Homeಚಳವಳಿದುಷ್ಟ ಜಿಂದಾಲ್ ಪಾದಕ್ಕೆ ಮತ್ತೆ 3667 ಎಕರೆ ಧಾರೆಯೆರೆಯುತ್ತಿರುವ ಭ್ರಷ್ಟ ಸರ್ಕಾರ.

ದುಷ್ಟ ಜಿಂದಾಲ್ ಪಾದಕ್ಕೆ ಮತ್ತೆ 3667 ಎಕರೆ ಧಾರೆಯೆರೆಯುತ್ತಿರುವ ಭ್ರಷ್ಟ ಸರ್ಕಾರ.

ಬಡವರಿಗೆ ವಸತಿ ವಿಚಾರ ಬಂದ ಕೂಡಲೇ ಎಲ್ಲಿದೆ ಭೂಮಿ? ಎನ್ನುವ ಸರ್ಕಾರ ಈಗ ಜಿಂದಾಲ್‍ನವರಿಗೆ ನೀಡುವಾಗ ಮಾತ್ರ ಎಲ್ಲಿದೆ ಭೂಮಿ ಎನ್ನುವುದಿಲ್ಲ. ಅಲ್ಲಿನ ರೈತರ ವಿರೋಧದ ನಡುವೆಯೂ ಭೂಮಿ ವಶಪಡಿಸಿಕೊಂಡು ಜಿಂದಾಲ್ ಪಾದಕ್ಕೆ ಅರ್ಪಿಸುವ ಗುಲಾಮಗಿರಿ ಕೆಲಸ ಮಾಡುತ್ತಿದ್ದಾರೆ.

- Advertisement -
- Advertisement -

| ಮುತ್ತುರಾಜು |

ಬಳ್ಳಾರಿ ಜಿಲ್ಲೆಯಲ್ಲಿ ಬಲಾಢ್ಯವಾಗಿ ಬೇರೂರಿರುವ ಜಿಂದಾಲ್ ಸ್ಟೀಲ್ ವಕ್ರ್ಸ್ ಕಂಪನಿಯ ಅಕ್ರಮ, ಅನೀತಿಗಳಿಗೆ ಕೊನೆಯಿಲ್ಲದಂತಾಗಿದೆ. ಅಧಿಕಾರ ದುರುಪಯೋಗ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಂದಲೇ ಕೊಬ್ಬಿರುವ ಈ ಕಂಪನಿಗೆ ಹೇಳೋರು ಕೇಳೋರು ಇಲ್ಲದ ಕಾರಣ ತನ್ನ ಇನ್ನಿಲ್ಲದ ಕರ್ಮಕಾಂಡಗಳನ್ನು ಅವ್ಯಾವತವಾಗಿ ಮುಂದುವರೆಸಿದೆ. ಅನಿಯಂತ್ರಿತ ಪರಿಸರ ನಾಶ, ಕಾರ್ಮಿಕರಿಗೆ ಕಿರುಕುಳ ಇತ್ಯಾದಿಗಳಿಂದ ಕುಖ್ಯಾತಿಗೆ ಒಳಗಾಗಿದ್ದ ಕಂಪನಿಯ ಪಾದಕ್ಕೆ ಇಂದು ಮತ್ತೆ 3667ಎಕರೆ ಭೂಮಿಯನ್ನು ಅರ್ಪಿಸುವ ಕೆಲಸಕ್ಕೆ ಭ್ರಷ್ಟ ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಸರ್ಕಾರ ಭೂಮಿ ನೀಡಲು ಮುಂದಾಗಿರುವುದರಿಂದ ಜಿಲ್ಲೆಯ ಜನರ ಆಕ್ರೋಶಕ್ಕೆ ತುತ್ತಾಗಿದೆ.

ಬಳ್ಳಾರಿ-ಹೋಸಪೇಟೆ ಮಧ್ಯದಲ್ಲಿರುವ ತೋರಣಗಲ್ಲು ಎಂಬಲ್ಲಿರುವ ಜೆಎಸ್‍ಡಬ್ಲು ಕಂಪನಿಯು ಭಾರತದಲ್ಲಿ ಉಕ್ಕು ತಯಾರಿಸುವ 2ನೇ ಅತಿದೊಡ್ಡ ಖಾಸಗಿ ಕಂಪನಿ. ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಇದು 1994 ರಲ್ಲಿ ಜಿಂದಾಲ್ ವಿಜಯನಗರ್ ಸ್ಟೀಲ್ ಲಿಮಿಟೆಡ್ ಹೆಸರಿನಲ್ಲಿ ಆರಂಭಗೊಂಡಿದೆ. ನಂತರ 2005 ರಲ್ಲಿ ಜಿಂದಾಲ್ ಐರನ್ ಅಂಡ್ ಸ್ಟೀಲ್ ಕಂಪನಿ ಜೊತೆ ವಿಲೀನವಾಗುವುದರೊಂದಿಗೆ ಹಾಲಿ ಜೆಎಸ್‍ಡಬ್ಲು ಲಿಮಿಟೆಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಜ್ಜನ್ ಜಿಂದಾಲ್

ಕಳ್ಳ ಮಾರ್ಗದಲ್ಲಿ ಆರಂಭ:
ಇದರ ಆರಂಭವೇ ಕಳ್ಳ ಮಾರ್ಗದಿಂದ ಶುರುವಾಗಿದೆ. ಬಳ್ಳಾರಿ ಸ್ಟೀಲ್ಸ್ ಅಂಡ್ ಅಲಾಯ್ಸ್ ಲಿಮಿಟೆಡ್ (ಬಿಎಸ್‍ಎಎಲ್) ಎಂಬ ಖಾಸಗಿ ಕಂಪನಿಗೆ ಹಲವು ವರ್ಷಗಳ ಹಿಂದೆ ಉಕ್ಕು ಕಾರ್ಖಾನೆ ಸ್ಥಾಪನೆಗೆಂದು ಅಂದಿನ ಸರ್ಕಾರ 1000 ಎಕರೆಗೂ ಹೆಚ್ಚು ಭೂಮಿಯನ್ನು ರೈತರಿಂದ ಬಲವಂತವಾಗಿ ಅಗ್ಗದ ಬೆಲೆಯಲ್ಲಿ ಕಸಿದು, ಮಂಜೂರು ಮಾಡಲಾಯಿತು. ಕೆಲಸ ಆರಂಭಿಸದೇ ಆ ಕಂಪನಿ ಅದರ ಮೇಲೆ 200 ಕೋಟಿ ರೂ. ಬ್ಯಾಂಕ್ ಸಾಲ ಎತ್ತಿಕೊಂಡು ನಂತರ ಅದೇ ಭೂಮಿಯನ್ನು ಜಿಂದಾಲ್ ಕಂಪನಿಗೆ ಹಸ್ತಾಂತರಿಸಿತು. ಇದು ನೂರಕ್ಕೆ ನೂರು ಕಾಯ್ದೆಬಾಹಿರ. ಆದರೆ ಯಾರು ಕೇಳುತ್ತಾರೆ? ಕಂಪನಿ ಮಾಲೀಕ ಸಜ್ಜನ್ ಜಿಂದಾಲ್‍ಗಾಗಿ ತನ್ನ ಕಡುವೈರಿ ಎಂದು ಭಾಷಣ ಬಿಗಿಯುವ ಪಾಕಿಸ್ತಾನಕ್ಕೆ ದೇಶದ ಪ್ರಧಾನಿಯೇ ಹೋಗಿ ಬರುತ್ತಿರುವಾಗ ಇದರ ಬಗ್ಗೆ ರಾಜ್ಯ ಸರ್ಕಾರವೆಲ್ಲಿ ತಲೆ ಕೆಡಿಸಿಕೊಳ್ಳುತ್ತದೆ ಹೇಳಿ?

ಈಗ ಜಿಂದಾಲ್ ಇಲ್ಲಿ ಉಕ್ಕು ಘಟಕ ಸ್ಥಾಪಿಸುವ ಬದಲು ಅದನ್ನು ಬ್ಯಾಂಕ್ ಸಾಲ ಎತ್ತುವ ಸಟ್ಟಾಬಾಜಿಗೆ ಬಳಸಲು ಯತ್ನಿಸುತ್ತಿದೆ, ಅದನ್ನು ಕಾಯ್ದೆ ಪ್ರಕಾರ ರೈತರಿಗೆ ಹಿಂದಿರುಗಿಸಬೇಕು ಎಂದು ಬಳ್ಳಾರಿಯ ಹಲವು ಸಂಘಟನೆಗಳು ಹೋರಾಟಕ್ಕಿಳಿದಿವೆ. ಇದಲ್ಲದೆ ಸ್ವತಃ ಜಿಂದಾಲ್‍ಗೇನೇ ಉಕ್ಕು ಕಾರ್ಖಾನೆ ಸ್ಥಾಪಿಸಲು 500 ಎಕರೆ ಸಾಕಾಗಿದ್ದ ಕಡೆ 4000 ಎಕರೆ ಮಂಜೂರು ಮಾಡಿಕೊಡಲಾಗಿದೆ. ಈ ರೀತಿ ಆರಂಭವಾಗಿರುವ ಕಾರ್ಖಾನೆ ನಿಯತ್ತಾಗಿ ಕೆಲಸ ಮಾಡುತ್ತಿದೆಯ ಅಂದರೆ ಅದೂ ಇಲ್ಲ. ಸ್ಥಳೀಯರಿಗೆ ಕೆಲಸ ಕೊಡದೆ ವಂಚಿಸಿರುವುದಲ್ಲದೇ ಇರುವ ಕಾರ್ಮಿಕರನ್ನು ಸಹ ಜೀತದಾಳುಗಳ ರೀತಿ ದುಡಿಸಿಕೊಳ್ಳುತ್ತಿದೆ.

ಕಾರ್ಮಿಕ ವಿರೋಧಿ ಕಂಪನಿ:
ಕಂಪನಿಯು ಹೈದರಾಬಾದ್ ಕರ್ನಾಟಕ ಪ್ರದೇಶವಾದ ಬಳ್ಳಾರಿ ಜಿಲ್ಲೆಯಲ್ಲಿರುವುದರಿಂದ ಈ ವ್ಯಾಪ್ತಿಯ ಕಾರ್ಮಿಕರಿಗೆ ಶೇ.80 ರಷ್ಟನ್ನು ಇನ್ನು ಸಿ ಮತ್ತು ಡಿ ವೃಂದದ ಉದ್ಯೋಗಗಳನ್ನು ಪೂರ್ತಿ ಕನ್ನಡಿಗರಿಗೆ ನೀಡಬೇಕೆಂದು ನಿಯಮ ಹೇಳುತ್ತದೆ. ಅದರೆ ಈಗ ಇಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ಕಾರ್ಮಿಕ ಸಂಖ್ಯೆ ಶೇ.10 ರಷ್ಟು ಮಾತ್ರ. ಇಲ್ಲಿನ ಕಾರ್ಮಿಕರನ್ನು ತೆಗೆದುಕೊಂಡರೆ ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗುತ್ತಾರೆ, ನ್ಯಾಯಬದ್ಧ ಸೌಲಭ್ಯಗಳನ್ನು ಕೇಳುತ್ತಾರೆ ಮತ್ತು ತಮ್ಮ ಮನಸ್ಸೊಇಚ್ಛೆ ಬಂದಷ್ಟು ದುಡಿಸಲು ಆಗುವುದಿಲ್ಲ ಎಂಬ ಕುತಂತ್ರದಿಂದ ಹೊರ ರಾಜ್ಯದವರನ್ನೆ ಹೆಚ್ಚಾಗಿ ನೇಮಿಸಿಕೊಳ್ಳಲಾಗುತ್ತಿದೆ. ಎಲ್ಲವೂ ಗುತ್ತಿಗೆ ಕೆಲಸವಾದ್ದರಿಂದ ಕಾರ್ಮಿಕರ ಶ್ರಮವನ್ನು ತಮಗೆ ಬೇಕಾದಷ್ಟು ಹೀರಿಕೊಂಡು 40-45 ವರ್ಷ ದಾಟಿದ ಕಾರ್ಮಿಕರನ್ನು ಕಿತ್ತು ಬಿಸಾಡುವುದು ಇಲ್ಲಿನ ಪದ್ಧತಿ. ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕ ಸಂಘಟನೆಯೊಂದು ಇಲ್ಲಿನ ಕಾರ್ಮಿಕರನ್ನು ಸಂಘಟಿಸಲು ಮುಂದಾದಾಗ ಪರಿಸ್ಥಿತಿ ವಿಕೋಪಕ್ಕೆ ತಲುಪಿ ಕಾರ್ಮಿಕರು ಮತ್ತು ಮಾಲೀಕರ ನಡುವಿನ ಸಂಘರ್ಷ ಆರಂಭವಾಗಿತ್ತು.

ಪರಿಸರ ವಿನಾಶ ಮತ್ತು ಜೆಎಸ್‍ಡಬ್ಲು ಡಾಂಬರ್ ಕಾರ್ಖಾನೆಯ ನಂತರ ಪೇಂಟ್ ಕಾರ್ಖಾನೆ
ಆದರೆ ಇದನ್ನು ಸರಿಪಡಿಸುವ ಗೋಜಿಗೆ ಹೋಗುವ ಬದಲು ಮತ್ತಷ್ಟು ಪರಿಸರ ನಾಶಕ್ಕೆ ಜೆಎಸ್‍ಡಬ್ಲು ಕೈಹಾಕಿತ್ತು. ಅದೇ ಜಿಂದಾಲ್ ಡಾಂಬಾರು ಕಾರ್ಖಾನೆ. ಸ್ಥಳೀಯರ ಸಾಕಷ್ಟು ವಿರೋಧದ ನಡುವೆ ಡಾಂಬಾರು ಕಾರ್ಖಾನೆ ಸ್ಥಾಪಿಸಿದ್ದ ಜಿಂದಾಲ್ ಈಗ ಪೇಂಟ್ ಕಾರ್ಖಾನೆ ಸ್ಥಾಪಿಸಲೆಂದು ಮತ್ತೆ 3667 ಎಕರೆ ಜಾಗಕ್ಕೆ ಕನ್ನ ಹಾಕಿದೆ. ತೋರಣಗಲ್ಲು ಗ್ರಾಮದ ಸರ್ವೇ ನಂಬರ್ 504, 505, 506, 515, 416 ಮತ್ತು ಮುಸಿನಾಯಕನಹಳ್ಳಿಯ ಸರ್ವೇ ನಂಬರ್ 17, 17, 19 ಮತ್ತು 21 ರಲ್ಲಿ ಹಾಲಿ ಪೇಂಟ್ ಕಂಪನಿ ಆರಂಭಿಸಲು ತಯಾರಿ ನಡೆಸಿದೆ. ವಾರ್ಷಿಕ 2 ಲಕ್ಷ ಲೀಟರ್ ನೀರು ಆಧಾರಿತ 40 ಸಾವಿರ ಟಿಆರ್‍ಪಿಎ ನೀರು ಆಧಾರಿತ ಎಮಲ್ಷನ್ ಕೋಪಾಲಿಮರ್ ಉತ್ಪಾದನೆ ಘಟಕ ಇದಾಗಿದೆ. ಪೇಂಟ್ ತಯಾರಿಕೆಯಲ್ಲಿ ಸಹಜವಾಗಿ ರಸಾಯನಿಕ ವಸ್ತುಗಳನ್ನು ಬಳಸುವುದರಿಂದ ಸುತ್ತಮುತ್ತಲಿನ ಪರಿಸರ ಮತ್ತಷ್ಟು ಹದಗೆಡಲಿದೆ ಎಂದು ಸ್ಥಳೀಯ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರ ಪತ್ರಿಭಟನೆ

ಈ ಕುರಿತು ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಸಿಪಿಐ-ಎಂ, ರೈತ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಈ ಯೋಜನೆಗೆ ತೀವ್ರ ವಿರೋಧ ತೋರಿದ್ದಾರೆ. ಇದೇ ಜಿಂದಾಲ್ ಎಂಬ ಮಹಾಮಾರಿ ಕಂಪನಿಯಿಂದ ಸಾಕಷ್ಟು ಪರಿಸರ ಈಗಾಗಲೇ ಹಾಳಾಗಿದ್ದು ಹಲವಾರು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಮುಂದಾದರು ಪರಿಸರಕ್ಕೆ ಅಪಾಯ ಒಡ್ಡುವ ಕಂಪನಿಗಳು ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇಂತಹ ವಿರೋಧವನ್ನು ಮೊದಲೇ ನಿರೀಕ್ಷಿಸಿದ್ದ ಕಂಪನಿಯು ತನ್ನ ನವರಂಗಿ ಆಟವನ್ನು ಇಲ್ಲಿಯೂ ಪ್ರದರ್ಶಿಸಿದೆ. ಮೊದಲೇ ಕೆಲವು ಗ್ರಾಮಸ್ಥರನ್ನು ಬುಕ್ ಮಾಡಿಕೊಂಡು ಹಣದ ಆಮಿಷ ತೋರಿಸಿ ಸಭೆಯಲ್ಲಿ ಕಂಪನಿ ಪರ ವಾದಿಸುವಂತೆ ಪುಸಲಾಯಿಸಿದ್ದಾರೆ. ಅಂತೆಯೇ ಸಭೆಯಲ್ಲಿ ಕೆಲವರು ಮಾತನಾಡಿ, ಕಾರ್ಖಾನೆಗಳ ಸ್ಥಾಪನೆಯಿಂದ ಈ ಭಾಗದ ನಿರುದ್ಯೋಗಿಗಳಿಗೆ ಕೆಲಸ ಸಿಗುವುದು ಅಲ್ಲದೇ ಕಂಪನಿಗಳು ಹೆಚ್ಚು ತೆರಿಗೆ ಕಟ್ಟುವುದರಿಂದ ಗ್ರಾಮದ ಅಭಿವೃದ್ದಿಯೂ ಸಹ ಆಗಲಿದೆ ಎಂದು ಕಂಪನಿಯವರು ಹೇಳಿದಂತೆ ಉರುಹೊಡೆದಿದ್ದನ್ನು ಸಭೆಯಲ್ಲಿ ಒಂದೇ ಸಮನೆ ಉಸುರಿದ್ದಾರೆ. ಅಲ್ಲಿಗೆ ಎಲ್ಲಾ ಮುಗಿಸಿ ಈಗ ಪೇಂಟ್ ಕಾರ್ಖಾನೆ ಕೂಡ ತಯಾರಾಗಿದೆ. ಇನ್ನು ಕಾರ್ಯಾರಂಭ ಮಾಡಿಲ್ಲ ಅಷ್ಟೇ. ಒಟ್ಟಿನಲ್ಲಿ ಅಲ್ಲಿನ ರೈತರು ಮತ್ತು ಸ್ಥಳೀಯರು ಈ ಕಾರ್ಖಾನೆಯ ವಿರುದ್ಧ ಕಳೆದ 10 ವರ್ಷಗಳಿಂದ ಬಂದರೂ ಇಲ್ಲಿನ ಎಂಪಿ ಎಮ್ಮೆಲ್ಲೆಗಳು ಜಿಂದಾಲ್‍ಗೆ ಬುಕ್ ಆಗಿರುವುದರಿಂದ ಯಾವುದೇ ಪ್ರಯೋಜವಾಗಿಲ್ಲ.

ಬಡವರಿಗಿಲ್ಲದ ಭೂಮಿ ಜಿಂದಾಲ್ ಹೇಗೆ?
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಬಡವರಿಗೆ ಭೂಮಿ ಮತ್ತು ವಸತಿ ನೀಡಬೇಕೆಂದು ಹೋರಾಡುತ್ತಾ ಬಂದಿದೆ. ಸಿದ್ದರಾಮನ್ಯನವರ ಸರ್ಕಾರ ಇದ್ದಾಗಿನಿಂದಲೂ ಕಾಗೋಡು ತಿಮ್ಮಪ್ಪನವರು ಸಚಿವರಾಗಿದ್ದಾಗಿನಿಂದಲೂ ಹೋರಾಟ ನಡೆಸಿದೆ. ಸ್ವತಂತ್ರ ಸೇನಾನಿ ದೊರೆಸ್ವಾಮಿಯವರು ಇದರ ನೇತೃತ್ವ ವಹಿಸಿದ್ದಾರೆ. ಇವರ ಹೋರಾಟದ ಫಲವಾಗಿ ರಾಜ್ಯಮಟ್ಟದ ಸರ್ಕಾರ ಮತ್ತು ಹೋರಾಟಗಾರರನ್ನೊಳಗೊಂಡ ಸಮಿತಿಯು ರಚನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಆ ಸಭೆಗಳಲ್ಲಿ ಬಡವರಿಗೆ ವಸತಿ ವಿಚಾರ ಬಂದ ಕೂಡಲೇ ಎಲ್ಲಿದೆ ಭೂಮಿ? ಎನ್ನುವ ಸರ್ಕಾರ ಈಗ ಜಿಂದಾಲ್‍ನವರಿಗೆ ನೀಡುವಾಗ ಮಾತ್ರ ಎಲ್ಲಿದೆ ಭೂಮಿ ಎನ್ನುವುದಿಲ್ಲ. ಅಲ್ಲಿನ ರೈತರ ವಿರೋಧದ ನಡುವೆಯೂ ಭೂಮಿ ವಶಪಡಿಸಿಕೊಂಡು ಜಿಂದಾಲ್ ಪಾದಕ್ಕೆ ಅರ್ಪಿಸುವ ಗುಲಾಮಗಿರಿ ಕೆಲಸ ಮಾಡುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...