ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥ ಶಿಬು ಸೊರೆನ್ ಅವರ ಸೊಸೆ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಅತ್ತಿಗೆ, ಪಕ್ಷದ ಶಾಸಕಿ ಸೀತಾ ಸೊರೆನ್ ತಮ್ಮದೇ ಸರ್ಕಾರದ ನೀತಿಗಳ ವಿರುದ್ಧ ಬುಧವಾರ ವಿಧಾನಸಭೆಯ ದ್ವಾರದಲ್ಲಿ ಧರಣಿ ಕುಳಿತಿದ್ದು, ಆಡಳಿತ ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡಿದೆ.
ರಾಜ್ಯ ಸರ್ಕಾರದಿಂದ ತನಗೆ ತೃಪ್ತಿಕರ ಉತ್ತರ ಬಂದಿಲ್ಲ ಎಂದು ಜಾಮಾ ಕ್ಷೇತ್ರದ ಶಾಸಕಿಯೂ ಆಗಿರುವ ಸೀತಾ ಹೇಳಿದ್ದಾರೆ.
ಇದನ್ನೂ ಓದಿ:ಗುಂಪು ಹಿಂಸಾಚಾರ ವಿರೋಧಿ ಮಸೂದೆ ಅಂಗೀಕರಿಸಿದ ಜಾರ್ಖಂಡ್
“ಜಲ, ಅರಣ್ಯ, ಭೂಮಿ ರಕ್ಷಣೆ ಕೋರಿ ಸದನಕ್ಕೆ ಬಂದಿದ್ದೇನೆ. ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್‌ನ ಆಮ್ರಪಾಲಿ ಯೋಜನೆಯಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ಕಲ್ಲಿದ್ದಲು ಸಾಗಣೆ ಮಾಡಲಾಗುತ್ತಿದೆ. ಆದರೆ ಅದನ್ನು ತಡೆಯಲು ಸರ್ಕಾರ ಏನೂ ಮಾಡುತ್ತಿಲ್ಲ” ಎಂದು ಸೀತಾ ಸೊರೆನ್ ಹೇಳಿದ್ದಾರೆ.
ರಾಜ್ಯ ಸರಕಾರ ತಪ್ಪು ಉತ್ತರ ನೀಡುತ್ತಿದೆ ಎಂದು ಆರೋಪಿಸಿರುವ ಸೀತಾ ಅವರು ಸಿಸಿಎಲ್ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆಡಳಿತ ಪಕ್ಷದ ಮತ್ತೊಬ್ಬ ಶಾಸಕ ಲೋಬಿನ್ ಹೆಂಬ್ರಾಮ್, ಜಾರ್ಖಂಡ್ ಸರ್ಕಾರವು ಮದ್ಯ ಮಾರಾಟ ಮಾಡಲು ಯೋಜಿಸುತ್ತಿರುವುದು ನಿಜವೇ ಎಂದು ಪ್ರಶ್ನಿಸಿದ್ದಾರೆ.
“ಶಿಬು ಸೋರೆನ್ ಮದ್ಯ ನಿಷೇಧದ ಬಗ್ಗೆ ಮಾತನಾಡುತ್ತಾರೆ ಆದರೆ ಹೇಮಂತ್ ಸೋರೆನ್ ಇದಕ್ಕೆ ವಿರುದ್ಧವಾಗಿ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಯಾವುದೂ ಇಲ್ಲ” ಎಂದು ಶಾಸಕ ಲೋಬಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಜಾರ್ಖಂಡ್: ಅಪ್ರಾಪ್ತೆ ಮೇಲೆ 7 ಬಾಲಕರಿಂದ ಸಾಮೂಹಿಕ ಅತ್ಯಾಚಾರ


