Homeಕರ್ನಾಟಕ‘ಜನಶಕ್ತಿಯ ಬೆಳೆ’ಗೆ ಹಸನಾದ ಹೊಲ! : ಜನವಾಹಿನಿಯ ನೆನಪುಗಳು..

‘ಜನಶಕ್ತಿಯ ಬೆಳೆ’ಗೆ ಹಸನಾದ ಹೊಲ! : ಜನವಾಹಿನಿಯ ನೆನಪುಗಳು..

- Advertisement -
- Advertisement -

ಜನವಾಹಿನಿಯ ನೆನಪುಗಳು: 6
ನಿಖಿಲ್ ಕೋಲ್ಪೆ

ಕೃಪೆ: ’ಆರ್ಸೋ’ ಕೊಂಕಣಿ ಪತ್ರಿಕೆ

ಅದೊಂದು ದಿನ ಸಂಪಾದಕೀಯ ಬಳಗಕ್ಕೆ ಆಯ್ಕೆಯಾದವರೆಲ್ಲ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿದ್ದ ಹೊಸ ಕಚೇರಿಯಲ್ಲಿ ಸೇರಿದೆವು. ಬೈಕಂಪಾಡಿಯಿಂದ ಜೋಕಟ್ಟೆ-ಪೊರ್ಕೋಡಿ-ಬಜ್ಪೆ ರಸ್ತೆಯಲ್ಲಿ ‘ಮುಂಗಾರು’ ಸ್ಟಾಪ್‍ನಲ್ಲಿ ಬಸ್ಸಿನಿಂದ ಇಳಿಯಬೇಕು. ಆ ಹೊತ್ತಿಗೆ ‘ಮುಂಗಾರು’ ಪತ್ರಿಕೆ ಮುಳುಗಿ ಏಳೆಂಟು ವರ್ಷವಾಗಿದ್ದರೂ, ಹೆಸರು ಅದೇ ಉಳಿದುಕೊಂಡಿತ್ತು. ಬಹುಶ: ಇಂದಿಗೂ ಜನರು ಅದನ್ನು ಕರೆಯುವುದು ‘ಮುಂಗಾರು’ ಸ್ಟಾಪ್ ಎಂದೇ! ಅದರಲ್ಲಿ ಆ ಕಾಲದಲ್ಲೂ ತುಕ್ಕು ಹಿಡಿದು ನೇತಾಡುತ್ತಿದ್ದ ಬೋರ್ಡ್- ‘ಜನಶಕ್ತಿಯ ಬೆಳೆ ತೆಗೆಯುವ ಮುಂಗಾರು’! ಇದೀಗ ನಾವು- ಯುವಜನರು ಹೊಸ ಬೆಳೆ ತೆಗೆಯಲು ಹೊರಟ- ಬಹಳಷ್ಟು ಮಂದಿಗೆ ಮೊದಲ ಬಾರಿಗೆ ಕಂಡ ಈ ಸಾಲುಗಳು ಹುರುಪು ನೀಡಿರಬೇಕು! ಯಾಕೆಂದರೆ, ಆ ಪತ್ರಿಕೆ ಕಣ್ಣು ಮುಚ್ಚಿದ ಹೊತ್ತಿಗೆ ಹೆಚ್ಚಿನವರು ಹದಿಹರೆಯದವರು!

ಅಲ್ಲಿಳಿದರೆ ಅಲ್ಲೇ ‘ಭಟ್ರ ಕ್ಯಾಂಟೀನು’. ಸುತ್ತಮುತ್ತಲೂ ಬೇರಾವುದೇ ಹೋಟೇಲು ಅಂಗಡಿಗಳಿಲ್ಲ! ಊಟಕ್ಕೆ, ಚಹಾ, ಕಾಫಿ, ತಿಂಡಿ, ಬೀಡಿ, ಸಿಗರೇಟಿಗೆ ಅದೇ ಆಗಬೇಕು. ಒಂದಿನ್ನೂರು ಮೀಟರ್ ಮುಂದೆ ‘ಮುಂಗಾರು’ ಅವರಣದಲ್ಲಿದ್ದ (ಶಂಕರ)‘ಶೆಟ್ರ ಕ್ಯಾಂಟೀನು’ ಮತ್ತು ‘ರವಿಯಂಗಡಿ’ ಎಂದೋ ಮಾಯವಾಗಿದ್ದವು. ಯಾವುದೇ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಜನರು ಅಲ್ಲಿನ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರೂ, ರಸ್ತೆಗಳು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಬಿಟ್ಟರೆ ಉಳಿದ ಹೊತ್ತಿಗೆ ಹಾಳು ಸುರಿಯುತ್ತಿರುತ್ತವೆ. ಇಲ್ಲಿನ ಕ್ಯಾಂಟೀನುಗಳೇ ವಿಚಾರ ವಿನಿಮಯ, ಪಟ್ಟಾಂಗ ಕೇಂದ್ರಗಳು. ಕೇಳುವ ಕಿವಿಯಿದ್ದರೆ ಸಾಮಾನ್ಯ ಜನರ ನಾಡಿಮಿಡಿತವನ್ನೂ ಯೋಚನಾ ತರಂಗಗಳನ್ನೂ ಸ್ಪಷ್ಟವಾಗಿ ಕೇಳಬಹುದು. ನಮ್ಮ ಮಾಧ್ಯಮಕ್ಕೆ ಅಗತ್ಯವಾದ ಕಿವಿಯಿದು.

ನಾನು, ಇಸ್ಮಾಯಿಲ್, ಪ್ರಮೋದ್, ಹಮೀದ್ ಮುಂತಾದವರಿಗೆ ಹೊತ್ತಲ್ಲದ ಹೊತ್ತಿಗೆ ಈ ಕ್ಯಾಂಟೀನು ಸಿಗರೇಟು ಮತ್ತು ಚಹಾದ ನಡುವೆ ಅನುಭವ ಮಂಟಪವಾಗುತ್ತಿತ್ತು. ಕೆಲವು ‘ಮಹಾನ್ ಮಹಾನ್’ ಐಡಿಯಾಗಳೆಲ್ಲ ‘ಜನವಾಹಿನಿ’ ಕಚೇರಿಗಿಂತ ಹೆಚ್ಚಾಗಿ ಹುಟ್ಟಿದ್ದು ಇದೇ ‘ಭಟ್ರ ಕ್ಯಾಂಟೀನ್’ನಲ್ಲಿ! ಮುಂದೆ ನಾವು ಬೆಳೆಸಿದ ‘ಜನವಾಹಿನಿ’ಯಂತಹ ತೋಟದಲ್ಲಿ ಮೇಯಲು ಬಂದ ಕಪಿಗಳಿಗೆ ಈ ಕ್ಯಾಂಟೀನೊಂದು ಮಹಾನ್ ಸಂಚುಕೋರರ ಅಡ್ಡೆ ಎಂದು ಗೋಚರವಾದದ್ದು ಅವರ ಮತಿಭ್ರಾಂತಿಯ ಫಲ! ಈ ಕುರಿತು ಮುಂದೆ ಬರೆಯುವೆ.

ಈಗ, ಇಲ್ಲಿಂದ ‘ಮುಂಗಾರಿ’ಗೆ ಹೋಗುವ ಹಾದಿಯಲ್ಲಿ ಮೊದಲ ಬಲ ರಸ್ತೆಯಲ್ಲಿ ನೂರೈವತ್ತು ಮೀಟರ್ ಮುಂದಕ್ಕೆ  ಹೋದರೂ ಏನೂ ಕಾಣದು. ನಂತರ ಒಂದು ಆಳದ ಇಳಿಜಾರಿನಲ್ಲಿ ಗಕ್ಕನೇ ಪ್ರತ್ಯಕ್ಷವಾಗುವುದೇ ಬಿಳಿಬಣ್ಣ ಹೊಡೆದ ಒಂದು ಭಾರೀ ಕಟ್ಟಡ. ಎದುರೊಂದು ಭಾರಿ ಗೇಟು! ವಾಚ್‍ಮನ್ ಕ್ಯಾಬೀನೇ ಗ್ಲಾಸುಗೀಸು ಹಾಕಿ ಸುಂದರವಾಗಿತ್ತು! ಬಹುಶಃ ಮೊದಲಾಗಿ ಇಲ್ಲಿಗೆ ಬಂದ ನಮ್ಮ ಯುವಜನರಿಗೆ ‘ವಾಹ್! ಒಂದು ದೊಡ್ಡ ಸಂಸ್ಥೆಗೆ ಸೇರಿದ್ದೇವೆ’ ಎಂಬ ಭಾವನೆ ಉಂಟಾಗಿರಬೇಕು! ಇದನ್ನೆಲ್ಲಾ ಯಾಕೆ ಬರೆಯುತ್ತಿದ್ದೇನೆಂದರೆ, ಈ ರಸ್ತೆ, ಕ್ಯಾಂಟೀನುಗಳಲ್ಲೇ ‘ಜನವಾಹಿನಿ’ಯ ಹಲವಾರು ಸಂಪಾದಕೀಯಗಳೂ, ಲೇಖನಗಳೂ ಹುಟ್ಟಿದ್ದು! ಈ ಗೇಟು, ಕ್ಯಾಬಿನ್‍ಗಳಿಗೂ ‘ಜನವಾಹಿನಿ’ಯ ಪತನದಲ್ಲಿ ಪಾಲಿದೆ.

ಕಟ್ಟಡದ ನೆಲ ಅಂತಸ್ತಿನಲ್ಲಿ ಆಡಳಿತ ವರ್ಗ ಮತ್ತು ಸಿಬ್ಬಂದಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಮೊದಲಿಗೆ ಜಾಹೀರಾತು ವಿಭಾಗ- ಹೆಚ್ಚು ಸಂದರ್ಶಕರು ಬರುವುದು ಅಲ್ಲಿಗೇ ಅಲ್ಲವೆ? ನಂತರ ಪ್ರಸರಣ, ನಂತರ ಸಿಬ್ಬಂದಿ, ಆಡಳಿತ ಇವೆಲ್ಲಕ್ಕೂ ಎದೆ ಮಟ್ಟದ ಪಾರ್ಟಿಷನ್. ಕೊನೆಯಲ್ಲಿ ಪತ್ರಿಕೆಯ ಮೆದುಳು ಅಂದರೆ, ಆಡಳಿತ ನಿರ್ದೇಶಕರ ಕ್ಯಾಬಿನ್! ಎಲ್ಲಾ ಪ್ರಮುಖ ನಿರ್ಧಾರಗಳು ಅಲ್ಲಿಯೇ ಆಗಬೇಕಲ್ಲವೆ!? ಎಡಬದಿಗೆ ಅಕೌಂಟ್ಸ್ ವಿಭಾಗ. ಆಗಲೇ ಹಲವಾರು ಮಂದಿ ಅಲ್ಲಿ ಕೆಲಸ ಮಾಡುತ್ತಾ, ಕಿರುನಗೆಯೊಂದಿಗೆ ಸ್ವಾಗತಿಸಿದರು. ಇನ್ನೊಂದು ಭಾಗದಲ್ಲಿ ಪ್ರೀಪ್ರೆಸ್ ವಿಭಾಗ. ಡಾರ್ಕ್ ರೂಮ್, ಪ್ಲೇಟ್ ತಯಾರಿಸುವುದೆಲ್ಲ ಇಲ್ಲಿಯೇ. ಅದರ ಮುಂಭಾಗದಲ್ಲಿ ವಿಶಾಲವಾದ ಹಾಲ್‍ನಂತಹ ಜಾಗವಿತ್ತು ಇಲ್ಲಿಂದ ಇದೇ ಕಟ್ಟಡಕ್ಕೆ ತಾಗಿಕೊಂಡಿದ್ದ ಬಹಳ ವಿಸ್ತಾರವಾದ ಪ್ರೆಸ್. ಅಲ್ಲಿ ನನಗೆ ನೆನಪಿರುವಂತೆ ನಾಲ್ಕು ಯುನಿಟ್‍ಗಳ ಮುದ್ರಣ ಯಂತ್ರ. ಒಮ್ಮೆಲೇ ಹದಿನಾರು ಪುಟಗಳನ್ನು ಮುದ್ರಿಸಬಹುದು. ಕನ್ನಡದ ಮೊತ್ತಮೊದಲ ಬಣ್ಣದ ದಿನಪತ್ರಿಕೆ ಹೊರಬರುವುದು ಇಲ್ಲಿಂದಲೇ. ಅಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಪಿಂಟೋ ಸಹಿತ ಕೆಲವರಿದ್ದರು (ಮೊದಲ ಹೆಸರು ಮರೆತೆ- ಬಹುಶಃ ಮಾರ್ಸೆಲ್). ತಾಗಿದಂತಿರುವ ಕಟ್ಟಡದಲ್ಲಿ ಕೆಳಗೆ ಸ್ಟೋರ್ ರೂಮ್. ಮೇಲಿನ ಮಹಡಿಯಲ್ಲಿ ಕ್ಯಾಂಟೀನಿಗೆ ಜಾಗ.

ಇದನ್ನೆಲ್ಲಾ ಇಷ್ಟು ವಿವರವಾಗಿ ಯಾಕೆ ಬರೆಯುತ್ತಿದ್ದೇನೆಂದರೆ, ಇವೆಲ್ಲಾ ‘ಜನವಾಹಿನಿ’ ಎಂಬ ಮಗುವಿನ ಆರೋಗ್ಯಕರ ಉಸಿರಾಟವನ್ನೂ, ನರಳುವಿಕೆ ಮತ್ತು ಮರಣ ಯಾತನೆಯನ್ನು ಕೇಳಿವೆ! ಇಲ್ಲಿ ಪ್ರೀಪ್ರೆಸ್ ವಿಭಾಗದಲ್ಲಿ ಹಾಲ್‍ನಂತಹ ವಿಶಾಲ ಜಾಗವಿತ್ತು ಎಂದೆನಲ್ಲ, ಅಲ್ಲಿಯೇ ಮುಂದಕ್ಕೆ ಎರಡು ವಿಶಾಲ ಕ್ಯಾಬಿನ್‍ಗಳು ಪ್ರತಿಷ್ಟಾಪನೆಗೊಂಡವು! ಮುಂದೆ ‘ಜನವಾಹಿನಿ’ಯನ್ನು ಕೊಂದ ಕ್ಯಾನ್ಸರ್ ಬೆಳೆದದ್ದು ಇಲ್ಲಿಂದಲೇ. ಮುಂದೆ ಇದೇ ಕ್ಯಾಬಿನ್‍ಗಳು ಅದರ ಗೋರಿಗಳಾದವು!

ಮೇಲಿನ ಮಹಡಿ ಇಡೀ ಸಂಪಾದಕೀಯಕ್ಕೆ ಸೀಮಿತ. ಮೇಲೆ ಬಲಬದಿಗೆ ಹೋದರೆ ಅತ್ಯಂತ ವಿಶಾಲವಾದ ಹಾಲ್. ಮುಂದೆ ಇದು ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮದ ಥಿಯರಿಯ ಕ್ಲಾಸ್‍ರೂಮ್ ಆಯಿತು. ಅನೇಕಾನೇಕ ಚರ್ಚೆಗಳು, ಪಾಠಗಳು, ತಜ್ಞರಿಂದ ಉಪನ್ಯಾಸಗಳು, ನಮ್ಮ ತಿಂಗಳ ಹಬ್ಬಗಳು ಇಲ್ಲಿ ನಡೆದವು. ನಮ್ಮಲ್ಲಿ ಕೆಲವರಿಗೆ ಮುಂದೆ ಇದರ ಒಂದು ಭಾಗ ವಾಸಸ್ಥಾನವೂ ಆಯಿತು.

ಮಹಡಿಯ ಎಡಭಾಗದಲ್ಲಿ ಮೊದಲು ಸಿಗುವುದೇ ಲೈಬ್ರರಿ. ಆಗಿನ್ನೂ ಪುಸ್ತಕಗಳು ಬಂದಿರಲಿಲ್ಲ! ಒಳಗೆ ಒಂದು ಮೂಲೆಯಲ್ಲಿ ಸರ್ವರ್ ಮತ್ತು ತಂತ್ರಜ್ಞರ ಕ್ಯಾಬಿನ್. ಆಗಿನ ಕಾಲಕ್ಕೆ ಅತ್ಯಾಧುನಿಕವಾದ ದುಬಾರಿಯಾದ ಐದೋ ಆರೋ ಬ್ಯಾಕ್‍ಅಪ್ ಇರುವ ಸರ್ವರ್! ಏನು ಆದರೂ ಡಾಟಾ ಸುರಕ್ಷಿತವಾಗಿರಲು ಈ ಎಚ್ಚರಿಕೆ! ಎರಡು ಮೂಲೆಗಳಲ್ಲಿ ಎರಡು ಕ್ಯಾಬಿನುಗಳು. ಒಂದು ಸಂಪಾದಕರಿಗೆ ಕುಳಿತುಕೊಳ್ಳಲು ಮತ್ತು ಇನ್ನೊಂದು ಅಡಳಿತ ನಿರ್ದೇಶಕರು ಮ್ಯಾನೆಜಿಂಗ್ ಎಡಿಟರ್ ಕೂಡಾ ಆಗಿದ್ದುದರಿಂದ ಅವರ ಉಪಯೋಗಕ್ಕಾಗಿ. ಒಂದರಲ್ಲಿ ಬಾಲಕೃಷ್ಣ ಗಟ್ಟಿಯವರು ವಿರಾಜಮಾನರಾಗಿರುತ್ತಿದ್ದರು. ಹೀಗೇಕೆ ಹೇಳುತ್ತಿದ್ದೇನೆಂದರೆ, ಅವರು ಕ್ಯಾಬಿನ್‍ನಿಂದ ಹೊರಬರುತ್ತಿದ್ದುದು ಕಡಿಮೆ. ಕ್ಯಾಬಿನ್‍ಗೇ ಕರೆಸಿ ಮಾತನಾಡಿಸುತ್ತಿದ್ದರು. ಆದರೂ, ಹೆಚ್ಚಿನ ಕಾಲ ಹಸನ್ಮುಖಿಯಾಗಿದ್ದು, ಕೆಲವೊಮ್ಮೆ ಪಟಕ್ಕನೇ ಸಿಡಿಯುತ್ತಿದ್ದ ಅವರು ಅಲ್ಲಿ ಕುಳಿತಿದ್ದರೆಂದರೆ ನಮಗೊಂದು ಬಗೆಯ ಗಟ್ಟಿ ಧೈರ್ಯ!

ಇನ್ನೊಂದು ಕ್ಯಾಬಿನ್‍ನಲ್ಲಿ ಮೊದಲಿಗೆ ಸ್ಯಾಮ್ಯುಯೆಲ್ ಸಿಕ್ವೇರಾ ಅವರ ಜೊತೆ ಆಗಾಗ ಚರ್ಚೆ, ಯೋಜನೆ ನಡೆಯುತ್ತಿತ್ತು. ನಂತರ ಅವರ ಕೆಲಸದ ಒತ್ತಡ ಅತಿಯಾಗುತ್ತಿದ್ದಂತೆ ಅವರು ದಿನಕ್ಕೆ ನಾಲ್ಕಾರು ಬಾರಿ ಮೇಲಕ್ಕೆ ಬಂದು ಅಲ್ಲಿಲ್ಲಿ ಸುತ್ತಾಡಿ, ನಾವಿದ್ದಲ್ಲಿಗೆ ಬಂದು ನಿಂತಲ್ಲೇ ಮಾತನಾಡಿ, ಇಲ್ಲವೇ ಅಂತಹಾ ದೊಡ್ಡ ವಿಷಯವಿದ್ದರೆ ಗಟ್ಟಿಯವರ ಕ್ಯಾಬಿನ್‍ನಲ್ಲಿ ಕುಳಿತು ನಮ್ಮನ್ನು ಕರೆಸಿ ಚರ್ಚಿಸುತ್ತಿದ್ದರು. ತೀರಾ ಸೂಕ್ಷ್ಮ ವಿಷಯವಾಗಿದ್ದರೆ, ನಾವೇ ಅವರ ಕ್ಯಾಬಿನ್‍ಗೆ ಹೋಗಬೇಕಾಗಿತ್ತು. ಹೆಚ್ಚಾಗಿ ಈ ಕ್ಯಾಬಿನನ್ನು ನಾವು ಕೆಲವರು ತೀರಾ ತನ್ಮಯತೆ ಬೇಕಾಗಿದ್ದರೆ ಕುಳಿತು ಬರೆಯಲು ಉಪಯೋಗಿಸುತ್ತಿದ್ದೆವು.

ಈ ಎರಡು ಕ್ಯಾಬಿನ್‍ಗಳ ನಡುವೆ ಇರುವ ಜಾಗದಲ್ಲಿ ಎರಡು ಕಂಪ್ಯೂಟರ್ ಗಳಿದ್ದವು. ಮುಖಪುಟ, ಮ್ಯಾಗಜಿನ್ ಇತ್ಯಾದಿಗಳ ಪುಟಗಳು ತಯಾರಾಗುತ್ತಿದ್ದುದು ಇಲ್ಲಿಯೇ! ಜನರಲ್ ಡೆಸ್ಕಿನಲ್ಲಿನ ಉಸ್ತುವಾರಿಯಲ್ಲಿದ್ದ ನಾನು ನಂತರ (ಅ)ಸಹಾಯಕ ಸುದ್ದಿ ಸಂಪಾದಕನಾಗಿ ಈ ಪ್ರದೇಶವನ್ನು ಅಲಂಕರಿಸಿದೆ! ಆಗ ಸಂಪಾದಕರು ಬಿಟ್ಟರೆ, ಇದೇ ಮಹೋನ್ನತ ಹುದ್ದೆ! ಈ ಹುದ್ದೆಯ ಸೃಷ್ಟಿ ಮತ್ತು ನನ್ನ ‘ಭಡ್ತಿ’ ನನಗೆ ಖುಶಿಯನ್ನೇನೂ ತರಲಿಲ್ಲ! ಇದು ಒಡೆಯುವ ತಂತ್ರದ ಭಾಗವಾಗಿತ್ತು. ನಂತರ ಇಲ್ಲಿಯೇ ಒಂದು ಟೇಬಲ್ ಚಯರ್ ಹಾಕಿ, ಸುದ್ದಿ ಸಂಪಾದಕರಾಗಿ ಹಿರಿಯ ಪತ್ರಕರ್ತ ಸಂತೋಷ್ ಹೆಗ್ಡೆಯವರ ಪ್ರತಿಷ್ಟಾಪನೆಯಾಯಿತು! ನಂತರ ಸತ್ಯ ಅವರು ಉಪ ಸುದ್ದಿ ಸಂಪಾದಕರಾಗಿ ಬಂದರು. ಇವುಗಳ ವಿಷಯ ಪ್ರತ್ಯೇಕ ಬರೆಯುವೆ.

ಅಲ್ಲಿಯೇ ಒಂದು ದೊಡ್ಡ ಎ3 ಪ್ರಿಂಟರ್ ಇತ್ತು. ಆಗ ಇಂಕ್‍ಜೆಟ್ ಕಾಲ. ಹೆಚ್ಚಾಗಿ ಎ4 ಲೇಸರ್ ಪ್ರಿಂಟರ್ ಗಳೇ ಇದ್ದದ್ದು. ಈ ಹ್ಯುಲೆಟ್ ಎಂಡ್ ಪೆಕಾರ್ಡ್ ಪ್ರಿಂಟರ್ ಆಗಿನ ಕಾಲಕ್ಕೆ ಹೈಸ್ಪೀಡ್ ಮೆಷಿನ್! ಈ ‘ಹೈಸ್ಪೀಡು’ ಮುಂದೆ ಕೆಲವು ಬಾರಿ ನಮ್ಮ ಬೆವರಿಳಿಸಿದ ಘಟನೆಗಳ ಬಗ್ಗೆಯೂ ಮುಂದೆ ಬರೆಯುವೆ.

ಪಕ್ಕದಲ್ಲಿ ಇದ್ದುದೇ ಗ್ರಾಮೀಣ, ಜನರಲ್ ಮತ್ತು ಕ್ರೀಡಾ ವಿಭಾಗಗಳು. ಮೊದಲ ಎರಡು ವಿಭಾಗಗಳಲ್ಲಿ ಎರಡೆರಡು ಸಾಲುಗಳಲ್ಲಿ ಹತ್ತು ಹತ್ತು ಕಂಪ್ಯೂಟರ್‌ಗಳು. ಕ್ರೀಡಾ ವಿಭಾಗದಲ್ಲಿ ಮೂರು. ಅಲ್ಲೇ ಪಕ್ಕದಲ್ಲಿ ಪಿಟಿಐ ಮತ್ತು ಯುಎನ್‍ಐ ಸುದ್ದಿ ಟರ್ಮಿನಲ್‍ಗಳು.

ಇಷ್ಟೆಲ್ಲಾ ಕಂಪ್ಯೂಟರ್‌ಗಳನ್ನು ನೆಲ ಅಂತಸ್ತಿನಲ್ಲಿದ್ದ ಒಂದು ಡಜನ್‍ಗಳನ್ನು ಬಿಟ್ಟು ಬಿಟ್ಟರೂ ಇಷ್ಟೊಂದು ಕಂಪ್ಯೂಟರ್‌ಗಳನ್ನು ಬಹುಶಃ ನಮ್ಮ ಸಂಪಾದಕೀಯ ವಿಭಾಗಲ್ಲಿ ಯಾರೂ ಒಟ್ಟಿಗೆ ನೋಡಿರಲಾರರು.

ಇನ್ನೊಂದು ವಿಷಯವೆಂದರೆ ಇಡೀ ವಿಭಾಗ ಹವಾನಿಯಂತ್ರಿತ! ಫ್ಯಾನಿನ ಅಡಿಯಲ್ಲಿ, ಕೆಲವು ಸಲ ಗಾಳಿಯಾಡದ ಕೊಠಡಿಗಳಲ್ಲಿ ಬೆವರಿಳಿಸುತ್ತಾ ಕೆಲಸ ಮಾಡುತ್ತಿದ್ದ ನಮ್ಮಲ್ಲಿ ಕೆಲವರಿಗೆ ಇದಕ್ಕೆ ಒಗ್ಗಲೂ ಕೆಲ ಸಮಯ ಹಿಡಿಸಿತು. ಅಷ್ಟು ಮಾತ್ರವಲ್ಲ; ಪ್ರತೀ ವಿಭಾಗದಲ್ಲೂ ಅಲ್ಲಲ್ಲಿ ಇಂಟರ್‍ಕಾಂ! ಇವೆಲ್ಲವೂ ಬಹುತೇಕರಿಗೆ ಹೊಸತು.

ಒಟ್ಟಿನಲ್ಲಿ ಇಷ್ಟೆಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ನಾವು ಈ ಫಲವತ್ತಾದ ಹೊಲದಲ್ಲಿ ‘ಜನಶಕ್ತಿಯ ಬೆಳೆ’ ತೆಗೆದು,  ‘ಜನವಾಹಿನಿ’ಯ ಕನಸನ್ನು ಸಾಕಾರಗೊಳಿಸಬೇಕಿತ್ತು. ಇದನ್ನು ಹೇಗೆ ಮಾಡಿದೆವು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
*******************

‘ಮಾಯ’ವಾದ ನಾನು!

‘ಜನವಾಹಿನಿ’ಯ ಪ್ರಕಟಣೆ ಆರಂಭವಾಗಿರಲಿಲ್ಲ. ತರಬೇತಿಯೇ ನಡೆಯುತ್ತಿತ್ತು. ಪ್ರೆಸ್ಸಿನ ಬದಿಯಲ್ಲಿ ಮಹಡಿಯ ಮೇಲೆ ಕ್ಯಾಂಟೀನ್ ಆರಂಭವಾಗಿತ್ತು. ನಾನು ಒಂದು ದಿನ ಊಟ ಮಾಡಿ ಬರುವಾಗ ಪ್ರೀಪ್ರೆಸ್ ವಿಭಾಗದ ಎದುರಿನ ಹಾಲ್‍ನ ನಡುವೆ ಒಂದು ಕಪ್ಪಗಿನ ದೊಡ್ಡ ಸಿಲಿಂಡರನ್ನು ಇಡಲಾಗಿತ್ತು. ನಾನು ಅದನ್ನು ಸುಮ್ಮನೇ ಪರಿಶೀಲಿಸುತ್ತಿದ್ದೆ.

ಇದು ಸಿಲಿಂಡರ್ ಒಳಗೆ ತಿರುಗುವ ಸಿಲಿಂಡರ್ ಇರುವ ಬಾಗಿಲು. ಇದಕ್ಕೆ ಎರಡು ಪ್ರವೇಶ ದ್ವಾರಗಳಿರುತ್ತವೆ. ಎದುರಿನ ಬಾಗಿಲು ತೆರೆದಾಗ ಹಿಂದಿನ ಬಾಗಿಲು ಮುಚ್ಚಿರುತ್ತದೆ! ಹಿಂದಿನ ಬಾಗಿಲು ತರೆದಾಗ ಮುಂದಿನ ಬಾಗಿಲು ಮುಚ್ಚುತ್ತದೆ. ಒಳಗಿನ ಸಿಲಿಂಡರ್ ತಿರುಗಿಸಬೇಕು ಅಷ್ಟೇ! ನಿರಂತರ ಕೆಲಸ ನಡೆಯುತ್ತಿರುವ ಡಾರ್ಕ್‍ರೂಮಿಗೆ ಇದನ್ನು ಅಳವಡಿಸುತ್ತಾರೆ. ಯಾವ ಕಾಲಕ್ಕೂ ಹೊರಗಿನ ಬೆಳಕು ಒಳಗೆ ಹೋಗಿ ಅನಾಹುತವಾಗುವುದಿಲ್ಲ. ಇದನ್ನು ನಮ್ಮ ಡಾರ್ಕ್‍ರೂಮಿಗೆ ಅಳವಡಿಸಲು ತರಲಾಗಿತ್ತು.

ಅಷ್ಟರಲ್ಲಿ ಕೆಲವು ಹುಡುಗಿಯರು ಕ್ಯಾಂಟೀನ್‍ನಲ್ಲಿ ಊಟ ಮುಗಿಸಿ ಬರುತ್ತಿದ್ದರು. ಇದೇನು ಎಂದು ಅವರಿಗೆ ಗೊತ್ತಿರಲಾರದು ಅನಿಸಿತು. ಅವರು ಕುತೂಹಲದಿಂದ ಇದನ್ನೇ ನೋಡುತ್ತಾ ಬರುತ್ತಿರುವಂತೆಯೇ ನಾನು ಒಳಹೊಕ್ಕೆ. ಅವರ ಎದುರೇ ಬಾಗಿಲು ಮುಚ್ಚಿ ತೆರೆದ ಹಿಂದಿನ ಬಾಗಿಲಿನಿಂದ ಹೊರಬಂದೆ! ನಂತರ ಹಿಂದಿನ ಬಾಗಿಲು ಮುಚ್ಚಿದಾಗ ಎದುರಿನ ಬಾಗಿಲು ತೆರೆಯುತ್ತದೆ.

ಹೊರಗಿನಿಂದ ಹುಡುಗಿಯರ ಹಾ! ಹೂ! ಹೋ! ‘ಎಲ್ಲಿ ಹೋದರು?!’ ಇತ್ಯಾದಿ ಕೇಳಿಸಿತು! ಸಿಲಿಂಡರ್ ಒಳಗೆ ನಾನಿರಲಿಲ್ಲ. ನಾನು ಮತ್ತೆ ಒಳಹೊಕ್ಕು ಎದುರಿನ ಬಾಗಿಲು ತೆರೆದಾಗ ಅವರಲ್ಲಿ ಹೆಚ್ಚಿನವರು ಬಾಯಿ ತೆರೆದು ನಿಂತಿದ್ದವರು ಜೋರಾಗಿ ನಗಲು ಆರಂಭಿಸಿದರು. ನಂತರ ನಾನು ಇದು ಏನು, ಏಕೆ ಎಂದು ವಿವರಿಸಿದೆ.

ಇದನ್ನು ಹೇಳಿದ ಉದ್ದೇಶವೆಂದರೆ ಹೆಚ್ಚಿನವರು ಇಂತದ್ದನ್ನು ನೋಡಿಯೇ ಇರಲಿಲ್ಲ. ಅಂತಹ ಅನನುಭವಿಗಳು ‘ಜನವಾಹಿನಿ’ ವಿಶ್ವವಿದ್ಯಾನಿಲಯದಲ್ಲಿ ಕಲಿತು, ಅನೇಕರು ಬೇರೆಬೇರೆ ಮಾಧ್ಯಮಗಳಲ್ಲಿ ಇವತ್ತು ಕೆಲಸ ಮಾಡುತ್ತಿದ್ದಾರೆ! ಇದು ಹೆಮ್ಮೆಯ ವಿಷಯ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...