| ಅಪೂರ್ವಾನಂದ | ದೆಹಲಿ ವಿ.ವಿ ಪ್ರಾಧ್ಯಾಪಕರು
ಕನ್ನಡಕ್ಕೆ: ರಾಜಶೇಖರ್ ಅಕ್ಕಿ
ಭಾರತೀಯರು ತಮ್ಮ ಧಾರ್ಮಿಕತೆಯ ಬಗ್ಗೆ ಕೀಳರಿಮೆ ಹೊಂದುವಂತೆ ಮಾಡಿದ್ದು ನೆಹರು ಎಂದು ಕೆಲವರು ದೂರುತ್ತಾರೆ. ಆದರೆ ಇದು ಸತ್ಯಕ್ಕೆ ತುಂಬಾ ದೂರ. ನೆಹರುರವರ ಮೇಲೆ ಮಾಡಲಾಗುವ ಆಪಾದನೆಗಳ ಬಗ್ಗೆ ಚರ್ಚಿಸುವ.
ಭಾರತೀಯರ ಪವಿತ್ರತೆಯ ಭಾವನೆಯನ್ನು ಕಸಿದುಕೊಂಡಿರುವುದು ನೆಹರು ಮಾಡಿದ ಅಪರಾಧ ಎನ್ನಲಾಗುತ್ತದೆ. ಧಾರ್ಮಿಕತೆಯ ಬಗ್ಗೆ ಕೀಳರಿಮೆ ಮತ್ತು ಒಂದು ತರಹದ ತಪ್ಪಿತಸ್ಥ ಭಾವನೆಯನ್ನು ಸೃಷ್ಟಿಸಿ, ವೈಯಕ್ತಿಕ ಮತ್ತು ಸಾಮೂಹಿಕ ಜೀವನದಲ್ಲಿ ಒಂದು ರೀತಿಯ ಶೂನ್ಯವನ್ನು ಸೃಷ್ಟಿಸುವಂತೆ ಮಾಡಿದರು ಎಂದು ನೆಹರು ಅವರ ಟೀಕಾಕಾರರು ಹೇಳುತ್ತಾರೆ. ಮಹಾತ್ಮಾ ಗಾಂಧಿಯವರ ಅಂತ್ಯದೊಂದಿಗೆ ದೇಶಕ್ಕೆ ಅಪ್ಪಳಿಸಿದ ವಿಪತ್ತು ಎಂದರೆ ಪವಿತ್ರತೆ ಕಾಣೆಯಾಗಿರುವುದು ಎಂತಲೂ ಹೇಳಲಾಗಿದೆ. ಭಾರತದ ಮೊದಲ ಪ್ರಧಾನಿಯಾಗಿ ದೇಶದ ವಿಧಿಯನ್ನು ಬರೆದ ನೆಹರು ಧಾರ್ಮಿಕ ವ್ಯಕ್ತಿಯಾಗಿರಲಿಲ್ಲ ಹಾಗೂ ಜಾತ್ಯತೀತತೆಯನ್ನು ದೀರ್ಘಕಾಲದವರೆಗೆ ಉಳಿಸಿಕೊಂಡು ಬಂದು, ನಮ್ಮನ್ನೆಲ್ಲ ಎಚ್ಚರವಾಗಿಟ್ಟಿದ್ದು ನೆಹರು ಆಳ್ವಿಕೆ ಎನ್ನಬಹುದು. ಕೋಮುವಾದ ಎನ್ನುವುದು ನೆಹರು ಅವರ ಈ ಜಾತ್ಯತೀತತೆಯ ಅಸ್ವಾಭಾವಿಕ ಹೇರಿಕೆಯಿಂದ ಹುಟ್ಟಿದ್ದು ಎನ್ನಲಾಗುತ್ತದೆ.
ಅದೇ ಸಮಯದಲ್ಲಿ ಅದೇ ಟೀಕಾಕಾರರು, ನೆಹರು ಅವರು ಭಾರತೀಯತೆಯನ್ನು ಹೊಂದಿದ್ದಿಲ್ಲ, ಅವರು ಪಾಶ್ಚಾತ್ಯ ನೋಟವನ್ನು ಮತ್ತು ನಿಲುವನ್ನು ಹೊಂದಿದ್ದರು ಎಂದೂ ಆಪಾದಿಸುತ್ತಾರೆ. ಅಲ್ಲಿ ನೆಹರು ಅವರನ್ನು ಗಾಂಧಿಯೊಂದಿಗೆ ಹೋಲಿಸುತ್ತಾರೆ; ಗಾಂಧಿಜೀಯವರು ನೈಜ ಭಾರತೀಯರಾಗಿದ್ದರು ಎಂದು ಹೇಳುತ್ತಾರೆ. ಭಾರತೀಯ ಎಂದ ಕೂಡಲೇ ಪವಿತ್ರತೆಯನ್ನು ಬಿಂಬಿಸುತ್ತಾರೆ ಅಥವಾ ಪಾಶ್ಚಾತ್ಯ ಎನ್ನುವುದು ಪವಿತ್ರತೆಯನ್ನು ಹೊಂದೇ ಇಲ್ಲ ಎನ್ನವುಂತೆ ಮಾತನಾಡುತ್ತಾರೆ. ನಾವು ನೆನಪಿಡಬೇಕಾದದ್ದೇನೆಂದರೆ, ಗಾಂಧಿಜಿಯ ಫಿಲಾಸಫಿಯು ಅನೇಕ ಪಾಶ್ಚಾತ್ಯ ಮೂಲಗಳನ್ನು ಹೊಂದಿತ್ತು ಹಾಗೂ ಅವರು ಪ್ರತಿಪಾದಿಸಿದ ಸೇವೆಯ ಪರಿಕಲ್ಪನೆಯು ಗಾಂಧೀಜಿಯ ಕ್ರಿಶ್ಚಿಯಾನಿಟಿಯೊಂದಿಗೆ ಆದ ಸಂಬಂಧಗಳಿಂದ ಪ್ರೇರಿತವಾಗಿತ್ತು ಎನ್ನುವುದು. ಇತರೆ ಧರ್ಮಗಳ ಅನುಭವಗಳಿಗೆ ಅವರು ಇಟ್ಟಿದ್ದ ತೆರೆದ ಮನವೇ ಗಾಂಧೀಜಿಯ ಸೃಜಶೀಲತೆಗೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಅವರು ರಾಮಕೃಷ್ಣ ಪರಮಹಂಸರನ್ನು ಹೋಲುತ್ತಾರೆ, ಅವರ ಆತ್ಮವಿಶ್ವಾಸ ಎಷ್ಟಿತ್ತೆಂದರೆ, ತಮ್ಮ ಧರ್ಮದ ಬಗ್ಗೆ ಚಿಂತಿಸದೇ ಬೇರೆ ಧರ್ಮಗಳೆಡೆಗೆ ಹೋದರು.
ಪರಮಹಂಸರ ಬಗ್ಗೆ ಬರೆಯುತ್ತ ನೆಹರು ಹೇಳಿದ್ದು, “ಶಿಕ್ಷಣ ಪಡೆಯದ ಈ ವ್ಯಕ್ತಿಯ ಬಗ್ಗೆ ವ್ಯಂಗ್ಯ ಮಾಡುವವರೇ ಈ ದೇವರ ಮನುಷ್ಯನ ಎದುರಿಗೆ ತಲೆಬಾಗಿಸಿದರು ಹಾಗೂ ವ್ಯಂಗ್ಯ ಮಾಡುವುದನ್ನು ಬಿಟ್ಟು ಪ್ರಾರ್ಥನೆ ಮಾಡುವುದರಲ್ಲಿ ನಿರತರಾದರು. ಒಂದೇ ಸಲ ಪರಮಹಂಸರ ಸಂಪರ್ಕಕ್ಕೆ ಬಂದ ಅನೇಕರು ತಮ್ಮ ವೃತ್ತಿಯನ್ನು ತ್ಯಜಿಸಿದರು, ಅವರಲ್ಲಿ ಸ್ವಾಮಿ ವಿವೇಕಾನಂದ ಶ್ರೇಷ್ಠ.”
ನೆಹರು ತಮ್ಮನ್ನು ತಾವು ‘ಭೂಮಿಯ ಮನುಷ್ಯ’ (ಮ್ಯಾನ್ ಆಫ್ ಅರ್ಥ್) ಎಂದು ಕರೆದುಕೊಂಡರು ಆದರೆ ‘ಯಾವುದೇ ಭೂಮಿಯ ಮನುಷ್ಯನೂ ದೇವರ ಮನುಷ್ಯನಿಂದ ಪ್ರಭಾವಿತನಾಗಬಹುದು’ ಎಂದೂ ಹೇಳಿದರು. ‘ದೇವರ ಮನುಷ್ಯನ’ ಮನಸ್ಸನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಲಾರರು, ಅದನ್ನು ಒಳಗಾಣ್ಕೆಯಿಂದ ಮಾತ್ರ ಅರ್ಥೈಸಿಕೊಳ್ಳಬಹುದು. ಗಾಂಧೀಜಿಯವರೊಂದಿಗೆ ಇದ್ದ ನೆಹರು ಅವರ ಸಂಬಂಧವು ತರ್ಕಹೀನತೆಯ ಅಂಶಗಳನ್ನು ಒಳಗೊಂಡಿತ್ತು ಏಕೆಂದರೆ, ಅನೇಕ ಮಹತ್ವಪೂರ್ಣ ವಿಷಯಗಳಲ್ಲಿ ಅವರು ಮೂಲಭೂತ ವ್ಯತ್ಯಾಸಗಳನ್ನು ಹೊಂದಿದ್ದರು.
ಇದನ್ನು ಓದಿ: ಗಾಂಧಿ, ನೆಹರೂ, ಪಟೇಲ್ ಬಾಂಧವ್ಯದ ಬಗ್ಗೆ ಮೋದಿಗೇನು ಗೊತ್ತು….
ನೆಹರು ಮತ್ತು ಗಾಂಧಿ ಇಬ್ಬರನ್ನು ಬೆಸೆದ ಒಂದು ಕೊಂಡಿಯೆಂದರೆ, ಅವರಿಬ್ಬರಿಗೂ ಭಾರತದ ಸಾಮಾನ್ಯ ಜನತೆಯ ಬುದ್ಧಿಮತ್ತೆಯ ಬಗ್ಗೆ ಇದ್ದ ನಂಬಿಕೆ. ಗಾಂಧಿಯವರು ಕಾಂಗ್ರೆಸ್ ತನ್ನ ಬಾಗಿಲುಗಳನ್ನು ಅಶಿಕ್ಷಿತ ಜನರಿಗೆ ತೆಗೆಯುವಂತೆ ಮಾಡಿದರು ಹಾಗೂ ನೆಹರು ಅವರು ತಮ್ಮ ರಾಜಕೀಯ ಕಲಿಕೆಯನ್ನು ಉತ್ತರಪ್ರದೇಶದ ಹಳ್ಳಿಗಳಲ್ಲಿ ಪಡೆದರು. ‘ಭಾರತದ ಜನತೆ ಒಂದು ನಿರ್ದಿಷ್ಟ ಗುಣಮಟ್ಟ ಮತ್ತು ವ್ಯಕ್ತಿತ್ವವನ್ನು ಹೊಂದಿದ್ದಾರೆ, ಒಂದು ಮೂಲ ಸಾಂಸ್ಕೃತಿಕ ಪರಂಪರೆ ಹೊಂದಿದ್ದು, ಅದೇ ಅವರೆಲ್ಲರೂ ಕಾರ್ಯನಿರ್ವಹಿಸುವಂತೆ ಮಾಡುತ್ತದೆ’ ಎಂದು ನೆಹರು ಅವರು ಪತ್ರಕರ್ತ ಆರ್.ಕೆ. ಕರಂಜಿಯಾ ಅವರಿಗೆ ಒಂದು ಸಂದರ್ಶನದಲ್ಲಿ ಹೇಳಿದ್ದರು.

ಗ್ರಾಮ್ಯ ಪ್ರಜ್ಞೆ (ರಸ್ಟಿಕ್ ವಿಸ್‍ಡಮ್)
ಸಾಮಾನ್ಯ ಜನರ ಪ್ರಜ್ಞೆ, ತಿಳುವಳಿಕೆಯ ಬಗ್ಗೆ ನೆಹರು ಅವರಿಗಿದ್ದ ಮೆಚ್ಚುಗೆ ನಿಜವಾದ ಮೆಚ್ಚುಗೆಯಾಗಿತ್ತು. ‘ಸಾಮಾನ್ಯ ಜನರ ಜೀವನ ಹಳೆಯ ಸಂಸ್ಕೃತಿ ಮತ್ತು ಪರಂಪರೆಯಿಂದ ತುಂಬಿದ್ದನ್ನು ನೋಡುವುದು ನಿಜವಾಗಿಯೂ ಅದ್ಭುತ. ಪ್ರತಿಯೊಂದು ಸಂಭಾಷಣೆಯಲ್ಲಿ ಅವರು ಯಾವುದೋ ಹಳೆಯ ಕಥೆಯನ್ನು ಅಥವಾ ತುಳಸೀದಾಸರ ಪಂಕ್ತಿಗಳನ್ನು ಬಳಸುತ್ತಲೇ ಇರುತ್ತಾರೆ. ಈ ಪುರಾತನ ಸಂಸ್ಕೃತಿಯಲ್ಲಿ ಏನೋ ಇದೆ, ಅದೇ ನಮ್ಮ ಜೀವನಕ್ಕೆ ಸಮತೋಲನ ಮತ್ತು ವೈಶಿಷ್ಟ ನೀಡುತ್ತದೆ’ ಇದು ನೆಹರು ಅವರ ಬರಹ.
ಇದೇ ಆಧ್ಯಾತ್ಮಿಕ ಪ್ರಜ್ಞೆ ಮತ್ತು ಅದರೊಂದಿಗೆ ಬೆಸೆದಿರುವ ಮಣ್ಣಿನ ಗುಣವೇ ನೆಹರು ಅವರನ್ನು ಸಾಮಾನ್ಯ ಜನರೆಡೆಗೆ ಆಕರ್ಷಿಸಿತ್ತು. ಸಾಮಾನ್ಯ ಜನರೊಂದಿಗೆ ಬೆರೆಯುವುದರಿಂದಲೇ ಪವಿತ್ರತೆಯ ಬಗ್ಗೆ ತಮ್ಮ ಪರಿಕಲ್ಪನೆಯನ್ನು ನೆಹರು ಸೃಷ್ಟಿಸಿದ್ದರು. ಅದರೊಂದಿಗೆ ನಿಸ್ಸಂಶಯವಾಗಿ ಅತ್ಯಂತ ಶ್ರೇಷ್ಠ ಸಾಮಾನ್ಯ ವ್ಯಕ್ತಿಯಾದ ಗಾಂಧಿಯವರೊಂದಿಗಿನ ವ್ಯವಹಾರವೂ ಪವಿತ್ರತೆಯ ಪರಿಕಲ್ಪನೆ ಪ್ರಭಾವಿಸಿತು. ಗಾಂಧಿ ಬಗ್ಗೆ ಅವರು ಬರೆದದ್ದು, “ಗಾಂಧಿ ಅರಿವಿನ ತಿರುಳು ಹಾಗೂ ಲಕ್ಷಾಂತರ ಜನರ ಸುಪ್ತ ಸಂಕಲ್ಪವಾಗಿದ್ದಾರೆ, ಅತೀವ ಪ್ರಜ್ಞೆಯುಳ್ಳ, ಒಳ್ಳೆಯ ಭಾವನೆಯ, ಉತ್ತಮ ಅಭಿರುಚಿಯ, ವಿಶಾಲ ನೋಟದ, ಅತ್ಯಂತ ಮಾನವೀಯವುಳ್ಳ ವ್ಯಕ್ತಿಯಾಗಿದ್ದು, ಅದರೊಂದಿಗೆ ತನ್ನ ಬಯಕೆ ಮತ್ತು ಭಾವನೆಗಳನ್ನು ನಿಗ್ರಹಿಸಿ, ಅವುಗಳನ್ನು ಪಾರಮಾರ್ಥಿಕ ದಾರಿಗಳೆಡೆಗೆ ಹರಿಸಿದ ವ್ಯಕ್ತಿ ಗಾಂಧಿ”
‘ಗಾಂಧಿಜಿಯ ಪ್ರಜಾಪ್ರಭುತ್ವದ ಕಲ್ಪನೆ ಖಂಡಿತವಾಗಿಯೂ ಆಧ್ಯಾತಿಕವಾದದ್ದು. ಸಾಮಾನ್ಯ ಅರ್ಥದಲ್ಲಿ ಅವರ ಕಲ್ಪನೆಗೂ ಪ್ರಜಾಪ್ರಭುತ್ವಕ್ಕೆ ಸಂಖ್ಯೆ ಅಥವಾ ಮೆಜಾರಿಟಿ ಅಥವಾ ಪ್ರಾತಿನಿಧ್ಯಕ್ಕೂ ಸಂಬಂಧವಿಲ್ಲ. ಅದು ಸೇವೆ ಮತ್ತು ತ್ಯಾಗದ ನೆಲೆಯನ್ನು ಹೊಂದಿದೆ ಹಾಗೂ ನೈತಿಕ ಒತ್ತಡವನ್ನು ಬಳಸುತ್ತದೆ”.
ಗಾಂಧಿ ಬ್ರಿಟಿಷರಿಗೆ ಮತ್ತು ತನ್ನಂಥವರಿಗೂ ಬಿಡಸಲಾಗದ ಕಗ್ಗಂಟಾಗಿದ್ದರು ಎಂತಲೂ ನೆಹರು ಬರೆಯುತ್ತಾರೆ. ಅದನ್ನು ಮುಂದುವರೆಸಿ. “ಆದರೆ ಭಾರತ ಗಾಂಧಿಯನ್ನು ಅರ್ಥೈಸಿಕೊಳ್ಳುತ್ತದೆ, ಅಥವಾ ಅವರ ಪ್ರಶಂಸೆಯನ್ನಂತೂ ಮಾಡುತ್ತದೆ, ಪ್ರವಾದಿಯಂತಹ-ಧಾರ್ಮಿಕ ವ್ಯಕ್ತಿ, ಪಾಪ ಮತ್ತು ಮೋಕ್ಷ ಮತ್ತು ಅಹಿಂಸೆಯ ಬಗ್ಗೆ ಮಾತನಾಡುವ ಈ ವ್ಯಕ್ತಿಯನ್ನು ಭಾರತ ಅರ್ಥೈಸಿಕೊಳ್ಳುತ್ತದೆ. ತಮ್ಮ ತ್ಯಾಗದ ತೀವ್ರತೆ ಮತ್ತು ಸ್ವಯಂಪ್ರೇರಿತ ಪಶ್ಚಾತ್ತಾಪದಿಂದ ಪುಣ್ಯದ ಬೆಟ್ಟವನ್ನೇ ನಿರ್ಮಿಸಿದ, ಅದರಿಂದ ಕೆಲವು ದೇವರನ್ನೇ ಹೆದರಿಸಿದ ಮತ್ತು ಸ್ಥಾಪಿತ ಕ್ರಮಗಳನ್ನು ಅಲುಗಾಡಿಸಿದ ಶ್ರೇಷ್ಠ ಸಂತರ ಕಥೆಗಳು ಭಾರತೀಯ ಪುರಾಣಗಳಲ್ಲಿ ಅನೇಕಬಾರಿ ಕಾಣಿಸಿಕೊಳ್ಳುತ್ತವೆ. ಯಾವುದೋ ಒಂದು ಎಂದೂ ಬರಿದಾಗದ ಬತ್ತಳಿಕೆಯಿಂದ ಹೊರಬರುವ, ಗಾಂಧೀಜಿಯ ಆಂತರಿಕ ಶಕ್ತಿ ಮತ್ತು ಅದ್ಭುತ ಚೈತನ್ಯವನ್ನು ನೋಡಿದಾಗ ನನ್ನ ಕಣ್ಣೆದುರಿಗೆ ಈ ಪುರಾಣದ ಕಥೆಗಳೇ ಬರುತ್ತವೆ.”
ಅಸಾಧಾರಣ ಮೈತ್ರಿ
ಗಾಂಧಿ ಮತ್ತು ನೆಹರು ಅವರ ನಡುವೆ ಇದ್ದ ಮೈತ್ರಿಯನ್ನು ಅರ್ಥೈಸಿಕೊಳ್ಳುವಲ್ಲಿ ಅನೇಕರಿಗೆ ಕಷ್ಟವಾಗಿದೆ. ಅವರಿಬ್ಬರ ನಡುವೆ ಇದ್ದ ಸಂಬಂಧಕ್ಕೆ ಮೈತ್ರಿ ಎನ್ನುವ ಪದ ಸಾಕಾಗುವುದಿಲ್ಲವೇನೋ. ಅವರ ಸಂಬಂಧ ರಾಜಕೀಯದ್ದಾಗಿತ್ತು ಆದರೆ ಅದಕ್ಕಿಂತ ಮಿಗಿಲಾಗಿ ಆಧ್ಯಾತ್ಮಿಕವಾಗಿತ್ತು.
ಗಾಂಧಿಯವರ ನಾಯಕತ್ವವನ್ನು ಒಪ್ಪಿಕೊಂಡು, ತಮ್ಮ ನಡುವೆ ಇದ್ದ ವ್ಯತ್ಯಾಸಗಳ ಹೊರತಾಗಿಯೂ ಅವರನ್ನು ಅನುಸರಿಸಿದ್ದು, ತನ್ನ ವೈಜ್ಞಾನಿಕ ವೈಚಾರಿಕತೆಯು ಎಂದೂ ಅರ್ಥಮಾಡಿಕೊಳ್ಳದ ಒಳಅರಿವು(ಇನ್‍ಸ್ಟಿಂಕ್ಟ್)ಗಳು ಹೇಳಿದ್ದನನ್ನು ಪಾಲಿಸಿದರು ನೆಹರು. ತಮ್ಮ ತರ್ಕಬದ್ಧತೆಯ ಮಿತಿಗಳನ್ನು ಅರಿತು ವೈಜ್ಞಾನಿಕ ಸತ್ಯದ ಮಿತಿಗಳ ಬಗ್ಗೆಯೂ ತಿಳಿದುಕೊಂಡಿದ್ದರು. ನೆಹರು ಅವರಿಗೆ ತನ್ನ ಮಿತಿಗಳನ್ನು ಮೀರುವುದು, ತನ್ನನ್ನೇ ಮೀರುವುದು ಅತ್ಯಂತ ಮುಖ್ಯವಾಗಿತ್ತು. ಅದೇ ಕಾರಣಕ್ಕಾಗಿಯೇ ಗಾಂಧಿಯ ನಂತರ ನೆಹರು ಅವರ ಮೇಲೆ ಅತ್ಯಂತ ದೊಡ್ಡ ಪ್ರಭಾವ ಬೀರಿದ್ದು ಬುದ್ಧ.
ಬುದ್ಧನ ಬಗ್ಗೆ ನೆಹರು ಮೊದಲಿಗೆ ಅಸ್ಪಷ್ಟ ನಿಲುವನ್ನು ಹೊಂದಿದ್ದರು. ಬುದ್ಧ ನಿರಾಶಾವಾದಿಯೇ? ಅವರು ನಿಷ್ಕ್ರಿಯತೆಯನ್ನು ಪ್ರತಿಪಾದಿಸುತ್ತಾರೆಯೇ? ಬುದ್ಧನ ದಾರಿಯು ಜೀವನದ ಸಂಘರ್ಷಗಳಿಂದ ಪಲಾಯನದ ದಾರಿಯೇ? ಆದರೆ ಅವರನ್ನು ಆಳವಾಗಿ ಅಭ್ಯಸಿಸಿದಾಗ ಅವರಿಗೆ ತಿಳಿದದ್ದು ಬುದ್ಧ ‘ಇಡೀ ಭಾರತೀಯ ಚಿಂತನೆಯ ಆತ್ಮವನ್ನು ಬಿಂಬಿಸುತ್ತಾರೆ’ ಎನ್ನುವುದು.
“ಕಮಲಪುಷ್ಪದಲ್ಲಿ ಕುಳಿತ, ಶಾಂತ ಮತ್ತು ನಿರ್ವಿಕಾರ, ಭಾವನೆ ಮತ್ತು ಆಸೆಗಳನ್ನು ಮೀರಿದ, ಈ ಜಗತ್ತಿನ ಕಲಹ ಮತ್ತು ಕೋಲಾಹಲದ ಎಲ್ಲೆ ಮೀರಿದ, ಕೈಗೆಟುಕದಷ್ಟು ದೂರದಲ್ಲಿರುವ, ನಾವು ಸಾಧಿಸಲಾಗಿದ ಬುದ್ಧ. ಆದರೆ ನಾವು ಆ ನಿಶ್ಚಲ ಮೂರ್ತಿಯ ಹಿಂದೆ ನೋಡಿದರೆ, ಅಲ್ಲಿ ಭಾವೋದ್ರೇಕವಿದೆ ಹಾಗೂ ಒಂದು ಭಾವನೆಯಿದೆ, ನಾವು ಕಂಡ ಭಾವೋದ್ರೇಕ ಮತ್ತು ಭಾವನೆಗಳಿಗಿಂದ ಶಕ್ತಿಶಾಲಿಯಾದ ಮತ್ತು ವಿಚಿತ್ರವಾದ ಭಾವನೆಗಳು ಕಾಣುತ್ತವೆ.”
ತಮ್ಮನ್ನು ಮತ್ತು ತಮ್ಮ ಆಯಸ್ಸನ್ನು ಮೀರುವ ಶಕ್ತಿ ಹೊಂದಿದ್ದ ಬುದ್ಧ, ಗಾಂಧಿ ಮತ್ತು ಪರಮಹಂಸರಿಂದ ಆಕರ್ಷಿತರಾಗಿದ್ದರು ನೆಹರು. “ಮನುಷ್ಯನನ್ನು ಮುಂದುವರೆಸುವ ಹಂಬಲ, ಎಲ್ಲೆಗಳನ್ನು ಮೀರುವ ಹಂಬಲ, ಅದರೊಂದಿಗೆ ಭೌತಿಕ ಯೋಗಕ್ಷೇಮದ ಸ್ವಾಭಾವಿಕ ಹಂಬಲವಿರುತ್ತದೆಯೇ ಹೊರತು ಹಿಂಸೆ ಮತ್ತು ವರ್ಗ ಸಂಘರ್ಷವನ್ನು ಮುಂದುವರೆಸುವ ನಡೆಯಿರುವುದಿಲ್ಲ.” ಇದೇ ನೆಹರು ಅವರು ಕಂಡ ಒಬ್ಬ ಸಮಗ್ರ ಮನುಷ್ಯನ ಕನಸು ಎಂದು ಆ್ಯಂಥನಿ ಪರೆಲ್ ಅವರು ಹೇಳುತ್ತಾರೆ.
ಆ್ಯಂಥನಿ ಪರೆಲ್ ಅವರು ನೆಹರು ಅವರನ್ನು ಬಣ್ಣಿಸುವಾಗ ‘ಧರ್ಮ ಮತ್ತು ಮೋಕ್ಷ’ ಎನ್ನುವ ಪದಗಳನ್ನು ಬಳಸುತ್ತಾರೆ, ಅದಕ್ಕೆ ನೆಹರುವಾದಿಗಳು ಆಕ್ಷೇಪ ವ್ಯಕ್ತಪಡಿಸಬಹುದು, ಆದರೆ ನೆಹರು ಅವರ ವಿಷನ್ ಭೌತಿಕ ಸಾಧನೆಗಳನ್ನು ಮೀರಿದ್ದಾಗಿತ್ತು ಎನ್ನುವುದನ್ನು ಅವರೂ ಒಪ್ಪುತ್ತಾರೆ. ದೇಶದ ಜನರ ಬಗ್ಗೆ ನೆಹರುಗೆ ಅಪಾರ ಗೌರವ ಇತ್ತು; ತಮ್ಮ ಲೌಕಿಕ ವ್ಯಕ್ತಿತ್ವವನ್ನು ಮೀರುವ ಸಾಮಥ್ರ್ಯ ಹೊಂದಿದ್ದಾರೆ ಎಂದು ನೆಹರು ಬಲವಾಗಿ ನಂಬಿದ್ದರು. ದೇಶದ ಜನತೆ ನೆಹರು ಅವರ ನಂಬಿಕೆ ತಪ್ಪಲ್ಲ ಎಂದು ತೋರಿಸುತ್ತಾರೆ ಎಂದು ಆಶಿಸಬಹುದಷ್ಟೆ.
ಇದನ್ನೂ ಓದಿ: ಮಗಳಿಗೆ ತಂದೆಯ ಓಲೆಗಳು : ಇಂದಿರಾಗೆ ಜವಹರಲಾಲ್ ನೆಹರು ಪತ್ರಗಳು



Nehru was one of the theater
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ನೆಹರು ಗುಣಗಾನಕ್ಕೆ ನಿಮಗೆ ಸಾಷ್ಟಾಂಗ 100 ಕೋಟಿ ವಂದನೆಗಳು ನೀವೆಲ್ಲ ಹೆಮ್ಮೆಯ ಭಾರತೀಯರು