Homeಕರ್ನಾಟಕಎಚ್.ಎಸ್. ದೊರೆಸ್ವಾಮಿಯವರ ’ನೆನಪಿನ ಸುರುಳಿ ತೆರೆದಾಗ’ ಕಂಡ ಕುವೆಂಪು

ಎಚ್.ಎಸ್. ದೊರೆಸ್ವಾಮಿಯವರ ’ನೆನಪಿನ ಸುರುಳಿ ತೆರೆದಾಗ’ ಕಂಡ ಕುವೆಂಪು

- Advertisement -
- Advertisement -

1918ರಲ್ಲಿ ಹುಟ್ಟಿದ ದೊರೆಸ್ವಾಮಿಯವರು ಮೊನ್ನೆ ಬುದ್ಧಪೂರ್ಣಿಮೆಯಂದು (26-5-2021) ಇಹಲೋಕ ತ್ಯಜಿಸಿ ಪಂಚಭೂತಗಳಲ್ಲಿ ಲೀನವಾದರು. ಅವರು 1936ರಲ್ಲಿ ಮಹಾತ್ಮ ಗಾಂಧಿಯವರಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅದಕ್ಕಾಗಿ 16 ತಿಂಗಳು ಸೆರೆವಾಸ ಅನುಭವಿಸಿದರು. 1975ರ ತುರ್ತು ಪರಿಸ್ಥಿತಿಯಲ್ಲಿ ಮತ್ತೆ ಕಾರಾಗೃಹವಾಸ. ಕಾಂಗ್ರೆಸ್ಸಿನ ಸಕ್ರಿಯ ಸದಸ್ಯರಾಗಿದ್ದುಕೊಂಡೇ ಕೆಲ ಕಾಂಗ್ರೆಸ್ಸಿಗರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಸೆಟೆದೆದ್ದವರು. ಪ್ರಗತಿಶೀಲ ಯುವಜನ ತಂಡವನ್ನು ಕಟ್ಟಿ ಬೆಳೆಸಿದವರು.

ಕರ್ನಾಟಕ ಏಕೀಕರಣ ಚಳುವಳಿ, ವಿನೋಬಾಜಿಯವರ ಭೂದಾನಯಜ್ಞ, ಕೈಗಾ ಅಣುಸ್ಥಾವರ ವಿರುದ್ಧ ಚಳವಳಿಗಳಲ್ಲಿ ಇವರ ಪಾತ್ರ ಹಿರಿದು. ಸಾಮಾಜಿಕ ನ್ಯಾಯಕ್ಕಾಗಿ ತುಡಿತ, ಅಂತ್ಯೋದಯಕ್ಕಾಗಿ ದಣಿವಿಲ್ಲದ ದುಡಿತ. ಎಚ್‌ಎಸ್ ದೊರೆಸ್ವಾಮಿ ಅವರು ಚಳವಳಿಗಳ ತಾಯಿ ವೃಕ್ಷ. ನೂರರ ವಯೋಮಾನದಲ್ಲೂ ಅವರು ಸಮಾಜ ಘಾತುಕ ಶಕ್ತಿಗಳ ವಿರುದ್ಧ ಸೊಲ್ಲೆತ್ತುವ ಭೀಷ್ಮ. ಸರ್ವೋದಯಕ್ಕಾಗಿ ತಣಿವಿಲ್ಲದೆ ದುಡಿದ ಕರ್ಮಜೀವಿ. ಸರಳ ಜೀವನ ಉನ್ನತ ಚಿಂತನೆ ಇವರ ಜೀವನಗಾಥೆ. ಕೆಂಗಲ್ ಹನುಮಂತಯ್ಯನವರು ಸಚಿವ ಸ್ಥಾನ ನೀಡಲು ಮುಂದೆ ಬಂದರೂ ನಿರಾಕರಿಸಿದವರು. ಈಚೆಗೆ ಸಿದ್ದರಾಮಯ್ಯನವರು ಸರ್ಕಾರಿ ವಸತಿಗೃಹ ನೀಡಲು ಮುಂದಾದರೂ ಬೇಡವೆಂದು ಬಾಡಿಗೆ ಮನೆಯಲ್ಲೇ ಬದುಕಿ ಇದ್ದವರು.

ತಾನು ಕೊರೊನಾದಿಂದ ಬಳಲಿದ್ದರೂ “ನನಗೆ 103 ವರ್ಷ, ಈ ಇಳಿವಯಸ್ಸಿನಲ್ಲಿ ನನಗೇಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತೀರಿ, ಇದೇ ಹಾಸಿಗೆಯನ್ನು ಅಗತ್ಯ ಇರುವ ಯುವ ರೋಗಿಗೆ ಬಳಸಿಕೊಳ್ಳಬಹುದು. ಅವರು ದೇಶದ ಆಸ್ತಿ” ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ಡಾ. ಸಿ.ಎನ್ ಮಂಜುನಾಥ್‌ಅವರಿಗೆ ಹೇಳಿದ ಬುದ್ಧಕಾರುಣ್ಯ ಅವರದು. ಅತ್ಯಂತ ಕಡೆಯ ಮನುಷ್ಯನ ಬಗ್ಗೆ ಅವರಿಗಿದ್ದ ಕಾಳಜಿ ಅನನ್ಯ. ನಗರದಲ್ಲಿ ನಡೆಯುತ್ತಿದ್ದ ಯಾವುದೇ ಜನಪರ ಚಳವಳಿ, ಸತ್ಯಾಗ್ರಹ, ಮುಷ್ಕರ, ಜಾಥಾದ ಮುಂಚೂಣಿಯಲ್ಲಿ ಈ ವಯೋವೃದ್ಧ ಹಾಜರಿದ್ದೇ ಇರುತ್ತಿದ್ದರು.

PC : Goodreads

ಪ್ರಸ್ತುತ ಅವರ “ನೆನಪಿನ ಸುರುಳಿ ತೆರೆದಾಗ” ಹೊತ್ತಿಗೆಯಲ್ಲಿ ಸುಮಾರು 50ಕ್ಕೂ ಹೆಚ್ಚು ನೆನಪಿನ ಸಂಗತಿಗಳಿವೆ. ಅವುಗಳಲ್ಲಿ ನಾನೀಗ ಪ್ರಸ್ತಾಪಿಸುತ್ತಿರುವ ನೆನಪು “ಪುಟ್ಟಪ್ಪನವರ ರಾಮಾಯಣದರ್ಶನಂ” ಕುರಿತದ್ದು. ಅವರು ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಕೆ.ವಿ. ಪುಟ್ಟಪ್ಪನವರು ಅವರಿಗೆ ಉಪಾಧ್ಯಾಯರಾಗಿದ್ದರು. ಅವರು ಅನುವಾದಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದ್ದರಂತೆ. ಇಂಗ್ಲಿಷಿನ ಸಾಹಿತ್ಯ ಕೃತಿಯಿಂದ ಒಂದು ಪ್ಯಾರಾ ಓದಿ ಬರೆಸುತ್ತಿದ್ದರು. ಅದನ್ನು ವಿದ್ಯಾರ್ಥಿಗಳು ಅನುವಾದ ಮಾಡಿಕೊಂಡು ಬರಬೇಕಾಗಿತ್ತು. ಮುಂದಿನ ಪೀರಿಯಡ್‌ನಲ್ಲಿ ವಿದ್ಯಾರ್ಥಿಗಳು ತಾವು ಬರೆದದ್ದನ್ನು ಓದಬೇಕಾಗಿತ್ತು. ಈ ರೀತಿ 4-5 ಸಾಹಿತ್ಯ ಕೃತಿಗಳಿಂದ ಒಂದೊಂದು ಪ್ಯಾರಾವನ್ನು ಮಾತ್ರ ನಾವು ಮಾಡಿರಲಿಕ್ಕೆ ಸಾಕು. ಅನುವಾದ ಕಲೆಯನ್ನು ರೂಢಿಸಿಕೊಳ್ಳುವ ವಿಧಾನವಾಗಿತ್ತು ಇದು. ಪುಟ್ಟಪ್ಪನವರು ಕಲಿಸುತ್ತಿದ್ದ ಬೋಧನಾ ವಿಧಾನ ಇಂತಿತ್ತು. ಶಿಷ್ಯರ ನೆನಪು ಹಸುರಾಗಿತ್ತು.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಸಮಯದಲ್ಲೇ ’ರಾಮಾಯಣದರ್ಶನಂ’ ಮಹಾಕಾವ್ಯವನ್ನು ಕುವೆಂಪು ಬರೆದದ್ದು. ಆಂಜನೇಯ ಲಂಕಾ ಪಟ್ಟಣಕ್ಕೆ ಹಾರಿ ಬಂದಿದ್ದಾನೆ. ಅಶೋಕ ವನದಲ್ಲಿ ಸೀತಾದೇವಿಯ ದರ್ಶನವಾಗುತ್ತದೆ. ಸೀತಾದೇವಿಯನ್ನು ಕುರಿತು ಮಾತನಾಡುವ ಸನ್ನಿವೇಶ. ತಾನು ಸೀತಾದೇವಿಗೆ ಅಪರಿಚಿತ. ಆಕೆಯನ್ನು ಕುರಿತು ಹೇಗೆ ಸಂಭಾಷಣೆಯನ್ನು ಆರಂಭ ಮಾಡಬೇಕು ಎಂಬ ಚಿಂತೆ ಆಂಜನೇಯನಿಗೆ. ಈ ಸನ್ನಿವೇಶವನ್ನು ಚಿತ್ರಿಸುತ್ತಿರುವ ಕುವೆಂಪು ಆ ಸಂಭಾಷಣೆಯನ್ನು ಅನೇಕ ಸಾರಿ ಮತ್ತೆ ಮತ್ತೆ ಬರೆದರೂ ಅದು ಅವರಿಗೆ ಸಮರ್ಪಕವೆನಿಸಲಿಲ್ಲ. ಹತಾಶರಾಗಿ ಲೇಖನಿ ಪಕ್ಕಕ್ಕಿಡುತ್ತಾರೆ. ಹಾಸಿಗೆಯಲ್ಲಿ ಬಿದ್ದುಕೊಳ್ಳುತ್ತಾರೆ. ಅದೇ ಚಿಂತೆಯಲ್ಲಿ ನಿದ್ರೆ ಹತ್ತುತ್ತದೆ. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಆಂಜನೇಯ ಸೀತಾದೇವಿಯ ಎದುರು ಬಂದು ನಿಂತಿದ್ದಂತೆ ಕನಸಾಗುತ್ತದೆ. ಎದುರಿಗೆ ನಿಂತವನೇ, ಅವನು ಸೀತಾದೇವಿಯೊಡನೆ ಸಂಭಾಷಣೆಗಿಳಿಯುತ್ತಾನೆ. ಪುಟ್ಟಪ್ಪನವರು ಥಟ್ಟನೆ ಎದ್ದು ದೀಪಹಾಕಿ, ಪಕ್ಕದಲ್ಲೇ ಇಟ್ಟುಕೊಂಡಿದ್ದ ಪೆನ್ನು ಮತ್ತು ಕಾಗದವನ್ನು ತೆಗೆದುಕೊಂಡು ಆಂಜನೇಯ ಹೇಳುತ್ತಿದ್ದುದನ್ನು ಆತುತಾತುರವಾಗಿ ಬರೆದುಕೊಂಡರಂತೆ. ಹೀಗೆ ಬರೆದುಕೊಳ್ಳುತ್ತಿದ್ದಂತೆ ಒಂದು ಘಟ್ಟದಲ್ಲಿ ಆ ಸಂಭಾಷಣೆ ನಿಂತು ಹೋಯಿತಂತೆ. ಎಷ್ಟು ತಿಣುಕಿದರೂ ಮುಂದಿನ ಸಾಲುಗಳನ್ನು ಬರೆಯಲು ಪುಟ್ಟಪ್ಪನವರಿಗೆ ಸಾಧ್ಯವಾಗಲಿಲ್ಲವಾಗಿ ಮತ್ತೆ ದೀಪ ಆರಿಸಿ ಮಲಗಿದರಂತೆ. ಆಂಜನೇಯ, ಸೀತೆಯರ ಸಂಭಾಷಣೆಯ ಆ ಭಾಗವನ್ನು ಬೆಳಗ್ಗೆ ಎದ್ದು ಓದಿನೋಡುತ್ತಾರೆ ಪುಟ್ಟಪ್ಪನವರು. ಅದ್ಭುತವಾಗಿದೆ! ಛಂದೋಬದ್ಧವಾಗಿದೆ! ಸಂಭಾಷಣೆ ಮನಮೋಹಕವಾಗಿದೆ!

“ಪುಟ್ಟಪ್ಪನವರು ಸಂಭಾಷಣೆಯ ಈ ಭಾಗವನ್ನು ಸಾಕ್ಷಾತ್ ಆಂಜನೇಯನೇ ಹೇಳಿ ಬರೆಸಿದ ಎಂದು ನಂಬಿದ್ದರು. ಈ ಘಟನೆಯನ್ನು ಕುರಿತು ಒಂದು ದಿನ ನಮ್ಮ ತರಗತಿಯಲ್ಲಿ ಹೇಳಿದ್ದು ಈಗಲೂ ಹಚ್ಚ ಹಸುರಾಗಿ ನನ್ನ ಮನಸ್ಸಿನಲ್ಲಿ ಉಳಿದಿದೆ”. [ನೆನಪಿನ ಸುರುಳಿ ತೆರೆದಾಗ. ಪುಟ98-99]. ಈ ಪ್ರಸಂಗವನ್ನು ಕುರಿತು ನನ್ನ ಬಳಿಯೂ ಒಮ್ಮೆ ಹೇಳಿದ್ದರು ದೊರೆಸ್ವಾಮಿಗಳು.

“ಪುಟ್ಟಪ್ಪನವರು ಕಥೆ, ಕಾದಂಬರಿ, ಜೀವನಚರಿತ್ರೆ, ನಾಟಕ, ಆತ್ಮಕಥನ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಮೇರು ಕೃತಿಗಳನ್ನು ರಚಿಸಿರುವರಾದರೂ ಅವರು ಮುಖ್ಯತಃ ಕವಿಗಳು. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಅವರು ಅನೇಕ ಕ್ರಾಂತಿಕಾರಕ ಕವಿತೆಗಳನ್ನು ರಚಿಸುತ್ತಾರೆ. ಆದರೆ ಸ್ವಾತಂತ್ರ್ಯ ಪ್ರಾಪ್ತವಾದ ಮೇಲೆ ದೂರದರ್ಶನ, ಆಕಾಶವಾಣಿಯಲ್ಲಿ ಕೆಲವನ್ನು ಮಾತ್ರ ಪದೇಪದೇ ಹಾಡುತ್ತಿದ್ದರು. ಅದನ್ನು ಆಲಿಸಿದ ಪುಟ್ಟಪ್ಪನವರು ಒಮ್ಮೆ ’ನಾನು ಎಷ್ಟೋ ಕ್ರಾಂತಿ ಪದ್ಯಗಳನ್ನು ಬರೆದಿದ್ದೇನೆ. ಹಿಂದೆ ವಿದ್ಯಾರ್ಥಿಗಳು, ಕನ್ನಡ ಸಂಘಗಳವರು ನನ್ನನ್ನು ಕರೆಸಿಕೊಂಡು, ಹಾಡಿಸಿ ಆಲಿಸುತ್ತಿದ್ದರು. ಈಗ ಆಕಾಶವಾಣಿ ಮತ್ತು ದೂರದರ್ಶನದವರು ನನ್ನ ಈ ಕ್ರಾಂತಿ ಪದ್ಯಗಳನ್ನು ತಮ್ಮ ಕೇಂದ್ರಗಳಲ್ಲಿ ಹಾಡಿಸಲು ಹೆದರುತ್ತಾರೆ. ನನ್ನ ’ಸೋಬಾನೆ ಪದ’ಗಳನ್ನೇ ಆಯ್ದುಕೊಂಡು ಹಾಡಿಸುತ್ತಾರೆ’ ಎಂದು ಹೇಳಿ ತಮ್ಮ ಅಳಲನ್ನು ತೋಡಿಕೊಂಡರು” ಎನ್ನುತ್ತಾರೆ ದೊರೆಸ್ವಾಮಿಗಳು.

PC : Prajavani

“ಪುಟ್ಟಪ್ಪನವರ ’ರಾಮಾಯಣದರ್ಶನಂ’ ಮೆಚ್ಚಿಕೊಂಡವರಲ್ಲಿ ಪೂಜ್ಯ ವಿನೋಬಾ ಅವರೂ ಒಬ್ಬರು. ಕರ್ನಾಟಕದಲ್ಲಿ ಭೂದಾನ ಪಾದಯಾತ್ರೆ ಕೈಗೊಂಡ ಸಂದರ್ಭದಲ್ಲಿ ಮೈಸೂರು ನಗರಕ್ಕೆ ಪ್ರವೇಶಿಸಿದೊಡನೆ ವಿನೋಬಾ ಅವರು ಋಷಿಸದೃಶ ಕವಿ ಪುಟ್ಟಪ್ಪನವರನ್ನು ಕಾಣುವ ತವಕ ವ್ಯಕ್ತಪಡಿಸಿದರು. ನೇರವಾಗಿ ಪುಟ್ಟಪ್ಪನವರ ಮನೆಗೆ ಹೋಗಿ, ಅವರ ದರ್ಶನ ಲಾಭ ಪಡೆದರು. ಕರ್ನಾಟಕಕ್ಕೆ ಪ್ರವೇಶ ಮಾಡುವ ಮೊದಲೇ ವಿನೋಬಾ ಕನ್ನಡ ವ್ಯಾಕರಣವನ್ನು ಅಭ್ಯಾಸ ಮಾಡಿದ್ದರು. ಪುಟ್ಟಪ್ಪನವರ ’ರಾಮಾಯಣದರ್ಶನಂ’ ಮಹಾಕಾವ್ಯವನ್ನು ಓದಿಸಿ, ಕೇಳತೊಡಗಿದ್ದರು. ಅದನ್ನು ಅವರು ಮೆಚ್ಚಿಕೊಂಡಿದ್ದರು” ಎಂಬುದನ್ನು ದೊರೆಸ್ವಾಮಿಯವರು ನೆನಪಿಸಿಕೊಳ್ಳುತ್ತಾರೆ. “ಪುಟ್ಟಪ್ಪನವರು ವಿನೋಬಾ ಅವರ ಬಗ್ಗೆ, ಸರ್ವೋದಯ ಸಿದ್ಧಾಂತದ ಬಗ್ಗೆ ವಿಶೇಷ ಕುತೂಹಲದಿಂದ ಚರ್ಚೆ ನಡೆಸುತ್ತಿದ್ದರು. ಸರ್ವೋದಯ ಸಿದ್ಧಾಂತವನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ವಿಶ್ವ ಭ್ರಾತೃತ್ವ, ವಿಶ್ವ ಶಾಂತಿ ಸ್ಥಾಪಿಸಲು ಸಾಧ್ಯವಾದೀತೆಂದು ಅವರು ಮನಗಂಡಿದ್ದರು” ಎಂದೂ ಹೇಳುತ್ತಾರೆ.

ಕುವೆಂಪು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾಗ ಎಚ್.ಎಸ್ ದೊರೆಸ್ವಾಮಿಗಳು ಸೆನೆಟ್ ಮೆಂಬರ್ ಆಗಿದ್ದರು. ಆಗಿನ ಒಂದು ಅನುಭವವನ್ನು ಹೀಗೆ ಹಂಚಿಕೊಳ್ಳುತ್ತಾರೆ. “ನಾನು ಒಂದು ಸೆನೆಟ್ ಸಭೆಯಲ್ಲಿ ಪುಟ್ಟಪ್ಪನವರನ್ನು ಕುರಿತು ’ವಿಶ್ವವಿದ್ಯಾಲಯ ಜಾತೀಯತೆಯಿಂದ ತುಂಬಿ ತುಳುಕುತ್ತಿದೆ. ನಿಮ್ಮಂತಹ ’ವಿಶ್ವಮಾನವರು’ ಕುಲಪತಿಗಳಾಗಿ ಬಂದಿರುವಾಗಲಾದರೂ ವಿಶ್ವವಿದ್ಯಾನಿಲಯವನ್ನು ಜಾತೀಯತೆಯಿಂದ ಪಾರು ಮಾಡಬೇಕು. ಆ ಅಧಿಕಾರ, ವರ್ಚಸ್ಸು ಮತ್ತು ಅರ್ಹತೆ ಉಳ್ಳವರು ತಾವೊಬ್ಬರೇ’ ಎಂದು ಮನವಿ ಮಾಡಿಕೊಂಡೆ. ಪುಟ್ಟಪ್ಪನವರು ಈ ಜವಾಬ್ದಾರಿಯಿಂದ ಜಾರಿಕೊಳ್ಳುವ ಮಾತನ್ನೇ ಆಡಿದರು. ’ಜನತೆ ಇದ್ದ ಹಾಗೆ ಸರ್ಕಾರ, ಸರ್ಕಾರ ಇದ್ದ ಹಾಗೆ ವಿಶ್ವವಿದ್ಯಾಲಯ. ಆದ್ದರಿಂದ ಜನತೆ ಮತ್ತು ಸರ್ಕಾರ ತನ್ನ ಮನೋಭಾವ ಬದಲಿಸದ ಹೊರತು, ವಿಶ್ವವಿದ್ಯಾನಿಲಯದಿಂದ ಜಾತೀಯತೆಯನ್ನು ತೊಲಗಿಸುವುದು ಸಾಧ್ಯವಿಲ್ಲ” ಎಂದರಂತೆ. ಹೀಗೆ ದೊರೆಸ್ವಾಮಿ ಅವರು ಕುವೆಂಪು ಅವರ ಸಂಬಂಧವಾದ ನೆನಪುಗಳನ್ನು ತಮ್ಮ ನೆನಪಿನ ಸುರುಳಿಯಲ್ಲಿ ದಾಖಲಿಸಿರುವುದು ಅಪರೂಪವೆಂಬಂತೆ ಇದ್ದು, ಇದು ಇಂದಿನ ಜಾತಿ ಭೂತದ ತಾಂಡವ ಕುಣಿತಕ್ಕೆ ಮೊದಲೆ ಚಂಡೆ ನುಡಿಸಿದಂತೆ ಭಾಸವಾಗುತ್ತದೆ.

ದಿನ ಕಳೆದ ಹಾಗೆಲ್ಲ ಫ್ಯಾಸಿಸ್ಟ್ ಹಿಂಸಾಪಶುವಿನ ಹಿಡಿತ ಹೆಚ್ಚಾಗುತ್ತಿದೆ. ಉದಾಗೆ: ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್, ಈಶ್ವರ ಅಲ್ಲಾ ತೇರೇ ನಾಮ್. ’ಸಬ್‌ಕೋ ಸನ್ಮತಿ ದೇ ಭಗವಾನ್’ ಎಂಬ ಗಾಂಧೀ ಭಜನೆಯ ಸಾಲನ್ನು ವಾಟ್ಸ್ಯಾಪ್ ಯೂನಿವರ್ಸಿಟಿ ಮಕ್ಕಳು ’ರಾಧೇ ಶ್ಯಾಮ್ ತೇರಾ ನಾಮ್’ ಎಂದು ಅಲ್ಲಾನ ಕೈಬಿಟ್ಟು ಹೇಳುವ ಮೂಲಕ ಗಾಂಧೀ-ತತ್ವಹತ್ಯೆಗೆ ಪುನಃ ಹೊರಟಿರುವಂತೆ ಕಾಣುತ್ತದೆ. ಫ್ಯಾಸಿಸ್ಟ್ ಮತಾಂಧ ಮಿಡಿತೆಗಳು ದಂಡೆತ್ತಿ ಬಂದು ಸರ್ವಜನಾಂಗದ ಶಾಂತಿಯತೋಟವನ್ನು ಕವರುತ್ತಿವೆ. ಆದ್ದರಿಂದ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ದೇಶ ಈಗ ಅಣಿಯಾಗಬೇಕಾಗಿದೆ ಎಂದು ದೊರೆಸ್ವಾಮಿಗಳು ತಮ್ಮ ’ನೂರರ ನೋಟ’ದಲ್ಲಿ ಎಚ್ಚರಿಸುತ್ತಲೇ ಬಂದರು. ಆದರೆ ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ನಮ್ಮ ಇಂದಿನ ಯುವಜನರಿಗೆ ಬೇಕಲ್ಲ! ಇಲ್ಲವಾದರೆ ಈ ದೇಶದ ಜಾತ್ಯಾತೀತ ಬಹುಸಂಸ್ಕೃತಿ ಉಳಿಯಲಾರದು, ’ಮನುಜಮತ ವಿಶ್ವಪಥ’ ದಾರಿ ತೆರೆಯಲಾರದು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...