ದೆಹಲಿ ಲಿಕ್ಕರ್ ಪಾಲಿಸಿ ಪ್ರಕರಣದಲ್ಲಿ ಆರೋಪಿಯೆಂದು ಪರಿಗಣಿಸಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರವರನ್ನು ಸಿಬಿಐ ಬಂಧಿಸಿದೆ. ರಾಜಕೀಯ ದುರುದ್ದೇಶದಿಂದ ಬಂಧಿಸಲಾಗಿದೆ ಎಂದು ಆರೋಪಿಸಿರುವ ಆಪ್, “ಭ್ರಷ್ಟಾಚಾರ ಆರೋಪ ಹೊತ್ತವರು ಬಿಜೆಪಿ ಸೇರಿದರೆ ಸ್ವಚ್ಛವಾಗಿಬಿಡುತ್ತಾರೆ. ಬಿಜೆಪಿಯ ವಾಷಿಂಗ್ ಮೆಷಿನ್ ಸೇವೆಯಿಂದ ತೃಪ್ತರಾದ ಗ್ರಾಹಕರಿವರು” ಎಂದು ಬಿಜೆಪಿ ಸೇರಿದ ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
Some of the satisfied customers of BJP's ‘Washing Machine’ service 🧼🪷 pic.twitter.com/uo8usNKv53
— AAP (@AamAadmiParty) February 28, 2023
ಕಳೆದ ವಾರ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪ್ರಧಾನಿ ವಿರುದ್ಧ ಮಾತನಾಡಿದರೆಂದು ಬಂಧಿಸಲಾಗಿತ್ತು. ಮೂರು ತಿಂಗಳ ಹಿಂದೆ ಶಿವಸೇನಾ ಮುಖಂಡ, ಸಂಸದ ಸಂಜಯ್ ರಾವತ್‌ರನ್ನು ಇಡಿ ಬಂಧಿಸಿತ್ತು. ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ವಾರಗಟ್ಟಲೇ ಇಡಿ ವಿಚಾರಣೆ ನಡೆಸಿತ್ತು. ಕರ್ನಾಟಕದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರನ್ನು ಪದೇ ಪದೇ ಇಡೀ ಪ್ರಶ್ನಿಸುತ್ತಿದೆ. ಇವರೆಲ್ಲರೂ ತಪ್ಪೆಗೆಸಗಿದ್ದರೆ, ಭ್ರಷ್ಟಾಚಾರ ಎಸಗಿದ್ದರೆ ಅವರನ್ನು ವಿಚಾರಣೆ ಮಾಡುವುದರಲ್ಲಿ, ಶಿಕ್ಷಿಸುವುದು ಸರಿಯಾದ ಮಾರ್ಗ. ಆದರೆ ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಮೇಲಿನ ಎಲ್ಲರೂ ವಿರೋಧ ಪಕ್ಷಗಳ ಸಾಲಿಗೆ ಸೇರುತ್ತಾರೆ. ಇಲ್ಲಿ ಆಳುವ ಬಿಜೆಪಿ ಮತ್ತು ಅವರ ಮಿತ್ರ ಪಕ್ಷಗಳ ಯಾವ ನಾಯಕರ ಮೇಲೆಯೂ IT, ED, CBI ದಾಳಿಗಳು ನಡೆಯುತ್ತಿಲ್ಲ ಏಕೆ? ಅವರೆಲ್ಲರೂ ಮಹಾನ್ ಪ್ರಾಮಾಣಿಕ ರಾಜಕಾರಣಿಗಳೇ? ಹಾಗಿದ್ದರೆ ಈ ಹಿಂದೆ ಭ್ರಷ್ಟಾಚಾರದ ಆರೋಪ ಎದುರಿಸಿದ ಮುಖಂಡರ ಮೇಲೆ ಈ ಸಂಸ್ಥೆಗಳು ಯಾವ ಕ್ರಮ ಕೈಗೊಂಡಿದೆ ನೋಡೋಣ ಬನ್ನಿ.
ಬಿಜೆಪಿ ಪಕ್ಷವನ್ನು ವಾಷಿಂಗ್ ಮೆಷಿನ್ ಪಕ್ಷ ಎಂದು ಯುವ ಹೋರಾಟಗಾರ ಕನ್ಹಯ್ಯ ಕುಮಾರ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಇತರ ಪಕ್ಷಗಳಲ್ಲಿರುವ ಭ್ರಷ್ಟಾಚಾರಿಗಳು, ಕ್ರಿಮಿನಲ್‌ಗಳನ್ನು ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸುತ್ತದೆ. ಆದರೆ ಅವರು ಬಿಜೆಪಿ ಸೇರಿದರೆ ಸ್ವಚ್ಛವಾಗಿಬಿಡುತ್ತಾರೆ. ಅಂದರೆ ಬಿಜೆಪಿ ವಾಷಿಂಗ್ ಮೆಷಿನ್ ಅಲ್ಲವೇ ಎಂದು ವ್ಯಂಗ್ಯವಾಗಿದ್ದರು. ಇದು ವ್ಯಂಗ್ಯ ಮಾತ್ರವೇ?
ಭಾರತದಲ್ಲಿ ಪಕ್ಷಾಂತರ ಸಹಜವಾಗಿದೆ. ನೂರಾರು ರಾಜಕಾರಣಿಗಳು ಬೇರೆ ಪಕ್ಷಗಳಲ್ಲಿದ್ದು ಸಾಕಷ್ಟು ಆರೋಪಗಳನ್ನು ಎದುರಿಸಿದ್ದಾರೆ. ಆಗ ಅವರನ್ನು ಬಿಜೆಪಿ ತೀಕ್ಷ್ಣವಾಗಿ ಟೀಕಿಸಿದೆ. ಆದರೆ ಕೆಲ ಸಮಯದ ನಂತರ ಆ ಭ್ರಷ್ಟಾಚಾರಿಗಳು ಬಿಜೆಪಿ ಸೇರಿದ್ದಾರೆ. ಅದರಲ್ಲಿ ಕೆಲವರು ಬಿಜೆಪಿ ಪದಾಧಿಕಾರಿಗಳಾದರೆ ಇನ್ನು ಕೆಲವರು ಮಂತ್ರಿಗಳಾಗಿದ್ದಾರೆ, ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅಂತವರ ಪಟ್ಟಿ ಇಲ್ಲಿದೆ.
ನಾರಾಯಣ ರಾಣೆ
ಇವರು ಶಿವಸೇನೆಯಿಂದ ರಾಜಕೀಯ ಆರಂಭಿಸಿ ಕಾಂಗ್ರೆಸ್ ಪಕ್ಷದಿಂದ ಮಹಾರಾಷ್ಟ್ರದ ಸಿಎಂ ಆಗಿದ್ದವರು. 300 ಕೋಟಿ ರೂ ಭ್ರಷ್ಟಾಚಾರದಲ್ಲಿ ಅವರ ಹೆಸರು ಕೇಳಿಬಂದಿತ್ತು. ಅಲ್ಲದೆ ನೂರಾರು ಕೋಟಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧಿಕಾರಕ್ಕೆ ಬಂದರೆ ಅವರನ್ನು ಜೈಲಿಗೆ ಕಳಿಸುವುದಾಗಿ 2014 ರಲ್ಲಿ ಘೋಷಿಸಿದ್ದರು. ಆದರೆ ಬಿಜೆಪಿ ಸೇರಿದ ನಾರಾಯಣ ರಾಣೆಯವರಿಗೆ ಕಳೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೇಂದ್ರ ಎಂಎಸ್‌ಎಂಇ ಸಚಿವ ಸ್ಥಾನ ನೀಡಲಾಗಿದೆ! ತದನಂತರ ಅವರನ್ನು ವಿಚಾರಣೆ ಮಾಡುವ ಧೈರ್ಯವನ್ನು ಯಾವುದೇ ಸಂಸ್ಥೆಗಳು ತೋರಿಲ್ಲ.

ಬಿ.ಎಸ್ ಯಡಿಯೂರಪ್ಪ
ಬಿಜೆಪಿಯ ಉನ್ನತ ನಾಯಕರಾಗಿದ್ದ ಬಿ.ಎಸ್ ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2011ರಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರಿದರು. ಅಕ್ರಮ ಡಿನೋಟಿಫಿಕೇಶನ್ ಮಾಡಿದ ಆರೋಪ ಅವರ ಮೇಲಿದೆ. ಕೆಲ ಆರೋಪಗಳಿಂದ ಹೊರಬಂದ ಅವರು ಬಿಜೆಪಿ ವಿರುದ್ಧ ಸಿಡಿದೆದ್ದು 2012ರಲ್ಲಿ ಕೆಜೆಪಿ ಎಂಬ ಪಕ್ಷ ಸ್ಥಾಪಿಸಿದರು. ಆಗ ಬಿಜೆಪಿ ಅವರ ವಿರುದ್ಧ ಭಾರೀ ಆರೋಪ ಮಾಡಿತ್ತು. ಆದರೆ 2014 ರಲ್ಲಿ ಅವರು ತಮ್ಮ ಪಕ್ಷವನ್ನು ಬಿಜೆಪಿಯೊಳಗೆ ವಿಲೀನಗೊಳಿಸಿದರು. ತದನಂತರ ಆಪರೇಷನ್ ಕಮಲ ನಡೆಸಿ ಅವರು ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾದರು. ಅವರನ್ನು ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿಯವರು ಸನ್ಮಾನಿಸಿದರು. ಈಗ ಅವರು ವಿರುದ್ಧ IT, ED, CBI ತನಿಖೆ ನಡೆಯುತ್ತಿಲ್ಲ.
ಸುವೇಂಧು ಅಧಿಕಾರಿ
2016 ರಲ್ಲಿ ಪಶ್ಚಿಮ ಬಂಗಾಳದ ನಾರದ ನ್ಯೂಸ್‌ನ ಸಿಇಒ, ಪತ್ರಕರ್ತ ಮ್ಯಾಥ್ಯೂ ಸ್ಯಾಮುಯೆಲ್ಸ್ ನಡೆಸಿದ ಸ್ಟಿಂಗ್ ಕಾರ್ಯಾಚರಣೆಯ ವಿಡಿಯೋವನ್ನು ಬಿಜೆಪಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿತ್ತು. ಇದರಲ್ಲಿ, ಪತ್ರಕರ್ತ ಸ್ಯಾಮ್ಯುಯೆಲ್ಸ್ ತನ್ನನ್ನು ಉದ್ಯಮಿ ಎಂದು ಬಿಂಬಿಸಿಕೊಂಡು, 11 ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡರಿಗೆ ಹಣ ನೀಡುವುದನ್ನು ಸೆರೆ ಹಿಡಿದಿದ್ದರು. ಅದರಲ್ಲಿ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ಪ್ರಮುಖರು. ಇದು ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಆದರೆ 2017ರಲ್ಲಿ ಮುಕುಲ್ ರಾಯ್ ಬಿಜೆಪಿ ಸೇರಿದರೆ, 2020 ಸುವೇಂದು ಅಧಿಕಾರಿ ಬಿಜೆಪಿ ಸೇರಿದರು. ಸದ್ಯ ಸುವೆಂಧು ಅಧಿಕಾರಿ ಅವರು ಬಂಗಾಳದ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಯಥಾಪ್ರಕಾರ ಅವರ ಮೇಲೆ ಯಾವುದೇ ತನಿಖೆ ನಡೆಯುತ್ತಿಲ್ಲ.
ಲಂಚ ಪಡೆದು ಸ್ಟಿಂಗ್ ಆಪರೇಷನ್‌ನಲ್ಲಿ ಸಿಕ್ಕಿಬಿದ್ದವರು ಬಿಜೆಪಿ ಸೇರ್ಪಡೆ: ಧೃವ್ ರಾಠೀ ಟ್ವೀಟ್ ವೈರಲ್
ಮುಕುಲ್ ರಾಯ್
ಶಾರದ ಚಿಟ್ ಫಂಡ್ ಹಗರಣದಲ್ಲಿ ಬಂಗಾಳದ ಆಗಿನ ಟಿಎಂಸಿ ನಾಯಕ ಮುಕುಲ್ ರಾಯ್ ಹೆಸರು ಕೇಳಿಬಂದಿತ್ತು. ನಂತರ ಅವರು 2017ರಲ್ಲಿ ಬಿಜೆಪಿ ಸೇರಿ ಆರೋಪ ಮುಕ್ತರಾದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು ಆದರು. ಪಕ್ಷದಲ್ಲಿ ತಮಗೆ ಮಾನ್ಯತೆಯಿಲ್ಲ ಎಂದು ಆರೋಪಿಸಿ 2021ರಲ್ಲಿ ಅವರು ಮತ್ತೆ ಟಿಎಂಸಿಗೆ ಮರಳಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ 2014ರವರೆಗೂ ಕಾಂಗ್ರೆಸ್‌ನಲ್ಲಿದ್ದರು. ಆಗ ಭ್ರಷ್ಟಾಚಾರ ನಡೆಸಿದ ಆರೋಪ ಹೊತ್ತಿದ್ದರು ಮತ್ತು ಬಿಜೆಪಿಯಿಂದ ಭಾರೀ ಟೀಕೆ ಎದುರಿಸಿದ್ದರು. ಸೂಕ್ತ ‘ಸ್ಥಾನಮಾನ’ ಸಿಗದ ಕಾರಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಈಗ ಅಸ್ಸಾಂನ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ಮೇಲಿನ ಭ್ರಷ್ಟಾಚಾರದ ಆರೋಪ ಕಸದ ಬುಟ್ಟಿ ಸೇರಿದೆ.
How the Modi govt misuses the agencies to topple govts, induce defections & harass opposition pic.twitter.com/3C7q1BqXY5
— Prashant Bhushan (@pbhushan1) February 28, 2023
ನರೇಶ್ ಅಗರ್‌ವಾಲ್
ನರೇಶ್ ಅಗರ್‌ವಾಲ್ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡರು. ಅದಕ್ಕೂ ಮುನ್ನ ಅವರು ಕಾಂಗ್ರೆಸ್ ಮತ್ತು ಬಿಎಸ್‌ಪಿಯಲ್ಲಿದ್ದವರು. ಇವರ ವಿರುದ್ಧ ಹಲವಾರು ಕ್ರಿಮಿನಲ್ ಆರೋಪಗಳಿದ್ದವು. ಮಹಿಳೆಯರು ಕುರಿತು ತುಚ್ಛವಾಗಿ ಮಾತನಾಡಿದ್ದರು. ಈ ಕಾರಣಕ್ಕೆ ಬಿಜೆಪಿ ಇವರನ್ನು ವಿರೋಧಿಸುತ್ತಿತ್ತು. ಆದರೆ 2018 ರಲ್ಲಿ ಸಮಾಜವಾದಿ ಪಕ್ಷ ರಾಜ್ಯಸಭೆಗೆ ಇವರಿಗೆ ಟಿಕೆಟ್ ನಿರಾಕರಿಸಿದ ತಕ್ಷಣ ಅವರು ಬಿಜೆಪಿ ಸೇರಿದರು. ಈಗ ಸ್ವಚ್ಛವಾಗಿಬಿಟ್ಟ ಕಾರಣ ಅವರ ಮೇಲಿನ ಆರೋಪಗಳು ಕಣ್ಮರೆಯಾಗಿವೆ.

ಭಾವನ ಗವಾಲಿ
ಇವರು ಐದು ಬಾರಿ ಸಂಸದರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಇವರ ವಿರುದ್ಧ ತನಿಖೆ ನಡೆಸುತ್ತಿದೆ. ಆದರೆ ಅವರು ಶಿವಸೇನೆಯ ಏಕನಾಥ್ ಶಿಂಧೆ ಬಣ ಸೇರಿದ್ದಾರೆ. ಅಲ್ಲದೆ ಪಕ್ಷದ ಚೀಫ್ ವಿಪ್ ಆಗಿದ್ದಾರೆ. ಅವರು ಇಡಿ ತನಿಖೆಗೆ ಸತತ 5 ಬಾರಿ ಗೈರು ಹಾಜರಾಗಿದ್ದಾರೆ. ಆದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಇಡಿ ಹೆದರುತ್ತಿದೆ!
ಯಶವಂತ ಜಾಧವ್ ಮತ್ತು ಯಾಮಿನಿ ಜಾಧವ್
ಯಶವಂತ ಜಾಧವ್ ಮುಂಬೈನ ಬಿಎಂಸಿಯ ಸ್ಟ್ಯಾಂಡಿಂಗ್ ಕಮಿಟಿ ಸದಸ್ಯರಾಗಿದ್ದಾರೆ. ಈ ದಂಪತಿಗಳ ಮೇಲೆ ಫೆಮ ಪ್ರಕರಣದಲ್ಲಿ ಇಡಿ ತನಿಖೆ ನಡೆಸುತ್ತಿತ್ತು. ಆದರೆ ಇವರಿಬ್ಬರು ಶಿವಸೇನೆಯ ಏಕನಾಥ್ ಶಿಂಧೆ ಬಣ ಸೇರಿದರು. ತನಿಖೆ ಮೂಲೆಗೆ ಸೇರಿದೆ.
ಪ್ರತಾಪ್ ಸರ್‌ನಾಯಕ್
ಅಕ್ರಮ ಹಣ ಸಂಗ್ರಹಣೆ ಆರೋಪದಲ್ಲಿ ಇಡಿ ಇವರ ಮೇಲೆ ದಾಳಿ ನಡೆಸಿತ್ತು. ಅವರು ಏಕನಾಥ್ ಶಿಂಧೆ ಬಣ ಸೇರಿ ಬಚವಾಗಿದ್ದಾರೆ.
ಮೊನಿರುಲ್ ಇಸ್ಲಾಂ
ಟಿಎಂಸಿಯ ಶಾಸಕ ಮೊನಿರುಲ್ ಇಸ್ಲಾಂ ಮೂರು ಕೊಲೆಯ ಆರೋಪಿ.. ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 2019 ಜೂನ್ 05 ರಂದು ಬಿಜೆಪಿ ಸೇರಿದರು. ಅವರ ಮೇಲಿನ ತನಿಖೆ ನಿಷ್ಕ್ರಿಯವಾಯಿತು.

ಗೌತಮ್ ಗಂಭೀರ್
ದೆಹಲಿಯ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ ಶುರುವಾಗಬೇಕಿದ್ದ ರುದ್ರಾ ಬಿಲ್ಡ್‌ವೆಲ್ ಅಪಾರ್ಟ್ ಮೆಂಟ್ ನಲ್ಲಿ ಪ್ಲ್ಯಾಟ್ ಖರೀದಿಸಲು ಅನೇಕರು ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ ಕಟ್ಟಡ ನಿರ್ಮಾಣ ಕೆಲಸ ಇನ್ನೂ ಪ್ರಾರಂಭವಾಗಿಲ್ಲ ಎಂದು ಹೂಡಿಕೆದಾರರು 2016ರಲ್ಲಿ ದೂರು ಸಲ್ಲಿಸಿದ್ದರು. ಹೂಡಿಕೆದಾರರನ್ನು ವಂಚಿಸುವ ಸಲುವಾಗಿಯೇ ಈ ಪ್ರಾಜೆಕ್ಟನ್ನು ಆರಂಭಿಸಲಾಗಿತ್ತು ಎಂಬ ಆರೋಪವಿತ್ತು. ಮೋಸ ಮತ್ತು ಪಿತೂರಿ ಆರೋಪವನ್ನು ಕಂಪನಿಯ ನಿರ್ದೇಶಕ ಮತ್ತು ಬ್ರಾಂಡ್ ಅಂಬಾಸಿಡರ್ ಆಗಿದ್ದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮೇಲೆ ಹೊರಿಸಲಾಗಿತ್ತು. ಆಗ 2019ರಲ್ಲಿ ಅವರು ಬಿಜೆಪಿ ಸೇರಿ ಆರೋಪ ಮುಕ್ತರಾದರು. ಅದೇ ವರ್ಷ ಸಂಸದರೂ ಸಹ ಆದರು!
ಅನಿಲ್ ಶರ್ಮಾ
ಹಿಮಾಚಲ ಪ್ರದೇಶದ ಅನಿಲ್ ಶರ್ಮಾ ಕಾಂಗ್ರೆಸ್ ಮತ್ತು ಹಿಮಾಚಲ್ ವಿಕಾಸ್ ಕಾಂಗ್ರೆಸ್ ಪಕ್ಷದಲ್ಲಿದ್ದರು. ಟಿಲಿಕಾಂ ಹಗರಣದಲ್ಲಿ ಸಿಲುಕಿಕೊಂಡ ನಂತರ ಕಾಂಗ್ರೆಸ್ ಅವರನ್ನು ಉಚ್ಛಾಟಿಸಿತು. 2017ರಲ್ಲಿ ಬಿಜೆಪಿ ಸೇರಿ ಸಮಸ್ಯೆ ಬಗೆಹರಿಸಿಕೊಂಡರು ಮತ್ತು ಸಚಿವರು ಸಹ ಆಗಿದ್ದರು.
ಇಟಾಲಾ ರಾಜೇಂದರ್
ತೆಲಂಗಾಣದ ಟಿಆರ್‌ಎಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದು ಹಣಕಾಸು ಮತ್ತು ಆರೋಗ್ಯ ಇಲಾಖೆಯ ಸಚಿವರಾಗಿದ್ದರು. ಇವರ ವಿರುದ್ಧ ಭೂಕಬಳಿಕೆ ಆರೋಪ ಬಂದಾಗ ಟಿಆರ್‌ಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಅವರ ಮೇಲಿನ ತನಿಖೆ ನಿಂತು ಹೋಗಿದೆ.
ನಾಲ್ವರು ಟಿಡಿಪಿ ಸಂಸದರು ಬಿಜೆಪಿಗೆ
2018ರ ನವೆಂಬರ್‌ನಲ್ಲಿ ಬಿಜೆಪಿ ಸಂಸದ ಮತ್ತು ವಕ್ತಾರ ಜಿ.ವಿ.ಎಲ್ ನರಸಿಂಹ ರಾವ್ ಅವರು ಟಿಡಿಪಿ ರಾಜ್ಯಸಭಾ ಸಂಸದರಾದ ಸಿ ಎಂ ರಮೇಶ್ ಮತ್ತು ವೈ ಎಸ್ ಚೌದರಿ ಅವರನ್ನು “ಆಂಧ್ರ ಮಲ್ಯಾಸ್” ಎಂದು ಕರೆದು ರಾಜ್ಯಸಭಾ ನೈತಿಕ ಸಮಿತಿಗೆ ಪತ್ರ ಬರೆದು, ಅವರ ವಿರುದ್ಧ “ಸೂಕ್ತ ಕ್ರಮ” ವನ್ನು ಪ್ರಾರಂಭಿಸುವಂತೆ ಕೋರಿದ್ದರು. ಆ ನಾಲ್ವರು ಸಂಸದರು ಸಹ ಸಿಬಿಐ, ಇಡಿ, ಐಟಿ ತನಿಖೆಗಳನ್ನು ಎದುರಿಸುತ್ತಿದ್ದರು. ಮರು ವರ್ಷ 2019 ರಲ್ಲಿ ಆ ಆಂಧ್ರ ಮಲ್ಯಗಳ ಜೊತೆ ಇನ್ನಿಬ್ಬರು ಸಂಸದರು ಸಹ ಬಿಜೆಪಿ ಸೇರಿದರು! ಅವರ ಮೇಲಿನ ತನಿಖೆಗಳು ಮಾಯವಾದವು.
ಕೃಪಶಂಕರ್ ಸಿಂಗ್
ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷದಿಂದ ಸಚಿವರಾಗಿದ್ದ ಕೃಪಶಂಕರ್ ಸಿಂಗ್ ಅವರನ್ನು ಹಲವಾರು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿ ಈ ಹಿಂದೆ ಗುರಿಯಾಗಿಸಿತ್ತು. ಅವರು ಬಿಜೆಪಿ ಸೇರಿ ಆರೋಪ ಮುಕ್ತರಾಗಿದ್ದಾರೆ.

ಮುನಿರತ್ನ ನಾಯ್ಡು
ಕರ್ನಾಟಕದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಇವರು ಕಾಂಗ್ರೆಸ್ ಶಾಸಕರಾಗಿದ್ದರು. 2018ರ ವಿಧಾನಸಭಾ ಚುನಾವಣೆಗೂ ಮುನ್ನ ಸಾವಿರಾರು ಜನರ ವೋಟರ್ ಐಡಿಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ ಎಂದು ಬಿಜೆಪಿ ಇವರ ವಿರುದ್ಧ ಭಾರೀ ಹೋರಾಟ ನಡೆಸಿತ್ತು. 2019 ರಲ್ಲಿ ಅವರು ಬಿಜೆಪಿ ಸೇರಿದರು. ನಂತರ ಶಾಸಕರಾಗಿದ್ದಾರೆ. ಅವರ ಮೇಲಿನ ತನಿಖೆ ನಿಂತು ಹೋಗಿದೆ.
ಇಲ್ಲಿ ಹೆಸರಿಸಿರುವುದು ಕೆಲವರಷ್ಟೆ.. ಈ ರೀತಿ ನೂರಾರು ನಾಯಕರು ಬಿಜೆಪಿ ಸೇರಿ ಆರೋಪಮುಕ್ತರಾಗಿರುವ ಇತಿಹಾಸವಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹತ್ತಾರು ಶಾಸಕರು ಒಮ್ಮೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ನಂತರ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಲ್ಲದೆ ತಾವು ಸಚಿವರಾಗಿದ್ದಾರೆ.
ಈ ವಿಚಾರದಲ್ಲಿ ಬಿಜೆಪಿ ಎರಡು ರೀತಿಯಲ್ಲಿ ವ್ಯವಹರಿಸುತ್ತಾ ಬಂದಿದೆ. ಒಂದು, ಹಗರಣದಲ್ಲಿ ಸಿಕ್ಕಿಹಾಕಿಕೊಂಡವರಿಗೆ ತಮ್ಮ ಪಕ್ಷಕ್ಕೆ ಆಹ್ವಾನಿಸಿ ಅವರಿಗೆ ತಮ್ಮ ಪ್ರಭಾವ ಮತ್ತು ಅಧಿಕಾರ ಬಳಸಿ ಕ್ಲಿನ್ ಚಿಟ್ ನೀಡಲಾಗುತ್ತದೆ. ಒಂದುವೇಳೆ ಅವರು ಪಕ್ಷಕ್ಕೆ ಬರದಿದ್ದರೆ ಅಂಥವರ ಮೇಲೆ ಐ.ಟಿ ದಾಳಿ, ಇ.ಡಿ ದಾಳಿ ರೀತಿಯಲ್ಲಿ ಬೆದರಿಕೆ ಒಡ್ಡಿ, ಸಿಬಿಐ ತನಿಖೆಯ ಗುಮ್ಮ ತೋರಿಸಿ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಅಪ್ರಜಾತಾಂತ್ರಿಕ ನಡೆ ಅನುಸರಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಕೇವಲ ಭ್ರಷ್ಟಾಚಾರಿಗಳನ್ನು ಮಾತ್ರವಲ್ಲ ಕ್ರಿಮಿನಲ್‌ಗಳು, ಅತ್ಯಾಚಾರ ಆರೋಪ ಹೊತ್ತವರು ಸಹ ಬಿಜೆಪಿ ಸೇರಿ ಪಾವನರಾಗುತ್ತಿದ್ದಾರೆ. ಕಪಿಲ್ ಗುರ್ಜರ್ ಎಂಬಾತ ಸಿಎಎ ಹೋರಾಟಗಾರರ ಮೇಲೆ ಗುಂಡು ಹಾರಿಸಿದಾತ. 30 ಡಿಸೆಂಬರ್ 2020ರಂದು ಬಿಜೆಪಿ ಸೇರಿದ.. ಕಪಿಲ್ ಮಿಶ್ರಾ ಆಪ್‌ನಲ್ಲಿದ್ದಾಗ ನರೇಂದ್ರ ಮೋದಿಯವರನ್ನು ಫೇಕು ಎಂದು ಕರೆದಿದ್ದ. ಈಗ ಆತ ಬಿಜೆಪಿ ವಕ್ತಾರ!

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 121 ರಾಜಕೀಯ ಮುಖಂಡರ ಮೇಲೆ ಇಡಿ ದಾಳಿ ನಡೆಸಲಾಗಿದೆ. ಅದರಲ್ಲಿ 115 ಜನರು ವಿರೋಧ ಪಕ್ಷಗಳಿಗೆ ಸೇರಿದವರು. ಅಂದರೆ ಶೇ.95% ವಿಪಕ್ಷಗಳ ಮುಖಂಡರೆ ಆಗಿದ್ದಾರೆ.
ಬಿಜೆಪಿ ವಾಷಿಂಗ್ ಮೆಷಿನ್ ಆಗಿದೆಯೇ ಎಂಬ ಪ್ರಶ್ನೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ “ನಮ್ಮಲ್ಲಿಗೆ ಬರುವವರು ಹಲವು ಗುಣ ದೋಷಗಳನ್ನು ಹೊಂದಿರುತ್ತಾರೆ. ನಮ್ಮಲ್ಲಿ ಬಂದ ತಕ್ಷಣ ಅವು ಕಡಿಮೆಯಾಗುತ್ತವೆ. ಏಕೆಂದರೆ ನಮ್ಮ ಸಂಘಟನಾ ಪದ್ದತಿ ಹಾಗಿದೆ” ಎಂದು ಉತ್ತರಿಸಿದ್ದರು. ಅದಕ್ಕೆ “ಆಗಿದ್ದರೆ ಜೈಲು ವ್ಯವಸ್ಥೆ ಏಕೆ ಬೇಕು? ಎಲ್ಲಾ ಆರೋಪಿಗಳನ್ನು ಬಿಜೆಪಿಗೆ ಕಳಿಸಿಬಿಡಬಹುದಲ್ಲ” ಎಂದು ಎನ್‌ಡಿಟಿವಿಯ ಹಿರಿಯ ಪತ್ರಕರ್ತ ರವೀಶ್ ಕುಮಾರ್ ವ್ಯಂಗ್ಯವಾಡಿದ್ದರು.
ಬಿಜೆಪಿ ಪಕ್ಷವು ಆಡಳಿತಕ್ಕಿಂತ ವಿರೋಧ ಪಕ್ಷದಲ್ಲಿದ್ದರೆ ಚೆನ್ನಾಗಿ ಕೆಲಸ ಮಾಡುತ್ತದೆ ಎಂಬ ಮಾತು ಹಲವಾರು ಬಾರಿ ಕೇಳಿಬಂದಿದೆ. ಒಂದು ಮಟ್ಟಿಗೆ ಇದು ನಿಜ ಕೂಡ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿರಲಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಇರಲಿ ಬಿಜೆಪಿ ಬೃಹತ್ ಹೋರಾಟಗಳನ್ನು ನಡೆಸಿದೆ. ಆಡಳಿತ ಪಕ್ಷದ ಹಲವಾರು ಹಗರಣಗಳನ್ನು ಬಯಲಿಗೆಳೆದಿದ್ದು, ಹಲವಾರು ಭ್ರಷ್ಟಾಚಾರ ಆರೋಪ ಹೊತ್ತ ರಾಜಕಾರಣಿಗಳು ಕೆಳಗಿಳಿಯುವಂತೆ ಮಾಡಿದೆ. ಅವರ ವಿರುದ್ಧ ತೀವ್ರತರದ ಟೀಕೆಗಳನ್ನು ಮಾಡಿದೆ. ಆದರೆ ವಿಪರ್ಯಾಸವೆಂದರೆ ಯಾರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿತ್ತೊ, ಯಾರನ್ನು ಭ್ರಷ್ಟರು ಎಂದು ಕರೆದಿತ್ತೊ ಅಂತವರನ್ನೆ ಕೆಲ ವರ್ಷದ ನಂತರ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದೆ. ಅವರಿಗೆ ಅಧಿಕಾರ ನೀಡಿದೆ. ಇಂದು ಬಿಜೆಪಿಯಲ್ಲಿರುವ ಬಹಳಷ್ಟು ಮುಖಂಡರು ಹಿಂದೆ ಬೇರೆ ಬೇರೆ ಪಕ್ಷದಲ್ಲಿದ್ದರು. ಈಗ ಬಿಜೆಪಿ ಸೇರಿ ಅಧಿಕಾರ ಅನುಭವಿಸುತ್ತಿದ್ದಾರೆ. ಅವರ ಮೇಲೆ IT, ED, CBI ತನಿಖೆ ನಡೆಯದಿರುವುದು ಅವು ಕೈಗೊಂಬೆಗಳು ಎನ್ನುವ ಆರೋಪಕ್ಕೆ ಪುಷ್ಟಿ ನೀಡುತ್ತದೆ ಅಷ್ಟೆ.
ಇದನ್ನೂ ಓದಿ: ಜೈಲಿಗೆ ಹೆದರುವುದಿಲ್ಲ: ಮತ್ತೆ CBI ಮುಂದೆ ವಿಚಾರಣೆಗೆ ಹಾಜರಾಗಲಿರುವ ಮನೀಶ್ ಸಿಸೋಡಿಯಾ


