HomeಅಂಕಣಗಳುEWS: ಆರ್ಥಿಕ ದುರ್ಬಲ ವರ್ಗದ ಹೆಸರಿನಲ್ಲಿ ಮೀಸಲಾತಿಯನ್ನೇ ದುರ್ಬಲಗೊಳಿಸುವ ಹುನ್ನಾರ

EWS: ಆರ್ಥಿಕ ದುರ್ಬಲ ವರ್ಗದ ಹೆಸರಿನಲ್ಲಿ ಮೀಸಲಾತಿಯನ್ನೇ ದುರ್ಬಲಗೊಳಿಸುವ ಹುನ್ನಾರ

- Advertisement -
- Advertisement -

ಇಡೀ ವಿಶ್ವ, ಪ್ರಾತಿನಿಧ್ಯದ ಪರಿಕಲ್ಪನೆಗೆ ತೆರೆದುಕೊಂಡು, ಎಲ್ಲ ಕ್ಷೇತ್ರಗಳಲ್ಲಿ ವಿವಿಧ ಬಗೆಯ ಸಮುದಾಯ-ವರ್ಗಗಳನ್ನು ಒಳಗೊಳ್ಳುವ ದಾರಿಯನ್ನು ಕಂಡುಕೊಳ್ಳುತ್ತಿದ್ದರೆ, ಶೋಷಿತರನ್ನು ಬಹಿಷ್ಕರಿಸುವುದಲ್ಲಿ ದೀರ್ಘ ಇತಿಹಾಸವುಳ್ಳ ಭಾರತದಲ್ಲಿ ಶೋಷಕ ಜಾತಿಯ ಹಿಡಿತದಲ್ಲಿರುವ ಪ್ರಭುತ್ವಗಳು, ಮತ್ತದರ ಸಂಸ್ಥೆಗಳು ಬದಲಾವಣೆಗಾಗಿ ಇದ್ದ ಒಂದು ಸಕಾರಾತ್ಮಕ ಕ್ರಮ- ಸಾಮಾಜಿಕ ಹಿಂದುಳಿವಿಕೆಯ ಆಧಾರದ ಮೇಲೆ ನಿಗದಿಸಲಾಗಿರುವ ಮೀಸಲಾತಿಯನ್ನೂ ದುರ್ಬಲಗೊಳಿಸಿ, ಹೊರಗಿಡುವಿಕೆಯನ್ನು ಅಧಿಕೃತಗೊಳಿಸಲು ಎಲ್ಲಾ ಮಾರ್ಗಗಳನ್ನು ಶೋಧಿಸುತ್ತಿರುತ್ತವೆ. ಆರ್ಥಿಕ ದುರ್ಬಲ ವರ್ಗದ ಹೆಸರಿನಲ್ಲಿ ನರೇಂದ್ರ ಮೋದಿ ಸರ್ಕಾರ ಪರಿಚಯಿಸಿದ ಇಡಬ್ಲ್ಯುಎಸ್ ಮೀಸಲಾತಿ ಒಂದು ಕಡೆ ಮೀಸಲಾತಿಯ ನಿಜ ಕಲ್ಪನೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದರೆ, ಮತ್ತೊಂದು ಕಡೆ ಹೊರಗಿಡುವಿಕೆಯನ್ನು ಸಕ್ರಮಗೊಳಿಸುವ ಸಾಂವಿಧಾನಿಕ ತಿದ್ದುಪಡಿಯಾಗಿದೆ. ಇದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿ, ಐವರು ನ್ಯಾಯಾಧೀಶರ ಪೀಠ ವಿಭಜಿತ ತೀರ್ಪು ನೀಡಿದ್ದು, 3-2ರಲ್ಲಿ ಇಡಬ್ಲ್ಯುಎಸ್ ಮೀಸಲಾತಿಯನ್ನು ಮಾನ್ಯ ಮಾಡಿದೆ. ಆದರೆ, ಪೀಠದಲ್ಲಿದ್ದ ನ್ಯಾಯಮೂರ್ತಿ ರವೀಂದ್ರ ಭಟ್ ಅವರು ತಮ್ಮ ಭಿನ್ನ ಅಭಿಪ್ರಾಯದಲ್ಲಿ ಹೇಳಿದಂತೆ “ಈ ಅಭಿಪ್ರಾಯದಲ್ಲಿ ವಿವರವಾಗಿ ತಿಳಿಸಿರುವ ಕಾರಣಗಳಂತೆ – ನಮ್ಮ ಗಣರಾಜ್ಯದ ಏಳು ದಶಕಗಳಲ್ಲಿ ಈ ನ್ಯಾಯಾಲಯ ಮೊದಲ ಬಾರಿಗೆ ಮುಕ್ತವಾಗಿ, ಹೊರಗಿಡುವ ಮತ್ತು ತಾರತಮ್ಯದ ನೀತಿಯನ್ನು ಅಂಗೀಕರಿಸಿರುವುದರಿಂದ 103ನೇ ತಿದ್ದುಪಡಿಯ ಮಾನ್ಯತೆಯ ಬಗ್ಗೆ ಎದ್ದಿದ್ದ ಮೂರನೇ ಪ್ರಶ್ನೆಗೆ ಬಹುಸಂಖ್ಯಾತ ಅಭಿಪ್ರಾಯ ವ್ಯಕ್ತಪಡಿಸಿರುವ ನಿಲುವಿಗೆ ಒಪ್ಪಿಗೆ ಸೂಚಿಸಲು ಸಾಧ್ಯವಾಗದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ” ಎಂದಿದ್ದಾರೆ.

ಹೊರಗಿಡುವಿಕೆ ಮಾನ್ಯವಾದದ್ದು ಹೇಗೆ?

ನಾವೆಲ್ಲರೂ ತಿಳಿದಿರುವಂತೆ ತಲೆಮಾರುಗಳಿಂದ ಅವಕಾಶವಂಚಿತರಾಗಿದ್ದ ಶೋಷಿತ ಸಮುದಾಯಗಳ ಹಾಗೂ ತಾರತಮ್ಯದ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಬಹಿಷ್ಕೃತವಾಗಿದ್ದವರ ಪ್ರಾತಿನಿಧ್ಯ ಸರಿಪಡಿಸಿಕೊಳ್ಳುವುದಕ್ಕೋಸ್ಕರ ಸುಮಾರು 50% ಮೀಸಲಾತಿಯನ್ನು ನಿಗದಿಪಡಿಸಲು ಈ ದೇಶದಲ್ಲಿ ದೊಡ್ಡ ಹೋರಾಟಗಳು ಆಗಿವೆ. ಹತ್ತಾರು ಸಮಿತಿಗಳನ್ನು ರಚಿಸಿ, ಸಾವಿರಾರು ಬಗೆಯ ಚರ್ಚೆಗಳನ್ನು ನಡೆಸಲಾಗಿದೆ. ಆ ಅವಕಾಶವಂಚಿತ ಸಮುದಾಯಗಳಿಗೆ ನೀಡಿರುವ ಮೀಸಲಾತಿ ಕಡಿಮೆಯಾಗಿದ್ದರೂ, ಅಷ್ಟೋಇಷ್ಟೋ ಸುಧಾರಣೆ ಸಾಧ್ಯವಾಗಿದೆ. ಕೆಲವು ರಾಜ್ಯಗಳಲ್ಲಿ ಮಾತ್ರ 50%ಗಿಂತ ಹೆಚ್ಚಿನ ಮೀಸಲಾತಿಯನ್ನು ಸಾಮಾಜಿಕವಾಗಿ ಶೋಷಿತರಾಗಿ ಹಿಂದುಳಿದ ಸಮುದಾಯಗಳಿಗೆ ನೀಡಲು ಸಾಧ್ಯವಾಗಿದೆ. ಅದೂ ಕೂಡ ಕೋರ್ಟ್‌ನ ಪ್ರತಿರೋಧವನ್ನು ಹಲವು ಬಾರಿ ಎದುರಿಸುವ ಮೂಲಕ. ಅಂದರೆ 50% ಮೀಸಲಾತಿಯನ್ನು ಹೆಚ್ಚಿಸಬಾರದೆಂಬ ತರ್ಕವನ್ನು ಸುಪ್ರೀಂ ಕೋರ್ಟ್ ಸದಾ ಮುಂದುಮಾಡುತ್ತಲೇ ಬಂದಿದೆ ಹಾಗೂ ಅದು ಸಾಧ್ಯವಾಗಬೇಕೆಂದರೆ ಹೊಸ ಜನಗಣತಿ ಮಾಡಿ, ಹೆಚ್ಚಿನ ಮೀಸಲಾತಿಯ ಅಗತ್ಯತೆಯನ್ನು ಸಾಬೀತುಮಾಡಬೇಕೆಂದು ನಿರ್ದೇಶಿಸಿದ ಹಲವು ಪ್ರಕರಣಗಳೂ ಇವೆ. ಆದರೆ ಸದರಿ ಇಡಬ್ಲ್ಯುಎಸ್ ಪ್ರಕರಣದಲ್ಲಿ ಹೊಸ ಜಾತಿಗಣತಿಯೂ ನಡೆದಿಲ್ಲ, ಈ ಮೀಸಲಾತಿಯ ಅಗತ್ಯತೆಯನ್ನು ಸಾಬೀತುಮಾಡುವ ಕೆಲಸವೂ ನಡೆದಿಲ್ಲ.

ಸಾಮಾನ್ಯ ಕೆಟಗರಿಗೆ ಎಂದು ಮೀಸಲಿಟ್ಟಿದ್ದ 50% ಪೂಲ್‌ನಲ್ಲಿ ಭಾಗವಹಿಸಲು ತಾಂತ್ರಿಕವಾಗಿ ಯಾವ ಸಮುದಾಯಕ್ಕಾದರೂ ಅವಕಾಶವಿತ್ತಾದರೂ ಅದರಲ್ಲಿ ಬಹುತೇಕ ಪಾಲನ್ನು, ಅದರಲ್ಲಿಯೂ ಉನ್ನತ ಶಿಕ್ಷಣ ಹಾಗೂ ಪ್ರತಿಷ್ಠಿತ ನೌಕರಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿದ್ದುದು ಸಾಮಾಜಿಕವಾಗಿ ಅಪಾರ ಸವಲತ್ತುಗಳನ್ನುಳ್ಳ ಬ್ರಾಹ್ಮಣ ಸಮುದಾಯಕ್ಕೇ! ಆ ನಂತರದ ಸ್ಥಾನ ಉಳಿದ ಮೇಲ್ಜಾತಿಗಳದಾಗಿತ್ತು. ಆದರೆ ಈ 50% ಪೂಲ್‌ನಲ್ಲಿ ಈಗ 10% ಅನ್ನು ಬೇರ್ಪಡಿಸಿ ಅಲ್ಲಿಗೆ ಬ್ರಾಹಣರು ಸೇರಿದಂತೆ ಮೂರೋ ನಾಲ್ಕೋ ಸಮುದಾಯಗಳು ಮಾತ್ರ ಅರ್ಹರಾಗುವಂತೆ ನೋಡಿಕೊಂಡಿರುವುದು ಈ ಇಡಬ್ಲ್ಯುಎಸ್‌ನ “ಬಹಿಷ್ಕಾರ”ದ, ಹೊರಗುಳಿಸುವಿಕೆಯ ಮೂಲಮಂತ್ರ. ಅದಕ್ಕಾಗಿ ಈಗಾಗಲೇ ಮೀಸಲಾತಿಗೆ ಒಳಪಡುವವರು ಇಡಬ್ಲ್ಯುಎಸ್ ಮೀಸಲಾತಿಗೆ ಅರ್ಹರಲ್ಲ ಎಂಬುದನ್ನು ಬಹಳ ಎಚ್ಚರಿಕೆಯಿಂದ ಮತ್ತು ಜಾಣತನದಿಂದ ತಿದ್ದುಪಡಿಯಲ್ಲಿ ಸೇರಿಸಲಾಗಿದೆ. ಭಾರತದ ಜಾತಿ ವ್ಯವಸ್ಥೆ ಯಾವ ಕಾರಣಕ್ಕೆ ಕುಖ್ಯಾತವಾಗಿತ್ತೋ, ಅಂದರೆ ಉಳ್ಳವರಿಗೆ ಕೆಲವು ಆಯ್ದ ಪ್ರತಿಷ್ಠಿತ ಹುದ್ದೆಗಳನ್ನು ನೀಡಿ ಅಲ್ಲಿಗೆ ಶೋಷಿತರ ಪ್ರವೇಶವನ್ನು ನಿರಾಕರಿಸುವ ವ್ಯವಸ್ಥೆಯ ಆಧುನಿಕ ರೂಪ ಇದೆನ್ನಬಹುದು. ಇನ್ನು ಈ 10% ಎಕ್ಸ್‌ಕ್ಲೂಷನ್ ಪ್ರಮಾಣವನ್ನು ನಿಧಾನಕ್ಕೆ ಹೆಚ್ಚಿಸುತ್ತಾ ಹೋಗುವ ಕುತಂತ್ರವನ್ನು ಕೂಡ ಮುಂದಿನ ದಿನಗಳಲ್ಲಿ ತಳ್ಳಿಹಾಕುವಂತಿಲ್ಲ.

ಇದನ್ನೂ ಓದಿ: ಇಡಬ್ಲ್ಯೂಎಸ್‌ ಮೀಸಲಾತಿ ತೀರ್ಪು ಮರುಪರಿಶೀಲನೆಗೆ ಅವಕಾಶವಿದೆ: ಜಸ್ಟೀಸ್ ದಾಸ್

ಇದಿಷ್ಟೇ ಅಲ್ಲ; ಆರ್ಥಿಕ ದುರ್ಬಲತೆಯ ಮಾನದಂಡದಲ್ಲಿ ಮೀಸಲಾತಿಯನ್ನು ನೀಡುವುದು ಮೀಸಲಾತಿಯ ತಾತ್ವಿಕ ಕಲ್ಪನೆಯನ್ನೇ ಬುಡಮೇಲು ಮಾಡಿದಂತೆ. ಇಲ್ಲಿಯವರೆಗೆ ಮೀಸಲಾತಿಯ ವಿರುದ್ಧ ಕಟ್ಟಲಾಗಿದ್ದ ವಾದ ’ಮೆರಿಟ್‌ನದಾಗಿತ್ತು. ’ಮೆರಿಟ್’ ಎಂಬ ಕಲ್ಪನೆಯೇ ಢೋಂಗಿತನದಿಂದ ಕೂಡಿರುವಂತದ್ದು; ಕೇವಲ ಉರುಹೊಡೆದು ಪರೀಕ್ಷೆಗಳನ್ನು ಪಾಸು ಮಾಡುವ ಕೌಶಲ್ಯ ಓವರ್‌ರೇಟೆಡ್ ಆಗಿರುವಂತದ್ದು; ಭಾರತದಲ್ಲಿ ನಿಜವಾದ ಕೌಶಲ್ಯಗಳನ್ನು ಕಡೆಗಣಿಸಲಾಗಿದೆ; ಆದುದರಿಂದ ಸರಿಯಾದ ಪ್ರಾತಿನಿಧ್ಯ ದೊರಕಿದರೆ, ಪರೀಕ್ಷೆ ಪಾಸು ಮಾಡುವ ಕೌಶಲ್ಯದ ಢೋಂಗಿತನ ಬಯಲಾಗುತ್ತದೆ ಎಂಬ ತಿಳಿವಳಿಕೆ ಯಾವಾಗ ಪ್ರಾಮುಖ್ಯತೆ ಪಡೆಯಲು ಪ್ರಾರಂಭವಾಯಿತೋ, ಈ ಢೋಂಗಿತನದ ವಕ್ತಾರರು ತಮ್ಮ ಹಿಂದಿನ ವರಸೆ ಬಿಟ್ಟು ಬಡತನದ ಆಧಾರದ ಮೇಲೆ ಮೀಸಲಾತಿ ನೀಡುವ ನರೆಟಿವ್ ಕಟ್ಟಲು ಪ್ರಾರಂಭಿಸಿದ್ದಾರೆ. ಆದರೆ ಬಡತನ ನಿರ್ಮೂಲನಕ್ಕೆ ಹಲವು ಕಾರ್ಯಕ್ರಮಗಳಿವೆ. ಉಚಿತ ರೇಷನ್ ನೀಡಬಹುದು; ಉಚಿತ ಗ್ಯಾಸ್ ಕನೆಕ್ಷನ್ ಕೊಡಬಹುದು. ಅದೆಲ್ಲವನ್ನೂ ಬಿಟ್ಟು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡುವ ಈ ಹುನ್ನಾರ ಕ್ರಮೇಣವಾಗಿ ಸಾಮಾಜಿಕವಾಗಿ ಹಿಂದುಳಿದಿರುವವರ, ಹಾಗೂ ಐತಿಹಾಸಿಕವಾಗಿ ಶೋಷಣೆಗೆ ಒಳಗಾಗಿರುವವರ ಪ್ರಾತಿನಿಧ್ಯಕ್ಕಾಗಿ ನೀಡಿರುವ ಮೀಸಲಾತಿಯ ವಿರುದ್ಧವಾಗಿ ವಾದ ಕಟ್ಟಿ ಅದನ್ನು ದುರ್ಬಲಗೊಳಿಸುವುದೇ ಆಗಿದೆ. ಕೊನೆಗೆ ಅದರ ಫಲವನ್ನು ಯಾವ ಸಮುದಾಯ (ಗಳು) ಪಡೆಯುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಎಲ್ಲವೂ ಖುಲ್ಲಂಖುಲ್ಲ!

ಆದರೆ ಇವೆಲ್ಲದ್ದಕ್ಕಿಂತ ಹೆಚ್ಚು ಅಘಾತಕಾರಿಯಾಗಿರುವುದು, ತಳಸಮುದಾಯಗಳ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತೇವೆ ಎಂದು ಪ್ರತಿಪಾದಿಸುವ ರಾಜಕೀಯ ಪಕ್ಷಗಳ ಪ್ರತಿಕ್ರಿಯೆಗಳು! ಕಾಂಗ್ರೆಸ್ ಪಕ್ಷದ ಕೆಲವು ನಾಯಕರನ್ನು ಹೊರತುಪಡಿಸಿದರೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರನ್ನೂ ಸೇರಿದಂತೆ ಇಡಬ್ಲ್ಯುಎಸ್ ತೀರ್ಪನ್ನು, ಆ ಮೂಲಕ ಇಡಬ್ಲ್ಯುಎಸ್ ಮೀಸಲಾತಿಯನ್ನು ಸ್ವಾಗತಿಸಿರುವುದು, ಹೇಗೆ ಬ್ರಾಹ್ಮಣ್ಯದ ಹಿಂದುತ್ವ ನರೆಟಿವ್‌ಗೆ ಕಾಂಗ್ರೆಸ್ ಪಕ್ಷವೂ ಆಹುತಿಯಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. “ಸಾಮಾಜಿಕ ನ್ಯಾಯಕ್ಕಾಗಿ ಶತಮಾನದ ಕಾಲ ನಡೆದ ಹೋರಾಟಕ್ಕೆ ಈ ಇಡಬ್ಲ್ಯುಎಸ್ ತೀರ್ಪು ಹಿನ್ನಡೆ” ಎಂದು ಸ್ಪಷ್ಟ ಮಾತುಗಳಲ್ಲಿ ವಿರೋಧಿಸಿದ ಡಿಎಂಕೆ ಮುಖಂಡ, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೊರತುಪಡಿಸಿದರೆ, ಬೇರೆ ಮತ್ಯಾವ ಪಕ್ಷಗಳೂ ಇಂತಹ ದೃಢ ನಿಲುವನ್ನು ತಳೆದಿಲ್ಲ. ಇದು ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿ ವಿರೋಧಿ ಪಕ್ಷಗಳಿಗೂ ಸ್ಪಷ್ಟತೆ ಇಲ್ಲದಿರುವುದನ್ನು ಮನಗಾಣಿಸುತ್ತಿದೆ.

ಯಾವುದು ಸೂಕ್ತ?

ಈ ಸದ್ಯಕ್ಕಂತೂ ಇಡಬ್ಲ್ಯುಎಸ್ ಮೀಸಲಾತಿಯನ್ನು ವಿರೋಧಿಸಿ ಜನಾಂದೋಲನ ರೂಪಿಸಿಕೊಳ್ಳುವ ತುರ್ತು ನಮ್ಮ ಮುಂದಿದೆ. ಅದರ ಮುಂದಿನ ಬೇಡಿಕೆಗಳಾಗಿ ಜಾತಿ ಗಣತಿಗೆ ಆಗ್ರಹಿಸಿ, ಎಲ್ಲಾ ಜಾತಿ ಸಮುದಾಯಗಳ ಒಟ್ಟಾರೆ ಸಾಮಾಜಿಕ ಸ್ಥಾನಮಾನವನ್ನು ಅವಲೋಕಿಸಬೇಕಿದೆ. ಅದರಿಂದ ಹೊಮ್ಮುವ ಅಂಕಿಅಂಶಗಳ ಆಧಾರದಲ್ಲಿ ಸಾಮಾಜಿಕವಾಗಿಅತಿ ಹಿಂದುಳಿದಿರುವ ಸಮುದಾಯಗಳಿಗೆ ಅವರ ಜನಸಂಖ್ಯೆಗೂ ಹೆಚ್ಚಿದ ಮೀಸಲಾತಿಯನ್ನು ಕಲ್ಪಿಸುವ, ಸಾಮಾಜಿಕವಾಗಿ ಸುಧಾರಿಸಿರುವ ಸಮುದಾಯಗಳಿಗೆ ಅಗತ್ಯಕ್ಕೆ ತಕ್ಕಂತೆ ಮೀಸಲಾತಿ ನಿಗದಿಪಡಿಸುವ ಕೆಲಸ ಆಗಬೇಕಿದೆ. ಸಾಮಾಜಿಕ ಮುಂದುವರಿಕೆ-ಹಿಂದುಳಿದಿರುವಿಕೆಯ ಅನುಗುಣವಾಗಿ ವೆಯ್ಟೆಡ್ ಆವರೇಜ್ ಅನ್ನು ಅನುಸರಿಸುವುದು ಸೂಕ್ತವಾದೀತು. ಇಡೀ 100% ಅನ್ನು ಮೀಸಲಾತಿಗೆ ಒಳಪಡಿಸಿ, ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸುವ ಸಾಧ್ಯತೆಯನ್ನು ಅವಲೋಕಿಸಬೇಕಿದೆ. ತದನಂತರ ಆಯಾಯಾ ಮೀಸಲಾತಿ ಪ್ರಮಾಣದಲ್ಲಿ, ಒಂದಷ್ಟು ಪ್ರಮಾಣವನ್ನು ಅದೇ ಪೂಲ್‌ನಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಿಗುವಂತೆ ನೋಡಿಕೊಳ್ಳುವ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.

ಈ ಮೇಲಿನ ಪರಿಹಾರ ಕ್ರಮದಲ್ಲಿ ಒಂದು ಉದಾಹರಣೆಯನ್ನು ನೋಡುವುದಾದರೆ, ಇಡೀ 100%ಅನ್ನು ಮೀಸಲಾತಿಯಡಿ ತಂದಾಗ, ಸಮಾರು 3% ಇರುವ ಬ್ರಾಹ್ಮಣ ಸಮುದಾಯ, ಅದರ ಸಾಮಾಜಿಕ ಸ್ಥಾನಮಾನದ ಸನ್ನಿವೇಶದಲ್ಲಿ ಹೆಚ್ಚೆಂದರೆ 1.0% ಮೀಸಲಾತಿಗಿಂತಲೂ ಕಡಿಮೆ ಪಡೆಯುವುದು ಸೂಕ್ತವಾಗುತ್ತದೆ. ಆ 1%ನಲ್ಲಿ ಅರ್ಧ ಭಾಗವನ್ನು ಆ ಸಮುದಾಯದಲ್ಲಿ ಆರ್ಥಿವಾಗಿ ಹಿಂದುಳಿದವರಿಗೆ ನೀಡುವಂತೆ ಸೌಲಭ್ಯ ಕಲ್ಪಿಸಿಕೊಳ್ಳಬಹುದು. ಆಗ ಬೇಕಾದರೆ, ಈಗ ನಿಗದಿಪಡಿಸಿರುವ, ಅಟ್ರಾಷಿಯಸ್ ಅನ್ನಬಹುದಾದ 8 ಲಕ್ಷ ಆದಾಯ ಮಿತಿಯನ್ನು ಬೇಕಾದರೆ 15 ಲಕ್ಷ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಇಡಬ್ಲ್ಯುಎಸ್ ಮೀಸಲಾತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್!

ಆದರೆ, ಇರುವ 3%-4% ಸಮುದಾಯದ ಜನರಿಗೆ, ಆರ್ಥಿಕ ದರ್ಬಲತೆಯ ಹೆಸರಿನಲ್ಲಿ 10% ಮೀಸಲಾತಿ ನೀಡಿ, ಅವರ ಆದಾಯ ಮಿತಿಯನ್ನು 8 ಲಕ್ಷ ನಿಗದಿಪಡಿಸಿ, ಉಳಿದ ಯಾವುದೇ ಸಮುದಾಯ ಅದರಲ್ಲಿ ಪಾಲ್ಗೊಳ್ಳದಂತೆ ಬಹಿಷ್ಕರಿಸಿ ನಡೆದಿರುವ ಈ ಆಟ ಅನ್ಯಾಯದ ತುತ್ತತುದಿ ಅನ್ನದೇ ಬೇರೆ ವಿಧಿಯಿಲ್ಲ!

– ಗುರುಪ್ರಸಾದ್ ಡಿ ಎನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಸಾಮಾಜಿಕ ನ್ಯಾಯ ಅಂದರೆ ಮೇಲೆ ಇರುವವರನ್ನು ಕೆಳಗೆ ಎಳೆಯುವುದಲ್ಲ. ಕೆಳಗಿರುವವರಿಗೆ ಮೇಲ್ಮಟ್ಟದ ಕೌಶಲ್ಯ ಹಾಗೂ ಅವಕಾಶ ಒದಗಿಸುವುದು.

  2. This is stupid argument, in TN 82,% are SC, ST, OBC, so if we bring them under, then, they will occupy nearly, 90%, only for 2%, why this EWS was created. Why an Top Officer, in category still takes benefits for his kids, why can’t you question this. Why can’t they give up to their same category lower caste people. It was initially proposed for 50 years only, now over 75years still continuing, This will become detrimental to the development of a country. These categories are in Govt sector only. Try to bring it in Private Company, believe it or not, all the Pvt companies will go out of India. Please Ban these caste, religion, everything will set right

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...