ಹಿಮಾಚಲ ಪ್ರದೇಶದ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಕಾರ್ಯಕರ್ತರು, ಮುಖಂಡರು, ಸಹಾನುಭೂತಿ ಹೊಂದಿರುವವರಿಗೆ ಇದು ಗೊತ್ತಿದ್ದರೂ ಬಹಿರಂಗವಾಗಿ ಮಾತನಾಡುವುದಿಲ್ಲ. ಕ್ಯಾಮೆರಾ ಮುಂದೆ ಬಿಜೆಪಿ ಒಗ್ಗಟ್ಟು ಪ್ರದರ್ಶಿಸುತ್ತದೆ. ಆದರೆ ಈಗ ಕೇಂದ್ರ ನಾಯಕತ್ವದಲ್ಲಿ ಗುರುತಿಸಿಕೊಂಡಿರುವ ಗುಡ್ಡಗಾಡು ರಾಜ್ಯದ ಇಬ್ಬರು ನಾಯಕರ ನಡುವೆ ಸಂಬಂಧ ಸರಿ ಇಲ್ಲ ಎಂದು ಇತ್ತೀಚೆಗೆ ‘ನ್ಯೂಸ್ ಲಾಂಡ್ರಿ’ ವರದಿ ಮಾಡಿದೆ.
ಹಿಮಾಚಲಪ್ರದೇಶ ವಿಧಾನಸಭೆಗೆ ಶನಿವಾರ ಮತದಾನ ನಡೆದಿದೆ. ಶೇ.65.20ರಷ್ಟು ಮತದಾನವಾಗಿದೆ. ಆದರೆ ಬಿಜೆಪಿಯು ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೇ ಚುನಾವಣೆಯನ್ನು ಎದುರಿಸಿದೆ ಎಂಬುದು ರಾಜಕೀಯ ಪಡೆಸಾಲೆಯಲ್ಲಿ ಚರ್ಚೆಯಾಗುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಆಗಸ್ಟ್‌ನಲ್ಲಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿಯಾದಾಗ ಭಿನ್ನಾಭಿಪ್ರಾಯ ಸ್ಪಷ್ಟವಾಗಿ ಕಂಡುಬಂತು. ಎಎನ್‌ಐ ವರದಿ ಪ್ರಕಾರ, ಅನುರಾಗ್ ಅವರು ಹಿಮಾಚಲ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರೊಂದಿಗೆ ನಡ್ಡಾ ಅವರನ್ನು ಭೇಟಿಯಾಗಿದ್ದರು.
ಆದರೆ ಈ ಸಭೆಗೆ ಸಂಬಂಧಿಸಿದಂತೆ ಎಎನ್‌ಐ ಪ್ರಕಟಿಸಿದ ವೀಡಿಯೊ ತುಣುಕಿನಲ್ಲಿ ಅನುರಾಗ್ ಮತ್ತು ನಡ್ಡಾ ಮೀಟರ್‌ಗಳ ಅಂತರದಲ್ಲಿ ನಿಂತಿರುವುದು ಕಂಡು ಬಂತು. ಯಾವುದೇ ಸಂವಹನವನ್ನೂ ನಡೆಸಲಿಲ್ಲ. ಜೈರಾಮ್ ಠಾಕೂರ್ ಅವರು ನಡ್ಡಾ ಅವರಿಗೆ ಪುಷ್ಪಗುಚ್ಛ, ಸಾಂಪ್ರದಾಯಿಕ ಹಿಮಾಚಲಿ ಕ್ಯಾಪ್ ಮತ್ತು ಶಾಲು ನೀಡಿದರು. ಇಬ್ಬರೂ ಅಪ್ಪುಗೆ ಹಾಗೂ ಹಸ್ತಲಾಘವ ಮಾಡಿದರು. ಆದರೆ ನಡ್ಡಾ ಅವರು ನಗುತ್ತಾ ಪಕ್ಕದಲ್ಲಿ ನಿಂತಿರುವ ಅನುರಾಗ್ ಕಡೆಗೆ ನೋಡಲೇ ಇಲ್ಲ.
ನವೆಂಬರ್ 12ರಂದು 68 ಕ್ಷೇತ್ರಗಳಿಗೆ ಮತದಾನವಾಗಿದೆ. ಆದರೆ ರಾಜ್ಯದ ಸುಮಾರು ಮೂರನೇ ಒಂದು ಭಾಗದಷ್ಟು ಸ್ಥಳೀಯ ಬಿಜೆಪಿ ನಾಯಕರು ಬಂಡಾಯದ ಬಾವುಟ ಹಾರಿಸಿದ್ದಾರೆ ಎಂದು ಚುನಾವಣಾ ಪೂರ್ವದಲ್ಲಿ ಪ್ರಕಟವಾಗಿರುವ ‘ನ್ಯೂಸ್‌ಲಾಂಡ್ರಿ ವರದಿ ’ಉಲ್ಲೇಖಿಸಿದೆ. ಅವರಲ್ಲಿ ಕೆಲವರು ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದಾರೆ. ಅಂಥವರಲ್ಲಿ ಆರು ಮಂದಿಯನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಈ ಕುರಿತು ವಿಸ್ತೃತವಾಗಿ ವರದಿ ಮಾಡಿರುವ ನ್ಯೂಸ್‌ಲಾಂಡ್ರಿ, “ಸ್ಥಳೀಯ ಬಂಡಾಯವು ಹೈಕಮಾಂಡ್‌ನೊಳಗಿನ ಹಗೆತನದೊಂದಿಗೆ ನಂಟು ಹೊಂದಿದೆ” ಎಂದು ವಿಶ್ಲೇಷಿಸಿದೆ.
ಹಿಮಾಚಲಪ್ರದೇಶದ ಬಿಜೆಪಿಯೊಳಗೆ ನಡ್ಡಾ ಮತ್ತು ಅನುರಾಗ್ ಎಂದು ಎರಡು ಬಣಗಳಾಗಿವೆ. ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸೇರಿದಂತೆ ನಡ್ಡಾ ಅವರಿಗೆ ಆಪ್ತರು ಎನ್ನಲಾದ ಹೆಚ್ಚಿನವರು ಬಿಜೆಪಿಯ ಟಿಕೆಟ್ ಪಡೆದಿದ್ದಾರೆ. ಆದರೆ ಹೊರಗುಳಿದಿರುವ ಮತ್ತು ‘ಬಂಡಾಯಗಾರರು’ ಎಂದು ಕರೆಯಲ್ಪಟ್ಟಿರುವ ಗಮನಾರ್ಹ ಸಂಖ್ಯೆಯ ನಾಯಕರು ಅನುರಾಗ್ ಠಾಕೂರ್ ಮತ್ತು ಅವರ ತಂದೆ, ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರಿಗೆ ನಿಷ್ಠರೆಂಬುದು ಚರ್ಚೆಯ ವಿಷಯವಾಗಿದೆ.
ನಡ್ಡಾ ಮತ್ತು ಅನುರಾಗ್ ಅವರ ನಡುವಿನ ಭಿನ್ನಾಭಿಪ್ರಾಯಗಳು 2020ರಲ್ಲಿ ಸಾರ್ವಜನಿಕವಾಗಿ ಹೊರಬಿದ್ದವು. ನವೆಂಬರ್‌ನಲ್ಲಿ ಕಂಗ್ರಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರಾದ ಅನುರಾಗ್ ತೀವ್ರ ವಾಗ್ದಾಳಿ ನಡೆಸಿದ್ದರು. ತಮ್ಮ ‘ಕನಸಿನ ಯೋಜನೆ’ ಎಂದೇ ಭಾವಿಸಿರುವ ವಿಶ್ವವಿದ್ಯಾನಿಲಯ ಯೋಜನೆಗೆ ಭೂಮಿ ವರ್ಗಾವಣೆಯಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡಿದ್ದನ್ನು ಅವರು ವಿರೋಧಿಸಿದ್ದರು.
ಹಿಮಾಚಲ ಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ (CUHP) ಸಂಬಂಧಿಸಿದ ಪ್ರಶ್ನೆ ಇದಾಗಿತ್ತು. “ಮಾಜಿ ಸಿಎಂ ಪ್ರೇಮ್ ಕುಮಾರ್ ಧುಮಾಲ್ ಅವರ ಅವಧಿಯಲ್ಲಿ 11 ವರ್ಷಗಳ ಹಿಂದೆ ರಾಜ್ಯಕ್ಕೆ ಮಂಜೂರು ಮಾಡಿದ ಯೋಜನೆಯನ್ನು ಪೂರ್ಣಗೊಳಿಸಲು ವಿಳಂಬವಾಗುತ್ತಿದೆ. ಇದಕ್ಕೆ ಸಿಎಂ ಕೂಡ ಕಾರಣ” ಎಂದು ದೂರಿದ್ದಾಗಿ ವರದಿಯಾಗಿತ್ತು.
ಜೈರಾಮ್‌ಗೆ ಮುಜುಗರವಾಯಿತು. “ಈ ವಿಷಯವನ್ನು ಅನುರಾಗ್ ಠಾಕೂರ್ ಅವರು ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತಾಪಿಸಬಾರದಿತ್ತು” ಎಂದಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.
ಎರಡು ದಿನಗಳ ನಂತರ, ನಡ್ಡಾ ಅವರು ಜೈರಾಮ್ ಅವರ ಪರ ನಿಂತರು. ರ್ಯಾಲಿಯಲ್ಲಿ ಸಿಎಂ ಅವರನ್ನು ಶ್ಲಾಘಿಸಿದ ಅವರು, “ಅಭಿವೃದ್ಧಿಯ ವಿಷಯಕ್ಕೆ ಬಂದಾಗ ತಾಳ್ಮೆಯಿಂದಿರಬೇಕು” ಎಂದು ಅನುರಾಗ್ ಅವರಿಗೆ ಕುಟುಕಿದ್ದರು.
ಜೈರಾಮ್ ಮತ್ತು ನಡ್ಡಾ 1980ರ ದಶಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾಗಿ ಹಿಮಾಚಲ ರಾಜಕೀಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಡ್ಡಾ ಅವರು ಬಿಹಾರದಲ್ಲಿ ಜನಿಸಿದವರು. ಆದರೆ 1980ರ ದಶಕದ ಆರಂಭದಲ್ಲಿ ಎಬಿವಿಪಿ ಮೂಲಕ ಹಿಮಾಚಲದಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಂಡರು.
ಅನುರಾಗ್ ತಂದೆ ಧುಮಾಲ್ ಅವರು ನಡ್ಡಾಗಿಂತ ಹಿರಿಯವರು. 1982ರಲ್ಲಿ ಧುಮಾಲ್ ಅವರು ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಆ ಸಮಯದಲ್ಲಿ ನಡ್ಡಾ ಅವರು ಹಿಮಾಚಲದಲ್ಲಿ ಎಬಿವಿಪಿಯ ಕಾರ್ಯದರ್ಶಿಯಾಗಿದ್ದರು.
1989ರಲ್ಲಿ ಧುಮಾಲ್ ಅವರು ಮೊದಲ ಭಾರಿಗೆ ಲೋಕಸಭೆಯನ್ನು ಪ್ರವೇಶಿಸಿದಾಗ, ಆ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ನಡ್ಡಾ ಅವರು ಬಿಜೆಪಿ ಯುವಮೋರ್ಚಾದ ಉಸ್ತುವಾರಿಯಾಗಿದ್ದರು.
ನಡ್ಡಾ 1993ರಲ್ಲಿ ಹಿಮಾಚಲದಿಂದ ಮೊದಲ ಬಾರಿಗೆ ಟಿಕೆಟ್ ಪಡೆದರು. ಅವರು ತಮ್ಮ ಸ್ಥಾನವನ್ನು ಗೆದ್ದರು. ಆದರೆ ಕಾಂಗ್ರೆಸ್ ಬಹುಮತ ಗಳಿಸಿತು. ಪ್ರತಿಪಕ್ಷದ ನಾಯಕರಾಗಿ ಐದು ವರ್ಷಗಳ ನಂತರ, ನಡ್ಡಾ 1998 ರಲ್ಲಿ ಮತ್ತೊಮ್ಮೆ ಗೆದ್ದರು ಮತ್ತು ಬಿಜೆಪಿ ಅಧಿಕಾರಕ್ಕೆ ಬಂದಿತು. ಧುಮಾಲ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ನಡ್ಡಾ ಅವರು ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ’, ‘ಸಂಸದೀಯ ವ್ಯವಹಾರಗಳ ಖಾತೆ’ ಸಚಿವರಾದರು.
2007ರಲ್ಲಿ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗ, ನಡ್ಡಾ ಅವರಿಗೆ ಅರಣ್ಯ, ಪರಿಸರ ಮತ್ತು ವಿಜ್ಞಾನ- ತಂತ್ರಜ್ಞಾನ ಖಾತೆಗಳನ್ನು ನೀಡಲಾಯಿತು.
1990ರಲ್ಲಿ ರಾಜ್ಯದಲ್ಲಿ ಮೊದಲ ಬಿಜೆಪಿ ಸರ್ಕಾರವನ್ನು ರಚಿಸಿದ ಶಾಂತ ಕುಮಾರ್ ಅವರನ್ನು ಬದಿಗೆ ತಳ್ಳಿದವರು ಧುಮಾಲ್. 2007 ಮತ್ತು 2012ರ ನಡುವೆ ನಡ್ಡಾ ಮತ್ತು ಇತರ ಬಿಜೆಪಿ ನಾಯಕರು ಪಕ್ಷದ ಮೇಲೆ ಧುಮಾಲ್ ಅವರ ಹಿಡಿತವನ್ನು ಪ್ರಶ್ನಿಸಿದರು. 2010ರ ಹೊತ್ತಿಗೆ, ಧುಮಾಲ್ ಮತ್ತು ನಡ್ಡಾ ನಡುವಿನ ಭಿನ್ನಾಭಿಪ್ರಾಯಗಳು ಬೆಳೆದವು.
ಇದನ್ನೂ ಓದಿರಿ: ವಂದೇಭಾರತ್ ಮೈಸೂರು-ಬೆಂಗಳೂರು ಪ್ರಯಾಣ; 5 ನಿಮಿಷಕ್ಕಾಗಿ ₹415 ಹೆಚ್ಚುವರಿ ಪಾವತಿಸಿ!
ದೆಹಲಿಯಲ್ಲಿ ನಡ್ಡಾ ಶಕ್ತಿಶಾಲಿಯಾದರು. 2010ರಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. 2012ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. “ದೆಹಲಿಯಲ್ಲಿ ಕುಳಿತ ನಡ್ಡಾ ಅವರ ಹಸ್ತಕ್ಷೇಪ ಹಿಮಾಚಲ ಪ್ರದೇಶದಲ್ಲೂ ಇಣುಕಲಾರಂಭಿಸಿತು” ಎಂದು ಪತ್ರಕರ್ತ ಹೇಳುತ್ತಾರೆ. ಆದರೆ ಧುಮಾಲ್ ರಾಜ್ಯದಲ್ಲಿ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದಾರೆ.
ಧುಮಾಲ್ ಅವರ ಅಧಿಕಾರಾವಧಿಯಲ್ಲಿ ಅವರ ಮಗ ಅನುರಾಗ್ ಠಾಕೂರ್ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದರು. 2000ನೇ ಇಸವಿಯಲ್ಲಿ ತಮ್ಮ 25ನೇ ವಯಸ್ಸಿನಲ್ಲಿಯೇ ಠಾಕೂರ್ ಅವರು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದರು. ರಾಜ್ಯ ಕ್ರಿಕೆಟ್ ಮಂಡಳಿಗೆ ಏರಿದ ಅತ್ಯಂತ ಕಿರಿಯ ವ್ಯಕ್ತಿ ಅವರಾಗಿದ್ದರು. 2008ರಲ್ಲಿ, ಅವರು ಹಮೀರ್‌ಪುರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
ಇಂತಹ ರಾಜಕೀಯ ಏರಿಳಿತ ಕಂಡಿರುವ ಹಿಮಾಚಲಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆಯೋ ಸೋಲುತ್ತದೆಯೋ ಎಂಬ ಕುತೂಹಲ ಹುಟ್ಟಿಸಿದೆ.
(ಪೂರ್ಣ ವಿಶ್ಲೇಷಣೆ- ‘ನ್ಯೂಸ್‌ಲಾಂಡ್ರಿ’ಯಲ್ಲಿ ಲಭ್ಯ)


