Homeಕರ್ನಾಟಕಸದಾಶಿವ ಆಯೋಗದ ವರದಿ ವಿರೋಧಕ್ಕೆ ಸಹಮತವಿಲ್ಲ, ಪರಿಶಿಷ್ಟರ ಒಮ್ಮತಕ್ಕಾಗಿ ಸಮುದಾಯಗಳ ಜೊತೆ ಚರ್ಚೆ: ದಸಂಸ ನಾಯಕರ...

ಸದಾಶಿವ ಆಯೋಗದ ವರದಿ ವಿರೋಧಕ್ಕೆ ಸಹಮತವಿಲ್ಲ, ಪರಿಶಿಷ್ಟರ ಒಮ್ಮತಕ್ಕಾಗಿ ಸಮುದಾಯಗಳ ಜೊತೆ ಚರ್ಚೆ: ದಸಂಸ ನಾಯಕರ ಸ್ಪಷ್ಟನೆ

ಮೀಸಲಾತಿ ಸಂರಕ್ಷಣಾ ಒಕ್ಕೂಟದ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿರುವ ದಸಂಸ ನಾಯಕರು, ಒಕ್ಕೂಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರ ಕುರಿತು ಸ್ಪಷ್ಟನೆ ನೀಡಿದ್ದಾರೆ

- Advertisement -
- Advertisement -

“‘ಜಸ್ಟೀಸ್‌ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಒಪ್ಪುವುದಿಲ್ಲ, ಸಚಿವ ಸಂಪುಟ ಉಪಸಮಿತಿಯೇ ಅಧ್ಯಯನ ಮಾಡಲಿ’ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಹೇಳಿರುವುದಕ್ಕೆ ನಮ್ಮ ಸಮ್ಮತಿ ಇಲ್ಲ. ಅದು ಒಕ್ಕೂಟದ ನಿರ್ಧಾರವೇ ಹೊರತು, ಸಭೆಯಲ್ಲಿ ಪಾಲ್ಗೊಂಡಿದ್ದ ದಲಿತ ಸಂಘರ್ಷ ಸಮಿತಿ (ದಸಂಸ) ಮುಖಂಡರಿಗೂ ಇದಕ್ಕೂ ಸಂಬಂಧವಿಲ್ಲ” ಎಂದು ದಸಂಸ ನಾಯಕರು ಸ್ಪಷ್ಟಪಡಿಸಿದ್ದಾರೆ.

“ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಾಚೆಗೂ ಪರಿಶಿಷ್ಟ ಜಾತಿಗಳು ಒಗ್ಗಟ್ಟು ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ 101 ಪರಿಶಿಷ್ಟ ಜಾತಿಗಳೊಂದಿಗೂ ಚರ್ಚೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಅದರ ಭಾಗವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ” ಎಂದು ತಿಳಿಸಿದ್ದಾರೆ.

ಬೋವಿ, ಲಂಬಾಣಿ ನಾಯಕರು ಮುಂಚೂಣಿಯಲ್ಲಿರುವ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಸಮಿತಿಯಿಂದ ಬೆಂಗಳೂರಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ದಸಂಸ ನಾಯಕರು ಪಾಲ್ಗೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ‘ಸದಾಶಿವ ಆಯೋಗದ ವರದಿ ವಿರೋಧಿಸಿ ಜ.10ರಂದು ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಒಕ್ಕೂಟ ತೀರ್ಮಾನಿಸಿದೆ’ ಎಂದು ‘ಪ್ರಜಾವಾಣಿ’ ವರದಿ ಮಾಡಿದೆ.

“ಎ.ಜೆ.ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಪರಿಶಿಷ್ಟ ಜಾತಿಗಳನ್ನು ಒಳಮೀಸಲಾತಿ ಹೆಸರಲ್ಲಿ ವರ್ಗೀಕರಿಸಬಾರದು. ಸಾರ್ವಜನಿಕ ಚರ್ಚೆಗೆ ಒಳಪಡಿಸದೇ ಸಂಪುಟ ಉಪಸಮಿತಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಶಿಫಾರಸ್ಸು  ಮಾಡಬಾರದು” ಎಂದು ಒಕ್ಕೂಟ ಒತ್ತಾಯಿಸಿದೆ.

ಇದನ್ನೂ ಓದಿರಿ: ದಲಿತ ಮಹಿಳೆಗೆ ಥಳಿಸಿದ ಸಚಿವ ಸೋಮಣ್ಣರನ್ನು ಸಂಧಾನಕ್ಕೆ ಕಳಿಸ್ತೀರಾ? ಒಳಮೀಸಲಾತಿ ಹೋರಾಟಗಾರರ ಆಕ್ರೋಶ

ಮುಂದುವರಿದು, “ಗೊಂದಲ, ಅಸ್ಪಷ್ಟತೆ, ಅವೈಜ್ಞಾನಿಕ, ಅಸಂವಿಧಾನಿಕ ಅಂಶಗಳನ್ನು ಒಳಗೊಂಡ ವರದಿಯನ್ನು ಆಧಾರವಾಗಿ ಪರಿಗಣಿಸದೇ ಕಾನೂನು ಸಚಿವ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಂಪುಟ ಉಪಸಮಿತಿಯೇ ಸ್ವಯಂ ಆಗಿ ಪರಿಶಿಷ್ಟ ಜಾತಿಗಳ ವರ್ಗೀಕರಣ ಮಾಡಲು ಕಾರ್ಯಸಾಧು ಶಿಫಾರಸ್ಸು ಮಾಡಬೇಕು. ಈ ಬೇಡಿಕೆ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲು ಜ.10ರಂದು ಬೆಂಗಳೂರಿನಲ್ಲಿ 10 ಲಕ್ಷ ಜನರನ್ನು ಸೇರಿಸಿ ಪ್ರತಿಭಟನೆ ನಡೆಸಲು ಬೋವಿ ಸಮಾಜದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದದಲ್ಲಿ ಶನಿವಾರ ನಡೆದ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು” ಎಂದು ವರದಿ ತಿಳಿಸಿದೆ. ಈ ನಿರ್ಣಯ ಕೈಗೊಂಡಿರುವ ಕಾರ್ಯಕ್ರಮದಲ್ಲಿ “ದಸಂಸ ಮುಖಂಡರಾದ ಮಾವಳ್ಳಿ ಶಂಕರ್‌, ಎನ್‌.ವೆಂಕಟೇಶ್‌, ಬಿ.ಗೋಪಾಲ್‌, ಇಂಧೂದರ ಹೊನ್ನಾಪುರ, ನಾಗರಾಜ್‌ ಅವರು ಪಾಲ್ಗೊಂಡಿದ್ದರು” ಎಂಬುದು ವರದಿಯಲ್ಲಿ ಉಲ್ಲೇಖಗೊಂಡಿದೆ.

ಡಿಸೆಂಬರ್‌ 6ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಸಮಾವೇಶದಲ್ಲಿ ಒಳಮೀಸಲಾತಿ ಪರವಾದ ನಿರ್ಣಯವನ್ನು ದಸಂಸ ಮುಖಂಡರು ಕೈಗೊಂಡಿದ್ದರು. “ಹಿಂದುಳಿದ ವರ್ಗಗಳಲ್ಲಿ ಇರುವಂತೆ ಪರಿಶಿಷ್ಟ ಜಾತಿ/ವರ್ಗಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೆ ತರಬೇಕು. ನ್ಯಾ. ಸದಾಶಿವ ಆಯೋಗದ ವರದಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟು ಕಡ್ಡಾಯವಾಗಿ ಅನುಷ್ಟಾನಗೊಳಿಸಬೇಕು” ಎಂಬ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ ಇದನ್ನು ಪರೋಕ್ಷವಾಗಿ ಒಪ್ಪದಿರುವ ಒಕ್ಕೂಟದ ಕಾರ್ಯಕ್ರಮದಲ್ಲಿ ದಸಂಸ ನಾಯಕರು ಪಾಲ್ಗೊಂಡಿದ್ದೇಕೆ ಎಂಬ ಪ್ರಶ್ನೆ ಹುಟ್ಟಿದೆ.

ಈ ಕುರಿತು ದಸಂಸ ನಾಯಕರಾದ ಎನ್‌.ವೆಂಕಟೇಶ್‌, ಮಾವಳ್ಳಿ ಶಂಕರ್‌, ಇಂದೂಧರ ಹೊನ್ನಾಪುರ ಹಾಗೂ ಒಕ್ಕೂಟದ ಮುಖಂಡರಾದ ಅನಂತ್ ನಾಯ್ಕ್‌ ಅವರ ಪ್ರತಿಕ್ರಿಯೆಯನ್ನು ‘ನಾನುಗೌರಿ.ಕಾಂ’ ಪಡೆದುಕೊಂಡಿದೆ.

ಹೋರಾಟಗಾರರು, ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ ಅವರು ಮಾತನಾಡಿ, “ಒಕ್ಕೂಟದ ನಿರ್ಣಯಗಳಲ್ಲಿ ನಾವು ಭಾಗಿಯಲ್ಲ. ಸಮುದಾಯಗಳಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಸಭೆ ಕರೆದಿರುವುದಾಗಿ ನಮ್ಮನ್ನು ಆಹ್ವಾನಿಸಿದ್ದರು. ನಾವು ಭಾಗಿಯಾಗಿ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ” ಎಂದು ತಿಳಿಸಿದರು.

“ಸದಾಶಿವ ಆಯೋಗದ ವರದಿಯನ್ನು ಚರ್ಚೆಗೆ ಬಿಡುಗಡೆ ಮಾಡಬೇಕು, ಗೌಪ್ಯವಾಗಿ ಇಡುವುದರಲ್ಲಿ ಅರ್ಥವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂದು ಎನ್‌.ವೆಂಕಟೇಶ್, ಮಾವಳ್ಳಿ ಶಂಕರ್‌, ಬಿ.ಗೋಪಾಲ್ ಹಾಗೂ ನಾನು ಅಭಿಪ್ರಾಯ ಮಂಡಿಸಿದೆವು. ಅವರು ತೆಗೆದುಕೊಂಡಿರುವ ನಿರ್ಣಯಕ್ಕೂ ನಮಗೂ ಸಂಬಂಧವಿಲ್ಲ” ಎಂದು ಪುನರುಚ್ಚರಿಸಿದರು.

“ಪರಿಶಿಷ್ಟ ಜಾತಿಗಳ ಸಹ ಸಮುದಾಯಗಳು ಹಾಗೂ ಸಂಘಟನೆಗಳೊಂದಿಗೆ ನಾವು ನಿರಂತರವಾಗಿ ಚರ್ಚೆಗಳನ್ನು ನಡೆಸಲು ಮುಂದಾಗಿದ್ದೇವೆ. ಪರಸ್ಪರ ಕೈಜೋಡಿಸಿ ಚಳವಳಿಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬ ಕಾರಣಕ್ಕೆ ಡಿಸೆಂಬರ್‌ 6ರ ಸಮಾವೇಶದ ನಂತರದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಈ ಆಶಯವನ್ನು ಇಟ್ಟುಕೊಂಡಿರುವ ನಮ್ಮನ್ನು ಆಹ್ವಾನಿಸಿದ್ದರಿಂದ ಅಲ್ಲಿಗೆ ಹೋಗಿದ್ದೆವು” ಎಂದು ವಿವರಿಸಿದರು.

“ಆವೇಶ, ಆಕ್ರೋಶ, ಪರಸ್ಪರ ದ್ವೇಷದಿಂದ ಸಮಸ್ಯೆಗಳ ಪರಿಹಾರ ಆಗುವುದಿಲ್ಲ. ನೂರೊಂದು ಜಾತಿಗಳು ಒಮ್ಮತದ ನಿರ್ಣಯಕ್ಕೆ ಬರಬೇಕು. ಜನಸಂಖ್ಯೆ ಆಧಾರದಲ್ಲಿ ಅವರವರ ಪಾಲು ಅವರವರಿಗೆ ಸಿಗಬೇಕು. ಒಳಮೀಸಲಾತಿ ಇಂದಿನ ಅನಿವಾರ್ಯ ಎಂದು ಸ್ಪಷ್ಟವಾಗಿ ಮಾತನಾಡಿದ್ದೇವೆ” ಎಂದು ಹೇಳಿದರು.

ಇದನ್ನೂ ಓದಿರಿ: ನ್ಯಾಯ ಕೇಳಿದ ಒಳಮೀಸಲಾತಿ ಹೋರಾಟಗಾರರ ಬಂಧನ

“ಒಬ್ಬೊಬ್ಬರ ನಡುವೆ ಬೆಸುಗೆ ಇರಬೇಕು, ವಿಚಾರ ವಿನಿಮಯ ಮಾಡಿಕೊಳ್ಳಬೇಕು, ಪ್ರೀತಿ ವಿಶ್ವಾಸ ಇರಬೇಕು ಎಂದು ನಾವು ಹೋಗಿದ್ದೆವು. ಅವರ ನಿರ್ಣಯಗಳಿಗೆ ಬೆಂಬಲ ನೀಡಲೆಂದು ತೆರಳಿರಲಿಲ್ಲ. ಒಳಮೀಸಲಾತಿ ಸೇರಿದಂತೆ ಯಾವುದೇ ಸಂಗತಿ ಪರ- ವಿರೋಧ ಎಂಬ ಬೈನರಿಯಾಗಿ ಚರ್ಚೆಯಾಗಬಾರದು ಎಂಬುದು ನಮ್ಮ ಆಶಯ. ವಿವೇಕಪೂರ್ವವಾಗಿ ಪ್ರತಿಯೊಂದನ್ನು ಚರ್ಚಿಸಬೇಕು. ನೂರೊಂದು ಜಾತಿಗಳೊಂದಿಗೂ ಇದೇ ಬಾಂಧವ್ಯ ಇರಬೇಕೆಂಬುದು ನಾವು ಕೆಲಸ ಮಾಡುತ್ತಿದ್ದೇವೆ. ಸದಾಶಿವ ಆಯೋಗದ ವರದಿ ಜಾರಿಯಾದ ನಂತರವೂ ಈ ಬಾಂಧವ್ಯ ಮುಂದುವರಿಯಬೇಕು. ನಾವು ಮಾಡುತ್ತಿರುವ ಕೆಲಸ ಸದಾಶಿವ ಆಯೋಗದ ವರದಿಗಷ್ಟೇ ಸೀಮಿತವಾದದ್ದಲ್ಲ. ಹೇಗೆ ದಲಿತ ಸಂಘರ್ಷ ಸಮಿತಿಯನ್ನು ಒಗ್ಗೂಡಿಸಲು ನಾವು ಪ್ರಯತ್ನ ಮಾಡಿದೆವೋ ಹಾಗೆಯೇ ಎಲ್ಲ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳನ್ನು ಜಾಗೃತಗೊಳಿಸುವ ಜವಾಬ್ದಾರಿ ನಮ್ಮ ಮುಂದಿದೆ” ಎಂದರು.

ದಸಂಸದ ಹಿರಿಯ ನಾಯಕರಾದ ಎನ್‌.ವೆಂಕಟೇಶ್‌ ಪ್ರತಿಕ್ರಿಯಿಸಿ, “ವರದಿಯನ್ನು ಬಹಿರಂಗಪಡಿಸಬೇಕೆಂದು ನಮ್ಮ ಅಭಿಪ್ರಾಯ ಹೇಳಿದ್ದೇನೆ. ಡಿಸೆಂಬರ್‌ 6ರಂದು ತೆಗೆದುಕೊಂಡ ನಿರ್ಣಯದ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಮ್ಮತಕ್ಕೆ ತರಬೇಕಿದೆ. ಪರಿಶಿಷ್ಟ ಜಾತಿಗಳ ನಡುವೆ ಸಹಮತವಿಲ್ಲದೆ ಸಂವಿಧಾನ ವಿರೋಧಿಗಳಿಗೆ ಅನುಕೂಲವಾಗುವಂತಾಗಬಾರದು. ನಮ್ಮನ್ನು ಒಡೆದು ಆಳುವ ಸಂಘಪರಿವಾರದ ಕುರಿತು ಎಚ್ಚರ ವಹಿಸಬೇಕು. ಈ ಸರ್ಕಾರ ದಲಿತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ಕಡಿತ ಮಾಡಿದೆ. ಎಸ್‌ಟಿಪಿ, ಟಿಎಸ್‌ಪಿ ಅನುದಾನ ಕಡಿಮೆ ಮಾಡಿದೆ. ನಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದಿದೆ. ಹೀಗಾಗಿ ಡಿಸೆಂಬರ್‌ 6ರಂದು ಸ್ಪಷ್ಟ ಆಲೋಚನೆಗಳೊಂದಿಗೆ ನಾವು ಹೊರ ಬಂದಿದ್ದೇವೆ. ಒಟ್ಟು ಸಮುದಾಯದಲ್ಲಿ ತಾತ್ವಿಕ ಚಿಂತನೆ ಮೂಡಬೇಕಿದೆ. ಸಮುದಾಯಗಳನ್ನು ಭೇಟಿಯಾಗಿ ರಾಜಕೀಯ ಚಳವಳಿಯನ್ನು ಬೆಳೆಸುವ ಪ್ರಯತ್ನಗಳಾಗುತ್ತಿವೆ. ಕೋಮುವಾದಿಗಳನ್ನು ಸೋಲಿಸಲು ಸಮುದಾಯಗಳಿಂದ ಎಳ್ಳಷ್ಟು ಸಹಾಯವಾದರೂ ಅದನ್ನು ಒಳಗೊಳ್ಳಬೇಕು ಎಂಬ ಮುಖ್ಯ ಉದ್ದೇಶದಿಂದ ಭಾಗಿಯಾಗಿದ್ದೇವೆ. ನಮ್ಮ ವಿಚಾರಗಳನ್ನು ಸ್ಪಷ್ಟಪಡಿಸಿದ್ದೇವೆ. ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಒಮ್ಮತದಿಂದ ಮುಂದುವರಿದರೆ ಚಳವಳಿ ಬಲವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ರಾಜ್ಯ ಸರ್ಕಾರದ ಅಸಡ್ಡೆಗೆ ಆಕ್ರೋಶಗೊಂಡ ಒಳಮೀಸಲಾತಿ ಕೂಗು

ಹಿರಿಯ ಹೋರಾಟಗಾರರಾದ ಮಾವಳ್ಳಿ ಶಂಕರ್‌ ಮಾತನಾಡಿ, “ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ಹೋಗಿದ್ದೆವು. ಬಿಜೆಪಿ ಮುಖಂಡರಾದ ರಾಜೀವ್‌ ಕಡೆಯವನೊಬ್ಬ ಅಲ್ಲಿ ಕೂಗಾಡುತ್ತಿದ್ದ. ತನ್ನನ್ನು ಆರ್‌ಎಸ್‌ಎಸ್‌ನವನೆಂದು ಬಿಂಬಿಸಿಕೊಂಡು ತಕರಾರು ತೆಗೆಯುತ್ತಿದ್ದ. ಆತನನ್ನು ಸಂಘಟಕರು ಹೊರ ಹಾಕಿದರು” ಎಂದ ಅವರು, “ವರದಿ ಚರ್ಚೆಯಾಗಬೇಕು. ವರದಿಯಲ್ಲಿನ ಆಶಯಗಳನ್ನು ಜಾರಿಗೊಳಿಸಬೇಕು. ಸಮುದಾಯಗಳನ್ನು ಒಡೆಯುವ ಕೆಲಸ ಆಗಬಾರದು. ಈ ಸರ್ಕಾರಗಳು ಇನ್ನು ಎಷ್ಟು ಉಪಸಮಿತಿಗಳನ್ನು ಮಾಡುತ್ತಾರೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಎ.ಜೆ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕ, ಅವಾಸ್ತವಿಕ ಎಂದು ವೇದಿಕೆಯ ಬ್ಯಾನರ್‌ನಲ್ಲಿ ಹಾಕಿಕೊಳ್ಳಲಾಗಿತ್ತು. ಅದಕ್ಕೂ ದಸಂಸ ಮುಖಂಡರಿಗೂ ಸಂಬಂಧವಿಲ್ಲ. ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು, ಇಲ್ಲವಾದರೆ ಕೋಮುವಾದಿಗಳಿಗೆ ಬಲಿಯಾಗುತ್ತೇವೆ ಎಂದು ವೇದಿಕೆಯಲ್ಲಿ ತಿಳಿಸಿದ್ದೇವೆ” ಎಂದು ಮಾಹಿತಿ ನೀಡಿದರು.

ದಸಂಸ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಒಕ್ಕೂಟದ ಮುಖಂಡರಾದ ಅನಂತ್ ನಾಯ್ಕ್ ಪ್ರತಿಕ್ರಿಯಿಸಿ, “ಅಂಗೀಕಾರವಾಗಿರುವ ನಿರ್ಣಯಗಳು ಒಕ್ಕೂಟಕ್ಕೆ ಸಂಬಂಧಿಸಿವೆ. ಇದಕ್ಕೂ ದಸಂಸ ಮುಖಂಡರಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಆಹ್ವಾನದ ಮೇರೆಗೆ ಬಂದು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಒಳಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆತ್ಮೀಯರಾದ ಅಂಬಣ್ಣ ಅರೋಲಿಕರ್‌ ಅವರೊಂದಿಗೂ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಾಗುವುದು” ಎಂದು ತಿಳಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸುವ ಹಡಗಿಗೆ ಬಂದರಿನಲ್ಲಿ ನಿಲುಗಡೆ ನಿಷೇಧಿಸಿದ ಸ್ಪೇನ್

0
ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಹಡಗನ್ನು ಸ್ಪೇನ್ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಗುರುವಾರ ಹೇಳಿದ್ದಾರೆ. "ಇದೇ ಮೊದಲ ಬಾರಿಗೆ ನಾವು ಇಸ್ರೇಲ್‌ಗೆ ತೆರಳುತ್ತಿದ್ದ ಹಡಗಿಗೆ...