ಅಕ್ರಮಗಳ ಆರೋಪದ ಮೇಲೆ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ, ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತದೆಯೇ? ಎಂಬ ಅನುಮಾನ ಮೂಡಿದೆ.
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಈ ಬಾರಿಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಐದು ತಿಂಗಳುಗಳಾಗಿವೆ. ಆ ಬಳಿಕ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಸಮ್ಮೇಳನ ನಡೆಯಲಿರುವ ಜಾಗವನ್ನು ನೋಡಿರುವುದು ಬಿಟ್ಟರೆ ಸಮ್ಮೇಳನ ಕುರಿತಂತೆ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಸಮ್ಮೇಳನ ಮುಂದೂಡುವ ಕುರಿತು ಸರ್ಕಾರ ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಕಳೆದ ವರ್ಷ, ಅಂದರೆ ಡಿಸೆಂಬರ್ 2024ರಲ್ಲಿ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. 88ನೇ ಸಮ್ಮೇಳನವನ್ನು ಈ ವರ್ಷದ ಡಿಸೆಂಬರ್ 26ರಿಂದ ಮೂರು ದಿನಗಳ ಕಾಲ ಬಳ್ಳಾರಿಯಲ್ಲಿ ನಡೆಸುವುದಾಗಿ ಕಸಾಪ ಘೋಷಿಸಿತ್ತು. ಈ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 2025-26 ರ ರಾಜ್ಯ ಬಜೆಟ್‌ನಲ್ಲಿ 10 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ.
ಮಹೇಶ್ ಜೋಶಿ ವಿರುದ್ಧದ ಅಕ್ರಮದ ಆರೋಪಗಳು ಕೇಳಿ ಬಂದ ಬಳಿಕ, ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ ಗಾಯತ್ರಿ ಅವರನ್ನು ಕಸಾಪ ಆಡಳಿತಾಧಿಕಾರಿಯಾಗಿ ನೇಮಿಸಿದೆ.
ಹಲವು ಸಾಹಿತ್ಯಾಸಕ್ತರು ಮಹೇಶ್ ಜೋಶಿಯ ಹಣಕಾಸು ಅಕ್ರಮದ ಕುರಿತು ನಡೆಯುತ್ತಿರುವ ತನಿಖೆ ಪೂರ್ಣಗೊಳ್ಳುವವರೆಗೂ ಸಮ್ಮೇಳನ ನಡೆಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರ್‌ಎಸ್‌ಎಸ್ ನೋಂದಣಿ ಮಾಡಿಕೊಂಡಿಲ್ಲ ಏಕೆ? ಒತ್ತಡಕ್ಕೆ ಮಣಿದು ಉತ್ತರ ಕೊಟ್ಟ ಭಾಗವತ್


