Homeಅಂಕಣಗಳುಹಿಟ್ಲರನ ಜರ್ಮನಿಯಲ್ಲಿ ನಾಜೀಗಳ ಕಾಲಿಗೆರಗಿತ್ತು ನ್ಯಾಯಾಂಗ!

ಹಿಟ್ಲರನ ಜರ್ಮನಿಯಲ್ಲಿ ನಾಜೀಗಳ ಕಾಲಿಗೆರಗಿತ್ತು ನ್ಯಾಯಾಂಗ!

- Advertisement -
- Advertisement -

1933ರಲ್ಲಿ ಅಧಿಕಾರಕ್ಕೆ ಬಂದ ಒಡನೆಯೇ ನಾಜಿಗಳು ಮಾಡಿದ ಮೊದಲನೆಯ ಕೆಲಸವೆಂದರೆ ತಮಗಿದ್ದ ಆಂತರಿಕ ವಿರೋಧವನ್ನು ಅಳಿಸಿ ಹಾಕುವುದು. ಈ ದಿಸೆಯಲ್ಲಿ ಕೈವಶ ಮಾಡಿಕೊಂಡ ಹಲವು ಹತಾರುಗಳ ಪೈಕಿ ನ್ಯಾಯಾಂಗದ ಹತಾರು ಕೂಡ ಒಂದು.

ಜರ್ಮನಿಯ ನ್ಯಾಯಾಲಯ ವ್ಯವಸ್ಥೆಯ ಹೊರಗೆ ಮತ್ತು ಜರ್ಮನಿಯ ಕಾನೂನು ವ್ಯಾಪ್ತಿಯ ಹೊರಗೆ ತನ್ನದ ಆದ ನ್ಯಾಯಾಂಗ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ ಅಡಾಲ್ಫ್ ಹಿಟ್ಲರ್. ಇವುಗಳನ್ನು ನಾಜೀ ವಿಶೇಷ ನ್ಯಾಯಾಲಯಗಳು ಎಂದು ಕರೆಯಲಾಗಿತ್ತು. ಇವು ವ್ಯಾಪಕ ಅಧಿಕಾರಗಳನ್ನು ಹೊಂದಿದ್ದ ರಾಜಕೀಯ ಕೋರ್ಟುಗಳಾಗಿದ್ದವು. ದೇಶದ್ರೋಹ ಅಥವಾ ರಾಷ್ಟ್ರೀಯ ಇಲ್ಲವೇ ಪ್ರಾದೇಶಿಕ ಸರ್ಕಾರಗಳ ಸದಸ್ಯರ ಮೇಲೆ ದಾಳಿ ನಡೆಸಿದವರನ್ನು ವಿಚಾರಿಸಿಕೊಳ್ಳಲು ಆರಂಭದಲ್ಲಿ ಈ ನ್ಯಾಯಾಲಯಗಳನ್ನು ಬಳಸಿಕೊಳ್ಳಲಾಯಿತು. ಸಾವಿರಾರು ಕಮ್ಯೂನಿಸ್ಟರು ಮತ್ತು ಸೋಶಿಯಲ್ ಡೆಮಾಕ್ರಟ್ ಗಳನ್ನುಬಂಧಿಸಲಾಯಿತು. ಅವರ ಚಟುವಟಿಕೆಗಳನ್ನು ಕಾನೂನುಬಾಹಿರ ಎಂದು ಘೋಷಿಸಲಾಯಿತು. ಜರ್ಮನಿಯ ಸಂವಿಧಾನದ 114, 115, 118, 123, 124, ಹಾಗೂ 153ನೆಯ ಕಲಮುಗಳನ್ನು ಅನಿರ್ದಿಷ್ಟ ಕಾಲ ಅಮಾನತಿನಲ್ಲಿ ಇರಿಸಲಾಯಿತು. ವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯವೂ ಸೇರಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಭೆ ಸೇರುವ ಮತ್ತು ಸಂಘ ಕಟ್ಟಿಕೊಳ್ಳುವ ಸ್ವಾತಂತ್ರ್ಯಗಳು ಹರಣಗೊಂಡವು. ಅಂಚೆ, ಟೆಲಿಗ್ರಾಫಿಕ್ ಹಾಗೂ ದೂರವಾಣಿ ಸಂಪರ್ಕಗಳ ಖಾಸಗಿತನವನ್ನು ಉಲ್ಲಂಘಿಸಲಾಯಿತು. ಮನೆಗಳ ಶೋಧ, ಆಸ್ತಿಪಾಸ್ತಿಗಳ ಮುಟ್ಟುಗೋಲು ಮತ್ತು ನಿರ್ಬಂಧಗಳನ್ನು ವಿಧಿಸಲಾಯಿತು. ಸರ್ಕಾರದ ಆದೇಶಗಳನ್ನು ಪಾಲಿಸದಿರುವ ಇಲ್ಲವೇ ಅವುಗಳ ವಿರುದ್ಧ ಜನರನ್ನು ಪ್ರಚೋದಿಸುವ ಅಥವಾ ಮೇಲ್ಮನವಿಗೆ ಪ್ರಯತ್ನಿಸುವವರನ್ನು ಶಿಕ್ಷಿಸಲಾಯಿತು.

ಹಂಗಾಮಿ ವಿಶೇಷ ಕೋರ್ಟುಗಳು ಜರ್ಮನಿಯಲ್ಲಿ 19ನೆಯ ಶತಮಾನದಲ್ಲೂ ಅಸ್ತಿತ್ವದಲ್ಲಿದ್ದವು. ಸ್ಥಳೀಯ ನಾಗರಿಕ ಗಲಭೆಗಳ ವಿಚಾರಣೆಗೆ ಈ ಕೋರ್ಟುಗಳನ್ನು ರಚಿಸಲಾಗುತ್ತಿತ್ತು. ಉದ್ದೇಶ ಈಡೇರಿದ ನಂತರ ಅವುಗಳ ಸಮಾಪ್ತಿಯಾಗುತ್ತಿತ್ತು. ಹೆಚ್ಚು ಕಾಯಂ ಸ್ವರೂಪದ ವಿಶೇಷ ಕೋರ್ಟುಗಳ ರಾಷ್ಟ್ರೀಯ ಜಾಲ ರಚನೆಯಾದದ್ದು 1933ರಲ್ಲಿ. 26ರಿಂದ ಶುರುವಾದ ಇವುಗಳ ಸಂಖ್ಯೆ 1942ರ ಹೊತ್ತಿಗೆ 74ಕ್ಕೆ ಹೆಚ್ಚಿತ್ತು.ಮಾಮೂಲು ನ್ಯಾಯಾಲಯ ವ್ಯವಸ್ಥೆಯಡಿ ಆಪಾದಿತರಿಗೆ ದೊರೆಯುತ್ತಿದ್ದ ನಾಮಮಾತ್ರದ ರಕ್ಷಣೆಗಳನ್ನು ವಿಶೇಷ ಕೋರ್ಟುಗಳಲ್ಲಿ ಕಿತ್ತು ಎಸೆಯಲಾಗಿತ್ತು. ಮೇಲ್ಮನವಿಯ ಅವಕಾಶವೇ ಇರಲಿಲ್ಲ. ಸಾಕ್ಷ್ಯ ಪುರಾವೆಗಳನ್ನು ಎಷ್ಟರಮಟ್ಟಿಗೆ ಪರಿಗಣಿಸಬೇಕು ಎಂಬುದನ್ನು ನ್ಯಾಯಾಲಯವೇ ನಿರ್ಧರಿಸುತ್ತಿತ್ತು. ಆಪಾದಿತರ ಪರ ವಕೀಲರು ಆಪಾದನೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಒದಗಿಸುತ್ತಿದ್ದ ಪುರಾವೆಗಳನ್ನು ಪ್ರಶ್ನಿಸುವಂತೆಯೇ ಇರಲಿಲ್ಲ. ಪೋಲೆಂಡ್ ನಾಗರಿಕರು ಮತ್ತು ಯಹೂದಿಗಳಿಗೆ ಯಾವ ಕಾರಣಕ್ಕೆ ಬೇಕಾದರೂ ಮರಣದಂಡನೆ ನೀಡಬಹುದೆಂಬ ವಿಶೇಷ ಕಾನೂನನ್ನು ಜಾರಿಗೆ ತರಲಾಗಿತ್ತು.

ಪೋಲೀಶ್ ಜನರಿಗೆ ಜರ್ಮನರಿಗಿಂತ ಹೆಚ್ಚು ದೀರ್ಘ ಶಿಕ್ಷೆ ವಿಧಿಸಬಹುದು, ಯಾಕೆಂದರೆ ಅವರು ಜರ್ಮನರಿಗಿಂತ ಕೀಳು ಜನಾಂಗದವರು ಎಂದು ವಿಶೇಷ ಕೋರ್ಟುಗಳ ನ್ಯಾಯಾಧೀಶರು ಸಾರಿ ಹೇಳುತ್ತಿದ್ದರು.

ಹಿಟ್ಲರನ ನ್ಯಾಯಾಂಗದಲ್ಲಿ ನಿಷ್ಪಕ್ಷಪಾತ ಎಂಬ ಮಾತಿಗೆ ಅರ್ಥವೇ ಇರಲಿಲ್ಲ. 1942ರ ಏಪ್ರಿಲ್ 26ರಂದು ನ್ಯಾಯಾಂಗವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹಿಟ್ಲರ್ ಹೇಳುತ್ತಾನೆ- ಜರ್ಮನಿಯ ಕಾನೂನು ವೃತ್ತಿಪರರು ಅರ್ಥಮಾಡಿಕೊಳ್ಳಬೇಕು…ದೇಶಕ್ಕಾಗಿ ಅವರು ಇದ್ದಾರೆಯೇ ವಿನಾ, ದೇಶ ಅವರಿಗಾಗಿ ಇಲ್ಲ. ಇನ್ನು ಮೇಲೆ ನಾನು ಖುದ್ದಾಗಿ ಈ ಕೇಸುಗಳಲ್ಲಿ ಮಧ್ಯಪ್ರವೇಶ ಮಾಡುತ್ತೇನೆ…ಕಾಲದ ಕರೆಯನ್ನು ಅರ್ಥ ಮಾಡಿಕೊಳ್ಳದ ನ್ಯಾಯಾಧೀಶರನ್ನು ಅವರ ಹುದ್ದೆಗಳಿಂದ ಕಿತ್ತು ಹಾಕುತ್ತೇನೆ.

ನಾಜೀ ಪಕ್ಷ ಮತ್ತು ಕಾನೂನಿನ ನಡುವೆ ಸಂಘರ್ಷ ಉಂಟಾದ ಸಂದರ್ಭಗಳಲ್ಲಿ ನಾಜೀ ಪಾರ್ಟಿಯದೇ ಮೇಲುಗೈ ಆಗತಕ್ಕದ್ದು ಎಂದು ನ್ಯಾಯಾಧೀಶರಿಗೆ ನಿರ್ದೇಶನ ನೀಡಲಾಯಿತು. ನಾಜೀ ಆಡಳಿತದಲ್ಲಿ ನ್ಯಾಯಾಧೀಶರು ಯಾವ ಪೀಡನೆಗೂ ಗುರಿಯಾಗದ ವರ್ಗವಾಗಿದ್ದರು ಎಂಬ ಮಾತು ಹಲವು ಗೂಢಾರ್ಥಗಳನ್ನು ಧ್ವನಿಸುತ್ತದೆ. ಅವರ ಪೈಕಿ ಯಾರನ್ನೂ ಚಿತ್ರವಧೆಯ ಕಾನ್ಸಂಟ್ರೇಶನ್ ಕ್ಯಾಂಪ್ ಗಳಿಗೆ ನೂಕಲಾಗಲಿಲ್ಲ. ಅವರಾಗಿಯೇ ಆಡಳಿತ ಪಕ್ಷದ ಜೊತೆ ಕೈಗೂಡಿಸಿದಾಗ ಮತ್ತು ಸಾಷ್ಟಾಂಗ ಪ್ರಣಾಮ ಮಾಡಿದಾಗ ಅವರನ್ನು ಪೀಡಿಸುವ ಅಗತ್ಯವಾದರೂ ಏನಿತ್ತು?

ನಾಜೀಗಳು ಎಸಗಿದ ಎಲ್ಲ ದೌರ್ಜನ್ಯಗಳಿಗೂ ಕಾನೂನುಬದ್ಧತೆಯ ಅಂಗಿ ತೊಡಿಸುವುದು ನ್ಯಾಯಾಂಗದ ಕರ್ತವ್ಯವಾಗಿತ್ತು. ಉದಾರ ಜರ್ಮನ್ ಕಾನೂನನ್ನು ದಬ್ಬಾಳಿಕೆ ಮತ್ತು ಭೇದ ಭಾವ ಹಾಗೂ ಜನಾಂಗೀಯ ಹತ್ಯೆಯ ಹತಾರನ್ನಾಗಿಸಿದವರು ಆ ದೇಶದ ನಾಜೀ ನಿಷ್ಠ ನ್ಯಾಯಾಧೀಶರು. ನಾಜೀ ಆಳ್ವಿಕೆಯ ನಿಷ್ಠಾವಂತ ಸೇವಕರಂತೆ ನಡೆದುಕೊಂಡರು ಎಂಬ ಸಂಗತಿಗಳು ಇತಿಹಾಸ ಸಂಶೋಧನೆಯಿಂದ ಹೊರಬಿದ್ದಿವೆ. ಆದರೆ ಈ ಆಳ್ವಿಕೆಗೆ ತಲೆ ಬಾಗದ ನ್ಯಾಯಾಧೀಶರೂ ಅಲ್ಲಲ್ಲಿ ಕಂಡು ಬಂದಿದ್ದಾರೆ.

ನಾಜೀ ಜರ್ಮನಿಯ ನ್ಯಾಯಾಂಗ ವ್ಯವಸ್ಥೆಯ ನೆರಳು ಇಂದಿನ ಭಾರತದ ನ್ಯಾಯಾಂಗದ ಮೇಲೆ ಕವಿಯತೊಡಗಿದೆಯೇ ಎಂಬ ಸಂದೇಹ ಮೂಡತೊಡಗಿದೆ. ಇತ್ತೀಚಿನ ವರ್ಷಗಳಲ್ಲಿ ರಫೇಲ್ ಖರೀದಿ ವ್ಯವಹಾರ, ನ್ಯಾಯಾಧೀಶ ಲೋಯಾ ಅವರ ನಿಗೂಢ ಸಾವಿನ ಪ್ರಕರಣವನ್ನು ನಿರ್ವಹಿಸಿದ ರೀತಿ, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸೌಲಭ್ಯದ ರದ್ದು ಕ್ರಮವನ್ನು ಪ್ರಶ್ನಿಸಿದ್ದ ಮತ್ತು ಕಾಶ್ಮೀರಿ ನಾಯಕರ ಬಂಧನದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಹತ್ತಾರು ಹೇಬಿಯಸ್ ಕಾರ್ಪಸ್ ಅರ್ಜಿಗಳ ವಿಚಾರಣೆಯಲ್ಲಿ ವಿಳಂಬ, ಸಿಎಎ-ಎನ್.ಆರ್.ಸಿ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯನ್ನು ಬದಿಗೊತ್ತಿರುವುದೇ ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ಹೊರಬಿದ್ದಿರುವ ಸುಪ್ರೀಮ್ ಕೋರ್ಟಿನ ಸಾಲು ಸಾಲು ತೀರ್ಪುಗಳು, ಪ್ರಧಾನಮಂತ್ರಿಯವರನ್ನು ಸಾರ್ವಜನಿಕ ಸಮಾರಂಭದಲ್ಲಿ ಅವರ ಎದುರಿಗೇ ಹಾಡಿ ಹೊಗಳುವ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರ ವರ್ತನೆ, ದೆಹಲಿ ಕೋಮು ಗಲಭೆಗಳ ಕುರಿತು ನಿಷ್ಠುರವಾಗಿ ಗುಡುಗಿದ್ದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ ಅವರ ಹಠಾತ್ ವರ್ಗಾವಣೆ ಹಾಗೂ ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ್ದ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ಅವರು ಸರ್ಕಾರ ನೀಡಿರುವ ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡಿರುವ ಬೆಳವಣಿಗೆಗಳು ಈ ಸಂದೇಹವನ್ನು ಗಟ್ಟಿ ಮಾಡತೊಡಗಿವೆ.

ಸಿಎಎ ಪ್ರತಿಭಟನಾಕಾರರ ಹೆಸರುಗಳು, ವಿಳಾಸಗಳು, ಭಾವಚಿತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೂರಾರು ಭಿತ್ತಿ ಫಲಕಗಳ ಮೂಲಕ ಜಾಹೀರು ಮಾಡುವ ಉತ್ತರಪ್ರದೇಶದ ಅಪಾಯಕಾರಿ ನಡೆಯನ್ನು ಅಲಹಾಬಾದ್ ಹೈಕೋರ್ಟ್ ತೀವ್ರವಾಗಿ ಖಂಡಿಸುತ್ತದೆ. ಪ್ರತಿಭಟನೆಯ ಹಕ್ಕು ಮತ್ತು ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ಸಾರುತ್ತದೆ. ಈ ಫಲಕಗಳನ್ನು ತೆಗೆದು ಹಾಕುವಂತೆ ಆದೇಶ ನೀಡುತ್ತದೆ.
ಆದರೆ ನಿರ್ದಿಷ್ಟ ಜನಾಂಗದ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಬಹಿರಂಗವಾಗಿ ಮಾತಾಡುವ ಆ ರಾಜ್ಯ ಸರ್ಕಾರ ಸುಪ್ರೀಮ್ ಕೋರ್ಟಿಗೆ ಮೇಲ್ಮನವಿ ಸಲ್ಲಿಸುತ್ತದೆ. ಉತ್ತರಪ್ರದೇಶ ಸರ್ಕಾರದ ಕೃತ್ಯಕ್ಕೆ ಕಾಯಿದೆ ಕಾನೂನಿನ ಸಮರ್ಥನೆ ಇಲ್ಲ ಎಂದು ಟೀಕೆ ಟಿಪ್ಪಣಿ ಮಾಡಿದರೂ, ಕಡೆಯಲ್ಲಿ ಈ ಪ್ರಕರಣವನ್ನು ಹೆಚ್ಚು ನ್ಯಾಯಮೂರ್ತಿ ಗಳಿರುವ ಪೀಠದ ವಿಚಾರಣೆಗೆ ಒಪ್ಪಿಸುವ ಸುಪ್ರೀಮ್ ಕೋರ್ಟಿನ ನಡವಳಿಕೆ ನಿಗೂಢವೇ ಸರಿ.

ನಿಷ್ಠುರ ನ್ಯಾಯಮೂರ್ತಿಯೆಂದು ಹೆಸರು ಗಳಿಸಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ಅಜಿತ್ ಪ್ರಕಾಶ್ ಶಾ ಅವರ ಪ್ರಕಾರ ಸುಪ್ರೀಮ್ ಕೋರ್ಟಿನ ಇತ್ತೀಚಿನ ವರ್ಷಗಳ ನಡೆ ಕಳವಳಕಾರಿ. ನಿಜ, ಇಂದಿರಾಗಾಂಧೀ ಘೋಷಿಸಿದ್ದ ತುರ್ತುಪರಿಸ್ಥಿತಿಯಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾ ಮಾಡಿದ್ದ ಸುಪ್ರೀಮ್ ಕೋರ್ಟು ಪ್ರಾಣದ ಹಕ್ಕಿನಂತಹ ಮೂಲಭೂತ ಹಕ್ಕು ತುರ್ತುಪರಿಸ್ಥಿತಿಯಲ್ಲಿ ಮಹತ್ವದ್ದಲ್ಲ ಎಂದು ಸಾರಿ ಆಳುವವರ ಮುಂದೆ ಮಂಡಿಯೂರಿತ್ತು. ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಮೂರ್ತಿಗಳು, ಮುಖ್ಯ ಚುನಾವಣಾಧಿಕಾರಿ ಈ ಹಿಂದೆಯೂ ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡಿದ್ದಾರೆ.

ಆದರೆ ಈಗ ಸರ್ಕಾರ ನಡೆಸುತ್ತಿರುವ ಪಕ್ಷ ತಾನು ಪರಮ ಪವಿತ್ರವೆಂದೂ, ತನ್ನ ಗಂಗೆಯಲ್ಲಿ ಮಿಂದವರೆಲ್ಲ ಪಾವನರೆಂದೂ, ತಾನು ಪಾರ್ಟಿ ವಿತ್ ಎ ಡಿಫರೆನ್ಸ್ ಎಂದೂ ಎದೆ ಬಡಿದುಕೊಳ್ಳುತ್ತಲೇ ಬಂದಿರುವ ರಾಜಕೀಯ ಪಕ್ಷ. ಅವರು ಲದ್ದಿ ಮೆದ್ದರೆಂದು ನೀವೂ ಲದ್ದಿ ಮೆದ್ದದ್ದನ್ನು ಸಮರ್ಥಿಸುವುದು ಯಾವ ಕೋನದಿಂದ ಸರಿ ಎಂಬುದನ್ನು ವಿವರಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...