ಪಠಾಣ್ ಚಿತ್ರದ ಟ್ರೇಲರ್, ಟೀಸರ್, ಬೇಷರಮ್ ರಂಗ್ ಹಾಡು ಮತ್ತು ಜಾಹೀರಾತುಗಳನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡದಂತೆ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್‌ಗೆ ನಿರ್ಬಂಧಿಸಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮಹಾರಾಷ್ಟ್ರ ಸಿವಿಲ್ ನ್ಯಾಯಾಲಯವು ಕಳೆದ ವಾರ ತಿರಸ್ಕರಿಸಿದೆ.
ಮೇಲ್ನೋಟಕ್ಕೆ ಯಾವುದೇ ಪ್ರಕರಣ ಕಂಡುಬಂದಿಲ್ಲ. ಅರ್ಜಿದಾರರು ತಮ್ಮ ಪ್ರಕರಣವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಚಿತ್ರದ ಟೀಸರ್, ಟ್ರೇಲರ್, ಹಾಡುಗಳು ಮತ್ತು ಜಾಹೀರಾತುಗಳಿಗೆ ಸಂಬಂಧಿಸಿದಂತೆ ಸೆನ್ಸಾರ್ ಮಂಡಳಿಯ ಯು/ಎ ಪ್ರಮಾಣಪತ್ರವನ್ನು ಯೂಟ್ಯೂಬ್‌ನಲ್ಲಿ ಮೊದಲೇ ಪ್ರದರ್ಶಿಸಿಲ್ಲ. ಇದನ್ನು ಕಂಡು ಗೊಂದಲಕ್ಕೊಳಗಾಗಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಅರ್ಜಿ ಸಲ್ಲಿಸಿದ್ದರು.
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ನೀಡಿದ U/A ಪ್ರಮಾಣಪತ್ರವು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ಪೋಷಕರೊಂದಿಗೆ ಸಿನಿಮಾ ನೋಡಬಹುದೆಂದು ಸೂಚಿಸುತ್ತದೆ.
ಪತ್ರಿಕೆಗಳು, ಹೋರ್ಡಿಂಗ್‌ಗಳು, ಟ್ರೇಲರ್‌ಗಳು ಮತ್ತು ಟೀಸರ್‌ಗಳಲ್ಲಿ ಜಾಹೀರಾತು ಪ್ರಕಟಿಸುವ ಮೊದಲು ಸಿನಿಮಾಟೋಗ್ರಫಿ ಕಾಯ್ದೆಯಡಿ ಯು/ಎ ಪ್ರಮಾಣಪತ್ರವನ್ನು ತಿಳಿಸುವುದು ಅಗತ್ಯ ಎಂದು ಅರ್ಜಿದಾರರು ವಾದಿಸಿದ್ದರು.
ಪ್ರಮಾಣ ಪತ್ರ ತೋರಿಸದಿರುವುದರಿಂದ ನನಗೆ ಹಾಗೂ ಸಮಾಜಕ್ಕೆ ನಷ್ಟವಾಗುತ್ತಿದೆ ಎಂದು ಆರೋಪಿಸಿದ್ದರು. ಅರ್ಜಿದಾರರು ತಾನು ಯಾವ ನಷ್ಟವನ್ನು ಅನುಭವಿಸುತ್ತಿದ್ದೇನೆ ಎಂದು ಉಲ್ಲೇಖಿಸಿಲ್ಲ.
ಯಶ್ ರಾಜ್ ಫಿಲ್ಮ್ಸ್ ಅನ್ನು ಪ್ರತಿನಿಧಿಸುವ ವಕೀಲ ಹರ್ಷ್ ಬುಚ್ ಅವರು, “ದಾವೆಯು ತಪ್ಪುದಾರಿಗೆಳೆಯುವಂತಿದೆ” ಎಂದು ವಾದಿಸಿದರು. ಒಒಟಿಯಲ್ಲಿ ಜಾಹೀರಾತು ಪ್ರಕಟಿಸುವಾಗ ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರವನ್ನು ತೋರಿಸಬೇಕು ಎಂಬ ನಿಯಮವಿಲ್ಲ” ಎಂದು ಸ್ಪಷ್ಪಡಿಸಿದ್ದಾರೆ.
ಚಲನಚಿತ್ರವನ್ನು ಚಿತ್ರಮಂದಿರದಲ್ಲಿ ಪ್ರದರ್ಶಿಸುವುದಕ್ಕೆ, ಡಿವಿಡಿಗಳನ್ನು ಮಾಡುವುದಕ್ಕೆ ಮಾತ್ರ ಸಿನಿಮಾಟೋಗ್ರಫಿ ಆಕ್ಟ್‌ನ ಪ್ರಮಾಣೀಕರಣ ಅಗತ್ಯವಿರುತ್ತದೆ ಎಂದು ಬುಚ್ ತಿಳಿಸಿದರು. ಯೂಟ್ಯೂನ್‌ನಂತಹ ಪ್ಲಾಟ್‌ಫಾರ್ಮ್‌ಗಳು ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಮೂಲಕ ನಿಯಂತ್ರಿಸಲ್ಪಡುತ್ತವೆ ಎಂದು ಅವರು ಉಲ್ಲೇಖಿಸಿದರು.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಜನವರಿ 25 ರಂದು ಬಿಡುಗಡೆಯಾಯಿತು. ಅದಕ್ಕೂ ಮೊದಲೇ ಹಲವಾರು ವಿರೋಧಗಳನ್ನು ಎದುರಿಸಿತು.
ಡಿಸೆಂಬರ್‌ನಲ್ಲಿ ಬೇಷರಂ ರಂಗ್ ಹಾಡು ಆನ್‌ಲೈನ್‌ನಲ್ಲಿ ಬಿಡುಗಡೆಯಾದ ನಂತರ, ಬಿಜೆಪಿ ನಾಯಕ, ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ತಕರಾರು ತೆಗೆದಿದ್ದರು. “ದೀಪಿಕಾ ಪಡುಕೋಣೆ ಅವರ ವೇಷಭೂಷಣ ಸರಿಯಿಲ್ಲ, ರಾಜ್ಯದಲ್ಲಿ ಈ ಸಿನಿಮಾ ಪ್ರದರ್ಶನಕ್ಕೆ ನಿರ್ಬಂಧ ಹೇರಲಾಗುವುದು” ಎಂದು ಬೆದರಿಕೆ ಹಾಕಿದ್ದರು. ಬೇಷರಂ ರಂಗ್ ಹಾಡಿನಲ್ಲಿ ಪಡುಕೋಣೆಯಲ್ಲಿ ಕೇಸರಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆಂದು ವಿರೋಧ ವ್ಯಕ್ತವಾಗಿತ್ತು. ಸಿನಿಮಾವನ್ನು ಬಹಿಷ್ಕರಿಸುವಂತೆ ಹಲವಾರು ಹಿಂದುತ್ವ ಗುಂಪುಗಳು ಕರೆ ನೀಡಿದ್ದವು.