ಮಂಗಳೂರಿನ ಉಳ್ಳಾಲವು ’ಪಾಕಿಸ್ತಾನ’ ಆಗಿದೆ ಎಂದು ವಿವಾದ ಸೃಷ್ಟಿಸಿದ್ದ RSS ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯನ್ನು ವಿರೋಧಿಸಿ ಉಳ್ಳಾಲವನ್ನು ಪ್ರತಿನಿಧಿಸುವ ಶಾಸಕ ಯು.ಟಿ. ಖಾದರ್ ತಿರುಗೇಟು ನೀಡಿದ್ದು, “ಕಲ್ಲಡ್ಕ ಪ್ರಭಾಕರ ಭಟ್ಟರ ಪಾಕಿಸ್ತಾನ ಪ್ರೇಮವನ್ನು ನೋಡಿದರೆ ಮುಹಮ್ಮದ್ ಅಲಿ ಜಿನ್ನಾ ಅವರ ಗುರು ಇದ್ದಂತಿದೆ” ಎಂದು ಹೇಳಿದ್ದಾರೆ.
“ಅವರ ಪಾಕಿಸ್ತಾನ ಪ್ರೇಮ ಹೊಸತೇನು ಅಲ್ಲ. ಅವರು ಮಾತು ಮಾತಿಗೆ ಪಾಕಿಸ್ಥಾನದ ಜಪ ಮಾಡುವುದನ್ನು ನೋಡಿದರೆ ಮಹಮದ್ ಅಲಿ ಜಿನ್ಹಾ ಅವರ ಗುರು ಇದ್ದಂತಿದೆ. ಅವರು ಭಾರತಕ್ಕಿಂತ ಪಾಕಿಸ್ಥಾನದ ಇತಿಹಾಸ ಹೆಚ್ಚು ಓದಿದಂತಿದೆ” ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಸಂಘಪರಿವಾರಕ್ಕೆ ಬೇಡವಾದರೇ ಕಲ್ಲಡ್ಕ ಪ್ರಭಾಕರ ಭಟ್ಟ?!
“ಸಮಾಜದಲ್ಲಿ ವಿಷಕಕ್ಕುವ ಕೆಲ ಸರ್ಪಗಳಿಗೆ ಪಾಕಿಸ್ಥಾನವೆ ಬಂಡವಾಳ. ನನಗೆ ಉಳ್ಳಾಲದ ಕಣ ಕಣದಲ್ಲೂ ಭಾರತದ ಬಹುಸಂಸ್ಕೃತಿ ಕಾಣುತ್ತದೆ. ಪೋರ್ಚುಗೀಸರನ್ನು ಒದ್ದೋಡಿಸಿದ ಅಬ್ಬಕ್ಕನ ಸೈನ್ಯದಲ್ಲಿ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಲ್ಲರು ಒಟ್ಟಾಗಿಯೆ ಇದ್ದರು. ಅಂದಿನ ಧಾರ್ಮಿಕ ಕೇಂದ್ರಗಳು ಇಂದೂ ಇದೆ. ಅಂದಿನ ಸಂಪ್ರದಾಯಗಳು ಸರ್ವಧರ್ಮಗಳಿಂದ ಇಂದೂ ಕೂಡ ಗೌರವಿಸಲ್ಪಡುತ್ತಿದೆ. ಉಳ್ಳಾಲದ ಸೌಹಾರ್ದ ಸಂಸ್ಕೃತಿ ಬಲಪಡಿಸುವ ಮಾತುಗಳೆ ಸರ್ವರಿಂದ ಬರಲಿ ಎಂಬುದು ನನ್ನ ಅಪೇಕ್ಷೆ” ಎಂದು ಖಾದರ್ ತಿಳಿದ್ದಾರೆ.
ಮಂಗಳೂರಿನ ಕಿನ್ಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಭಾಕರ್ ಭಟ್, “ಉಳ್ಳಾಲ ಪೇಟೆಗೆ ಹೋದರೆ ಅದು ಪಾಕಿಸ್ತಾನವೇ ಅಲ್ವಾ. ಪಾಕಿಸ್ತಾನ ಯಾಕೆ ಆಯಿತು? ’ನಮ್ಮವರ’ ಸಂಖ್ಯೆ ಕಡಿಮೆ ಇತ್ತು, ’ಅವರ’ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಪಾಕಿಸ್ತಾನ, ಬಾಂಗ್ಲಾದೇಶ ನಿರ್ಮಾಣವಾದವು. ಅದೇ ರೀತಿ ಅಲ್ಲಲ್ಲಿ ಪಾಕಿಸ್ತಾನಗಳು ಜನ್ಮ ತಾಳುತ್ತಿವೆ” ಎಂದು ಧ್ವೇಷ ಬಿತ್ತುವ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಭಾರತದಲ್ಲಿ ಗೋಹತ್ಯೆ ಏಕೆ? ಕಲ್ಲಡ್ಕ ಪ್ರಭಾಕರ್ ಭಟ್ಟರು ಕೇಳಿದ್ದು ಯಾರಿಗೆ?
“ಮನೆಯಲ್ಲಿ ಒಂದೇ ಮಗುವಿದ್ದಾಗ ಆ ಮಗುವಿಗೆ ಅಣ್ಣ, ತಮ್ಮ, ಅಕ್ಕ, ತಂಗಿ ಯಾರೂ ಇರಲ್ಲ. ಆಗ ಆ ಮಗು ಸ್ವಾರ್ಥಿಯಾಗುತ್ತದೆ. ಮನೆಯಲ್ಲಿ ಮಕ್ಕಳು ಹೆಚ್ಚಿದಷ್ಟು ಆನಂದ, ಖುಷಿ ಹೆಚ್ಚಾಗಿರುತ್ತದೆ. ಇದೀಗ ಹಿಂದೂ ಸಮಾಜದಲ್ಲಿ ಸಂಖ್ಯೆ ಕಡಿಮೆ ಇದೆ. ಕಿನ್ಯದಲ್ಲಿ ಕೇಳಿ ಸುತ್ತಲೂ ಯಾರಿದ್ದಾರೆ ಅಂತಾ? ಅಲ್ಲದೇ ಉಳ್ಳಾಲದ ಬಗ್ಗೆ ನಾನೇನು ಹೇಳಬೇಕಾಗಿಲ್ಲ. ನಮ್ಮ ಸಂಖ್ಯೆ ಕಡಿಮೆಯಾದರೆ, ಆಗ ನಮ್ಮ ದೇವಸ್ಥಾನ, ದೈವಸ್ಥಾನಗಳನ್ನು ಉಳಿಸುವವರು ಯಾರು? ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸುವವರು ಯಾರು” ಎಂದು ಸೇರಿದ್ದ ಜನರನ್ನು ಉದ್ದೇಶಿಸಿ ಪ್ರಶ್ನಿಸಿದ್ದರು.
ಇದನ್ನೂ ಓದಿ: ಕಲ್ಲಡ್ಕ ಶಾಲೆಯ ಬಾಬ್ರೀ ಡ್ರಾಮಾ! ದ್ವೇಷ ಬಿತ್ತನೆಗೊಂಡ ಮನಸ್ಸು ದ್ವೇಷವನ್ನಷ್ಟೇ ಕೊಡಬಲ್ಲದು
ಸಾಮಾಜಿಕ ಜಾಲತಾಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಟ್ರೋಲ್!
ಪ್ರಭಾಕರ ಭಟ್ಟರ ವಿವಾದಾತ್ಮಕ ಹೇಳಿಕೆಗೆ ಕರಾವಳಿಗರು ಅಸಮಧಾನ ವ್ಯಕ್ತಪಡಿಸಿದ್ದು, ಕೆಲವರು ಗಂಭೀರವಾಗಿ ಪ್ರತಿಕ್ರಯಿಸಿದ್ದರೆ, ಇನ್ನು ಕೆಲವರು ಹಾಸ್ಯದಿಂದ ಪ್ರತಿಕ್ರಿಯಿಸಿ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಉಡುಪಿಯ ಬಿಲ್ಲವ-ಮುಸ್ಲಿಂ ಸ್ನೇಹ ಸಮಾವೇಶಕ್ಕೆ ಸಂಘಪರಿವಾರ ಹೆದರಿದ್ದೇಕೆ?


