Homeಅಂಕಣಗಳುಸ್ಕೂಪ್: ಪತ್ರಿಕೋದ್ಯಮ ಮತ್ತು ಪ್ರಭುತ್ವದ ಸವಾಲುಗಳ ಪ್ರಶ್ನೆಗಳನ್ನು ಎತ್ತುವ ’ಸತ್ಯ ಕಥೆ’ ಆಧಾರಿತ ಧಾರಾವಾಹಿ

ಸ್ಕೂಪ್: ಪತ್ರಿಕೋದ್ಯಮ ಮತ್ತು ಪ್ರಭುತ್ವದ ಸವಾಲುಗಳ ಪ್ರಶ್ನೆಗಳನ್ನು ಎತ್ತುವ ’ಸತ್ಯ ಕಥೆ’ ಆಧಾರಿತ ಧಾರಾವಾಹಿ

- Advertisement -
- Advertisement -

ಮಾಧ್ಯಮ ಸಂಸ್ಥೆಗಳು ಅನುಸರಿಸುವ ಪತ್ರಿಕೋದ್ಯಮ ಮಾರ್ಗಗಳೆಲ್ಲವೂ ಸರಿಯಾದವು ಎಂದು ಹೇಳಲಾಗದಿದ್ದರೂ, ಎಂಥ ಸಂದರ್ಭಗಳಲ್ಲೂ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯಂತಹ ಪ್ರಭುತ್ವದ ಅಂಗಸಂಸ್ಥೆಗಳು ಪತ್ರಿಕೋದ್ಯಮವನ್ನು ತನ್ನ ಹಿತಾಸಕ್ತಿಗೆ ಬಳಸಿಕೊಳ್ಳಲು ಅಥವಾ ಹಣಿಯುವುದಕ್ಕೆ ಸದಾ ಸಿದ್ಧವಾಗಿರುತ್ತವೆ ಎಂಬುದಂತೂ ದಿಟದ ಮಾತು. ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದನ್ನು ಪತ್ತೆ ಹಚ್ಚುವುದು ಮಹಾ ಸವಾಲಾಗಿರುವ ಪ್ರಸಕ್ತ ಸಂದರ್ಭದಲ್ಲಿ, ತಮ್ಮ ಉಳಿವಿಗಾಗಿ ಮಾಧ್ಯಮ ಸಂಸ್ಥೆಗಳ ನಡುವೆ ಪೈಪೋಟಿ ತೀವ್ರವಾಗಿ ಹೆಚ್ಚಿರುವ ಸಮಯದಲ್ಲಿ 2012ರಲ್ಲಿ ಮುಂಬೈನಲ್ಲಿ ನಡೆದ ಸತ್ಯ ಕಥೆಯೊಂದನ್ನು ಆಧರಿಸಿದ, ಏಶಿಯನ್ ಏಜ್‌ನ ವರದಿಗಾರ್ತಿಯಾಗಿದ್ದ ಜಿಗ್ನಾ ವೋರಾ ಅವರ ಆತ್ಮಕಥಾನಕ “ಬಿಹೈಂಡ್ ಬಾರ್‍ಸ್ ಇನ ಬೈಕುಲಾ: ಮೈ ಡೇಸ್ ಇನ್ ಪ್ರಿಸನ್”ನ ಅಳವಡಿಕೆಯಾಗಿ ’ಸ್ಕೂಪ್’ ಎಂಬ ಆರು ಕಂತುಗಳ ಧಾರಾವಾಹಿ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಜರ್ನಲಿಸಂ ಕಥೆಗಳನ್ನು ಒಳಗೊಂಡ ಸಿನಿಮಾ-ಧಾರಾವಾಹಿಗಳು ಭಾರತದ ಸನ್ನಿವೇಶದಲ್ಲಿ ವಿರಳವಾಗಿರುವಾಗ ಹನ್ಸಲ್ ಮೆಹ್ತಾ ನಿರ್ದೇಶನದ ’ಸ್ಕೂಪ್’ ಭಾರತೀಯ ಚಿತ್ರರಂಗದಲ್ಲಿ ಒಂದು ಪ್ರಮುಖ ದೃಶ್ಯಮಾಧ್ಯಮದ ಕೃತಿಯಾಗಿ ದಾಖಲಾಗಲಿದೆ.

ಇತರ ಪತ್ರಿಕೆಗಳಿಗೂ ಮುಂಚೆ ಕೆಲವು ಮಾಹಿತಿಯನ್ನು ಅಕ್ಸೆಸ್ ಮಾಡಿ ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುವ ವರದಿಗಳನ್ನು ಸಾಮಾನ್ಯವಾಗಿ ಸ್ಕೂಪ್ ಎನ್ನುತ್ತಾರೆ. ಡಿಜಿಟಲ್ ಮಾಧ್ಯಮದ ಯುಗದಲ್ಲಿ ಎಷ್ಟೋ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲೆ ಧಾವಂತದಲ್ಲಿ ಬ್ರೇಕ್ ಆಗಿ, ಕೂಡಲೇ ಸಾರ್ವಜನಿಕರಿಗೆ ಸಿಕ್ಕಿಬಿಡುವ ಕಾಲಘಟ್ಟದಲ್ಲಿ, ದಿನಪತ್ರಿಕೆಗಳಲ್ಲಿ ಈ ಸ್ಕೂಪ್‌ಗಳ ಸಂಖ್ಯೆಯೂ ಮತ್ತು ಪ್ರಾಮುಖ್ಯತೆಯೂ ಇಳಿಮುಖವಾಗುತ್ತಿದೆ ಎನ್ನಬಹುದು.

ಜಿಗ್ನಾ ವೋರಾ

ಈಸ್ಟ್ರನ್ ಏಜ್ (ನಿಜಲೋಕದ ಏಶಿಯನ್ ಏಜ್ ಪತ್ರಿಕೆಯನ್ನು ಪ್ರತಿನಿಧಿಸಿದೆ) ಪತ್ರಿಕೆಯ ಹಿರಿಯ ಕ್ರೈಮ್ ವರದಿಗಾರ್ತಿ ಜಾಗೃತಿ ಪಾಠಕ್ (ನಿಜ ಜೀವನದ ಜಿಗ್ನಾ ವೋರಾ) ಒಬ್ಬ ಅಸಾಧಾರಣ ದಿಟ್ಟ ಪತ್ರಕರ್ತೆ. ತಾನು ಕೆಲಸ ಮಾಡುವ ಪತ್ರಿಕೆಯ ಮುಖಪುಟದಲ್ಲಿ ತನ್ನ ವರದಿಗಳು ಪ್ರಕಟಗೊಳ್ಳುವಂತೆ ಮಾಡಲು ತನ್ನ ಕೆಲಸದಲ್ಲಿ ಎಕ್ಸ್ಟ್ರಾ ಮೈಲಿಯನ್ನು ಕ್ರಮಿಸಬಲ್ಲಾಕೆ. ಪೊಲೀಸ್ ಇಲಾಖೆಯಲ್ಲಿ ಅಪಾರ ಕಾಂಟಾಕ್ಟ್ ಉಳ್ಳ ಪಾಠಕ್ ಅಪರಾಧಿ ಲೋಕದಲ್ಲಿಯೂ ಅನೇಕ ಸೋರ್ಸ್‌ಗಳನ್ನು ಹೊಂದಿ, ತನ್ನ ಕಚೇರಿಯಲ್ಲಿ ಬೇಗನೇ ಎತ್ತರದ ಸ್ಥಾನಕ್ಕೆ ಬೆಳೆದಿರುತ್ತಾರೆ. ಇದು ಹಲವರು ಕರುಬುವುದಕ್ಕೂ ಕಾರಣವಾಗಿರುತ್ತದೆ. ಈ ಸಮಯದಲ್ಲಿ ಮತ್ತೊಂದು ಸುದ್ದಿ ಸಂಸ್ಥೆಯ ಮುಖ್ಯ ತನಿಖಾ ವರದಿಗಾರ ಜೈದೇಬ್ ಸೇನ್ (ನಿಜ ಜೀವನದ ಜ್ಯೋತಿರ್ಮಯ್ ಡೇ) ಅವರನ್ನು ಹಾಡುಹಗಲಿನಲ್ಲಿಯೇ ಗುಂಡಿಕ್ಕಿ ಕೊಲ್ಲಲಾಗುತ್ತದೆ. ಒಂದು ಸಣ್ಣ ಸುಳಿವೂ ಸಿಗದಂತೆ ಈ ಕೊಲೆ ಪ್ರಕರಣದಲ್ಲಿ ಪಾಠಕ್ ಅವರ ಹೆಸರು ಸೇರಿಕೊಳ್ಳುತ್ತದೆ. ಮುಂಬೈ ಭೂಗತ ಲೋಕದ ಬಗ್ಗೆ ಅವರು ಮಾಡಿದ ಪತ್ರಿಕಾ ವರದಿಗಳನ್ನೇ ಪಾಠಕ್ ವಿರುದ್ಧ ಸಾಕ್ಷಿಗಳನ್ನಾಗಿ ನಿಲ್ಲಿಸಲಾಗುತ್ತದೆ. ಇಂಥಹ ಸಂದರ್ಭದಲ್ಲಿ ತನ್ನದೇ ಪತ್ರಿಕೆಯ ಬಳಗ ಹೇಗೆ ಪ್ರತಿಕ್ರಿಯಿಸುತ್ತದೆ? ಬೇರೆ ಮಾಧ್ಯಮಗಳು ಈ ಪ್ರಕರಣವನ್ನು ಸೆನ್ಸೇಷನಲೈಸ್ ಮಾಡುವ ನಿಟ್ಟಿನಲ್ಲಿ ಹೇಗೆ ವರ್ತಿಸುತ್ತವೆ? ಯಾವ ಪೊಲೀಸ್ ಅಧಿಕಾರಿಗಳು ತನ್ನ ಸೋರ್ಸ್ ಆಗಿದ್ದರೋ ಅವರ ಪ್ರತಿಕ್ರಿಯೆ ಏನಾಗಿರುತ್ತದೆ? ಈ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಂಡ ಜಾಗೃತಿಗೆ ಹೊರಬರಲು ಸಾಧ್ಯವೇ? ಎಂಸಿಒಸಿಎ (MCOCA- ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಡಿ ಬಂಧಿತಳಾಗುವ ಪಾಠಕ್‌ಗೆ ನ್ಯಾಯಾಲಯವಾದರೂ ಬೇಗ ರಿಲೀಫ್ ನೀಡುತ್ತದೆಯೇ? ಹೀಗೆ ಸಿನಿಮಾ ಕಥೆ ಜಿಗ್ನಾ ವೋರಾ ಜೀವನದ ಸಂಕಷ್ಟದ ದಿನಗಳ ನೈಜಕಥೆಗೆ ನಿಷ್ಟವಾಗಿ ಮುಂದುವರಿಯುತ್ತದೆ.

ಇದನ್ನೂ ಓದಿ: ಅನ್ನಭಾಗ್ಯಕ್ಕೆ ಕತ್ತರಿ ಹಾಕಲು ಮುಂದಾದ ಕೇಂದ್ರ: ಪ್ರತಿಭಟನಾ ಪತ್ರ ಬರೆಯುವ ಎಚ್ಚರಿಕೆ ನೀಡಿದ ಸಿಎಂ…

ಪ್ರಭುತ್ವಗಳು ಮಾಧ್ಯಮಗಳ ಮೇಲೆ ತಮ್ಮ ಮುಷ್ಟಿಯನ್ನು ಬಿಗಿಗೊಳಿಸುತ್ತಿರುವ ಈ ಸಂದಿಗ್ಧ ಸಮಯದಲ್ಲಿ ’ಸ್ಕೂಪ್’ ಹಲವು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತದೆ. ಮುಖ್ಯವಾಗಿ ಬದಲಾಗುತ್ತಿರುವ ಪತ್ರಿಕೋದ್ಯಮದ ಚಹರೆಯನ್ನು ಹಿಡಿದಿಡುತ್ತದೆ. ಪೇಜ್ 1ರಲ್ಲಿ ತಮ್ಮ ವರದಿ ಕಾಣಿಸಿಕೊಳ್ಳಲು ಈಸ್ಟ್ರನ್ ಏಜ್‌ನ ನ್ಯೂಸ್ ರೂಮಿನಲ್ಲಿ ನಡೆಯುವ ಬಿಸಿಬಿಸಿ ಚರ್ಚೆಗಳು ಆರೋಗ್ಯಪೂರ್ಣ ಪತ್ರಿಕೋದ್ಯಮದ ಅವಶ್ಯಕತೆಯಂತೆ ಕಂಡರೂ, ಅದೇ ಆಫೀಸಿನಲ್ಲಿ ಕಿರಿಯ ಸಹೋದ್ಯೋಗಿ ದೀಪಾ ಚಂದ್ರ ವೃತ್ತಿಪರವಾಗಿ ಮೇಲೆಬರಲು ಮತ್ತು ಪೇಜ್ 1ನಲ್ಲಿ ಕಾಣಿಸಿಕೊಳ್ಳಲು ಪತ್ರಿಕೋದ್ಯಮದ ನೈತಿಕ ಮೌಲ್ಯಗಳಿಗೆ ತಿಲಾಂಜಲಿ ಇಡಲು ಸಜ್ಜುಗೊಳ್ಳುತ್ತಿರುತ್ತಾಳೆ. ಹಿರಿಯ ಅಧಿಕಾರಿಯಿಂದ ಟಿಪ್ಸ್ ಪಡೆಯುವ ಆಕೆ, ತನ್ನ ಸಹೋದ್ಯೋಗಿ ಪಾಠಕ್ ವಿರುದ್ಧವೇ ’ಸ್ಕೂಪ್’ ಪ್ರಕಟಿಸಲು ತನ್ನ ಸಂಪಾದಕ ಇಮ್ರಾನ್ ಸಿದ್ದಿಕಿಗೆ (ನಿಜ ಜೀವನದ ಹುಸೇನ್ ಜೈಯ್ದಿ) ದುಂಬಾಲು ಬೀಳುತ್ತಾಳೆ. ದೃಢಪಡಿಸಿಕೊಳ್ಳಲಾಗದ ಮಾಹಿತಿಯನ್ನು ಸೋರ್ಸ್‌ನಿಂದ ಪಡೆದು ಬರೆದಿರುವ ವರದಿಯ ಸೆನ್ಸೇಷನಲಿಸಂ ಬಗ್ಗೆ ಪ್ರಶ್ನೆ ಮಾಡಿ ಪ್ರಕಟಿಸಲು ನಿರಾಕರಿಸಿದಾಗ, ಆಕೆ ವಿರೋಧಿ ಪತ್ರಿಕೆಯ ಬಾಗಿಲು ಬಡಿಯುತ್ತಾಳೆ. ಅಲ್ಲಿಯೂ ಮತ್ತೊಂದು ಸಂದರ್ಭದಲ್ಲಿ ಇಂತಹುದೇ ಸಂದರ್ಭ ಎದುರಾಗಿ, ಸೆನ್ಸೇಶನಲೈಸ್ ಮಾಡುವುದನ್ನೇ ವೃತ್ತಿಯಾಗಿಸಿಕೊಂಡು, ಪತ್ರಿಕೋದ್ಯಮದ ಎಲ್ಲ ಮೂಲ ತತ್ವಗಳನ್ನು ಗಾಳಿಗೆ ತೂರಿರುವ ಟಿವಿ ಚಾನೆಲ್ ಒಂದಕ್ಕೆ ಹೋಗುತ್ತಾಳೆ. ಹೀಗೆ ಸತ್ಯವನ್ನು ಅನಾವರಣಗೊಳಿಸಲು ಪತ್ರಕರ್ತರು ಎಂಥ ಅಪಾಯಕಾರಿ ಸನ್ನಿವೇಶಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಾಗುತ್ತದೆಂಬ ಚಿತ್ರಣದ ಜೊತೆಜೊತೆಗೇ ಈ ಸ್ಪರ್ಧಾತ್ಮಕ ಭ್ರಮೆಗೆ ಬಿದ್ದು ಅಕ್ಸೆಸ್ ಜರ್ನಲಿಸಂನ ಹಿಂದೆ ಓಡಿ ಒದಗುವ ಅಪಾಯಗಳ ವಿರೋಧಾಭಾಸವೂ ಧಾರಾವಾಹಿಯಲ್ಲಿ ಚಿತ್ರಣಗೊಂಡಿದೆ.

ಹನ್ಸಲ್ ಮೆಹ್ತಾ

ಒಂಟಿ ತಾಯಿಯಾಗಿ ಬದುಕುತ್ತಿರುವ ಪಾಠಕ್, ತನ್ನ ಕೆಲಸದ ಕಾರಣಕ್ಕೆ ತನ್ನ ಸೋರ್ಸ್‌ಗಳಾದ ಪೊಲೀಸರ ಅನುಚಿತ ವರ್ತನೆಗಳನ್ನೂ ಸಹಿಸಿಕೊಳ್ಳಬೇಕು ಮತ್ತು ಭೂಗತ ಲೋಕದ ಜನರ ಜೊತೆಗಿನ ವಿಚಿತ್ರ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕಾಗಿರುತ್ತದೆ. ಸತ್ಯವನ್ನು ಬಯಲಿಗೆಳೆಯುವಲ್ಲಿ ಇಂತಹ ಪ್ರಾಮಾಣಿಕ ಪ್ರಯತ್ನವೇನೋ ಸರಿ, ಆದರೆ ಜಾಗೃತಿ ಪಾಠಕ್ ಅವರ ಪತ್ರಿಕೋದ್ಯಮದಲ್ಲಿಯೂ ’ಎಲ್ಲ ಪತ್ರಿಕೆಗಳಿಗಿಂತ ಮೊದಲು ಕೊಡುತ್ತೇವೆಂಬ ಎಕ್ಸ್‌ಕ್ಲೂಸಿವ್‌ನೆಸ್ ’ ಧೋರಣೆ ಕೂಡ ಸಮಸ್ಯೆಯೇ ಅಲ್ಲವೇ? ಎಲ್ಲ ನೈತಿಕ ಹೊಣೆಯನ್ನೂ ಮತ್ತು ಜವಾಬ್ದಾರಿಗಳನ್ನೂ ಗಾಳಿಗೆ ತೂರಿ ಸೆನ್ಸೇಷನಲ್ ಪತ್ರಿಕೋದ್ಯಮಕ್ಕೆ ಮಣೆ ಹಾಕುವ ಮುಖ್ಯವಾಹಿನಿ ಟಿವಿ ಮಾಧ್ಯಮಗಳ ಪರಿಸ್ಥಿತಿಗೆ ಇದು ಕೂಡ ಬೀಜವಲ್ಲವೇ? ಈ ಪ್ರಶ್ನೆಯನ್ನೂ ಪರೋಕ್ಷವಾಗಿ ಈ ಧಾರಾವಾಹಿ ಎತ್ತುತ್ತದೆ. ಇದೇ ಸಮಯದಲ್ಲಿ ಬಲಿಷ್ಠ ಪೊಲೀಸ್ ವ್ಯವಸ್ಥೆ ಮತ್ತು ಪ್ರಭುತ್ವಗಳ ವಿರುದ್ಧ ಸೆಣೆಸುವಲ್ಲಿ ಪತ್ರಿಕೋದ್ಯಮ ಮತ್ತು ಪತ್ರಕರ್ತರು ಹತಾಶರಾಗುವ ಸಂದರ್ಭವನ್ನೂ ಹಿಡಿದಿಡುತ್ತದೆ. ಸಂಘಟಿತವಾಗಿ ಪತ್ರಿಕೋದ್ಯಮದ ವಿವಿಧ ಮಾಧ್ಯಮಸಂಸ್ಥೆಗಳು ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರೆ ನ್ಯಾಯ ಪಡೆಯುವುದು ಸುಲಭವಾಗುತ್ತಿತ್ತಾ? ಗೊತ್ತಿಲ್ಲ. ಜಾಗೃತಿ ಪಾಠಕ್ ವಿರುದ್ಧ ಧ್ವನಿಯೆತ್ತುವುದರಲ್ಲಿ ಪತ್ರಿಕಾ ಬಳಗ ಒಡೆದ ಮನೆಯಾಗಿರುತ್ತದೆ. ಪತ್ರಿಕೋದ್ಯಮದ ಮೌಲ್ಯಗಳನ್ನು ಮರೆತು ಮಾಧ್ಯಮಗಳು ಇಷ್ಟು ಮುಂದೆ ಬರುವುದಕ್ಕೆ ಈ ’ರ್‍ಯಾಟ್ ರೇಸ್’ ಕೂಡ ಒಂದು ಕಾರಣವಲ್ಲವೇ? 2012ರಲ್ಲಿ ನಡೆದ ಘಟನೆಯಲ್ಲಿಯೇ ಪರಿಸ್ಥಿತಿ ಹೀಗಿದ್ದಾಗ, ಇಂದು ಮಾಧ್ಯಮಗಳ ಕಾರ್ಪೊರೆಟೈಸೇಷನ್ ಮುಂದಿನ ಹಂತಕ್ಕೆ ಬಂದು ನಿಂತಿದ್ದು, ಪ್ರಭುತ್ವದ ನಿಯಂತ್ರಣ ಕೂಡ ಹೊಸ ಎತ್ತರವನ್ನು ತಲುಪಿರುವಾಗ ಪತ್ರಕರ್ತರು ಸತ್ಯವನ್ನು ಬಯಲಿಗೆಳೆಯುವ ಕೆಲಸವನ್ನು ನಿರ್ಭಿಡೆಯಿಂದ ಮುಂದೆ ಮಾಡಬಲ್ಲರೇ?

ಇನ್ನು ಕರಾಳ ಕಾನೂನುಗಳ ಸಮಸ್ಯೆಯನ್ನೂ ’ಸ್ಕೂಪ್’ ಪ್ರಧಾನವಾಗಿ ಒಳಗೊಳ್ಳುತ್ತದೆ. ಸೇನ್ ಕೊಲೆಯನ್ನು ಚೋಟಾ ರಾಜನ್ ಕಡೆಯವರು ಮಾಡಿದ್ದಾರೆಂದು ಆರೋಪಿಸುವ ಪೊಲೀಸರು ಇದಕ್ಕೆ ಜಾಗೃತಿ ಪಾಠಕ್ ನೆರವಾಗಿದ್ದಾರೆಂಬ ಕಪೋಲ ಕಲ್ಪಿತ ಕತೆಯನ್ನು ಕಟ್ಟಿ ಎಂಸಿಒಸಿಎ ಕಾಯ್ದೆಯಡಿ ಆಕೆಯನ್ನೂ ಆರೋಪಿಯನ್ನಾಗಿಸುತ್ತಾರೆ. ರಾಜನ್‌ನ ಸಂಪರ್ಕ ಸಾಧಿಸಿ ಆತನ ಸಂದರ್ಶನ ಮಾಡಿ ಪ್ರಕಟಿಸಿದ್ದನ್ನೇ ಪಾಠಕ್ ವಿರುದ್ಧ ತಿರುಗಿಸಲಾಗುತ್ತದೆ. ಇದನ್ನೇ ಬಳಸಿಕೊಂಡು 36 ಬಾರಿ ಚೋಟಾ ರಾಜನ್‌ನಿಗೆ ಕರೆ ಮಾಡಿದ್ದರು, ಸೇನ್ ವಿಳಾಸವನ್ನು ಆತನಿಗೆ ತಲುಪಿಸಿದ್ದರು ಎಂಬ ಕಪೋಲಕಲ್ಪಿತ ಆರೋಪಗಳನ್ನು ಪಾಠಕ್ ಮೇಲೆ ಪೊಲೀಸರು ಮೌಖಿಕವಾಗಿ ಹೊರಿಸುತ್ತಾರೆ. ಜೊತೆಜೊತೆಗೆ ಸೇನ್‌ಗೆ ಮತ್ತೊಬ್ಬ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಂಬಂಧ ಇತ್ತೆಂಬ ಸುಳ್ಳುಗಳನ್ನು ಪ್ರಚುರಪಡಿಸಿ, ಒಂದೇ ಏಟಿಗೆ ಇಬ್ಬರು ಜರ್ನಲಿಸ್ಟ್‌ಗಳ ಚಾರಿತ್ರ್ಯಹರಣ ಮಾಡುವಲ್ಲಿ ಪೊಲೀಸರು ಸಫಲರಾಗುತ್ತಾರೆ. ಈ ಆರೋಪಗಳಿಗೆ ಯಾವ ಸಾಕ್ಷ್ಯಗಳನ್ನು ನೀಡದೇ ಹೋದರೂ ಹಲವಾರು ಮಾಧ್ಯಮಗಳು ಈ ’ಅಧಿಕೃತ’ ಸುಳ್ಳುಗಳನ್ನು ಆಧರಿಸಿ ವರದಿಗಳನ್ನು ಮಾಡುತ್ತಾ, ಪಾಠಕ್ ಅವರಿಗೆ ಸಾಮಾಜಿಕವಾಗಿ ಮತ್ತು ಎಲ್ಲ ರೀತಿಯಲ್ಲಿಯೂ ಹಿನ್ನಡೆಯಾಗುವುದಕ್ಕೆ ಕಾರಣರಾಗುತ್ತಾರೆ. ನಿಗದಿತ ಸಮಯದೊಳಗೆ ಆರೋಪಪಟ್ಟಿ ಸಲ್ಲಿಸಲು ಪೊಲೀಸರು ವಿಫಲವಾದರೂ, ಈ ಕರಾಳ ಕಾನೂನಿನಡಿ ಪ್ರಕರಣ ದಾಖಲಾಗಿರುವುದರಿಂದ ಜಾಮೀನು ಪಡೆಯಲು ಸಾಧ್ಯವಾಗುವುದಿಲ್ಲ. ಪೊಲೀಸರು ಹಿಂದೆ ಪ್ರತಿಪಾದಿಸಿದ ಮಾಹಿತಿಗೆ ಹೋಲಿಸಿದಾಗ, ಮುಂದೆ ಸಲ್ಲಿಸುವ ಆರೋಪ ಪಟ್ಟಿಯಲ್ಲಿ ಹಲವು ದೋಷ ವ್ಯತ್ಯಾಸಗಳಿದ್ದರೂ ಅದು ಜಾಮೀನಿಗೆ ಸಾಕಾಗುವುದಿಲ್ಲ. ಹೀಗೆ ನಿರ್ದೋಷಿ ಪತ್ರಕರ್ತೆಯೊಬ್ಬರ ಚಾರಿತ್ರ್ಯ ಹರಣ, ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುವಂತೆ ಮಾಡುವುದಕ್ಕೆ ಪೊಲೀಸ್ ಮತ್ತು ಮಾಧ್ಯಮಗಳು ಅನಧಿಕೃತ ಒಪ್ಪಂದಕ್ಕೆ ಬಂದುಬಿಡುತ್ತವೆ. ಅದಕ್ಕೆ ಈ ಕರಾಳ ಕಾನೂನುಗಳು ನೆರವಾಗುತ್ತವೆ. ಈ ಸಮಯದಲ್ಲಿ ಯುಎಪಿಎ ಮೇಲೆ ಬಂಧಿತರಾದ ಭೀಮಾ ಕೋರೆಗಾಂವ್ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಾಮಾಜಿಕ ಕಾರ್ಯಕರ್ತರು ಮತ್ತು ಸಿಎಎ-ಎನ್‌ಆರ್‌ಸಿ ಪ್ರತಿಭಟನೆಯ ಹಲವರು ಜೈಲಿನಲ್ಲಿ ಕೊಳೆಯುತ್ತಿರುವುದು ನೆನಪಾಗದೇ ಇರದು.

ಜ್ಯೋತಿರ್ಮಯ್ ಡೇ

ಹೀಗೆ ದಿಟ್ಟ ಪತ್ರಕರ್ತೆಯೊಬ್ಬಳನ್ನು ಷಡ್ಯಂತ್ರದಲ್ಲಿ ಸಿಲುಕಿಸುವ ಕಥೆ ಆಕೆಯ ವೈಯಕ್ತಿಕ ಮತ್ತು ವೃತ್ತಿಜೀವನದ ಹಲವು ಆಯಾಮಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ. ಮುಂದೆ ಜಾಮೀನು ಪಡೆದು, ನಿರ್ದೋಷಿ ಎಂದು ಸಾಬೀತಾದರೂ ನಿಜ ಜೀವನದ ವೋರಾ ಮತ್ತೆ ಪತ್ರಿಕೋದ್ಯಮಕ್ಕೆ ಹಿಂದಿರುಗುವ ಮನೋಸ್ಥೈರ್ಯವನ್ನು ವಾಪಸ್ ಪಡೆಯಲು ಸಾಧ್ಯವಾಗಿಲ್ಲ. ಧಾರಾವಾಹಿಯ ಅಂತ್ಯದಲ್ಲಿ ಗೌರಿ ಲಂಕೇಶ್ ಸೇರಿದಂತೆ ಹಲವು ಪತ್ರಕರ್ತರ ಮೇಲೆ ಆಗಿರುವ ಕೊಲೆ ಮತ್ತು ದೌರ್ಜನ್ಯಗಳ ಪಟ್ಟಿಯನ್ನು ಹಾಕಲಾಗುತ್ತದೆ. ಕೊನೆಗೆ, ಅಧಿಕಾರ ವರ್ಗ ನೀಡುವ “ಅಧಿಕೃತ” ಮಾಹಿತಿಯನ್ನು ಕುರುಡಾಗಿ ನಂಬಿ ವರದಿಗಾರಿಕೆ ಮತ್ತು ಪತ್ರಿಕೋದ್ಯಮದ ಕೆಲಸ ನಿರ್ವಹಿಸುತ್ತಿರುವ ಮಾಧ್ಯಮಗಳ ರೀತಿ ಸರಿಯೇ? ಇವೆಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಸಾಧ್ಯವೇ ಎಂಬ ಪ್ರಶ್ನೆಗಳನ್ನು ಒಬ್ಬ ದಿಟ್ಟ ಪತ್ರಕರ್ತೆಯ ಜೀವನದ ಒಂದು ಭಾಗವನ್ನು ದೃಶ್ಯಮಾಧ್ಯಮಕ್ಕೆ ತಂದಿರುವ ಈ ಧಾರಾವಾಹಿ ಎತ್ತಿ ಕಾಡುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...