Homeಕರ್ನಾಟಕ"ಜೆಡಿಎಸ್‍ಗೆ ಯಾವುದೇ ಸಿದ್ಧಾಂತವಿಲ್ಲ": ಚಲುವರಾಯಸ್ವಾಮಿ ಸಂದರ್ಶನ

“ಜೆಡಿಎಸ್‍ಗೆ ಯಾವುದೇ ಸಿದ್ಧಾಂತವಿಲ್ಲ”: ಚಲುವರಾಯಸ್ವಾಮಿ ಸಂದರ್ಶನ

- Advertisement -
- Advertisement -

ಮಂಡ್ಯ ಜಿಲ್ಲೆ ರಾಜಕಾರಣಿ ಎನ್.ಚಲುವರಾಯಸ್ವಾಮಿ ಅವರು ಪ್ರಭಾವಿಯಾಗಿ ಬೆಳೆದದ್ದು ಕುಮಾರಸ್ವಾಮಿ ಟೀಮು ಜೆಡಿಎಸ್ ಎಮ್ಮಲ್ಲೆಗಳನ್ನು ಹೈಜಾಕ್ ಮಾಡಿ ರೆಸಾರ್ಟಿಲ್ಲಿಟ್ಟು ಎಡೂರಪ್ಪನ ಜೊತೆ 20-20 ಮ್ಯಾಚ್ ಫಿಕ್ಸು ಮಾಡಿದಾಗ. ಆದರೆ ಕುಮಾರಣ್ಣನ ಆಟ ಮುಗಿದನಂತರ ದೇವೇಗೌಡರು ಪಿಕಾಸಿ ತೆಗೆದು ಪಿಚ್ ಅಗೆದು ಬಿಸಾಡಿದರು. ಜೊತೆಗೆ ಕುಮಾರಣ್ಣನ ಜೊತೆಯಿದ್ದವರನ್ನು ಟೀಮಿನಿಂದ ಕೈಬಿಟ್ಟಿದ್ದೂ ಅಲ್ಲದೆ, ಅವರನ್ನು ಪಕ್ಷದ್ರೋಹಿಗಳು, ಜಾತಿದ್ರೋಹಿಗಳು ಎಂಬಂತೆ ಬಿಂಬಿಸಿ ಚುನಾವಣೆಯಲ್ಲೂ ಸೋಲಿಸಿ ಸೇಡು ತೀರಿಸಿಕೊಂಡರು. ಈಗ ಗೌಡರ ಎದುರಾಳಿಗಳಾಗಿ ಕಾಂಗ್ರೆಸ್‍ನಲ್ಲಿರುವ ಚಲುವರಾಯಸ್ವಾಮಿ ಗೌಡರ ವೈರಿಗಳಲ್ಲಿ ಮೊದಲಿಗರಾಗಿರುವುದರಿಂದ ಕೆ.ಆರ್.ಪೇಟೆ ಪ್ರದೇಶದಲ್ಲಿ ಓಡಾಡುತ್ತಿದ್ದ ಅವರನ್ನು ಹಿಡಿದು ಸಂದರ್ಶನ ಮಾಡಲಾಯ್ತು.

ನ್ಯಾಯಪಥ: ಸಾರ್ ಒಂದು ಕಾಲದ ನಿಮ್ಮ ಗೆಳೆಯ ನಾರಾಯಣಗೌಡರ ವಿರುದ್ಧ ಪ್ರಚಾರ ಮಾಡುತ್ತಿದ್ದೀರಿ. ಹಾಗೆಯೇ ಜೆಡಿಎಸ್ ವಿರೋಧವಾಗಿ ಮತ ಕೇಳುತ್ತಿದ್ದೀರಿ. ಇಂತಹ ವಿಪರ್ಯಾಸ ನಿರೀಕ್ಷಿಸಿದ್ದಿರಾ…?
ಚಲುವರಾಯ ಸ್ವಾಮಿ: ಖಂಡಿತ ಇಂತಹ ಸ್ಥಿತಿನ ನಿರೀಕ್ಷೆ ಮಾಡಿರಲಿಲ್ಲ. ರಾಜಕಾರಣ ನಮ್ಮ ನಿರೀಕ್ಷೆಗೂ ಮೀರಿ ಬದಲಾಗ್ತಾಯಿದೆ. ತಮ್ಮ ಸರಕಾರ ಕೆಡವಿದ ಬಿಜೆಪಿಗೇ ಸಪೋರ್ಟು ಮಾಡಿ ಎಡೂರಪ್ಪ ಬೀಳದಂಗೆ ಕಾಪಾಡ್ತಿವಿ ಅಂತ ಅಪ್ಪ ಮಕ್ಕಳು ಹೇಳಿ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ. ಇನ್ನೂ ಏನೇನಾಗುತ್ತೋ ನೋಡಬೇಕು.

ನ್ಯಾ.ಪ: ಅಂಗೇಳಕ್ಕೆ ಕಾರಣ ಏನ್ ಸಾರ್?
ಚ.ರಾ.ಸ್ವಾ: ಕಾರಣ ಇಷ್ಟೇ. ಕುಮಾರಸ್ವಾಮಿಯವರು ಏನೂ ಅಂತ ಜೆ.ಡಿ.ಎಸ್ ಎಮ್ಮೆಲ್ಲೆಗಳಿಗೆ ಅರ್ಥ ಆಗಿದೆ. ಕಳೆದ ಹತ್ತು ವರ್ಷದಿಂದ ಅಧಿಕಾರದಲ್ಲಿಲ್ಲದೇ ಇದ್ದ ಅವರಿಗೆ ಯಾಕೆ ಇಲ್ಲಿರಬೇಕು ಅನಿಸಿದೆ. ಒಂದು ಕಾಲದಲ್ಲಿ ಜೆಡಿಎಸ್ ಎಮ್ಮೆಲ್ಲೆಗಳು ಕುಮಾರಣ್ಣ ಹೇಳಿದಂಗೆ ಕೇಳಿ ಬಿಜೆಪಿಗೆ ಸಪೋರ್ಟು ಮಾಡಿದ್ರು. ಈಗ ಕುಮಾರಣ್ಣನ ಬಿಟ್ಟು ಹೋಗಕ್ಕೆ ತಯಾರಿ ನಡೆಸಿದ್ದು, ಇದು ಅಪ್ಪಮಕ್ಕಳಿಗೆ ಗೊತ್ತಾಗಿ ತಾವೇ ಮುಂದಾಗಿ ಬೆಂಬಲ ಘೋಷಣೆ ಮಾಡಿ ಎಮ್ಮೆಲ್ಲೆಗಳನ್ನು ಜೆಡಿಎಸ್ ಗೂಟಕ್ಕೆ ಕಟ್ಟಾಕಿದ್ರು.

ನ್ಯಾ.ಪ: ಈಗ ಪುನಃ ಹದಿನೇಳು ಜನ ಸೋಲಿಸದೇ ನಮ್ಮ ಗುರಿ ಅಂದವುರಲ್ಲಾ?
ಚ.ರಾ.ಸ್ವಾ: ಅದ್ಯಾಕೆ ಅಂದ್ರೇ ಎಡೂರಪ್ಪನವರಿಗೆ ಬೇಕಿರೋವಷ್ಟು ಎಮ್ಮಲ್ಲೆಗಳು ಗೆದ್ರೆ ಆಗ ಎಡೂರಪ್ಪನವರಿಗೆ ಜೆಡಿಎಸ್ ಹಂಗಿರಲ್ಲ. ಸೋತರೆ ಇವರತ್ರ ಬಂದು ಗೋಗರಿಬವುದು. ಈತರ ಆಲೋಚನೆಗಳು ಹೊಳದಂಗೂ ಅವರ ಬಾಯಲ್ಲಿ ಬರೊ ಮಾತೂ ಕೂಡ ಬದಲಾಗ್ತವೆ.

ನ್ಯಾ.ಪ: ನೀವು ಜೆಡಿಎಸ್ ಪಾಳಯದಲ್ಲಿ ಕುಮಾರಸ್ವಾಮಿ ನಂತರದ ಸ್ಥಾನದಲ್ಲಿದ್ರಿ. ಈಗ ಪರಮ ವೈರಿತರ ಇದ್ದಿರಿ ಇದಕ್ಕೆ ಕಾರಣ ಏನು…?
ಚ.ರಾ.ಸ್ವಾ.: ಆಗ ಅಂದ್ರ 20-20 ಸರಕಾರದ ರಚನೆಲಿ ನಾನು ಬಾಲಕೃಷ್ಣ, ಜಮೀರು ಮತ್ತಿತರರು ಜೆಡಿಎಸ್‍ನ ನಾಯಕರ ಶ್ರಮವೆ ಸರಕಾರ ರಚನೆಯಾಗಕ್ಕೆ ಕಾರಣವಾಯ್ತು. ಆದ್ರೆ ಕುಮಾರಣ್ಣ ಎಲ್ಲ ನನ್ನಿಂದ್ಲೆ ಅಂತ ಅಹಂ ಬೆಳೆಸಿಕೊಂಡ್ರು ಯಾರ ಸಲಹೆ ಸಹಕಾರದ ಅಗತ್ಯ ಅವರಿಗೆ ಕಾಣಲಿಲ್ಲ. ಅವರ ಈಗೊ ದೆಸೆಯಿಂದ ನಾವೆಲ್ಲಾ ದೂರ ಆಗಬೇಕಾಯ್ತು.

ನ್ಯಾ.ಪ: ನಮಗೆ ತಿಳಿದ ಮಾಹಿತಿ ಪ್ರಕಾರ ದೇವೇಗೌಡ್ರು ಮಗನ ಸುತ್ತ ಇದ್ದ ದುಷ್ಟಕೂಟನ ದೂರ ಮಾಡಿ ಮಗನ್ನು ಉಳಿಸಿಕೊಂಡ್ರಂತೆ..
ಚ.ರಾ.ಸ್ವಾ. : ಅವೆಲ್ಲ ಸುಳ್ಳು ಮಂಡ್ಯ ಚುನಾವಣೇಲಿ ಕುಮಾರಣ್ಣನಿಗೂ ಎರಡು ಮೇಜರ್ ಆಪರೇಷನ್ ಆಗಿರೋದ್ರಿಂದ ಅವರ ಸಹಾಯಕ್ಕಾಗಿ ಮತ್ತೆ ಉತ್ತರಾಧಿಕಾರಿಯಾಗಿ ನಿಖಿಲ್‍ನನ್ನ ನಿಲ್ಲಿಸಿದ್ದಿವಿ ಅಂದ್ರು. ಇದೆಷ್ಟು ನಿಜ ಅಂತ ಜನಗಳಿಗೇ ಗೊತ್ತು. ಸುಳ್ಳಿನ ರಾಜಕಾರಣ ನಮ್ಮ ಜನಗಳಿಗೆ ನಿಧಾನಕ್ಕೆ ಗೊತ್ತಾಗ್ತಾಯಿದೆ. ಮಂಡ್ಯ ತುಮಕೂರು ಚುನಾವಣೆ ಫಲಿತಾಂಶವೇ ಇದಕ್ಕೆ ಉದಾಹರಣೆ.

ನ್ಯಾ.ಪ: ಜೆಡಿಎಸ್ ಲೀಡ್ರೂಗಳದು ಸುಳ್ಳಿನ ರಾಜಕಾರಣನ……?
ಚ.ರಾ.ಸ್ವಾ: ಮುಖ್ಯವಾಗಿ ದೇವೇಗೌಡ್ರು ಕುಮಾರಣ್ಣ ಸುಳ್ಳು ಹೇಳ್ತರೆ. ಮಂಡ್ಯದಲ್ಲಿ ನಿಖಿಲ್ ನಿಲ್ಲಿಸಿದಾಗ ಎಂಟು ಸಾವಿರ ಕೋಟಿ ಬಿಡುಗಡೆ ಮಾಡ್ತೀನಿ ಅಂದಿದ್ರು, ಎಲ್ಲಿ ಮಾಡಿದ್ರು? ಇವರ ರೈತಪರ ಆಡಳಿತ ಇರುವಾಗ್ಲೆ ಎರಡು ಶುಗರ್ ಫ್ಯಾಕ್ಟರಿ ನಿಂತುಹೋಗಿವೆ. ಕಮರ್ಷಿಯಲ್ ಬೆಳೆ ಕಬ್ಬುನೇ ನೆಚ್ಚಿರೋ ರೈತರ ಕತೆಯೇನೂ.. ಇವರು ಮುಖ್ಯಮಂತ್ರಿಯಾಗಿದ್ದಾಗ 15 ದಿನ ತಡವಾಗಿ ನೀರು ಕೊಟ್ರು. ಅದೂ ರೈತರೆಲ್ಲ ಹೋರಾಡಿದಾಗ. ನೀರು ತಡವಾಗಿದ್ರಿಂದ ಕೊಟ್ಯಂತ್ರೂಪಾಯಿ ಬೆಳೆ ಒಣಗಿತ್ತು. ನಾನೇನೇಳತಾಯಿದ್ದಿನಿ ಅಂದ್ರೆ, ರೈತಪರ ಕೆಲಸಗಳಿಗೆ ಇರುವ ಪ್ರಾಮಾಣಿಕವಾದ ಕಾಳಜಿ ವಹಿಸಲ್ಲ. ಆಡಳಿತಾತ್ಮಕವಾಗಿ ಯಾವುದು ಮುಖ್ಯ ಅನ್ನದ್ನೆ ಗ್ರಹಿಸಲ್ಲ. ಸುಮ್ಮನೆ ಮಾತಾಡ್ತರೆ. ಜವಾಬ್ದಾರಿಯಿಂದ ಮಾತನಾಡಿ ಕೆಲಸ ಮಾಡಿದ್ರೆ, ತಮ್ಮ ಮಾತುಗಳನ್ನೆ ಮೀರೊ ಮಾತು ಬದಲಿಸೊ ಮುಜುಗರದಿಂದ ತಪ್ಪಿಸಿಕೊಬಹುದು. ಮುಖ್ಯಮಂತ್ರಿಯಾದರು ಮಾತನ್ನ ಅಳೆದು ತೂಗಿ ಮಾತನಾಡಬೇಕು.

ನ್ಯಾ.ಪ: ದೇವೇಗೌಡ್ರ ರೈತಪರ ಕಾಳಜಿ ಸುಳ್ಳೆ….
ಚ.ರಾ.ಸ್ವಾ: ಸುಳ್ಳು ಅಂತ ಹೇಳಲ್ಲ. ಅವರು ತಮ್ಮ ವಿದ್ವತ್ತು, ಅನುಭವ ಮತ್ತೆ ಹೋರಾಟದಲ್ಲಿ ನಮ್ಮ ಮಹಾನಾಯಕರು. ಅದರಲ್ಲಿ ಎರಡು ಮಾತಿಲ್ಲ. ಆದ್ರೆ ನೀರಾವರಿ ವಿಷಯದಲ್ಲಿ ರಾಜಕಾರಣ ಮಾಡಬಾರ್ದು. ಅವರು ತುಮಕೂರಲ್ಲಿ ಸ್ಪರ್ಧಿಸಿದಾಗ ಜನಗಳಿಂದ ಈ ತರಹ ಪ್ರಶ್ನೆಗಳನ್ನು ಎದುರಿಸಿದ್ರು. ತುಮಕೂರು ಜಿಲ್ಲೆ ನಮ್ಮ ನಾಗಮಂಗಲ ಇಲ್ಲೆಲ್ಲಾ, ನೀರಾವರಿ ಕೆಲಸಗಳು ಅವರು ಮುಖ್ಯಮಂತ್ರಿಯಾದಾಗ್ಲೆ ಪೂರ್ಣಗೊಳ್ಳಬೇಕಿತ್ತು ಅದಾಗಲಿಲ್ಲ. ನಾವು ರಾಜಕಾರಣನ ಏನಾದ್ರು ಮಾಡಿಕಂಡೋಗಣ, ಆದ್ರೆ ರೈತರ ಅಭಿವೃದ್ಧಿಗೆ ಸಂಬಂಧಿಸಿದಂಗೆ ಯಾರೂ ರಾಜಕಾರಣ ಮಾಡಬಾರ್ದು. ರಾಜಕಾರಣದ ಬುಡ ಭದ್ರ ಇರಬೇಕು ಅಂದ್ರೆ ರೈತರು ನೆಮ್ಮದಿಯಾಗಿರಬೇಕು. ಬರೀ ಮಾತುಗಳಿಂದ ರೈತರಿಗೆ ಏನೂ ಪ್ರಯೋಜನ ಇಲ್ಲ.

ನ್ಯಾ.ಪ: ಬಿಜೆಪಿಗಳು ರೈತರನ್ನ ದೂರ ಇಟ್ಟೆ ರಾಜಕಾರಣ ಮಾಡ್ತರಲ್ಲಾ…..
ಚ.ರಾ.ಸ್ವಾ: ಕಾಂಗ್ರೆಸ್ ಜೆಡಿಎಸ್‍ಗಿಂತ ಅವರ ರಾಜಕಾರಣ ತೀರ ಭಿನ್ನವಾದದ್ದು. ಅವರು ರೈತರನ್ನ ಹೆದರಿಸಿ ಗೋಲಿಬಾರ್ ಮಾಡಿ ರಾಜಕಾರಣ ಮಾಡಬಲ್ಲರು. ಯಾವ ಕೆಲಸವನ್ನು ಮಾಡದೆ ಜನಗಳನ್ನ ಮತೀಯರಾಗಿ ಪ್ರಚೋದಿಸಿ ಗೆದ್ದು ಬರಬಲ್ಲರು.
ನ್ಯಾ.ಪ: ನೀವು ಬಲಿಯಾದದ್ದು ಅದಕೇನ?
ಚ.ರಾ.ಸ್ವಾ.: ಇಲ್ಲ ನನ್ನದು ಬೇರೆ ತರ, ನಮ್ಮ ತಾಲೂಕಲಿ ಬಿಜೆಪಿ ಇಲ್ಲ. ಇಲ್ಲೇನು ಮಾಡಿದ್ರು ಅಂದ್ರೆ ಜನಾಂಗದ ಲೀಡ್ರು ದೇವೇಗೌಡ್ರು ಅವರನ್ನೇ ಬಿಟ್ಟು ಬಂದ. ಪಿತೃದ್ರೋಹಿ ಅನ್ನೋತರ ಪ್ರಚಾರ ಮಾಡಿದ್ರು. ಆದ್ರಿಂದ ತಾಲೂಕಿಗೆ ಬೇಕಾದಷ್ಟು ಕೆಲಸ ಮಾಡಿಸಿದ್ರು ಸೋತೆ. ಏನೇನೂ ಮಾಡದವರು ಗೆದ್ದು ಬಂದ್ರು.

ನ್ಯಾ.ಪ: ಚುನಾವಣೆಲಿ ಗೆಲ್ಲಬೇಕಾದ್ರೆ ಜನಗಳ ಕೆಲಸ ಕ್ಷೇತ್ರದ ಕೆಲಸ ಮಾಡಬೇಕು ಅನ್ನದು ಸುಳ್ಳಾಗಿದೆ. ಮುಂದೆ ನಿಮ್ಮಂತವರ ಕತೆ ಏನು….?
ಚ.ರಾ.ಸ್ವಾ: ಹಾಗಂತ ನಮ್ಮ ನಡವಳಿಕೆ ಬದಲಿಸಿಕೊಳಕ್ಕೆ ಬರಲ್ಲ. ಜನಗಳಿಗೆ ನಿಜವಾದ ಕಾರಣಗಳ ಹೇಳ್ತಾ ಹೋದ್ರಾಯ್ತು. ನಾವು ಕೂಡ ಮತೀಯವಾಗಿ ಮಾತಾಡ್ತ ಮಂದಿರ ಮಸೀದಿ ವಿಷಯ ತಗದು ಗೆಲ್ಲಕ್ಕೋಗಬಾರ್ದು. ಆ ತರ ಗೆದ್ದವರು ಒಳ್ಳೆ ಕೆಲಸಗಳ ಮಾಡಕ್ಕಾಗಲ್ಲ. ಈಗ ನೋಡಿ ಈ ಬಿಜೆಪಿ ಸರಕಾರ ರಚನೆಯಾಗಿದ್ದೆ ಒಂಥರದ ಮೋಸದಿಂದ. ಆದ್ರಿಂದ ಇವತ್ತಿಗೂ ಒಳ್ಳೆ ಕೆಲಸ ಅವರಿಂದ ಸಾಧ್ಯವಾಗ್ತಯಿಲ್ಲ. ಹಾಗೇನೆ ಬಹು ದೊಡ್ಡ ಪಕ್ಷದ ಬೆಂಬಲಯಿದ್ರು ಕುಮಾರಸ್ವಾಮಿ ಸರಕಾರ ಏನು ಮಾಡಕ್ಕಾಗಲಿಲ್ಲ, ಯಾಕಂದ್ರೇ ಅಂತಹ ಸರಕಾರದ ಒಳಗೇ ಕಾಯಿಲೆಗಳಿರ್ತವೆ. ಅವುನ್ನೆಲ್ಲಾ ಶಮನ ಮಾಡಿಕೊಂಡು ಉಪಾಯದಲ್ಲಿ ಸರಕಾರ ನಡೆಸಬೇಕು. ಸಪೊರ್ಟು ಕೊಟ್ಟವರನ್ನು ಚೆನ್ನಾಗಿ ನಡೆಸಿಕೋಬೇಕು. ಮನಸಿನಲ್ಲಿ ಅಸಹನೆ, ಪೂರ್ವಗ್ರಹಗಳಿದ್ರೆ ಅವು ಪ್ರಕಟವಾಗೇ ಆಗ್ತವೆ. ನಮ್ಮ ಹಿಂದಿನ ಮುಖ್ಯಮಂತ್ರಿಗಳು ಹೇಗಿದ್ರು ಹೇಗೆ ನಡಕೊಂಡ್ರು ಅನ್ನದನ್ನ ನೋಡಿ ಮುಂದುವರಿಬೇಕು.

ನ್ಯಾಪ: ಯಾರನ್ನ ಉದಾಹರಸ್ತಿರಾ?
ಚ.ರಾ.ಸ್ವಾ : ರಾಮಕೃಷ್ಣ ಹೆಗಡೆಯವರು ಮೊದಲು ಮುಖ್ಯಮಂತ್ರಿಗಳಾದಾಗ ಹದಿನೆಂಟು ಜನ ಬಿಜೆಪಿಗಳು, ಮತ್ತೆ ಹದಿನೆಂಟು ಜನ ಸ್ವತಂತ್ರ ಅಭ್ಯರ್ಥಿಗಳ ಸಪೋರ್ಟು ತಗೊಂಡು ಎಂಥ ಸರಕಾರ ಕೊಟ್ರು ಅಂದ್ರೇ, ಮುಂದೆ ನಡೆದ ಚುನಾವಣೇಲಿ ಸ್ವತಂತ್ರವಾಗಿ ಸರಕಾರ ರಚನೆ ಮಾಡೋವಷ್ಟು ಶಾಸಕರು ಗೆದ್ದು ಬಂದ್ರು. ಜನತಾಪಕ್ಷ ಬೆಳದದ್ದೇ ಅವರ ಕಾಲದಲ್ಲಿ. ಪಟ್ಟಣಗಳಿಗೆ ಸೀಮಿತವಾಗಿದ್ದ ಜನತಾಪಕ್ಷ ಅವರು ತಂದಂತ ಜಿಲ್ಲಾ ಮಂಡಲ ಪಂಚಾಯ್ತಿ ಕಾರಣಕ್ಕೆ ಹಳ್ಳಿಗೆ ಬಂತು. ನಾನು ಶಾಸಕ ಆಗಿದ್ದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷನಾಗಿ ನಮ್ಮ ತಾಲೂಕಿನಲ್ಲಿ ಕೆಲಸಗಳನ್ನು ಮಾಡಿದ್ರಿಂದ. ಆಗ ಜನಗಳು ಜನತಾದಳದಿಂದ ಬೇಡಿ ಸ್ವತಂತ್ರವಾಗೇ ನಿಂತು ಗೆಲ್ಲಿ ಅಂದಿದ್ರು. ಯಾಕೆ ಅಂದ್ರ ಜನತಾದಳ ದೇವೇಗೌಡರ ನೇತೃತ್ವದಲ್ಲಿ ಅಷ್ಟರಮಟ್ಟಿಗೆ ಸೋತಿತ್ತು. ಪಾರ್ಟಿ ಹೀನಾಯ ಸ್ಥಿತೀಲಿತ್ತು. ಎಸ್ಸೆಂ ಕೃಷ್ಣ ಮುಖ್ಯಮಂತ್ರಿಯಾಗಿದ್ರು ನಾನವರತ್ರ ಹೋಗಲಿಲ್ಲ. 20-20 ಸರಕಾರದ ನಂತರ ಎಡೂರಪ್ಪನವರು ಕರದ್ರು ಹೋಗಲಿಲ್ಲ.

ನ್ಯಾ.ಪ: ನೀವು ನಿಷ್ಟಾವಂತ ಜನತಾದಳದ ನಾಯಕರಾಗಿದ್ರು ದೇವೇಗೌಡ್ರು ದೂರಮಾಡಿದ್ದೇಕೆ?
ಚ.ರಾ.ಸ್ವ: ದೇವೇಗೌಡ್ರು ಹಿಂದೆ ಒಳ್ಳೆನಾಯಕರಾಗಿದ್ರು. ಯಾವತ್ತು ಅವರಿಗೆ ಪುತ್ರವ್ಯಾಮೋಹ ಅಮರಿಕೊಳ್ತೊ ಅವತ್ತಿನಿಂದ ಮುಂದೆ ಮಕ್ಕಳ ಭವಿಷ್ಯಕ್ಕೆ ಮಾರಕವಾಗೋ ಎಲ್ಲ ನಾಯಕರನ್ನ ಮುಗುಸ್ತ ಬಂದ್ರು. ಬಹುಶಃ ನಾನು ಕಡೆಯವನು. ಅಂದ್ರೆ ಆವರಿಗೆ ನಾನು ಕುಮಾರಣ್ಣನನ್ನು ಮೀರಿ ಮುಂದೆ ಬರ್ತಾಯಿದ್ದೀನಿ ಅನ್ನಸ್ತು. ನಮ್ಮನ್ನ ತಗದ್ರು. ಮುಂದೆ ಅವರು ತಗಿಯೋ ಅಂತವರು ಯಾರೂ ಇಲ್ಲ. ಯಲ್ರೂ ಅವ್ರರಾಗೆ ಹೋಗ್ತಾಯಿದಾರೆ. ಯಾಕೆ ಹೋಗ್ತರೆ ಅನ್ನದನ್ನ ನಾಯಕರು ಯೋಚನೆ ಮಾಡಬೇಕು. ನಮ್ಮ ನಡುವೆ ಪ್ರಬಲವಾದ ಜಾತಿಗಳಿವೆ. ಅವು ತಮ್ಮ ತಮ್ಮ ಜನಾಂಗದ ನಾಯಕನನ್ನು ಇಷ್ಟಪಡ್ತವೆ. ಮತ್ತೆ ಬೆಂಬಲಸ್ತವೆ. ಆ ಬೆಂಬಲವನ್ನು ಪಡಕೊಂಡು ದುರ್ಬಲ ಜಾತಿ ನಾಯಕರುಗಳನ್ನು ಪ್ರೋತ್ಸಾಹಿಸಬೇಕು. ಅವಕಾಶಗಳನ್ನ ಕೊಡಬೇಕು. ಅದು ಮೇಲ್ಜಾತಿ ನಾಯಕರ ಕರ್ತವ್ಯ ಕೂಡ. ಆದ್ರೆ ನಾವು ನೋಡ್ತಾಯಿರೋ ರಾಜಕಾರಣ ಏನಾಗಿದೆ ಅಂದ್ರೆ ಸ್ವಜಾತಿಯನ್ನು ಬಳಸಿಕೊಂಡು ಬೆಳೆದು ಸ್ವಜಾತಿಯ ಸಮರ್ಥ ನಾಯಕರನ್ನೇ ನಾಮಾವಶೇಷ ಮಾಡೊ ಪ್ರವೃತ್ತಿ ಬೆಳೀತಾ ಅದೆ. ಒಬ್ಬ ಸಮರ್ಥ ನಾಯಕರನ್ನ ನಿಷ್ಕ್ರಿಯ ಮಾಡದು ಆ ಸಮಾಜಕ್ಕೆ ಮಾಡೊ ಅನ್ಯಾಯ ಕೂಡ ಆಗತ್ತೆ. ಅಂತದ್ದೊಂದು ಮನಸ್ಸು ದಳದಲ್ಲಿ ಕೆಲಸ ಮಾಡಿದ್ರಿಂದ ಒಂದು ಕಾಲದಲ್ಲಿ ಹದಿನಾರು ಎಂಪಿ ಸೀಟು ಗೆದ್ದು ಕೊಟ್ಟಿದ್ದ ಜನತಾದಳ ಈಗ ಒಂದು ಕ್ಷೇತ್ರಕ್ಕೆ ಬಂದಿದೆ. ಕಾಂಗ್ರೆಸ್ ಕೂಡ ಅಂತದ್ದೇ ಸ್ಥಿತಿ ತಲುಪಿದ್ದು ಹೊಸ ಮತದಾರರು ಮತ್ತು ಯುವ ಜನಾಂಗವನ್ನು ಬಿಜೆಪಿ ಮತೀಯವಾಗಿ ಪರಿವರ್ತಿಸಿದ್ದಲ್ಲಿ ಕಾರಣವಾದರೆ ಜೆ.ಡಿ.ಎಸ್ ಜೊತೆಗಿನ ಹೊಂದಾಣಿಕೆ ಕೂಡ ಕಾರಣ. ಹೊಂದಾಣಿಕೆ ನಾವು ಮಾಡಿಕೊಳ್ಳಬಹುದು ಜನ ಒಪ್ಪಬೇಕಲ್ಲಾ.

ನ್ಯಾ.ಪ: ದಳದ ಸಿದ್ಧಾಂತಗಳೇನು…..?
ಚ.ರಾ.ಸ್ವಾ: ಸಿದ್ಧಾಂತಗಳೇ ಇಲ್ಲ ಅಲ್ಲಿ. ಅದ್ಕೆ ಬಿಜೆಪಿ ಆದ್ರು ಸೈ. ಕಾಂಗ್ರೆಸ್ಸಾದ್ರು ಸರಿ. ಬಿಜೆಪಿಲಿ ಮತೀಯ ಸಿದ್ಧಾಂತವಿದೆ. ಅದೀಗ ಮುಸ್ಲಿಮರನ್ನ ನೇರವಾಗಿ ಟಾರ್ಗೆಟ್ ಮಾಡ್ತಯಿದೆ. ಇನ್ನ ಕಾಂಗ್ರೆಸ್ಸು ಸೆಕ್ಯುಲರ್ ವಾದವನ್ನು ಎತ್ತಿಹಿಡಿಯುತ್ತೆ. ಈ ಕಾರಣಕ್ಕೆ ಅವೆರಡು ಸಿದ್ಧಾಂತಗಳನ್ನು ಪ್ರತಿಪಾದಿಸೊ ಪಾರ್ಟಿ. ಆದ್ರೆ ದಳಕ್ಕೆ ಅಂತ ಸಿದ್ಧಾಂತಗಳೇ ಇಲ್ಲ. ಬಿಜೆಪಿನೂ ಮೀರಿಸೋ ಪೂಜೆ ಪುನಸ್ಕಾರ ಯಜ್ಞಹೋಮಗಳೆಲ್ಲಾ ನಿರಂತರವಾಗಿ ನೆಡಿತವೆ. ರಾಜಕಾರಣಿಗಳು ಕೆಲಸಿಲ್ಲದಾಗ ಅವುಗಳನ್ನು ಮಾಡಿಕಂಡೋಗ್ಲಿ, ಆದ್ರೆ ಮುಖ್ಯಮಂತ್ರಿ ಸಮಯ ಅಮೂಲ್ಯವಾದದ್ದು. ಅದನ್ನ ಜನಗಳ ಸಮಸ್ಯೆ ಬಗೆಹರಸಕ್ಕೆ ಬಳಸಬೇಕು. ವ್ಯರ್ಥ ಮಾಡಬಾರ್ದು. ಕುಮಾರಣ್ಣಾರು ವೆಸ್ಟ್ ಎಂಡ್ ಹೋಟಲಲ್ಲೇ ಉಳುದ್ರು. ಯಾಕೆ ಅಂದ್ರೆ ಆ ಹೋಟೆಲ್ ರೂಮಲ್ಲಿದ್ದಾಗ ಮುಖ್ಯಮಂತ್ರಿಯಾದರಂತೆ. ಆದ್ರಿಂದ ಅದು ಅದೃಷ್ಟದ ರೂಮಂತೆ. ಸರಿ ಅಲ್ಲೇ ಇದ್ದಾಗ ಮುಖ್ಯಮಂತ್ರಿಗಿರಿ ಹೋಯ್ತಲ್ಲ ಗುರೂ ಇದಕೇನೇಳ್ತಿರೀ..

ನ್ಯಾ.ಪ: ಸುಮಲತಾರ ಗೆಲುವಿಗೆ ತಾವು ಶ್ರಮಿಸಿದ್ರಿ ಅಂತ ದೂರಿದೆ.
ಚ.ರಾಸ್ವಾ: ಶ್ರಮ ಏನಿಲ್ಲ. ಪಾರ್ಟಿ ಸಂದೇಶದಂತೆ ನಾವು ತಟಸ್ಥವಾಗಿದ್ದೊ. ಆ ಕಾರಣಕ್ಕೆ ನಮ್ಮ ಓಟುಗಳೆಲ್ಲಾ ಆಕಡೆ ಹರಿದು ಹೋದೊ. ಅದಕ್ಕೂ ಮೊದಲು ಮುಖ್ಯಮಂತ್ರಿಗಳು ಯಾರ ಸಹಾಯಾನೂ ನಮಗೆ ಬೇಕಿಲ್ಲ. ನಾನು ಬೆಗ್ ಮಾಡಲ್ಲ ಅಂದ್ರು. ಅದರ ಪರಿಣಾಮ ಅನುಭವಿಸಿದ್ರು.

ನ್ಯಾ.ಪ: ಈ ಚುನಾವಣೇಲಿ ಸುಮಲತ ಏನು ಮಾಡ್ತರಂತೆ
ಚ.ರಾ.ಸ್ವಾ.: ಅವರು ಪ್ರಬುದ್ಧ ರಾಜಕಾರಣಿ, ಸ್ವತಂತ್ರವಾಗಿ ಆಲೋಚನೆ ಮಾಡಿ ತೀರ್ಮಾನ ತಗಳೋ ಶಕ್ತಿಯಿದೆ. ಈ ಸಮಯದಲ್ಲೂ ಅವುರು ಒಳ್ಳೆ ಆಲೋಚನೆ ಮಾಡಬಹುದು.

ನ್ಯಾ.ಪ: ಕಾಂಗ್ರೆಸ್ ನಿಮಗೆ ಸೆಟ್ಟಾಗಿದೆಯ..
ಚ.ರಾ.ಸ್ವಾ: ಓಯೆಸ್, ಕಾಂಗ್ರೆಸ್ಸಲ್ಲಿ ಜಾತ್ಯತೀತ ಮನೋಭಾವ ಇರದ್ರಿಂದ ಯಾವುದೇ ಒತ್ತಡವಿಲ್ಲದ ರಾಜಕಾರಣ ಮಾಡಬಹುದು. ಬಿಜೆಪಿಲಿದ್ರೆ ಮತೀಯ ರಾಜಕಾರಣದ ಒತ್ತಡ ಇರತ್ತೆ. ಯಾರನ್ನೋ ದ್ವೇಷ ಮಾಡಬೇಕು ಅನ್ನೋ ಮಾನಸಿಕ ಒತ್ತಡ ಇರತ್ತೆ. ದಳದಲ್ಲಿ ಅಪ್ಪ ಮಕ್ಕಳ ಭೇಟಿ ಮಾಡಿ ವಿಧೇಯತೇನ್ನ ರಿನ್ಯೂ ಮಾಡಿಕೋಬೇಕಾದ ಹಿಂಸೆ ಇರತ್ತೆ. ಕಾಂಗ್ರೆಸ್‍ನಲ್ಲಿ ಹಾಗಲ್ಲ, ಇಲ್ಲಿ ನಿಮ್ಮ ವ್ಯಕ್ತಿತ್ವ ಕಾಪಾಡಿಕೋಬಹುದು.

ನ್ಯಾ.ಪ: ಥ್ಯಾಂಕ್ಸ್ ಸರ್..
ಚ.ರಾ.ಸ್ವಾ: ಆಯ್ತು ಹೋಗಿಬನ್ನಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...