ಪಶ್ಚಿಮ ದಂಡೆಯ ಉತ್ತರ ಭಾಗದಲ್ಲಿ ಫೆಲೆಸ್ತೀನಿ ಸಮುದಾಯಗಳ ಬಲವಂತದ ಸ್ಥಳಾಂತರವು ಆತಂಕಕಾರಿ ವೇಗದಲ್ಲಿ ಹೆಚ್ಚುತ್ತಿದೆ ಎಂದು ಫೆಲೆಸ್ತೀನಿ ನಿರಾಶ್ರಿತರಿಗೆ ಸಹಾಯ ಮಾಡುವ ವಿಶ್ವಸಂಸ್ಥೆಯ ಸಂಸ್ಥೆ UNRWA ಎಚ್ಚರಿಸಿದೆ.
ಜನವರಿ 21ರಂದು ಇಸ್ರೇಲಿ ಪಡೆಗಳು ಆಪರೇಷನ್ ಐರನ್ ವಾಲ್ ಅನ್ನು ಪ್ರಾರಂಭಿಸಿದ ನಂತರ ಹಲವಾರು ನಿರಾಶ್ರಿತರ ಶಿಬಿರಗಳು ಬಹುತೇಕ ಖಾಲಿಯಾಗಿವೆ. ಇದು ಎರಡನೇ ಇಂಟಿಫಾಡಾದ ನಂತರ ಪಶ್ಚಿಮ ದಂಡೆಯಲ್ಲಿ ನಡೆದ ಅತಿ ದೀರ್ಘದ ಕಾರ್ಯಾಚರಣೆಯಾಗಿದೆ ಎಂದು ಏಜೆನ್ಸಿ ತಿಳಿಸಿದೆ.
ಇಸ್ರೇಲಿನ ಕಾರ್ಯಾಚರಣೆಯು ಜೆನಿನ್ ಶಿಬಿರದಲ್ಲಿ ಮೊದಲು ಪ್ರಾರಂಭವಾಯಿತು. ನಂತರ ತುಲ್ಕಾರ್ಮ್, ನೂರ್ ಶಾಮ್ಸ್ ಮತ್ತು ಎಲ್ ಫರಾ ಶಿಬಿರಗಳಿಗೆ ವಿಸ್ತರಿಸಿತು. ಇಲ್ಲಿಯವರೆಗೆ 40,000 ಫೆಲೆಸ್ತೀನಿ ನಿರಾಶ್ರಿತರನ್ನು ಬಲವಂತವಾಗಿ ಸ್ಥಳಾಂತರಿಸಿದೆ.
ಇಸ್ರೇಲಿ ಪಡೆಗಳಿಂದ ವಾಯುದಾಳಿಗಳು, ಶಸ್ತ್ರಸಜ್ಜಿತ ಬುಲ್ಡೋಜರ್‌ಗಳು, ನಿಯಂತ್ರಿತ ಸ್ಫೋಟಗಳು ಮತ್ತು ಮುಂದುವರಿದ ಶಸ್ತ್ರಾಸ್ತ್ರಗಳ ಬಳಕೆ ಸಾಮಾನ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಜನವರಿ 30ರಂದು ಎರಡು ಕಾನೂನುಗಳನ್ನು ಜಾರಿಗೆ ತಂದ ನಂತರ UNRWA ಇಸ್ರೇಲಿ ಅಧಿಕಾರಿಗಳೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ಹೇಳಿದೆ. ಇದರಿಂದಾಗಿ ನಾಗರಿಕರ ಸಂಕಷ್ಟ ಅಥವಾ ಮಾನವೀಯ ನೆರವು ವಿತರಣೆಯ ತುರ್ತು ಅಗತ್ಯದ ಬಗ್ಗೆ ಕಳವಳ ವ್ಯಕ್ತಪಡಿಸಲು ಅಸಾಧ್ಯವಾಗಿದೆ.
ಈ ಪರಿಸ್ಥಿತಿಯು ಫೆಲೆಸ್ತೀನಿ ನಿರಾಶ್ರಿತರು ಮತ್ತು ಅವರಿಗೆ ಸೇವೆ ಸಲ್ಲಿಸುವ UNRWA ಸಿಬ್ಬಂದಿಯ ಜೀವಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಕಾನೂನುಗಳು UNRWA ಇಸ್ರೇಲಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸುತ್ತವೆ ಮತ್ತು ಇಸ್ರೇಲಿ ಅಧಿಕಾರಿಗಳು ಏಜೆನ್ಸಿಯೊಂದಿಗೆ ಯಾವುದೇ ಸಂಪರ್ಕವನ್ನು ಹೊಂದುವುದನ್ನು ನಿಷೇಧಿಸುತ್ತವೆ.
ಜೆನಿನ್, ತುಲ್ಕಾರ್ಮ್ ಮತ್ತು ತುಬಾಸ್‌ನಲ್ಲಿ ಇಸ್ರೇಲಿ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಗಳು ನಾಗರಿಕ ಸಾವುನೋವುಗಳಿಗೆ ಕಾರಣವಾಗುತ್ತಲೇ ಇವೆ. ಜನವರಿ 21ರಿಂದ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಕಚೇರಿಯಾದ OCHAವು ಹೇಳಿದೆ.
ಜೆನಿನ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಿಂದ ಪ್ರಭಾವಿತರಾದ ಫೆಲೆಸ್ತೀನಿಯನ್ನರನ್ನು ವಿಶ್ವಸಂಸ್ಥೆ ಮತ್ತು ಪಾಲುದಾರರು ಬೆಂಬಲಿಸುತ್ತಲೇ ಇದ್ದಾರೆ. ಇದು ಸ್ಥಳಾಂತರವನ್ನು ಮುಂದುವರೆಸಿದೆ. ವಿಶ್ವ ಆಹಾರ ಕಾರ್ಯಕ್ರಮ (WFP) ಮತ್ತು ಪಾಲುದಾರರು ನಗದು ಸಹಾಯದಿಂದ ಸುಮಾರು 1,200 ಮನೆಗಳನ್ನು ತಲುಪಿದ್ದಾರೆ ಎಂದು OCHA ಹೇಳಿದೆ.


