Homeಅಂತರಾಷ್ಟ್ರೀಯಚುನಾವಣೆಗಳನ್ನೇ ಬುಡಮೇಲು ಮಾಡುವ ಜಾಗತಿಕ ವಂಚಕ ಜಾಲ ಬಯಲು

ಚುನಾವಣೆಗಳನ್ನೇ ಬುಡಮೇಲು ಮಾಡುವ ಜಾಗತಿಕ ವಂಚಕ ಜಾಲ ಬಯಲು

- Advertisement -
- Advertisement -

ಕಂಪ್ಯೂಟರ್ ಮತ್ತು ಮೊಬೈಲ್ ಹ್ಯಾಕಿಂಗ್ ಚಟುವಟಿಕೆಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಸ್ವಯಂಚಾಲಿತವಾದ ಸುಳ್ಳು ಮಾಹಿತಿಗಳನ್ನು ಹರಡುವಿಕೆ, ವೈಯಕ್ತಿಕ ಮಾಹಿತಿಗಳ ದುರ್ಬಳಕೆ ಮೊದಲಾದ ಕುಟಿಲ ಚಾಣಕ್ಯ ತಂತ್ರಗಳನ್ನು ಬಳಸಿ, ಈ ತನಕ ಪ್ರಪಂಚದಾದ್ಯಂತ 30ಕ್ಕೂ ಹೆಚ್ಚು ದೇಶಗಳ ಚುನಾವಣೆಗಳಲ್ಲಿ ಏರುಪೇರು ಮಾಡಿದ ಮಾಜಿ ಗುಪ್ತಚರರ ಗುಂಪನ್ನು ಹೊಂದಿರುವ ಇಸ್ರೇಲಿ ಜಾಲವೊಂದನ್ನು ರೇಡಿಯೋ ಫ್ರಾನ್ಸ್, ಫರ್ಬಿಡನ್ ಸ್ಟೋರೀಸ್, ಗಾರ್ಡಿಯನ್ ಮುಂತಾದ ಪತ್ರಿಕೆಗಳ ಐರೋಪ್ಯ/ಆಫ್ರಿಕನ್ ತನಿಖಾ ಪತ್ರಕರ್ತರ ತಂಡ ಸಾಕ್ಷ್ಯಾಧಾರ ಸಹಿತ ಬಯಲು ಮಾಡಿದೆ.

ಭಾರತವೂ ಸೇರಿದಂತೆ ಇಡೀ ವಿಶ್ವದಲ್ಲೇ ಪ್ರಜಾಪ್ರಭುತ್ವ ಅಪಾಯದಲ್ಲಿ ಇರುವ ಸಂದರ್ಭದಲ್ಲಿ ಮತ್ತು ’ಪೆಗಸಸ್, ’ ಕೇಂಬ್ರಿಜ್ ಅನಾಲಿಟಿಕಾ’ ಮುಂತಾದ ತಂತ್ರಜ್ಞಾನ ಕಂಪೆನಿಗಳು ನಡೆಸಿರುವ ರಾದ್ಧಾಂತಗಳ ಹಿನ್ನೆಲೆಯಲ್ಲಿ ’ಗಾರ್ಡಿಯನ್ ಸೇರಿದಂತೆ ವಿವಿಧ ಯುರೋಪಿಯನ್ ಮಾಧ್ಯಮಗಳ ವರದಿಗಳ ಸಾರಾಂಶವನ್ನು ಈ ಬರಹದಲ್ಲಿ ಭಾರತೀಯ ಸಂದರ್ಭದಲ್ಲಿ ನಿರೂಪಿಸಲಾಗಿದೆ ಅಷ್ಟೇ.

ಈ ಎಲ್ಲದರ ಹಿಂದೆ ಇರುವುದು ಇಸ್ರೇಲ್ ಮತ್ತು ಅಲ್ಲಿನ ವಿಶೇಷ ಪಡೆಗಳ (ಸ್ಪೆಷಲ್ ಫೋರ್ಸಸ್) ಗುಪ್ತಚರ ತಾಲ್ ಹನನ್ ಎಂಬ 50 ವರ್ಷ ಪ್ರಾಯದ ವ್ಯಕ್ತಿ. ಅವನೀಗ “ಜಾರ್ಜ್” ಎಂಬ ಗುಪ್ತನಾಮದಲ್ಲಿ ಕೆಲಸ ಮಾಡುತ್ತಿದ್ದಾನೆ. ಎರಡು ದಶಕಗಳಿಂದ ಈತ ಯಾರ ಗಮನಕ್ಕೂ ಬಾರದಂತೆ ಬೇರೆಬೇರೆ ದೇಶಗಳ ಚುನಾವಣೆಗಳಲ್ಲಿ ಕೈಯ್ಯಾಡಿಸಿದ್ದಾನೆ ಮತ್ತು ಭಾರತೀಯ ರಾಜಕೀಯದಲ್ಲಿಯೂ ಸಂಚಲನ ಉಂಟುಮಾಡಿದ್ದ ಪೆಗಾಸಸ್ ಮತ್ತು ಅನಾಲಿಟಿಕಾ ಜೊತೆಗೂ ಸಂಬಂಧ ಹೊಂದಿದ್ದ ಎಂಬುದನ್ನು ನಾವು ಆತಂಕದಿಂದ ಗಮನಿಸಬೇಕು.

ವಿಶ್ವದಾದ್ಯಂತ ಸಿಐಎ, ಕೆಜಿಬಿ ಮತ್ತು ಕ್ರಿಮಿನಲ್ ಹಾಗೂ ಕಾರ್ಪೊರೆಟ್ ಮಾಫಿಯಾ ಗೂಂಡಾಗಳು ಸೇರಿದಂತೆ ವಿಶ್ವದಾದ್ಯಂತ ಮಾಜಿ ಗುಪ್ತಚರರು, ಸೇನಾಧಿಕಾರಿಗಳು, ಪೊಲೀಸರಲ್ಲಿ ಬಹುತೇಕರು ರಾಜಕೀಯ ಸೇರುತ್ತಾರೆ ಇಲ್ಲವೇ ತಮ್ಮ ಸೇವೆಗಳನ್ನು ಬಾಡಿಗೆಗೆ ನೀಡುತ್ತಾರೆ. ಭಾರತದ ಮಟ್ಟಿಗೂ ಇದು ನಿಜ. ಇದಕ್ಕೆ ಜಾಗತಿಕ ಉದಾಹರಣೆ ಕೊಡಬೇಕೆಂದರೆ, ರಷ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಿಂದೆ ಕೆಜಿಬಿ ತರಬೇತಿ ಪಡೆದ ಉನ್ನತ ಅಧಿಕಾರಿ. ಸೋವಿಯತ್ ಯೂನಿಯನ್ ಪತನಕ್ಕೆ ಕಾರಣನಾದ ಮತ್ತು ಅಧ್ಯಕ್ಷನೂ ಆದ ರಂಗೀಲಾ ಮಾತುಗಾರ. ರಷ್ಯದ ಮಾಜಿ ಅಧ್ಯಕ್ಷ ಬೋರಿಸ್ ಯೆಲ್ಸ್ಟಿನ್ ಮಾತ್ರವಲ್ಲ; ಎಡ ಪಂಥೀಯರೂ ಸೇರಿದಂತೆ ಎಲ್ಲಾ ನಾಯಕರ ಗುಟ್ಟುಗಳು ಆತನಿಗೆ ಗೊತ್ತಿದ್ದವು. ಹಲವು ಲ್ಯಾಟಿನ್ ಅಮೆರಿಕನ್ ದೇಶಗಳೂ ಸೇರಿದಂತೆ ಹಲವು ದೇಶಗಳಲ್ಲಿ ಸರ್ವಾಧಿಕಾರ ಮತ್ತು ಬಲಪಂಥೀಯರ ಬಲವಾಗಿರುವರು ಎಂದರೆ ಮಾಜಿ ಗುಪ್ತಚರ, ಮಿಲಿಟರಿ, ಪೊಲೀಸ್ ಜನರು. ಇಂತಹವರನ್ನು ನಿಯಂತ್ರಿಸಬಲ್ಲ ಮತ್ತು ಅವರ ಮೂಲಕ ದೇಶ ನಿಯಂತ್ರಿಸಬಲ್ಲ ತಡಿಪಾರ್ ಕ್ರಿಮಿನಲ್‌ಗಳೇ ಅಧಿಕಾರಕ್ಕೆ ಏರುತ್ತಾರೆ. ಗುಪ್ತಚರ್ಯೆಯಲ್ಲಿ ಎಲ್ಲಾ ಎಲ್ಲೆ ಮೀರಿದ ಯುಎಸ್‌ಎಯಲ್ಲಿ, ಇಂದು ಹಿಂದಿನ ಸೋವಿಯತ್-ರಷ್ಯ ಉಕ್ರೇನ್ ಮತ್ತು ಲ್ಯಾಟಿನ್ ಅಮೆರಿಕದ (ಇವುಗಳು ಯುಎಸ್‌ಎನ ಶತ್ರು ರಾಷ್ಟ್ರಗಳು ಎಂದು ಪರಿಗಣಿಸಲಾಗಿತ್ತು) ಮಾಜಿ ಗುಪ್ತಚರ, ಮಿಲಿಟರಿ ಮತ್ತು ಪೊಲೀಸ್ ಅಧಿಕಾರಿಗಳೇ ಮಾಫಿಯಾ ಗ್ಯಾಂಗುಗಳ ಚುಕ್ಕಾಣಿ ಹಿಡಿದು, ಯಾಕೆ ಭಯಾನಕವಾದ ಶಸ್ತ್ರಾಸ್ತ್ರ, ಡ್ರಗ್ ಮತ್ತು ಹ್ಯೂಮನ್ ಟ್ರಾಫಿಕಿಂಗ್ (ಮಾನವ ಸಾಗಾಟ) ಮುಂತಾದ ದಂಧೆಗಳಲ್ಲಿ ತೊಡಗಿದ್ದಾರೆ ಎಂಬದನ್ನು ನೋಡಿದರೆ, ರಾಜಕೀಯ ಮತ್ತು ಅಪರಾಧಕ್ಕೆ ಪರಸ್ಪರ ಸಂಬಂಧ ಇರುವುದು ತಿಳಿಯುತ್ತದೆ. ಪ್ರಪಂಚದಾದ್ಯಂತ ಸರ್ವಾಧಿಕಾರಗಳು ಪ್ರಜಾಪ್ರಭುತ್ವದ ಹೆಸರಿನಲ್ಲಿ ದೇಶದೇಶಗಳನ್ನು ದೋಚುತ್ತಿರುವುದನ್ನೂ ನೋಡಬಹುದು. ಹಿಂದೆ ಸರ್ವಾಧಿಕಾರಗಳು ಮಿಲಿಟರಿ ಕ್ರಾಂತಿಯ ಆಶ್ರಯ ಪಡೆದುಕೊಂಡಿದ್ದರೆ, ಇಂದು ಇಲೆಕ್ಟ್ರಾನಿಕ್ ಯುಗದಲ್ಲಿ ಮೋಸದ “ಚುನಾವಣಾ ಕ್ರಾಂತಿ”ಯ ಆಶ್ರಯ ಪಡೆದಿವೆ. ಈ ಹಿನ್ನೆಲೆಯಲ್ಲಿ ಈಗಿನ ಹೊಸ ತನಿಖೆಯನ್ನು ಕಾಣಬಹುದು.

ಇದನ್ನೂ ಓದಿ: ಇಂದು ನಾಗಲ್ಯಾಂಡ್, ಮೇಘಾಲಯಗಳಲ್ಲಿ ಚುನಾವಣೆ: ಸದ್ಯದ ಬಲಾಬಲ ಹೀಗಿದೆ

ಅಂತಾರಾಷ್ಟ್ರೀಯ ಪತ್ರಕರ್ತರ ತಂಡ ಬಯಲು ಮಾಡಿರುವ ತಾಲ್ ಹನನ್ ಗುಂಪು “ಟೀಮ್ ಜಾರ್ಜ್” ಎಂಬ ಗುಪ್ತನಾಮದಲ್ಲಿ ಕಾರ್ಯಾಚರಿಸುತ್ತಿದ್ದು, ಇದರ ಎಲ್ಲಾ ಕಾರ್ಯಾಚರಣೆಗಳು ಈಗ ದಾಖಲೆ ಸಹಿತ ಬಯಲಾಗಿವೆ. ಗುಪ್ತಚರ್ಯೆಯಲ್ಲಿ ಪಳಗಿದವರನ್ನೇ ಪತ್ರಕರ್ತರು ಗುಪ್ತಚರರ ರೀತಿಯಲ್ಲೇ ಯಾಮಾರಿಸಿದ ಪ್ರಕರಣವಿದು. ಅದಲ್ಲದೇ ಒಂದು ಸಾಮಾಜಿಕ, ರಾಜಕೀಯ ಅಕ್ರಮ ಜಾಲವನ್ನು ಬಯಲಿಗೆಳೆಯಲು ಹಲವಾರು ಪತ್ರಿಕೆಗಳು, ಮಾಧ್ಯಮಗಳು ಜೊತೆಗೆ ಸೇರಿ ಒಂದೇ ಉದ್ದೇಶದಿಂದ ತನಿಖೆ ನಡೆಸಿದ ಪ್ರಕರಣವೂ ಇದಾಗಿದೆ. ಸಾಮಾನ್ಯವಾಗಿ ಭಾರತೀಯ ಮುಖ್ಯವಾಹಿನಿ ಮಾಧ್ಯಮಗಳು “ನಾವೇ ಮೊದಲು, ನಮ್ಮಲ್ಲೇ ಮೊದಲು” ಎಂಬ ನೆಲೆಯಲ್ಲಿ ಕಿರುಚಿಕೊಳ್ಳುವುದಕ್ಕಿಂತ ತುಂಬಾ ವಿಭಿನ್ನವಾದ ಪತ್ರಿಕೋದ್ಯಮವಿದು.

ಈ ಕುರಿತು ’ಗಾರ್ಡಿಯನ್ ಆರೋಪಿತ ವ್ಯಕ್ತಿಯನ್ನು ಸಂಪರ್ಕಿಸಿದಾಗ, “ನಾನ್ಯಾವುದೇ ತಪ್ಪು ಮಾಡಿರುವುದನ್ನು ನಿರಾಕರಿಸುತ್ತೇನೆ” ಎಂದು ಹನನ್ ಹೇಳಿದ್ದಾನೆ. ಆದರೆ, ಆತನ ಮಾತುಗಳೆಲ್ಲಾ ಟೇಪುಗಳಲ್ಲಿ ಇವೆ. ಆತನೇ ಹೇಳಿರುವ ಪ್ರಕಾರ ಆತನ ತಂಡ “ಟೀಮ್ ಜಾರ್ಜ್” ಖಾಸಗಿಯಾಗಿ, ಯಾವುದೇ ಸಾಕ್ಷ್ಯಾಧಾರ ಬಿಟ್ಟುಕೊಡದೆ ಚುನಾವಣೆಗಳಲ್ಲಿ ಹಸ್ತಕ್ಷೇಪ ನಡೆಸುತ್ತದೆ. ಅದು ಕಾರ್ಪೊರೇಟ್ ಗಿರಾಕಿಗಳಿಗಾಗಿಯೂ ಕೆಲಸ ಮಾಡುತ್ತದೆ.
ಗುರುತು ಬದಲಿಸಿ ತಮಗೇ ಆತನ ಸೇವೆಗಳು ಬೇಕು ಎಂಬಂತೆ ನಟಿಸಿದ ಪತ್ರಕರ್ತರ ತಂಡಕ್ಕೆ ಆತ ನೀಡಿರುವ ಮಾಹಿತಿಯ ಪ್ರಕಾರ, ಸಾರ್ವಜನಿಕ ಅಭಿಪ್ರಾಯಗಳನ್ನು ಏರುಪೇರು ಮಾಡಲು ಬಯಸುವ ಗುಪ್ತಚರ ಸಂಸ್ಥೆಗಳಿಗಾಗಿ, ರಾಜಕೀಯ ಪಕ್ಷಗಳಿಗಾಗಿ ಮತ್ತು ಖಾಸಗಿ ಕಾರ್ಪೋರೆಟ್ ಸಂಸ್ಥೆಗಳಿಗಾಗಿ ಆತ ಬ್ಲ್ಯಾಕ್ ಅಪರೇಷನ್ಸ್ ಅಂದರೆ, ಕರಾಳ ಕಾರ್ಯಾಚರಣೆಗಳನ್ನು ನಡೆಸುತ್ತಾನೆ. ಅವನ ಪ್ರಕಾರ ಆತನ ಗುಂಪು ಆಫ್ರಿಕಾ ಖಂಡದ ಉದ್ದಗಲಕ್ಕೂ, ದಕ್ಷಿಣ ಮತ್ತು ಸೆಂಟ್ರಲ್ ಅಮೆರಿಕಾ, ಯುಎಸ್‌ಎ ಮತ್ತು ಯುರೋಪಿನಲ್ಲಿ ಕರಾಳ ಕಾರ್ಯಾಚರಣೆಗಳನ್ನು ನಡೆಸಿದೆ.

ಟೀಮ್ ಜಾರ್ಜ್ ಗುಂಪಿನ ಅತ್ಯಂತ ಮಹತ್ವದ ಮತ್ತು ಅತ್ಯಾಧುನಿಕ ಉತ್ಪನ್ನ ಎಂದರೆ, ಅಡ್ವಾನ್ಸ್ ಡ್ ಇಂಪ್ಯಾಕ್ಟ್ ಮೀಡಿಯಾ ಸೊಲ್ಯೂಷನ್ಸ್ (ಎಐಎಂಎಸ್) ಎಂಬ ಸಾಫ್ಟ್‌ವೇರ್. ಅದು ಟ್ವಿಟ್ಟರ್, ಲಿಂಕ್ಡ್ ಇನ್, ಫೇಸ್‌ಬುಕ್, ಟೆಲಿಗ್ರಾಂ, ಜಿ ಮೇಲ್, ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್ ಮುಂತಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಫೇಕ್ ಅಕೌಂಟುಗಳ ದೊಡ್ಡ ಸೇನೆಯನ್ನೇ ಹೊಂದಿದೆ. ಇವುಗಳಲ್ಲಿ ಕೆಲವು ಅವತಾರಗಳು ಅಮೆಜಾನ್ ಮುಂತಾದ ಸಂಸ್ಥೆಗಳಲ್ಲೂ ಅಕೌಂಟ್ ಹೊಂದಿದ್ದು ಬಿಟ್ ಕಾಯಿನ್, ಏರ್ ಬಿಎನ್‌ಬಿ ವಾಲೆಟ್‌ಗಳು (ಪರ್ಸ್) ಮುಂತಾಗಿ ಕ್ರೆಡಿಟ್ ಕಾರ್ಡುಗಳನ್ನೂ ಹೊಂದಿವೆ.

ಈ ಕುರಿತು ತನಿಖೆ ನಡೆಸಿದ ಪತ್ರಕರ್ತರ ತಂಡದಲ್ಲಿ ರೇಡಿಯೋ ಫ್ರಾನ್ಸ್ ಎಲ್ ಪ್ಯಾರಿಸ್, ಲೀ ಮೋಂಡ್, ಡರ್ ಸ್ಪಿಗೆಲ್ ಸೇರಿದಂತೆ ೩೦ ಪತ್ರಕರ್ತರಿದ್ದರು. ಹತ್ಯೆಗೀಡಾದ, ಬೆದರಿಕೆಗೆ ಒಳಗಾಗಿರುವ, ಜೈಲುಪಾಲಾಗಿರುವ ಪತ್ರಕರ್ತರ ಪರವಾಗಿ ಕೆಲಸ ಮಾಡುವ ’ಫರ್ಬಿಡನ್ ಸ್ಟೋರೀಸ್ ಎಂಬ ಫ್ರಾನ್ಸಿನ ಲಾಭರಹಿತ ಸಂಘಟನೆಯು ಸುಳ್ಳು ಸುದ್ದಿ ಜಾಲಗಳ ಕುರಿತ ವಿಸ್ತೃತ ತನಿಖೆಯ ಭಾಗವಾಗಿ ಈ ಕುಟುಕು ಕಾರ್ಯಾಚರಣೆ ನಡೆದಿದೆ. ಸಂಭಾವ್ಯ ಗಿರಾಕಿಗಳಂತೆ ನಟಿಸಿದ ಮೂವರು ಪತ್ರಕರ್ತರು ಟೀಮ್ ಜಾರ್ಜನ್ನು ಸಂಪರ್ಕಿಸಿ, ನಡೆಸಿದ ಮಾತುಕತೆಗಳನ್ನು ಗುಪ್ತವಾಗಿ ಚಿತ್ರಿಸಿಕೊಂಡಿದ್ದಾರೆ.

ತಾವು ಜಿ-ಮೇಲ್ ಮತ್ತು ಟೆಲಿಗ್ರಾಂನಂತಹ ಖಾತೆಗಳಿಗೆ ಹೇಗೆ ಹ್ಯಾಕಿಂಗ್ ಮೂಲಕ ಪ್ರವೇಶ ಪಡೆದು, ಹೇಗೆ ಮಾಹಿತಿ ಕದಿಯುತ್ತೇವೆ, ಹೇಗೆ ಅಲ್ಲಿ ನಕಲಿ ದಾಖಲೆಗಳನ್ನು ಸೇರಿಸುತ್ತೇವೆ ಇತ್ಯಾದಿಯಾಗಿ ಗುಪ್ತವಾಗಿ ಚಿತ್ರೀಕರಿಸಲಾದ ಆರು ಗಂಟೆಗಳ ಮಾತುಕತೆಗಳಲ್ಲಿ ಹನನ್ ಮತ್ತು ಆತನ ತಂಡದವರು ಬಹಿರಂಗಪಡಿಸಿದ್ದಾರೆ. ಇಲ್ಲಿ ಭಾರತದಲ್ಲಿ ಆನಂದ ತೇಲ್ತುಂಬ್ಡೆ, ರೋಣ ವಿಲ್ಸನ್, ವರವರ ರಾವ್, ಸುಧಾ ಭಾರಧ್ವಾಜ್, ಜೈಲಿನಲ್ಲೇ ಮೃತರಾದ ಇನ್ನೊಬ್ಬ ವಯೋವೃದ್ಧ ಹೋರಾಟಗಾರರಾದ ಸ್ಟ್ಯಾನ್ ಸ್ವಾಮಿ ಮುಂತಾದವರ ಕಂಪ್ಯೂಟರ್‌ಗಳಲ್ಲಿ ದೇಶದ್ರೋಹದ ಆರೋಪಗಳನ್ನು ಹೊರಿಸಬಹುದಾದ ನಕಲಿ ದಾಖಲೆಗಳನ್ನು ಹ್ಯಾಕ್ ಮಾಡಿ ಸೇರಿಸಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಬೇಕು. ಇದರಲ್ಲಿ ಟೀಮ್ ಜಾರ್ಜ್ ಭಾಗಿಯಾಗಿರುವ ಬಗ್ಗೆ ದಾಖಲೆ ಸದ್ಯಕ್ಕೆ ಇಲ್ಲವಾದರೂ, ಅದು ಅನಾಲಿಟಿಕಾ ಜೊತೆ ಗುಪ್ತ ಸಂಬಂಧ ಹೊಂದಿದೆ ಮತ್ತು ಭಾರತ ಸರಕಾರ ಖರೀದಿಸಿ, ಸಾರ್ವಜನಿಕ ವ್ಯಕ್ತಿಗಳ ಮೇಲೆ ಕಾನೂನು ಬಾಹಿರವಾಗಿ ಬಳಸಿದೆ ಎಂದು ಆರೋಪಿಸಲಾಗಿರುವ ಗೂಢಚರ್ಯೆಯ ಪೆಗಸಸ್ ಸಾಫ್ಟ್‌ವೇರ್ ಇಸ್ರೇಲಿನದ್ದಾಗಿದೆ ಎಂಬುದನ್ನೂ ಗಮನಿಸಬೇಕು. ತಾವು ಹೇಗೆ ಮಾಧ್ಯಮಗಳಿಗೆ ಸುಳ್ಳುಸುದ್ದಿಗಳನ್ನು ದಾಟಿಸಿ, ನಂತರ ಹೇಗೆ ತಮ್ಮ ಎಐಎಂಎಸ್ ಸಾಫ್ಟ್‌ವೇರ್ ಮೂಲಕ ಎಲ್ಲಾ ಕಡೆ ಹರಡುತ್ತೇವೆ ಎಂದೂ ಈ ತಂಡದವರು ಕೊಚ್ಚಿಕೊಂಡಿದ್ದಾರೆ.

ಅವರ ಮುಖ್ಯ ಕಾರ್ಯತಂತ್ರವು ಎದುರಾಳಿಗಳ ಪ್ರಚಾರಾಭಿಯಾನಗಳಿಗೆ ತಡೆಯೊಡ್ಡುವುದು ಮತ್ತು ಅದನ್ನು ಬುಡಮೇಲು ಮಾಡುವುದಾಗಿದೆ. ಅದು ವಿರೋಧಿ ರಾಜಕಾರಣಿಗಳ ಚಾರಿತ್ರ್ಯಹರಣವನ್ನೂ ಮಾಡುತ್ತದೆ. ಒಂದ ಸಲ ಒಬ್ಬ ರಾಜಕಾರಣಿಗೆ ಅಮೆಜಾನ್ ಮೂಲಕ ಸೆಕ್ಸ್ ಆಟಿಕೆಯನ್ನು ಕಳುಹಿಸಿ, ಅವರ ಹೆಂಡತಿಗೆ ಅವರ ಮೇಲೆ ಸಂಶಯ ಬರುವಂತೆ ಮಾಡಲಾಗಿತ್ತು. ಇಂತಹ ನೀಚ ಕಾರ್ಯವನ್ನೂ ಮಾತುಕತೆಗಳಲ್ಲಿ ಬಹಿರಂಗಪಡಿಸಲಾಗಿದೆ.

ತಮ್ಮ ವೇದಿಕೆಗಳಲ್ಲಿ ಸಮಾಜವಿರೋಧಿಗಳು ಸುಳ್ಳು ಸುದ್ದಿಗಳನ್ನು ಹರಡದಂತೆ ಮಾಡಲು ಯತ್ನಿಸುತ್ತಿರುವ ಸಾಮಾಜಿಕ ಮಾಧ್ಯಮಗಳು ಮತ್ತು ಜಾಲತಾಣಗಳ ಸುರಕ್ಷತಾ ವ್ಯವಸ್ಥೆಗೇ ಈ ತಂಡವು ಬಳಸಿರುವ ಕೀಳು ತಂತ್ರಗಳು ದೊಡ್ಡ ಸವಾಲನ್ನು ಒಡ್ಡಿವೆ. ಅವುಗಳ ವೇದಿಕೆಗಳಿಂದಲೂ ಬಳಕೆದಾರರು ಒದಗಿಸುವ ಖಾಸಗಿ ಮಾಹಿತಿಗಳನ್ನು ಕದಿಯಲಾಗುತ್ತಿದೆ. ಅಪಪ್ರಚಾರ ಮತ್ತು ಸುಳ್ಳು ಸುದ್ದಿಗಳನ್ನು ಹರಡುವುದಕ್ಕೆ ಬಳಸಿಕೊಳ್ಳುತ್ತಿವೆ. ಅದೂ ಚುನಾವಣೆಗಳ ಸಂದರ್ಭದಲ್ಲಿ ಇದಕ್ಕೆ ದೊಡ್ಡ ಮಾರುಕಟ್ಟೆ ಇರುವುದು ಜಗತ್ತಿನಾದ್ಯಂತದ ಪ್ರಜಾಪ್ರಭುತ್ವಗಳಿಗೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರ: ಪಠಾಣ್ ಹಾಡು, ಟ್ರೇಲರ್‌‌ ನಿರ್ಬಂಧಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾ

ಟೀಮ್ ಜಾರ್ಜ್ ಷಡ್ಯಂತ್ರಗಳು ಬಯಲಾಗಿರುವುದು ಇಸ್ರೇಲಿಗೆ ದೊಡ್ಡ ಇರಿಸುಮುರಿಸು ಉಂಟುಮಾಡಬಹುದು. ಇತ್ತೀಚಿನ ವರ್ಷಗಳಲ್ಲಿ ಅದು ಗುಪ್ತಚರ್ಯೆಯ ಇಲೆಕ್ಟ್ರಾನಿಕ್/ಸೈಬರ್ ಅಸ್ತ್ರಗಳನ್ನು ರಫ್ತು ಮಾಡಿ, ಪ್ರಜಾಪ್ರಭುತ್ವಗಳಿಗೆ ಮತ್ತು ಮಾನವ ಹಕ್ಕುಗಳ ಹೋರಾಟಗಳಿಗೆ ಬಹಳಷ್ಟು ಹಾನಿ ಉಂಟುಮಾಡುತ್ತಿರುವುದಕ್ಕಾಗಿ ಕೆಲವು ದೇಶಗಳಿಂದ ರಾಜತಾಂತ್ರಿಕ ಒತ್ತಡ ಎದುರಿಸುತ್ತಿದೆ. ಹನನ್ ತಾನು ಯಾವುದೇ ಕಾನೂನುಬಾಹಿರ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಾನಾದರೂ, ಅವನು ತನ್ನ ಸುಳ್ಳು ಸುದ್ದಿ ಮತ್ತು ಅಪಪ್ರಚಾರ ಅಭಿಯಾನವನ್ನು “ಡೆಮೋಮ್ಯಾನ್ ಇಂಟರ್‌ನ್ಯಾಷನಲ್ ಎಂಬ ಸಂಸ್ಥೆಯ ಮೂಲಕ ನಡೆಸುತ್ತಾನೆ. ಇದನ್ನು ಅವನು ಒಂದು ಇಸ್ರೇಲಿ ರಕ್ಷಣಾ ಇಲಾಖೆಯ ವೆಬ್‌ಸೈಟಿನಲ್ಲಿ ನೊಂದಾಯಿಸಿಕೊಂಡಿದ್ದು, ತಾನು ಇಸ್ರೇಲಿನ ರಕ್ಷಣಾ ಸಲಕರಣೆಗಳ ರಫ್ತನ್ನು ಉತ್ತೇಜಿಸುವ ಉದ್ದೇಶ ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ. ’ಗಾರ್ಡಿಯನ್ ಈ ಕುರಿತು ಸಂಪರ್ಕಿಸಿದಾಗ ಇಸ್ರೇಲಿ ರಕ್ಷಣಾ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು- ಈತನ ಕೃತ್ಯಗಳಿಗೆ ಇಸ್ರೇಲಿ ರಕ್ಷಣಾ ಇಲಾಖೆ ಅಥವಾ ಗುಪ್ತಚರ ಸಂಸ್ಥೆಗಳ ಕೃಪಾಶೀರ್ವಾದ ಇರುವ ಕುರಿತು ಸಂಶಯ ಮೂಡಿಸಿದೆ.

ಕುಟುಕು ಕಾರ್ಯಾಚರಣೆ
ಗುಪ್ತಚರ್ಯೆಯಲ್ಲಿ ಪಳಗಿದ ಈ ಗುಂಪು ಈ ಪತ್ರಕರ್ತರ ತಂಡವೊಂದಕ್ಕೆ ಯಾಮಾರಿ, ಬಹಳಷ್ಟು ಗುಟ್ಟುಗಳನ್ನು ಬಿಟ್ಟುಕೊಟ್ಟದ್ದು ಆಶ್ಚರ್ಯಕರವಾಗಿದೆ. ಎಲ್ಲಾ ಕಡೆ ಆಗುವಂತೆ ಸರಕಾರದ ಕೃಪಾಶೀರ್ವಾದದ ಅತಿ ವಿಶ್ವಾಸ ಇದಕ್ಕೆ ಕಾರಣವಾಯಿತೆ? ಗೊತ್ತಿಲ್ಲ. ನೀವು ನಿಮ್ಮ ಮುಖವನ್ನು ಬದಲಿಸಿಕೊಳ್ಳುವ, ನಿಮ್ಮನ್ನು ಎಳೆಯರನ್ನಾಗಿಸಿ, ಮುದುಕರನ್ನಾಗಿಸಿ ಚಿತ್ರಿಸುವ ಆಪ್‌ಗಳು ಹೇಗೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಬಳಸಬಹುದು ಎಂಬುದನ್ನು ಗಮನಿಸಬೇಕು. (ಈ ಕುರಿತು ಒಂದು ಬರಹ ಇದೇ ಪತ್ರಿಕೆಯಲ್ಲಿ ಪ್ರಕಟವಾಗಿದೆ.) ಯಾಕೆಂದರೆ, ನಾವು ಏನನ್ನೂ ಓದದೆ ಒಂದು ಕ್ಲಿಕ್ ಮೂಲಕ ಒಪ್ಪಿಗೆ ಕೊಟ್ಟಿರುತ್ತೇವೆ. ಯಾವ ದೇಶದ ಯಾವ ಕೋರ್ಟ್‌ನಲ್ಲಿ ನೀವು ನ್ಯಾಯ ಪಡೆಯಲು ಸಾಧ್ಯ? ನಮ್ಮಲ್ಲಿ ಹಣವಿದೆಯೇ? ಇಲ್ಲ! ಓಟಿದೆಯೇ? ಇದೆ. ಇದನ್ನು ಸಾಮ-ದಾನ-ಭೇದ-ದಂಡದಿಂದ ಬದಲಿಸಬಹುದೇ? ಬದಲಿಸಬಹುದು. ಇದೇ ಕುಟಿಲ ಆರೆಸ್ಸೆಸ್ ತಂತ್ರವನ್ನು ಟೀಮ್ ಜಾರ್ಜ್ ಬಳಸುತ್ತಿದೆ. ಸಾಂಪ್ರದಾಯಿಕ ಪತ್ರಕರ್ತರು ಸುಳ್ಳು ಮತ್ತು ಅಪಪ್ರಚಾರ ಕೈಗಾರಿಕೆಯ ಗುಟ್ಟನ್ನು ಬಯಲಿಗೆಳೆಯಲು ವಿಫಲರಾಗಿದ್ದಾರೆ ಅಥವಾ ಹಣ, ಆಮಿಷ, ಬ್ಲಾಕ್‌ಮೇಲ್‌ಗೆ ಬಲಿಯಾಗಿ ತಮ್ಮನ್ನು ತಾವೇ ಮಾರಿಕೊಳ್ಳುತ್ತಾರೆ. ಬಳಕೆದಾರರ ಇಂತಹ ಆಟಿಕೆಯ ಆಪ್‌ಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕದಿಯುವ ಮಾಹಿತಿಗಳೇ ಇಂದು ಕೋಟ್ಯಂತರ ಬೆಲೆಬಾಳುವ ಸರಕಾಗಿದೆ. ಇಂತಹುದರೆ ಬೆನ್ನುಬಿದ್ದು ಗುಪ್ತ ಕಾರ್ಯಾಚರಣೆ ಮಾಡಿರುವ ಮೂವರು ಧೀರ ಪತ್ರಕರ್ತರು (ಭದ್ರತೆ ದೃಷ್ಟಿಯಿಂದ ಅವರ ಗುರುತನ್ನು ಬಹಿರಂಗಪಡಿಸಿಲ್ಲ) ಜುಲೈ ಮತ್ತು ಡಿಸೆಂಬರ್ 2022ರ ನಡುವೆ ಈ ಬಾಡಿಗೆ ಅಪಪ್ರಚಾರಕರ ಬಗ್ಗೆ ದೀರ್ಘ ವರದಿಯನ್ನು ನೀಡಿದ್ದಾರೆ.

ತಾನು ಕ್ರಿಮಿನಲ್ ಅಲ್ಲ ಎಂದು ಹೇಳಿಕೊಳ್ಳುವ ಈ ಹನನ್ ಎಂಬ ವ್ಯಕ್ತಿ ಗೊತ್ತೇ ಆಗದಂತೆ ಎಲ್ಲಾ ಅಂತಾರಾಷ್ಟ್ರೀಯ ಕಾನೂನುಗಳನ್ನು ಮುರಿದಿದ್ದಾನೆ. ಇವನ ನೆಲೆ ಮತ್ತು ಗುರುತು ಸಿಗಲಾರದ ಕಚೇರಿ ಇರುವುದು ಇಸ್ರೇಲ್ ರಾಜಧಾನಿ ಟೆಲ್ ಆವೀವ್‌ನಿಂದ ಕೇವಲ 20 ಮೈಲು ದೂರ ಇರುವ “ಮೋಡಿ’ಇನ್ (Modi-’in)  ಎಂಬ ಕೈಗಾರಿಕಾ ವಲಯದಲ್ಲಿ.

ಈ ಹನನ್ ಹೇಳುವ ಪ್ರಕಾರ, ಆತನ ತಂಡ ವಿಶ್ವದಾದ್ಯಂತ ಆರು ಕಚೇರಿಗಳನ್ನು ಹೊಂದಿದ್ದು, ತನ್ನ ತಂಡದವರು ಆರ್ಥಿಕ, ಸಾಮಾಜಿಕ ಮತ್ತು ಸಾಮಾಜಿಕ ಮಾಧ್ಯಮಗಳ ಕ್ಷೇತ್ರದಲ್ಲಿ ತಜ್ಞರು ಎನ್ನುತ್ತಾನೆ. ಈ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ನಾಲ್ವರು ಸಹಚರರಲ್ಲಿ ಜೋಹರ್ ಹನನ್ ಒಬ್ಬನಾಗಿದ್ದು, ಈತ ತಾಲ್ ಹನನ್ ಸಹೋದರ ಮತ್ತು ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಎಂದು ಹೇಳಲಾಗಿದೆ.
ನಾವು ಆಫ್ರಿಕಾ, ಗ್ರೀಸ್, ಎಮಿರೇಟ್ಸ್ (ಯುಎಇ?) ಚುನಾವಣೆಗಳಲ್ಲಿ ಭಾಗಿಯಾಗಿದ್ದೇವೆ ಮತ್ತು ಫಲಿತಾಂಶಗಳನ್ನು ನೀವು ನೋಡಬಹುದು ಎಂದು ಈತ ಗಿರಾಕಿ ಕುದುರಿಸುವ ಭರದಲ್ಲಿ ತನಿಖಾ ತಂಡಕ್ಕೆ ಹೇಳಿದ್ದ. ಒಟ್ಟು 33 ಅಧ್ಯಕ್ಷೀಯ (ಪ್ರಧಾನಿ ಹುದ್ದೆಗಳೂ ಸೇರಿದಂತೆ ದೇಶದ ಮುಖ್ಯಸ್ಥರು) ಚುನಾವಣೆಗಳಲ್ಲಿ 27 ಕಾರ್ಯಾಚರಣೆಗಳು ಯಶಸ್ವಿಯಾಗಿವೆ ಎಂದು ತಾಲ್ ಹನನ್ ಹೇಳಿದ್ದಾನೆ. ತಾನು ಯುಎಸ್‌ಎಯ ಎರಡು ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರೂ, ನೇರವಾಗಿ ಯುಎಸ್‌ಎಯ ರಾಜಕೀಯದಲ್ಲಿ ಭಾಗಿಯಾಗಿಲ್ಲವೆಂದೂ ಹೇಳಿದ್ದಾನೆ. ನೈಜೀರಿಯಾ ಮತ್ತು ಕೀನ್ಯಾದಂತ ಪ್ರಮುಖ ದೇಶಗಳ ಚುನಾವಣೆಗಳಲ್ಲಿ ಅನಲಿಟಿಕಾ ಕೈಯ್ಯಾಡಿಸಿತ್ತು ಮತ್ತು ತನ್ನ ನೆರವನ್ನೂ ಕೇಳಿತ್ತು ಎಂದೂ ಈತ ತನಗರಿವಿಲ್ಲದೇ ಬಹಿರಂಗಪಡಿಸಿದ್ದಾನೆ.

 

ಈತನ ಸಂಸ್ಥೆಯು ಬಿಟ್ ಕಾಯಿನ್ ರೀತಿಯ ಡಿಜಿಟಲ್ ಕರೆನ್ಸಿ ಆಥವಾ ನಗದಿನಲ್ಲಿ ಮಾತ್ರ ವ್ಯವಹರಿಸುತ್ತದೆ ಎಂಬುದೂ ಗೊತ್ತಾಗಿದೆ. ಈತ ಯುರೋಗಳಲ್ಲಿ ವ್ಯವಹರಿಸುತ್ತಿದ್ದು, ಚೌಕಾಸಿ ಕೂಡಾ ಮಾಡುತ್ತಾನೆ. ಆತನ ದರ 60 ಲಕ್ಷ ಯುರೋದಿಂದ ಒಂದೂವರೆ ಕೋಟಿ ಯುರೋವರೆಗೆ ಇದೆ. ಈತ 2015ರ ಲ್ಯಾಟಿನ್ ಅಮೆರಿಕದ ದೇಶವೊಂದರ ಚುನಾವಣೆಯಲ್ಲಿ ಕೈಯಾಡಿಸಲು ಅನಲಿಟಿಕಾದಿಂದ 1.6 ಕೋಟಿ ಯುರೋ ಕೇಳಿದ್ದ. ಸಂಭಾವ್ಯ ಗಿರಾಕಿಗಳ ಮೇಲೆ ಪ್ರಭಾವ ಬೀರಲು ಈತ ಮೊತ್ತವನ್ನು ಹೆಚ್ಚು ಹೇಳುತ್ತಾನೋ ಎಂದು ಪರಿಶೀಲಿಸಲು ತನಿಖಾ ತಂಡಕ್ಕೆ ಸಾಧ್ಯವಾಗಲಿಲ್ಲ.

ಅನಲಿಟಿಕಾದ ಮಾಜಿ ಕಾರ್ಯನಿರ್ವಾಹಕ ಅಲೆಕ್ಸಾಂಡರ್ ನಿಕ್ಸ್ ಇಂಥ ಸಂಬಂಧವನ್ನು ಸಹಜವಾಗಿಯೇ ನಿರಾಕರಿಸಿದ್ದಾನೆ. ಆದರೆ, ಹೇಗೆ ಸಾಮೂಹಿಕವಾಗಿ ಸಂದೇಶಗಳನ್ನು ಕಳಿಸಿ ಅಪಪ್ರಚಾರದ ಅಭಿಯಾನ ನಡೆಸಬಹುದು ಮತ್ತು ಹೇಗೆ ವಿರೋಧಿಗಳ ಬಾಯಿ ಮುಚ್ಚಿಸಬಹುದು ಎಂಬ ಬಗ್ಗೆ ಒಂದು ವಿಡಿಯೋವನ್ನು ಹನನ್ ಅನಲಿಟಿಕಾಕ್ಕೆ ಕಳುಹಿಸಿರುವುದನ್ನು ತನಿಖಾ ಪತ್ರಕರ್ತರ ತಂಡ ವರದಿಮಾಡಿದೆ. ಇದನ್ನು 17 ಚುನಾವಣೆಗಳಲ್ಲಿ ಬಳಸಿರುವುದಾಗಿಯೂ ಹೇಳಿಕೊಂಡಿದ್ದಾನೆ. “ನೋಡಿ, ಯಾವುದೇ ಭಾಷೆ ಆಗಿರಲಿ, ಸ್ಪಾನಿಷ್, ರಶ್ಯನ್, ಪೋರ್ಚುಗೀಸ್, ಇಂಗ್ಲಿಷ್… ಬಿಳಿ, ಕರಿ, ಏಷ್ಯನ್, ಮುಸ್ಲಿಂ.. ಯಾರೇ ಆಗಿರಲಿ.. ಇದನ್ನು ಬಳಸಬಹುದು. ಇವಳು ನೋಡಿ… ಸೋಫಿಯಾ ವೈಟ್. ಇವಳ ಹೆಸರು ನನಗಿಷ್ಟ. ಇವಳು ಬ್ರಿಟಿಷ್ ಪ್ರಜೆ. ಇವಳ ಊರು, ಇ ಮೇಲ್, ಜನನ ದಿನಾಂಕ ಎಲ್ಲವೂ ನನಗೆ ಗೊತ್ತು” ಎಂದು ಆತ ಡೆಮೋ ನೀಡುತ್ತಾನೆ. ಇಂಗ್ಲೆಂಡಿನ ಲೀಡ್ಸ್‌ನಲ್ಲಿ ಬದುಕುವ ಈ ಮಹಿಳೆಯ ಜಾತಕವನ್ನು ರಶ್ಯಾದ ವೆಬ್‌ಸೈಟ್ ಒಂದರಿಂದ ಪಡೆಯಲಾಗಿದೆಯಂತೆ! ಯಾರಿಗೆ ಗೊತ್ತು? ಅವನಲ್ಲಿ ಭಾರತೀಯ ಪ್ರಜೆಯಾದ ನಿಮ್ಮ ಜಾತಕವೂ ಇರಬಹುದು. ಗಾರ್ಡಿಯನ್ ಮಾಡಿದ ಪ್ರತ್ಯೇಕ ತನಿಖೆಗಳ ಪ್ರಕಾರ ಇವರು ತಮ್ಮ ನಕಲಿ ಅಕೌಂಟುಗಳಿಗೆ ಭಾವಚಿತ್ರಗಳನ್ನು ಅಸಲಿ ಅಕೌಂಟುಗಳಿಂದ ಕದಿಯುತ್ತಾರೆ ಮತ್ತು ನಮ್ಮ ಪ್ರೊಫೈಲುಗಳನ್ನೇ ಹೈಜಾಕ್ ಮಾಡುತ್ತಾರೆ.

“ಗ್ರೂಪ್ ಜಾರ್ಜ್” ಚಟುವಟಿಕೆಗಳು ಈಗ ಬಯಲಾಗಿರಬಹುದು. ನಮ್ಮದೇ ಗುಪ್ತಚರ ಸಂಸ್ಥೆಗಳೂ ಸೇರಿದಂತೆ ಎಷ್ಟು ದೇಶಗಳ ಗುಪ್ತಚರ ಸಂಸ್ಥೆಗಳು, ಖಾಸಗಿ ಬಾಡಿಗೆ ಸಂಸ್ಥೆಗಳು ನಮ್ಮ ಜೀವನದಲ್ಲಿ, ನಾವು ನಿರೂಪಿಸುವ, ನಂಬುವ ಅಭಿಪ್ರಾಯಗಳಲ್ಲಿ ಕೈಯ್ಯಾಡಿಸುತ್ತಾ ಇರಬಹುದು? ಭಾರತವು ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಅನಿಯಂತ್ರಿತವಾಗಿ ಸಾಮಾಜಿಕ ಮಾಧ್ಯಮ ಮತ್ತು ಜಾಲತಾಣಗಳನ್ನು ಬಳಸುವ ದೇಶ. ನಮ್ಮಲ್ಲಿ ಇತಿಹಾಸವನ್ನೇ ತಿರುಚುವ ವಾಟ್ಸಪ್ ಯುನಿವರ್ಸಿಟಿ ಹುಟ್ಟಿಕೊಂಡಿದೆ. ಸತ್ಯದ ತಲೆಯ ಮೇಲೆ ಹೊಡೆಯುವ ಸುಳ್ಳುಗಳನ್ನು ಹೇಳಲಾಗುತ್ತಿದೆ ಮತ್ತು ಮುಗ್ಧ ಜನರು ನಂಬುತ್ತಿದ್ದಾರೆ. ಈ ’ಎರಡು ರೂಪಾಯಿ ಗಿರಾಕಿಗಳು’ ಎಂದು ಕರೆಯಲಾಗುವ ಅಪಪ್ರಚಾರಕರನ್ನು ಛೂ ಬಿಟ್ಟವರು ಯಾರು? ಇವರ ಹಿಂದೆ ಯಾರಿದ್ದಾರೆ? “ಟೀಮ್ ಜಾರ್ಜ್” ರೀತಿಯ ದೇಶಿ/ವಿದೇಶಿ ತಂಡಗಳು ಇಲ್ಲಿಯೂ ಇವೆಯೆ? ಅವುಗಳನ್ನು ನಡೆಸುವವರು, ಬಾಡಿಗೆಗೆ ಪಡೆಯುವವರು ಯಾರು? ಈ ಕುರಿತು ತನಿಖೆ ನಡೆಯಬೇಡವೆ? ನಡೆದಲ್ಲಿ ನಡೆಸುವವರು ಯಾರು? ನಾವು ಎಚ್ಚರವಾಗಿ ಇರಬೇಡವೆ?

(ಅಧಾರ: ಫರ್ಬಿಡನ್ ಸ್ಟೋರೀಸ್, ಗಾರ್ಡಿಯನ್ ಪತ್ರಿಕೆ ಸೇರಿದಂತೆ ಐರೋಪ್ಯ ಸ್ವತಂತ್ರ ಮಾಧ್ಯಮ ವರದಿಗಳು)
– ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...