Homeಕರ್ನಾಟಕಇಡಬ್ಲ್ಯೂಎಸ್‌ ಮೀಸಲಾತಿ ತೀರ್ಪು ಮರುಪರಿಶೀಲನೆಗೆ ಅವಕಾಶವಿದೆ: ಜಸ್ಟೀಸ್ ದಾಸ್

ಇಡಬ್ಲ್ಯೂಎಸ್‌ ಮೀಸಲಾತಿ ತೀರ್ಪು ಮರುಪರಿಶೀಲನೆಗೆ ಅವಕಾಶವಿದೆ: ಜಸ್ಟೀಸ್ ದಾಸ್

ನ್ಯಾಯಾಂಗ ಕಾಲಕಾಲಕ್ಕೆ ತನ್ನ ತಪ್ಪುಗಳನ್ನು ತಿದ್ದುಕೊಂಡ ಉದಾಹರಣೆಗಳಿವೆ ಎಂದು ಆಶಾವಾದ ವ್ಯಕ್ತಪಡಿಸುತ್ತಾರೆ ಜಸ್ಟೀಸ್‌ ಎಚ್‌.ಎನ್.ನಾಗಮೋಹನ ದಾಸ್.

- Advertisement -
- Advertisement -

“ಆರ್ಥಿಕವಾಗಿ ಹಿಂದುಳಿದ ವಿಭಾಗದ (ಇಡಬ್ಲ್ಯೂಎಸ್‌) ಮೀಸಲಾತಿ ಸಂವಿಧಾನ ಬಾಹಿರವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ ಈ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಲು ಅವಕಾಶವಿದೆ” ಎಂದು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್ ತಿಳಿಸಿದ್ದಾರೆ.

ಇಡಬ್ಲ್ಯೂಎಸ್‌ ಮೀಸಲಾತಿ ತೀರ್ಪಿಗೆ ಸಂಬಂಧಿಸಿದಂತೆ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, “ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಕಾಲಕಾಲಕ್ಕೆ ನ್ಯಾಯಾಂಗ ತನ್ನ ತೀರ್ಪುಗಳನ್ನು ಬದಲಿಸಿಕೊಂಡ ಉದಾಹರಣೆಗಳಿವೆ. ಉದಾಹರಣೆಗೆ ತುರ್ತುಪರಿಸ್ಥಿತಿಯನ್ನು ಐದು ಜನರ ನ್ಯಾಯಮೂರ್ತಿಗಳ ಪೀಠ ಒಪ್ಪಿಕೊಂಡಿತ್ತು. ಐದು ಜನರಲ್ಲಿ ನಾಲ್ಕು ನ್ಯಾಯಾಧೀಶರು ತುರ್ತುಪರಿಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದರು. ಆನಂತರದ ತೀರ್ಪುಗಳಲ್ಲಿ ನಾವು ತಪ್ಪು ಮಾಡಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಹೀಗಾಗಿ ಈಗ ಕೊಟ್ಟಿರುವ ತೀರ್ಪು ಅಂತಿಮವಲ್ಲ” ಎಂದು ಅಭಿಪ್ರಾಯಪಟ್ಟರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಇಡಬ್ಲ್ಯೂಎಸ್‌ಗೆ ಸಂಬಂಧಿಸಿದಂತೆ ಐದು ನ್ಯಾಯಮೂರ್ತಿಗಳ ಪೀಠವು ತೀರ್ಪು ನೀಡಿದೆ. ಸಂವಿಧಾನ 103ನೇ ತಿದ್ದುಪಡಿ ಸರಿ ಇದೆ ಎಂದು ಮೂವರು ನ್ಯಾಯಮೂರ್ತಿಗಳು ಸಮ್ಮತಿ ಸೂಚಿಸಿದರೆ, ಇನ್ನಿಬ್ಬರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ನ್ಯಾಯಾಂಗದ ತೀರ್ಪಿಗೆ ಬದ್ಧರಾಗಿರಬೇಕು. ಆದರೆ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನ್ಯಾಯಾಂಗದ ತೀರ್ಪುಗಳನ್ನು ವಿಮರ್ಶೆ ಮಾಡುವ ಹಕ್ಕಿದೆ. ಈ ವಿಮರ್ಶೆಗಳು ರಚನಾತ್ಮಕವಾಗಿರಬೇಕು, ಆರೋಗ್ಯಕರವಾಗಿರಬೇಕು. ಜನಸಾಮಾನ್ಯರು ನ್ಯಾಯಾಂಗದ ಮೇಲೆ ಇಟ್ಟಿರುವ  ನಂಬಿಕೆಯನ್ನು ಹಾಳುಗೆಡುವಂತೆ ವಿಮರ್ಶೆಗಳು ಇರಬಾರದು. ನ್ಯಾಯಮೂರ್ತಿಗಳನ್ನು ವೈಯಕ್ತಿಕವಾಗಿ ಅವಹೇಳನ ಮಾಡಬಾರದು” ಎಂದು ಎಚ್ಚರಿಸಿದರು.

“ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಆರ್ಥಿಕ ಮಾನದಂಡ ಮುಖ್ಯವಾಗಿರಲಿಲ್ಲ. ಈ ಹಿಂದೆ ನೀಡಿದ ತೀರ್ಪುಗಳು ಕೂಡ ಸಂವಿಧಾನದ ಚೌಕಟ್ಟಿನಲ್ಲಿಯೇ ಬಂದಿದೆ. ಹೀಗಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಎಂಬುದು ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದ ಆಶಯಗಳಿಗೆ ವಿರುದ್ಧವಾಗಿದೆ” ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಅನೇಕ ತೀರ್ಪುಗಳಲ್ಲಿ ಹೇಳಿದಂತೆ ಮೀಸಲಾತಿ ಎಂಬುದು ಬಡತನ ನಿವಾರಣ ಕಾರ್ಯಕ್ರಮವಲ್ಲ. ಅವಕಾಶ ವಂಚಿತ ಸಮುದಾಯಗಳಿಗೆ ಪ್ರಾತಿನಿಧ್ಯವನ್ನು ನೀಡುವುದೇ ಮೀಸಲಾತಿ. ಈ ಆಯಾಮ ಎಲ್ಲೋ ಹಳಿ ತಪ್ಪಿದಂತೆ ಕಾಣುತ್ತಿದೆ.  ಹೀಗಾಗಿ ಈ ತೀರ್ಪಿನ ಕುರಿತು ರಚನಾತ್ಮಕ ಹಾಗೂ ಆರೋಗ್ಯಕರ ವಿಮರ್ಶೆ ಅಗತ್ಯವಿದೆ ಎಂದರು.

ಈ ರೀತಿಯ ಸಮಸ್ಯೆಗಳು ಈ ಹಿಂದೆ ಬಂದಾಗ ನ್ಯಾಯಾಂಗ ತಿದ್ದುಕೊಂಡು ಹೋದ ಉದಾಹರಣೆಗಳಿವೆ. ನ್ಯಾಯಾಂಗ ತಪ್ಪು ಮಾಡಿಲ್ಲವೆಂದು ಹೇಳಲಾಗದು. 1948ರಲ್ಲಿ ಮದ್ರಾಸ್ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ ಹಾಗೂ ಅಲ್ಪಸಂಖ್ಯಾತರಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಮೀಸಲಾತಿ ಒದಗಿಸಿತ್ತು. ಚಂಪಕಂ ದೊರೈರಾಜ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆ ಮೀಸಲಾತಿಯನ್ನು ತೆಗೆದುಹಾಕಿತು. ಆನಂತರ ಸಂವಿಧಾನಕ್ಕೆ ತಿದ್ದುಪಡಿ ತಂದು, ರಾಜ್ಯ ಸರ್ಕಾರಗಳಿಗೆ ಈ ರೀತಿ ಮೀಸಲಾತಿ ನೀಡುವ ಅಧಿಕಾರವಿದೆ ಎಂದು ಸ್ಪಷ್ಟಪಡಿಸಲಾಗಿತ್ತು ಎಂದು ಸ್ಮರಿಸಿದರು.

ಇದನ್ನೂ ಓದಿರಿ: ಇಡಬ್ಲ್ಯುಎಸ್ ಮೀಸಲಾತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್!

ಇಂದಿರಾ ಸಹಾನಿ ಪ್ರಕರಣ ನೋಡುವುದಾದರೆ, ‘ಪ್ರವೇಶಾತಿಯಲ್ಲಿ ಮೀಸಲಾತಿ ಇರಬೇಕು, ಬಡ್ತಿಯಲ್ಲಿ ಮೀಸಲಾತಿ ಇರಬಾರದು’ ಎಂದು ಹೇಳಲಾಯಿತು. ಸಂವಿಧಾನದಲ್ಲಿ ಮೀಸಲಾತಿ ತಂದು ಬಡ್ತಿಯಲ್ಲೂ ಮೀಸಲಾತಿ ನೀಡಬಹುದು ಎನ್ನಲಾಯಿತು. ಒಳಮೀಸಲಾತಿ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರ ಪರಿಶಿಷ್ಟರ ಆಗ್ರಹವನ್ನು ಒಪ್ಪಿತು. ಒಳಮೀಸಲಾತಿ ಜಾರಿಗೊಳಿಸಿತು. ಚಿನ್ನಯ್ಯ ಪ್ರಕರಣದಲ್ಲಿ ಇದನ್ನು ಸುಪ್ರೀಂಕೋರ್ಟ್ ತೆಗೆದುಹಾಕಲಾಯಿತು. 2020ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮತ್ತೊಂದು ತೀರ್ಪಿನಲ್ಲಿ, “ಒಳಮೀಸಲಾತಿ ನೀಡುವ ಅಧಿಕಾರವು ರಾಜ್ಯ ಸರ್ಕಾರ‌ಗಳಿಗೆ ಇದೆ” ಎಂದು ಹೇಳಲಾಗಿದೆ. ಈ ರೀತಿಯ ವೈರುಧ್ಯಗಳನ್ನು ನೋಡಿದ್ದೇವೆ. ಈಗಲೂ ಕೂಡ ದೇಶದ ಜನ ತೀರ್ಪನ್ನು ಚರ್ಚೆಗೆ ಒಳಪಡಿಸಿ, ಜನಾಭಿಪ್ರಾಯ ರೂಪಿಸಿ ಒಂದು ದಾರಿಯನ್ನು ಕಂಡುಕೊಳ್ಳಬೇಕು ಎಂದು ಆಶಿಸಿದರು.

“ಮೀಸಲಾತಿ ಬೇರೆ, ಹಂಚಿಕೆ ಬೇರೆ. ಇದು ಹಂಚಿಕೆಯಾಗಬಾರದು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಈ ಅವಕಾಶ ನೀಡಬೇಕು. ಇದು ಕೊನೆಯಿರದ ಸಮಸ್ಯೆಯಾಗಬಾರದು. ನಾವು ಆದಷ್ಟು ಬೇಗ ಈ ಅಸಮಾನತೆಯನ್ನು ತೊಲಗಿಸಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಬೇಕು. ಆನಂತರದಲ್ಲಿ ಮೀಸಲಾತಿ ಎಂಬುದೇ ಇರಬಾರದು ಎನ್ನುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...