ಕೆಲ ದಿನಗಳ ಹಿಂದಷ್ಟೇ ಭಾರಿ ಸದ್ದು ಮಾಡಿದ್ದ ಮೀಸಲಾತಿ ಹೋರಾಟ ಈಗ ನಡೆಯುತ್ತಿರುವ ಕಲಾಪದಲ್ಲಿ ಪ್ರಸ್ತಾಪವೇ ಆಗುತ್ತಿಲ್ಲ. ಭಾರಿ ಹವಾ ಮಾಡಿದ ಪಂಚಮಸಾಲಿ ಹೋರಾಟವೂ ಸಿ.ಡಿ ಗದ್ದಲದಲ್ಲಿ ಗಾಯಬ್ ಆಗಿದೆ. ಈ ನಡುವೆ, ಲಿಂಗಾಯತ ಧರ್ಮದಲ್ಲಿ ಈ ವೀರಶೈವರದೇನು ಕೆಲಸ, ಅವರು ಲಿಂಗಾಯತ ಧರ್ಮದ 100 ಉಪಪಂಗಡಗಳಲ್ಲಿ ಒಂದು ಅಷ್ಟೇ ಎಂದು ನಿವೃತ್ತ ಐಎಎಸ್ ಅಧಿಕಾರಿ, ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ್ ಜಾಮದಾರ್ ಹೇಳಿದ್ದಾರೆ. ನಾನುಗೌರಿ.ಕಾಂ ಜೊತೆಗಿನ ದೂರವಾಣಿ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
ನಾನುಗೌರಿ: ಇತ್ತೀಚೆಗೆ ಸುದ್ದಿಯಾದ ಪಂಚಮಸಾಲಿ ಮೀಸಲಾತಿ ಹೋರಾಟ ಸದನದಲ್ಲಿ ಸುದ್ದಿಯೇ ಆಗಲಿಲ್ಲ. ಈ ಕುರಿತು ನಿಮ್ಮ ಅಭಿಪ್ರಾಯ?
ಜಾಮದಾರ್: ರೀ ಅದೊಂದು ಹೋರಾಟವಾ? ಅಮಾಯಕ ಪಂಚಮಸಾಲಿಗಳನ್ನು ದಿಕ್ಕು ತಪ್ಪಿಸಿದ ಮತ್ತು ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಂಡ ಹೋರಾಟವಾಗಿದೆ.
ನಾನುಗೌರಿ: ಅಂದರೆ ಪಂಚಮಸಾಲಿಗಳು 2ಎ ಮೀಸಲಾತಿಗೆ ಅರ್ಹರೇ ಅಲ್ಲ ಎಂಬುದು ನಿಮ್ಮ ಅಭಿಪ್ರಾಯವೇ?
ಜಾಮದಾರ್: ಎಲ್ಲ ಸಮುದಾಯಗಳಿಗೂ ತಮ್ಮ ಪಾಲಿನ ಮೀಸಲಾತಿ ಕೇಳುವ ಹಕ್ಕಿದೆ. ಆದರೆ ಇದನ್ನು ಯಡಿಯೂರಪ್ಪ ಆಗಲಿ, ಸಿಸಿ ಪಾಟೀಲ್, ನಿರಾಣಿ ಅವರಾಗಲಿ ಏಕ್‌ಧಂ ನಿರ್ಣಯ ಮಾಡಲು ಆಗಲ್ಲ. ಅದಕ್ಕೆ ಒಂದು ಪ್ರೊಸೆಸ್ ಅಂತಾ ಇದೆ. ಈ ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಳ್ಳುತ್ತಿದಾರಷ್ಟೇ.
ನಾನುಗೌರಿ.ಕಾಂ: 3-ಬಿಯಿಂದ 2ಎ ಗೆ ಸೇರಲು ಅವರ ಪ್ರತಿಭಟನೆ ನಡೆಯಿತು. ಈ ಕುರಿತು ನಿಮ್ಮ ಅಭಿಪ್ರಾಯ ಏನು?
ಜಾಮದಾರ್: ಲಿಂಗಾಯತ ಧರ್ಮದಲ್ಲಿ 100 ಉಪ ಪಂಗಡಗಳಿವೆ. 3-ಬಿಯಲ್ಲಿ ಉಲ್ಲೇಖ ಆಗಿರುವುದು ಕೇವಲ 23 ಲಿಂಗಾಯತ ಉಪ ಪಂಗಡಗಳಷ್ಟೆ. ಉಳಿದ 77 ಉಪ ಪಂಗಡಗಳ ಬಗ್ಗೆ ಯಾರೂ ಯೊಚಿಸುತ್ತಿಲ್ಲ. ಕೆಲವು ರಾಜಕಾರಣಿಗಳ ಪುಸಲಾವಣೆಯೊಂದಿಗೆ ಕಾವಿ ತೊಟ್ಟವರು ಪಂಚಮಸಾಲಿ ಸಮಯದಾಯದ ದಿಕ್ಕು ತಪ್ಪಿಸಲು ನೋಡಿದರು. ಅದರ ಭಾಗವೇ ಈ ಹೋರಾಟ. ಈ ಹೋರಾಟ ಲಿಂಗಾಯತರಿಗೆ ಒಂದು ಕಪ್ಪು ಚುಕ್ಕೆ.
ನಾನುಗೌರಿ: ಇದರ ಹಿಂದೆ ಒಂದು ದೊಡ್ಡ ಶಕ್ತಿಯೇ ಇದೆಯಲ್ಲವಾ?
ಜಾಮದಾರ್: ಎಲ್ಲ ಪಂಚಮಸಾಲಿಗಳಲ್ಲ. ಆದರೆ ಅವರನ್ನು ಪ್ರತಿನಿಧಿಸುತ್ತೇವೆ ಎನ್ನುವ ಸ್ವಾಮಿಗಳು, ರಾಜಕಾರಣಿಗಳ ಒಂದು ಗುಂಪಿದೆ. ಬೇಡ ಜಂಗಮರ ಹೆಸರಲ್ಲಿ ಬೇಡರ ಮೀಸಲಾತಿ ಕದಿಯುವ ಗುಂಪಿದೆ ಮತ್ತು ವೀರಶೈವ-ಲಿಂಗಾಯತ ಎನ್ನುವ ತಳಬುಡವಿಲ್ಲದ ಗುಂಪೂ ಇದೆ. ಈ ಮೂರೂ ಗುಂಪುಗಳು ಅಖಂಡ ಲಿಂಗಾಯತ ಧರ್ಮವನ್ನು ಒಡೆದು ಹಾಕುತ್ತಿವೆ.
ನಾನುಗೌರಿ: ನೀವು ವೀರಶೈವ-ಲಿಂಗಾಯತ ಎಂಬ ತಳಬುಡವಿಲ್ಲದ ಗುಂಪು ಎಂದಿರಿ. ಈಗ ಅದೇ ಹೆಸರಲ್ಲಿ ಒಂದು ನಿಗಮ ಆಗಿದೆಯಲ್ಲ?
ಜಾಮದಾರ್: ವೀರಶೈವ-ಲಿಂಗಾಯತ ಅಂದರೆ ಯಾರ‍್ರಿ ಇವರು? ವೀರಶೈವರೂ ಅಲ್ಲ, ಈ ಕಡೆ ಲಿಂಗಾಯತರೂ ಅಲ್ಲ. ಲಿಂಗಾಯತ ಧರ್ಮಧ ನೂರು ಉಪ ಪಂಗಡಗಳಲ್ಲಿ ಅದೂ ಒಂದು ಅಷ್ಟೇ. ಈ ಹೆಸರಲ್ಲಿ ಒಂದು ಸರ್ವಶ್ರೇಷ್ಠ ಧರ್ಮವಾದ ಲಿಂಗಾಯತ ಧರ್ಮವನ್ನು ಇವರೆಲ್ಲ ನಾಶ ಮಾಡಲು ಹೊರಟಿದ್ದಾರೆ. ನಾವು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡಿದಾಗ, ನೀವೆಲ್ಲ ಧರ್ಮ ಒಡೆಯುತ್ತಿದ್ದೀರಾ ಎಂದರು. ಈಗ ಅವರು ಮಾಡುತ್ತಿರುವುದೇನು? ಕೆಲವು ಸ್ವ ಹಿತಾಸಕ್ತಿ ಗುಂಪುಗಳು ಪುಡಿಗಾಸಿಗಾಗಿ ಧರ್ಮ ಒಡೆಯುತ್ತಿವೆ. ಇದರ ಹಿಂದೆ ಒಂದು ವ್ಯವಸ್ಥಿತ ಲಾಭಕರ ಸ್ವ ಹಿತಾಸಕ್ತಿಯ ಗುಂಪು ಇವೆ.
ನಾನುಗೌರಿ: ಈ ನಿಗಮಕ್ಕೆ 500 ಕೋಟೊ ರೂ ಕೊಟ್ಟಿದ್ದಾರಲ್ಲ?
ಜಾಮದಾರ್: ಅಲ್ರೀ ಇನ್ನೂ ಆ ನಿಗಮ ಅಧಿಕೃತವಾಗಿ ಚಾಲನೆಗೇ ಬಂದಿಲ್ಲ. ಅದಕ್ಕೆ 500 ಅಲ್ಲ, 100 ಕೋಟಿ ಅಲ್ಲ, 10 ಕೋಟಿ ರೂ ಕೂಡ ಸಿಗಲ್ಲ. ಇದೆಲ್ಲ ಒಂದು ಹುಚ್ಚಾಟ ಮತ್ತು ಪಾಲಿಟಿಕಲ್ ಗೇಮ್ ಅಷ್ಟೇ.
ನಾನುಗೌರಿ: ಅಂದರೆ ಈ ಹೋರಾಟಕ್ಕೆ ಭದ್ರ ಬುನಾದಿಯೇ ಇಲ್ಲ ಎನ್ನುತ್ತೀರಾ?
ಜಾಮದಾರ್: ಈ ಕುರಿತು ಅಂತಿಮ ತೀರ್ಮಾನ ಕೊಡಲಾರೆ, ಆದರೆ ಖಾವಿ ಧರಿಸಿ ಮೀಸಲಾತಿ ಕೇಳಿದ ಕೂಡಲೇ ಅದು ಸಿಗಲ್ಲ. ಅದಕ್ಕೆ ಪ್ರೊಸೆಸ್ ಇದೆ. ಯಡಿಯೂರಪ್ಪ ಅಂತಲ್ಲ, ಯಾರೇ ಸಿಎಂ ಆಗಿದ್ದರೂ ಆ ಪ್ರಕ್ರಿಯೆಯ ಮೂಲಕವೇ ಹೋಗಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಸಾಂವಿಧಾನಿಕ ಮಾನ್ಯತೆ ತಡೆದ ಬಿಜೆಪಿ-ಆರ್‌ಎಸ್‌ಎಸ್ ಇಂತಹ ದುಸ್ಸಾಹಸ ಮಾಡುತ್ತಿವೆ. ಈ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಎಲ್ಲ ಒಂದೇ ಬಿಡಿ.
ನಾನುಗೌರಿ: ಪಂಚಮಸಾಲಿಗಳಿಗೆ 2-ಎ ಸ್ಥಾನಮಾನ ಸಿಕ್ಕಿತು ಅಂದುಕೊಳ್ಳೋಣ. ಆಗ ಏನಾಗಬಹುದು?
ಜಾಮದಾರ್: ಈಗ ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿ ಮಾಡಿದ 10 ಪರ್ಸೆಂಟ್ ಮೀಸಲಾತಿಯಲ್ಲಿ ಪಂಚಮಸಾಲಿಗಳು, ಬೇಡ ಜಂಗಮರು, ಬಣಜಿಗರು ಕೂಡ ಬರುತ್ತಾರೆ. 2-ಎ ಮತ್ತು 10 ಪರ್ಸೆಂಟ್ ಎರಡನ್ನೂ ಪಡೆಯಲಾಗಲ್ಲ. ಈ ಕಾನೂನು ಬಗ್ಗೆ ತಿಳಿಯದೇ ಏನೇನೋ ಹೋರಾಟ ಮಾಡುತ್ತಿದ್ದಾರೆ.
ಸಂದರ್ಶನ: ಪಿ.ಕೆ. ಮಲ್ಲನಗೌಡರ್
(ಈ ಸಂದರ್ಶನದಲ್ಲಿ ತಪ್ಪು ಗ್ರಹಿಕೆಯಿಂದಾಗಿ ಖಾವಿ ಧರಿಸಿದವರ ಪುಡಿಗಾಸಿನ ಹೋರಾಟ ಎಂದು ಬಂದಿತ್ತು. ಅದಕ್ಕಾಗಿ ವಿಷಾಧಿಸುತ್ತೇವೆ)
ಇದನ್ನೂ ಓದಿ: ‘ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ’ – ಪಂಚಮಸಾಲಿ ಸ್ವಾಮೀಜಿಯ ವಿಶೇಷ ಸಂದರ್ಶನ



ಜಾಮದಾರರದು ತಪ್ಪು ಅಭಿಪ್ರಾಯ..
ಈ ಹಿಂದೆ ಬೇಡಜಂಗಮರೆಂಬ ಪಂಗಡ ಲಿಂಗಾಯತ ಪಂಥದಲ್ಲಿ ಬರುವುದು ಎಂದಿದ್ದರು.
ಜಂಗಮ, ಜಾತಿ ಪಟ್ಟಿಯಲ್ಲಿ ಏಕಿಲ್ಲ ಎಂಬುದನ್ನು ಜಾಮದಾರ ವಿವರಿಸಲಿ.
ಮೀಸಲಾತಿ ಇರುವುದು ಜಾತಿಗೇ ಹೊರತು ಮತ, ಧರ್ಮಕ್ಕಲ್ಲ ಎನ್ನುವ ಸಾಮಾನ್ಯ ಅರಿವೂ ಜಾಮದಾರರಿಗಿಲ್ಲ.
ಬಣಜಿಗ, 2A ದಲ್ಲಿ ಶೈಕ್ಷಣಿಕ ಮೀಸಲಾತಿ ಮತ್ತು ಕೇಂದ್ರ OBC ಯಲ್ಲಿ ಬರುತ್ತದೆ ಎನ್ನುವ ಸತ್ಯವನ್ನೂ ಮುಚ್ಚಿಡುತ್ತಾರೆ. ಮೀಸಲಾತಿ ವಂಚಿಸಿ ವೀರಶೈವ ಅಥವಾ ಲಿಂಗಾಯತರನ್ನು ಶೋಷಿಸುವುದೇ ಧರ್ಮವಾಗಬಾರದು..!!
Super