ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪೊಲೀಸರು ಮತ್ತು ಸೇನಾ ಸಿಬ್ಬಂದಿಗಳ ನಡುವೆ ಘರ್ಷಣೆ ನಡೆದಿದ್ದು, ಸೇನಾ ಸಿಬ್ಬಂದಿ ಠಾಣೆಗೆ ನುಗ್ಗಿ ಪೊಲೀಸರಿಗೆ ಥಳಿಸಿದ್ದರಿಂದ ನಾಲ್ವರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಬೆನ್ನಲ್ಲಿ ಪ್ರತಿಕ್ರಿಯಿಸಿದ ರಕ್ಷಣಾ ಇಲಾಖೆಯ ವಕ್ತಾರರು, ಪೊಲೀಸರು ಮತ್ತು ಸೇನಾ ಸಿಬ್ಬಂದಿ ನಡುವಿನ ಸಣ್ಣ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ.
ಕುಪ್ವಾರ ಪೊಲೀಸ್ ಠಾಣೆಯಲ್ಲಿ ನಿಯೋಜಿತ ವಿಶೇಷ ಪೊಲೀಸ್ ಅಧಿಕಾರಿಗಳಾದ ರಯೀಸ್ ಖಾನ್, ಇಮ್ತಿಯಾಜ್ ಮಲಿಕ್ ಮತ್ತು ಕಾನ್‌ಸ್ಟೆಬಲ್‌ಗಳಾದ ಸಲೀಮ್ ಮುಷ್ತಾಕ್, ಜಹೂರ್ ಅಹ್ಮದ್ ಅವರ ಮೇಲೆ ಸೇನಾ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ. ಅವರನ್ನು ಮಂಗಳವಾರ ತಡರಾತ್ರಿ ಸೌರಾದ ಸ್ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನಾಧಿಕಾರಿಗಳ ತಂಡವು ಪೊಲೀಸ್ ಠಾಣೆಗೆ ನುಗ್ಗಿ ಥಳಿಸಿದ ನಂತರ ಪೊಲೀಸರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಘರ್ಷಣೆಯ ಕಾರಣದ ಬಗ್ಗೆ ಹಿರಿಯ ಪೊಲೀಸರು ಮತ್ತು ಸೇನಾಧಿಕಾರಿಗಳು ಮೌನ ವಹಿಸಿದ್ದರೂ, ಪ್ರಕರಣವೊಂದರ ತನಿಖೆಗೆ ಸಂಬಂಧಿಸಿ ಕುಪ್ವಾರದ ಬಟ್‌ಪೋರಾದಲ್ಲಿರುವ ಸ್ಥಳೀಯ ಪ್ರಾದೇಶಿಕ ಸೇನಾಧಿಕಾರಿಯ ನಿವಾಸದ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸೇನಾ ಸಿಬ್ಬಂದಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಅಧಿಕಾರಿಗಳಿಗೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶ್ರೀನಗರ ಮೂಲದ ರಕ್ಷಣಾ ವಕ್ತಾರರು, ಪೊಲೀಸ್ ಮತ್ತು ಸೇನಾ ಸಿಬ್ಬಂದಿಯ ನಡುವಿನ ಘರ್ಷಣೆಯ ವರದಿಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ಥಳಿಸಿದ ವರದಿಗಳು ಸುಳ್ಳು ಎಂದು ಹೇಳಿದ್ದಾರೆ. ಕಾರ್ಯಾಚರಣೆಯ ವಿಷಯದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಪ್ರಾದೇಶಿಕ ಸೇನಾ ಘಟಕದ ನಡುವಿನ ಸಣ್ಣ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಲ್ಲೆಗೆ ಸಂಬಂಧಿಸಿದಂತೆ ಸೇನಾಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಗೆ ಯತ್ನ), 186 (ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು), 332 ಮತ್ತು 365 (ಅಪಹರಣ)ಸೇರಿದಂತೆ ವಿವಿಧ ಸೆಕ್ಸನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಓದಿ: ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ: ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಪ್ರತಿಪಕ್ಷಗಳಿಂದ ತರಾಟೆ


