ಜೋಧಪುರ: ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ಮೇಲ್ಜಾತಿಯ ನೆರೆಹೊರೆಯವರಿಂದ ಹಲ್ಲೆ ಮತ್ತು ಕಿರುಕುಳಕ್ಕೆ ಒಳಗಾದ 26 ವರ್ಷದ ದಲಿತ ನರ್ಸ್ ಮೇ 2ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ನ್ಯಾಯಕ್ಕಾಗಿ ಒತ್ತಾಯಿಸಿ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ.
ಸಂತ್ರಸ್ತೆಯ ಕುಟುಂಬದ ಪ್ರಕಾರ, ಏಪ್ರಿಲ್ 30ರಂದು ಅವರ ಅಂಗಳ ಶುಚಿಗೊಳಿಸುವಾಗ ಕೆಲವು ಹನಿ ನೀರು ಪಕ್ಕದ ಕಾರಿನ ಮೇಲೆ ಬಿದ್ದ ನಂತರ ಗಲಾಟೆಗೆ ಕಾರಣವಾಗಿತ್ತು. ಈ ಸಣ್ಣ ವಿಷಯವು ಶಂಕರ್ ಲಾಲ್ ಬಿಷ್ಣೋಯ್, ಅವರ ಪತ್ನಿ ಮತ್ತು ಅವರ ಪುತ್ರರಾದ ರಾಜೇಂದ್ರ ಅಲಿಯಾಸ್ ರಾಜ್ ಮತ್ತು ವಿಕಾಸ್ ಅಲಿಯಾಸ್ ವಿಕ್ಕಿ ಅವರು ನರ್ಸ್ ಮತ್ತು ಅವರ ಮನೆಯವರಿಗೆ ಜಾತಿ ಹಿಡಿದು ಹೀಯಾಳಿಸುತ್ತಾ ಅವರ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ. ದಾಳಿಯ ಸಮಯದಲ್ಲಿ ನರ್ಸ್ ಮತ್ತು ಆಕೆಯ ತಾಯಿ ಮತ್ತು ಕಿರಿಯ ಸಹೋದರನನ್ನು ಥಳಿಸಲಾಗಿದೆ ಎಂದು ವರದಿಯಾಗಿದೆ.
ದಾಳಿಕೋರರು ಸಂತ್ರಸ್ತೆಯ ಎದೆ ಮತ್ತು ಮುಖದ ಮೇಲೆ ಗೀಚಿ, ಅವಳನ್ನು ಅವಮಾನಿಸಿ, ಅವಳ ಜಾತಿ ಗುರುತನ್ನು ಗುರಿಯಾಗಿಸಿಕೊಂಡಿದ್ದರು ಎಂದು ಕುಟುಂಬ ಹೇಳಿಕೊಂಡಿದೆ.
ಆತ್ಮಹತ್ಯೆ ಸ್ಥಳದಲ್ಲಿ ದೊರೆತ ಡೆತ್ ನೋಟ್ ನಲ್ಲಿ ಅವರು ಆರೋಪಿಗಳನ್ನು ಸ್ಪಷ್ಟವಾಗಿ ಹೆಸರಿಸಿದ್ದಾರೆ ಮತ್ತು ಹಲ್ಲೆಯು ಜಾತಿ ಪ್ರೇರಿತವಾಗಿ ಎಂದು ವಿವರಿಸಿದ್ದಾರೆ. “ಅವರು ನನ್ನ ಎದೆಗೆ ಪರಚಿ, ನನ್ನ ಘನತೆಗೆ ಘಾಸಿಯನ್ನುಂಟು ಮಾಡಿದರು. ಜಾತಿ ತಾರತಮ್ಯ ಮತ್ತು ಕೊಳಕು ಮನಸ್ಥಿತಿಯಿಂದ ತುಂಬಿದ ಈ ಜನರ ಮಧ್ಯೆ ನನ್ನ ಜೀವನವನ್ನು ಸಾಗಿಸಲು ಬಯಸುವುದಿಲ್ಲ” ಎಂದು ಟಿಪ್ಪಣಿಯಲ್ಲಿ ಬರೆಯಲಾಗಿದೆ.
ಪತ್ರದಲ್ಲಿ ಪೊಲೀಸರ ನಿರ್ಲಕ್ಷ್ಯವನ್ನು ಸಹ ತೋರಿಸಿದೆ. ಮಾತಾ ಕಾ ಥಾನ್ ಪೊಲೀಸ್ ಠಾಣೆಯಲ್ಲಿ ಒಂಬತ್ತು ಗಂಟೆಗಳಿಗೂ ಹೆಚ್ಚು ಕಾಲ ಕಾದಿದ್ದೆವು ಎಂದು ಕುಟುಂಬ ಹೇಳಿದೆ. ಆದರೆ ಆರೋಪಿಗಳ ವಿರುದ್ಧ ಸಣ್ಣಪುಟ್ಟ ಆರೋಪಗಳನ್ನು ಮಾತ್ರ ದಾಖಲಿಸಲಾಗಿದೆ, ನಂತರ ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಯಿತು. ಇದರಲ್ಲಿ ಸ್ಟೇಷನ್ ಹೌಸ್ ಆಫೀಸರ್ (SHO) ಭನ್ವರ್ ಸಿಂಗ್ ಜಖಡ್ ಮತ್ತು ಸ್ಥಳೀಯ ಕೌನ್ಸಿಲರ್ ಜಾನಿ ದೇವಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. “ಅವರಿಗೆ ಏನೂ ಆಗುವುದಿಲ್ಲ” ಎಂದು SHO ಹೇಳಿದ್ದರು ಎಂದು ನರ್ಸ್ ಆರೋಪಿಸಿದ್ದಾರೆ ಮತ್ತು ಕೌನ್ಸಿಲರ್ ಅವರು ಆರೋಪಿಗಳು “ಉನ್ನತ ಮಟ್ಟದ ಸಂಪರ್ಕಗಳನ್ನು ಹೊಂದಿದ್ದಾರೆ” ಎಂದು ಹೇಳಿದ್ದರು ಎಂದು ಪತ್ರದಲ್ಲಿ ವಿವರಿಸಲಾಗಿದೆ.
“ಯಾರೂ ನನ್ನ ಪರವಾಗಿ ನಿಲ್ಲಲ್ಲಿ. ಪೊಲೀಸರು ನಮ್ಮವರಲ್ಲ. ವ್ಯವಸ್ಥೆಯು ನಮ್ಮದಲ್ಲ. ಇಲ್ಲಿ ನನ್ನದೇನೂ ಅಲ್ಲ” ಎಂದು ಡೆತ್ ನೋಟಿನಲ್ಲಿ ಇವು ಕೊನೆ ಮಾತುಗಳು ಎಂದು ನರ್ಸ್ ಬರೆದಿದ್ದಾರೆ
ಈ ಘಟನೆಯು ಪ್ರದೇಶದಲ್ಲಿ ಆಕ್ರೋಶದ ಪ್ರತಿಭಟನೆಗಳಿಗೆ ಕಾರಣವಾಗಿದೆ. ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನಾಕಾರರು ಜಮಾಯಿಸಿ ಭದ್ವಾಸಿಯಾ ರಸ್ತೆಯನ್ನು ತಡೆದು, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಮತ್ತು SHO ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಸಂತ್ರಸ್ತ ನರ್ಸ್ ನ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲು ನಿರಾಕರಿಸಿದ್ದಾರೆ.
ಪ್ರತಿಭಟನೆಗಳು ಮತ್ತು ಸಾರ್ವಜನಿಕರ ಆಕ್ರೋಶದ ನಂತರ, ಪೊಲೀಸರು ಈಗ ನಾಲ್ವರು ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣವನ್ನು ದಾಖಲಿಸಿದ್ದಾರೆ.
ಯುಪಿ| ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಅಪ್ರಾಪ್ತ ಸೇರಿದಂತೆ ಇಬ್ಬರ ಬಂಧನ


