ಉತ್ತರಪ್ರದೇಶದ ಗೋರಖ್‌ಪುರದಲ್ಲಿ ದಲಿತ ಸಮುದಾಯದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಕ್ಕೆ ಫ್ರೆಂಚ್ ಚಲನಚಿತ್ರ ನಿರ್ದೇಶಕ ವ್ಯಾಲೆಂಟಿನ್ ಹೆನಾಲ್ಟ್ ಅವರನ್ನು ಕಳೆದ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು. ಅವರು ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು ಆದರೆ ಬಿಡುಗಡೆಯಾದ ಆರು ತಿಂಗಳ ನಂತರವೂ ಅವರಿಗೆ ತಮ್ಮ ತವರಿಗೆ ಹೋಗಲು ಸಾಧ್ಯವಾಗಿರಲಿಲ್ಲ, ಇದೀಗ ದೀರ್ಘ ಕಾನೂನು ಹೋರಾಟದ ಬಳಿಕ ವ್ಯಾಲೆಂಟಿನ್ ಹೆನಾಲ್ಟ್ ಪ್ರಾನ್ಸ್‌ಗೆ ತೆರಳಿದ್ದಾರೆ ಎಂದು ‘ಲೆ ಮಾಂಡೆ’ ವೆಬ್‌ಸೈಟ್ ವರದಿ ಮಾಡಿದೆ.
ದಲಿತ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೇಂದ್ರೀಕರಿಸುವ ಚಲನಚಿತ್ರದಲ್ಲಿ ಕೆಲಸ ಮಾಡಲು ಹೆನಾಲ್ಟ್ ಆಗಸ್ಟ್ 10, 2023ರಂದು ಭಾರತಕ್ಕೆ ಆಗಮಿಸಿದ್ದರು. ಅವರು ಉತ್ತರಪ್ರದೇಶಕ್ಕಿಂತ ಮೊದಲು ಬಿಹಾರ ಮತ್ತು ಜಾರ್ಖಂಡ್‌ಗಳಲ್ಲಿ ಪ್ರಯಾಣಿಸಿದ್ದರು. ಅಕ್ಟೋಬರ್ 10, 2023ರಂದು ಉತ್ತರಪ್ರದೇಶದಲ್ಲಿ ದಲಿತರಿಗೆ ಭೂಮಿಯ ಹಕ್ಕುಗಳಿಗೆ ಒತ್ತಾಯಿಸಿ ರೈತ ಮಹಿಳೆಯರ ನೇತೃತ್ವದಲ್ಲಿ ನಡೆದ “ಅಂಬೇಡ್ಕರ್ ಜನರ ಮೆರವಣಿಗೆ”ಯಲ್ಲಿ ಹೆನಾಲ್ಟ್ ಭಾಗವಹಿಸಿದ್ದರು. ವೇದಿಕೆಯಲ್ಲಿದ್ದ ಭಾಷಣಕಾರರೊಬ್ಬರಿಗೆ ಹೆನಾಲ್ಟ್ ಬಗ್ಗೆ ಮೊದಲೇ ಪರಿಚಯವಿದ್ದ ಕಾರಣ ಅವರು ಭಾಷಣದಲ್ಲಿ ವಿದೇಶಿ ವ್ಯಕ್ತಿಯೋರ್ವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದಾರೆ ಎಂದು ಹೇಳಿದ್ದರು. ಇದರ ಬೆನ್ನಲ್ಲಿ ಹೆನಾಲ್ಟ್ ಅವರನ್ನು ಸ್ಥಳೀಯ ಗುಪ್ತಚರ ಇಲಾಖೆ ಏಜೆಂಟರು ಸುತ್ತುವರಿದಿದ್ದರು. ಪೊಲೀಸರು ಸ್ಥಳದಲ್ಲೇ ಹೆನಾಲ್ಟ್ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಅವರಿಗೆ ತೆರಳಲು ಅನುಮತಿ ನೀಡಿದ್ದರೂ, ಅದೇ ದಿನ ಅವರು ತಂಗಿದ್ದ ಹೋಟೆಲ್ ಕೊಠಡಿಯಿಂದ ಪೊಲೀಸ್ ಠಾಣೆಗೆ ಅವರನ್ನು ಕರೆದೊಯ್ಯಲಾಗಿದೆ. ವಿದೇಶಿ ಕಾಯಿದೆಯ ಕಲಂ 14ಬಿ ಅಡಿಯಲ್ಲಿ “ವೀಸಾ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ” ಎಂದು ಆರೋಪಿಸಿ ಪೊಲೀಸರು ಅವರನ್ನು ಬಂಧಿಸಿದ್ದರು.
ವೀಸಾದಲ್ಲಿ ಜಾರ್ಖಂಡ್‌ನಿಂದ ಹೊರಹೋಗಲು ಅನುಮತಿಸಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ವರದಿಯ ಪ್ರಕಾರ, ಇದು ಸುಳ್ಳು ಆರೋಪವಾಗಿದ್ದು, ಅವರು ಬ್ಯುಸಿನೆಸ್ ವೀಸಾದಲ್ಲಿ ಬಂದಿದ್ದಾರೆ, ಈ ವೀಸಾ ಒಂದು ವರ್ಷದವರೆಗೆ ಮಾನ್ಯತೆ ಹೊಂದಿದೆ ಮತ್ತು ಯಾವುದೇ ಭೌಗೋಳಿಕ ನಿರ್ಬಂಧಗಳನ್ನು ಒಳಗೊಂಡಿಲ್ಲ ಎಂದು ಹೇಳಲಾಗಿದೆ.
ಬಂಧನಕ್ಕೊಳಗಾದ ಒಂದು ದಿನದ ನಂತರ ನ್ಯಾಯಾಧೀಶರು ಅವರ ಬಂಧನಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿದರು, ನಂತರ ಅವರನ್ನು ಗೋರಖ್‌ಪುರ ಜೈಲಿಗೆ ಕಳುಹಿಸಲಾಯಿತು. ನಾನು ನೆಲದ ಮೇಲೆ ಮಲಗಿದೆ, ರಾತ್ರಿಯಲ್ಲಿ ತಿರುಗಲು ಕೂಡ ಅಸಾಧ್ಯವಾದ ಕಡಿಮೆ ಸ್ಥಳಾವಕಾಶ ನೀಡಲಾಗಿತ್ತು ಎಂದು ಫ್ರೆಂಚ್ ದೈನಿಕದ ಜೊತೆ ತನ್ನ ಜೈಲು ಶಿಕ್ಷೆಯ ಬಗ್ಗೆ ಮಾತನಾಡುವಾಗ ಹೆನಾಲ್ಟ್ ಹೇಳಿರುವುದಾಗಿ ಉಲ್ಲೇಖಿಸಿದೆ. ವರದಿಯ ಪ್ರಕಾರ, ಮಾನಸಿಕ ಅಸ್ವಸ್ಥ ವ್ಯಕ್ತಿಗಳಿಗೆ ಮೀಸಲಾದ ಸೆಲ್‌ನಲ್ಲಿ ಅವರನ್ನು ಇರಿಸಲಾಗಿತ್ತು.
ಬಂಧನದ ಬಳಿಕ ಹೆನಾಲ್ಟ್ ಜೈಲಿನಿಂದ ಫ್ರೆಂಚ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದು, ರಾಯಭಾರ ಕಚೇರಿಯು ವಕೀಲರ ಸಂಪರ್ಕವನ್ನು ಒದಗಿಸಿದೆ. ಅವರ ಬಂಧನದ ನಂತರ ಮೂರನೇ ವಾರದಲ್ಲಿ, ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಜೈಲಿನಲ್ಲಿ ಅವರನ್ನು ಭೇಟಿಯಾದರು. ಆ ಬಳಿಕ ಅವರ ತಂದೆ ಅವರನ್ನು ಭೇಟಿ ಮಾಡಲು ಭಾರತಕ್ಕೆ ಬಂದರು ಮತ್ತು ವಕೀಲರನ್ನು ಬದಲಾಯಿಸಿದರು, ಬಳಿಕ ಜಾಮೀನು ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದರು. ಆದರೆ ಅವರು ತವರಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಹೆನಾಲ್ಟ್ ಅವರ ಪಾಸ್‌ಪೋರ್ಟ್ ಮೇ ತಿಂಗಳವರೆಗೆ ಪೊಲೀಸರ ಬಳಿ ಇತ್ತು. ಸತತ ಕಾನೂನು ಹೊರಾಟದ ಬಳಿಕ ಅವರು ಕೊನೆಗೆ ಇದೇ ಮೇ.4ರಂದು ಭಾರತವನ್ನು ತೊರೆದು ಪ್ರಾನ್ಸ್‌ಗೆ ವಾಪಾಸ್ಸಾಗಿದ್ದಾರೆ.
ಇದನ್ನು ಓದಿ: ಮೋದಿ ಕುರಿತ ಧ್ರುವ್ ರಾಥಿ ವಿಡಿಯೋ ಹಂಚಿಕೊಂಡ ವಕೀಲನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು


