ದೇಶಾದ್ಯಂತ ಪಕ್ಷಾಂತರಗಳ ಪರ್ವ ಆರಂಭಗೊಂಡಿದೆ. ಉತ್ತರ ಪ್ರದೇಶದಲ್ಲಿ ಜಿತಿನ್ ಪ್ರಸಾದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೆ, ಬಂಗಾಳದಲ್ಲಿ ಮುಕುಲ್ ರಾಯ್ ಮತ್ತು ಅವರ ಪುತ್ರ ಬಿಜೆಪಿ ತೊರೆದು ಟಿಎಂಸಿಗೆ ಮರಳಿದ್ದಾರೆ. ಈಗ ಬಿಹಾರದಲ್ಲಿ ಎನ್‌ಡಿಎ ಭಾಗವಾಗಿರುವ ಹಿಂದೂಸ್ತಾನ್ ಅವಾಮ್ ಮೋರ್ಚಾದ ಹಿರಿಯ ನಾಯಕ ಜಿತನ್ ರಾಮ್ ಮಾಂಜಿಯವರು ಆರ್‌ಜೆಡಿಯ ತೇಜ್ ಪ್ರತಾಪ್ ಯಾದವ್‌ರವರನ್ನು ಭೇಟಿಯಾಗಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಕಳೆದ ವರ್ಷ ಬಿಹಾರ ವಿಧಾನಸಭಾ ಚುನಾವಣೆಗೆ ಎರಡು ತಿಂಗಳು ಇರುವಂತೆ ಜಿತನ್ ಮಾಂಜಿ ಆರ್‌ಜೆಡಿ, ಕಾಂಗ್ರೆಸ್ ಜೊತೆಗಿನ ಮಹಾಘಟಬಂಧನ್ ತ್ಯಜಿಸಿ ಎನ್‌ಡಿಎ ಒಕ್ಕೂಟ ಸೇರಿದ್ದರು. ಇದು ಚುನಾವಣಾ ಫಲಿತಾಂಶದಲ್ಲಿ ಪ್ರಭಾವ ಬೀರಿದೆ ಎನ್ನಲಾಗುತ್ತಿತ್ತು. ಸದ್ಯ ಸರ್ಕಾರದ ಪಾಲುದಾರರಾಗಿರುವ ಅವರು ಬಿಜೆಪಿಯೊಂದಿಗೆ ಮನಸ್ತಾಪ ಹೊಂದಿದ್ದಾರೆ ಎನ್ನಲಾಗಿದೆ.
ಬಿಹಾರದ ಬಂಕಾ ಜಿಲ್ಲೆಯ ಮದರಸಾವೊಂದರಲ್ಲಿ ಬಾಂಬ್ ಸ್ಪೋಟದ ನಂತರ ಅವರು ತಮ್ಮ ಬಿಜೆಪಿ ಜೊತೆಗಿನ ಮನಸ್ತಾಪ ಹೊರಹಾಕಿದ್ದಾರೆ. ಬಿಜೆಪಿ ಮುಖಂಡರು ಮದರಸಾಗಳನ್ನು ರಾಷ್ಟ್ರವಿರೋಧಿ ಚಟುವಟಿಕೆಗಳ ತಾಣ ಎಂದು ಕರೆದಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಂಜಿ ರಾಜಕೀಯ ಲಾಭಕ್ಕಾಗಿ ಸಮುದಾಯವೊಂದನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
“ಬಡ ದಲಿತರು ಮುಂದೆ ಬಂದರೆ ಅವರನ್ನು ನಕ್ಸಲರು ಎನ್ನುತ್ತೀರಿ, ಬಡ ಮುಸ್ಲಿಮರು ಮದರಸಾಗಳಲ್ಲಿ ಅಧ್ಯಯನ ಮಾಡಿದರೆ ಅವರನ್ನು ಭಯೋತ್ಪಾದಕರು ಎನ್ನುತ್ತೀರಿ.
ಸಹೋದರ, ಅಂತಹ ಮನಸ್ಥಿತಿಯಿಂದ ಹೊರಬನ್ನಿ, ಇದು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಒಳ್ಳೆಯದಲ್ಲ. ಬಂಕಾ ಬಾಂಬ್ ಸ್ಫೋಟದ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ನಾವು ಒತ್ತಾಯಿಸುತ್ತೇವೆ” ಎಂದು ಮಾಂಜಿಯವರು ಜೂನ್ 10 ರಂದು ಟ್ವೀಟ್ ಮಾಡಿದ್ದರು.
गरीब दलित जब आगे बढ़े तो नक्सली,
गरीब मुसलमान जब मदरसे में पढ़े तो आतंकी,
भाई साहब ऐसी मानसिकता से बाहर निकलिए,यह राष्ट्र की एकता और अखंडता के लिए ठीक नहीं।#हम बाँका बम विस्फोट की घटना की उच्चस्तरीय जाँच की माँग करतें हैं।— Jitan Ram Manjhi (@jitanrmanjhi) June 10, 2021
ಇದೇ ಸಮಯದಲ್ಲಿ ಆರ್‌ಜೆಡಿ ಮುಖಂಡ, ಲಾಲೂ ಪ್ರಸಾದ್ ಯಾದವ್‌ರವರ ಮಗ ತೇಜ್ ಪ್ರತಾಪ್ ಯಾದವ್ ಮಾಂಜಿಯವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ. ನಂತರ “ಮಾಂಜಿಯವರು ಮರಳಿ ಮಹಾಘಟಬಂಧನ್‌ಗೆ ಬರುವುದಾದರೆ ಅವರಿಗೆ ಮುಕ್ತ ಸ್ವಾಗತವಿದೆ” ಎಂದು ಹೇಳಿಕೆ ನೀಡಿದ್ದಾರೆ.
ಇದರಿಂದ ಬಿಹಾರ ರಾಜಕೀಯದಲ್ಲಿ ಸಂಚಲನ ಉಂಟುಮಾಡುತ್ತಿದ್ದಂತೆ, ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಬಿಜೆಪಿಯ ಎಲ್ಲಾ ಸಚಿವರು, ಶಾಸಕರಿಗೆ ಯಾವುದೇ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮಾಂಜಿ ಎನ್‌ಡಿಎ ತೊರೆಯುತ್ತಾರೆ ಎಂಬುದನ್ನು ಅಲ್ಲಗೆಳೆದಿದ್ದಾರೆ.
ಮಾಜಿ ಸಿಎಂ ಜಿತನ್ ರಾಮ್ ಮಾಂಜಿಯವರು ಎನ್‌ಡಿಎಯ ಹಿರಿಯ ನಾಯಕರು. ಅವರು ರಾಜಕೀಯ ಮುಖಂಡರ ಮನೆಗೆ ಸೌಜನ್ಯದ ಭೇಟಿ ನೀಡಿದ ಕೂಡಲೇ ನಾವು ಯಾವುದೇ ರಾಜಕೀಯ ತೀರ್ಮಾನಗಳಿಗೆ ಬರಬಾರದು. ಅವರು ಬಿಹಾರ ದಲಿತರ ನಾಯಕ. ಅವರು ನಮ್ಮೊಂದಿಗಿರುತ್ತಾರೆ ಮತ್ತು ಈ ಸರ್ಕಾರ ಐದು ವರ್ಷ ಪೂರೈಸುತ್ತದೆ ಎಂದು ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.
ಬಂಕಾ ಬಾಂಬ್ ಬ್ಲಾಸ್ಟ್ ಬಗ್ಗೆ ಮಾತನಾಡಿರುವ ಅವರು, “ಎನ್‌ಡಿಎ ಮುಖಂಡರು ತಮ್ಮ ಆಂತರೀಕ ವಲಯಗಳಲ್ಲಿ ಮಾತನಾಡಬೇಕೆ ಹೊರತು ಸಾರ್ವಜನಿಕವಾಗಿ ಅಸೂಕ್ಷ್ಮವಾಗಿ ಮಾತನಾಡಬಾರದು. ಎನ್‌ಡಿಎ ಪ್ರಜಾಸತ್ತಾತ್ಮಕ ಒಕ್ಕೂಟವಾಗಿದ್ದು ಇಲ್ಲಿ ಪಕ್ಷಗಳಿಗೆ ಹಲವು ವಿಷಯಗಳಲ್ಲಿ ತಮ್ಮದೇಯಾದ ಪ್ರತ್ಯೇಕ ಅಭಿಪ್ರಾಯಗಳಿರಬಹುದು” ಎಂದಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಏಳು ವರ್ಷ; ರಾಜ್ಯಗಳ ಮೇಲೆ ಸವಾರಿ ದೇಶದ ಸಮಗ್ರತೆಯ ಜತೆ ಚೆಲ್ಲಾಟ: ಎ ನಾರಾಯಣ


