Homeಮುಖಪುಟಫ್ಯಾಸಿಜ಼ಮ್‍ನ ನಿಜವಾದ ಗೆಲುವು...

ಫ್ಯಾಸಿಜ಼ಮ್‍ನ ನಿಜವಾದ ಗೆಲುವು…

ಗಾಬರಿ, ಗಾಸಿ, ಹೆಚ್ಚಿನ ವಿವೇಚನೆ

- Advertisement -
- Advertisement -

ಮೊನ್ನೆ ಈ ಪತ್ರಿಕೆಯಲ್ಲಿ ಪ್ರಜಾಪೀಡನೆಗೆ ಕಾನೂನಿನ ಬಳಕೆಯೇ? ಎಂಬ ಬರಹವನ್ನು ಪ್ರಕಟಿಸಿದಮೇಲೆ ನನಗೆ ವ್ಹಾಟ್ಸಾಪ್‍ನಲ್ಲಿ ಬಂದ ಹಲವು ಸಂದೇಶಗಳಲ್ಲಿ ಮೂರು ಸಂದೇಶಗಳು ಈಗ ನಾನು ಈ ಲೇಖನ ಬರೆಯಲು ಕಾರಣವಾಗಿವೆ.

ಆ ಮೂರು ಸಂದೇಶಗಳಲ್ಲಿ, ಎರಡು ಸಂದೇಶ ಓದಿ ನಾನು ಗಾಬರಿಯಾದೆ, ಗಾಸಿಗೊಂಡೆ. ಅವುಗಳಲ್ಲಿ ಒಂದು, ನಾನು ತುಂಬ ಗೌರವಿಸುವ ಹಿರಿಯ ಕವಿಯೊಬ್ಬರಿಂದ ಬಂದದ್ದು; ಮತ್ತೊಂದು, ರಂಗಭೂಮಿಯ ನನ್ನ ಹಳೆಯ ಗೆಳೆಯರು ಮತ್ತು ಸಹೋದ್ಯೋಗಿಯೊಬ್ಬರಿಂದ ಬಂದದ್ದು. ಆಬಳಿಕ, ಆ ಕವಿಗಳೊಡನೆ ವ್ಹಾಟ್ಸಾಪ್‍ನಲ್ಲಿಯೇ ನಡೆಸಿದ ಚುಟುಕು ಸಂದೇಶಗಳ ಸಣ್ಣ ಸಂವಾದದಿಂದಾಗಿ ನಾನು ಮತ್ತಷ್ಟು ನೊಂದೆ. ರಂಗಭೂಮಿಯ ಆ ನನ್ನ ಗೆಳೆಯರೊಡನೆಯೂ ವ್ಹಾಟ್ಸಾಪ್‍ನಲ್ಲಿ ನಡೆದ ಅಂಥ ಒಂದು ಸಂವಾದದಿಂದ ಗಾಬರಿಬಿದ್ದು, ಆ ಗೆಳಯರಿಗೆ ನೇರವಾಗಿ ಕರೆಮಾಡಿದೆ. ನಮ್ಮಿಬ್ಬರ ನಡುವೆ ಒಂದಲ್ಲ ಎರಡು ಸಲ ದೀರ್ಘವಾದ ಮಾತುಕತೆ ನಡೆಯಿತು. ಅದು ನನ್ನನ್ನು ಇನ್ನಷ್ಟು ಅಲ್ಲಾಡಿಸಿ, ಗಾಸಿಗೊಳಿಸಿತು. ಅದೆಲ್ಲವುದರ ವಿವರ ಇಲ್ಲಿ ಬೇಡ. ಈಕೆಳಗಿನ ಒಕ್ಕಣೆಯೇ ಆ ವಿವರದ ಒಂದು ಹೊಳಹನ್ನು ಓದುಗರಿಗೆ ದನಿಸುತ್ತದೆ ಅಂದುಕೊಳ್ಳುತ್ತೇನೆ.

ಮೂರನೆಯ ಸಂದೇಶ ಬಂದದ್ದು ನಾನು ಬಹಳ ಗೌರವಿಸುವ ಮತ್ತು ಪ್ರೀತಿಸುವ ಭೌತವಿಜ್ಞಾನಿ ಗೆಳೆಯರೊಬ್ಬರಿಂದ. ‘ನಿಮ್ಮ ಲೇಖನ ಓದಿ, ಚಿಂತೆಗಿಟ್ಟುಕೊಂಡಿದೆ. ನಿಮ್ಮ ಜೊತೆ ಮಾತಾಡಬೇಕು. ನಿಮಗೆ ಕರೆ ಮಾಡಲೆ?’ ಎಂದು ಬರೆದಿದ್ದರು ಅವರು. ಕೂಡಲೆ ಹೂಂ ಎಂದೆ; ಅವರು ಕರೆಮಾಡಿದರು; ತುಂಬ ಹೊತ್ತು ಮಾತಾಡಿಕೊಂಡೆವು. ಆ ಗೆಳೆಯರು ನನ್ನ ಆ ಲೇಖನದ ಒಟ್ಟಂದದ ಆಶಯವನ್ನು ಒಪ್ಪಿದರು. ಆದರೆ, “ಹುಬ್ಬಳ್ಳಿಯಲ್ಲಿ ಆ ಮೂವರು ಕಾಶ್ಮೀರೀ ಹುಡುಗರು ಪಾಕಿಸ್ತಾನ್ ಜ಼ಿಂದಾಬಾದ್ ಎಂಬ ಘೋಷಣೆ ಕೂಗಿದ್ದನ್ನು ನೀವು ಎಂಥೆಂಥದೋ ಸಮಜಾಯಿಷಿ ನೀಡಿ ಸಮರ್ಥಿಸುತ್ತಿದ್ದೀರಿ. ಅವರು ಹಾಗೆ ಕೂಗಿದ್ದು ಅಸಮರ್ಥನೀಯ; ನೀವು ಅದಕ್ಕೆ ಸಮಜಾಯಿಷಿ ನೀಡುತ್ತಿರುವುದು ಅಸಮಂಜಸ. ಅದರಿಂದ, ನೀವು ಇಂಥ ವಿಷಯಗಳಲ್ಲಿ ಹೇಳುವ ಮಾತುಗಳನ್ನು ಇನ್ನು ಮುಂದೆ ಗಂಭೀರವಾಗಿ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ’ ಎಂದೆಲ್ಲ ಟೀಕಿಸಿದರು. ಆ ನನ್ನ ಗೆಳೆಯರು ವಿಜ್ಞಾನದ ತಮ್ಮ ಕೆಲಸದಲ್ಲಿ ಧೀಮಂತಿಕೆಯ ಸಾಧನೆಮಾಡಿದವರು; ಮೇಲಾಗಿ, ಸಾಮಾಜಿಕ, ತಾತ್ತ್ವಿಕ ವಿಷಯಗಳನ್ನು ಕುರಿತಾಗಿ ತಮ್ಮ ಆತ್ಮಸಾಕ್ಷಿಯನ್ನು ಜಾಗೃತವಾಗಿಟ್ಟುಕೊಂಡವರು. ಅವರ ಮಾತನ್ನು ನಾನು ಸುಲಭವಾಗಿ ತಳ್ಳಿಹಾಕುವುದು ತರವಲ್ಲ ಅನ್ನಿಸಿತು. ಕೂಡಲೆ, ಆ ಲೇಖನದಲ್ಲಿ ನಾನು ಬರೆದದ್ದರ ಪರಾಮರ್ಶೆಯಲ್ಲಿ ತೊಡಗಿಕೊಂಡೆ. ಅದರಿಂದ ಹೊಮ್ಮಿದ್ದು ಈಕೆಳಗಿದೆ.

ಪ್ರಜಾಪೀಡನೆಗೆ ಕಾನೂನಿನ ಬಳಕೆಯೇ? ಎಂಬ ಲೇಖನದಲ್ಲಿ ನಾನು ಆಡಿದ ಕೆಲವು ಮಾತು ಕುರಿತು ಸ್ಪಷ್ಟನೆ ನೀಡುವುದು, ಕೆಲವು ವಿಷಯಗಳನ್ನು ಅಲ್ಲಿ ಹೇಳಿದುದಕ್ಕಿಂತ ಹೆಚ್ಚು ತಿಳಿ–ವಿಸ್ತಾರವಾಗಿ, ಆತ್ಮವಿಮರ್ಶಾತ್ಮಕವಾಗಿ ಲೋಕದ ಮುಂದಿಟ್ಟು ನಮ್ಮಂಥವರ ಗಾಬರಿ, ಗಾಸಿ, ಮತ್ತು ದನಿಗಳ ಹಿಂದೆಯಿರುವ ವಿವೇಚನೆಯನ್ನು ಸಾವಧಾನವಾಗಿ ಹೇಳುವುದು ನನ್ನ ಕರ್ತವ್ಯವೆಂದು ತಿಳಿದು ಈಗ ಈ ಲೇಖನ ಬರೆಯುತ್ತಿದ್ದೇನೆ.

ಆ ಕವಿ ಮತ್ತು ರಂಗನಟರೊಡನೆಯ ಸಂದೇಶ ವಿನಿಮಯ ಮತ್ತು ಫೋನಿನಲ್ಲಿನ ಮಾತುಕತೆಗಳಿಂದಾಗಿ ನನಗಾದ ಗಾಬರಿ, ಗಾಸಿಗಳಿಗೆ ಇದೇ ಈ ಲೇಖನದ ಕಟ್ಟಕಡೆಯ, ಪ್ರಶ್ನಾರ್ಥಕವಾದ, ಒಂದು ವಾಕ್ಯದಲ್ಲಿ (ಮತ್ತು ನೀವು ಈಗಾಗಲೇ ಓದಿರುವ ಇದರ ಶೀರ್ಷಿಕೆಯಲ್ಲಿ) ದನಿಕೊಟ್ಟಿದ್ದೇನೆ.

ಆದರೆ ಆ ವಾಕ್ಯವಾಗಲಿ, ಆ ಶೀರ್ಷಿಕೆಯಾಗಲಿ, ಮೇಲೆ ಪ್ರಸ್ತಾವಿಸಿದ ನನ್ನ ವಿಜ್ಞಾನಿ ಗೆಳೆಯರು ನನಗೆ ನೀಡಿದ ಪ್ರತಿಕ್ರಿಯೆಗೆ ಅನ್ವಯಿಸುವುದಿಲ್ಲ. ಅದಕ್ಕೆ ಹಲವು ಕಾರಣಗಳಿವೆ. ಆ ಗೆಳೆಯರು ನನ್ನ ಲೇಖನವನ್ನು, ಆ ಲೇಖನವು ಯಾವ ವಿಷಯ, ವಿದ್ಯಮಾನಗಳನ್ನು ಕುರಿತದ್ದಾಗಿದೆಯೋ ಆ  ವಿಷಯ ಮತ್ತು ವಿದ್ಯಮಾನಗಳನ್ನು, ಮತ್ತು ಅವೆಲ್ಲವುಗಳನ್ನು ಕುರಿತಾಗಿ ತಮಗೆ ಅನ್ನಿಸಿದ್ದನ್ನು, ಗಂಭೀರವಾಗಿ ತೆಗೆದುಕೊಂಡರು; ಕಾಳಜಿವಹಿಸಿ, ”ಮಾತಾಡಬೇಕು,” ಎಂದು ಸಂದೇಶ ಕಳಿಸಿದರು; ಮಾತಾಡಲು ನಾನು ಕೂಡ ಉತ್ಸುಕತೆ ತೋರಿದಾಗ, ಕೂಡಲೆ ಕರೆಮಾಡಿ ಚರ್ಚಿಸಿದರು. ಬಳಿಕ ನಾನೂ ಅವರಿಗೆ ಕರೆಮಾಡಿದೆ. ಹಾಗೆ ನಮ್ಮ ನಡುವೆ ಎರಡುಮೂರು ಬಾರಿ ಮಾತುಕತೆ ಆಯಿತು. ಈ ವಿಷಯದಲ್ಲಿ ಅವರು ಹೀಗೆಲ್ಲ ವ್ಯವಹರಿಸಿದರೇ ಹೊರತು ಸಿನಿಕತನದ ಒಂದು ಸಂದೇಶ ಬರೆದೊಗೆದು ಸುಮ್ಮನಾಗಲಿಲ್ಲ. ಗೆಳೆಯನೊಬ್ಬ ಬರೆದದ್ದನ್ನು ಗಂಭೀರವಾಗಿ ತೆಗೆದುಕೊಂಡು, ಅದರ ನೆಪವಾಗಿ ಲೋಕದ ಗತಿಸ್ಥಿತಿ, ಸುಖದುಃಖಗಳಲ್ಲಿ ನಿಜವಾಗಿ ತೊಡಗಿಕೊಳ್ಳಲು ಅವರು ತಯಾರಿದ್ದರು. ಅವರ ಪ್ರಶ್ನೆಗಳು ನನ್ನ ಗಾಸಿಗೊಳಿಸಲಿಲ್ಲ; ಎಚ್ಚರಿಸಿದವು. ಅದಕ್ಕಾಗಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ.

ಅಮೂಲ್ಯಾ ಲಿಯೊನಾ ನೊರೊನ್ಹಾ

ಅಮೂಲ್ಯಾ ಪ್ರಕರಣ ಕುರಿತು ಒಂದು ಮಾತು. ಆ ಹುಡುಗಿ ಸಣ್ಣದೊಂದು ಅಚಾತುರ್ಯವೆಸಗಿ ದೊಡ್ಡ ಆಪತ್ತನ್ನು ಬರಮಾಡಿಕೊಂಡಿದ್ದಾಳೆ. ಪ್ರಭುತ್ವವು ಅವಳಮೇಲೆ ಹೊರಿಸಿರುವ ಆಪಾದನೆಯಲ್ಲಿ, ಹೂಡಿರುವ ಮೊಕದ್ದಮೆಯಲ್ಲಿ ಹುರುಳೇ ಇಲ್ಲ ಅನ್ನುವುದು, ಅವಳ ವಿಷಯದಲ್ಲಿ ಅದು ಬಹಳ ದೊಡ್ಡ ಅನ್ಯಾಯವೆಸಗುತ್ತಿದೆ ಅನ್ನುವುದು ಸ್ವಲ್ಪವಾದರೂ ನ್ಯಾಯಪ್ರಜ್ಞೆಯಿರುವ ಎಲ್ಲರಿಗೂ ಸಾಕಷ್ಟು ಸ್ಪಷ್ಟವಾಗಿದೆ. ಆದ್ದರಿಂದ ಆ ಪ್ರಕರಣ ಕುರಿತು ಇಲ್ಲಿ ಹೆಚ್ಚೇನೂ ಬರೆಯದೆ, ಹುಬ್ಬಳ್ಳಿಯಲ್ಲಿ ದಸ್ತಗಿರಿಯಾದ ಹುಡುಗರನ್ನು ಕುರಿತಾಗಿಯೇ ಬರೆಯುತ್ತೇನೆ. ಆದರೆ, ಲೇಖನದ ಕೊನೆಯಲ್ಲಿ, ಅಮೂಲ್ಯಾ ಪ್ರಕರಣವೂ ಸೇರಿದಂತೆ ಈಚೆಗೆ ಕರ್ನಾಟಕದಲ್ಲಿ ನಡೆದಿರುವ ಅಂಥ ಕೆಲವು ಪ್ರಕರಣಗಳಿಂದ ನನಗೆ ಮತ್ತು ನನ್ನಂಥವರಿಗೆ ಆಗುತ್ತಿರುವ ಕಳವಳವನ್ನು ಮತ್ತು ಅದರಿಂದ ಎದ್ದಿರುವ ಪ್ರಶ್ನೆಗಳನ್ನು ಮುಂದಿಡುತ್ತೇನೆ.

ಪಾಕಿಸ್ತಾನ್ ಜ಼ಿಂದಾಬಾದ್

ಮೊದಲನೆಯದಾಗಿ, ಆ ಲೇಖನದಲ್ಲಿ, ಪಾಕಿಸ್ತಾನ್ ಜ಼ಿಂದಾಬಾದ್ ಎಂಬ ಎರಡು ಪದಗಳನ್ನು ನಾನು ವಿವರಿಸಿಕೊಂಡ ಪರಿಯನ್ನು ಮತ್ತು ಆ ಪರಿಯ ಹಿಂದೆಯಿರುವ ಕಾರಣಗಳನ್ನು ಹೇಳುತ್ತೇನೆ.

ಪಾಕಿಸ್ತಾನ್ ಎಂಬ ಮಾತನ್ನು ನಾನು ವಿವರಿಸಿಕೊಂಡದ್ದು ಅದು ನಮ್ಮ ನೆರೆಯ ದೇಶವೊಂದರ ಹೆಸರು ಎಂಬ ನೆಲೆಯಲ್ಲಿ ಮಾತ್ರ. ಹಾಗೆಯೆ, ಜ಼ಿಂದಾಬಾದ್ ಅನ್ನುವುದನ್ನು, ಆ ಮಾತಿಗೆ ಇರುವ ಶುದ್ಧಾಂಗ, ಅಥವಾ ಕೇವಲ, ಭಾಷಿಕವಾದ ನೆಲೆಯ ಅರ್ಥವನ್ನು ಮುಂದಿಡುತ್ತ ಮಾತ್ರ. ಅರ್ಥಾತ್,  ಜ಼ಿಂದಾಬಾದ್ ಎಂಬ ಮಾತಿಗೆ ನಿಘಂಟುವು ಕೊಡುವ ಅರ್ಥವನ್ನು ಮುಂದಿಡುತ್ತ ಮಾತ್ರ. ಅಷ್ಟರಮೇಲೆ, ಆ ಎರಡೂ ಪದಗಳು ಕೂಡಿ ಆದ ನುಡಿಗಟ್ಟನ್ನು ಆಡಿದಾಗ, ಸರಳವಾದ ನಿಘಂಟುವೊಂದು ಕೊಡಬಹುದಾದ ಸರಳವಾದ ಅರ್ಥವನ್ನು ಮುಂದಿಡುತ್ತ ಮಾತ್ರ. ಅರ್ಥಾತ್,  ಪಾಕಿಸ್ತಾನವೆಂಬ ದೇಶಕ್ಕೆ ಒಳ್ಳೆಯದಾಗಲಿ ಎಂಬ ಅರ್ಥವನ್ನು ಮುಂದಿಡುತ್ತ ಮಾತ್ರ . ಶುದ್ಧಾಂಗ ಭಾಷಿಕವಾದ ನೆಲೆಯಲ್ಲಿ, ಮತ್ತು ಅಮೂರ್ತ ನೈತಿಕತೆಯ ತಾತ್ತ್ವಿಕ ನೆಲೆಯಲ್ಲಿ, ಅದೇನೂ ತಪ್ಪಲ್ಲ.

ನಮ್ಮ ದೇಶದ ಸಂವಿಧಾನವನ್ನು ಎತ್ತಿಹಿಡಿಯಬೇಕಾದ ನಮ್ಮ ನ್ಯಾಯಾಲಯಗಳು ಕೂಡ, ಮೇಲೆ ಹೇಳಿದ ಆ ಅದೇ ತತ್ತ್ವದ ಮತ್ತು ಅರ್ಥೈಸುವಿಕೆಯ ನೆಲೆಯಲ್ಲಿ, ಪಾಕಿಸ್ತಾನ್ ಜ಼ಿಂದಾಬಾದ್ ಎಂಬ ಘೋಷಣೆಯು ನಿರುಪದ್ರವಕಾರಿಯಾದದ್ದು, ಸಾಧುವಾದದ್ದು ಎಂದೇ ಹೇಳುತ್ತವೆ ಅನ್ನುವುದು ಕೂಡ ನನ್ನ ಮಾತಿನ ಇಂಗಿತವಾಗಿತ್ತು.

ಅಂಥ ಇಂಗಿತವನ್ನು ಮುಂದಿಡುವಾಗ ನಾನು ಪಾಕಿಸ್ತಾನದ ಆಳುವವರ್ಗದೊಂದಿಗೆ ನಮ್ಮ ದೇಶದ ಆಳುವವರ್ಗಕ್ಕೆ ಇರುತ್ತ ಬಂದಿರುವ ನಿರಂತರ ಅಪನಂಬಿಕೆ ಮತ್ತು ಘರ್ಷಣೆಗಳಿಂದ ಕೂಡಿದ ಸಂಬಂಧವನ್ನು ನಿರ್ಲಕ್ಷ್ಯಿಸಿದ್ದೆ. ಪಾಕಿಸ್ತಾನವನ್ನು ಆಳುವ ಶಕ್ತಿಗಳಾದ ಅಲ್ಲಿನ ಸೈನ್ಯದ ದಂಡಾಧಿಕಾರಿಗಳು, ಮತ್ತು ಆ ಸೈನ್ಯದ ಒಂದು ಭಾಗವಾದ ಐಎಸ್‍ಐ ಸಂಘಟನೆಯು, ಭಯೋತ್ಪಾದಕರನ್ನು ಸಾಕುವುದು, ಹಾಗೂ ನಮ್ಮ ದೇಶದಮೇಲೆ, ಮತ್ತು ಇತರ ದೇಶಗಳ, ದಾಳಿಮಾಡಲು ಅವರಿಗೆ ಬೆಂಬಲ ನೀಡುವುದು ಮುಂತಾದ್ದೆಲ್ಲವನ್ನೂ ಅಲಕ್ಷ್ಯಿಸಿದ್ದೆ.

ತಾಲಿಬ್ ಮಜೀದ್, ಬಾಸಿತ್ ಆಸಿಫ್ ಸೋಫಿ, ಅಮೀರ್ ಮೊಹಿಯುದ್ದೀನ್ ವಾಹಿ

ಹುಬ್ಬಳ್ಳಿಯಲ್ಲಿ ಆ ಘೋಷಣೆಯನ್ನು ಕೂಗಿದ ಮೂವರು ಹುಡುಗರ ಹೆಸರುಗಳು, ಕ್ರಮವಾಗಿ, ತಾಲಿಬ್ ಮಜೀದ್, ಬಾಸಿತ್ ಆಸಿಫ್ ಸೋಫಿ, ಮತ್ತು ಅಮೀರ್ ಮೊಹಿಯುದ್ದೀನ್ ವಾಹಿ.

ಆ ಮೂವರನ್ನು ಅವರವರ ಹೆಸರುಗಳಿಂದ ಗುರುತಿಸಬೇಕಾದದ್ದು ನಮ್ಮ ಧರ್ಮ. ಅವರು ಪ್ರತಿಯೊಬ್ಬರೂ, ಮೊತ್ತಮೊದಲಿಗೆ, ಮತ್ತು ಕಟ್ಟಕಡೆಗೂ – ನನ್ನಂತೆ, ನಿಮ್ಮಂತೆ – ಒಬ್ಬ ಪ್ರತ್ಯೇಕ ವ್ಯಕ್ತಿ ಎಂದು ಒತ್ತಿಹೇಳಲು ಇಲ್ಲಿ ಅವರ ಹೆಸರುಗಳನ್ನು ಮೊದಲಿಗೇ ಕೊಟ್ಟಿದ್ದೇನೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಇರುವಂತೆ, ಆ ಮೂವರು ಹುಡುಗರಿಗೆ ಕೂಡ ಅವರವರ  ಹೆಸರುಗಳಿವೆ; ಅವರನ್ನು ನಾವು ಅವರ ತಥಾಕಥಿತ ಮತಧರ್ಮದ ಹೆಸರು ಮತ್ತು ನಾಡಿನ ಹೆಸರುಗಳ ಹಣೆಪಟ್ಟಿ ಹಚ್ಚಿ, ಮಂದೆಯಲ್ಲಿನ ಅನಾಮಿಕರು ಅವರು ಎಂಬಂತೆ ನೋಡಿ, ಅವರ ವ್ಯಕ್ತಿಗತ ಗುರುತುಗಳಿಗೆ ಕುರುಡಾಗಿರಬಾರದು; ಅವರಿಗೆ ಆ ಗುರುತಗಳಿಲ್ಲವೆಂದು ನಟಿಸಬಾರದು; ಆ ಗುರುತುಗಳನ್ನು ಅಳಿಸಿಹಾಕಬಾರದು.

ಇಷ್ಟು ವಿಷಯ ಮನವರಿಕೆಯಾಗಿ, ಒಪ್ಪಿಗೆಯಾದಲ್ಲಿ, ನಾವು ಈ ಪ್ರಕರಣದ ಬೇರೆ ವಿವರಗಳನ್ನು ನಿರುಕಿಸಬಹುದು.

ಈ ಹುಡುಗರು ಪಾಕಿಸ್ತಾನ್ ಜ಼ಿಂದಾಬಾದ್ ಎಂಬ ಘೋಷಣೆ ಕೂಗಿದ್ದು ನಿಜವೇ ಹೌದು ಎಂದಾದರೆ, ಕಾಶ್ಮೀರದ ಈಚಿನ ಹಲವು ದಶಕಗಳ ಇತಿಹಾಸದ ಹಿನ್ನೆಲೆಯಲ್ಲಿ,

  • ಆ ಹುಡುಗರು ಭಯೋತ್ಪಾದಕರ ಸಂಪರ್ಕ ಹೊಂದಿರಬಹುದಾದವರಲ್ಲವೆ
  • ಅವರು ಹಿಂಸಾತ್ಮಕವಾದ ಕೃತ್ಯಗಳಲ್ಲಿ ತೊಡಗಿ ನಮ್ಮ – ತಮ್ಮ ದೇಶವಾದ ಭಾರತಕ್ಕೆ ಹಾನಿಮಾಡಬಹುದಾದವರಲ್ಲವೆ
  • ಮತ್ತು, ಹಾಗಾಗಿಯೇ, ಅವರು ಅಂಥ ಘೋಷಣೆಯನ್ನು ಕೂಗಿದರು ಹಾಗೂ ಅಂತರ್ಜಾಲದಲ್ಲಿ ಆ ಚಿಕ್ಕ ವಿಡಿಯೋವನ್ನು ಹಂಚಿಕೊಂಡರಲ್ಲವೆ

ಎಂಬೆಲ್ಲ ಪ್ರಶ್ನೆಗಳು ಏಳುವುದು ಅಸಹಜವಲ್ಲ, ನಿಜ.

ಅದೇ ತರ್ಕ ಮತ್ತು ಅನುಮಾನಗಳ ಸರಣಿಯನ್ನು ಹಿಡಿದು, ಆ ಹುಡುಗರ ಮೇಲೆ ಕಠಿಣವಾದ ಕಾನೂನನ್ನು ಆಧರಿಸಿದ ಮೊಕದ್ದಮೆ ಹೂಡಬೇಕು ಎಂದು ವಾದಿಸುವುದು ಕೂಡ ಅಸಹಜವಾಗಲಾರದು, ನಿಜವೇ.

ಆ ಲೇಖನವನ್ನು ಬರೆಯುವಾಗ ನನಗೆ ಇದೆಲ್ಲ ಹೊಳೆದಿರಲ್ಲ, ಅನ್ನಿಸಿರಲಿಲ್ಲ ಎಂದಲ್ಲ. ಇದೆಲ್ಲ ನನಗೂ ಹೊಳೆದಿತ್ತು, ಅನ್ನಿಸಿತ್ತು. ಹಾಗಿದ್ದೂ ನಾನು ಆ ಹೊಳಹು ಮತ್ತು ಅನ್ನಿಸಿಕೆಗಳನ್ನು ನಿರ್ಲಕ್ಷ್ಯಿಸಿದ್ದು, ಅಲಕ್ಷ್ಯಿಸಿದ್ದು ಯಾಕೆ ಎಂದು ಈಕೆಳಗೆ ವಿವರಿಸುತ್ತೇನೆ:

  • ಆ ಹುಡುಗರು ಮುಸಲ್ಮಾನರು.

ಅವರು ಮುಸಲ್ಮಾನರಾಗಿರುವುದೇ ಅವರನ್ನು, ಹಲವರ ಕಣ್ಣಲ್ಲಿ ಅಪರಾಧಿಗಳನ್ನಾಗಿಸುತ್ತದೆ.

  • ಮೇಲಾಗಿ, ಕಾಶ್ಮೀರದವರು. ಅದರಮೇಲೆ, ಪಾಕಿಸ್ತಾನ ಜ಼ಿಂದಾಬಾದ್ ಎಂದು ಕೂಗಿದ್ದಾರೆ ಬೇರೆ!

ಅಲ್ಲಿಗೆ ಅವರು ಕೇವಲ ಅಪರಾಧಿಗಳಾಗಿ ಕಾಣಿಸದೇ ಭಯೋತ್ಪಾದಕರಾಗಿ ಕಾಣಿಸತೊಡಗುತ್ತಾರೆ.

ಸಲೀಸು-ಸುಲಭವಾದ ಅಂಥ ಮೆಳ್ಳಗಣ್ಣನೋಟವನ್ನು ತಪ್ಪಿಸಿ, ಆ ಹುಡುಗರನ್ನು ವಿದ್ಯಾರ್ಥಿಗಳು ಎಂದು ಕಾಣುವುದು ಮತ್ತು ಕಾಣಿಸುವುದು ನನಗೆ ಆ ಲೇಖನದಲ್ಲಿ ಮುಖ್ಯವಾಯಿತು; ಮತ್ತು ಈಗಲೂ ಹಾಗೆ ಕಾಣುವುದೇ ಮುಖ್ಯವಾಗಿದೆ.

ಆ ಲೇಖನದಲ್ಲಿ ನಾನು ಆ ಹುಡುಗರನ್ನು ಮುಸಲ್ಮಾನರು ಎಂದು ಕೂಡ ಗುರುತಿಸಲಿಲ್ಲ. ನನ್ನಮಟ್ಟಿಗೆ ಅವರು – ಆಗಲೂ, ಈಗಲೂ – ತರುಣ ವಿದ್ಯಾರ್ಥಿಗಳು, ಕಾಶ್ಮೀರದಿಂದ ನಮ್ಮಲ್ಲಿಗೆ ಬಂದು ಹುಬ್ಬಳ್ಳಿಯಲ್ಲಿ ಓದುತ್ತಿರುವವರು, ಅಷ್ಟೇ. ಪೊಲೀಸರ ನೋಟ ಬೇರೆಯದೇ ಆಗಿರುತ್ತದೆ, ಗೊತ್ತು. ಆದರೆ, ನಾನು ಪೊಲೀನವನಲ್ಲ. ಆ ಲೇಖನದಲ್ಲಿಯೇ ಸ್ಪಷ್ಟಪಡಿಸಿರುವಂತೆ, ಅಲ್ಲಿ ನನ್ನ ನೋಟ ಅಧ್ಯಾಪಕನೂ, ತಂದೆಯೂ ಆಗಿರುವ ಭಾರತೀಯ ಪ್ರಜೆಯೊಬ್ಬನದ್ದು.

ಆದರೆ, ಅಲ್ಲಿಗೂ,

  • ಅವರು ವಿದ್ಯಾರ್ಥಿಗಳು ಎಂದ ಮಾತ್ರಕ್ಕೆ ಭಯೋತ್ಪಾದಕರಾಗಿರಬಾರದು ಯಾಕೆ,
  • ಅಥವಾ ಭಯೋತ್ಪಾದನೆಯ ಆಲೋಚನೆಗಳು ಅವರಲ್ಲಿ ಮೊಳಕೆಯೊಡೆಯುತ್ತಿರಬಾರದು ಯಾಕೆ

ಎಂಬ ಪ್ರಶ್ನೆಗಳಿಗೆ ಉತ್ತರಿಸಿದಂತಾವುದಿಲ್ಲ, ನಿಜ. ಈಕೆಳಗೆ ಆ ಪ್ರಶ್ನೆಗಳಿಗೂ ಉತ್ತರವಿದೆ.

ಅವರು ಭಯೋತ್ಪಾದಕರು, ಅಥವಾ ಭಯೋತ್ಪಾದನೆಯ ಇರಾದೆಯು ಅವರಲ್ಲಿ ಚಿಗುರೊಡೆಯುತ್ತಿದೆ, ಅನ್ನುವುದು ಸ್ವಲ್ಪವಾದರೂ ಋಜುವಾಗಬೇಕಲ್ಲವೇ? ಅದಕ್ಕೆ ಮುನ್ನವೇ ಅವರಮೇಲೆ ದೇಶದ್ರೋಹದ ಮೊಕದ್ದಮೆ ಹೂಡುವುದು ತುಂಬ ಅನ್ಯಾಯವಲ್ಲವೇ?

ಅವರು ಪಾಕಿಸ್ತಾನ್ ಜ಼ಿಂದಾಬಾದ್ ಎಂದು ಕೂಗಿದರು ಎಂದಷ್ಟಕ್ಕೆ ಪ್ರಭುತ್ವವು ಅವರಮೇಲೆ ಕ್ರಮ ಕೈಗೊಳ್ಳಲೇಬೇಕಿದ್ದಲ್ಲಿ, ಮೊದಲು ಅವರಮೇಲೆ ಸಣ್ಣದೊಂದು ಮೊಕದ್ದಮೆ ದಾಖಲಿಸಿ, ಅವರನ್ನು ವಿಚಾರಣೆಗೆ ಒಳಪಡಿಸಿ,  ಹಲವು ಚಾಚುಗಳ ತನಿಖೆ ನಡೆಸಿ, ಅದರ ಫಲವಾಗಿ, ಅವರಿಗೂ ಭಯೋತ್ಪಾದನೆಗೂ (ಅಥವಾ ಭಯಂಕರವಾದ ಅಂಥ ಬೇರೆ ಅಪರಾಧಕ್ಕೂ) ನಂಟಿದೆ ಎಂಬ ಅನುಮಾನವು ಗಟ್ಟಿಯಾದ ಬಳಿಕ, ಅನಿವಾರ್ಯವಾದರೆ ಮಾತ್ರ, ಅವರಮೇಲೆ ದೇಶದ್ರೋಹದ ಮೊಕದ್ದಮೆ ಹೇರಬೇಕಿತ್ತಲ್ಲವೇ? ಅದು ಯಾವುದೂ ಆಗಲಿಲ್ಲವಲ್ಲ ಇಲ್ಲಿ! ಬದಲಿಗೆ, ಅವರನ್ನು ಇಡೀ ದಿನ ವಿಚಾರಿಸಿದ ಪೊಲೀಸರು ಅವರು ಅಂಥ ಅಪಾಯಕಾರೀ ಹುಡುಗರಲ್ಲ ಎಂದು ತೀರ್ಮಾನಿಸಿ  ಬಿಟ್ಟುಬಿಟ್ಟರಲ್ಲವೇ?

ಅಷ್ಟಾದಮೇಲೆ, ಪ್ರಭುತ್ವವು ಆ ಹುಡುಗರಮೇಲೆ ದೇಶದ್ರೋಹದ ಮೊಕದ್ದಮೆ ಯಾಕೆ, ಹೇಗೆ ಹೂಡಿತು? ಅದಾದದ್ದು, ಸಂಘ ಪರಿವಾರದ ಸಂಘಟನೆಯೊಂದು ದೊಂಬಿ ಎಬ್ಬಿಸಿ, ರಂಪ ಮಾಡಿದ ಬಳಿಕವೇ ತಾನೆ? ಈಗಿನ ಕರ್ನಾಟಕ  ಸರಕಾರದಲ್ಲಿರುವ ಕೆಲವರ ಒತ್ತಡದಮೇರೆಗೆ, ಅವರಮೇಲೆ ಪ್ರಭಾವ ಬೀರಿದ ಸಂಘ ಪರಿವಾರದ ಬೇರೆ ನಾಯಕರುಗಳ ಒತ್ತಡದಮೇರೆಗೆ ತಾನೆ? ಅಲ್ಲಿಗೆ, ನಮ್ಮ ರಾಜ್ಯದಲ್ಲಿನ ಕಾನೂನು ಪಾಲನೆ ಮತ್ತು ನ್ಯಾಯವಂತಿಕೆಯ ಶಿಸ್ತು, ಶಿಷ್ಟಾಚಾರ, ತನಿಖೆಯ ಕ್ರಮ ಮುಂತಾದ್ದೆಲ್ಲವೂ ರಾಜ್ಯದ ಪೊಲೀಸಿನವರ ಕೈತಪ್ಪಿ, ದೊಂಬಿ ಎಬ್ಬಿಸುವವರ ಕೈಗೆ, ಅವರ ನಾಯಕರುಗಳ ಕೈಗೆ ಜಾರಿದಂತಾಗಲಿಲ್ಲವೇ?

ಇಷ್ಟಾಗಿ, ನಾನು ಆ ಲೇಖನದಲ್ಲಿಯೇ ಹೇಳಿರುವಂತೆ, ಈ ಪ್ರಕರಣದಿಂದ ಹುಟ್ಟಿದ ಸಮಸ್ಯೆಯನ್ನು ಬಹುಶಃ ಆ ಕಾಲೇಜಿನ ಆಡಳಿತದಮಟ್ಟದಲ್ಲಿಯೇ ಒಂದಷ್ಟು ಗದರಿಕೆ, ಒಂದಷ್ಟು ಅನುನಯದ ಮಾತು ಮತ್ತು ಬುದ್ಧಿಮಾತಿನಿಂದ ಬಗೆಹರಿಸಬಹುದಿತ್ತಲ್ಲವೇ?

ಇದಿಷ್ಟು ಖಡಾಖಂಡಿತ: ಒಬ್ಬ ಮೇಷ್ಟರಾಗಿ ನಾನು ವಿದ್ಯಾರ್ಥಿಗಳನ್ನು ಅವರು ವಿದ್ಯಾರ್ಥಿಗಳು ಎಂದು ನೋಡದೇ ಕ್ರಿಮಿನಲ್‍ಗಳು ಎಂಬಂತೆ ನೋಡಿದರೆ, ಆಗ ನಾನೊಬ್ಬ ಮೇಷ್ಟರೇ ಆಗಿರುವುದಿಲ್ಲ: ಸ್ವತಃ ಕ್ರಿಮಿನಲ್ ಆಗಿರುತ್ತೇನೆ. ಒರಟು, ನಾಟಕೀಯವಾಗಿ ಹೇಳುವುದಾದರೆ, ಆಗ ನನ್ನಂಥ  ನಾಲಾಯಕ್ ಮೇಷ್ಟರನ್ನು ‘ನೇಣು ಹಾಕೋದು’ ವಾಸಿ.

ಕಾಶ್ಮೀರ, ಘನಘೋರ ದುಃಖ

ಕಳೆದ ಹಲವು ದಶಕಗಳಿಂದ ಕಾಶ್ಮೀರವು ಬಹಳ ನಲುಗಿದೆ; ಅಪಾರವಾದ ಸಾವು, ನೋವು, ಅಪಾರವಾದ ಹಿಂಸಾಚಾರ ಕಂಡಿದೆ.

ಕಾಶ್ಮೀರದ ಒಂದು ಇಡೀ ಪೀಳಿಗೆ ತಾನು ಹುಟ್ಟಿದಾಗಿನಿಂದ (ಅಕ್ಷರಶಃ, ತಾಯಹೊಟ್ಟೆಯಿಂದ ಹೊರಬರುವ ಗಳಿಗೆಯಿಂದ), ಹೆಚ್ಚುಕಮ್ಮಿ ಪ್ರತಿ ದಿನವೂ ಬುಲೆಟ್ಟು, ಬಾಂಬು, ಗ್ರೆನೇಡು, ಬೂಟಿನ ಸದ್ದು ಕೇಳುತ್ತ,  ಊರಗಲದ ಕರ್ಫ್ಯೂವಿನ ಸೈರನ್ ಕೂಗು ಕೇಳುತ್ತ, ಪೊಲೀಸು ಮತ್ತು ಸೈನ್ಯದ ಜೀಪುಟ್ರಕ್ಕುಗಳ ಮೋಟಾರು ಹಾಗೂ ಸೈರನ್  ಮೊರೆತ  ಕೇಳುತ್ತ, ಸತ್ತವರ ಮನೆಗಳಿಂದ ಹಾಗೂ ಶವಯಾತ್ರೆಗಳಿಗಾಗಿ ಸೇರಿದ ಜನರಿಂದ ಏಳುತ್ತಿದ್ದ ಆಕ್ರಂದನ ಕೇಳುತ್ತ ಬೆಳೆದಿದೆ; ಒಡಹುಟ್ಟಿದವರ ಒಡೆದು ಹೋಳಾದ ತಲೆ, ತೂತು ಬಿದ್ದ ಮುಖ, ತುಂಡುತುಂಡಾದ ಕೈಕಾಲು, ಛಿದ್ರಛಿದ್ರವಾದ ರುಂಡಗಳಿಂದ ಹರಿವ ನೆತ್ತರು ನೋಡುತ್ತ ಬೆಳೆದಿದೆ; ಮನೆಗಳು, ಶಾಲೆಗಳು, ಕಚೇರಿಗಳು ಸಿಡಿದು, ಕುಸಿದುಹೋಗುವುದನ್ನು ನೋಡುತ್ತ ಬೆಳೆದಿದೆ.

ಅನೇಕ ಸಲ, ಅಲ್ಲಿನ ಅನೇಕ ಊರುಗಳ ಅನೇಕ ರಸ್ತೆಗಳಲ್ಲಿ – ತಿಂಗಳುಗಟ್ಟಲೆ, ವರ್ಷಗಟ್ಟಲೆ – ಶಾಲಾಮಕ್ಕಳು, ಬಸುರಿಯರು, ಬಾಣಂತಿಯರು, ರೋಗಿಗಳು, ಮುದುಕರು, ಮುದುಕಿಯರು ಎನ್ನದೆ ಎಲ್ಲರೂ, ರಸ್ತೆಯ ಪ್ರತಿ ಐನೂರು ಮೀಟರುಗಳಿಗೊಮ್ಮೆ ಸೈನ್ಯದವರು ಇಲ್ಲವೆ ಪೊಲೀಸಿನವರು ಒಡ್ಡುವ ತಡೆಗೆ, ತನಿಖೆಗೆ ಒಳಗಾಗಿ (ಹಲವು ವೇಳೆ ವಿನಾ ಕಾರಣ ಅವಮಾನ, ಹೀಯಾಳಿಕೆ ಹಾಗೂ ಮಾನಸಿಕ ಹಿಂಸೆಗೆ ಒಳಗಾಗಿ,  ಮತ್ತು ಕೆಲವೊಮ್ಮೆ ಗಂಡಸರು ಕೆಲವರು ಅಸಲಿ ಪೆಟ್ಟು ತಿಂದು) ಸಾಗಬೇಕಾಗಿರುವುದಿದೆ; ಗಂಡಸರು ಹಲಕೆಲವರು ಸಾವಿಗೀಡಾಗುವುದಿದೆ; ಹಲಕೆಲವರು ಸೈನ್ಯದವರ ಕ್ಯಾಂಪಿನಲ್ಲಿ ಬಂದಿಗಳಾಗಿ ಚಿತ್ರಹಿಂಸೆ ಅನುಭವಿಸುವುದಿದೆ, ಸತ್ತುಹೋಗುವುದಿದೆ. ಇಲ್ಲವೇ, ಕಾಣೆಯಾಗುವುದು, ಕಾಣೆ ಆಗಿಸಲ್ಪಡುವುದಿದೆ. ಹಾಗೆ ಕಾಣೆಯಾಗಿಸಲ್ಪಟ್ಟವರ ಸಂಖ್ಯೆ, ಕಳೆದ ಮೂವತ್ತು ವರ್ಷಗಳಲ್ಲಿ ಹತ್ತಾದರೂ ಸಾವಿರ ಮುಟ್ಟಿದೆ.

ಅದೆಲ್ಲವುದರಿಂದಾಗಿ, ಕಾಶ್ಮೀರದ ಸಾವಿರಾರು ಜನ ಚಿಕ್ಕ ಮಕ್ಕಳಲ್ಲಿ, ಯುವಕಯುವತಿಯರಲ್ಲಿ, (ಅಷ್ಟೇಕೆ, ಅಲ್ಲಿನ ಹಿರಿಯರು ಎಷ್ಟೋ ಜನರಲ್ಲಿ ಕೂಡ) ತುಂಬ ಮಾನಸಿಕ ಖಿನ್ನತೆ ಮತ್ತು ಆತಂಕದ ಕಾಯಿಲೆಗಳು ಕಾಣಿಸಿಕೊಂಡಿವೆ.

ಇಂಥದಕ್ಕೆಲ್ಲ ಕಾರಣ ಪಾಕಿಸ್ತಾನದ ಸೈನ್ಯ, ಐಎಸ್‍ಐ ಮತ್ತು ಅಲ್ಲಿನ, ಹಾಗೂ ಇಲ್ಲಿನ, ಮತಾಂಧ ಭಯೋತ್ಪಾದಕ ಸಂಘಟನೆಗಳವರು ಅನ್ನುವುದರ ಹಾಗೆಯೇ ನಮ್ಮಲ್ಲಿ ಆಡಳಿತ ನಡೆಸಿಹೋದ ಹಲವು ಕೇಂದ್ರ ಸರಕಾರಗಳು ಕಾಶ್ಮೀರದ ಜನತೆಯಮೇಲೆ ನಡೆಸಿದ ದಬ್ಬಾಳಿಕೆಯೂ ಹೌದು ಅನ್ನುವುದನ್ನು ಕನಿಷ್ಠ ನ್ಯಾಯವಂತಿಕೆ ಮತ್ತು ವಸ್ತುನಿಷ್ಠತೆಗಳಿರುವ ಯಾರೇ ಆಗಲಿ ಒಪ್ಪಬೇಕು.

ಆ ಕೇಂದ್ರ ಸರಕಾರಗಳ ಅಡಿಪಾಯವಾದದ್ದು ಭಾರತದ ಪ್ರಭುತ್ವಶಕ್ತಿ ಅನ್ನುವುದನ್ನು ನಾವು ಮರೆಯಬಾರದು. ಆ ಪ್ರಭುತ್ವಶಕ್ತಿಯು ಮೇಲೆ ಹೇಳಿದಂಥದನ್ನೆಲ್ಲ ಮಾಡುವುದು ನಮ್ಮನಿಮ್ಮಂಥ ಪ್ರಜೆಗಳ ಹೆಸರಿನಲ್ಲಿ ಅನ್ನುವುದನ್ನು ಮರೆಯಬಾರದು.

ಮೋದಿ ಸರಕಾರವು ನಮ್ಮನಿಮ್ಮಂಥ ಪ್ರಜೆಗಳ ಹೆಸರಿನಲ್ಲಿ ಆ ಪ್ರಭುತ್ವಶಕ್ತಿಯ ದುರುಪಯೋಗಮಾಡಿ, ಕಳೆದ ಐದು ವರ್ಷಗಳಲ್ಲಿ, ವಿಶೇಷವಾಗಿ ಕಳೆದ ಹಲವು ತಿಂಗಳುಗಳಲ್ಲಿ, ಕಾಶ್ಮೀರದ ಜನರಿಗೆ ಎಸಗಿರುವ ಬಹುಘೋರವಾದ ಅನ್ಯಾಯದಿಂದಾಗಿ ಅವರು ಭಾರತದ ಭಾಗವಾಗಿರಲು ಸಂತೋಷವಾಗಿ ಒಪ್ಪಿಕೊಳ್ಳಲುಬೇಕಾದ ಎಲ್ಲ ದಾರಿಗಳನ್ನೂ ಮುಚ್ಚಿಹಾಕಿದೆ, ಎಂದೆಂದಿಗೂ ಮುಚ್ಚಿಹಾಕಿದೆ.

ನಾವು ಈಗ ನ್ಯಾಯ, ಧರ್ಮನಿಷ್ಠರಾದ ಪ್ರಜೆಗಳಾಗಿ, ಕೇವಲ ಮನುಷ್ಯರಾಗಿ, ಪ್ರಶ್ನಿಸಬೇಕಾದದ್ದು ಆ ಪ್ರಭುತ್ವಶಕ್ತಿಯನ್ನು; ನಿಲ್ಲಬೇಕಾದದ್ದು ಕಾಶ್ಮೀರದ ಜನತೆಯ ಪರವಾಗಿ; ಕಾಶ್ಮೀರ ಒಳಗೂ, ಹೊರಗೂ ದುಃಖದುಮ್ಮಾನದಲ್ಲಿರುವ ಎಲ್ಲರ  ಪರವಾಗಿ; ಸತ್ಯ, ಧೀಮಂತಿಕೆ ಮತ್ತು ದಯಾವಂತಿಕೆಯ ಪರವಾಗಿ.

ಕಣಿವೆಯ ಮಕ್ಕಳ ಮನಸ್ಸು

ಈಗ ಹುಬ್ಬಳ್ಳಿಯಲ್ಲಿ ಬಂಧನಕ್ಕೊಳಗಾಗಿರುವ  ಹುಡುಗರು ಆ ಅಂಥ ಘನಘೋರ ದುಃಖವನ್ನು ಮೂವತ್ತು ವರ್ಷಗಳಿಂದ ಅನುಭವಿಸುತ್ತ ಬಂದಿರುವ ನಿತ್ಯ ಸೂತಕದ ಆ ಕಣಿವೆಯ ಮಕ್ಕಳು.  ನಾವು ಆ ಹುಡುಗರ ಮನಃಸ್ಥಿತಿಯನ್ನು ನೋಡಬೇಕಾದದ್ದು, ಅರ್ಥಮಾಡಕೊಳ್ಳಬೇಕಾದದ್ದು ಕಾಶ್ಮೀರವು ಅನುಭವಿಸುತ್ತ ಬಂದಿರುವ ಆ ಅಪಾರ ನೋವಿನ, ಅನ್ಯಾಯದ ಹಿನ್ನೆಲೆಯಲ್ಲಿ.

ಆ ನೋವಿನ ಇತಿಹಾಸದಲ್ಲಿ, ಅಲ್ಲಿನ ಮುಸ್ಲಿಮೀಯ ಮೂಲಭೂತವಾದಿಗಳು, ಮೂವತ್ತು ವರ್ಷಗಳ ಹಿಂದೆ, ಪಾಕಿಸ್ತಾನದ ಸೈನ್ಯ-ಐಎಸ್‍ಐಗಳ ಕುಮ್ಮಕ್ಕಿನೊಡನೆ ಕಾಶ್ಮೀರೀ ಪಂಡಿತರಮೇಲೆ ದಾಳಿ ಮಾಡಿ, ಆ ಸಮುದಾಯದ ಎಷ್ಟೋ ಜನರನ್ನು ಕೊಂದದ್ದು, ಅವರ ಮನೆಗಳನ್ನು ಸುಟ್ಟದ್ದು, ಅವರ ಹೆಣ್ಣುಮಕ್ಕಳಮೇಲೆ ಅತ್ಯಾಚಾರವೆಸಗಿದ್ದು, ಕಡೆಗೆ ಆ ಇಡೀ ಜನಾಂಗವನ್ನು ಕಣಿವೆಯಿಂದ ಅಟ್ಟಿಬಿಟ್ಟದ್ದು, ಆ ಸಮುದಾಯದವರು ಉಟ್ಟಬಟ್ಟೆಯಲ್ಲಿ ಮನೆತೊರೆದು, ಬಿಡಿಗಾಸಿಲ್ಲದ ನಿರಾಶ್ರಿತರಾಗಿ ಯಾವುಯಾವುದೋ ಊರು-ದೇಶದಲ್ಲಿ ಬಾಳಬೇಕಾಗಿ ಬಂದದ್ದು ಕೂಡ ಸೇರಿಕೊಳ್ಳುತ್ತದೆ, ಹೌದು. ಆದರೆ, ಇಪ್ಪತ್ತರ ಆಸುಪಾಸಿನ ವಯಸ್ಸಿನವರಾದ ಆ ಮೂವರು ಮಕ್ಕಳು (ಮತ್ತು ಅವರಂಥವರು) ಆ ಮುಸ್ಲಿಮೀಯ ಮೂಲಭೂತವಾದಿಗಳ ರಕ್ಕಸ ಕೃತ್ಯಗಳಿಗಾಗಲಿ, ಭಾರತದ ವಿವಿಧ ಸರಕಾರಗಳು ಮತ್ತು ಪ್ರಭುತ್ವವು ಆ ಕಣಿವೆಯಲ್ಲಿ ನಡೆಸುತ್ತಬಂದಿರುವ ದಬ್ಬಾಳಿಕೆ ಮತ್ತು ದಗಲುಬಾಜಿತನಕ್ಕಾಗಲಿ, ಐಎಸ್‍ಐನ ಪೈಶಾಚಿಕತೆಗಾಗಲಿ ಯಾವ ರೀತಿಯಲ್ಲಿಯೂ ಕಾರಣರಲ್ಲ, ಜವಾಬ್ದಾರರೂ ಅಲ್ಲವಷ್ಟೆ.

ಆದರೂ, ಆ ಮೂವರು ಹುಡುಗರು, ಕಾಶ್ಮೀರದ ಬೇರೆ ಮಕ್ಕಳು ಹಾಗೂ ಹದಿಹರೆಯದವರಂತೆ,  ತಾವು ಹುಟ್ಟಿದಂದಿನಿಂದ ನೋಡುತ್ತ, ಕೇಳುತ್ತ ಬಂದಿರುವುದು ಮೇಲೆಲ್ಲ ಬಣ್ಣಿಸಿದ ಹಿಂಸಾಚಾರವನ್ನು ತಾನೆ? ಅದು ಅವರ ಮನಸ್ಸಿನ ಮೇಲೆ ಯಾವ ಬಗೆಯ ಪರಿಣಾಮವನ್ನು ಬೀರಿರಬಹುದು? ಅದರಲ್ಲಿಯೂ ಮೋದಿ ಸರಕಾರವು ಕಳೆದ ಆರು ತಿಂಗಳುಗಳಿಂದ ಇಡೀ ಕಾಶ್ಮೀರವನ್ನೇ ಒಂದು  ಜೈಲುಖಾನೆಯಂತೆ ಮಾಡಿರುವಾಗ? ಅವರು ತಮ್ಮ ಬೇಗುದಿಯಲ್ಲಿ, ಸಹಜವಾಗಿಯೇ, ಅಡ್ಡಹಾದಿ ಹಿಡಿದು, ತಮ್ಮ ವಯಸ್ಸಿಗೆ ಸಹಜವಾದ ಮಂಗಾಟ ಮತ್ತು ಭಂಡತನಗಳು ಬೆರೆತ ಉಡಾಫೆಯ ವರಸೆಯಲ್ಲಿ, ಪಾಕಿಸ್ತಾನದ ಪರವಾದ ಆ ಘೋಷಣೆಯನ್ನು ಕೂಗಿರಬಹುದಾದ ಸಾಧ್ಯತೆ ಇದೆಯಲ್ಲವೇ?

ನೋವು, ಸಿಟ್ಟು ತುಂಬಿದ ಹುಡುಗುತನದ ಉಡಾಫೆಗೆ ಪ್ರತಿಯಾಗಿ ನಾವು ಅವರಿಗೆ ದೇಶದ್ರೋಹದ ಮೊಕದ್ದಮೆಯಂಥ ಭೀಕರ ಶಿಕ್ಷೆಯನ್ನು ವಿಧಿಸಿದರೆ, ಅವರು ನಮ್ಮಿಂದ ಇನ್ನಷ್ಟು ದೂರ ಹೋಗುವುದಿಲ್ಲವೇ? ಅದರಿಂದ ನಾವು ಅವರ ಮನಸ್ಸಿನಲ್ಲಿಇನ್ನಷ್ಟು ಕಹಿ ತುಂಬಿದಂತಾಗುವುದಿಲ್ಲವೇ? ಅದರಿಂದ ಅವರು ಹತಾಶರಾಗಿ, ನಿಜಕ್ಕೂ ತಾವೇ ಭಯೋತ್ಪಾದಕರಾಗದಿದ್ದರೂ, ಭಾರತದಲ್ಲಿ ತಮಗೆ, ತಮ್ಮ ಜನರಿಗೆ ನ್ಯಾಯ ಸಿಕ್ಕುವುದಿಲ್ಲವೆಂದು ಇನ್ನೂ ಇನ್ನೂ ಗಟ್ಟಿಯಾಗಿ ನಿಶ್ಚೈಸಿ, ಬೇರೆಡೆಯ ಶಕ್ತಿಗಳ ಬೆಂಬಲಿಗರಾಗುವುದಿಲ್ಲವೇ?

ಹಾಗಾಗಬಾರದೆಂದರೆ, ನಾವು (ಆ ಕಾಲೇಜಿನ ಆಡಳಿತದವರು, ಕರ್ನಾಟಕ ಸರಕಾರದವರು ಮತ್ತು ಪೊಲೀಸಿನವರು, ನಮ್ಮ ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳವರು, ಹಾಗೂ ಕರ್ನಾಟಕದ ಸಾಮಾನ್ಯ ಜನತೆಯಾದ ನಾವು, ನಾವೆಲ್ಲರೂ) ಆ ಹುಡುಗರು ಚಿಕ್ಕವರು, ಮುಸಲ್ಮಾನರು ಮತ್ತು ಕಾಶ್ಮೀರದವರು ಎಂಬ ಕಾರಣಕ್ಕಾಗಿಯೆ, ಮತ್ತು ನಮ್ಮ ಕರ್ನಾಟಕದಲ್ಲಿ ಓದುತ್ತಿದ್ದಾರೆ ಎಂಬ ಕಾರಣಕ್ಕಾಗಿಯೆ, ಅವರನ್ನು ಹೆಚ್ಚು ಅನುಭೂತಿ ಮತ್ತು ಸಹಾನುಭೂತಿಯಿಂದ ಕಾಣಬೇಕಿದೆಯಲ್ಲವೇ?  ವಿವೇಕ, ಹೃದಯವಂತಿಕೆ ಮತ್ತು ಹಿರಿತನವನ್ನು ತೋರಬೇಕಿದೆಯಲ್ಲವೇ? ನಮ್ಮ ಕೇಂದ್ರ ಸರಕಾರವು, ಭೀಕರವಾದ ನೋವನ್ನು ಕಂಡುಂಡ, ಮತ್ತು ಈಗಲೂ ಕಾಣುತ್ತಿರುವ, ಆ ನಾಡಿನ ಇಂಥ ಮಕ್ಕಳಿಗೆ ನಮ್ಮಂಥ ಹೊರರಾಜ್ಯದಲ್ಲಿ ಸಂಪೂರ್ಣ ಉಚಿತವಾದ ವಿದ್ಯಾಭ್ಯಾಸಮಾಡುವ ಅವಕಾಶ ಕಲ್ಪಿಸಿಕೊಟ್ಟಿರುವುದು, ಅವರ ಬದುಕಿಗೆ ಹೊಸದಾರಿಗಳನ್ನು ತೆರೆದುಕೊಡಲೆಂದು ತಾನೆ?

ಲೇಖನದ ಈ ಭಾಗವನ್ನು ಮುಗಿಸುವ ಮುನ್ನ, ಈಮೊದಲು ಬರೆದ ಲೇಖನದಲ್ಲಿ ಹೇಳಿದ್ದನ್ನೇ ಮತ್ತೊಮ್ಮೆ ಸ್ಪಷ್ಟವಾಗಿ ಹೇಳುತ್ತೇನೆ:

  • ಪಾಕಿಸ್ತಾನ್ ಜ಼ಿಂದಾಬಾದ್ ಎಂಬ ಘೋಷಣೆಯನ್ನು ಯಾವ ದೈವವೂ ನಿಷೇಧಿಸಿಲ್ಲ, ನಿಷೇಧಿಸುವುದಿಲ್ಲ. ಭಾರತಕ್ಕಾಗಲಿ, ಬೇರೆ ಯಾವುದೇ ದೇಶಕ್ಕಾಗಲಿ ಕೇಡು ಬಗೆಯದೆ ಅದನ್ನು ಕೂಗುವುದು ಅನೈತಿಕವಲ್ಲ; ಅದನ್ನು ಕೂಗಬಾರದೆಂದು ಭಾರತದ ಸಂವಿಧಾನದಲ್ಲಿಲ್ಲ.
  • ಪಾಕಿಸ್ತಾನ್ ಜ಼ಿಂದಾಬಾದ್ ಎಂದು ಯಾರಾದರೂ ಕೂಗಿದರೆ, ಅವರು ಭಾರತದ ವಿರುದ್ಧವಾಗಿದ್ದಾರೆ, ಭಾರತವನ್ನು ಹಾಳುಮಾಡಬೇಕೆಂದಿದ್ದಾರೆ, ಭಾರತದಿಂದ ಸಿಡಿದು ಬೇರೆಯಾಗಬೇಕೆಂದಿದ್ದಾರೆ ಎಂದೇ ಆಗಬೇಕಿಲ್ಲ; ಪಾಕಿಸ್ತಾನದ ಜನತೆಯನ್ನು ಅಗಾಧವಾಗಿ ಹಿಂಸಿಸುತ್ತ, ವಂಚಿಸುತ್ತಬಂದಿರುವ ಅಲ್ಲಿನ ಸೈನ್ಯ ಮತ್ತು ಐಎಸ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಐ, ಅಲ್ಲಿನ ಇಸ್ಲಾಮೀಯ ಮೂಲಭೂತವಾದಿಗಳು ಮತ್ತು ಭಯೋತ್ಪಾದಕ ಸಂಘಟನೆಗಳು, ಹಾಗೂ ಅಲ್ಲಿನ ಹೃದಯಹೀನ ಶ್ರೀಮಂತರು ಹಾಗೂ  ರಾಜಕಾರಣಿಗಳ ಪರವಾಗಿದ್ದಾರೆ ಅವರು ಎಂದು ಕೂಡ ಆಗಬೇಕಿಲ್ಲ.
  • ಪಾಕಿಸ್ತಾನದ ನಮ್ಮನಿಮ್ಮಂಥ ಜನರು ಚೆನ್ನಾಗಿ ಬಾಳಲಿ ಎಂದು ಹರಸುವುದಕ್ಕೆ ಕೂಡ ಪಾಕಿಸ್ತಾನ್ ಜ಼ಿಂದಾಬಾದ್ ಎಂದು ಕೂಗುವುದು ಸಾಧ್ಯವಿದೆ.

ಅಲ್ಲದೆ, ಭಾರತಕ್ಕೆ ಒಳ್ಳೆಯದಾಗಬೇಕು ಎಂದು ಹಾರೈಸಬೇಕಾದರೆ ಪಾಕಿಸ್ತಾನಕ್ಕೆ ಕೇಡಾಗಲಿ ಎಂದು ಹಾರೈಸಬೇಕಿಲ್ಲ. ಹಾಗೆಂದು ಹಾರೈಸಬಾರದು ಕೂಡ. ನಿಜವಾಗಿ ನೋಡಿದರೆ, ಮತ್ತೊಂದು ದೇಶಕ್ಕೆ ಕೇಡನ್ನು ಹಾರೈಸುವ, ಕೇಡು ಮಾಡುವ ದೇಶವು ತಾನೂ ಕೇಡಿಗೀಡಾಗುತ್ತದೆ.

ಅಮೂಲ್ಯಾ  ತನ್ನ ಫೇಸ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಬುಕ್ ಪುಟದಲ್ಲಿ ಬರೆದುಕೊಂಡದ್ದು  ಈ ಇಂಥದನ್ನೇ ಅಲ್ಲವೇ? ಅಮೂಲ್ಯಾ ಎಂಬ ಚಿಕ್ಕವಳಿಗಿರುವ ತಿಳಿವಳಿಕೆ ನಮ್ಮನ್ನು ಆಳುವವರಿಗಿಲ್ಲವಲ್ಲ! ಹಾಗಾಗಿಯೆ, ಇಂಥ ಪ್ರಕರಣಗಳಲ್ಲಿ ಪ್ರಭುತ್ವವು ತಾಳಿರುವ ಧೋರಣೆ ಮತ್ತು ನಡೆದುಕೊಳ್ಳುತ್ತಿರುವ ರೀತಿ ಈ ಲೇಖನ ಹೇಳುತ್ತಿರುವ ಎಲ್ಲವುದಕ್ಕೂ ವ್ಯತಿರಿಕ್ತವಾಗಿದೆ.

ಯಾಕೆ, ಯಾಕೆ

ತಾಲಿಬ್ ಮಜೀದ್, ಬಾಸಿತ್ ಆಸಿಫ್ ಸೋಫಿ, ಅಮೀರ್ ಮೊಹಿಯುದ್ದೀನ್ ವಾಹಿ ಎಂಬ ಆ ಹುಡುಗರ ಮೇಲೆ, ಅಮೂಲ್ಯಾ ನೊರೊನ್ಹಾ, ನಳಿನಿ ಬಾಲಕುಮಾರ್, ಆರ್ದ್ರಾ ನಾರಾಯಣನ್ ಮುಂತಾದ ಹದಿವಯಸ್ಸಿನ ಹೆಣ್ಣುಮಕ್ಕಳ ಮೇಲೆ, ಹಾಗೂ ಬೀದರ್‌ನ ಶಾಹೀನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಫರೀದಾ ಬೇಗಂ ಅವರಮೇಲೆ ಮತ್ತು ಆ ಶಾಲೆಯಲ್ಲಿ ಓದುತ್ತಿರುವ ಆ ಮಗುವಿನ ತಾಯಿ ಅನೂಜಾ ಮಿನ್ನಾ ಅವರಮೇಲೆ, ಇಷ್ಟು ತರಾತುರಿಯಲ್ಲಿ ದೇಶದ್ರೋಹದ ಮೊಕದ್ದಮೆ ಹೂಡಿರುವ ಸರಕಾರವು ಈ ಇದೇ ಪ್ರಕರಣಗಳಿಗೆ ಪ್ರತಿಕ್ರಿಯೆಯಾಗಿ ನೇರಾನೇರ ಹಿಂಸಾಚಾರದಲ್ಲಿ ತೊಡಗಿದವರ ಮೇಲೆ, ಆ ಚಿಕ್ಕವರಿಗೆ ಕೊಲೆಯ ಬೆದರಿಕೆ ಮತ್ತು ಅಂಗಾಂಗ ಛೇದನದ ಬೆದರಿಕೆ ಹಾಕಿದವರ ಮೇಲೆ, ಯಾವ ಕ್ರಮವನ್ನೂ ಕೈಗೊಂಡಿಲ್ಲ ಯಾಕೆ?

ನಳಿನಿ ಬಾಲಕುಮಾರ್ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತೇವೆ ಎಂದು ಅರ್ಜಿ ಸಲ್ಲಿಸಲು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ನೂರೆಪ್ಪತ್ತು ಜನ ಹೃದಯವಂತ ವಕೀಲರ ಒಂದು ದಂಡು ಮೈಸೂರಿಗೆ ಹೋಯಿತು. ನಿಜವಾದ ನ್ಯಾಯವಾದಿಗಳು ಆ ನೂರೆಪ್ಪತ್ತು ಜನ; ನಿಜವಾದ ನ್ಯಾಯವಂತಿಕೆಯುಳ್ಳವರು. ಅಂಥ ನಿಜ ನ್ಯಾಯವಾದಿಗಳ ವಿರುದ್ಧ ಮೈಸೂರಿನ ವಕೀಲರ ದೊಂಬಿಯೊಂದು ಹಿಂಸಾತ್ಮಕ ದಾಂಧಲೆ ಎಬ್ಬಿಸಿತು. ‍ಪ್ರಭುತ್ವವು ಆ ದಾಂಧಲೆ ಎಬ್ಬಿಸಿದವರು ಯಾರ ಮೇಲೆಯೂ ಯಾವುದೇ ಕ್ರಮ ಜರುಗಿಸಿಲ್ಲ, ಯಾಕೆ?

ಹುಬ್ಬಳ್ಳಿಯ ಪ್ರಕರಣವನ್ನು ನೋಡಿ. ಕೆಎಲ್ಇ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿ, ಪೊಲೀಸ್‍ ಸ್ಟೇಷನ್ನಿನ ಹೊರಗೆ ಮತ್ತು, ಕಡೆಗೆ, ನ್ಯಾಯಾಲಯದ ಅಂಗಳದಲ್ಲಿಯೇ, ದಾಂಧಲೆ ನಡೆಸಿ, ಬೆದರಿಕೆ ಹಾಕಿ, ಕಾಶ್ಮೀರದ ಆ ಹುಡುಗರ ಮೇಲೆ ಕೈಮಾಡಿದ ಯಾರ ಮೇಲೆಯೂ ಯಾವುದೇ ಕ್ರಮ ಜರುಗಿಸಲಾಗಿಲ್ಲ, ಯಾಕೆ?

ಆ ಕಾಶ್ಮೀರೀ  ಹುಡುಗರ ನಾಲಿಗೆಗಳನ್ನು ಕತ್ತರಿಸಿ ತಂದವರಿಗೆ, ನಾಲಿಗೆಗೊಂದು ಲಕ್ಷದಂತೆ, ಒಟ್ಟು ಮೂರು ಲಕ್ಷ ರೂಪಾಯಿಗಳ ಇನಾಮು ಕೊಡುತ್ತೇನೆ ಎಂದ ಜೇವರ್ಗಿಯ ಆಂದೋಲಾದ ಕರುಣೇಶ್ವರ ಮಠದ ಸ್ವಾಮೀಜಿಯಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ, ಯಾಕೆ?

ಅಮೂಲ್ಯಳ ಮನೆಯ ಮೇಲೆ ದಾಳಿಮಾಡಿ, ಆಕೆಯ ತಂದೆಯನ್ನು ಬೆದರಿಸಿದವರು ಯಾರ ಮೇಲೆಯೂ ಯಾವುದೇ ಕ್ರಮ ಜರುಗಿಸಲಾಗಿಲ್ಲ, ಯಾಕೆ? ಅವಳ ತಲೆಯನ್ನು ಕತ್ತಿರಿಸಿದವರಿಗೆ ಹತ್ತು ಲಕ್ಷ ರೂಪಾಯಿ ಇನಾಮು ನೀಡುತ್ತೇನೆ ಎಂದು ಬಳ್ಳಾರಿಯ ಶ್ರೀರಾಮ ಸೇನೆಯ ಸಂಜೀವ ಮರಡಿ ಹೇಳಿದ್ದಾರಲ್ಲ, ಅವರಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ, ಯಾಕೆ?

ಮೆತ್ತಗೆ, ಮೆಲ್ಲಗೆ ಅತ್ತತ್ತಲೆ

ಆ ಎಲ್ಲ ಘಟನೆಗಳಿಗೆ ಸಾಕ್ಷಿಯಾಗಿ ಬಹಳ ಢಾಳಾದ, ಖಚಿತವಾದ ವಿಡಿಯೋ ದಾಖಲೆಗಳಿವೆ. ಅದನ್ನೆಲ್ಲ ಮಾಡಿದವರು ನಿರ್ಭಿಡೆಯಿಂದ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಆದರೂ ಪ್ರಭುತ್ವವು ಕೂದಲೆಳೆಯಷ್ಟು ಮಿಸುಕಾಡಿಲ್ಲ. ಅಷ್ಟೇ ಅಲ್ಲ, ನಮ್ಮ ಪತ್ರಿಕೆಗಳು, ಟಿವಿ ವಾಹಿನಿಗಳು ಕೂಡ ಅಂಥ ಹೇಳಿಕೆಗಳು ಮತ್ತು ನಡವಳಿಕೆಯನ್ನು ಕಟುವಾಗಿ ಖಂಡಿಸಿಲ್ಲ;  ಪ್ರಭುತ್ವವು ಅಂಥವರಮೇಲೆ ಮೊಕದ್ದಮೆ ಹೂಡಬೇಕು, ಅವರನ್ನು ಶಿಕ್ಷಿಸಬೇಕು ಎಂದು ಹೇಳುತ್ತಿಲ್ಲ.

ಅಮೂಲ್ಯಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿಕೆ ಕೊಟ್ಟ ಸಿದ್ದರಾಮಯ್ಯ, ಕುಮಾರಸ್ವಾಮಿ ಮುಂತಾದ ರಾಜಕೀಯ ನಾಯಕರು, ಈ ಘಟನೆಗಳ ಹಿನ್ನೆಲೆಯಲ್ಲಿ ‘ಪಾಕ್ ಪರ ಘೋಷಣೆ ಮಾಡುವುದನ್ನು ಖಂಡಿಸುತ್ತೇನೆ’ ಎಂದು ಪತ್ರಿಕೆಗಳಲ್ಲಿ, ಬೇರೆ ಸುದ್ದಿ ಮಾಧ್ಯಮಗಳಲ್ಲಿ ಹೇಳಿಕೆಕೊಟ್ಟ ಸಾಹಿತಿ – ಧುರೀಣರು ಈ ಪ್ರಕರಣಗಳ ಸಂಬಂಧವಾಗಿ ಸಂಘ ಪರಿವಾದವರು ನೀಡಿರುವ ಆಸುರೀ ಹೇಳಿಕೆಗಳ ವಿರುದ್ಧ, ಅವರು ಮಾಡುತ್ತಿರುವ ದೌರ್ಜನ್ಯದ ವಿರುದ್ಧ ಕಮಕ್ ಕಿಮಕ್ ಅನ್ನುತ್ತಿಲ್ಲ.

ಗಾಂಧಿ, ನೆಹರೂ, ಪಟೇಲ್, ಮೌಲಾನಾ ಆಜಾ಼ದರಂಥವರು ಮುನ್ನಡೆಸಿದ ಕಾಂಗ್ರೆಸ್‍ನಿಂದ ಹಿಡಿದು ದೆಹಲಿಯ ಆಮ್ ಆದ್ಮಿ ಪಕ್ಷದವರೆಗೆ, ಸಾಹಿತ್ಯ ಚಳವಳಿಗಳ ನೇತಾರರಿಂದ ಹಿಡಿದು ಒಳ್ಳೆಯ ಕವಿಗಳವರೆಗೆ, ಅಲ್ಲಿಂದಾಚೆಗೆ ರಂಗಭೂಮಿಯ ನನ್ನ ಬಂಧುಗಳು ಹಲವರವರೆಗೆ, ಅದೆಷ್ಟು ಜನ ಈಗ ಅಮಾಯಕತನ ಮತ್ತು ಅಲಿಪ್ತತೆ – ನಿರ್ಲಿಪ್ತತೆಗಳನ್ನು ನಟಿಸುತ್ತ ಮೆತ್ತಗೆ, ಮೆಲ್ಲಗೆ ‘ಅತ್ತತ್ತಲೆ’ ಜಾರಿಕೊಳ್ಳುತ್ತಿದ್ದಾರೆ!  ಅಥವಾ, ಇಲ್ಲಿಯವರೆಗೆ ಗುಂಭಗೂಢವಾಗಿ ಉಳಿದಿದ್ದ ತಮ್ಮ ಹಲವು ಪೂರ್ವಗ್ರಹಗಳ ಕೋರೆಗಳನ್ನು ಈಗ, ಇಷ್ಟಿಷ್ಟೆ, ಹೊರತೋರುತ್ತಿದ್ದಾರೆ!

ಬೆಂಗಳೂರಿನ ಪುರಭವನದ ಬಳಿ ಹದಿಹರೆಯದ , ಸಣಕಲು ಹೆಣ್ಣುಮಗುವೊಂದು ಲೋಕದ ದುಃಖಿತರಿಗೆ ಬಿಡುಗಡೆಯನ್ನು ಬಯಸಿ ತಾನು ಕೈಯಾರೆ ಗೀಚಿದ ಒಂದು ಚಿಕ್ಕ ಫಲಕ ಹಿಡಿದುಕೊಂಡು ಒಂಟಿಯಾಗಿ ನಿಂತರೆ, ಮತ್ತೊಬ್ಬಳು ನಮ್ಮದೇ ದೇಶದ ರಾಜ್ಯವೊಂದಕ್ಕೆ ದುಃಖದಿಂದ ಬಿಡುಗಡೆ ಸಿಕ್ಕಲಿ ಎಂದು, ಅದೇ ರೀತಿ ಒಂಟಿಯಾಗಿ, ತಾನೊಂದು ಫಲಕ ಹಿಡಿದು ನಿಂತರೆ, ಮಕ್ಕಳು ನಮ್ಮ ನೆರೆಯ ದೇಶಕ್ಕೆ ಒಳಿತಾಗಲಿ ಎಂದು ಕೂಗಿದರೆ, ಹನ್ನೊಂದು ವರ್ಷದ ಮಗುವೊಂದು ತನ್ನ ಶಾಲೆಯಲ್ಲಿ  ನಾಟಕವೊಂದರಲ್ಲಿ ಅಭಿನಯಿಸುತ್ತ ಇಂದಿನ ಸರಕಾರವನ್ನು ಟೀಕಿಸಿ ಒಂದು ಮಾತಾಡಿದರೆ – ಅದೆಲ್ಲ ಅಸಹಜ, ಅಪ್ರಾಕೃತಿಕ, ವಿಲಕ್ಷಣ, ಅಸಭ್ಯ, ಅನಾಗರಿಕ ನಡೆವಳಿಕೆ ಎಂದು ಹೇಳಲಾಗುತ್ತಿದೆ. ಆ ಮಕ್ಕಳನ್ನು ದೇಶದ್ರೋಹಿಗಳು ಎಂದು ಕರೆದು, ಹಿಂಸಿಸಲಾಗುತ್ತಿದೆ.

ಆದರೆ, ‘‘ಕಡಿದು, ಕೊಚ್ಚುತ್ತೇವೆ!, ಕೊಲ್ಲುತ್ತೇವೆ!,’’ ಎಂದು ರಾಕ್ಷಸೀಯವಾಗಿ ಅಬ್ಬರಿಸುತ್ತ, ಆ ಕಡಿದು, ಕೊಚ್ಚಿ, ಕೊಲ್ಲುವ ಕೆಲಸವೆಲ್ಲ ನಿಜಕ್ಕೂ ಆಗುವಂತೆ ಮಾಡುವವರ ನಡವಳಿಕೆಯು ಸಹಜ, ಸಾಮಾನ್ಯ, ಪ್ರಾಕೃತಿಕ, ಅವಿಶೇಷ, ಅನಿವಾರ್ಯ, ಅಪರಿಹಾರ್ಯ ಎಂಬಂತಾಗಿದೆ:

ಇದೆಲ್ಲ ಇರುತ್ತಪ್ಪ… ಹೌದು, ದೇಶದ ಭದ್ರತೇ ವಿಷಯ ಇದು… ಭಾವಾವೇಶದಲ್ಲಿ ಹೇಳ್ತಾರಪ್ಪ, ಮಾಡ್ತಾರೆ… ಪ್ಚ್, ಅದು ಅವರ ದೇಶಪ್ರೇಮ ತೋರಿಸುತ್ತೆ… ಅದೆಲ್ಲ ಫೀಲಿಂಗ್ಸು, ಸಾರ್… ಹೌದು… ತಲೆ ತೆಗೀತಾರಪ್ಪ… ಅಯ್ಯೋ, ರಾಜಕೀಯದಲ್ಲಿ ಇದೆಲ್ಲ ಇರುತ್ತೆ… ಏನು, ಮಾಡೋಕಾಗುತ್ತೆ… ಡರ್ಟಿ ಪಾಲಿಟಿಕ್ಸು, ಸಾರ್, ನಮಗ್ಯಾಕೆ… ಅದನ್ನೆಲ್ಲ ಅಷ್ಟು ಸೀರಿಯಸ್ಸಾಗಿ ತೊಗೋಬಾರದು… ಅಯ್ಯೋ, ಹೇಳ್ತಾರೆ ಬಿಡಿ… ಹೇಳಿಕೊಳ್ಳಲಿ, ಬಿಡಿ… ನೀವು ಡಿಸೈಡ್ ಮಾಡ್ಕೊಂಡ್ಬಿಟ್ಟಿದ್ದೀರಿ, ನಮ್ಮವರದ್ದೇ ತಪ್ಪು ಅಂತ… ಅಲ್ಲ, ನಾನ್‍…ನಾನ್‍, ನಾನ್‍ ಯಾರ ಕಡೆಗೂ ಅಲ್ಲ… ನಾನು ಎಲ್ಲಾ ನೋಡ್ತಾss ಇರ್ತೀನಿ, ಅಷ್ಟೆ… ಹ್ಹೆಹ್ಹೆ, ಓಪನ್ ಮೈಂಡ್ ಇಟ್ಕೋಬೇಕು, ಸಾರ್… ಏನೋಪ್ಪ… ನೀವು ತುಂಬ ತಿಳಿದವ್ರು…ನಾವು ಸಾಮಾನ್ಯರು… ಹೋ, ನೀವು ಬುದ್ಧಿಜೀವಿಗಳಪ್ಪಾ!!…ಡೇಂಜರಸ್!…ಏನೇನೋ ಓದಿ ಡಿಸೈಡ್‍ ಮಾಡ್ಕೊಂಡ್ಬಿಟ್ಟಿದ್ದೀರಿ… ಏನು, ನೀವೊಬ್ಬರೇನಾ ಬುದ್ಧಿವಂತರು, ನ್ಯಾಯವಂತರು?!… ನಾವೂ ಯೋಚ್ನೆ ಮಾಡ್ತೀವಿ… ನಾವೂ ಎಲ್ಲಾ ನೋಡ್ತೀವಿ…ನಮ್ಗೂ ಎಲ್ಲಾ ಗೊತ್ತಿದೆ, ಬಿಡಿ… ಮಾನವೀಯತೆ ಅನ್ನೋದು ನಮ್ಗೂ ಇದೆ…! ಎಪ್ಪತ್ತುವರ್ಷದಿಂದ ಆಗಿರೋ ತಪ್ಪನ್ನೆಲ್ಲ ಇವರು ಈಗ ಸರಿಮಾಡ್ತಿದಾರೆ, ಅಷ್ಟೆ… ಒಂದೊಂದ್ಸಲ ಏನೋ ಆಗ್ಬಿಡತ್ತೆ… ಆಗಲಿ, ಬಿಡಿ! ಏನೀಗ..? ಟೈಮ್ ಕೊಡಬೇಕು, ಅಷ್ಟೆ… ಎಲ್ಲ ಸರಿಯಾಗುತ್ತೆ… ಒಳಗಿಟ್ಕೊಂಡಿದ್ದಿದ್ದೆಲ್ಲ ಈಗ ಹೊರಗೆ ಬರ್ತಾs ಇದೆ… ಎಕ್ಸ್‍ಪ್ರೆಸ್‍ ಆಗ್ತಾ ಇದೆ…ಆಗಲಿ, ಬರಲಿ ಬಿಡಿ!… ಅರೇs?! ದ್ವೇಷ ಅಂದರೆ?! ದ್ವೇಷ ಅಲ್ಲ, ಅದು!… ಫೀಲಿಂಗ್ಸ್!… ಎಲ್ಲ ಒಂದ್ಸಲ್ಲ ಹೊರಗೆ ಬಂದುಬಿಡ್ಲಿ…  ಹಿಂಸೆ ಅಂದರೆs?!…ಹ್ಹೆಹ್ಹೆ… ಹಿಂಸೆ ಅಲ್ಲ!.. ಫೀಲಿಂಗ್ಸ್, ಅದು!… ಎಲ್ಲ್ಲ ಒಂದ್ಸಲ ಕ್ಲೀssನ್ ಆಗಿಬಿಡ್ಲಿ…ದೇಶ ಕ್ಲೀsನ್ ಆಗುತ್ತೆ…

ಇದಲ್ಲವೇ ಫ್ಯಾಸಿಜ಼ಮ್‍ನ ನಿಜವಾದ ಗೆಲುವು?!

*********

(ಲೇಖಕರು ಕನ್ನಡದ ಕವಿ, ನಾಟಕಕಾರ ಮತ್ತು ಖ್ಯಾತ ರಂಗನಿರ್ದೇಶಕರು. ಅಭಿಪ್ರಾಯಗಳು ವೈಯಕ್ತಿಕವಾದವು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...