಕೀಯ ಮುಂದಾಯಿತು. ಅದರ ಭಾಗವಾಗಿಯೇ ಮಂಡಲ್ ವರದಿಯ ವಿರುದ್ಧ ಸ್ವತಃ ಒಬಿಸಿಗಳು ಬೀದಿಯಲ್ಲಿ ಹೋರಾಡಿದರು. ಅದೇನೆ ಇರಲಿ, ಇಂದು ಒಬಿಸಿ ಮೀಸಲಾತಿಯು ಅವರ ಜನಸಂಖ್ಯೆಗಿಂತ ಕಡಿಮೆ ಪ್ರಮಾಣವಿದೆ ಎಂದರೆ ಅದಕ್ಕೆ ಕಾರಣ ಶೇ.50ರ ಮಿತಿಯೇ ಆಗಿದೆ. ಅದೆಷ್ಟೇ ಹೋರಾಟಗಳು ನಡೆದರೂ ಸುಪ್ರೀಂಕೋರ್ಟಿನ ತೀರ್ಪನ್ನು ಎತ್ತಿತೋರಿಸುತ್ತಾ ಒಬಿಸಿಗಳಿಗೆ ’ಸಾಮಾಜಿಕ ನ್ಯಾಯ’ವನ್ನು ನಿರಾಕರಿಸುತ್ತಾ ಬರಲಾಗಿದೆ. ಆದರೆ ದುರಂತವೆಂದರೆ, ಮೇಲ್ಜಾತಿಗಳಿಗೆ ನೀಡಿರುವ ಶೇ.10 EWS ಮೀಸಲಾತಿ ಸುಪ್ರೀಂಕೋರ್ಟ್‌ನ ಶೇ.50ರ ಮಿತಿಯನ್ನು ಮೀರುತ್ತದೆ. ಹಾಗಿದ್ದರೂ ಸುಪ್ರೀಂ ಕೋರ್ಟ್ ಕಣ್ಮುಚ್ಚಿಕೊಂಡಿದೆ. ದಲಿತ-ಒಬಿಸಿ ರಾಜಕೀಯ ನಾಯಕರೂ ಕಣ್ಮುಚ್ಚಿಕೊಂಡಿದ್ದಾರೆ. ಓಟ್ ಬ್ಯಾಂಕ್ ರಾಜಕಾರಣದ ಭಾಗವಾಗಿ ’ಅನ್ಯಾಯ’ದ ಕಾನೂನಿಗೆ ಜೈ ಎಂದಿದ್ದಾರೆ. ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಸಿಪಿಐ, ಸಿಪಿಎಮ್, ತೃಣಮೂಲ ಕಾಂಗ್ರೆಸ್ ಮುಂತಾದ ವಿರೋಧ ಪಕ್ಷಗಳೂ ಈ ಅನ್ಯಾಯಕ್ಕೆ ಕೈ ಜೋಡಿಸಿದ್ದಾರೆ. ಒಬಿಸಿಗಳಿಗೊಂದು ನ್ಯಾಯ ಮೇಲ್ಜಾತಿಗಳಿಗೊಂದು ನ್ಯಾಯ ಮಾಡಿರುವ ನೀತಿಯನ್ನು, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಭಾರತದ ಸಂವಿಧಾನದಲ್ಲಿ ತೂರಿಸಲಾಗಿದೆ.

EWS ಭಾರತದ ಮೊದಲ ಧನಾತ್ಮಕ ಮೀಸಲಾತಿ

ಧನಾತ್ಮಕ ಮೀಸಲಾತಿ ಎಂದರೆ ನಿರ್ದಿಷ್ಟ ಜನಾಂಗಕ್ಕೆ ಅವರ ಜನಸಂಖ್ಯೆಗಿಂತಲೂ ಹೆಚ್ಚು ಪ್ರಮಾಣದ ಮೀಸಲಾತಿ ನೀಡುವುದಾಗಿದೆ. ಅಮೆರಿಕ, ಬ್ರಿಟನ್ ಮುಂತಾದ ಮುಂದುವರೆದ ರಾಷ್ಟ್ರಗಳು ಈ ರೀತಿಯ ಮೀಸಲಾತಿಯನ್ನು ಅತಿ ಹಿಂದುಳಿದ ಜನಾಂಗಗಳಿಗಾಗಿ ನೀಡುತ್ತಿವೆ. ಆದರೆ ಭಾರತದಲ್ಲಿ ಈ ನಿಯಮ ಜಾರಿಯಲ್ಲಿರಲಿಲ್ಲ. ಆದರೆ EWS ಮೂಲಕ ಮೇಲ್ಜಾತಿಗಳಿಗೆ ಇದನ್ನು ಜಾರಿಗೊಳಿಸಲಾಗಿದೆ. ಭಾರತದಲ್ಲಿ ಬ್ರಾಹ್ಮಣರು, ಬನಿಯಾ ಮುಂತಾದ ಮೇಲ್ಜಾತಿಗಳ ಜನಸಂಖ್ಯೆ ಶೇ.5ನ್ನು ಮೀರುವುದಿಲ್ಲ. EWS ನಿಯಮದ ಪ್ರಕಾರ ಅವರಲ್ಲಿನ ಬಡವರ ಜನಸಂಖ್ಯೆ ಶೇ.1ನ್ನೂ ಮೀರಲಾರದೇನೋ. ಹಾಗಿರುವಾಗ ಶೇ.1ರಷ್ಟು ಜನರಿಗೆ ಶೇ.10ರಷ್ಟು ಮೀಸಲಾತಿ! ಅಸ್ಪೃಶ್ಯರಿಗೆ ತೋರಬೇಕಾಗಿದ್ದ ಕರುಣೆಯನ್ನು ಮೇಲ್ಜಾತಿ ತನಗೆ ತಾನು ತೋರಿಸಿಕೊಂಡಿದೆ. ಶೇ.52ರಷ್ಟಿರುವ ಒಬಿಸಿಗಳು ಕೇವಲ ಶೇ.27ರಷ್ಟು ಮೀಸಲಾತಿಗೆ ತಲೆಬಾಗಿದ್ದಾರೆ. ಆದರೆ ಮೇಲ್ಜಾತಿಗಳು ಶೇ.9ರಷ್ಟು ಹೆಚ್ಚುವರಿ ಮೀಸಲಾತಿಗೆ ಅಪ್ಪಣೆ ಕೊಡಿಸಿಕೊಂಡಿದ್ದಾರೆ. ಇದಾವ ನ್ಯಾಯ?

ಹಾಗಾದರೆ ಮುಂದೇನು?

EWS ಮೀಸಲಾತಿಯನ್ನು ಪ್ರಶ್ನಿಸಿ ತಮಿಳುನಾಡಿನ ಡಿಎಂಕೆ ಪಕ್ಷದ ಅರ್ಜಿಯೂ ಸೇರಿದಂತೆ ಹಲವು ಅರ್ಜಿಗಳು ಸುಪ್ರೀಂ ಕೋರ್ಟಿನಲ್ಲಿವೆ. ಸುಮಾರು ಮೂರು ವರ್ಷಗಳಾದರೂ ಈ ವಿಚಾರಣೆಯನ್ನೇ ಆರಂಭಿಸಿಲ್ಲ. ಈ ಮೇಲ್ಜಾತಿ ಮೀಸಲಾತಿಯನ್ನು ಸಂವಿಧಾನ ತಿದ್ದುಪಡಿಯ ಮೂಲಕ ತಂದಿರುವುದರಿಂದ ಹನ್ನೊಂದು ನ್ಯಾಯಾಧೀಶರ ಪೀಠಕ್ಕೆ ಈ ಪ್ರಕರಣವನ್ನು ರವಾನಿಸಬೇಕು. ಆ ಪೀಠದ ಮುಂದೆ EWS ಮೀಸಲಾತಿಯು ಸಂವಿಧಾನದ ಮೂಲಭೂತ ಆಶಯಕ್ಕೆ ತೊಡಕಾಗಿದೆ ಎಂಬುದನ್ನು ಸಾಬೀತುಪಡಿಸಬೇಕು. ಇದೆಲ್ಲ ತುರ್ತಾಗಿ ಆಗಬೇಕೆಂದರೆ ಬಲವಾದ ಜನಾಂದೋಲನ EWS ಮೀಸಲಾತಿಯ ವಿರುದ್ಧ ನಡೆಯಬೇಕು. ಆಗ ಮಾತ್ರ ಸಂವಿಧಾನ ತಿದ್ದುಪಡಿಯ ನೆಪದಲ್ಲಿ ಇಡೀ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯವನ್ನೇ ಬಲಿಪಡೆಯಲು ಹವಣಿಸಿರುವ ಮೇಲ್ಜಾತಿ ರಾಜಕಾರಣದ ಹುನ್ನಾರವನ್ನು ಮಟ್ಟಹಾಕಬಹುದಾಗಿದೆ.

ಮೇಲ್ಜಾತಿಯವರಲ್ಲಿಯೂ ಬಡವರಿದ್ದಾರೆ ಎಂಬುದನ್ನು ಒಪ್ಪಿಕೊಳ್ಳೋಣ. ಆ ಬಡವರಿಗೆ ಈಗಾಗಲೇ ಹಲವು ಉಚಿತ ಸವಲತ್ತುಗಳನ್ನು ಆರ್ಥಿಕವಾಗಿ ಒದಗಿಸಲಾಗುತ್ತಿರುವಂತೆ ಒದಗಿಸಲಿ. ಉಚಿತ ಪಡಿತರ ವಿತರಿಸಲಿ. ನರೇಗ ಕೆಲಸಗಳನ್ನು ನೀಡಲಿ. ಇಂತಹ ಯೋಜನೆಗಳ ಮೂಲಕ ಆರ್ಥಿಕವಾಗಿ ಅವರನ್ನು ಮೇಲೆತ್ತಲಿ. ಆದರೆ ಕೇವಲ ಆರ್ಥಿಕ ಮಾನದಂಡದಲ್ಲಿ ಮೀಸಲಾತಿ ನೀಡಿ ಸಾಮಾಜಿಕ-ಶೈಕ್ಷಣಿಕ ಮಾನದಂಡವನ್ನು ಕಡೆಗಣಿಸುವುದು ದಲಿತ-ಹಿಂದುಳಿದ ಜಾತಿಗಳ ಮೀಸಲಾತಿಗೆ ಒಡ್ಡುವ ಪ್ರತಿಕ್ರಾಂತಿಯೇ ಆಗಿದೆ.

ಇದನ್ನೂ ಓದಿ: EWS: ಆರ್ಥಿಕ ದುರ್ಬಲ ವರ್ಗದ ಹೆಸರಿನಲ್ಲಿ ಮೀಸಲಾತಿಯನ್ನೇ ದುರ್ಬಲಗೊಳಿಸುವ ಹುನ್ನಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...