Homeಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆಕೋಲಾರದಲ್ಲಿ ಸಿದ್ದರಾಮಯ್ಯ: ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣ ಹೀಗಿದೆ

ಕೋಲಾರದಲ್ಲಿ ಸಿದ್ದರಾಮಯ್ಯ: ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣ ಹೀಗಿದೆ

ಅಹಿಂದ ಚಳವಳಿಗೆ ಬುನಾದಿಯಾಗಿದ್ದು ಕೋಲಾರ ಜಿಲ್ಲೆ. 1998ರಲ್ಲಿ ಕೋಲಾರದಲ್ಲಿ ನಡೆದ ಬೃಹತ್ ಅಹಿಂದ ಸಮಾವೇಶ ಅದಕ್ಕೆ ಸಾಕ್ಷಿ. ಅದನ್ನು ಸಿದ್ದರಾಮಯ್ಯ ಉದ್ಘಾಟಿಸಿದ್ದರು.

- Advertisement -
- Advertisement -

ಇಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಬೇಕೆಂದು ಬಯಸುತ್ತಿರುವ ಕ್ಷೇತ್ರಗಳಲ್ಲಿ ಕೋಲಾರವು ಒಂದಾಗಿರುವುದರಿಂದ ಇಂದಿನ ಅವರ ಭೇಟಿಗೆ ವಿಶೇ‍ಷ ಮಹತ್ವ ದೊರೆತಿದೆ.

ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, “ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೇವೆ. ಕೋಲಾರದವರು ನನನ್ನು ಕರೆಯುತ್ತಿದ್ದಾರೆ, ಇಲ್ಲಿನ ಶಾಸಕ ಶ್ರೀನಿವಾಸ ಗೌಡ ಈ ಬಾರಿ ಸ್ಪರ್ಧಿಸುತ್ತಿಲ್ಲ. ಹೀಗಾಗಿ ನೀವು ಸ್ಪರ್ಧಿಸಿ ಎಂದು ಒತ್ತಡ ಹೇರುತ್ತಿದ್ದಾರೆ. ಪರಿಶೀಲಿಸುತ್ತಿದ್ದೇನೆ” ಎಂದಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣ ಈ ಕೆಳಕಂಡತಿದೆ.

ಕೋಲಾರ ಎಂದರೆ ನೆನಪಾಗುವುದು ಕೆಜಿಎಫ್ ಚಿನ್ನದ ಗಣಿ. ಬಹುಕಾಲ ಭಾರತದ ಚಿನ್ನದ ಬೊಕ್ಕಸ ತುಂಬಿಸಿದ ಕೀರ್ತಿ ಕೋಲಾರದ್ದು. ಏಷ್ಯಾದಲ್ಲಿಯೇ ಮೊದಲಿಗೆ ವಿದ್ಯುತ್ ಪಡೆದ ಜಿಲ್ಲೆ ಸಹ ಹೌದು. ಏಷ್ಯಾದ ಪ್ರಪಥಮ ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ಲಾಂಟ್ ಎಂದು ಹೇಳಲಾಗುವ ಶಿವನಸಮುದ್ರದಿಂದ ವಿದ್ಯುತ್ ಮೊದಲು ಕೊಟ್ಟಿದ್ದೇ ಕೆಜಿಎಫ್ ಚಿನ್ನದ ಗಣಿಗೆ. ಭಾರತದ ನೆಲದಲ್ಲಿ ಮೊಟ್ಟಮೊದಲ ಬಾರಿಗೆ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ ಹೈದರಾಲಿ ಹುಟ್ಟಿದ್ದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆಯಲ್ಲಿ. ನಮ್ಮ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಕೋಲಾರದವರು. ಸಂವಿಧಾನ ರಚನಾ ಸಮಿತಿ ಸದಸ್ಯರಾಗಿದ್ದ ಟಿ.ಚನ್ನಯ್ಯ, ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ ಗುಂಡಪ್ಪ, ದಿವಾನರಾಗಿದ್ದ ಸರ್.ಎಂ ವಿಶ್ವೇಶ್ವರಯ್ಯ, ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯರಿಂದ ಶುರುವಾಗಿ ಇಂದಿನ ನೆಲಮೂಲದ ಚಿಂತಕರಾದ ಕೋಟಗಾನಹಳ್ಳಿ ರಾಮಯ್ಯ, ವಿಜ್ಞಾನಿಗಳಾದ ಸಿ.ಎನ್.ಆರ್ ರಾವ್ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಗೋಪಾಲಗೌಡರವರೆಗೆ ಹಲವಾರು ಸಾಧಕರನ್ನು ನಾಡಿಗೆ ಪರಿಚಯಿಸಿದ ಜಿಲ್ಲೆಯಿದು.

ಕೆ.ಸಿ ರೆಡ್ಡಿಕುವಲಾಲಪುರ ಎಂಬ ಹೆಸರಿನಿಂದ ಕರೆಯುತ್ತಿದ್ದ ಕೋಲಾರ ಹಿಂದೆ ಗಂಗರ ರಾಜಧಾನಿಯಾಗಿತ್ತು. ಹಲವು ರಾಜವಂಶಗಳ ಆಳ್ವಿಕೆಯ ನಡುವೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಇಲ್ಲಿ ಹಲವಾರು ದೇವಾಲಯಗಳು ನಿರ್ಮಾಣಗೊಂಡಿವೆ. ಜಿಲ್ಲೆಯ ಇತಿಹಾಸ ಹೇಳುವ ನೂರಾರು ಶಾಸನಗಳು ಪತ್ತೆಯಾಗಿವೆ. ದಲಿತ ಚಳವಳಿ ಮತ್ತು ಅಹಿಂದ ಚಳವಳಿಗೆ ಭದ್ರ ಬುನಾದಿಯಾದ ಜಿಲ್ಲೆ ಕೋಲಾರ. ಮಿಲ್ಕ್ ಅಂಡ್ ಸಿಲ್ಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ, ಹೂವು, ಹಣ್ಣು ತರಕಾರಿ ಬೆಳೆದು ಬೆಂಗಳೂರಿನ ಹೊಟ್ಟೆ ತುಂಬಿಸುತ್ತಿರುವ ಜಿಲ್ಲೆಯು ತನ್ನದೇ ಆದ ಐತಿಹಾಸಿಕ ಮಹತ್ವ ಹೊಂದಿದೆ.

ಭೌಗೋಳಿಕ-ಸಾಮಾಜಿಕ ಸ್ಥಿತಿ

ಉತ್ತರಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ, ಪಶ್ಚಿಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದಕ್ಷಿಣಕ್ಕೆ ಆಂಧ್ರ ಪ್ರದೇಶದ ಚಿತ್ತೂರು ಮತ್ತು ಪೂರ್ವಕ್ಕೆ ಆಂಧ್ರದ ಅನ್ನಮಯ್ಯ ಜಿಲ್ಲೆಗಳನ್ನು ಗಡಿಗಳಾಗಿ ಹೊಂದಿರುವ ಕೋಲಾರವು ರಾಜ್ಯ ರಾಜಧಾನಿ ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ. ದಲಿತರು ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದು ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಸದ್ಯದ ಬಿಜೆಪಿ ಸಂಸದ ಮುನಿಸ್ವಾಮಿಯವರು ಕೋಲಾರದ ಐತಿಹಾಸಿಕ ಕ್ಲಾಕ್‌ಟವರ್‌ಅನ್ನು ವಿವಾದದ ವಿಷಯವಾಗಿಸಿ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ರಾಯಲಸೀಮೆಗೆ ಹೊಂದಿಕೊಂಡು ಫ್ಯೂಡಲ್ ಜಾತೀಯತೆಯ ಎಲ್ಲಾ ಕ್ರೌರ್ಯವನ್ನೂ ಒಳಗೊಂಡಿದ್ದ ಈ ಜಿಲ್ಲೆಯು ದಲಿತ ಚಳವಳಿಯ ಉಚ್ಛ್ರಾಯದ ನಂತರ ಫ್ಯೂಡಲ್ ದರ್ಪ ಸಾಕಷ್ಟು ಸಡಿಲಗೊಂಡಿದೆ. ಸವರ್ಣೀಯರ ಮನೆಗೆ ದಲಿತರನ್ನು ಕರೆದು ಸಹಭೋಜನ ನಡೆಸುವ ಗೃಹ ಪ್ರವೇಶ ಎಂಬ ವಿನೂತನ ಕಾರ್ಯಕ್ರಮವನ್ನು ಇತಿಹಾಸ ಪ್ರಾಧ್ಯಾಪಕರಾದ ಡಾ.ಶಿವಪ್ಪ ಅರಿವುರವರು ನಡೆಸುತ್ತಿದ್ದಾರೆ.

ನೂರಾರು ಬೆಟ್ಟಗುಡ್ಡಗಳು, 2000ಕ್ಕೂ ಅಧಿಕ ಕೆರೆಗಳಿದ್ದೂ, ವಿಪರೀತ ಬರಡು ಭೂಮಿಯ ಜಿಲ್ಲೆ ಇದಾಗಿದೆ. ಅಂತರಗಂಗೆ ಬೆಟ್ಟ, ತೇರಳ್ಳಿ ಬೆಟ್ಟದಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರ, ಕೆಜಿಎಫ್ ಗಣಿಗಳು, ಕೋಟಿ ಲಿಂಗ, ಸೋಮೇಶ್ವರ ದೇವಾಲಯ, ಬಂಗಾರು ತಿರುಪತಿ, ಮಹಾಕೈಲಾಸ ದೇವಾಲಯಗಳು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಕೃಷಿ-ಆರ್ಥಿಕತೆ

ಟೊಮ್ಯಾಟೋ ಮತ್ತು ಮಾವಿನ ಹಣ್ಣು ಬೆಳೆಗೆ ಜಿಲ್ಲೆ ಖ್ಯಾತಿಯಾಗಿದೆ. ಅತಿದೊಡ್ಡ ಟೊಮ್ಯಾಟೋ ಎಪಿಎಂಸಿ ಮಾರುಕಟ್ಟೆ ಕೋಲಾರ ಜಿಲ್ಲೆಯಲ್ಲಿದೆ. ಇಲ್ಲಿನ ಟೊಮ್ಯೊಟೋ ಪಾಕಿಸ್ತಾನ, ಬಾಂಗ್ಲಾದೇಶಕ್ಕೂ ರಫ್ತಾಗುತ್ತದೆ. ತರತರದ ಮಾವಿನ ಹಣ್ಣುಗಳನ್ನು ಇಲ್ಲಿನ ರೈತರು ಬೆಳೆದು ಜಗತ್ತಿನಾದ್ಯಂತ ರಫ್ತು ಮಾಡುತ್ತಿದ್ದಾರೆ. ಕೃಷಿ ಹೈನುಗಾರಿಕೆ ಕೋಲಾರ ಜಿಲ್ಲೆಯ ಪ್ರಧಾನ ಕಸುಬು. ರೇಷ್ಮೆಯಂತಹ ವಾಣಿಜ್ಯ ಬೆಳೆಯ ಜೊತೆಗೆ ಎಲ್ಲಾ ವಿಧದ ತರಕಾರಿಗಳನ್ನು ಬೆಳೆಯಲಾಗುತ್ತದೆ. ಇಷ್ಟೆಲ್ಲ ಇದ್ದರೂ ಇಲ್ಲಿನ ರೈತರ ಬದುಕು ಮಾತ್ರ ಬಂಗಾರವಾಗಿಲ್ಲ. ಉತ್ತಮ ಬೆಲೆ ಸಿಗದೆ, ಸೂಕ್ತ ಮಾರುಕಟ್ಟೆ ಇಲ್ಲದೆ, ಸಂಗ್ರಹಿಸಿಡಲು ಕೋಲ್ಡ್ ಸ್ಟೋರೇಜ್ ಇಲ್ಲದೆ ಹಲವಾರು ಸಂದರ್ಭದಲ್ಲಿ ಬೆಳೆಯನ್ನು ಬೀದಿಗೆ ಚೆಲ್ಲುವುದು ಸಾಮಾನ್ಯವಾಗಿದೆ.

ಬರಡು ಜಿಲ್ಲೆಯಾದ ಕೋಲಾರಕ್ಕೆ ಶಾಶ್ವತ ನೀರಾವರಿಗಾಗಿ ದೊಡ್ಡದೊಡ್ಡ ಹೋರಾಟಗಳು ನಡೆದಿವೆ. ಮಳೆಗಾಲದಲ್ಲಿ ಮಾತ್ರ ಹರಿಯುವ ಪಾಲಾರ್ ನದಿಯೊಂದೇ ಜಿಲ್ಲೆಯಲ್ಲಿರುವುದು. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆಯಿಂದ ನೀರು ತರುವುದಾಗಿ ಹಲವಾರು ಸರ್ಕಾರಗಳು ಹೇಳಿದ್ದರೂ ಅದು ಸಾಧ್ಯವಾಗಿಲ್ಲ. ಆದರೆ ಕೆ.ಸಿ ವ್ಯಾಲಿ ನೀರಾವರಿ ಯೋಜನೆ ಜಾರಿಯಾಗಿದ್ದರಿಂದ ರೈತರು ಸ್ವಲ್ಪ ನಿಟ್ಟುಸಿರುಬಿಟ್ಟಿದ್ದಾರೆ. ಈ ಯೋಜನೆಯ ಲಾಭ ಪಡೆಯಲು ಹಲವಾರು ರಾಜಕಾರಣಿಗಳು ನಾ ಮುಂದು, ತಾ ಮುಂದು ಎನ್ನುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಈ ಯೋಜನೆಯಿಂದ ಜಿಲ್ಲೆಯ ಅಂತರ್ಜಲವನ್ನು ಕಲುಷಿತ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಇಂಬುಕೊಡುವ ಬೆಳವಣಿಗೆಗಳೂ ಇವೆ.

ದಲಿತ-ರೈತ ಚಳವಳಿಗೆ ಬಲ

ರಾಜ್ಯದಲ್ಲಿ ಅತಿ ಹೆಚ್ಚು ದಲಿತ ಸಮುದಾಯವಿರುವ ಜಿಲ್ಲೆಗಳಲ್ಲಿ ಕೋಲಾರವೂ ಒಂದು. ಹಾಗಾಗಿಯೇ ಇಲ್ಲಿ ದಲಿತ ಚಳವಳಿ ಗರಿಗೆದರಿತ್ತು. ಹೋಬಳಿಗೊಂದು ವಸತಿ ಶಾಲೆ, ಹಾಸ್ಟೆಲ್ ಬೇಕು ಎಂಬ ಹಕ್ಕೊತ್ತಾಯದೊಂದಿಗೆ ಇಲ್ಲಿ ದೊಡ್ಡ ಹೋರಾಟವೇ ನಡೆದಿದೆ. ಅದರ ಪರಿಣಾಮವಾಗಿ ಜಿಲ್ಲೆಯಲ್ಲಿ ಹಲವಾರು ಶಾಲೆಗಳು- ಹಾಸ್ಟೆಲ್‌ಗಳು ಆರಂಭವಾಗಿವೆ. ’ಹೆಂಡ ಬೇಡ ಭೂಮಿ ಬೇಕು’ ಘೋಷಣೆಯಡಿ ನಾಗಸಂದ್ರದ 80ಕ್ಕೂ ಹೆಚ್ಚು ದಲಿತ ಕುಟುಂಬಗಳನ್ನು ಜೀತದಿಂದ ವಿಮುಕ್ತರಾಗಿಸಿ ಜಮೀನು ದೊರಕಿಸಿ ಚಾರಿತ್ರಿಕ ಸಾಧನೆ ಮಾಡಿದ ಹೋರಾಟ ನಾಗಸಂದ್ರ ಭೂ ಚಳವಳಿಯೆಂದೇ ಇತಿಹಾಸದಲ್ಲಿ ದಾಖಲಾಗಿದೆ. ಜಿಲ್ಲೆಯ ದಲಿತ ಚಳವಳಿ ಎಂದಾಗ ಎನ್.ಮುನಿಸ್ವಾಮಿ, ಗಡ್ಡಂ ವೆಂಕಟೇಶ್, ಕೋಟಿಗಾನಹಳ್ಳಿ ರಾಮಯ್ಯ, ಸಿ.ಎಂ ಮುನಿಯಪ್ಪ, ಕೆ. ನಾರಾಯಣಸ್ವಾಮಿಯವರನ್ನು ನೆನೆಯದೆ ಇರಲು ಸಾಧ್ಯವಿಲ್ಲ. ಇಂದಿಗೂ ಜಿಲ್ಲೆಯ ಆದಿಮ ಸಾಂಸ್ಕೃತಿಕ ಕೇಂದ್ರ ದಲಿತತ್ವವನ್ನು ಕಾಪಿಟ್ಟುಕೊಂಡೇ ಬರುತ್ತಿದೆ.

ಅದೇ ರೀತಿ ಕರ್ನಾಟಕದಲ್ಲಿ ರೈತ ಚಳವಳಿ ಎಂದಾಗ ಎಡಪಂಥೀಯ ಸಿದ್ಧಾಂತದ ಹಿನ್ನೆಲೆಯ ರೈತ ಸಂಘಟನೆಯದ್ದೂ ಪ್ರಮುಖ ಪಾತ್ರವಿದೆ. ಜಿ.ವಿ ಶ್ರೀರಾಮರೆಡ್ಡಿ, ಆರ್.ವೆಂಕಟರಾಮಯ್ಯ, ವಿ.ಸಿ ರಾಮರೆಡ್ಡಿ, ಬಯ್ಯಾರೆಡ್ಡಿಯವರು ಜಿಲ್ಲೆಯ ರೈತ ಹೋರಾಟವನ್ನು ಮುನ್ನಡೆಸಿದ್ದಾರೆ. ಕಾರ್ಮಿಕ ಮುಖಂಡರಾಗಿ, ಮಾಜಿ ಶಾಸಕರು ಆದ ಸಿ.ಎಂ ಆರ್ಮುಗಂ, ಸಿಐಟಿಯುನ ವಾಸನ್, ಸೂರ್ಯನಾರಾಯಣ್ ದುಡಿದಿದ್ದಾರೆ. ಜಿಲ್ಲೆಯ ಮಹಿಳಾ ಸಾಧಕರು/ ಹೋರಾಟಗಾರರನ್ನು ನೆನೆಯುವುದಾದರೆ ಬಹಳ ಹಿಂದೆಯೆ ಮಧುರ ವಿಜಯಂ ಪುಸ್ತಕ ಬರೆದ ಗಂಗಾಂಬಿಕೆ, ಕೀರ್ತನೆಗಳನ್ನು ಬರೆದ ಜೀವೂ ಬಾಯಿ, ಲೇಖಕರಾದ ಉತ್ತನೂರು ರಾಜಮ್ಮನವರು, ಇಂದಿಗೂ ಮಹಿಳಾ ಹೋರಾಟದಲ್ಲಿ ವಿ. ಗೀತಾರವರು ಮುಂಚೂಣಿಯಲ್ಲಿದ್ದಾರೆ.

ಅಹಿಂದ ಚಳವಳಿ

ಅಹಿಂದ ಚಳವಳಿಗೆ ಬುನಾದಿಯಾಗಿದ್ದು ಕೋಲಾರ ಜಿಲ್ಲೆ. 1998ರಲ್ಲಿ ಕೋಲಾರದಲ್ಲಿ ನಡೆದ ಬೃಹತ್ ಅಹಿಂದ ಸಮಾವೇಶ ಅದಕ್ಕೆ ಸಾಕ್ಷಿ. ಈಡಿಗ ಸಮುದಾಯಕ್ಕೆ ಸೇರಿದ್ದ ಜಾಲಪ್ಪನವರು ಕೋಲಾರದಲ್ಲಿ ಹಿಂದುಳಿದ ವರ್ಗಗಳ ಟ್ರಸ್ಟ್ ಮುಖಾಂತರ ದೇವರಾಜ ಅರಸು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಿದ್ದರು. ಅದೇ ಕೋಲಾರದಲ್ಲಿ ಅಹಿಂದ ಸಮಾವೇಶ ಸಂಘಟಿತವಾದಾಗ ಅದರ ಪೂರ್ಣ ಹೊಣೆ ಹೊತ್ತು ಜಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯನವರು ಆ ಸಮಾವೇಶ ಉದ್ಘಾಟಿಸಿ ಚಳವಳಿಗೆ ಚಾಲನೆ ನೀಡಿದ್ದರು.

ಮುನಿಯಪ್ಪನವರ ಕಾಲ

ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ ಏಳು ಬಾರಿ ಸಂಸದರಾಗಿ, ಕೇಂದ್ರ ಸಚಿವರೂ ಆಗಿದ್ದ ದಲಿತ ಸಮುದಾಯದ ಕೆ.ಎಚ್ ಮುನಿಯಪ್ಪನವರಿಗೆ ಇಡೀ ಜಿಲ್ಲೆಯ ಮೇಲೆ ತಮ್ಮದೇ ಹಿಡಿತ ಹೊಂದಿದ್ದರು. ಆದರೆ ಇತ್ತೀಚಿಗೆ ಕಾಂಗ್ರೆಸ್ ಶಾಸಕರು ಮತ್ತು ಅವರ ನಡುವೆ ತಿಕ್ಕಾಟ ಆರಂಭವಾಗಿದೆ.

ಕೋಲಾರ ವಿಧಾನಸಭಾ ಕ್ಷೇತ್ರ ರಾಜಕೀಯ ಇತಿಹಾಸ

ಕೋಲಾರದಿಂದ ಇದುವರೆಗೆ ಮೂವರು ಮುಸ್ಲಿಂ ಅಭ್ಯರ್ಥಿಗಳು ಆರಿಸಿ ಬಂದಿದ್ದಾರೆ. ಆದರೆ 1990ರಲ್ಲಿ ಅಡ್ವಾಣಿಯವರು ರಥಯಾತ್ರೆ ಕೈಗೊಂಡ ನಂತರ ಇಲ್ಲಿ ಮುಸ್ಲಿಂ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. 1957ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಾ.ಅಬ್ದುಲ್ ರಶೀದ್‌ರವರು ಸ್ವತಂತ್ರ ಅಭ್ಯರ್ಥಿ ಪಿ.ವೆಂಕಟಗಿರಿಯಪ್ಪನವರನ್ನು 2714 ಮತಗಳ ಅಂತರದಲ್ಲಿ ಸೋಲಿಸಿ ಶಾಸಕರಾದರು. ನಂತರದ 1962 ಮತ್ತು 1967ರ ಎರಡೂ ಚುನಾವಣೆಯಲ್ಲಿಯೂ ಸ್ವತಂತ್ರ ಅಭ್ಯರ್ಥಿ ಪಿ.ವೆಂಕಟಗಿರಿಯಪ್ಪನವರು ಕಾಂಗ್ರೆಸ್‌ನ ಡಾ.ಅಬ್ದುಲ್ ರಶೀದ್‌ರವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು.

1972ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಕಣಕ್ಕಿಳಿದ ಡಾ.ವೆಂಕಟರಾಮಯ್ಯನವರು ಸ್ವತಂತ್ರ ಅಭ್ಯರ್ಥಿ ಪಿ.ವೆಂಕಟಗಿರಿಯಪ್ಪನವರನ್ನು 1492 ಮತಗಳ ಅಂತರದಿಂದ ಸೋಲಿಸಿದರು. ನಾಲ್ಕು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಪಿ.ವೆಂಕಟಗಿರಿಯಪ್ಪನವರು 1978ರಲ್ಲಿ ಜನತಾ ಪಕ್ಷದ ಟಿಕೆಟ್‌ನಡಿ ಸ್ಪರ್ಧಿಸಿದರೂ ಸಹ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ ಅಬ್ದುಲ್ ಲತೀಫ್ ಎದುರು ಕೇವಲ 394 ಮತಗಳಿಂದ ಸೋಲುಂಡರು. ಆ ನಂತರ ಅವರು ರಾಜಕೀಯದಿಂದ ನಿವೃತ್ತಿ ಪಡೆದರು.

1983ರ ಚುನಾವಣೆಯಲ್ಲಿ ಜನತಾ ಪಕ್ಷದ ಕೆ.ಆರ್ ಶ್ರೀನಿವಾಸಯ್ಯ ಕಾಂಗ್ರೆಸ್‌ನ ನಜೀರ್ ಅಹ್ಮದ್ ವಿರುದ್ಧ 19,755 ಮತಗಳ ಅಂತರದಿಂದ ಗೆದ್ದು ಶಾಸಕರಾದರು. 1985ರಲ್ಲಿ ನಡೆದ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್‌ನ ಅಬ್ದುಲ್ ರಹೀಮ್ ವಿರುದ್ಧ 13,145 ಮತಗಳಿಂದ ಗೆದ್ದು ಸತತ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಸತತ ಎರಡು ಬಾರಿ ಮುಸ್ಲಿಮರಿಗೆ ಟಿಕೆಟ್ ನೀಡಿದ್ದರೂ ಸೋಲುಂಡಿದ್ದ ಕಾಂಗ್ರೆಸ್ ಮೂರನೇ ಬಾರಿಗೆ ಸಹ 1989ರಲ್ಲಿ ಕೆ.ಎ ನಿಸಾರ್ ಅಹ್ಮದ್‌ರವರಿಗೆ ಟಿಕೆಟ್ ನೀಡಿತು. ಅವರು ಜನತಾದಳದಲ್ಲಿದ್ದ ಕೆ.ಆರ್ ಶ್ರೀನಿವಾಸಯ್ಯರನ್ನು 6064 ಮತಗಳಿಂದ ಸೋಲಿಸಿ ಶಾಸಕರಾದರು. ಜೊತೆಗೆ ಇಂಧನ ಸಚಿವರೂ ಆಗಿದ್ದರು. ಕೋಲಾರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ ಮೂರನೇ ಮತ್ತು ಕೊನೆಯ ಮುಸ್ಲಿಂ ವ್ಯಕ್ತಿ ಅವರಾಗಿದ್ದರು.

1994ರ ಚುನಾವಣೆಯಲ್ಲಿ ಜನತಾದಳವು ದೇವೇಗೌಡರ ನೇತೃತ್ವವನ್ನು ಪಡೆದುಕೊಂಡಿತ್ತು. ಮೈಸೂರು ಪ್ರಾಂತ್ಯದಲ್ಲಿ ಬೇರುಬಿಟ್ಟಿತ್ತು. ಹಾಲಿ ಕೋಲಾರದ ಶಾಸಕರಾಗಿರುವ ಕೆ.ಶ್ರೀನಿವಾಸ ಗೌಡರವರು ಜನತಾದಳದ ಟಿಕೆಟ್‌ನಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಕೆ.ಎ ನಿಸಾರ್ ಅಹ್ಮದ್‌ರವರನ್ನು 12,822 ಮತಗಳಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾದರು. 1999ರಲ್ಲಿ ಜೆಡಿಯು ಪಕ್ಷ ಸೇರಿದ ಅವರು ಕಾಂಗ್ರೆಸ್‌ನ ನಜೀರ್ ಅಹ್ಮದ್‌ರನ್ನು ಸೋಲಿಸಿದರು. 2004ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಅವರು ಬಿಜೆಪಿಯ ಎಂ.ಎಸ್ ಆನಂದ್‌ರನ್ನು ಸೋಲಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಕೆ.ಶ್ರೀನಿವಾಸಗೌಡರ ವಿಶೇಷವೆಂದರೆ ಮೂರು ಬಾರಿ ಮೂರು ವಿಭಿನ್ನ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದುದು.

2008ರ ಚುನಾವಣೆ ಹೊತ್ತಿಗೆ ಕೋಲಾರಕ್ಕೆ ವರ್ತೂರು ಪ್ರಕಾಶ್ ಆಗಮಿಸಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಕಾಂಗ್ರೆಸ್‌ನಲ್ಲಿದ್ದ ಕೆ.ಶ್ರೀನಿವಾಸಗೌಡರನ್ನು 21,029 ಮತಗಳಿಂದ ಸೋಲಿಸಿ ಶಾಸಕರಾದರು. ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ವರ್ತೂರು ಪ್ರಕಾಶ್ ಜವಳಿ ಸಚಿವರಾಗಿದ್ದರು. 2013ರ ಚುನಾವಣೆಯಲ್ಲಿ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು, ಅಷ್ಟರಲ್ಲಿ ಜೆಡಿಎಸ್ ಸೇರಿದ್ದ ಅದೇ ಕೆ.ಶ್ರೀನಿವಾಸಗೌಡರನ್ನು 12,591 ಮತಗಳಿಂದ ಎರಡನೇ ಬಾರಿ ಸೋಲಿಸಿದರು. ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿ ನಂತರ ಕಾಂಗ್ರೆಸ್ ಸೇರಿದ ಅವರು ಆನಂತರ ಅದರಿಂದಲೂ ಹೊರಬಂದು ’ನಮ್ಮ ಕಾಂಗ್ರೆಸ್’ ಎಂಬ ಪಕ್ಷ ಸ್ಥಾಪಿಸಿದ್ದರು.

ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಜನಪ್ರಿಯ ಅಧಿಕಾರಿ ಡಿ.ಕೆ ರವಿ 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅದು ಕೊಲೆ ಎಂದು ಬಿಜೆಪಿ ಹುಯಿಲೆಬ್ಬಿಸಿತು. ಆದರೆ ಸಿಬಿಐ ತನಿಖೆಯಲ್ಲಿಯೂ ಅವರದ್ದು ಆತ್ಮಹತ್ಯೆ ಎಂಬುದು ಸಾಬೀತಾಯಿತು. 2018ರ ಚುನಾವಣೆಯಲ್ಲಿ ಅದು ಸಹ ಕೋಲಾರ ಕ್ಷೇತ್ರದ ಮೇಲೆ ಪ್ರಭಾವ ಬೀರಿತ್ತು. ಅವರ ತಾಯಿ ಗೌರಮ್ಮ ಆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಕೇವಲ 2085 ಮತ ಪಡೆದರು. ಆಗ ಜೆಡಿಎಸ್‌ನಲ್ಲಿದ್ದ ಕೆ.ಶ್ರೀನಿವಾಸಗೌಡರು ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಜಮೀರ್ ಪಾಶ ಎದುರು ಗೆದ್ದಾಗ ವರ್ತೂರು ಪ್ರಕಾಶ್ ಕೇವಲ 35,544 ಮತಗಳಿಸಿ ಮೂರನೇ ಸ್ಥಾನಕ್ಕೆ ಕುಸಿದರು.

ಸದ್ಯದ ರಾಜಕೀಯ ಸ್ಥಿತಿಗತಿ

2018ರಲ್ಲಿ ಭಾರೀ ಅಂತರದಿಂದ ಗೆದ್ದು 4ನೇ ಬಾರಿ ಶಾಸಕನಾಗಿರುವ ಕೆ.ಶ್ರೀನಿವಾಸಗೌಡರು ಇತ್ತೀಚಿನ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದರು. ಏಕೆ ಹೀಗೆ ಮಾಡಿದಿರಿ ಎಂಬ ಪತ್ರಕರ್ತರ ಪ್ರಶ್ನೆಗೆ “ಬಿಕಾಸ್ ಐ ಲವ್ ಕಾಂಗ್ರೆಸ್” ಎಂಬ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಸದ್ಯ ಕಾಂಗ್ರೆಸ್ ಪಾಳಯದಲ್ಲಿರುವ ಅವರು ತಾನು ಕ್ಷೇತ್ರ ಬಿಟ್ಟುಕೊಡುತ್ತೇನೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಬರಬೇಕೆಂದು ಮನವಿ ಮಾಡಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯನವರು ಕೋಲಾರಕ್ಕೆ ಬಾರದಿದ್ದರೆ ತನ್ನ ಮಗ ಮಂಜುನಾಥ್‌ರಿಗೆ ಟಿಕೆಟ್ ಕೊಡಿಸಬೇಕೆಂಬ ಒಳ ಆಸೆಯೂ ಅವರಿಗಿದೆ ಎನ್ನಲಾಗುತ್ತಿದೆ.

ಜಾತಿವಾರು ಜನಸಂಖ್ಯೆ

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮುದಾಯದ ಮತಗಳು ಮೊದಲನೇ ಸ್ಥಾನದಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ 60,000ಕ್ಕೂ ಹೆಚ್ಚು ಮತಗಳಿವೆ ಎನ್ನಲಾಗುತ್ತಿದೆ. ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದು ಸುಮಾರು 40,000 ದಷ್ಟು ಮತಗಳಿವೆ. ಒಕ್ಕಲಿಗರು 30,000ದಷ್ಟು ಇದ್ದರೆ ಕುರುಬರು 20,000ಕ್ಕೂ ಹೆಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಬರುವಿಕೆಗೆ ಕಾದು ಕುಳಿತ ಕಾಂಗ್ರೆಸ್ ಕಾರ್ಯಕರ್ತರು

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರೀ ಅಂತರದಲ್ಲಿ ಸೋತು, ಬಾದಾಮಿಯಲ್ಲಿ ಅಲ್ಪ ಅಂತರದಲ್ಲಿ ಗೆದ್ದು ವಿರೋಧ ಪಕ್ಷದ ನಾಯಕರಾಗಿರುವ, 2024ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಸಿಎಂ ಆಗಬೇಕೇಂದು ಕನಸು ಹೊತ್ತಿರುವ ಸಿದ್ದರಾಮಯ್ಯನವರು ’ಸುರಕ್ಷಿತ ಕ್ಷೇತ್ರ’ದ ಹುಡುಕಾಟದಲ್ಲಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ, ಕೊಪ್ಪಳ, ಕೋಲಾರ, ವರುಣಾ, ಚಿಕ್ಕನಾಯಕನಹಳ್ಳಿ, ಸವದತ್ತಿ ಕ್ಷೇತ್ರಗಳು ಆ ಪಟ್ಟಿಯಲ್ಲಿದ್ದು ಎಲ್ಲಿಂದ ಕಣಕ್ಕಿಳಿಯುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಜಿಲ್ಲೆಯ ರಮೇಶ್ ಕುಮಾರ್ ಬಣವಂತೂ ಕೋಲಾರಕ್ಕೆ ಸಿದ್ದರಾಮಯ್ಯನವರು ಬರಬೇಕೆಂದು ಬಯಸುತ್ತಿದೆ. ಇದರಿಂದ ಇಡೀ ಜಿಲ್ಲೆಯಾದ್ಯಂತ ಕಾಂಗ್ರೆಸ್ ಸಂಘಟನೆಗೆ ಬಲ ಬರಲಿದೆ ಎಂಬುದು ಅವರ ವಾದ. ಏಕೆಂದರೆ ಒಳ ಕಚ್ಚಾಟಗಳಲ್ಲಿ ಶಕ್ತಿಗುಂದಿರುವ ಕಾಂಗ್ರೆಸ್‌ಗೆ ಸಿದ್ದರಾಮಯ್ಯನವರ ಎಂಟ್ರಿ ಶಕ್ತಿ ಕೊಡಲಿದೆ ಎಂಬ ಲೆಕ್ಕಾಚಾರ ಚಾಲ್ತಿಯಲ್ಲಿದೆ. ಅದರಲ್ಲಿಯೂ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಜಿಲ್ಲಾ ಕಾಂಗ್ರೆಸ್‌ನ ಆತಂಕಕ್ಕೆ ಕಾರಣವಾಗಿದೆ.

ಇನ್ನುಳಿದಂತೆ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಅಭ್ಯರ್ಥಿಗಳ ದಂಡೇ ನೆರೆದಿದೆ. ಆದರೆ ಅವರೆಲ್ಲರೂ ಹೇಳುವುದು ಸಿದ್ದರಾಮಯ್ಯ ಬರುವುದಾದರೆ ನಾವು ಅವರಿಗೆ ಕ್ಷೇತ್ರ ಬಿಟ್ಟುಕೊಡುತ್ತೇವೆ ಮತ್ತು ಅವರ ಗೆಲುವಿಗಾಗಿ ಶ್ರಮಿಸುತ್ತೇವೆಂದು. ಒಂದು ವೇಳೆ ಸಿದ್ದರಾಮಯ್ಯನವರು ಕೋಲಾರಕ್ಕೆ ಬಾರದಿದ್ದರೆ ತನಗೇ ಟಿಕೆಟ್ ಕೊಡಬೇಕೆಂದು ಹಲವರು ಪಟ್ಟು ಹಿಡಿದಿದ್ದಾರೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಬ್ಯಾಲಹಳ್ಳಿ ಗೋವಿಂದಗೌಡ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಜನರಿಗೆ ಸಾಲ ಕೊಟ್ಟು ಹೊಕ್ಕುಬಳಕೆಯಲ್ಲಿರುವ ಅವರು ದಲಿತ ಮತ್ತು ಮುಸ್ಲಿಂ ಮತಗಳ ಜೊತೆಗೆ ಒಕ್ಕಲಿಗ ಮತಗಳನ್ನು ಕ್ರೋಢೀಕರಿಸಿ ಗೆಲ್ಲುತ್ತೇನೆ ಎನ್ನುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಜೊತೆ ಆಪ್ತವಾಗಿರುವ ಚಂದನ್ ಗೌಡ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಕಳೆದ ಬಾರಿ ಎಸ್‌ಸಿ ಜಾತಿ ಪ್ರಮಾಣ ಪತ್ರ ವಿವಾದದಿಂದಾಗಿ ದಲಿತ ಮೀಸಲು ಕ್ಷೇತ್ರ ಮುಳಬಾಗಿಲು ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಲು ಅನರ್ಹರಾಗಿದ್ದವರು ಬುಡಗ ಜಂಗಮ ಸಮುದಾಯದ ಕೊತ್ತೂರು ಮಂಜುನಾಥ್. ಇದರಿಂದಾಗಿ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲದ ಕಾರಣಕ್ಕೆ ಸ್ವತಂತ್ರ ಅಭ್ಯರ್ಥಿ ಎಚ್.ನಾಗೇಶ್ ಗೆಲ್ಲಲು ಸಾಧ್ಯವಾಯ್ತು. ಹಾಗಾಗಿ ಕೊತ್ತೂರು ಮಂಜುನಾಥ್ ಈ ಬಾರಿ ಕೋಲಾರದಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಇವರಲ್ಲದೆ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ನಗರಸಭೆ ಸದಸ್ಯರಾದ ಮುಬಾರಕ್, ಲಕ್ಷ್ಮಣ್ ಗೌಡ ಸೇರಿದಂತೆ ಹಲವರು ಕಾಂಗ್ರೆಸ್ ಟಿಕೆಟ್‌ಗಾಗಿ ಸರ್ವಪ್ರಯತ್ನ ನಡೆಸುತ್ತಿದ್ದಾರೆ.

ಜೆಡಿಎಸ್ ಪಟ್ಟಿ

ದೊಡ್ಡ ಟೊಮ್ಯಾಟೋ ಮಂಡಿ ನಡೆಸುವ ಸಿ.ಎಂ.ಆರ್ ಶ್ರೀನಾಥ್ ರವರಿಗೆ ಜೆಡಿಎಸ್ ಟಿಕೆಟ್ ಘೋಷಿಸಿದೆ. ಸಿದ್ದರಾಮಯ್ಯನವರ ಆಗಮನದ ಹಿನ್ನೆಲೆಯಲ್ಲಿ ಜೆಡಿಎಸ್ ಹಲವು ಕಸರತ್ತುಗಳನ್ನು ನಡೆಸಿದೆ. ಕೋಲಾರದ ಅಂಜುಮಾನ್ ಇಸ್ಲಾಮಿಯ ಅಧ್ಯಕ್ಷರಾಗಿದ್ದ ಜಮೀರ್‌ರವರು ಇಷ್ಟು ದಿನ ಕಾಂಗ್ರೆಸ್ ಬೆಂಬಲಿಸುತ್ತಿದ್ದರು. ಆದರೆ 2019ರಲ್ಲಿ ಕಾಂಗ್ರೆಸ್ ಮುಖಂಡರೇ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿದ್ದು ಮುಸ್ಲಿಮರಿಗೆ ಇರಿಸುಮುರಿಸು ತಂದಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಮೀರ್‌ರವರನ್ನು ಜೆಡಿಎಸ್ ಪಕ್ಷ ಸೆಳೆದುಕೊಂಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ ಇಬ್ರಾಹಿಂರವರು, ಜಮೀರ್ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಅಂಜುಮಾನ್ ತೆಗೆದುಕೊಳ್ಳುವ ರಾಜಕೀಯ ನಿರ್ಧಾರಗಳು ಮುಸ್ಲಿಂ ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಮುಸ್ಲಿಂ ಓಟುಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ.

ಬಿಜೆಪಿ

ಬಿಜೆಪಿ ಪಕ್ಷ ಸೇರಿರುವ ವರ್ತೂರು ಪ್ರಕಾಶ್‌ಗೆ ಪಕ್ಷದ ಟಿಕೆಟ್ ಗ್ಯಾರಂಟಿ ಅನ್ನಲಾಗುತ್ತಿದೆ. ಎರಡು ಬಾರಿ ಶಾಸಕನಾಗಿ ಒಂದಷ್ಟು ರಸ್ತೆ ಅಭಿವೃದ್ಧಿ ಮಾಡಿರುವ ಅವರು ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಕಾತುರರಾಗಿದ್ದಾರೆ. 2019ರಲ್ಲಿ ಬಿಜೆಪಿಯ ಎಂಪಿ ಸೀಟ್ ಗೆಲುವು ಅವರ ಕನಸಿಗೆ ಬಲ ತಂದಿದೆ. ಕುರುಬ ಸಮುದಾಯದ ಅವರು ದಲಿತ ಮತ್ತು ಮುಸ್ಲಿಂ ಮತಗಳನ್ನು ಸೆಳೆಯಲು ರಣತಂತ್ರ ರೂಪಿಸುತ್ತಿದ್ದಾರೆ.

ಸಿದ್ದರಾಮಯ್ಯನವರು ಕೋಲಾರಕ್ಕೆ ಬಂದರೆ ಅವರು ಗೆಲುವು ಖಚಿತ, ಆದರೆ ಅವರನ್ನು ಬಿಟ್ಟು ಬೇರೆಯವರು ಕ್ಷೇತ್ರದ ಶಾಸಕರಾದರೆ ಮೂರು ಪಕ್ಷಗಳ ನಡವೆ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ ಎಂಬುದು ಸ್ಥಳೀಯರ ಅಭಿಮತ.

ಕ್ಷೇತ್ರದ ಸಮಸ್ಯೆಗಳು

ಅತಿ ಹೆಚ್ಚು ತರಕಾರಿ ಬೆಳೆಯುವ ಜಿಲ್ಲೆಯಾಗಿರುವ ಕೋಲಾರಕ್ಕೆ 100 ಎಕರೆ ವಿಸ್ತಾರದಲ್ಲಿ ಮಾರುಕಟ್ಟೆ ನಿರ್ಮಿಸಬೇಕೆಂಬ ರೈತರ ಬೇಡಿಕೆ ಹಾಗೆಯೇ ಉಳಿದಿದೆ. ಸಮರ್ಪಕ ಬೆಲೆ ಸಿಗದಿದ್ದಾಗ ಹಣ್ಣು ತರಕಾರಿಗಳನ್ನು ರಸ್ತೆಗೆ ಚೆಲ್ಲುವುದರ ಬದಲು ಸಂಗ್ರಹಿಸಿಡಲು ಕೋಲ್ಡ್ ಸ್ಟೋರೇಜ್‌ಗಳನ್ನು ಸ್ಥಾಪಿಸಬೇಕೆಂದು ಎಷ್ಟು ಒತ್ತಡ ತಂದರೂ ಅದು ಸಾಧ್ಯವಾಗಿಲ್ಲ. ಇಲ್ಲಿನ ಬೆಳೆಗಳಿಗೆ ಮೌಲ್ಯವರ್ಧನೆ ಮಾಡಲು ಸಣ್ಣಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಬೇಕಿದೆ. ಸದ್ಯಕ್ಕೆ, ಕೋಲಾರದ ಟೊಮ್ಯಾಟೋ ಹಣ್ಣು ಕೆಚಪ್ ಆಗಲು ಪಕ್ಕದ ಆಂಧ್ರದ ಚಿತ್ತೂರು ಜಿಲ್ಲೆಗೆ ಹೋಗಬೇಕಾದ ಪರಿಸ್ಥಿತಿಯಿದೆ. ಇದನ್ನು ಬಗೆಹರಿಸಲು, ಜಿಲ್ಲೆ ಸುಸ್ಥಿರ ಅಭಿವೃದ್ದಿ ಕಾಣುವಂತಾಗಲು ಯಾವ ಶಾಸಕರು ಸಹ ಮನಸ್ಸು ಮಾಡಿಲ್ಲ ಎನ್ನುವುದು ವಾಸ್ತವ.

ವಿಸ್ಟ್ರಾನ್ ಸೇರಿದಂತೆ ಹಲವು ಕೈಗಾರಿಕೆಗಳು ಜಿಲ್ಲೆಯಲ್ಲಿದ್ದರೂ ಅವು ಕಾರ್ಮಿಕರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಕನಿಷ್ಟ ವೇತನ ಕೊಡದೆ ವಂಚಿಸಿ ಕಾನೂನುಗಳನ್ನು ಗಾಳಿಗೆ ತೂರುತ್ತಿವೆ. ಕೆಜಿಎಫ್ ಗಣಿ ಮುಚ್ಚಿದ ನಂತರ ನಿರುದ್ಯೋಗ ಮಿತಿಮೀರಿದೆ. ಪರಿಣಾಮವಾಗಿ ಪ್ರತಿದಿನ ಹತ್ತಾರು ಸಾವಿರ ಯುವಜನರು ಬೆಂಗಳೂರಿಗೆ ಉದ್ಯೋಗಕ್ಕಾಗಿ ಹೋಗಿಬರುತ್ತಿದ್ದಾರೆ.

ಕೆ.ಸಿ ವ್ಯಾಲಿಯಿಂದ ಬರುವ ನೀರನ್ನು ಎರಡು ಬಾರಿ ಶುದ್ಧೀಕರಿಸಿ ಕೊಡಲಾಗುತ್ತಿದೆ. ಅದನ್ನು ಕನಿಷ್ಠ ಮೂರು ಬಾರಿ ಶುದ್ಧೀಕರಿಸಬೇಕೆಂಬುದು ಜನರ ಒತ್ತಾಯ. ಜಿಲ್ಲೆಯ ಮೂಲಸೌಕರ್ಯ ಮತ್ತಷ್ಟು ಸುಧಾರಿಸಬೇಕಿದೆ. ಜನರಿಗೆ ಸುಸಜ್ಜಿತವಾದ ಮನೆಗಳ ಕೊರತೆಯಿದೆ. ಉದ್ಯೋಗ ಸೃಷ್ಟಿಯಾಗಬೇಕಿದೆ. ಉತ್ತಮ ಸರ್ಕಾರಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಬೇಕಿದೆ.

ಆದರೆ ಒಕ್ಕಲಿಗ ವರ್ಸಸ್ ಅಹಿಂದ ರಾಜಕೀಯ, ಹೆಚ್ಚು ಹಣ ಚೆಲ್ಲುವವರು ಗೆಲ್ಲುವ ಪರಿಸ್ಥಿತಿಯಿರುವ ಕೋಲಾರದಲ್ಲಿ ಈ ಮೇಲಿನ ಜನರ ಸಮಸ್ಯೆಗಳು, ನೈಜ ವಿಷಯಗಳು ಈ ಬಾರಿಯ ಚುನಾವಣೆಯ ವಿಷಯವಾಗಬೇಕಿದೆ. ಅದಕ್ಕೆ ಅಲ್ಲಿನ ಜನತೆ ಒತ್ತಾಯಿಸುವರೆ?

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶ್ರೀನಿವಾಸಪುರ: ರಮೇಶ್ ಕುಮಾರ್‌ರವರಿಗೆ ಒಲಿಯುವುದೇ ಹ್ಯಾಟ್ರಿಕ್ ಗೆಲುವು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರ್ಕಾರ 5ಜಿ ಮೆಗಾ ಹಗರಣವನ್ನು ರೂಪಿಸುತ್ತಿದೆ: ಎಎಪಿ ಮುಖಂಡ ಸಂಜಯ್ ಸಿಂಗ್

0
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ 2012ರ ತೀರ್ಪನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ...