ಏಳು ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರಕಾರ ಅತ್ಯಂತ ಆಘಾತಕಾರಿ ಪ್ರಹಾರ ನಡೆಸಿದ್ದು ಎಂದರೆ ಅದು ಭಾರತದ ಒಕ್ಕೂಟ ವ್ಯವಸ್ಥೆಯ ಮೇಲೆ. ಸಂವಿಧಾನದಲ್ಲಿರುವ ಎರಡು ಪ್ರಮುಖ ಅಂಶಗಳನ್ನು ಬಿಜೆಪಿ ಗಾಢವಾಗಿ ದ್ವೇಷಿಸುತ್ತಿರುವಂತಿದೆ. ಮೊದಲನೆಯದ್ದು ಸಂವಿಧಾನದ ಧರ್ಮನಿರಪೇಕ್ಷ ತತ್ವ ಅಥವಾ
ಸೆಕ್ಯುಲರಿಸಂ. ಎರಡನೆಯದ್ದು ಫೆಡರಲಿಸಂ ಅಥವಾ ಒಕ್ಕೂಟ ವ್ಯವಸ್ಥೆ/ಒಕ್ಕೂಟದ ತತ್ವ. ಸೆಕ್ಯುಲರಿಸಂನ ಕುರಿತು ಅದಕ್ಕಿರುವ ದ್ವೇಷದ ಬಗ್ಗೆ ಬಿಜೆಪಿ ಏನನ್ನೂ ಅಡಗಿಸಿಡುತ್ತಿಲ್ಲ. ಅದರ ಬಗ್ಗೆ ತನಗೆ ತಕರಾರು ಇದೆ ಅಂತ ಹಲವು ವೇದಿಕೆಗಳಲ್ಲಿ ಆ ಪಕ್ಷದ ನಾಯಕರು ಮತ್ತು ಅದರ ಬೆಂಬಲಿಗರು ಹೇಳಿಕೊಂಡಿದ್ದಾರೆ. ಆದರೆ, ಫೆಡರಲಿಸಂ ವಿಷಯದಲ್ಲಿ ಹಾಗಲ್ಲ. ಮಾತಿನಲ್ಲಿ ಒಕ್ಕೂಟ ತತ್ವವನ್ನು ಒಪ್ಪಿಕೊಳ್ಳುವಂತೆ, ಮೆಚ್ಚಿಕೊಳ್ಳುವಂತೆ ನಟಿಸುತ್ತಾ ಒಳಗೊಳಿಂದಲೇ ಅದರ ವಿರುದ್ಧ ಕತ್ತಿ ಮಸೆಯುವ ಮತ್ತು ಅದನ್ನು ದುರ್ಬಲಗೊಳಿಸುವ ಕೆಲಸ ನಡೆಯುತ್ತಿದೆ. ಸಹಕಾರಿ ಒಕ್ಕೂಟ (cooperative federalism) ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿ, ಮೇಲ್ನೋಟಕ್ಕೆ ಅದನ್ನು ಪ್ರತಿಪಾದಿಸುತ್ತಾ ಗುಟ್ಟಾಗಿ ರಾಜ್ಯಗಳ ಸ್ವಯಂವಿಧಾನಿಕ ಸ್ವಾಯತ್ತತೆಯನ್ನು ನಾಶಗೊಳಿಸುತ್ತಿದೆ.

ಬಿಜೆಪಿ ಹೀಗೆ ಮಾಡುವುದಕ್ಕೆ ಕಾರಣ ಏನೆಂದು ಕಂಡುಕೊಳ್ಳುವುದು ಕಷ್ಟವೇನಲ್ಲ. ಇಡೀ ದೇಶದಲ್ಲಿ ಅಕ್ಷರಶಃ ಏಕಚಕ್ರಾಧಿಪತ್ಯ ಸ್ಥಾಪಿಸುವ ಬಿಜೆಪಿಯ ನಾಯಕರ ಮಹತ್ವಾಕಾಂಕ್ಷೆಗೆ ಈಗ ದೊಡ್ಡ ಮಟ್ಟದಲ್ಲಿ ಅಡ್ಡಿಯಾಗಿರುವುದು ರಾಜ್ಯಗಳಿಂದ. ದೇಶದ ಯಾವುದೇ ರಾಜ್ಯದಲ್ಲಿ ಒಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದುಬಿಟ್ಟರೆ ಆ ರಾಜ್ಯದ ಸ್ವತಂತ್ರ ಅಸ್ತಿತ್ವ ಅಂತ್ಯವಾದಂತೆ. ಅಂತಹ ರಾಜ್ಯಗಳ ಆಡಳಿತವನ್ನು ಬಿಜೆಪಿಯ ನಾಯಕತ್ವ ದೆಹಲಿಯಿಂದಲೇ ನಿಯಂತ್ರಿಸುತ್ತದೆ. ಅದಕ್ಕಾಗಿಯೇ ಬಿಜೆಪಿ ಮೊದಲಿಗೆ ದೇಶವನ್ನು ಕಾಂಗ್ರೆಸ್‌ನಿಂದ ಮುಕ್ತಗೊಳಿಸುವ ಪಣತೊಟ್ಟಿದ್ದು, ಆನಂತರ ವಿರೋಧ ಪಕ್ಷ ಮುಕ್ತ ಭಾರತವನ್ನು ಕಟ್ಟುವ ಗೌಪ್ಯ ಅಜೆಂಡಾ ಅಳವಡಿಸಿಕೊಂಡದ್ದು. ಆದರೆ, ದೇಶದ ಜನ ಬಿಜೆಪಿಯ ಈ ಅಜೆಂಡಾಕ್ಕೆ ಸಹಕರಿಸುತ್ತಿಲ್ಲ. ಅವರು ಪಾರ್ಲಿಮೆಂಟ್ ಚುನಾವಣೆಯಲ್ಲಿ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬೇರೆ ಬೇರೆ ಪಕ್ಷಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಪರಿಣಾಮವಾಗಿ ಬಿಜೆಪಿಗೆ ಎರಡು ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಪಡೆಯಲು ಸಾಧ್ಯವಾದರೂ ಹಲವಾರು ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಏನೇ ಕಸರತ್ತು ನಡೆಸಿದರೂ ಸಾಧ್ಯವಾಗುತ್ತಿಲ್ಲ. ರಾಜ್ಯಗಳಲ್ಲಿ ಒಮ್ಮೆ ಬಿಜೆಪಿಯ ವಿರೋಧ ಪಕ್ಷಗಳ ಸರಕಾರ ಅಧಿಕಾರಕ್ಕೆ ಬಂದುಬಿಟ್ಟರೆ ಅವುಗಳು ಸಾಂವಿಧಾನಿಕವಾಗಿ ತಮಗಿರುವ ಸಾರ್ವಭೌಮ ಅಧಿಕಾರವನ್ನು ಚಲಾಯಿಸುತ್ತವೆ. ರಾಜ್ಯಗಳನ್ನು ಸಾಮಂತ ಪ್ರದೇಶಗಳಂತೆ ಕಾಣುವ ಬಿಜೆಪಿಯ ಉದ್ದೇಶಕ್ಕೆ ಇದರಿಂದ ತೊಡಕಾಗುತ್ತದೆ.

ಅದಕ್ಕೆ ಬಿಜೆಪಿ ಕಂಡುಕೊಂಡ ಪರಿಹಾರ ಅಂದರೆ ರಾಜ್ಯಗಳ ಸಾರ್ವಭೌಮ ಅಧಿಕಾರಕ್ಕೆ ಕೊಡಲಿ ಏಟು ನೀಡುವುದು: ಅಂದರೆ, ರಾಜ್ಯಗಳತ್ತ ಅವಗಣನೆ ತೋರುವುದು, ರಾಜ್ಯಗಳತ್ತ ತಾರತಮ್ಯ ನೀತಿ ತೋರುವುದು ಮತ್ತು ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಣ ಮಾಡಿಕೊಳ್ಳುವುದು. ಇದನ್ನು ನೇರವಾಗಿ ಮಾಡುವಂತಿಲ್ಲ. ಯಾಕೆಂದರೆ, ರಾಜ್ಯಗಳ ಸಾರ್ವಭೌಮತೆ ಮತ್ತು ಅದರ ಹಿಂದಿರುವ ಒಕ್ಕೂಟ ತತ್ವ ಸಂವಿಧಾನದ ಮೂಲ ಸಂರಚನೆಯ ಭಾಗ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ, ಕೇಂದ್ರದ ಬಿಜೆಪಿ ಸರಕಾರ ರಾಜ್ಯಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಪರೋಕ್ಷ ಮಾರ್ಗಗಳ ಮೂಲಕ, ಅಡ್ಡ ದಾರಿ ಹಿಡಿಯುವ ಮೂಲಕ ಮಾಡುತ್ತಿದೆ. ಮುಖ್ಯವಾಗಿ ಈ ಉದ್ದೇಶಕ್ಕೆ ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಸರಕಾರ ಅನುಸರಿಸುತ್ತಾ ಬಂದಿರುವ ವಾಮಮಾರ್ಗಗಳು ಹೀಗಿವೆ.

PC :The Economic Times

ಮೊದಲನೆಯದಾಗಿ ಬಿಜೆಪಿಯೇತರ ಸರಕಾರಗಳು ಇರುವ ರಾಜ್ಯಗಳನ್ನು ಕೇಂದ್ರ ಸರಕಾರ ಆರ್ಥಿಕವಾಗಿ ದುರ್ಬಲಗೊಳಿಸುತ್ತಿದೆ. ದುರದೃಷ್ಟವಶಾತ್, ನಮ್ಮ ಸಂವಿಧಾನ ರಾಜ್ಯಗಳಿಗೆ ಸ್ವಾಯತ್ತ ಅಧಿಕಾರವನ್ನು ಮತ್ತು ಹೆಚ್ಚಿನ ಜವಾಬ್ದಾರಿಗಳನ್ನು ನೀಡಿದರೂ ಆರ್ಥಿಕ ಸಬಲತೆಗಾಗಿ ಕೇಂದ್ರದ ಮೇಲೆ ಅವ ಲಂಬಿಸ ಬೇಕಾಗಿರುವ ಒಂದು ವ್ಯವಸ್ಥೆಯನ್ನು ಸ್ಥಾಪಿಸಿಬಿಟ್ಟಿದೆ. ಅಂದರೆ, ಸಂವಿಧಾನ ಕೇಂದ್ರ ಸರಕಾರಕ್ಕೆ ಹೆಚ್ಚಿನ ಆದಾಯ ಮೂಲಗಳನ್ನು ನೀಡಿ, ಕೇಂದ್ರ ತನ್ನ ಆದಾಯದಲ್ಲಿ ರಾಜ್ಯಗಳಿಗೆ ಪಾಲು ನೀಡಬೇಕೆಂದು ಆದೇಶಿಸುತ್ತದೆ. ಈ ವ್ಯವಸ್ಥೆಯನ್ನು ಈ ತನಕದ ಎಲ್ಲಾ ಕೇಂದ್ರ ಸರಕಾರಗಳೂ ಸಂವಿಧಾನದ ಪ್ರಕಾರ ಪಾಲಿಸಿಕೊಂಡು ಬಂದಿದ್ದವು. ಆದರೆ, ಈ ಸರಕಾರ ಬಂದ ನಂತರ ತೆರಿಗೆ ಪಾಲು ಹಂಚಿಕೆಯಲ್ಲಿ ಬಿಜೆಪಿಯೇತರ ರಾಜ್ಯ ಸರಕಾರಗಳಿಗೆ ತಾರತಮ್ಯ ಮಾಡುತ್ತಿದೆ. ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಹಣಕಾಸು ಆಯೋಗವನ್ನು ಬಳಸಿಕೊಂಡು ತನ್ನ ಅಧಿಪತ್ಯದಲ್ಲಿರುವ ಉತ್ತರದ ರಾಜ್ಯಗಳಿಗೆ ತನ್ನ ಆದಾಯದ ಹೆಚ್ಚಿನ ಪಾಲನ್ನು ನೀಡಿ ಕರ್ನಾಟಕವೂ ಸೇರಿದಂತೆ ಹಲವಾರು ದಕ್ಷಿಣದ ರಾಜ್ಯಗಳ ಪಾಲನ್ನು ಕಡಿತಗೊಳಿಸಿದೆ. ವಿಪರ್ಯಾಸವೆಂದರೆ, ಕರ್ನಾಟಕದಲ್ಲಿ ಬಿಜೆಪಿಯೇ ಆಳ್ವಿಕೆ ನಡೆಸುತ್ತಿದ್ದರೂ, ಕರ್ನಾಟಕ ಬಿಜೆಪಿಗೆ ದಕ್ಷಿಣದಲ್ಲಿ ದೊಡ್ಡ ಮಟ್ಟಿನ ಬೆಂಬಲ ನೀಡುತ್ತಿದ್ದರೂ, ಹದಿನೈದನೇ ಹಣಕಾಸು ಆಯೋಗದ ವರದಿಯಡಿ ಕರ್ನಾಟಕದ ತೆರಿಗೆ ಪಾಲು ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ.

ರಾಜ್ಯಗಳ ಆರ್ಥಿಕ ಶಕ್ತಿಗೆ ಮತ್ತೊಂದು ದೊಡ್ಡ ಹೊಡೆತ ನೀಡಿದ್ದು ಹೊಸದಾಗಿ ಜಾರಿಗೆ ತಂಡ ಜಿಎಸ್‌ಟಿ ತೆರಿಗೆ ಪದ್ಧತಿ. ಜಿಎಸ್‌ಟಿ ಜಾರಿಗೆ ಬರುವ ಮೊದಲು ಮಾರಾಟ ತೆರಿಗೆ ರಾಜ್ಯ ಸರಕಾರಗಳ ದೊಡ್ಡ ಆದಾಯ ಮೂಲವಾಗಿತ್ತು. ಎಲ್ಲಾ ರಾಜ್ಯಗಳ ಮಾರಾಟ ತೆರಿಗೆಯನ್ನು ಏಕರೂಪಗೊಳಿಸಿ ಅದನ್ನು ಜಿಎಸ್‌ಟಿ ಎನ್ನುವ ಹೆಸರಲ್ಲಿ ಕೇಂದ್ರ ಸರಕಾರವೇ ಸಂಗ್ರಹಿಸುವ ಹೊಸ ವ್ಯವಸ್ಥೆಯನ್ನು ಈ ಸರಕಾರ ಜಾರಿಗೊಳಿಸಿದೆ. ಹಾಗೆ ಮಾಡುವಾಗ ಜಿಎಸ್‌ಟಿಯಲ್ಲಿ ಪ್ರತೀ ರಾಜ್ಯಕ್ಕೆ ನ್ಯಾಯಯುತ ಪಾಲು, ಮತ್ತು ಈ ಸ್ಥಿತ್ಯಂತರದಿಂದಾಗಿ ರಾಜ್ಯಗಳಿಗೆ ಆರಂಭಿಕ ವರ್ಷಗಳಲ್ಲಿ ಆಗುವ ನಷ್ಟಕ್ಕೆ ಪರಿಹಾರ ರೂಪದ ಸಹಾಯವನ್ನು ಘೋಷಿಸಿತ್ತು. ಕೇಂದ್ರದ ಈ ಭರವಸೆಯನ್ನು ನಂಬಿ ರಾಜ್ಯ ಸರಕಾರಗಳು ಈ ಹೊಸ ಪದ್ದತಿಗೆ ಒಪ್ಪಿಕೊಂಡುಬಿಟ್ಟವು. ಈಗ ಕೇಂದ್ರ ನಂಬಿಕೆ ದ್ರೋಹ ಮಾಡುತ್ತಿದೆ. ಈ ಅಸ್ತ್ರವನ್ನು ಕೂಡಾ ರಾಜ್ಯಗಳನ್ನು ದುರ್ಬಲಗೊಳಿಸಲು ಬಳಸುತ್ತಿರುವಂತೆ ಕಾಣುತ್ತದೆ. ಅತ್ತ ಜಿಎಸ್‌ಟಿ ಪರಿಹಾರವನ್ನೂ ಸರಿಯಾಗಿ ನೀಡುತ್ತಿಲ್ಲ, ಇತ್ತ ಜಿಎಸ್‌ಟಿ ಪಾಲನ್ನೂ ನೀಡುತ್ತಿಲ್ಲ.

ರಾಜ್ಯ ಸರಕಾರಗಳು ಅಕ್ಷರಶಃ ಬಡವಾಗುತ್ತಿವೆ. ರಾಜ್ಯಗಳ ರಾಜಸ್ವ ಕೊರತೆ ಹೆಚ್ಚುತ್ತಿದೆ. ರಾಜ್ಯಗಳ ಸಾಲ ಹೆಚ್ಚುತ್ತಿದೆ. ಹಲವಾರು ಸಾಮಾಜಿಕ ಯೋಜನೆಗಳು ಹಣವಿಲ್ಲದೆ ಸೊರಗುತ್ತಿವೆ. ಅಷ್ಟೇ ಯಾಕೆ, ಕೆಲ ವರ್ಗದ ಸರಕಾರೀ ನೌಕರರಿಗೆ ಸಂಬಳವೂ ಸರಿಯಾದ ಸಮಯಕ್ಕೆ ನೀಡಲಾಗದ ಪರಿಸ್ಥಿತಿ ಇದೆ. ಕರ್ನಾಟಕದಲ್ಲಿ, ಅರೆಕಾಲಿಕ ಕಾಲೇಜು ಉಪನ್ಯಾಸಕರಿಗೆ 14 ತಿಂಗಳುಗಳಿಂದ ಸಂಬಳ ನೀಡಿಲ್ಲ ಎಂದರೆ ಯೋಚಿಸಿ. ಮೊದಲೇ ಅವರಿಗೆ ನೀಡುತ್ತಿದ್ದುದು ಬಿಡಿಗಾಸು. ಈಗ ಅದೂ ಇಲ್ಲ. ತಮಿಳುನಾಡಿನಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಡಿಎಂಕೆ ಸರಕಾರದ ಅರ್ಥ ಸಚಿವ ಪಳನಿವೇಲ್ ತ್ಯಾಗರಾಜನ್ ಇದರ ಬಗ್ಗೆ ದೊಡ್ಡದಾಗಿ ಧ್ವನಿ ಎತ್ತುತ್ತಿದ್ದಾರೆ. ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ಅನುಸರಿಸುತ್ತಿರುವ ಅಸಂವಿಧಾನಿಕ ನಡೆಯ ವಿರುದ್ಧ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಮುಂದಾಗಿದ್ದಾರೆ. ಕೇರಳದ ಹಿಂದಿನ ಅರ್ಥ ಸಚಿವ ಥಾಮಸ್ ಐಸಾಕ್ ಈ ಆರ್ಥಿಕ ಅನ್ಯಾಯದ ಪರಂಪರೆಯ ಬಗ್ಗೆ ಒಂದು ಪುಸ್ತಕವನ್ನೇ ಪ್ರಕಟಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕದಂತಹ ರಾಜ್ಯದಲ್ಲಿ ಎಲ್ಲವನ್ನೂ ಅವಡುಗಚ್ಚಿ ಸಹಿಸಲಾಗುತ್ತಿದೆ.

ಇಷ್ಟೇ ಅಲ್ಲ. ಕೊರೊನಾ ಸಂಕಷ್ಟವನ್ನು ಕೂಡಾ ಬಳಸಿಕೊಂಡು ಕೇಂದ್ರ ರಾಜ್ಯಗಳ ಮೇಲೆ ತನ್ನ ಅಧಿಪತ್ಯ ಸಾಧಿಸಲು ಹೊರಟಿತು. ಮೊದಲೇ ಆರ್ಥಿಕವಾಗಿ ಸೊರಗಿ ಹೋಗಿದ್ದ ರಾಜ್ಯಗಳು ಕೊರೊನಾ ಕಾಲದಲ್ಲಿ ಅಕ್ಷರಶಃ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಿಸಿಬಿಟ್ಟಿತು. ಅದನ್ನು ಕೇಂದ್ರ ಮಾಡಿದ್ದು ರಾಜ್ಯಗಳು ಆಪತ್ಕಾಲದಲ್ಲಿ ಬಳಸಿಕೊಳ್ಳಲಿ ಅಂತ ಕಾನೂನುಬದ್ಧವಾಗಿ ಸ್ಥಾಪಿಸಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹರಿದು ಬರುವ ಹಣಕ್ಕೆ ಕೂಡಾ ಅಡ್ಡಗಾಲು ಹಾಕುವ ಮೂಲಕ. ’ಪಿಎಂಕೇರ್‍ಸ್’ ಎನ್ನುವ ಪರ್ಯಾಯ ನಿಧಿಯೊಂದನ್ನು ಸ್ಥಾಪಿಸಿ ಕಂಪನಿಗಳ ಸಾಮಾಜಿಕ ಜವಾಬ್ದಾರಿ ಕಾಯ್ದೆಯಡಿ ಕೇಂದ್ರದ ಈ ನಿಧಿಗೆ ಹಣ ನೀಡಲು ಕಾನೂನಿನಲ್ಲಿ ಅನುವು ಮಾಡಿಕೊಡಲಾಯಿತು. ಅದೇ ವೇಳೆ ಅದನ್ನು ಮುಖ್ಯಮಂತ್ರಿಗಳ ಪರಿಹಾರನಿಧಿಗೆ ನೀಡದಂತೆ ನಿರ್ಬಂಧಿಸಲಾಯಿತು. ’ಪಿಎಂಕೇರ್‍ಸ್’ ನಿಧಿಯಲ್ಲಿ ಅಪಾರವಾದ ಮೊತ್ತ ಸಂಗ್ರಹವಾಗಿದೆ. ಆದರೆ
ಅದನ್ನು ಯಾವ ಉದ್ದೇಶದಿಂದ ಯಾವಾಗ ಖರ್ಚು ಮಾಡಲಾಯಿತು ಎನ್ನುವ ಯಾವ ಮಾಹಿತಿಯನ್ನು ರಾಜ್ಯಗಳಾಗಲೀ, ಜನರಾಗಲೀ ತಿಳಿದುಕೊಳ್ಳುವ ಅವಕಾಶವನ್ನು ನಿರಾಕರಿಸಲಾಯಿತು. ಎಲ್ಲಾ ವಿಧದಲ್ಲೂ ಆರ್ಥಿಕವಾಗಿ ಕೃಶವಾಗಿ ಹೋದ ರಾಜ್ಯಗಳೇ ಕೊರೊನಾ ಲಸಿಕೆಯನ್ನು ಮಾರುಕಟ್ಟೆಯಲ್ಲಿ ಖರೀದಿಸಿ
ವಿತರಿಸುವ ಜವಾಬ್ದಾರಿ ಹೊರಿಸಲು ಹೊರಟಾಗ ಅದೃಷ್ಟವಶಾತ್ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿ ಛೀಮಾರಿ ಹಾಕಿದ ಕಾರಣ ಈಗ ನೀತಿ ಬದಲಿಸಿಕೊಂಡಿದೆ. ಮತ್ತೆ, ಬಿಜೆಪಿ ಆಳುವ ರಾಜ್ಯಗಳಿಗೊಂದು ನೀತಿ, ಇತರ ರಾಜ್ಯಗಳಿಗೊಂದು ನೀತಿ ಎಂಬಂತೆ ಲಸಿಕೆಗಳನ್ನು, ಆಮ್ಲಜನಕವನ್ನು, ಇತರ ಜೀವರಕ್ಷಕ ಔಷಧಿಗಳನ್ನು
ವಿತರಿಸಲಾಗುತ್ತಿದೆ.

PC : Business Standard

ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರ ನಡೆಸುತ್ತಿರುವ ದಾಳಿಯ ಎರಡನೇ ಆಯಾಮ ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು ಕೇಂದ್ರ ಆಕ್ರಮಿಸಿಕೊಳ್ಳುತ್ತಿರುವುದು. ಹೊಸದಾಗಿ ಜಾರಿಗೆ ಬಂದ ವಿವಾದಾತ್ಮಕ ಕೃಷಿ ಕಾಯ್ದೆಗಳು, ಹೊಸ ಶಿಕ್ಷಣ ನೀತಿ, ರಾಜ್ಯಗಳ ಸೇವೆಯಲ್ಲಿರುವ ಐಎಎಸ್ ಅಧಿಕಾರಿಗಳನ್ನು ಕೇಂದ್ರ ಸರಕಾರ ನಡೆಸಿಕೊಳ್ಳುತ್ತಿರುವ ರೀತಿ ಇತ್ಯಾದಿಗಳೆಲ್ಲಾ ಇದಕ್ಕೆ ಉದಾಹರಣೆ. ಕೃಷಿ ಕಾಯ್ದೆಯ ವಿಷಯದಲ್ಲಿ ಕೇಂದ್ರ ಹೀಗೆ ಮಾಡಿದ್ದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆಯಾದರೂ, ಕೋರ್ಟು ಈ ಕುರಿತು ಯಾವ ನಿರ್ಧಾರವನ್ನು ಕೈಗೊಂಡಿಲ್ಲ. ಶಿಕ್ಷಣ ನೀತಿಯ ವಿರುದ್ಧ ತಮಿಳು ನಾಡು ಸಿಡಿದೆದ್ದಿದೆ. ಜತೆಗೆ ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳ ಸಭೆ ಕರೆದರೆ ಅದು ಒಂತರಾ ಸಂಸ್ಥೆಯೊಂದರ ಮುಖ್ಯಸ್ಥ ತನ್ನ ಅಧೀನಾಧಿಕಾರಿಗಳ ಸಭೆ ಕರೆದ ಹಾಗೆ ಇರುತ್ತದೆ. ಮುಖ್ಯಮಂತ್ರಿಗಳಿಗೆ ಅಲ್ಲಿ ಯಾವ ಪ್ರಾಮುಖ್ಯತೆಯೂ ಇಲ್ಲ. ಅವರು ಮಾತನಾಡಲು ಅವಕಾಶ ಇಲ್ಲ. ಪ್ರಧಾನಿ ಮಾತನಾಡಿದ್ದನ್ನು ಕೇಳಿಸಿಕೊಂಡು ಮುಖ್ಯಮಂತ್ರಿಗಳೆಲ್ಲಾ ಹಿಂತಿರುಗಬೇಕು. ಜಾರ್ಖಂಡದ ಮುಖ್ಯಮಂತ್ರಿ ಇದನ್ನು ದೊಡ್ಡ ಧ್ವನಿಯಲ್ಲೇ ಪ್ರತಿಭಟಿಸಿದ್ದಾರೆ. ಇದು ಸಾಲದು ಎಂಬಂತೆ ಪ್ರಧಾನ ಮಂತ್ರಿಗಳೇ ನೇರವಾಗಿ ಜಿಲ್ಲಾ ಆಡಳಿತಗಳ ಜತೆ ಸಭೆ ನಡೆಸುವ ಹೊಸದೊಂದು ಪರಂಪರೆಯೂ ಸೃಷ್ಟಿಯಾಗಿದೆ. ಜಿಲ್ಲಾಡಳಿತ ಏನಿದ್ದರೂ ರಾಜ್ಯ ಸರಕಾರಗಳ ಅಧೀನದಲ್ಲಿರುವುದು. ಜಿಲ್ಲಾಧಿಕಾರಿಗಳು
ಐಎಎಸ್ ಸೇರಿದವರು ಮತ್ತು ಜಿಲ್ಲಾಡಳಿತ ಕೆಲ ಕೇಂದ್ರ ಕಾಯ್ದೆಗಳನ್ನೂ ಜಾರಿಗೊಳಿಸುತ್ತದೆ ಎನ್ನುವ ಕಾರಣಕ್ಕೆ ಪ್ರಧಾನ ಮಂತ್ರಿಗಳು ರಾಜ್ಯ ಸರಕಾರಗಳನ್ನು ಕಡೆಗಣಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿರುವುದು ರಾಜ್ಯಗಳನ್ನು ಕಡೆಸುತ್ತಿರುವುದು ಮಾತ್ರವಲ್ಲ ಒಂದು ರೀತಿಯಲ್ಲಿ ಅಣಕಿಸುತ್ತಿರುವ ಸಂಕೇತವೂ ಹೌದು.

ರಾಜ್ಯಗಳಲ್ಲಿ ವಿರೋಧ ಪಕ್ಷಗಳ ನಾಯಕತ್ವ ಬೆಳೆಯು ವುದಕ್ಕೆ ಅಡ್ಡಿ ಪಡಿಸುವಮೂಲಕವೂ ಬಿಜೆಪಿ ರಾಜ್ಯಗಳ ಹಿತಾಸಕ್ತಿಗೆ ಮಾರಕವಾಗುತ್ತಿದೆ. ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜ್ಯಗಳ ವಿರೋಧ ಪಕ್ಷಗಳ ನಾಯಕರ ಮೇಲೆ ಛೂ ಬಿಡಲಾಗುತ್ತಿದೆ. ಎಲ್ಲಾ ಪಕ್ಷಗಳೂ ಚುನಾವಣೆಗೆ ಖರ್ಚು ಮಾಡುವ ದುಡ್ಡು ಅಧಿಕೃತ ಮೂಲಗಳಿಂದಲೇ ಸಂಗ್ರಹಿಸಿದ್ದಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಇದನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ನಾಯಕರುಗಳ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳು ಪದೇ ಪದೇ ದಾಳಿ ಮಾಡಿದಾಗ ರಾಜಕೀಯ ನಡೆಸಲು ಬೇಕಾದ ಸಂಪನ್ಮೂಲಗಳಿಲ್ಲದ ರಾಜ್ಯ ಮಟ್ಟದ ಪಕ್ಷಗಳು ಸೊರಗುತ್ತವೆ. ಇದರರ್ಥ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದಲ್ಲ. ಆದರೆ, ಕೇಂದ್ರ ಆಯ್ದ ಪ್ರಕಾರಗಳಲ್ಲಿ ಮಾತ್ರ ತನಿಖೆ ದಾಳಿ ಇತ್ಯಾದಿಗಳನ್ನು ನಡೆಸುವ ಮೂಲಕ ಮಾಡುತ್ತಿರುವ ರಾಜಕಾರಣ ಪರ್ಯಾಯವಾಗಿ ರಾಜ್ಯ ಮಟ್ಟದ ರಾಜಕೀಯ ಪಕ್ಷಗಳಿಗೆ ರಾಜಕೀಯ ನಡೆಸುವುದು ಕಷ್ಟವಾಗುವಂತೆ ಮಾಡುತ್ತದೆ. ಜತೆಗೆ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಬಹಳ ನಾಜೂಕಾಗಿ ಕೇಂದ್ರ ಸರಕಾರ ಹೇರುತ್ತಿದೆ.

ಕೇಂದ್ರ ಸರಕಾರದ ಹುದ್ದೆಗಳಿಗೆ ನಡೆಯುವ ಪರೀಕ್ಷೆಯಲ್ಲಿ ಹಿಂದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಇವೆಲ್ಲದಕ್ಕೂ ಕಲಶಪ್ರಾಯ ಎಂಬಂತೆ 102ನೆಯ ಸಂವಿಧಾನ ತಿದ್ದುಪಡಿಯ ಮೂಲಕ ರಾಜ್ಯ ಸರಕಾರಗಳಿಗೆ ಯಾವ ಜಾತಿಗಳು ಹಿಂದುಳಿದ ವರ್ಗಕ್ಕೆ ಸೇರಿವೆ ಅಥವಾ ಸೇರಿಲ್ಲ ಅಂತ ನಿರ್ಣಯಿಸುವುದಕ್ಕೆ ಇದ್ದ ಅಧಿಕಾರವನ್ನೂ ಕಿತ್ತುಕೊಂಡಿದೆ. ಈ ರೀತಿ ಮಾಡುವ ಉದ್ದೇಶ ತಾನಾಗಿರಲಿಲ್ಲ ಅಂತಲೂ, ನ್ಯಾಯಾಂಗವು ಸಂವಿಧಾನ ತಿದ್ದುಪಡಿಯನ್ನು ತಾಂತ್ರಿಕವಾಗಿ ಅರ್ಥೈಸಿಕೊಳ್ಳುತ್ತಿದೆ ಅಂತಲೂ ಕೇಂದ್ರದಿಂದ ಸಮಾಜಿಯಿಸಿ ಬಂದಿದೆ. ಅದೇನೇ ಇದ್ದರೂ, ಜಾತಿಯಂತಹ ತೀರಾ ಪ್ರಾದೇಶಿಕ, ಸಾಮಾಜಿಕ ವಿಚಾರಗಳಲ್ಲಿ ಕೂಡಾ ಕೇಂದ್ರ ಸರಕಾರ ರಾಜ್ಯಗಳ ಅಭಿಪ್ರಾಯ ಪರಿಗಣಿಸದೆ ನಿರ್ಧಾರ ತೆಗೆದುಕೊಳ್ಳುವುದರಿಂದಾಗಿ ಈ ಎಡವಟ್ಟುಗಳೆಲ್ಲಾ ಆಗುತ್ತಿರುವುದು ಎಂಬುದು ಮಾತ್ರ ಸತ್ಯ.

ರಾಜ್ಯಗಳನ್ನು ಈ ರೀತಿ ಆರ್ಥಿಕವಾಗಿ, ಆಡಳಿತಾತ್ಮಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ದುರ್ಬಲಗೊಳಿಸುವ ರಾಜಕೀಯ ಕಳೆದ ಏಳು ವರ್ಷಗಳಲ್ಲಿ ನಡೆದಂತೆ ಹಿಂದೆಂದೂ ನಡೆದಿಲ್ಲ. ಹಿಂದಿನ ಕೇಂದ್ರ ಸರಕಾರಗಳೂ ರಾಜ್ಯಗಳ ಹಿತಾಸಕ್ತಿಗಳ ವಿರುದ್ಧ ವರ್ತಿಸಿದ ಉದಾಹರಣೆಗಳು ಸಾಕಷ್ಟು ಇದ್ದರೂ ಈ ರೀತಿಯಾಗಿ ರಾಜ್ಯಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ, ಆ ಮೂಲಕ ಸಂವಿಧಾನವನ್ನು ಬದಲಿಸದೆಯೇ ಸಂವಿಧಾನದ ಮೂಲ ಸಂರಚನೆಯ ಮೇಲೆ ನಿರಂತರ ಪ್ರಹಾರ ನಡೆಸುವ ವಿದ್ಯಮಾನ ಹಿಂದೆ ನಡೆದಿಲ್ಲ ಅಂತಲೇ ಹೇಳಬೇಕು. ಒಂದಂತೂ ಸರ್ವವಿಧಿತ. ಕೇಂದ್ರ ಸರಕಾರ ರಾಜ್ಯಗಳ ವಿರುದ್ಧ ಈ ರೀತಿಯ ಧೋರಣೆ ತೋರಿಸಿದರೆ, ಕೆಲವು ರಾಜ್ಯಗಳಾದರೂ ನಾವ್ಯಾಕೆ ಒಕ್ಕೂಟ ವ್ಯವಸ್ಥೆಯಲ್ಲಿ ಇರಬೇಕು ಎನ್ನುವ ಪ್ರಶ್ನೆ ಎತ್ತುವ ಅಪಾಯವಿದೆ. ರಾಜ್ಯಗಳ ಸಂವಿಧಾನದತ್ತ ಸಾರ್ವಭೌಮತೆ ಮತ್ತು ಸ್ವಾಯತ್ತತತೆಯ ಮೇಲೆ ಕೇಂದ್ರ ಸರಕಾರ ಸವಾರಿ ಮಾಡುವ ಈಗಿನ ಪರಿಪಾಠ ಮುಂದುವರಿದರೆ ದೇಶದ ಸಮಗ್ರತೆಗೆ ಅಪಾಯವಿದೆ. ಭಾರತದ ಪ್ರಧಾನಮಂತ್ರಿ ಚಕ್ರವರ್ತಿಯಲ್ಲ. ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಸಾಮಂತರಲ್ಲ. ಭಾರತ ದೇಶ ರಾಜ್ಯಗಳನ್ನು ಸೃಷ್ಟಿಸಿಲ್ಲ. ರಾಜ್ಯಗಳಿಂದಾಗಿ ಭಾರತ ದೇಶ ಹುಟ್ಟಿಕೊಂಡದ್ದು. ಈ ಚಾರಿತ್ರಿಕ ಸತ್ಯವನ್ನು ಕೇಂದ್ರ ಸರಕಾರ ಮರೆತರೆ, ಭಾರತವನ್ನು ಒಂದು ರಾಷ್ಟ್ರವಾಗಿ ಉಳಿಸಿಕೊಳ್ಳುವುದು ಕಷ್ಟವಾಗಬಹುದು.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.


ಇದನ್ನೂ ಓದಿ: ಬಹುಜನ ಭಾರತ: ತುಕ್ಕು ತಗುಲಿತೇ ಉಕ್ಕಿನ ರಕ್ಷಾ ಕವಚಕ್ಕೆ?

LEAVE A REPLY

Please enter your comment!
Please enter your name here