ಗಾಝಾ ಬಳಿಕ ಮತ್ತೊಂದು ಸುಂದರ ನಾಡು ಲೆಬನಾನ್ ಮೇಲೆ ಇಸ್ರೇಲ್ ಆಕ್ರಮಣ ಮುಂದುವರೆಸಿದೆ.
ಲೆಬನಾನ್‌ನ ಸಶಸ್ತ್ರ ಗುಂಪು ಹೆಜ್ಬುಲ್ಲಾ ಮತ್ತು ಇಸ್ರೇಲ್ ಸೇನೆ ನಡುವೆ ಗಡಿಯಲ್ಲಿ ಮಾತ್ರ ನಡೆಯುತ್ತಿದ್ದ ಸಂಘರ್ಷ, ಇದೀಗ ಜನವಸತಿ ಪ್ರದೇಶಗಳಿಗೆ ವ್ಯಾಪಿಸಿದೆ. ಈಗಾಗಲೇ ವೈಮಾನಿಕ ದಾಳಿ ನಡೆಸಿ ನೂರಾರು ಜನರನ್ನು ಹತ್ಯೆಗೈದಿರುವ ಇಸ್ರೇಲ್, ಈಗ ನೆಲ ಕಾರ್ಯಾಚರಣೆ (Ground Operation) ಗೆ ಸಜ್ಜಾಗಿದೆ. ಇದರಿಂದ ನೆಮ್ಮದಿಯ ಬದುಕು ನಡೆಸುತ್ತಿರುವ ಅಮಾಯಕ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗಾಝಾದಲ್ಲಿ ಹಮಾಸ್ ಹೆಸರೇಳಿಕೊಂಡು 40 ಸಾವಿರಕ್ಕೂ ಅಧಿಕ ಅಮಾಯಕರನ್ನು ನಿರ್ಧಯವಾಗಿ ಕೊಂದು ಹಾಕಿದ್ದಲ್ಲದೆ, ಸುಂದರ ನಗರಗಳನ್ನು ನಕರವಾಗಿಸಿರುವ ಇಸ್ರೇಲ್, ಈಗ ಲೆಬನಾನ್‌ನಲ್ಲೂ ಅದನ್ನೇ ಮುಂದುವರೆಸುವ ಸೂಚನೆ ನೀಡಿದೆ.
ಶುಕ್ರವಾರ ಬೈರುತ್‌ನ ಜನನಿಬಿಡ ದಹಿಯೆ ಉಪನಗರದ ಮೇಲೆ ಇಸ್ರೇಲ್ ಸರಣಿ ದಾಳಿ ನಡೆಸಿದೆ. ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಗುರಿಯಾಗಿಸಿ, ಅದರ ಕೇಂದ್ರ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ವರದಿಗಳು ಹೇಳಿವೆ.
ಹಸನ್ ನಸ್ರಲ್ಲಾನನ್ನು ಈಗಾಗಲೇ ಹತ್ಯೆ ಮಾಡಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಆದರೆ, ಈ ಬಗ್ಗೆ ಇನ್ನೂ ಖಚಿತವಾಗಿಲ್ಲ. ದಕ್ಷಿಣ ಲೆಬನಾನ್‌ನಲ್ಲಿ ಹೆಜ್ಬುಲ್ಲಾದ ಕ್ಷಿಪಣಿ ಘಟಕದ ಕಮಾಂಡರ್ ಮುಹಮ್ಮದ್ ಅಲಿ ಇಸ್ಮಾಯಿಲ್ ಮತ್ತು ಅವರ ಸಹಾಯಕ ಹುಸೈನ್ ಅಹ್ಮದ್ ಇಸ್ಮಾಯಿಲ್ ಅವರನ್ನು ಕೊಂದಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.
ಇಂದು (ಸೆ.28) ಮುಂಜಾನೆಯವರೆಗೆ ಇಸ್ರೇಲ್ ಲೆಬನಾನ್‌ನ ಬೈರುತ್ ಮೇಲೆ ಸುಮಾರು 20ಕ್ಕೂ ಹೆಚ್ಚು ಪ್ರತ್ಯೇಕ ವೈಮಾನಿಕ ದಾಳಿಗಳನ್ನು ನಡೆಸಿದೆ. ಇದುವರೆಗೆ ಸುಮಾರು 700 ಜನರು ಸಾವನ್ನಪ್ಪಿದ್ದು, 2 ಸಾವಿರದಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಝಾದಲ್ಲಿ ಇಸ್ರೇಲ್ ಆಕ್ರಮಣ ಆರಂಭಿಸಿ ಮುಂದಿನ ಅಕ್ಟೋಬರ್ 7ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಈಗಲೂ ಅಲ್ಲಿ ನರಮೇಧ ಕೊನೆಗೊಂಡಿಲ್ಲ. ನಗರಗಳು ಜನರ ವಾಸಕ್ಕೆ ಯೋಗ್ಯವಲ್ಲದ ರೀತಿ ಮಾರ್ಪಟ್ಟಿದೆ.
ಗಾಝಾದಲ್ಲಿ ದಾಳಿ ಆರಂಭಿಸುವಾಗ, “ನಮ್ಮ ಗುರಿ ಹಮಾಸ್ ಹೊರತು ನಾಗರಿಕರಲ್ಲ” ಎಂದು ಇಸ್ರೇಲ್ ಸೇನೆ ಹೇಳಿತ್ತು. ಆದರೆ, ಈಗ ಅಲ್ಲಿ ಬಲಿಯಾದ ಅಮಾಯಕ ನಾಗರಿಕ ಸಂಖ್ಯೆ 40 ಸಾವಿರ ದಾಟಿದೆ. ಈಗ ಲೆಬನಾನ್‌ನಲ್ಲೂ “ನಮ್ಮ ಗುರಿ ಹೆಜ್ಬುಲ್ಲಾ” ಎಂದು ಅದೇ ಹೇಳಿಕೆಯನ್ನು ಇಸ್ರೇಲ್ ಸೇನೆ ಹೇಳುತ್ತಿದೆ. ಈ ನಡುವೆ ಕಳೆದ ಒಂದು ವಾರದಲ್ಲಿ 700ರಷ್ಟು ನಾಗರಿಕರನ್ನು ಕೊಂದು ಹಾಕಿದೆ.
ಇತ್ತ ಸಂಘರ್ಷ ಹೆಚ್ಚಾಗುತ್ತಿದ್ದಂತೆ ಅತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುಎಸ್‌ಗೆ ಭೇಟಿ ನೀಡಿದ್ದಾರೆ. ಜಗತ್ತಿಗೆ ಶಾಂತಿ ಕಥೆಯ ಹೇಳುವ ಯುಎಸ್, ಇನ್ನಷ್ಟು ಶಸ್ತ್ರಾವನ್ನು ಒದಗಿಸುವ ಭರವಸೆಯನ್ನು ಇಸ್ರೇಲ್‌ಗೆ ನೀಡಿದೆ. ಅಲ್ಲದೆ, ಮಧ್ಯಪ್ರಾಚ್ಯದಲ್ಲಿ ಶಾಂತಿ ತರಲು ಸೇನೆ ಕಳಿಸುವುದಾಗಿ ತಿಳಿಸಿದೆ. ಆದರೆ, ಯುಎಸ್ ಈ ಹಿಂದೆ ಸೇನೆ ಕಳಿಸಿದ ರಾಷ್ಟ್ರಗಳಲ್ಲಿ ಏನಾಗಿದೆ ಎಂಬುವುದು ಇಡೀ ಜಗತ್ತಿಗೆ ಗೊತ್ತಿದೆ.
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಶುಕ್ರವಾರ ಬೈರುತ್‌ನ ದಕ್ಷಿಣ ಉಪನಗರಗಳ ಜನನಿಬಿಡ ಪ್ರದೇಶಗಳ ಮೇಲಿನ ಇಸ್ರೇಲ್ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.
ಇದನ್ನೂ ಓದಿ : ಕೇರಳ | ಪ್ಯಾಲೆಸ್ತೀನ್ ಪರ ಪೋಸ್ಟರ್‌ಗಳನ್ನು ಹರಿದ ಆಸ್ಟ್ರೇಲಿಯನ್ ಪ್ರವಾಸಿಯ ವಿರುದ್ಧದ ಪ್ರಕರಣ ರದ್ದು


