ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಕಳೆದ ಶನಿವಾರ ನಡೆದಿದೆ ಎನ್ನಲಾದ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಚಕ್ರಧರಪುರದ ಉಪವಿಭಾಗೀಯ ಆಸ್ಪತ್ರೆಯ ಅಧಿಕಾರಿಗಳು 35 ವರ್ಷದ ದಿನಗೂಲಿ ಕೆಲಸಗಾರನೊಬ್ಬನಿಗೆ ಆಂಬ್ಯುಲೆನ್ಸ್ ನಿರಾಕರಿಸಿದ್ದಾರೆ. ಕಾರ್ಡ್‌ಬೋರ್ಡ್‌ನಲ್ಲೇ ಮಗುವಿನ ಶವ ತೆಗೆದುಕೊಂಡು ಹೋಗುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರೆ. ಸದ್ಯ. ಆರೋಗ್ಯ ಇಲಾಖೆಯು ಘಟನೆ ಕುರಿತು ತನಿಖೆಗೆ ಆದೇಶಿಸಿದೆ.
ಕಾರ್ಡ್‌ಬೋರ್ಡ್ ಪೆಟ್ಟಿಗೆಯಲ್ಲಿ ಶವವನ್ನು ಹೊತ್ತೊಯ್ಯುತ್ತಿರುವ ವ್ಯಕ್ತಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ, ಆರೋಗ್ಯ ಇಲಾಖೆ ತನಿಖಗೆ ಆದೇಶಿಸಿದೆ.
ವರದಿಗಳ ಪ್ರಕಾರ, ಬಂಗಾರಸಾಯಿ ಗ್ರಾಮದ ರಾಮಕೃಷ್ಣ ಹೆಂಬ್ರಾಮ್ ತನ್ನ ಗರ್ಭಿಣಿ ಪತ್ನಿ 28 ವರ್ಷದ ರೀಟಾ ತಿರಿಯಾ ಅವರನ್ನು ಮಾರ್ಚ್ 5 ರಂದು ಆಸ್ಪತ್ರೆಗೆ ದಾಖಲಿಸಿದರು. ಶನಿವಾರ ತಪಾಸಣೆಯ ಸಮಯದಲ್ಲಿ, ಸಿಬ್ಬಂದಿ ಮಗುವಿನ ಹೃದಯ ಬಡಿತವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ರೀಟಾ ಅವರನ್ನು ಅಲ್ಟ್ರಾಸೌಂಡ್ ಮಾಡಿಸಿಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ. ಪರೀಕ್ಷೆ ಪೂರ್ಣಗೊಳ್ಳುವ ಮೊದಲೇ ಆಕೆ ಹೆರಿಗೆ ನೋವು ಅನುಭವಿಸಲು ಪ್ರಾರಂಭಿಸಿದ್ದು, ಸತ್ತ ಮಗುವನ್ನು ಹೆತ್ತಿದ್ದಾರೆ.
ಮಗುವಿನ ದೇಹವನ್ನು ಸುಮಾರು 12 ಕಿಮೀ ದೂರದಲ್ಲಿರುವ ತನ್ನ ಮನೆಗೆ ಸಾಗಿಸಲು ಆಂಬ್ಯುಲೆನ್ಸ್ ನೀಡುವಂತೆ ಮೃತ ಮಗುವಿನ ತಂದೆ ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಅವರ ವಿನಂತಿಯನ್ನು ಪರಿಗಣಿಸಿಲ್ಲ. ಶವವನ್ನು ತಕ್ಷಣ ಹೊರಗೆ ತೆಗೆದುಕೊಂಡು ಹೋಗುವಂತೆ ಒತ್ತಾಯಿಸಿದ ವಾರ್ಡ್ ಬಾಯ್‌ಗಳು, ಆಸ್ಪತ್ರೆಯ ಆವರಣದಲ್ಲಿ ಎಸೆದಿದ್ದ ರಟ್ಟಿನ ಪೆಟ್ಟಿಗೆಯನ್ನು ತಂದೆಗೆ ನೀಡಿದ್ದಾರೆ. ಹೆಂಬ್ರಾಮ್ ಅವರು ಶವವನ್ನು ಪೆಟ್ಟಿಗೆಯಲ್ಲಿ ಇರಿಸಿ, ದಿನಸಿ ಚೀಲದಲ್ಲಿ ಪ್ಯಾಕ್ ಮಾಡಿ ರಿಕ್ಷಾ ಮೂಲಕ ಮನೆ ತಲುಪಿದ್ದಾರೆ.
“ಮಹಿಳೆಯನ್ನು ಆಸ್ಪತ್ರೆಯಲ್ಲಿ ಇರಿಸಲಾಗಿತ್ತು, ಮಗುವಿನ ಅಂತ್ಯಕ್ರಿಯೆಯನ್ನು ಪೂರ್ಣಗೊಳಿಸಲು ಕುಟುಂಬಕ್ಕೆ ಸೂಚಿಸಿದ್ದೆವು” ಎಂದು ಆಸ್ಪತ್ರೆಯ ಉಸ್ತುವಾರಿ ಡಾ. ಅಂಶುಮಾನ್ ಶರ್ಮಾ ಹೇಳಿದರು.
“ರೋಗಿಯ ಕುಟುಂಬವು ಆಂಬ್ಯುಲೆನ್ಸ್‌ಗಾಗಿ ಯಾವುದೇ ವಿನಂತಿ ಮಾಡಿಲ್ಲ. ಒಂದು ವೇಳೆ ಕೇಳಿಕೊಂಡಿದ್ದರೆ ನಾವು ಆಸ್ಪತ್ರೆಯಲ್ಲಿ ಲಭ್ಯವಿರುವ ಮಮತಾ ವಾಹನ (ಆಂಬ್ಯುಲೆನ್ಸ್) ವ್ಯವಸ್ಥೆ ಮಾಡುತ್ತಿದ್ದೆವು” ಎಂದು ಹೇಳಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಅಜಯ್ ಕುಮಾರ್ ಸಿಂಗ್, ಆರೋಪಗಳ ತನಿಖೆಗಾಗಿ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದರು. “ಆರೋಪಗಳು ನಿಜವೆಂದು ಕಂಡುಬಂದರೆ, ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.


