ಜೆಡಿಎಸ್ ಬೇರುಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠಪಡಿಸಲು ಮುಂದಾಗಿದೆ. ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಅನ್ನು ದುರ್ಬಲಗೊಳಿಸುತ್ತಿರುವ ಮತ್ತು ಶಾಸಕರು ಪಕ್ಷ ತೊರೆಯುತ್ತಿರುವ ಹೊತ್ತಿನಲ್ಲಿ ತಳಮಟ್ಟದ ಸಂಘಟನೆಗೆ ಕಾರ್ಯಯೋಜನೆ ರೂಪಿಸಿ ರಂಗಕ್ಕೆ ಇಳಿದಿದೆ. ವಿಧಾನಸಭಾ ಚುನಾವಣೆ ವೇಳೆ ಅತಂತ್ರಸ್ಥಿತಿ ನಿರ್ಮಾಣಗೊಂಡು ಸರ್ಕಾರ ರಚನೆಗೆ ಬೆಂಬಲ ನೀಡುವ ಸಮಯದಲ್ಲಿ ಎರಡು ಬಾರಿ ತಾನೇ ನಿರ್ಣಾಯಕ ಪಾತ್ರ ವಹಿಸಿರುವುದನ್ನು ನಾವು ನೋಡಿದ್ದೇವೆ. ಅದೇ ಕಾರಣಕ್ಕೆ ಎಚ್.ಡಿ.ಕುಮಾರಸ್ವಾಮಿ ಪದೇಪದೇ ನಾವೇ ಕಿಂಗ್ ಮೇಕರ್ ಎಂದು ಹೇಳಿದ್ದಿದೆ ಮತ್ತು ಕಿಂಗ್ ಮೇಕರ್ ಆಗಿ ಎರಡು ಬಾರಿಯೂ ಹೊರಹೊಮ್ಮಿ ಅಧಿಕಾರ ನಡೆಸಿದರು.
ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಜೆಡಿಎಸ್ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ, ಸಿದ್ದರಾಮಯ್ಯ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ತನ್ನ ಒತ್ತಡಕ್ಕೆ ಮಣಿಯದಿದ್ದಾಗ ಬೆಂಬಲ ವಾಪಸ್ ಪಡೆಯಿತು. ರಾತ್ರಿ ಬೆಳಗಾಗುವುದರೊಳಗೆ ಬಿಜೆಪಿ ಜೊತೆ ಕೈಜೋಡಿಸಿದ ಜೆಡಿಎಸ್ ಮುಖ್ಯಮಂತ್ರಿ ಸ್ಥಾನವನ್ನು ತನ್ನದನ್ನಾಗಿಸಿಕೊಂಡಿತು. 20 ತಿಂಗಳ ನಂತರ ಅಧಿಕಾರ ಹಸ್ತಾಂತರದ ವಿವಾದ ಉಂಟಾಗಿ ಕುಮಾರಸ್ವಾಮಿ ರಾಜಿನಾಮೆ ನೀಡಬೇಕಾಗಿ ಬಂದಿದ್ದು ಇತಿಹಾಶ. ಇದಾಗಿ ಐದು ವರ್ಷಗಳು ಪೂರೈಸಿದ ಮೇಲೆ ಕಾಂಗ್ರೆಸ್ ಪಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ಈ ಎರಡು ಸಂದರ್ಭದಲ್ಲಿ ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದೆ ಎಂಬುದನ್ನು ಬಹಿರಂಗವಾಗಿ ಜೆಡಿಎಸ್ ನಾಯಕರು ಟೀಕಿಸಿದರೂ ಕೂಡ. ಇದೇ ವಿಷಯವನ್ನೇ ಜೆಡಿಎಸ್ ನಾಯಕರು ಪ್ರಮುಖ ವಿಷಯ ಮಾಡಿಕೊಂಡು ರಾಜ್ಯವನ್ನು ಸುತ್ತಿದರು.
ಈಗ ಗ್ರಾಮ ಪಂಚಾಯಿತಿ ಚುನಾವಣೆಗಳು ಎದುರಾಗಿವೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಇವೆ. ಇದಕ್ಕೆ ಸಜ್ಜುಗೊಳ್ಳಲು ಜೆಡಿಎಸ್ ಬೇರೊಂದು ತಂತ್ರವನ್ನು ಹೆಣೆದಂತೆ ಕಾಣುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಪ್ರಭಾವ ಇರುವ ಐವತ್ತು ಕ್ಷೇತ್ರಗಳಲ್ಲಿ ಮೂಲಕಾರ್ಯಕರ್ತರನ್ನು ಭೇಟಿ ಮಾಡಿ ತಳಮಟ್ಟದಲ್ಲಿ ಪಕ್ಷದ ಬೇರುಗಳನ್ನು ಗಟ್ಟಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಹಳೆ ಮೈಸೂರು ಭಾಗದ ಮಂಡ್ಯ, ತುಮಕೂರು, ಚಿಕ್ಕ ಬಳ್ಳಾಪುರ, ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ 50 ಕ್ಷೇತ್ರಗಳಿಗೆ ಕಾರ್ಯತಂತ್ರ ರೂಪಿಸುವ ತಂಡಗಳನ್ನು ಕಳಿಸಿಕೊಡಲಾಗಿದೆ. ಒಂದು ತಂಡದಲ್ಲಿ ಐವತ್ತು ಮಂದಿ ಕಾರ್ಯನಿರ್ವಹಿಸುತ್ತಿದ್ದು ಆ ತಂಡದ ಸದಸ್ಯರು ಪ್ರತಿ ಗ್ರಾಮ ಘಟಕವನ್ನೂ ಭೇಟಿ ಮಾಡಿ ಮಾಹಿತಿ ಸಂಗ್ರಹಿಸುತ್ತಿದೆ.
ಐವತ್ತು ತಂಡಗಳು ನಿರಂತರವಾಗಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಪೋಷಕರು, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರನ್ನು ಭೇಟಿ ಮಾಡಿ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ 50 ಸ್ಥಾನಗಳಲ್ಲಿ ವಿಜಯಪತಾಕೆ ಹಾರಿಸಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ತಂಡದ ಸದಸ್ಯರು ವಿಧಾನಸಭಾ ಕ್ಷೇತ್ರದಾದ್ಯಂತ ಸುತ್ತುತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿಗ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವಂತೆ ನೋಡಿಕೊಳ್ಳುವುದು ಮತ್ತು ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲಾ ಐವತ್ತು ಕ್ಷೇತ್ರಗಳನ್ನು ಗೆದ್ದುಕೊಳ್ಳುವುದು ಹೇಗೆ ಎಂಬ ಬಗ್ಗೆ ಈ ತಂಡಗಳು ಕಾರ್ಯತಂತ್ರ ರೂಪಿಸುತ್ತಿವೆ ಎಂದು ಜೆಡಿಎಸ್ ಮುಖಂಡರು ನಾನುಗೌರಿ.ಕಾಮ್ ಗೆ ತಿಳಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಮಾಜಿ ಪ್ರಧಾನಿ ದೇವೇಗೌಡರ ಧ್ವನಿ ಬದಲಾಗಿದೆ. ಪಕ್ಷವನ್ನು ಹೇಗೆ ಕಟ್ಟಬೇಕೆಂಬುದು ನನಗೆ ಗೊತ್ತಿದೆ. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತೇನೆ. ನಮ್ಮ ಪಕ್ಷವನ್ನು ಯಾರಿಂದಲೂ ಮುಗಿಸಲು ಆಗುವುದಿಲ್ಲ. ಮುಂದೆಯೂ ಜೆಡಿಎಸ್ ಅಸ್ತಿತ್ವದಲ್ಲಿರುತ್ತದೆ ಎಂದು ಗುಣುಗುತ್ತಿರುವುದನ್ನು ನೋಡುತ್ತಿದ್ದೇವೆ. ಅದೇ ಉದ್ದೇಶದಿಂದ ಪಕ್ಷದ ಸಂಘಟನೆಯೂ ಆಗಬೇಕು. ಪ್ರತಿಯೊಂದು ಚುನಾವಣೆ ಎದುರಿಸಬೇಕು ಎಂಬ ಹಿನ್ನೆಲೆಯಲ್ಲಿ ಈ ತಂಡಗಳನ್ನು ಕ್ಷೇತ್ರದಲ್ಲಿ ತಿರುಗಾಡಲು ಜೆಡಿಎಸ್ ಬಿಟ್ಟಿದೆ. ಆದರೆ ಪಕ್ಷ ಈ ಕುರಿತು ಅಧಿಕೃತವಾಗಿ ಈವರೆಗು ಮಾಧ್ಯಮಗಳಿಗೆ ಮಾಹಿತಿ ನೀಡಿಲ್ಲ. ಎಲ್ಲಾ 50 ಕ್ಷೇತ್ರಗಳಲ್ಲೂ ಒಂದು ವಾರದಿಂದ ಈ ತಂಡಗಳು ಮುಂದಿನ ಕಾರ್ಯತಂತ್ರ ರೂಪಿಸುತ್ತಿದ್ದು ಪಕ್ಷದ ವರಿಷ್ಟರಿಗೆ ಮಾಹಿತಿ ನೀಡುತ್ತಿವೆ ಎಂದು ತಿಳಿದುಬಂದಿದೆ.
2013ರ ವಿಧಾನಸಭಾ ಚುನಾಯಲ್ಲಿ 40 ಸ್ಥಾನ ಗಳಿಸಿದ್ದ ಜೆಡಿಎಸ್ 2018ರಲ್ಲಿ 37 ಸ್ಥಾನ ಪಡೆದು ಮೂರು ಸ್ಥಾನಗಳನ್ನು ಕಳೆದುಕೊಂಡಿತ್ತು. ಬಿಜೆಪಿ ಆಪರೇಷನ್ ಕಮಲ ಮಾಡಿದ್ದು ನಾಲ್ವರು ಶಾಸಕರು ರಾಜಿನಾಮೆ ನೀಡುವಂತಹ ಪರಿಸ್ಥಿತಿ ಬಂತು. ವಿಧಾನ ಪರಿಷತ್ ಸದಸ್ಯ, ರಮೇಶ್ ಬಾಬು ರಾಜಿನಾಮೆ ನೀಡಿದ್ದಾರೆ. ಅವರು ಯಾವ ಪಕ್ಷ ಸೇರುತ್ತಾರೋ ಇನ್ನು ಸ್ಪಷ್ಟವಾಗಿಲ್ಲ. ಹೀಗೆ ಒಬ್ಬೊಬ್ಬರೇ ಪಕ್ಷ ತೊರೆಯುತ್ತಿರುವ ಹಿನ್ನೆಲೆ ಯಲ್ಲಿ ಎಚ್ಚೆತ್ತುಕೊಂಡಿರುವ ಜೆಡಿಎಸ್ ತನ್ನ ಶಾಸಕರನ್ನು ಉಳಿಸಿಕೊಳ್ಳಲು ಮತ್ತು ಮುಂದಿನ ದಿನಗಳಲ್ಲಿ ಪಕ್ಷ ಚೇತರಿಕೆಗೆ ಮೊದಲೇ ಕಾರ್ಯಕ್ಷೇತ್ರಕ್ಕೆ ಇಳಿದಿದ್ದಾರೆ. ಈ ಕಾರ್ಯತಂತ್ರ ವರ್ಕೌಟ್ ಆದರೆ ಮುಂದಿನ ವಿಭಾನಸಭಾ ಚುನಾವಣೆಯ ವೇಳೆಗೆ ಪಕ್ಷ ಬಲಿಷ್ಠಗೊಳ್ಳಲಿದೆ. ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಜೆಡಿಎಸ್ ಪಕ್ಷವನ್ನು ಎಲ್ಲರೂ ಕಡೆಗಣಿಸುತ್ತಿರುವುದರಿಂದ ಈ ವಿಷಯವನ್ನು ಪಕ್ಷದ ಮುಖಂಡರು ಪ್ರತಿಷ್ಟೆ ಯನ್ನಾಗಿ ತೆಗೆದುಕೊಂಡಂತೆ ಕಂಡುಬರುತ್ತಿದೆ.


