ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಮೇ 3 ರಂದು ನಡೆದ ರಸ್ತೆ ಗಲಭೆಯ ಘಟನೆಯ ಸಂದರ್ಭದಲ್ಲಿ 30 ವರ್ಷದ ಮುಸ್ಲಿಂ ವ್ಯಕ್ತಿ ಅಮೀರ್ ಪಠಾಣ್ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಸ್ಥಳೀಯ ಪತ್ರಕರ್ತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಗಲಾಟೆ ಸಂದರ್ಭದಲ್ಲಿ ಪತ್ರಕರ್ತನು ಅಮೀರ್ ಪಠಾಣ್ ಮೇಲೆ ಧರ್ಮಾಧಾರಿತವಾಗಿ ನಿಂದನೆ ಮಾಡಿದ್ದಾನೆ. ನೀನಿ ಪಾಕಿಸ್ತಾನಿಯೋ ಅಥವಾ ಕಾಶ್ಮೀರಿಯೋ” ಎಂದು ಪ್ರಶ್ನಿಸಿದ್ದಾನೆ. ಬಳಿಕ ಪಠಾಣ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಘಟನೆಯನ್ನು ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆನ್‌ಲೈನ್‌ನಲ್ಲಿ ವೀಡಿಯೊ ಪ್ರಸಾರವಾಗಿದ್ದರಿಂದ ಪಠಾಣ ಅವಮಾನಗೊಂಡಿದ್ದು, ಪತ್ರಕರ್ತನ ಬೆದರಿಕೆಗಳಿಂದ ನೊಂದಿದ್ದ ಅವರು ಮರುದಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಟೆಲಿಕಾಂ ಕಂಪನಿಯಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಪಠಾಣ್, ಮೇ 4 ರಂದು ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಅವರ ಪತ್ನಿ ಸಮ್ರಿನ್ ಪಠಾಣ್ ನೀಡಿದ ದೂರಿನ ನಂತರ ಮೇ 5 ರಂದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಔಪಚಾರಿಕ ಪ್ರಕರಣವನ್ನು ದಾಖಲಿಸಲಾಗಿದೆ.
ಡಿಜಿಟಲ್ ಸುದ್ದಿ ವೇದಿಕೆಯೊಂದಿಗೆ ಸಂಬಂಧ ಹೊಂದಿರುವ ಪತ್ರಕರ್ತ ಎಂದು ಗುರುತಿಸಲಾದ ಆರೋಪಿ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ. ಎಂಐಸಿಡಿ ಲಾತೂರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಈ ಘಟನೆ ಮೇ 3 ರ ರಾತ್ರಿ ನಡೆದಿದೆ.
ಧಾರಾಶಿವ್ ಜಿಲ್ಲೆಯ ಖಾಸಗಿ ಬ್ಯಾಂಕ್‌ನಲ್ಲಿ ಉಪ ವ್ಯವಸ್ಥಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ 29 ವರ್ಷದ ಸಮ್ರಿನ್, ತನ್ನ ಪತಿಯನ್ನು ಸಂವಿಧಾನ್ ಚೌಕ್‌ನಿಂದ ಕರೆದುಕೊಂಡು ಹೋಗಲು ಎಂದಿನಂತೆ ಕರೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಕರೆಯ ಸಮಯದಲ್ಲಿ, ತನ್ನ ಪತಿ ಒಬ್ಬ ವ್ಯಕ್ತಿಗೆ ತನಗೆ ನೋವುಂಟು ಮಾಡಬೇಡಿ ಎಂದು ಬೇಡಿಕೊಳ್ಳುವುದು ಹಾಗೂ ತನ್ನ ತಪ್ಪಿಲ್ಲ ಎಂದು ಮನವಿ ಮಾಡುತ್ತಿರುವುದನ್ನು ಕೇಳಿಸಿಕೊಂಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
“ಫೋನ್ ಕರೆಯ ಸಮಯದಲ್ಲಿ, ಇನ್ನೊಬ್ಬ ವ್ಯಕ್ತಿ ನನ್ನ ಪತಿಗೆ ತಾನು ಪತ್ರಕರ್ತ ಎಂದು ಹೇಳುವುದನ್ನು ನಾನು ಕೇಳಿಸಿಕೊಂಡೆ. ಅವನು ನನ್ನ ಪತಿ ಕಾಶ್ಮೀರದವನೋ ಅಥವಾ ಪಾಕಿಸ್ತಾನದವನೋ ಎಂದು ಪ್ರಶ್ನಿಸಿದನು. ನಂತರ ಪತಿಗೆ ಪತ್ರಕರ್ತ ಹೊಡೆದಿದ್ದಾನೆ. ನನ್ನ ಪತಿ ನೋವಿನಿಂದ ಕಿರುಚುವುದನ್ನು ನಾನು ಕೇಳಿದೆ” ಎಂದು ಸಮ್ರಿನ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಗಾಬರಿಗೊಂಡ ಸಮ್ರಿನ್ ಸ್ಥಳಕ್ಕೆ ಧಾವಿಸಿ ನೋಡಿದಾಗ ಎಂಎಚ್24 ಬಿಆರ್ 7008 ನೋಂದಣಿ ಸಂಖ್ಯೆಯ ಕಾರನ್ನು ಸ್ಥಳದಲ್ಲಿ ಕಂಡರು. ಅದನ್ನು ದಾಳಿಕೋರ ಬಳಸಿದ್ದಾನೆಂದು ನಂಬಲಾಗಿದೆ. ಆದರೂ, ಆಕೆ ಬರುವ ಹೊತ್ತಿಗೆ, ದಾಳಿಕೋರ ಸ್ಥಳದಿಂದ ಪರಾರಿಯಾಗಿದ್ದ.
ಹಲ್ಲೆಕೋರನು ಹಲ್ಲೆಯ ಚಿತ್ರಗಳು ಮತ್ತು ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಮ್ರಿನ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತನ್ನ ಪತಿ ಅದನ್ನು ಮುಂದುವರಿಸದಂತೆ ಬೇಡಿಕೊಂಡಳು. ಈ ಘಟನೆಯು ಅಮೀರ್ ಅವರನ್ನು ತೀವ್ರವಾಗಿ ತೊಂದರೆಗೊಳಿಸಿದೆ ಎಂದು ಅವರು ಹೇಳಿದ್ದಾರೆ.
“ತಾನು ಭಾರತೀಯನೆಂದು ಪಠಾಣ್ ಹೇಳಿದನು. ಆದರೆ ಆರೋಪಿಯು ಅವನನ್ನು ಸಾರ್ವಜನಿಕವಾಗಿ ಅವಮಾನಿಸಿ ಪಾಕಿಸ್ತಾನಿ ಎಂದು ಕರೆದು ವೀಡಿಯೊವನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದನು. ನೋವಿನಿಂದ ಅವರು ಇನ್ನು ಮುಂದೆ ಬದುಕಲು ಬಯಸುವುದಿಲ್ಲ ಎಂದು ಹೇಳಿದರು; ನಾನು ಅವರನ್ನು ಸಮಾಧಾನಪಡಿಸಿದೆ. ಅವರ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿದೆ. ಮರುದಿನ, ವೀಡಿಯೊ ಪ್ರಸಾರವಾಗಿದೆಯೇ ಎಂದು ನೋಡಲು ಅವರು ನಿರಂತರವಾಗಿ ಇಂಟರ್ನೆಟ್ ಅನ್ನು ಪರಿಶೀಲಿಸುತ್ತಿದ್ದರು” ಎಂದು ಸಮ್ರಿನ್ ವಿವರಿಸಿದರು.
ಮೇ 4 ರ ಸಂಜೆ, ಕುಟುಂಬವರು ಮದುವೆಯ ಆರತಕ್ಷತೆಗೆ ಹೋಗುತ್ತಿದ್ದಾಗ, ಅಮೀರ್ ಅವರಿಗೆಲ್ಲಾ ಮೊದಲು ತೆರಳುವಂತೆ ಹೇಳಿದ್ದು, ಸ್ವಲ್ಪ ಹೊತ್ತಿನ ಬಳಿಕ ಸೇರುವುದಾಗಿ ಭರವಸೆ ನೀಡಿದ್ದರು. ಸುಮಾರು ಒಂದು ಗಂಟೆಯ ನಂತರ ಹಿಂತಿರುಗಿ ಬಂದು ನೋಡಿದಾಗ, ಅಮೀರ್ ಪಠಾಣ್ ದುಪಟ್ಟಾದಿಂದ ನೇಣು ಬಿಗಿದುಕೊಂಡಿರುವುದನ್ನು ಸಮ್ರಿನ್ ನೋಡಿದ್ದಾರೆ.
ಕುಟುಂಬದವರು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಲ್ಲಿನ ವೈದ್ಯರು ಅವರನ್ನು ಲಾತೂರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಕುಟುಂಬದವರು ಶಂಕಿತನ ಹೆಸರು ಮತ್ತು ವಾಹನ ನೋಂದಣಿ ಸಂಖ್ಯೆಯನ್ನು ನೀಡಿದ್ದರೂ, ಪೊಲೀಸರು ಆರಂಭದಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
“ನಾವು ಪೊಲೀಸರಿಗೆ ಕಾರು ಸಂಖ್ಯೆ ಮತ್ತು ವಾಹನ ಚಾಲಕನ ಹೆಸರನ್ನು ನೀಡಿದ್ದೇವೆ. ಆದರೆ, ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ” ಎಂದು ಸಮ್ರಿನ್ ತಂದೆ ಅತ್ತೌಲ್ಲಾ ಪಠಾಣ್ ಹೇಳಿದರು.
“ಯಾವುದೇ ಆತ್ಮಹತ್ಯೆ ಪತ್ರ ಇರಲಿಲ್ಲ. ಆಪಾದಿತ ಘಟನೆಯ ಸಮಯದಲ್ಲಿ ಸ್ಥಳದಲ್ಲಿ ಇಲ್ಲದ ಪಠಾಣ್ ಅವರ ಪತ್ನಿಯ ಹೇಳಿಕೆಯ ಆಧಾರದ ಮೇಲೆ ನಾವು ಆತ್ಮಹತ್ಯಾ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದೇವೆ. ಆರೋಪಿಯು ಮೃತ ವ್ಯಕ್ತಿಯನ್ನು ನೀವು ಪಾಕಿಸ್ತಾನಿಯೇ ಎಂದು ಕೇಳಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ನಾವು ತನಿಖೆ ನಡೆಸುತ್ತಿದ್ದೇವೆ, ಆರೋಪಿಯನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಲಾತೂರ್ ಪೊಲೀಸ್ ವರಿಷ್ಠಾಧಿಕಾರಿ ಸೋಮಯ್ ಮುಂಡೆ ಹೇಳಿದ್ದಾರೆ.
ಪಾಕಿಸ್ತಾನದ ಶೆಲ್ ದಾಳಿಗೆ ಆಂಧ್ರಪ್ರದೇಶದ ಸೈನಿಕ ಮುರಳಿ ನಾಯಕ್ ಹುತಾತ್ಮ


