ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ಬಳಿಕ ಇದೀಗ ರಾಜ್ಯ ಘಟಕದ ಅಧ್ಯಕ್ಷರನ್ನು ಬದಲಾವಣೆ ಮಾಡಿದೆ. ಮಧ್ಯಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಹಿಂದುಳಿದ ವರ್ಗಗಳ ನಾಯಕ ಜಿತು ಪಟ್ವಾರಿ ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಒಬಿಸಿ ಸಮುದಾಯದ ನಾಯಕನಿಗೆ ಸಿಎಂ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಗೆ ಸೆಡ್ಡು ಹೊಡೆದಿದೆ.
ಇದಲ್ಲದೆ ಉಮಂಗ್ ಸಿಂಘರ್ ಅವರನ್ನು ಸಿಎಲ್‌ಪಿ ನಾಯಕರನ್ನಾಗಿ ಮತ್ತು ಹೇಮಂತ್ ಕಟಾರೆ ಅವರನ್ನು ಮಧ್ಯಪ್ರದೇಶದ ಉಪ ನಾಯಕರನ್ನಾಗಿ ನೇಮಿಸುವ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನುಮೋದಿಸಿದ್ದಾರೆ.
ತಕ್ಷಣದಿಂದ ಜಾರಿಗೆ ಬರುವಂತೆ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಜಿತು ಪಟ್ವಾರಿ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಎಕ್ಸ್‌ನಲ್ಲಿ ಮಾಡಿದ ತನ್ನ ಅಧಿಕೃತ ಪೋಸ್ಟ್‌ನಲ್ಲಿ ತಿಳಿಸಿದ್ದು, ನಿರ್ಗಮಿತ ಅಧ್ಯಕ್ಷರಾದ ಕಮಲ್ ನಾಥ್ ಅವರ ಕೊಡುಗೆಗಳನ್ನು ಪಕ್ಷವು ಪ್ರಶಂಸಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಮಧ್ಯಪ್ರದೇಶ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಮತ್ತು 2024ರಲ್ಲಿ ಲೋಕಸಭಾ ಚುನಾವಣೆಯನ್ನು ಮುಂದಿಟ್ಟು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಈ ಮಹತ್ವದ ಬದಲಾವಣೆ ಮಾಡಿದೆ.
ಜಿತು ಪಟ್ವಾರಿ ಯಾರು?
49 ವರ್ಷದ ಜಿತು ಪಟ್ವಾರಿ ಅವರು ಮಧ್ಯಪ್ರದೇಶದ ಪ್ರಭಾವಿ ಕಾಂಗ್ರೆಸ್ ನಾಯಕರಲ್ಲಿ ಓರ್ವರಾಗಿದ್ದಾರೆ. 2013ರಲ್ಲಿ ರಾವು ಕ್ಷೇತ್ರದಿಂದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ಜಿತು ಪಟ್ವಾರಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿದ್ದರು. ಗುಜರಾತ್ ಕಾಂಗ್ರೆಸ್‌ನ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2023ರ ಚುನಾವಣೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರು. ಅವರು 2018ರಲ್ಲಿ ರಾವು ಕ್ಷೇತ್ರದಿಂದ ಎರಡನೇ ಬಾರಿಗೆ ಚುನಾವಣೆಯಲ್ಲಿ ಗೆಲುವನ್ನು ಕಂಡಿದ್ದರು. ನಂತರ ಕಮಲ್ ನಾಥ್ ನೇತೃತ್ವದ ಸರ್ಕಾರದಲ್ಲಿ ಪಟ್ವಾರಿ ಅವರು ಉನ್ನತ ಶಿಕ್ಷಣ, ಯುವಜನ ಮತ್ತು ಕ್ರೀಡಾ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
2018ರಲ್ಲಿ ಕಮಲ್ ನಾಥ್ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ (MPCC) ಮುಖ್ಯಸ್ಥರನ್ನಾಗಿ ನೇಮಿಸಿದಾಗ, ಪಟ್ವಾರಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಏಪ್ರಿಲ್ 2020ರಲ್ಲಿ ಅವರನ್ನು ಕಮಲನಾಥ್ ಅವರು ಕಾಂಗ್ರೆಸ್‌ನ ರಾಜ್ಯ ಮಾಧ್ಯಮ ಘಟಕದ ಅಧ್ಯಕ್ಷರಾಗಿ ನೇಮಿಸಿದ್ದರು.
ಪಟ್ವಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನಿಕಟವರ್ತಿಯಾಗಿದ್ದಾರೆ. ಕಟಾರೆಯವರ ತಂದೆ ಸತ್ಯದೇವ್ ಕಟಾರೆ ಕೂಡ ರಾಜ್ಯದಲ್ಲಿ ಗೃಹ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಬಿಜೆಪಿಯು ಒಬಿಸಿ ಸಮುದಾಯದ ಮೋಹನ್ ಯಾದವ್ ಅವರನ್ನು ಸಿಎಂ ಆಗಿ, ಬ್ರಾಹ್ಮಣ ಸಮುದಾಯದ ರಾಜೇಂದ್ರ ಶುಕ್ಲಾ ಮತ್ತು ದಲಿತ ಸಮುದಾಯದ ಜಗದೀಶ್ ದೇವದಾ ಅವರನ್ನು ಡಿಸಿಎಂ ಆಗಿ ನೇಮಿಸಿದ ಬೆನ್ನಲ್ಲೇ ಕಾಂಗ್ರೆಸ್ ಈ ನೇಮಕಾತಿಯನ್ನು ಮಾಡಿದೆ.
ನವೆಂಬರ್ 17ರಂದು ನಡೆದ 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ಉಳಿಸಿಕೊಂಡರೆ, ಕಾಂಗ್ರೆಸ್ 66 ಸ್ಥಾನಗಳನ್ನು ಪಡೆದುಕೊಂಡಿದೆ. ಇದು 2018ರಲ್ಲಿ ಕಾಂಗ್ರೆಸ್ ಗೆದ್ದ 114 ಸ್ಥಾನಗಳಿಗಿಂತ ಕಡಿಮೆಯಾಗಿದೆ.


